ಇದೇ ಅಂತರಂಗ ಸುದ್ದಿ
ಈ ಹಿಂದೆ 1940ರ ದಶಕದಲ್ಲಿ ಕ್ವಾಂಟಾಸ್ ಸಂಸ್ಥೆಯು ಆಸ್ಟ್ರೇಲಿಯಾದಿಂದ ಲಂಡನ್‌ಗೆ ವಿಮಾನ ಹಾರಾಟ ನಡೆಸುತ್ತಿತ್ತು. ಅಂದು ಈ ಪ್ರಯಾಣಕ್ಕೆ ಹಲವಾರು ದಿನಗಳು ಬೇಕಾಗು ತ್ತಿದ್ದವು ಮತ್ತು ಮಧ್ಯದಲ್ಲಿ ಇಂಧನ ತುಂಬಿಸಲು ಹಾಗೂ ಪ್ರಯಾಣಿಕರ ವಿಶ್ರಾಂತಿಗಾಗಿ ವಿಮಾನ ಹಲವೆಡೆ ನಿಲ್ಲುತ್ತಿತ್ತು. ಆ ಸಮಯದಲ್ಲಿ ಪ್ರಯಾಣಿಕರು ಎರಡು ಕಡೆ ಸೂರ್ಯೋ ದಯವನ್ನು ಕಾಣುತ್ತಿದ್ದರು. ಹೀಗಾಗಿಯೇ ಈ ಆಧುನಿಕ ಯೋಜನೆಗೆ ‘ಪ್ರಾಜೆಕ್ಟ್ ಸನ್‌ರೈಸ್’ ಎಂದು ನಾಮಕರಣ ಮಾಡಲಾಗಿದೆ.
ಆಸ್ಟ್ರೇಲಿಯಾದ ಪ್ರಮುಖ ವಿಮಾನಯಾನ ಸಂಸ್ಥೆಯಾದ ‘ಕ್ವಾಂಟಾಸ್’ನ ಪ್ರತಿನಿಧಿಯೊಬ್ಬರನ್ನು ಮೊನ್ನೆ ದಿಲ್ಲಿಯಲ್ಲಿ ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ವಿಮಾನಯಾನ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಲು ‘ಕ್ವಾಂಟಾಸ್’ ಸಿದ್ಧತೆ ನಡೆಸುತ್ತಿದೆಯಂತೆ. 2027ರ ವೇಳೆಗೆ ವಿಶ್ವದ ಅತಿ ಉದ್ದದ ತಡೆರಹಿತ ( Nonstop) ಪ್ರಯಾಣಿಕ ವಿಮಾನವನ್ನು ಲಂಡನ್‌ನಿಂದ ಸಿಡ್ನಿಗೆ ಹಾರಿಸಲು ಕ್ವಾಂಟಾಸ್ ಯೋಜನೆ ರೂಪಿಸುತ್ತಿದೆಯಂತೆ.
ಸತತ 22 ಗಂಟೆಗಳ ಕಾಲ ಆಕಾಶದಲ್ಲಿಯೇ ಹಾರಾಡುವ ಈ ವಿಮಾನವು, ಸುಮಾರು 10500 ಮೈಲಿ ಗಳಷ್ಟು (ಸುಮಾರು 17000 ಕಿ.ಮೀ.) ದೀರ್ಘ ಅಂತರವನ್ನು ಕ್ರಮಿಸಲಿದೆಯಂತೆ. ಈ ಮಹತ್ವಾ ಕಾಂಕ್ಷಿ ಯೋಜನೆಗೆ ‘ಪ್ರಾಜೆಕ್ಟ್ ಸನ್‌ರೈಸ್’ ಎಂದು ಹೆಸರಿಡಲಾಗಿದೆಯಂತೆ. ಈ ಯೋಜನೆಯು ಜಾಗತಿಕ ಪ್ರಯಾಣದ ದಿಕ್ಕನ್ನೇ ಬದಲಾಯಿಸಲಿದ್ದು, ಪ್ರಯಾಣಿಕರಿಗೆ ಹೊಸ ಅನುಭವವನ್ನು ನೀಡಲಿದೆ.
ಕ್ವಾಂಟಾಸ್ ಏರ್‌ಲೈನ್ಸ್‌ನ ‘ಪ್ರಾಜೆಕ್ಟ್ ಸನ್‌ರೈಸ್’ ಎಂಬುದು ಜಗತ್ತಿನ ಯಾವುದೇ ಮೂಲೆಯಿಂದ ಆಸ್ಟ್ರೇಲಿಯಾದ ಪೂರ್ವ ಕರಾವಳಿಯ ನಗರಗಳಿಗೆ (ಸಿಡ್ನಿ ಮತ್ತು ಮೆಲ್ಬರ್ನ್) ನೇರ ವಿಮಾನ ಸಂಪರ್ಕ ಕಲ್ಪಿಸುವ ಯೋಜನೆಯಾಗಿದೆ. ಪ್ರಸ್ತುತ ಲಂಡನ್ ಮತ್ತು ನ್ಯೂಯಾರ್ಕ್‌ನಂಥ ನಗರ ಗಳಿಂದ ಆಸ್ಟ್ರೇಲಿಯಾಕ್ಕೆ ಬರಬೇಕಾದರೆ, ಮಧ್ಯದಲ್ಲಿ ಒಮ್ಮೆಯಾದರೂ ಇಳಿದು ವಿಮಾನ ಬದಲಾ ಯಿಸಬೇಕಾಗುತ್ತದೆ. ಆದರೆ ಈ ಯೋಜನೆಯ ಮೂಲಕ ಆ ಅಡೆತಡೆಯನ್ನು ನಿವಾರಿಸಿ, ಲಂಡನ್ ನಿಂದ ನೇರವಾಗಿ ಸಿಡ್ನಿಗೆ ಹಾರಾಟ ನಡೆಸುವ ಗುರಿಯನ್ನು ಹೊಂದಲಾಗಿದೆ.
ಇದನ್ನೂ ಓದಿ: Vishweshwar Bhat Column: ಆಮೆಗಳ ಹಿತರಕ್ಷಣೆ ಯೋಚಿಸಿ, ಅಭಿವೃದ್ಧಿ ಯೋಜನೆ ಕೈಬಿಟ್ಟ ಒಮಾನ್ !
ಈ ಹಿಂದೆ 1940ರ ದಶಕದಲ್ಲಿ ಕ್ವಾಂಟಾಸ್ ಸಂಸ್ಥೆಯು ಆಸ್ಟ್ರೇಲಿಯಾದಿಂದ ಲಂಡನ್‌ಗೆ ವಿಮಾನ ಹಾರಾಟ ನಡೆಸುತ್ತಿತ್ತು. ಅಂದು ಈ ಪ್ರಯಾಣಕ್ಕೆ ಹಲವಾರು ದಿನಗಳು ಬೇಕಾಗುತ್ತಿದ್ದವು ಮತ್ತು ಮಧ್ಯದಲ್ಲಿ ಇಂಧನ ತುಂಬಿಸಲು ಹಾಗೂ ಪ್ರಯಾಣಿಕರ ವಿಶ್ರಾಂತಿಗಾಗಿ ವಿಮಾನ ಹಲವೆಡೆ ನಿಲ್ಲುತ್ತಿತ್ತು. ಆ ಸಮಯದಲ್ಲಿ ಪ್ರಯಾಣಿಕರು ಎರಡು ಕಡೆ ಸೂರ್ಯೋದಯವನ್ನು ಕಾಣುತ್ತಿದ್ದರು.
ಹೀಗಾಗಿಯೇ ಈ ಆಧುನಿಕ ಯೋಜನೆಗೆ ‘ಪ್ರಾಜೆಕ್ಟ್ ಸನ್ʼರೈಸ್’ ಎಂದು ನಾಮಕರಣ ಮಾಡಲಾಗಿದೆ. ಇಷ್ಟೊಂದು ದೀರ್ಘಾವಧಿಯ ಪ್ರಯಾಣವನ್ನು ಸುಗಮವಾಗಿ ನಡೆಸಲು ಸಾಮಾನ್ಯ ವಿಮಾನಗಳು ಸಾಕಾಗುವುದಿಲ್ಲ. ಇದಕ್ಕಾಗಿಯೇ ಕ್ವಾಂಟಾಸ್ ಸಂಸ್ಥೆಯು ವಿಶೇಷವಾಗಿ ವಿನ್ಯಾಸಗೊಳಿಸಲಾದ 12 ಹೊಸ ‘ಏರ್‌ಬಸ್ A 350-1000 ’ ವಿಮಾನ ಗಳನ್ನು ಆರ್ಡರ್ ಮಾಡಿದೆ. ಸಾಮಾನ್ಯವಾಗಿ ಇಂಥ ದೊಡ್ಡ ವಿಮಾನಗಳಲ್ಲಿ ೩೦೦ಕ್ಕೂ ಹೆಚ್ಚು ಪ್ರಯಾಣಿಕರು ಇರುತ್ತಾರೆ.
ಆದರೆ, ಈ 22 ಗಂಟೆಗಳ ಸುದೀರ್ಘ ಪ್ರಯಾಣವನ್ನು ದೃಷ್ಟಿಯಲ್ಲಿಟ್ಟುಕೊಂಡು, ಆರಾಮದಾಯಕ ಅನುಭವ ನೀಡಲು 238 ಆಸನಗಳನ್ನು ಮಾತ್ರ ಅಳವಡಿಸಲಾಗುತ್ತಿದೆ. ಇದು ಪ್ರಯಾಣಿಕರಿಗೆ ಕಾಲು ಚಾಚಲು ಮತ್ತು ಓಡಾಡಲು ಹೆಚ್ಚಿನ ಸ್ಥಳಾವಕಾಶವನ್ನು ನೀಡುತ್ತದೆ. ಈ ವಿಮಾನದಲ್ಲಿ ಪ್ರಥಮ ದರ್ಜೆಯ ಪ್ರಯಾಣಿಕರಿಗೆ ಹೋಟೆಲ್ ರೂಮ್‌ಗಳಂಥ ಐಷಾರಾಮಿ ‘ಸೂಟ್’ಗಳನ್ನು ನಿರ್ಮಿಸ ಲಾಗುತ್ತಿದೆ.
ಇದರಲ್ಲಿ ಪ್ರತ್ಯೇಕ ಬೆಡ್, ಕುರ್ಚಿ ಮತ್ತು ವಾರ್ಡ್‌ರೋಬ್ ಸೌಲಭ್ಯಗಳಿರಲಿವೆ. ಸತತ 22 ಗಂಟೆಗಳ ಕಾಲ ಒಂದೇ ಕಡೆ ಕುಳಿತು ಪ್ರಯಾಣಿಸುವುದು ಆರೋಗ್ಯದ ದೃಷ್ಟಿಯಿಂದ ಕಷ್ಟಕರ. ‘ಜೆಟ್ ಲ್ಯಾಗ್’ ಮತ್ತು ದೈಹಿಕ ಆಯಾಸವನ್ನು ಕಡಿಮೆ ಮಾಡಲು ವಿಮಾನದ ಮಧ್ಯಭಾಗದಲ್ಲಿ ವಿಶೇಷ ‘ವೆಲ್‌ನೆಸ್ ಜೋನ್’ಗಳನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ ಪ್ರಯಾಣಿಕರು ಎದ್ದು ನಡೆದಾಡಬಹುದು, ಸ್ಟ್ರೆಚಿಂಗ್ ವ್ಯಾಯಾಮಗಳನ್ನು ಮಾಡಬಹುದು ಮತ್ತು ರಿಫ್ರೆಶ್ ಆಗಬಹುದು.
ವಾಸ್ತವವಾಗಿ, ಕ್ವಾಂಟಾಸ್ ಸಂಸ್ಥೆಯು ಈ ಐತಿಹಾಸಿಕ ವಿಮಾನ ಹಾರಾಟವನ್ನು 2025ರ ಆರಂಭಿ ಸಲು ನಿರ್ಧರಿಸಿತ್ತು. ಆದರೆ, ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಕೋವಿಡ್ ಈ ಯೋಜನೆಗೂ ಅಡ್ಡಿಯಾಯಿತು. ಕರೋನಾ ಲಾಕ್‌ಡೌನ್‌ನಿಂದಾಗಿ ಅಂತಾರಾಷ್ಟ್ರೀಯ ವಿಮಾನ ಯಾನ ಸಂಪೂರ್ಣ ಸ್ಥಗಿತಗೊಂಡಿತ್ತು ಮತ್ತು ವಿಮಾನ ತಯಾರಿಕಾ ಸಂಸ್ಥೆಗಳಲ್ಲಿ ಉತ್ಪಾದನಾ ಪ್ರಕ್ರಿಯೆ ಗಳೂ ವಿಳಂಬವಾದವು. ಇದೀಗ ಪರಿಸ್ಥಿತಿ ಸುಧಾರಿಸಿದ್ದು, ವಿಮಾನ ತಯಾರಿಕೆ ಪುನರಾ ರಂಭಗೊಂಡಿದೆ.
ಮೊದಲ ಏರ್‌ಬಸ್ A -350 ವಿಮಾನವು 2026ರ ಅಂತ್ಯದ ವೇಳೆಗೆ ಕ್ವಾಂಟಾಸ್ ಕೈಸೇರುವ ನಿರೀಕ್ಷೆ ಯಿದೆ. ನಂತರ ಅಗತ್ಯ ಪರೀಕ್ಷೆಗಳು ಮುಗಿದು, 2027ರಲ್ಲಿ ಅಧಿಕೃತವಾಗಿ ಲಂಡನ್-ಸಿಡ್ನಿ ಹಾರಾಟ ಆರಂಭವಾಗಲಿದೆ.
ಇಂಥ ನೇರ ವಿಮಾನಗಳು ಜಾಗತಿಕ ಪ್ರಯಾಣದ ಸ್ವರೂಪವನ್ನೇ ಮರುರೂಪಿಸಲಿವೆ. ಈ ಯೋಜನೆ ಯು ಯಶಸ್ವಿಯಾದರೆ, ಇದು ಕೇವಲ ಸಮಯ ಉಳಿತಾಯದ ವಿಷಯವಷ್ಟೇ ಆಗಿರುವುದಿಲ್ಲ. ಇದು ವಿಮಾನಯಾನ ತಂತ್ರಜ್ಞಾನದಲ್ಲಿ ಮನುಷ್ಯ ಸಾಧಿಸಿದ ಮತ್ತೊಂದು ಎತ್ತರವಾಗಲಿದೆ.
ಲಂಡನ್‌ನಿಂದ ನ್ಯೂಯಾರ್ಕ್‌ಗೆ, ನ್ಯೂಯಾರ್ಕ್‌ನಿಂದ ಸಿಡ್ನಿಗೆ- ಹೀಗೆ ವಿಶ್ವದ ಪ್ರಮುಖ ಆರ್ಥಿಕ ಕೇಂದ್ರಗಳನ್ನು ನೇರವಾಗಿ ಬೆಸೆಯುವಲ್ಲಿ ಇದು ಮಹತ್ತರ ಪಾತ್ರ ವಹಿಸಲಿದೆ. 22 ಗಂಟೆಗಳ ಕಾಲ ತಡೆರಹಿತವಾಗಿ ಹಾರಾಟ ನಡೆಸುವುದು ತಾಂತ್ರಿಕವಾಗಿ ಮತ್ತು ಮಾನವ ಸಾಮರ್ಥ್ಯದ ದೃಷ್ಟಿ ಯಿಂದ ಒಂದು ದೊಡ್ಡ ಸವಾಲು.
ಪೈಲಟ್‌ಗಳು, ಸಿಬ್ಬಂದಿ ವರ್ಗ ಮತ್ತು ಪ್ರಯಾಣಿಕರ ಆರೋಗ್ಯದ ಮೇಲೆ ಈ ದೀರ್ಘ ಪ್ರಯಾಣವು ಬೀರಬಹುದಾದ ಪರಿಣಾಮಗಳನ್ನು ಅಧ್ಯಯನ ಮಾಡಲು ಕ್ವಾಂಟಾಸ್ ಈಗಾಗಲೇ ಸಂಶೋಧಕ ರೊಂದಿಗೆ ಕೆಲಸ ಮಾಡುತ್ತಿದೆ. ವಿಮಾನದೊಳಗಿನ ಗಾಳಿ, ಬೆಳಕು ಮತ್ತು ಆಹಾರ ಪದ್ಧತಿಯನ್ನು ಪ್ರಯಾಣಿಕರ ನಿದ್ರೆ ಮತ್ತು ಜಾಗರೂಕತೆಯನ್ನು ಕಾಪಾಡುವಂತೆ ವಿನ್ಯಾಸಗೊಳಿಸಲಾಗುತ್ತಿದೆ.
2027ರಲ್ಲಿ ಲಂಡನ್‌ನಿಂದ ಹೊರಡುವ ಈ ವಿಮಾನವು ಸಿಡ್ನಿಯಲ್ಲಿ ಇಳಿಯುವಾಗ, ಅದು ಕೇವಲ ಒಂದು ಪ್ರಯಾಣವಾಗಿರದೇ, ಮಾನವನ ಚಲನಶೀಲತೆಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಘಟನೆಯಾಗಲಿದೆ. ‘ಪ್ರಾಜೆಕ್ಟ್ ಸನ್‌ರೈಸ್’ ಕೇವಲ ದೂರದ ಹಾರಾಟವಷ್ಟೇ ಅಲ್ಲ, ಅದೊಂದು ಎಂಜಿನಿಯರಿಂಗ್ ಅದ್ಭುತವೂ ಹೌದು. ಈ ಯೋಜನೆಯ ತಾಂತ್ರಿಕ ಅಂಶಗಳು ಮತ್ತು ಆರ್ಥಿಕ ಲೆಕ್ಕಾಚಾರಗಳು ನಿಜಕ್ಕೂ ಸ್ವಾರಸ್ಯಕರ.
ಈ ಯೋಜನೆಯ ಬೆನ್ನೆಲುಬು ಏರ್‌ಬಸ್ A 350 1000 ವಿಮಾನ. ಅಷ್ಟು ದೂರ ಹಾರಲು ಅದು ಹೇಗೆ ಶಕ್ತವಾಗಿದೆ ? ಈ ವಿಮಾನದಲ್ಲಿ ವಿಶ್ವದ ಅತ್ಯಂತ ದಕ್ಷ ದೊಡ್ಡ ಏರೋ-ಎಂಜಿನ್‌ಗಳಾದ ‘ರೋಲ್ಸ್ ರಾಯ್ಸ್ ಟ್ರೆಂಟ್ XW ’ಗಳನ್ನು ಬಳಸಲಾಗುತ್ತಿದೆ. ಇವು ಹಿಂದಿನ ತಲೆಮಾರಿನ ವಿಮಾನ ಗಳಿಗೆ ಹೋಲಿಸಿದರೆ ಸುಮಾರು ಶೇ.25ರಷ್ಟು ಕಡಿಮೆ ಇಂಧನವನ್ನು ಬಳಸುತ್ತವೆ ಮತ್ತು ಕಡಿಮೆ ಇಂಗಾಲವನ್ನು ಹೊರಸೂಸುತ್ತವೆ.
ಲಂಡನ್‌ನಿಂದ ಸಿಡ್ನಿಗೆ ತಲುಪಲು ಸಾಮಾನ್ಯ ಇಂಧನ ಸಾಮರ್ಥ್ಯ ಸಾಲದು. ಹೀಗಾಗಿ, ಕ್ವಾಂಟಾಸ್ ವಿಶೇಷವಾಗಿ ಆರ್ಡರ್ ಮಾಡಿರುವ ಈ ವಿಮಾನಗಳಲ್ಲಿ ಹೆಚ್ಚುವರಿ ಇಂಧನ ಟ್ಯಾಂಕ್ ಅಳವಡಿಸ ಲಾಗುತ್ತಿದೆ. ಇದು ವಿಮಾನಕ್ಕೆ ಸುಮಾರು 156000 ಲೀಟರ್‌ಗಳಷ್ಟು ಇಂಧನವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ನೀಡುತ್ತದೆ. ಈ ವಿಮಾನದ ದೇಹವನ್ನು ಕಾರ್ಬನ್-ಫೈಬರ್ ಸಂಯೋಜಿತ ವಸ್ತುಗಳಿಂದ (Composite materials) ತಯಾರಿಸಲಾಗಿದೆ.
ಇದು ವಿಮಾನದ ತೂಕವನ್ನು ಕಡಿಮೆ ಮಾಡುವುದಲ್ಲದೇ, ದೀರ್ಘಕಾಲದ ಹಾರಾಟಕ್ಕೆ ಬೇಕಾದ ಸಾಮರ್ಥ್ಯವನ್ನೂ ನೀಡುತ್ತದೆ. ಸಾಮಾನ್ಯವಾಗಿ ಏರ್‌ಬಸ್ A 350-1000 ವಿಮಾನದಲ್ಲಿ 350 ರಿಂದ 410 ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಮಾಡಬಹುದು. ಆದರೆ, ‘ಪ್ರಾಜೆಕ್ಟ್ ಸನ್‌ರೈಸ್’ ವಿಮಾನ ದಲ್ಲಿ 238 ಸೀಟುಗಳನ್ನು ಮಾತ್ರ ಇಡಲಾಗಿದೆ.
ಇದಕ್ಕೆ ಕಾರಣ ತೂಕ ನಿರ್ವಹಣೆ. ವಿಮಾನವು 20ಕ್ಕಿಂತ ಹೆಚ್ಚು ಗಂಟೆಗಳ ಕಾಲ ಹಾರಲು ಭಾರಿ ಪ್ರಮಾಣದ ಇಂಧನವನ್ನು ತುಂಬಿಸಿಕೊಳ್ಳಬೇಕಾಗುತ್ತದೆ. ಇಂಧನದ ತೂಕ ಹೆಚ್ಚಾದಾಗ, ಪ್ರಯಾಣಿಕರ ಮತ್ತು ಲಗೇಜ್ ತೂಕವನ್ನು ಕಡಿಮೆ ಮಾಡಲೇಬೇಕಾಗುತ್ತದೆ. ಇಲ್ಲದಿದ್ದರೆ ವಿಮಾನ ಟೇಕಾಫ್ ಆಗುವುದು ಕಷ್ಟ ಮತ್ತು ಮೈಲೇಜ್ ಕೂಡ ಕಡಿಮೆಯಾಗುತ್ತದೆ. ಕ್ವಾಂಟಾಸ್ ಇನ್ನೂ ಅಧಿಕೃತವಾಗಿ 2027ರ ದರ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಆದರೆ, ವಿಮಾನಯಾನ ತಜ್ಞರ ಲೆಕ್ಕಾಚಾರದ ಪ್ರಕಾರ, ಈ ವಿಮಾನದ ಟಿಕೆಟ್ ದರಗಳು, ಒಂದು ಕಡೆ ನಿಲ್ಲಿಸಿ ( Layover ) ಹೋಗುವ ವಿಮಾನಗಳಿಗಿಂತ ಕನಿಷ್ಠ ಶೇ.20ರಿಂದ ಶೇ.30ರಷ್ಟು ದುಬಾರಿಯಾಗಿರುವ ಸಾಧ್ಯತೆಯಿದೆ.
ಇದು ಪ್ರಮುಖವಾಗಿ ಕಾರ್ಪೊರೇಟ್ ಉದ್ಯೋಗಿಗಳು ಮತ್ತು ಸಮಯ ಉಳಿಸಲು ಬಯಸುವ ಶ್ರೀಮಂತ ಪ್ರಯಾಣಿಕರನ್ನು ( Business Travelers) ಗುರಿಯಾಗಿಸಿಕೊಂಡಿದೆ. ಕಡಿಮೆ ಸೀಟು ಗಳಿರುವುದರಿಂದ, ಪ್ರತಿ ಸೀಟಿನ ಬೆಲೆ ಹೆಚ್ಚಿದ್ದರೆ ಮಾತ್ರ ಏರ್‌ಲೈನ್ಸ್‌ಗೆ ಲಾಭವಾಗುತ್ತದೆ. ಇಕಾನಮಿ ಕ್ಲಾಸ್‌ನಲ್ಲಿ ಕೂಡ ಟಿಕೆಟ್ ದರ ಸಾಮಾನ್ಯಕ್ಕಿಂತ ಹೆಚ್ಚಿರಲಿದೆ. ಅಂದಾಜು ಪ್ರಕಾರ, ಲಂಡನ್-ಸಿಡ್ನಿ ಇಕಾನಮಿ ಟಿಕೆಟ್ ಬೆಲೆ ಸುಮಾರು ಒಂದೂವರೆ ಲಕ್ಷ ರುಪಾಯಿಯಿಂದ ಎರಡು ಲಕ್ಷ ರುಪಾಯಿ ಆಸುಪಾಸಿನಲ್ಲಿರಬಹುದು. ಬಿಸಿನೆಸ್ ಮತ್ತು - ಕ್ಲಾಸ್ ದರಗಳು ಐದರಿಂದ ಎಂಟು ಲಕ್ಷಕ್ಕೂ ಅಧಿಕ ವಿರಬಹುದು.
ಕೇವಲ ವಿಮಾನವಲ್ಲ, ಮನುಷ್ಯರಿಗೂ ಇದು ಸವಾಲಿನ ಕೆಲಸ. ಈ ವಿಮಾನದಲ್ಲಿ ಕನಿಷ್ಠ ನಾಲ್ವರು ಪೈಲಟ್‌ಗಳು ಇರುತ್ತಾರೆ (ಒಬ್ಬ ಕ್ಯಾಪ್ಟನ್, ಒಬ್ಬ - ಆಫೀಸರ್ ಮತ್ತು ಇಬ್ಬರು ಸೆಕೆಂಡ್ ಆಫೀಸರ್ ಗಳು). ಅವರು ಪಾಳಿಯಲ್ಲಿ ವಿಮಾನ ಹಾರಿಸುತ್ತಾರೆ ಮತ್ತು ಉಳಿದವರು ವಿಮಾನದಲ್ಲಿರುವ ವಿಶೇಷ ಸ್ಲೀಪಿಂಗ್ ಬಂಕ್ ಗಳಲ್ಲಿ ವಿಶ್ರಾಂತಿ ಪಡೆಯುತ್ತಾರೆ. 22 ಗಂಟೆಗಳ ಕಾಲ ಸತತವಾಗಿ ವಿಮಾನದಲ್ಲಿ ಕುಳಿತು ಪ್ರಯಾಣಿಸುವುದು ದೈಹಿಕವಾಗಿ ಮತ್ತು ಮಾನಸಿಕವಾಗಿ ಒಂದು ದೊಡ್ಡ ಸವಾಲು. ಇದನ್ನು ಮನಗಂಡಿರುವ ಕ್ವಾಂಟಾಸ್, ಕೇವಲ ವಿಮಾನದ ಎಂಜಿನಿಯರಿಂಗ್ ಮೇಲೆ ಮಾತ್ರ ವಲ್ಲದೇ, ‘ಮಾನವ ಶರೀರಶಾಸ್ತ್ರ’ದ ಮೇಲೂ ಸಂಶೋಧನೆ ನಡೆಸಿದೆ.
ಸಿಡ್ನಿ ವಿಶ್ವವಿದ್ಯಾಲಯದ ಪ್ರಖ್ಯಾತ ‘ಚಾಲ್ಸ ಪರ್ಕಿ ಸೆಂಟರ್’ನ ವಿಜ್ಞಾನಿಗಳೊಂದಿಗೆ ಸೇರಿ ಕ್ವಾಂಟಾ ಸ್ ಈ ವಿಶೇಷ ವ್ಯವಸ್ಥೆಯನ್ನು ರೂಪಿಸಿದೆ. ಪ್ರಯಾಣಿಕರಿಗೆ ಜೆಟ್-ಲ್ಯಾಗ್ ಕಡಿಮೆ ಮಾಡಲು ಮತ್ತು ಸುಸ್ತು ಅನಿಸದಂತೆ ನೋಡಿಕೊಳ್ಳಲು ತಂತ್ರಜ್ಞಾನ ಮತ್ತು ಆಹಾರ ಪದ್ಧತಿಯನ್ನು ರೂಪಿಸಿದೆ.
ನಮ್ಮ ದೇಹಕ್ಕೆ ನಿದ್ರೆ ಮತ್ತು ಎಚ್ಚರವನ್ನು ನಿಯಂತ್ರಿಸುವ ಒಂದು ನೈಸರ್ಗಿಕ ಗಡಿಯಾರವಿರುತ್ತದೆ. ಇದನ್ನು ‘ಸಿರ್ಕಾಡಿಯನ್ ರಿದಮ್’ ಎಂದು ಕರೆಯುತ್ತಾರೆ. ನಾವು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವೇಗವಾಗಿ ಹೋದಾಗ ಈ ಗಡಿಯಾರ ಏರುಪೇರಾಗಿ ‘ಜೆಟ್-ಲ್ಯಾಗ್’ ಉಂಟಾಗುತ್ತದೆ. ಇದನ್ನು ಸರಿಪಡಿಸಲು ಕ್ವಾಂಟಾಸ್ ವಿಮಾನದ ಲೈಟಿಂಗ್ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ.
ವಿಮಾನದ ಒಳಗಿನ ದೀಪಗಳು ಕೇವಲ ‘ಆನ್’ ಮತ್ತು ‘ಆಫ್’ ಆಗುವುದಿಲ್ಲ. ಬದಲಿಗೆ, ಅವು ಸೇರ ಬೇಕಾದ ಊರಿನ (ಉದಾಹರಣೆಗೆ ಸಿಡ್ನಿ ಅಥವಾ ಲಂಡನ್) ಸಮಯಕ್ಕೆ ತಕ್ಕಂತೆ ಬಣ್ಣ ಬದಲಾಯಿ ಸುತ್ತವೆ. ಪ್ರಯಾಣಿಕರು ಎಚ್ಚರವಾಗಿರಬೇಕಾದ ಸಮಯದಲ್ಲಿ, ವಿಮಾನದ ಒಳಗೆ ನೀಲಿ ಮಿಶ್ರಿತ ಪ್ರಕಾಶ ಮಾನವಾದ ಬೆಳಕನ್ನು ಹರಿಸಲಾಗುತ್ತದೆ.
ಇದು ಸೂರ್ಯನ ಬೆಳಕನ್ನು ಹೋಲುತ್ತದೆ ಮತ್ತು ಮಿದುಳಿನಲ್ಲಿ ‘ಮೆಲಟೋನಿನ್’ (ನಿದ್ರೆ ಬರಿಸುವ ಹಾರ್ಮೋನ್) ಉತ್ಪತ್ತಿಯನ್ನು ತಡೆದು, ಪ್ರಯಾಣಿಕರು ಚುರುಕಾಗಿರುವಂತೆ ಮಾಡುತ್ತದೆ. ನಿದ್ರೆಯ ಸಮಯ ಬಂದಾಗ, ದೀಪಗಳು ನಿಧಾನವಾಗಿ ಸೂರ್ಯಾಸ್ತದ ಬಣ್ಣಗಳಿಗೆ ತಿರುಗುತ್ತವೆ.
ಇದು ದೇಹಕ್ಕೆ ವಿಶ್ರಾಂತಿ ಪಡೆಯಲು ಸಂಕೇತ ನೀಡುತ್ತದೆ ಮತ್ತು ಸಹಜ ನಿದ್ರೆಗೆ ಜಾರಲು ಸಹಾಯ ಮಾಡುತ್ತದೆ. ಈ ಬೆಳಕಿನ ಬದಲಾವಣೆಯಿಂದಾಗಿ, ಪ್ರಯಾಣಿಕರು ವಿಮಾನದಿಂದ ಇಳಿಯುವ ಹೊತ್ತಿಗೆ ಅವರ ದೇಹವು ಆ ಹೊಸ ದೇಶದ ಸಮಯಕ್ಕೆ ಆಗಲೇ ಒಗ್ಗಿಕೊಂಡಿರುತ್ತದೆ. ಸಾಮಾನ್ಯ ವಿಮಾನಗಳಲ್ಲಿ ಊಟದ ರುಚಿಗಿಂತ ಹೊಟ್ಟೆ ತುಂಬಿಸುವುದಕ್ಕೆ ಆದ್ಯತೆ ನೀಡಲಾಗುತ್ತದೆ.
ಆದರೆ ‘ಪ್ರಾಜೆಕ್ಟ್ ಸನ್‌ರೈಸ್’ ವಿಮಾನದಲ್ಲಿ ಆಹಾರವೇ ಒಂದು ಔಷಧಿಯಂತೆ ಕೆಲಸ ಮಾಡಲಿದೆ. ಇಲ್ಲಿನ ಮೆನುವನ್ನು ‘ನಿದ್ರೆ’ ಮತ್ತು ‘ಎಚ್ಚರ’ ಎಂಬ ಎರಡು ವಿಭಾಗಗಳಾಗಿ ವಿನ್ಯಾಸಗೊಳಿಸಿದ್ದಾರೆ. ಪ್ರಯಾಣಿಕರು ಮಲಗಬೇಕಾದ ಸಮಯದಲ್ಲಿ ನೀಡುವ ಊಟದಲ್ಲಿ ಕಾರ್ಬೋಹೈಡ್ರೇಟ್‌ಗಳು ಮತ್ತು ‘ಟ್ರಿಪ್ಟೊಫಾನ್’ ಅಂಶ ಹೆಚ್ಚಿರುವ ಪದಾರ್ಥಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ, ಡೇರಿ ಉತ್ಪನ್ನಗಳು, ಸೂಪ್‌ಗಳು ಮತ್ತು ಕೆಲವು ಬಗೆಯ ಬ್ರೆಡ್ ಗಳು. ಇವು ದೇಹವನ್ನು ಹಗುರಾಗಿಸಿ ನಿದ್ರೆಗೆ ಸಹಾಯ ಮಾಡುತ್ತವೆ.
ಗಮ್ಯಸ್ಥಾನ ತಲುಪುವ ಮೊದಲು ಅಥವಾ ಎಚ್ಚರವಾಗಿರಬೇಕಾದ ಸಮಯದಲ್ಲಿ ನೀಡುವ ಆಹಾರ ದಲ್ಲಿ ಮಸಾಲೆ ಪದಾರ್ಥಗಳು, ಶುಂಠಿ, ಲೆಮನ್‌ಗ್ರಾಸ್ ಮತ್ತು ಮೆಣಸನ್ನು ಬಳಸಲಾಗುತ್ತದೆ. ಈ ಪದಾರ್ಥಗಳು ದೇಹದ ಚಯಾಪಚಯ ಕ್ರಿಯೆಯನ್ನು ಚುರುಕುಗೊಳಿಸಿ, ಆಲಸ್ಯವನ್ನು ಹೋಗ ಲಾಡಿಸುತ್ತವೆ. ಪ್ರಯಾಣಿಕರಿಗೆ ಹಸಿವಾಯಿತೆಂದು ಊಟ ನೀಡುವುದಿಲ್ಲ.
ಬದಲಿಗೆ, ಗಮ್ಯಸ್ಥಾನದ ಸಮಯಕ್ಕೆ ತಕ್ಕಂತೆ ಊಟದ ಸಮಯವನ್ನು ನಿಗದಿಪಡಿಸಲಾಗುತ್ತದೆ. ಇದರಿಂದ ದೇಹದ ಜೈವಿಕ ಗಡಿಯಾರವನ್ನು ವೇಗವಾಗಿ ಹೊಂದಿಸಲು ಸಾಧ್ಯವಾಗುತ್ತದೆ. ದೀರ್ಘ ಪ್ರಯಾಣದಲ್ಲಿ ನಿರ್ಜಲೀಕರಣ (Dehydration) ದೊಡ್ಡ ಸಮಸ್ಯೆ. ಇದಕ್ಕಾಗಿ ನೀರಿನ ಜತೆಗೆ ಇಲೆಕ್ಟ್ರೋಲೈಟ್ ಪಾನೀಯಗಳು ಮತ್ತು ಗಿಡಮೂಲಿಕೆ ಚಹಾಗಳನ್ನು ಆಗಾಗ ನೀಡಲಾಗುತ್ತದೆ.
ಆಹಾರ ಮತ್ತು ಬೆಳಕು ಮಾತ್ರವಲ್ಲ, ದೈಹಿಕ ಚಲನೆಗೂ ಆದ್ಯತೆ ಇದೆ. ಇಕಾನಮಿ ಕ್ಲಾಸ್ ಪ್ರಯಾಣಿಕರು ಸಹ ಕುಳಿತೇ ಇರಬೇಕಿಲ್ಲ. ವಿಮಾನದ ಮಧ್ಯಭಾಗದಲ್ಲಿನ ಆಸನಗಳನ್ನು ತೆಗೆದು ಹಾಕಿ ಒಂದು ತೆರೆದ ಸ್ಥಳವನ್ನು (Open Space)ನಿರ್ಮಿಸಲಾಗಿದೆ. ಇಲ್ಲಿ ಪ್ರಯಾಣಿಕರು ಬಂದು ನಿಲ್ಲಬಹುದು, ಕೈಕಾಲುಗಳನ್ನು ಸ್ಟ್ರೆಚ್ ಮಾಡಬಹುದು. ಅಲ್ಲಿರುವ ಡಿಜಿಟಲ್ ಸ್ಕ್ರೀನ್‌ಗಳಲ್ಲಿ ಸರಳ ವ್ಯಾಯಾಮದ ಮಾರ್ಗದರ್ಶನ ನೀಡಲಾಗುತ್ತದೆ. ಇದನ್ನು ನೋಡಿ ಪ್ರಯಾಣಿಕರು ವ್ಯಾಯಾಮ ಮಾಡಬಹುದು.
ಕ್ವಾಂಟಾಸ್ ಈ ಎಲ್ಲವನ್ನೂ ಕೇವಲ ಊಹೆಯ ಮೇಲೆ ಮಾಡುತ್ತಿಲ್ಲ. 2019ರಲ್ಲಿ ನಡೆಸಿದ ಪ್ರಾಯೋ ಗಿಕ ಹಾರಾಟಗಳಲ್ಲಿ, ಪ್ರಯಾಣಿಕರ ತಲೆಗೆ ಸೆನ್ಸರ್‌ಗಳನ್ನು ಅಳವಡಿಸಿ ಅವರ ಮಿದುಳಿನ ತರಂಗ ಗಳನ್ನು ಅಧ್ಯಯನ ಮಾಡಲಾಗಿತ್ತು. ಈ ವಿಶೇಷ ಬೆಳಕು ಮತ್ತು ಆಹಾರ ಪದ್ಧತಿಯನ್ನು ಅನುಸರಿಸಿದ ಪ್ರಯಾಣಿಕರು, ಸಾಮಾನ್ಯ ಪ್ರಯಾಣಿಕರಿಗಿಂತ ಕಡಿಮೆ ಜೆಟ್-ಲ್ಯಾಗ್ ಅನುಭ ವಿಸಿದರು ಮತ್ತು ವಿಮಾನ ಇಳಿದ ನಂತರ ಹೆಚ್ಚು ಲವಲವಿಕೆಯಿಂದ ಕೂಡಿದ್ದರು ಎಂದು ಸಂಶೋಧನೆ ದೃಢಪಡಿಸಿದೆ.
ಹೀಗಾಗಿ, 2027ರ ಈ ಪ್ರಯಾಣವು ಕೇವಲ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವುದಲ್ಲ, ಬದಲಿಗೆ ಆಕಾಶದ ಒಂದು ‘ವೆಲ್‌ನೆಸ್ ರಿಟ್ರೀಟ್’ ಅನುಭವವನ್ನು ನೀಡಲಿದೆ. ಈ ‘ಪ್ರಾಜೆಕ್ಟ್ ಸನ್‌ರೈಸ್’ ಯೋಜನೆಯಲ್ಲಿ ಲಗೇಜ್ ನಿರ್ವಹಣೆ ಅತ್ಯಂತ ನಿರ್ಣಾಯಕ ವಿಷಯ. ಪ್ರಯಾಣಿಕರ ಹಿತದೃಷ್ಟಿಯಿಂದ ಮತ್ತು ವಿಮಾನಯಾನ ಸಂಸ್ಥೆಯ ದೃಷ್ಟಿಯಿಂದಲೂ ಇದು ಎಂಜಿನಿಯರಿಂಗ್ ಲೆಕ್ಕಾಚಾರದ ಒಂದು ಭಾಗ. ಈ ಐತಿ ಹಾಸಿಕ ವಿಮಾನದಲ್ಲಿ ಲಗೇಜ್ ಮಿತಿ ಹೇಗಿರಬಹುದು ಮತ್ತುಪ್ರಯಾಣಿಕರು ತಮ್ಮ ಲಗೇಜ್ ಅನ್ನು ಹೇಗೆ ಬುದ್ಧಿವಂತಿಕೆಯಿಂದ ನಿರ್ವಹಿಸಬೇಕು ಎಂಬುದು ಸಹ ಮುಖ್ಯ. ಸಾಮಾನ್ಯ ವಿಮಾನಗಳಲ್ಲಿ ಒಂದೆರಡು ಕಿಲೋ ಹೆಚ್ಚುವರಿ ಲಗೇಜ್ ಇದ್ದರೆ ಏರ್ ಲೈನ್ಸ್ ಸಿಬ್ಬಂದಿ ದಂಡ ವಿಧಿಸಿ ಅನುಮತಿಸಬಹುದು.
ಆದರೆ, ‘ಪ್ರಾಜೆಕ್ಟ್ ಸನ್‌ರೈಸ್’ ವಿಮಾನದಲ್ಲಿ ಇದು ಅಷ್ಟು ಸುಲಭವಲ್ಲ. ಹದಿನೇಳು ಸಾವಿರ ಕಿ.ಮೀ. ಹಾರಲು ವಿಮಾನವು ಟನ್‌ಗಟ್ಟಲೆ ಇಂಧನವನ್ನು ಹೊತ್ತೊಯ್ಯಬೇಕಾಗುತ್ತದೆ. ವಿಮಾನದ ಒಟ್ಟು ತೂಕದಲ್ಲಿ ಇಂಧನವೇ ಸಿಂಹಪಾಲನ್ನು ಆಕ್ರಮಿಸಿಕೊಳ್ಳುತ್ತದೆ. ಹೀಗಾಗಿ, ಪ್ರಯಾಣಿಕರು ಮತ್ತು ಅವರ ಲಗೇಜ್ ತೂಕವನ್ನು ಬಹಳ ಕರಾರುವಾಕ್ಕಾಗಿ ಲೆಕ್ಕ ಹಾಕಲಾಗುತ್ತದೆ.
ತೂಕವನ್ನು ಸರಿದೂಗಿಸಲು, ಕ್ವಾಂಟಾಸ್ ಈ ವಿಮಾನಗಳಲ್ಲಿ ವಾಣಿಜ್ಯ ಸರಕುಗಳನ್ನು ಸಾಗಿಸುವು ದಿಲ್ಲ ಎಂದು ಈಗಾಗಲೇ ಸುಳಿವು ನೀಡಿದೆ. ವಿಮಾನದ ‘ಬೆಲ್ಲಿ’ ಭಾಗದಲ್ಲಿ ಪ್ರಯಾಣಿಕರ ಬ್ಯಾಗ್ ಗಳಿಗೆ ಮಾತ್ರ ಆದ್ಯತೆ ನೀಡಲಾಗುತ್ತದೆ. ಕ್ವಾಂಟಾಸ್ ಇನ್ನೂ ಅಧಿಕೃತವಾಗಿ ಲಗೇಜ್ ನೀತಿಯನ್ನು ಪ್ರಕಟಿಸಿಲ್ಲ. ಚೆಕ್-ಇನ್ ಮಾಡುವಾಗ ತೂಕದ ಮಿತಿಯನ್ನು ಬಹಳ ಕಟ್ಟುನಿಟ್ಟಾಗಿ ಪಾಲಿಸ ಲಾಗುತ್ತದೆ.
ಇಷ್ಟು ದೀರ್ಘ ಪ್ರಯಾಣದಲ್ಲಿ ಫ್ರೆಶ್ ಆಗಿರಲು ಒಂದು ಸೆಟ್ ಆರಾಮದಾಯಕ ಬಟ್ಟೆ (ಉದಾ ಹರಣೆಗೆ ಪೈಜಾಮ ಅಥವಾ ಟ್ರ್ಯಾಕ್ ಪ್ಯಾಂಟ್) ಮತ್ತು ಒಳ ಉಡುಪುಗಳನ್ನು ಹ್ಯಾಂಡ್ ಬ್ಯಾಗ್‌ನಲ್ಲಿ ಇಟ್ಟುಕೊಳ್ಳುವುದು ಅತ್ಯಗತ್ಯ. ನೇರ ವಿಮಾನವಾಗಿ ರುವುದರಿಂದ, ಮಧ್ಯದಲ್ಲಿ ಎಲ್ಲಿಯೂ ಲಗೇಜ್ ಬದಲಾಯಿಸುವ ತೊಂದರೆ ಇರುವುದಿಲ್ಲ. ಇದು ಪ್ರಯಾಣಿಕರಿಗೆ ಒಂದು ದೊಡ್ಡ ಪ್ಲಸ್ ಪಾಯಿಂಟ್.
ಲಂಡನ್‌ಲ್ಲಿ ಬ್ಯಾಗ್ ಚೆಕ್-ಇನ್ ಮಾಡಿದರೆ, ನೇರವಾಗಿ ಸಿಡ್ನಿಯಲ್ಲಿ ಅದನ್ನು ಪಡೆಯಬಹುದು. ಇದರಿಂದ ಲಗೇಜ್ ಕಳೆದುಹೋಗುವ ಸಾಧ್ಯತೆ ತೀರಾ ಕಡಿಮೆ. 2027ರ ಈ ಪ್ರಯಾಣದಲ್ಲಿ ಲಗೇಜ್ ಮಿತಿಯು ಸಾಮಾನ್ಯ ವಿಮಾನಗಳಂತೆಯೇ ಇದ್ದರೂ, ಅದರ ನಿರ್ವಹಣೆಯ ಬಗೆಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ.