ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr Vijay Darda Column: ವಲಸಿಗರೆಲ್ಲಾ ಅಮೆರಿಕ ತೊರೆದರೆ ಏನಾಗುತ್ತದೆ ?

ವಲಸಿಗರನ್ನು ಸಂಪೂರ್ಣವಾಗಿ ಹೊರ ಹಾಕಿದರೆ ಅಮೆರಿಕದ ಜಿಡಿಪಿ ತಲಾದಾಯ ಶೇ.10ರಷ್ಟು ಕುಸಿಯುತ್ತದೆ ಎಂಬ ವರದಿಗಳೂ ಇವೆ. ಇನ್ನೂ ಕೆಲ ಅಂಕಿಅಂಶಗಳನ್ನು ನೋಡಿ: ಅಮೆರಿಕದ ನಾಗರಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ 3 ಕೋಟಿ ಜನರ ಪೈಕಿ ಶೇ.19ರಷ್ಟು ಜನರು ವಲಸಿಗರು. ಅಮೆರಿಕದ ಕೃಷಿ ಕ್ಷೇತ್ರವು ದೊಡ್ಡ ಪ್ರಮಾಣದಲ್ಲಿ ವಲಸಿಗ ಕಾರ್ಮಿಕರನ್ನು ಅವಲಂಬಿಸಿದೆ.

ಸಂಗತ

ಭಾರತ ಮತ್ತು ಚೀನಾ ನರಕದ ಕೂಪಗಳು ಎಂಬ ಮೈಕಲ್ ಸಾವೇಜ್‌ನ ದ್ವೇಷಪೂರಿತ ಹೇಳಿಕೆ ಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇರ್ ಮಾಡಿದ್ದು ಏಕೆ? ಆ ಮಾತಿಗೆ ಜಾಗತಿಕ ಮಟ್ಟದಲ್ಲಿ ಅಷ್ಟೊಂದು ಪ್ರಾಮುಖ್ಯತೆ ಸಿಕ್ಕಿದ್ದು ಏಕೆ? ಇಂತಹ ಹೇಳಿಕೆಗಳು ಅವರ ಕುತ್ಸಿತ ಮನಸ್ಸು ಮತ್ತು ಅತಾರ್ಕಿಕ ಚಿಂತನೆಯನ್ನು ಎತ್ತಿ ತೋರಿಸುತ್ತದೆಯೇ ಹೊರತು ವಾಸ್ತವವನ್ನಲ್ಲ.

ಅಮೆರಿಕದ ಲೇಖಕ ಮತ್ತು ರೇಡಿಯೋ ಆಂಕರ್ ಮೈಕಲ್ ಸಾವೇಜ್ ಭಾರತದಲ್ಲಿ ಎಲ್ಲರಿಗೂ ಗೊತ್ತಿರುವ ವ್ಯಕ್ತಿಯೇನಲ್ಲ. ಆದರೆ, ಇತ್ತೀಚೆಗೆ ಅವರ ಹೆಸರು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಸ್ವತಃ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಆ ವ್ಯಕ್ತಿಯನ್ನು ಪ್ರಸಿದ್ಧಿಗೆ ತಂದಿದ್ದಾರೆ. ‘ಭಾರತ ಮತ್ತು ಚೀನಾ ನರಕದ ಕೂಪಗಳು’ ಎಂದು ಮೈಕಲ್ ಸಾವೇಜ್ ಸಾಮಾಜಿಕ ಜಾಲತಾಣ ದಲ್ಲಿ ಬರೆದಿದ್ದನ್ನು ಟ್ರಂಪ್ ಶೇರ್ ಮಾಡಿದ ಮೇಲೆ ಆತನ ಹೆಸರು ಎಲ್ಲೆಡೆ ಚರ್ಚೆಯಾಗುತ್ತಿದೆ.

ಮೈಕಲ್ ಸಾವೇಜ್ ಎಂತಹ ವ್ಯಕ್ತಿ ಮತ್ತು ಆತ ಹೇಗೆ ಯೋಚಿಸುತ್ತಾನೆಂಬುದನ್ನು ತಿಳಿದುಕೊಳ್ಳಲು 2003ರ ಒಂದು ಘಟನೆಯನ್ನು ನಿಮಗೆ ಹೇಳಬೇಕು. ಎಂಎಸ್‌ಎನ್‌ಬಿಸಿ (ಮೈಕ್ರೋಸಾಫ್ಟ್ ಅಂಡ್ ನ್ಯಾಷನಲ್ ಬ್ರಾಡ್‌ಕಾಸ್ಟಿಂಗ್ ಕಂಪನಿ) ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಫೋನ್ ಕರೆ ಮಾಡಿದ್ದ ವ್ಯಕ್ತಿಗೆ ಅವರು ‘ನೀನು ಏಡ್ಸ್ ಬಂದು ಸಾಯಿ!’ ಎಂದು ಹೇಳಿದ್ದರು.

ನಂತರ ಅವರನ್ನು ಕೆಲಸದಿಂದಲೇ ಎಂಎಸ್‌ಎನ್‌ಬಿಸಿ ವಜಾಗೊಳಿಸಿತ್ತು. ವಲಸಿಗರ ಬಗ್ಗೆ ಆತ ಬಹಳ ಹಿಂದಿನಿಂದಲೂ ಉಲ್ಟಾಪಲ್ಟಾ ಮಾತನಾಡುತ್ತಲೇ ಬಂದಿದ್ದಾರೆ. ವಲಸಿಗರ ಬಗ್ಗೆ ಅವರಿ ಗಿರುವ ದ್ವೇಷ ಜನಜನಿತ. ಟ್ರಂಪ್ ಇತ್ತೀಚೆಗೆ ಶೇರ್ ಮಾಡಿದ ಮೈಕಲ್ ಸಾವೇಜ್‌ರ ಪೋಸ್ಟ್‌ನಲ್ಲಿ ಏನಿತ್ತು ಗೊತ್ತಾ? ‘ನಮ್ಮಲ್ಲಿ ಹುಟ್ಟಿದ ಮಗು ಏಕಾಏಕಿ ಇಲ್ಲಿನ ಪ್ರಜೆ ಆಗಿ ಬಿಡುತ್ತದೆ.

ನಂತರ ಚೀನಾ, ಭಾರತ ಅಥವಾ ಯಾವುದಾದರೂ ನರಕದ ಕೂಪದಿಂದ ತನ್ನ ಇಡೀ ಕುಟುಂಬ ವನ್ನೇ ಇಲ್ಲಿಗೆ ಕರೆತರುತ್ತದೆ. ನೀವೇನೂ ದೂರದಲ್ಲಿ ಇದನ್ನು ನೋಡಬೇಕಿಲ್ಲ. ನಿಮ್ಮ ಸುತ್ತಮುತ್ತ ಲಿನಲ್ಲೇ ಇದು ಕಾಣಿಸುತ್ತದೆ. ಈಗ ಯಾರೂ ಇಲ್ಲಿ ಇಂಗ್ಲಿಷ್ ಮಾತನಾಡುವುದಿಲ್ಲ.’

ಇದನ್ನೂ ಓದಿ: Dr Vijay Darda Column: ಪಾಕ್‌ ಮಧ್ಯಸ್ಥಿಕೆ: ನಮಗೇಕೆ ಚಿಂತೆ ?

ಹಾಗಿದ್ದರೆ ಟ್ರಂಪ್ ಏಕೆ ಇಂತಹ ದ್ವೇಷದ ಮಾತುಗಳನ್ನು ರೀಪೋಸ್ಟ್ ಮಾಡಿದರು? ಉತ್ತರ ಹೇಳುವುದು ಕಷ್ಟ. ಟ್ರಂಪ್ ಮನಸ್ಸಿನಲ್ಲಿ ಏನು ನಡೆಯುತ್ತದೆ ಎಂಬುದು ಟ್ರಂಪ್‌ಗೆ ಮಾತ್ರ ಗೊತ್ತು. ಮುಂದೆ ಯಾವತ್ತಾದರೂ ಅವರೇ ಇದರ ಬಗ್ಗೆ ಮಾತನಾಡಿ, ನಾನೇಕೆ ಆ ಪೋಸ್ಟ್ ಶೇರ್ ಮಾಡಿದೆ ಎಂಬುದನ್ನು ಹೇಳಬಹುದು. ಆದರೆ, ಈಗಾಗಲೇ ಬಹಳ ಜನರು ಟ್ರಂಪ್ ಅವರ ಈ ನಿಲುವನ್ನು ವಿರೋಧಿಸಿದ್ದಾರೆ.

ಆ ಪರಿ ದ್ವೇಷ ಕಾರುವ ಮೈಕಲ್ ಸಾವೇಜ್‌ರ ಹೇಳಿಕೆಯನ್ನು ಅಮೆರಿಕದ ಅಧ್ಯಕ್ಷರು ಅನುಮೋದಿಸಿ ಪ್ರಚುರಪಡಿಸುವ ಅಗತ್ಯವೇನಿತ್ತು ಎಂದು ಅವರು ಕೇಳುತ್ತಿದ್ದಾರೆ. ಸ್ವತಃ ಅಮೆರಿಕದಲ್ಲೇ ಈ ಹೇಳಿಕೆಗೆ ಸಾಕಷ್ಟು ಟೀಕೆಗಳು ಬಂದಿವೆ. ಅನೇಕ ಸಂಸದರು ‘ಇದು ಅಧ್ಯಕ್ಷರ ಕಚೇರಿಯ ಘನತೆಗೆ ತಕ್ಕ ಹೇಳಿಕೆಯಲ್ಲ’ ಎಂದು ಹೇಳಿದ್ದಾರೆ.

ಇನ್ನೂ ಕೆಲ ಸಂಸದರು ‘ಇದು ಜನಾಂಗೀಯ ನಿಂದನೆ’ ಎಂದು ವಿರೋಧಿಸಿದ್ದಾರೆ. ಅವೆಲ್ಲ ಹಾಗಿರಲಿ, ಟ್ರಂಪ್ ಅವರ ಅತ್ಯಾಪ್ತರು ಎಂದು ಕರೆಸಿಕೊಳ್ಳುವವರಲ್ಲೇ ಅನೇಕರು ಈ ಹೇಳಿಕೆ ಯನ್ನು ನೋಡಿ ದಂಗಾಗಿದ್ದಾರೆ. ಇನ್ನು ಕೆಲ ಆಪ್ತರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿ ದ್ದಾರೆ.

ನವದೆಹಲಿಯಲ್ಲಿರುವ ಅಮೆರಿಕನ್ ದೂತಾವಾಸದ ವಕ್ತಾರರು, ‘ಭಾರತ ಅದ್ಭುತವಾದ ದೇಶವೆಂದು ಟ್ರಂಪ್ ಹೇಳಿದ್ದಾರೆ. ಅವರ ಕೆಲ ಪರಮಾಪ್ತ ಸ್ನೇಹಿತರು ಇಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ ಎಂದು ಹೇಳಿದ್ದಾರೆ. ‘ಪರಮಾಪ್ತ ಸ್ನೇಹಿತರು’ ಎಂದು ಅವರು ಹೇಳಿರುವುದು ಪ್ರಧಾನಿ ನರೇಂದ್ರ ಮೋದಿಗೆ. ಆದರೆ, ಸ್ವತಃ ಟ್ರಂಪ್ ಹೀಗೆ ಹೇಳಿದ್ದಾರಾ? ಮೈಕಲ್ ಸಾವೇಜ್‌ರ ಪೋಸ್ಟನ್ನು ಶೇರ್ ಮಾಡಿದ ಬಳಿಕ ಟ್ರಂಪ್ ಖುದ್ದಾಗಿ ಸ್ಪಷ್ಟನೆ ನೀಡಿದ್ದಾರಾ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

Dr Drada

ಭಾರತ ಮತ್ತು ಚೀನಾವನ್ನು ನರಕದ ಕೂಪಗಳು ಎಂದು ಕರೆಯುವುದು ಸಹಜವಾಗಿಯೇ ವ್ಯಾಪಕ ಖಂಡನೆ ವ್ಯಕ್ತವಾಗುವಂತಹ ಹೇಳಿಕೆ. ಭಾರತದಲ್ಲಿ ವಿರೋಧ ಪಕ್ಷಗಳು ‘ಟ್ರಂಪ್ ಅವರ ಈ ಹೇಳಿಕೆಗೆ ಕೇಂದ್ರ ಸರಕಾರ ಕಠಿಣವಾಗಿ ಪ್ರತಿಕ್ರಿಯಿಸಬೇಕು’ ಎಂದು ಕೇಳುತ್ತಿವೆ. ಈ ಮಧ್ಯೆ, ಕೇಂದ್ರ ಸರಕಾರವೇ ಹೇಳಿಕೆ ಬಿಡುಗಡೆ ಮಾಡಿ, ‘ಇಂತಹ ಮಾತುಗಳನ್ನಾಡುವುದು ಸರಿಯಲ್ಲ. ಭಾರತ-ಅಮೆರಿಕ ನಡುವಿನ ಸ್ನೇಹವನ್ನು ಈ ಮಾತುಗಳು ಪ್ರತಿನಿಧಿಸುವುದಿಲ್ಲ. ಪರಸ್ಪರ ಗೌರವ ಹಾಗೂ ಸಹಭಾಗಿತ್ವ ದ ಆಸಕ್ತಿಯ ಮೇಲೆ ಉಭಯ ದೇಶಗಳ ಮಧ್ಯೆ ಬಹಳ ವರ್ಷಗಳಿಂದ ದ್ವಿಪಕ್ಷೀಯ ಸಂಬಂಧವಿದೆ’ ಎಂದು ಹೇಳಿದೆ.

ನನ್ನ ಪ್ರಕಾರ ಭಾರತ ಸಾಕಷ್ಟು ಸೌಮ್ಯವಾಗಿಯೇ ಪ್ರತಿಕ್ರಿಯಿಸಿರುವುದು ಸರಿಯಾಗಿದೆ. ಬೇರೆಯ ವರಿಗೆ ಪ್ರತಿಕ್ರಿಯಿಸುವಾಗ ನಾವೇಕೆ ನಮ್ಮ ಘನತೆಯನ್ನು ಕಳೆದುಕೊಳ್ಳಬೇಕು. ಚೀನಾ ಕೂಡ ಇಂತಹುದೇ ನಿಲುವು ತಳೆದಿದೆ. ಭಾರತದಲ್ಲಿರುವ ಚೀನಾ ದೂತಾವಾಸದ ಪ್ರತಿನಿಧಿ ಯು ಜಿನ್ ಅವರು ಎಕ್ಸ್‌ನಲ್ಲಿ ಭಾರತ ಮತ್ತು ಚೀನಾದ ಧ್ವಜಗಳನ್ನು ಪೋಸ್ಟ್ ಮಾಡಿ, ‘ವೈರಲ್ ಆದ ಪದಗಳು ಮರೆತುಹೋಗುತ್ತವೆ, ಆದರೆ ನಿಜವಾದ ಸಹಭಾಗಿತ್ವ ದೀರ್ಘಕಾಲ ಬಾಳಿಕೆ ಬರುತ್ತದೆ.

ದ್ವಿಪಕ್ಷೀಯ ಸಂಬಂಧಗಳು ಪರಸ್ಪರ ಗೌರವದ ಮೇಲೆ ನಿರ್ಮಾಣವಾಗುತ್ತವೆಯೇ ಹೊರತು ಮಾತಿ ನಿಂದ ಅಲ್ಲ’ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಟ್ರಂಪ್ ಅವರ ಹೇಳಿಕೆಗೆ ಪ್ರತಿಕ್ರಿಯಿಸುವಾಗ ಭಾರತ ಮತ್ತು ಚೀನಾ ದೇಶಗಳು ಭಾಷೆಯ ಘನತೆಯನ್ನು ಕಾಪಾಡಿಕೊಂಡಿವೆ.

ಸುಮ್ಮನೆ ಯೋಚಿಸಿ ನೋಡಿ: ಮುಂದೊಂದು ದಿನ ಮೈಕಲ್ ಸಾವೇಜ್‌ರ ಕನಸು ನನಸಾಗಿ, ಅಮೆರಿಕ ದಲ್ಲಿ ಒಬ್ಬರೂ ವಲಸಿಗರು ಉಳಿಯದ ದಿನ ಬಂದರೆ ಏನಾದೀತು? ಅಂತಹ ದಿನ ಬರಲಾರದು, ಆದರೂ ಅಂತಹದ್ದೊಂದು ಕಲ್ಪನೆ ಮಾಡಿ ಕೊಳ್ಳುವುದರಲ್ಲಿ ತಪ್ಪೇನಿಲ್ಲ. ಅಮೆರಿಕದ ಜನಸಂಖ್ಯೆ ಅಜಮಾಸು 35 ಕೋಟಿ. ಅದರಲ್ಲಿ ಸುಮಾರು 5 ಕೋಟಿ ಜನರು ಬೇರೆ ದೇಶದಿಂದ ಬಂದ ವಲಸಿಗರು. ಅಂದರೆ ಅಮೆರಿಕದಲ್ಲಿರುವ ಪ್ರತಿ ಏಳು ಜನರಲ್ಲಿ ಒಬ್ಬರು ವಲಸಿಗರು. ಈ ವಲಸಿಗರಲ್ಲಿ ಒಂದು ಕೋಟಿಗೂ ಹೆಚ್ಚು ಜನರು ಮೆಕ್ಸಿಕನ್ನರು.

55 ಲಕ್ಷ ಜನರು ಭಾರತೀಯರು. ಚೀನಾದ ವಲಸಿಗರ ಸಂಖ್ಯೆ ಭಾರತೀಯರಿಗಿಂತ ಕೊಂಚ ಕಡಿಮೆ ಯಿದೆ. ವಲಸಿಗರನ್ನೆಲ್ಲ ಅಮೆರಿಕದಿಂದ ಸಂಪೂರ್ಣವಾಗಿ ತೆಗೆದುಹಾಕಿದರೆ ಅಲ್ಲಿನ ಜನಸಂಖ್ಯೆ 30 ಕೋಟಿಗೆ ಇಳಿಕೆಯಾಗುತ್ತದೆ. ಅಮೆರಿಕನ್ ಮೂಲನಿವಾಸಿಗಳಲ್ಲಿ ಫಲವಂತಿಕೆಯ ದರ (ಮಕ್ಕಳನ್ನು ಹೊಂದುವ ದರ) ಕಡಿಮೆಯಿದೆ.

ಅಮೆರಿಕದ ಸಂಸತ್ತಿನ ಬಜೆಟ್ ಕಚೇರಿಯ ಅಧ್ಯಯನದ ಪ್ರಕಾರ ಅಮೆರಿಕನ್ನರಲ್ಲಿ ಜನನ ಪ್ರಮಾಣ ಕುಸಿಯುತ್ತಿದೆ ಮತ್ತು ವಯಸ್ಸಾದವರ ಸಂಖ್ಯೆ ಹೆಚ್ಚುತ್ತಿದೆ. 2040ರ ವೇಳೆಗೆ ಪ್ರತಿ ವರ್ಷ ಅಮೆರಿಕನ್ನ ರಿಗೆ ಹುಟ್ಟುವ ಒಟ್ಟು ಮಕ್ಕಳಿಗಿಂತ ಹೆಚ್ಚಿನ ಅಮೆರಿಕನ್ ಮೂಲನಿವಾಸಿಗಳು ಸಾಯುತ್ತಾರೆ.

ಇನ್ನು, ವಲಸಿಗರನ್ನು ಸಂಪೂರ್ಣವಾಗಿ ಹೊರ ಹಾಕಿದರೆ ಅಮೆರಿಕದ ಜಿಡಿಪಿ ತಲಾದಾಯ ಶೇ.10 ರಷ್ಟು ಕುಸಿಯುತ್ತದೆ ಎಂಬ ವರದಿಗಳೂ ಇವೆ. ಇನ್ನೂ ಕೆಲ ಅಂಕಿಅಂಶಗಳನ್ನು ನೋಡಿ: ಅಮೆರಿಕದ ನಾಗರಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ 3 ಕೋಟಿ ಜನರ ಪೈಕಿ ಶೇ.19ರಷ್ಟು ಜನರು ವಲಸಿಗರು. ಅಮೆರಿಕದ ಕೃಷಿ ಕ್ಷೇತ್ರವು ದೊಡ್ಡ ಪ್ರಮಾಣದಲ್ಲಿ ವಲಸಿಗ ಕಾರ್ಮಿಕರನ್ನು ಅವಲಂಬಿ ಸಿದೆ.

ರಾಷ್ಟ್ರೀಯ ಕೃಷಿ ಕೆಲಸಗಾರರ ಸಮೀಕ್ಷೆಯ ಪ್ರಕಾರ ಶೇ.70ರಷ್ಟು ಕೃಷಿ ಕಾರ್ಮಿಕರು ವಲಸಿಗರು. ಅಮೆರಿಕದ ಹೆಗ್ಗುರುತಾಗಿರುವ ಸಿಲಿಕಾನ್ ವ್ಯಾಲಿ ಬೆಳೆದಿದ್ದೇ ಭಾರತೀಯ ವಲಸಿಗರ ಕಠಿಣ ಪರಿಶ್ರಮ ಮತ್ತು ಪ್ರತಿಭೆಯಿಂದ. ಅಮೆರಿಕದ ಅತ್ಯಂತ ಪ್ರತಿಷ್ಠಿತ ಆಪಲ್ ಇಂಕ್ ಕಂಪನಿಯನ್ನು ಕಟ್ಟಿದ್ದು ಯಾರು ಗೊತ್ತಾ? ಸ್ಟೀವ್ ಜಾಬ್ಸ್. ಅವರು ಸಿರಿಯಾದ ವಲಸಿಗನೊಬ್ಬನ ಮಗ.

ಅಮೆರಿಕದಲ್ಲಿರುವ 500 ಬೃಹತ್ ಕಂಪನಿಗಳ ಪೈಕಿ ಶೇ.45ರಷ್ಟು ಕಂಪನಿಗಳನ್ನು ಹುಟ್ಟು ಹಾಕಿ ದವರು ವಲಸಿಗರು ಅಥವಾ ಅವರ ಮಕ್ಕಳು. ಅಮೆರಿಕದಲ್ಲಿ ಒಂದು ಬಿಲಿಯನ್ ಡಾಲರ್‌ ಗಿಂತ ಹೆಚ್ಚು ವಾರ್ಷಿಕ ಆದಾಯ ಗಳಿಸುವ ಶೇ.55ರಷ್ಟು ಸ್ಟಾರ್ಟ್‌ಅಪ್ ಕಂಪನಿಗಳನ್ನು ಕಟ್ಟಿದವರು ವಲಸಿಗರು.

ಟ್ರಂಪ್ ಮುಚ್ಚಿಡುವ ಇನ್ನೊಂದು ಸತ್ಯವೇನೆಂದರೆ, ಭಾರತೀಯ ಮೂಲದ ಅಮೆರಿಕನ್ನರು ಪ್ರತಿ ವರ್ಷ 250ರಿಂದ 300 ಬಿಲಿಯನ್ ಡಾಲರ್ʼಗಳಷ್ಟು ತೆರಿಗೆಯನ್ನು ಅಮೆರಿಕದ ಬೊಕ್ಕಸಕ್ಕೆ ಪಾವತಿಸುತ್ತಾರೆ. ಇದು ಅಮೆರಿಕದ ಒಟ್ಟು ತೆರಿಗೆ ಆದಾಯದ ಶೇ.5ರಿಂದ 6ರಷ್ಟಾಗುತ್ತದೆ.

ಹೀಗಾಗಿ ಮೈಕಲ್ ಸಾವೇಜ್‌ನಂತಹ ಸಣ್ಣ ಮನಸ್ಸಿನ ವ್ಯಕ್ತಿಗಳು ಯಾವುದೇ ನಾಚಿಕೆಯಿಲ್ಲದೆ ಭಾರತವನ್ನು ನರಕದ ಕೂಪವೆಂದು ಕರೆದರೆ ಅದನ್ನು ಸಾರಾಸಗಟಾಗಿ ತಳ್ಳಿ ಹಾಕುವುದಕ್ಕೆ ಕಿಂಚಿತ್ತೂ ಹಿಂದೆಮುಂದೆ ನೋಡಬೇಕಿಲ್ಲ. ಅಂತಹ ಹೇಳಿಕೆಗಳು ಅವರ ಕುತ್ಸಿತ ಮನಸ್ಸು ಮತ್ತು ಅತಾರ್ಕಿಕ ಚಿಂತನೆಯನ್ನು ಎತ್ತಿ ತೋರಿಸುತ್ತದೆಯೇ ಹೊರತು ವಾಸ್ತವವನ್ನಲ್ಲ.

ತೀರಾ ತಪ್ಪು ದಾರಿಯಲ್ಲಿ ಹೋಗುತ್ತಿರುವ ವ್ಯಕ್ತಿಯೊಬ್ಬನ ದುಷ್ಟ ಮನಸ್ಥಿತಿಯದು. ಹಾಗೆ ನೋಡಿ ದರೆ, ಮೈಕಲ್ ಸಾವೇಜ್‌ನಂತಹ ದೃಷ್ಟಿಕೋನವನ್ನು ಹೊಂದಿರುವ ವ್ಯಕ್ತಿಗಳು ಅಮೆರಿಕಕ್ಕೆ ಮಾತ್ರ ಸೀಮಿತವಲ್ಲ; ಅಂತಹವರು ಎಲ್ಲ ದೇಶಗಳಲ್ಲೂ, ಜಗತ್ತಿನ ಎಲ್ಲ ಮೂಲೆಯಲ್ಲೂ ಸಿಗುತ್ತಾರೆ. ಅಂತಹವರಿಗೆ ಪ್ರಾಮುಖ್ಯತೆ ಕೊಡಬಾರದಷ್ಟೆ. ಅವರು ಏನು ಹೇಳಿದರೂ ಅದನ್ನು ಕಡೆಗಣಿಸ ಬೇಕು. ಹಾಗಿದ್ದರೆ ನೀವೇಕೆ ಸಾವೇಜ್‌ನ ಹೇಳಿಕೆಯ ಬಗ್ಗೆಯೇ ಒಂದಿಡೀ ಅಂಕಣವನ್ನೇ ಬರೆಯು ತ್ತಿದ್ದೀರಿ ಎಂದು ನೀವು ಕೇಳಬಹುದು!

ಅವರ ಹೇಳಿಕೆಯನ್ನು ಟ್ರಂಪ್ ರೀಪೋಸ್ಟ್ ಮಾಡಿ, ಅದು ಜಗತ್ತಿನಾದ್ಯಂತ ಮುಖ್ಯವಾಹಿನಿಯ ಜನರ ಗಮನ ಸೆಳೆದು, ದೊಡ್ಡ ಮಟ್ಟದಲ್ಲಿ ಪ್ರಚಾರ ಪಡೆದ ದೆಸೆಯಿಂದ ವಾಸ್ತವಾಂಶಗಳನ್ನು ಜನರ ಮುಂದಿಡಬೇಕು ಎಂಬ ಕಾರಣಕ್ಕಷ್ಟೇ ಇದನ್ನು ಬರೆದಿದ್ದೇನೆ.

ನಾವು ಭಾರತೀಯರು ವಿಶಾಲ ಮನಸ್ಸಿನ ಜನರು. ನಮ್ಮ ನಡೆ ಮತ್ತು ನುಡಿ ಉದಾರವಾದುದು. ನಮ್ಮದು ವಸುಧೈವ ಕುಟುಂಬಕಂ ಎಂಬ ಸಿದ್ಧಾಂತವನ್ನು ಜಪಿಸುವ ದೇಶ. ಇಡೀ ಜಗತ್ತು ಒಂದು ಕುಟುಂಬ ಎಂದು ನಾವು ಸದಾ ನಂಬುತ್ತೇವೆ. ಮೈಕಲ್ ಸಾವೇಜ್‌ನಂತಹ ವ್ಯಕ್ತಿ ಅದೇನೋ ಬಡಬಡಿಸಿದರೆ ನಾವು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಮ್ಮ ತಾಕತ್ತೇನು ಎಂಬುದು ನಮಗೆ ಗೊತ್ತು. ಅಮೆರಿಕಕ್ಕೆ ವಲಸಿಗರು ಮಾಡಿರುವ ಉಪಕಾರ ಇಡೀ ಜಗತ್ತಿಗೇ ಗೊತ್ತು. ಹೀಗಾಗಿ ನರಕದ ಕೂಪದಲ್ಲಿ ಕತ್ತು ಹಿಡಿದು ಮುಳುಗಿಸಬೇಕಾದ ಕೆಟ್ಟ ಮಾತನ್ನು ಇಲ್ಲಿಗೇ ಮರೆತು ಮುಂದೆ ಸಾಗೋಣ! ಬೇಕಿದ್ದರೆ ಮೈಕಲ್ ಮತ್ತು ಡೊನಾಲ್ಡ್ ನರಕದ ಜಪ ಮಾಡಲಿ.

ಡಾ.ವಿಜಯ್‌ ದರಡಾ

View all posts by this author