ತುಂಟರಗಾಳಿ
ಸಿನಿಗನ್ನಡ
ಕೆಲವು ವರ್ಷಗಳ ಹಿಂದೆ ಒಂದು ಚಳುವಳಿ ತುಂಬಾ ಸುದ್ದಿ ಮಾಡಿತ್ತು. ಈ ಬೆಳವಣಿಗೆಯಲ್ಲಿ ನಮ್ಮ ಕನ್ನಡದ ಬುದ್ಧಿಜೀವಿ ನಿರ್ದೇಶಕರೊಬ್ಬರು ಎಲ್ಲ ಕಾರ್ಮಿಕರಿಗೂ ಒಂದು ಗಂಟೆಗೆ ಕನಿಷ್ಠ 100 ರುಪಾಯಿ ಕೊಡಲೇಬೇಕು ಎಂಬ ಒತ್ತಾಯ ಮಾಡಿ ನಾನು ಈ ಪೆಟಿಷನ್‌ಗೆ ಸಹಿ ಹಾಕಿದ್ದೇನೆ.
ನೀವು ಸಹಿ ಹಾಕಿ ’ಅಣ್ಣಾ’ ಎಂದು ಎಲ್ಲರ ಮುಂದೆ ಡಂಗುರ ಬಾರಿಸುತ್ತಿದ್ದಾರೆ. ಅವರ ಈ ಮನೋ ಭಾವ ನೋಡಿದಾಗ, ಆಹಾ, ಎಂಥ ಒಳ್ಳೆಯ ವಿಷಯ ಅಲ್ಲವೇ? ನಮ್ಮ ಸಿನಿಮಾ ನಿರ್ದೇಶಕರಿಗೆ ಇಂಥ ಬುದ್ಧಿಯೂ ಇದೆಯಲ್ಲ ಎಂದು ಖುಷಿಯಾಗುತ್ತದೆ. ಆದರೆ ಒಂ ಚೂರು ಕೆದಕಿದರೆ ಅವರು ಜನಪ್ರಿಯ ಧಾರಾವಾಹಿಗಳ ನಿರ್ಮಾ ಪಕರೂ ಹೌದು. ಹಾಗಾಗಿ ಅವರ ಚಳುವಳಿ ನೋಡಿದವ ರೊಬ್ಬರು ಸಿನಿಮಾ ಪತ್ರಕರ್ತರೊಬ್ಬರ ಬಳಿ ಮಾತನಾಡುತ್ತ ‘ಅವಯ್ಯ ಹಿಂಗೆ ಹೇಳಿ ಸ್ಕೋಪ್ ತಗೋತಾನಲ್ಲ, ನಾನು ಅವರ ಧಾರಾವಾಹಿಗೆ ಸ್ಕ್ರಿಪ್ಟ್ ಬರೆದಿದ್ದೆ, ಡೈಲಾಗ್ ಬರೆದಿದ್ದೆ.
ಎಲ್ಲ ಕಾರ್ಮಿಕರಿಗೂ ಗಂಟೆಗೆ 100 ರುಪಾಯಿ ಕೊಡಬೇಕು ಎಂದು ಒತ್ತಾಯಿಸುವ ಈ ಮನುಷ್ಯ, ನನ್ನಿಂದ ಮಾಡಿಸಿಕೊಂಡ ಕೆಲಸಕ್ಕೆ ಒಂದು ಪೈಸವನ್ನೂ ಕೊಟ್ಟಿಲ್ಲ. ಇದೇ ಸ್ಕೀಮ್ ಅಡಿಯಲ್ಲಿ ನಂಗೂ ಅವರಿಂದ ನನಗೆ ಸೇರಬೇಕಾದ ದುಡ್ಡು ಕೊಡಿಸಿ ಸರ್’ ಅಂತ ದುಂಬಾಲು ಬಿದ್ದರಂತೆ. ಅಂದಹಾಗೆ ಈ ಪರಿಸ್ಥಿತಿ ಕೇವಲ ಈ ಒಬ್ಬ ರೈಟರದ್ದು ಮಾತ್ರವಲ್ಲ. ಇಂಥ ಹಲವಾರು ಜನರ ಬಳಿ ಕೆಲಸ ಮಾಡಿಸಿಕೊಂಡು ದುಡ್ಡು ಕೊಡದ ಖ್ಯಾತಿ ಆ ನಿರ್ಮಾಪಕರಿಗಿದೆ. ಮಾಡೋದೆಲ್ಲ ಅನಾಚಾರ ಮನೆ ಮುಂದೆ ಬೃಂದಾವನ ಎಂಬಂತೆ ಕೆಲವರು ಸಮಾಜದ ಮುಂದೆ ಹೆಂಗೆಪೋಸ್ ಕೊಡ್ತಾರೆ ಎಂಬುದಕ್ಕೆ ಇದು ಕೇವಲ ಒಂದು ಸಾಕ್ಷಿ ಅಷ್ಟೆ.
ಲೂಸ್ ಟಾಕ್-ಯಾವುದರಲ್ಲೂ ಆಸಕ್ತಿ ಇಲ್ಲದ ಸೋಮಾರಿ ಕಟ್ಟೆ ನಾಗರಿಕ
ನಿಮ್ಗೆ ದೇಶದಲ್ಲಿ ಏನೇನ್ ಆಗ್ತಾ ಇದೆ ಅಂತ ತಿಳ್ಕೊಳ್ಳೋ ಆಸಕ್ತಿನೇ ಇಲ್ವಾ, ನೀವು ಪೇಪರ್, ಗೀಪರ್ ಓದಲ್ವಾ?
- ಓದಿ ಯಾರ್ ಉದ್ಧಾರ ಆಗಿದಾರೆ, ಬಿಡ್ರಿ..!
ಸರಿ, ಈ ವರ್ಷದ ಐಪಿಎಲ್ ಮ್ಯಾಚ್ʼಗಳೆ ಫಿಕ್ಸ್ ಆಗಿದ್ವು ಅಂತಾರೆ, ನಿಮ್ಮ ಅಭಿಪ್ರಾಯ?
- ಅದು, ಆಟಕ್ಕುಂಟು ಲೆಕ್ಕಕ್ಕಿಲ್ಲ ಕಣ್ರೀ!
ಪೆಟ್ರೋಲ್ ರೇಟ್ ಮತ್ತೆ ಮತ್ತೆ ಜಾಸ್ತಿ ಆಗ್ತಿದೆಯ?
- ಅಣ್ಣಾವ್ರಿಗೆ ಪೆಟ್ರೋಲ್ ರೇಟ್ ಇಷ್ಟೊಂದ್ ಜಾಸ್ತಿ ಆಗುತ್ತೆ ಅಂತ, ಅವಾಗ್ಲೆ ಗೊತ್ತಿತ್ತು, ಅದಕ್ಕೇ ಅವರು ಹೇಳಿದ್ದು, ಕಾಲಕ್ಕೆ ತಕ್ಕಂತೆ ‘ನಡೆಯಬೇಕು’ ಅಂತ!
ನಿಮಗೆ 3ಡಿ ಸಿನಿಮಾ ಇಷ್ಟನಾ, ಬಾಂಡ್ ಸಿನಿಮಾ ಇಷ್ಟನಾ?
- ನಮ್ಗೆ ‘ಬ್ಯಾ’ ಸಿನಿಮಾ ಇಷ್ಟ, ಅಲ್ಲಿ ನೋಡೋಕೆ ‘ಏನಾದ್ರೂ’ ಇರ್ತದೆ!
ಇದು ಕಡೇ ಪ್ರಶ್ನೆ, ಈ ಸಿದ್ರಾಮಯ್ಯ, ಡಿಕೆಶಿ ಇದ್ದಾರಲ್ಲಾ...
- ರೀ, ತುಂಬಾ ಕೇಳ್ಬೇಡಿ ಗಂಟಲು ನೋಯ್ತದೆ, ಕೇಳಿಸ್ಕೊಂಡೋರ್ಗೆ ಕಿವಿ ನೋಯ್ತದೆ!
(ಕಾಲ್ಪನಿಕ ಸಂದರ್ಶನ)
ಇದನ್ನೂ ಓದಿ:Hari Paraak Column: ಇಷ್ಟು ದಿನ ಟಗರು ಇನ್ಮೇಲೆ ಟಗರು ಶಿವ
ನೆಟ್ ಪಿಕ್ಸ್
ಡಾಕ್ಟರ್ ಒಬ್ಬರು ತಮ್ಮ ಕಾರನ್ನು ರಿಪೇರಿಗೆ ಅಂತ ಗ್ಯಾರೇಜ್ʼಗೆ ತಂದರು. ಅಲ್ಲಿನ ಮೆಕ್ಯಾನಿಕ್ ಖೇಮು ಅದನ್ನು ಗಂಟೆಗಟ್ಟಲೇ ನೋಡಿ ರಿಪೇರಿ ಮಾಡಿ ಸರ್ವೀಸ್ ಮಾಡಿ ಸರಿ ಮಾಡಿಕೊಟ್ಟ. ಡಾಕ್ಟರ್ ಅವನಿಗೆ 200 ರುಪಾಯಿ ಕೊಟ್ಟರು. ಅದಕ್ಕೆ ಖೇಮು ‘ಸರ್ ನಿಮ್ಮನ್ನ ಒಂದು ಮಾತು ಕೇಳಬೇಕು’ ಅಂದ, ‘ಸರಿ ಕೇಳಪ್ಪ’ ಅಂದ್ರು ಡಾಕ್ಟರು. ಖೇಮು ಕೇಳಿದ ‘ನಾವು ಒಂದು ಕಾರಿನ ಎಲ್ಲ ಭಾಗಗಳನ್ನೂ ಪರೀಕ್ಷಿಸಿ, ಅದರಲ್ಲಿರೋ ಸಮಸ್ಯೆ ಬಗೆಹರಿಸಿ ಕೊಡ್ತೀವಿ. ಆದರೆ ನಮಗೆ ನೂರೋ ಇನ್ನೂರೋ ಕೊಡ್ತಾರೆ. ಆದ್ರೆ ನೀವೂ ಕೂಡ ಮನುಷ್ಯನ ದೇಹದಲ್ಲಿರೋ ಭಾಗಗಳನ್ನು ಪರೀಕ್ಷಿಸಿ ಅದರಲ್ಲಿರೋ ರೋಗಗಳನ್ನು ಸರಿ ಮಾಡ್ತೀರ. ಆದ್ರೆ ನಿಮಗೆ ಸಾವಿರಾರು, ಲಕ್ಷಾಂತರ ರುಪಾಯಿ ಕೊಡ್ತಾರೆ, ಇದ್ಯಾವ ನ್ಯಾಯ?’ ಅದಕ್ಕೆ ಡಾಕ್ಟರ್ ಒಂದು ಕ್ಷಣ ಯೋಚಿಸಿ ಹೇಳಿದರು ‘ಸರಿ ಖೇಮು, ನೀನು ರಿಪೇರಿ ಮಾಡುವಾಗ ಎಂಜಿನ್ ಆಫ್ ಮಾಡಿ ಕೆಲಸ ಮಾಡ್ತೀಯ. ನನ್ನಂತೆ ಎಂಜಿನ್ ಆನ್ ಇರೋವಾಗಲೇ ರಿಪೇರಿ ಮಾಡೋಕಾಗುತ್ತಾ?’ ಮೆಕ್ಯಾನಿಕ್ ಖೇಮು ಸ್ಟನ್ ಆಗಿಬಿಟ್ಟ.
ಇದು ನಿಮಗೆ ಗೊತ್ತಿರಬಹುದಾದ ಹಳೇ ಕಥೆ. ಆದರೆ ಇದರ ಮುಂದೆ ಏನಾಯ್ತು ಅನ್ನೋದು ಹೊಸಾದು. ಮೆಕ್ಯಾನಿಕ್ ಖೇಮು ಕೂಡ ಏನೂ ದಡ್ಡನಲ್ಲ. ಅವನೂ ತಿರುಗಿಸಿ ಒಂದು ಪ್ರಶ್ನೆ ಕೇಳಿದ ‘ನಾನು ಒಂದು ಡೆಡ್ ಎಂಜಿನ್‌ನ ತೆಗೆದು, ರಿಪೇರಿ ಮಾಡಿ ಅದಕ್ಕೆ ಮತ್ತೆ ಜೀವ ಕೊಡಬ, ಅದು ನಿಮ್ ಕೈಲಾಗುತ್ತಾ?’
ಲೈನ್ ಮ್ಯಾನ್
ಚಾವಣಿಯ ಹೆಂಚಿನ ಸಂದಿಯಿಂದ - ಬರುವ ಸಣ್ಣ ಬೆಳಕಿನ ಕೋಲು
- ಛೋಟಾ ‘ಬೀಮ್’
ಶನಿ ದೇವರ ಥರಾ ಸನ್ನಿ ಲಿಯೋನ್‌ಗೆ ಅವರ ಅಭಿಮಾನಿಗಳು ಒಂದು ದೇವಸ್ಥಾನ ಕಟ್ಟಿಸಿದರೆ
- ಅದು ಸನ್ನಿ ದೇವಸ್ಥಾನ
ಯಾರಾದರೂ ನಿಮ್ಮನ್ನು ಹರ್ಟ್ ಮಾಡಿದಾಗ ನಿಮಗೆ ಎಷ್ಟು ನೋವಾಗುತ್ತದೆ ಎಂಬುದನ್ನು ಅಳೆಯುವ ಯೂನಿಟ್
- ಹರ್ಟ್ಸ್
‘ಶರ’ವೇಗದಲ್ಲಿ ಓಡುವ ಆಂಬುಲೆನ್ಸ್
- ‘ಅಂಬು’ಲೆನ್ಸ್
ಭೇದಿ ಆಗೋಕೆ ತಿನ್ನೋದು: ಜಾಪಾಳ ಮಾತ್ರೆ
- ಪ್ರೆಗ್ನೆನ್ಸಿ ತಡೆಯಲು ತಿನ್ನೋದು : ಜ್ಞಾಪಾನ ಮಾತ್ರ
ಮನುಷ್ಯನಿಗೆ ನೆಮ್ಮದಿ ಕೊಡೋ ಎರಡು ವಿಷಯಗಳು
- ಒಂದು ದೇಗುಲ, ಇನ್ನೊಂದು ಜೋಗುಳ
ಬಾಡಿಗೆ ತಾಯಿಯಿಂದ ಮಗು ಪಡೆದು ತಾಯಿಯ ಹೆಸರು ಬದಲಾವಣೆ ಮಾಡುವ ಪ್ರಕ್ರಿಯೆ
- ಬಸಿರು ಬದಲಾವಣೆ
ಜನ ಹರಡುವ ಗಾಳಿಸುದ್ದಿಗಳನ್ನು ಕೇಳಿ ಗಾಬರಿಯಿಂದ ನರಳುವವರ ವ್ಯಾಧಿ
- ಮಂದಿ ಜ್ವರ
ಹುಟ್ಟಿದ ಕೂಡಲೇ ಫಾರಿನ್ನಿಗೆ ಹಾರುವ ಮಗುವಿನ ಪ್ರಯಾಣ
- ಬಾರ್ನ್ ವಾಯೇಜ್
ರಷ್ಯಾದಲ್ಲಿ ರಾತ್ರಿ ಹೊತ್ತು ನಡೆಯುವ ನೃತ್ಯ ಕಾರ್ಯಕ್ರಮ
- ಬೆಳದಿಂಗಳ ‘ಬ್ಯಾಲೆ’