ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr Vijay Darda Column: ಪಾಕ್‌ ಮಧ್ಯಸ್ಥಿಕೆ: ನಮಗೇಕೆ ಚಿಂತೆ ?

ಯಾವುದು ಸಾಧ್ಯವೇ ಇರಲಿಲ್ಲವೋ ಅದನ್ನು ಪಾಕಿಸ್ತಾನ ಸಾಧ್ಯವಾಗಿಸಿ ತೋರಿಸಿದೆ ಎಂದು ಕೆಲ ರಾಜಕೀಯ ಪಂಡಿತರು ವ್ಯಾಖ್ಯಾನಿಸಿದರು. ಭಾರತದಲ್ಲಂತೂ ಪ್ರಧಾನಿ ನರೇಂದ್ರ ಮೋದಿಯವರ ಟೀಕಾಕಾರರಿಗೆ ರಾಜಕೀಯ ಜಾಕ್‌ಪಾಟ್ ಹೊಡೆದಿತ್ತು. ಏಕೆ ಭಾರತಕ್ಕೆ ಇಂತಹದ್ದೊಂದು ಮಧ್ಯಸ್ಥಿಕೆ ವಹಿಸಿ ಶಾಂತಿ ಒಪ್ಪಂದ ಮಾಡಿಸಲು ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಗಳು ಬರತೊಡಗಿದವು.

Dr Vijay Darda Column: ಪಾಕ್‌ ಮಧ್ಯಸ್ಥಿಕೆ: ನಮಗೇಕೆ ಚಿಂತೆ ?

-

ಸಂಗತ

ಕದನ ವಿರಾಮದಲ್ಲಿ ಪಾಕಿಸ್ತಾನಕ್ಕೆ ರಾಜತಾಂತ್ರಿಕ ಜಯವೇನೂ ಸಿಕ್ಕಿಲ್ಲ. ಶಹಬಾಜ್ ಷರೀ- ಮತ್ತು ಆಸಿಮ್ ಮುನೀರ್ ಸಂದೇಶವಾಹಕರ ಕೆಲಸವನ್ನಷ್ಟೇ ಮಾಡಿದ್ದಾರೆ. ಇಷ್ಟಕ್ಕೂ ಯುಎಇ ಏಕೆ ಪಾಕ್ ಬಳಿ ಸಾಲ ವಾಪಸ್ ಕೇಳುತ್ತಿದೆ? ಭಾರತ-ಬಾಂಗ್ಲಾ ಮಾತುಕತೆ ನೋಡಿ ಪಾಕ್‌ಗೆ ಏಕೆ ಹೊಟ್ಟೆ ಉರಿಯುತ್ತಿದೆ?

ಏಪ್ರಿಲ್ 7ರಂದು ಜಗತ್ತು ಉಸಿರು ಬಿಗಿಹಿಡಿದು ಕುಳಿತಿತ್ತು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಷ್ಟೇ ಭಯಾನಕ ಎಚ್ಚರಿಕೆಯೊಂದನ್ನು ನೀಡಿದ್ದರು. ಹೊರ್ಮುಜ್ ಜಲಸಂಧಿಯನ್ನು ಎಲ್ಲ ದೇಶದ ಹಡಗುಗಳಿಗೆ ಇರಾನ್ ಈಗಿಂದೀಗಲೇ ಮುಕ್ತಗೊಳಿಸದಿದ್ದರೆ ಸಂಜೆಯೊಳಗೆ ಅಲ್ಲಿನ ನಾಗರಿಕತೆಯನ್ನೇ ನಾಶಪಡಿಸುವುದಾಗಿ ಧಮಕಿ ಹಾಕಿದ್ದರು. ಅವರು ವಾರ್ನಿಂಗ್ ಕೊಟ್ಟು ಬಾಯಿ ಮುಚ್ಚುವುದರೊಳಗೇ ಪಾಕಿಸ್ತಾನದ ಪ್ರಧಾನ ಮಂತ್ರಿ ಶಹಬಾಜ್ ಷರೀಫ್ ಅಚ್ಚರಿಯೆಂಬಂತೆ ‘ಅಮೆರಿಕ ಮತ್ತು ಇರಾನ್ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ’ ಎಂದು ಘೋಷಣೆ ಮಾಡಿದ್ದರು. ‌

ಇನ್ನೂ ಅಚ್ಚರಿಯೆಂಬಂತೆ, ಟ್ರಂಪ್ ಯಾವೊತ್ತಿನಂತೆ ಗುಡುಗುವುದನ್ನು ಬಿಟ್ಟು ತಮ್ಮ ಧ್ವನಿ ಯನ್ನು ಮೆತ್ತಗಾಗಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಎರಡು ವಾರಗಳ ಕದನ ವಿರಾಮ ವನ್ನು ಪ್ರಕಟಿಸಿದ್ದರು. ತಕ್ಷಣ ಪಾಕಿಸ್ತಾನದ ಸಾಧನೆಯ ಬಗ್ಗೆ ಜಗತ್ತಿನಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದು ಬರತೊಡಗಿತು.

ಯಾವುದು ಸಾಧ್ಯವೇ ಇರಲಿಲ್ಲವೋ ಅದನ್ನು ಪಾಕಿಸ್ತಾನ ಸಾಧ್ಯವಾಗಿಸಿ ತೋರಿಸಿದೆ ಎಂದು ಕೆಲ ರಾಜಕೀಯ ಪಂಡಿತರು ವ್ಯಾಖ್ಯಾನಿಸಿದರು. ಭಾರತದಲ್ಲಂತೂ ಪ್ರಧಾನಿ ನರೇಂದ್ರ ಮೋದಿಯವರ ಟೀಕಾಕಾರರಿಗೆ ರಾಜಕೀಯ ಜಾಕ್‌ಪಾಟ್ ಹೊಡೆದಿತ್ತು. ಏಕೆ ಭಾರತಕ್ಕೆ ಇಂತಹದ್ದೊಂದು ಮಧ್ಯಸ್ಥಿಕೆ ವಹಿಸಿ ಶಾಂತಿ ಒಪ್ಪಂದ ಮಾಡಿಸಲು ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಗಳು ಬರತೊಡಗಿ ದವು.

ಯುದ್ಧದ ವಿಷಯದಲ್ಲಿ ಪಾಕಿಸ್ತಾನ ಬಹುದೊಡ್ಡ ರಾಜತಾಂತ್ರಿಕ ದಿಗ್ವಿಜಯ ಸಾಧಿಸಿದೆ ಎಂದೂ, ಭಾರತ ತೀವ್ರ ಹಿನ್ನಡೆ ಅನುಭವಿಸಿದೆ ಎಂದೂ ವ್ಯಾಖ್ಯಾನಗಳು ಕೇಳಿಬಂದವು. ಅವುಗಳನ್ನು ಕೇಳಿ ನನಗೆ ಆಶ್ಚರ್ಯವಾಯಿತು.

ವಿದೇಶಾಂಗ ವ್ಯವಹಾರಗಳನ್ನು ದೇಸಿ ರಾಜಕೀಯದ ಕನ್ನಡಕದಲ್ಲಿ ನೋಡುವುದು ಸರಿಯೇ? ಅದರ ಬದಲು, ಏಕೆ ಪಾಕಿಸ್ತಾನ ಈ ವಿಷಯದಲ್ಲಿ ಮಧ್ಯಸ್ಥಿಕೆದಾರನಾಯಿತು ಎಂಬುದನ್ನು ವಿಶ್ಲೇಷಿಸಬೇಕಲ್ಲವೇ? ಈ ವಿಷಯದಲ್ಲಿ ಭಾರತ ನಿಜವಾಗಿಯೂ ಏನನ್ನಾದರೂ ಮಾಡುವ ಅಗತ್ಯವಿತ್ತೇ ಎಂಬುದನ್ನು ವಿಶ್ಲೇಷಣೆ ಮಾಡಬೇಕಲ್ಲವೇ? ನನ್ನ ಪ್ರಕಾರ ಈ ವ್ಯವಹಾರದಲ್ಲಿ ಭಾರತ ವಹಿಸಬಹುದಾದ ಪಾತ್ರವೇನೂ ಇರಲಿಲ್ಲ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ದಲ್ಲಿ ಭಾರತಕ್ಕೇನು ಕೆಲಸವಿದೆ? ಭಾರತಕ್ಕೆ ಇಸ್ರೇಲ್ ಅತ್ಯಂತ ನಂಬಿಕಸ್ಥ ದೇಶ ಎಂಬು ದರಲ್ಲಿ ಯಾವುದೇ ಅನುಮಾನವಿಲ್ಲ. ಅದೇ ರೀತಿ, ಇರಾನ್ ಜತೆಗೂ ಭಾರತ ಸುಮಧುರ ಸಂಬಂಧವನ್ನು ಹೊಂದಿದೆ ಎಂಬುದು ಕೂಡ ನಿಜ. ಆದರೆ, ಯಾವ ಲೆಕ್ಕದಲ್ಲೂ ಭಾರತ ತನ್ನ ಅಧೀನ ದೇಶವಲ್ಲ ಎಂಬುದು ಅಮೆರಿಕಕ್ಕೆ ಚೆನ್ನಾಗಿ ಗೊತ್ತಿದೆ.

ಇದನ್ನೂ ಓದಿ: Dr Vijay Darda Column: ಸದ್ದಿಲ್ಲದೆ ಭಾರತೀಯರ ಬೆನ್ನುಮೂಳೆ ಮುರಿಯುತ್ತಿರುವ ಯುದ್ಧ !

ಭಾರತ ಏನು ಹೇಳುತ್ತದೆ ಎಂಬುದನ್ನು ಜಗತ್ತು ಕಿವಿಗೊಟ್ಟು ಕೇಳಿಸಿಕೊಳ್ಳುತ್ತದೆ. ಭಾರತದ ಮಾತಿಗೆ ಜಾಗತಿಕ ವೇದಿಕೆಯಲ್ಲಿ ಬೆಲೆಯಿದೆ. ಅಮೆರಿಕಕ್ಕೆ ಇಂತಹ ಸಂಧಾನಕಾರ ಬೇಕಿಲ್ಲ. ಅಮೆರಿಕಕ್ಕೆ ಬೇಕಿರುವುದು ತನ್ನ ಮಾತು ಕೇಳುವ ದೇಶ. ಹೀಗಾಗಿ ಪಾಕಿಸ್ತಾನವೇ ಅಮೆರಿಕಕ್ಕೆ ಈ ವಿಷಯದಲ್ಲಿ ಅತ್ಯಂತ ಸೂಕ್ತ ದೇಶವಾಗುತ್ತದೆ. ಪಾಕಿಸ್ತಾನವನ್ನು ನಂಬಲು ಸಾಧ್ಯವಿಲ್ಲ, ಅದು ಹೇಳುವುದು ಒಂದು ಮತ್ತು ಮಾಡುವುದು ಇನ್ನೊಂದು ಎಂಬುದು ಇತಿಹಾಸವನ್ನು ತಿಳಿದ ಅಮೆರಿಕಕ್ಕೆ ಗೊತ್ತಿದೆ.

ಆದರೆ, ತಾನು ಹೇಳಿದ್ದನ್ನು ಪಾಕಿಸ್ತಾನ ಈಗ ಶಿರಸಾವಹಿಸಿ ಪಾಲಿಸುತ್ತದೆ ಮತ್ತು ತನ್ನ ಭಾಷೆ ಪಾಕಿಸ್ತಾನಕ್ಕೆ ಅರ್ಥವಾಗುತ್ತದೆ ಎಂಬುದೂ ಅದಕ್ಕೆ ತಿಳಿದಿದೆ. ಪಾಕಿಸ್ತಾನ ಎಲ್ಲಿಯವರೆಗೆ ಟ್ರಂಪ್‌ಗೆ ಬೆಣ್ಣೆ ಸವರುತ್ತಿದೆ ಅಂದರೆ ‘ಡೊನಾಲ್ಡ್ ಟ್ರಂಪ್ ಒಬ್ಬ ಶಾಂತಿದೂತ ಎಂದು ಕರೆದಿತ್ತು!

ಅಷ್ಟೇಕೆ, ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕು’ ಎಂದೂ ಶಿಫಾರಸು ಮಾಡಿತ್ತು. ಇಂತಹ ಗುಲಾಮರು ಅಮೆರಿಕಕ್ಕೆ ಇನ್ನೆಲ್ಲಿ ಸಿಗುತ್ತಾರೆ? ಇನ್ನೊಂದು ವಿಷಯವಿದೆ. ಇರಾನ್ ಜತೆಗೆ ಪಾಕಿಸ್ತಾನ 900 ಕಿಲೋಮೀಟರ್ ಗಡಿ ಹೊಂದಿದೆ. ಹೀಗಾಗಿ ತನ್ನ ಸಂದೇಶವನ್ನು ರವಾನಿಸಲು ಇರಾನ್ ಕೂಡ ಪಾಕಿಸ್ತಾನವನ್ನು ಒಪ್ಪಿಕೊಂಡಿತು.

ಅತ್ತ ಚೀನಾ ಕೂಡ ಪಾಕಿಸ್ತಾನದಲ್ಲೇ ಮಾತುಕತೆ ನಡೆಯಲಿ ಎಂದು ಹೇಳಿತು. ಎಷ್ಟೆಂದರೂ ಚೀನಾಕ್ಕೆ ಪಾಕ್ ಮೇಲೆ ಬಹಳ ಪ್ರೀತಿ! ಹೀಗಾಗಿ ಶಾಂತಿ ಮಾತುಕತೆಯ ವಿಷಯದಲ್ಲಿ ಪಾಕಿಸ್ತಾನ ಮುನ್ನೆಲೆಗೆ ಬಂದಿತು. ಆದರೆ ಅಮೆರಿಕ ಮತ್ತು ಇರಾನ್ ಮೇಲೆ ಪ್ರಭಾವ ಬೀರುವ ಘನತೆಯಾಗಲೀ ತಾಕತ್ತಾಗಲೀ ಪಾಕಿಸ್ತಾನಕ್ಕೆ ಇದೆಯೇ? ಕದನ ವಿರಾಮದಲ್ಲಿ ಅದು ಮಾಡಿದ್ದು ಕೇವಲ ಪೋಸ್ಟ್ ಮ್ಯಾನ್ ಕೆಲಸವನ್ನು. ಇಸ್ಲಾಮಾಬಾದ್‌ನಲ್ಲಿ ಸಂಧಾನ ಸಭೆಯನ್ನು ಆಯೋಜಿಸಿದ್ದಕ್ಕೆ ಪಾಕಿಸ್ತಾನ ಕ್ಕೆ ಸೂಕ್ತ ಬಹುಮಾನ ಕೂಡ ಸಿಗುತ್ತದೆ.

ವಿಷಯ ಏನು ಅಂದರೆ, ಪಾಕಿಸ್ತಾನಕ್ಕೆ ತುರ್ತಾಗಿ ಹಣ ಬೇಕಿದೆ. ಅಲ್ಲಿನ ಆರ್ಥಿಕತೆ ನೆಲಕಚ್ಚಿದೆ. ತಾನು ಕೊಟ್ಟಿದ್ದ 3.5 ಶತಕೋಟಿ ಡಾಲರ್ ಮೊತ್ತದ ಸಾಲ ಮತ್ತು ಠೇವಣಿಯನ್ನು ತಕ್ಷಣ ಹಿಂದಿರು ಗಿಸುವಂತೆ ಯುಎಇ ಕೇಳುತ್ತಿದೆ. ಈ ಮೊತ್ತ ಹೆಚ್ಚುಕಮ್ಮಿ ಪಾಕಿಸ್ತಾನದ ವಿದೇಶಿ ಮೀಸಲಿನ ಶೇ.18 ರಷ್ಟಾಗುತ್ತದೆ. ಸಾಲ ಮರುಪಾವತಿಯ ಅವಧಿ ವಿಸ್ತರಿಸಿ ಎಂದು ಯುಎಇ ಬಳಿ ಪಾಕ್ ಮನವಿ ಮಾಡಿತ್ತು. ಈಗ ಬಡ್ಡಿ ಪಾವತಿಸುತ್ತೇವೆ, ಆಮೇಲೆ ಅಸಲು ಹಿಂದಿರುಗಿಸುತ್ತೇವೆ ಎಂದು ಹೇಳಿತ್ತು. ಆದರೆ, ಎಷ್ಟೇ ಗೋಗರೆದರೂ ಯುಎಇ ಒಪ್ಪಿಲ್ಲ.

ಭಾರತದ ಚಿತಾವಣೆಯಿಂದಲೇ ಯುಎಇ ಹೀಗೆ ಮಾಡುತ್ತಿದೆ ಎಂದೂ ಪಾಕ್‌ನ ಕೆಲವರು ಹೇಳು ತ್ತಿದ್ದಾರೆ. ಪಾಕಿಸ್ತಾನದ ಸಂಸದ ಮುಶಾಹಿದ್ ಹುಸೇನ್ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ‘ಯುಎಇನಲ್ಲಿ 43 ಲಕ್ಷ ಭಾರತೀಯರು ವಾಸಿಸುತ್ತಿದ್ದಾರೆ. ಭಾರತದ ಜತೆಗೆ ಯುಎಇ ಸಖ್ಯ ಹೆಚ್ಚಾ ಗಿದೆ.

ಒಂದು ದಿನ ಯುಎಇ ಕೂಡ ಅಖಂಡ ಭಾರತದ ಭಾಗವಾಗಬಹುದು ಎಂದು ಹೇಳಿದ್ದಾರೆ.’ ನನ್ನ ಪ್ರಕಾರ ಇದು ಮೂರ್ಖತನದ ಹೇಳಿಕೆ. ಭಾರತ ‘ವಸುಧೈವ ಕುಟುಂಬಕಂ’ ಎಂಬ ತತ್ವದಲ್ಲಿ ನಂಬಿಕೆ ಇರಿಸಿರುವ ದೇಶ. ಜಗತ್ತೇ ಒಂದು ಕುಟುಂಬ ಎಂದು ನಾವು ನಂಬಿದ್ದೇವೆ. ನಮ್ಮ ವಿದೇಶಾಂಗ ನೀತಿಯಲ್ಲೂ ಇದೇ ತತ್ವ ಅಡಗಿದೆ. ಎಲ್ಲ ದೇಶಗಳೂ ಸಮೃದ್ಧಿಯಿಂದ ಇರಲಿ ಎಂದು ಭಾರತ ಬಯಸುತ್ತದೆ.

ಪಾಕಿಸ್ತಾನಕ್ಕೂ ಒಳ್ಳೆಯದಾಗಲಿ ಎಂದೇ ನಾವು ಹಾರೈಸುತ್ತೇವೆ. ಆದರೆ ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ಏನು ಮಾಡುತ್ತದೆ? ಒಂದೆಡೆ ಜಗತ್ತಿನೆದುರು ಆರ್ಥಿಕ ನೆರವಿನ ಭಿಕ್ಷೆ ಬೇಡುತ್ತದೆ, ಇನ್ನೊಂದೆಡೆ ಭಯೋತ್ಪಾದಕರನ್ನು ತಯಾರಿಸುವ ಕಾರ್ಖಾನೆಗಳನ್ನು ಬೆಳೆಸುತ್ತದೆ. ಮುಶಾಹಿದ್ ಹುಸೇನ್‌ಗೆ ನಾನೊಂದು ವಿಷಯವನ್ನು ನೆನಪಿಸಬೇಕು. ಪಾಕಿಸ್ತಾನ ಇತ್ತೀಚೆಗೆ ಸೌದಿ ಅರೇಬಿಯಾದ ಜತೆಗೆ ಒಂದು ಒಪ್ಪಂದ ಮಾಡಿಕೊಂಡಿದೆ. ಅದು ಯುಎಇಗೆ ಸಿಟ್ಟು ತರಿಸಿಲ್ಲವೇ? ಇತ್ತೀಚೆಗೆ ಇರಾನ್ ಮಾಡಿದ ದಾಳಿಗಳೆಲ್ಲ ಹೆಚ್ಚಾಗಿ ಯುಎಇಯನ್ನೇ ಗುರಿಯಾಗಿಸಿಕೊಂಡಿದ್ದವು.

ಬರೋಬ್ಬರಿ 2000 ಕ್ಷಿಪಣಿಗಳನ್ನು ಯುಎಇ ಮೇಲೆ ಇರಾನ್ ಹಾರಿಸಿದೆ. ಆದರೂ ಯುಎಇಯನ್ನು ಕದನ ವಿರಾಮದ ಮಾತುಕತೆಯಲ್ಲಿ ಸೇರಿಸಿಕೊಂಡಿಲ್ಲ. ಆದ್ದರಿಂದಲೇ ಯುಎಇ ಕದನ ವಿರಾಮ ವನ್ನು ಸ್ವಾಗತಿಸಿದರೂ ಅದರಲ್ಲಿ ಪಾಕಿಸ್ತಾನದ ಪಾತ್ರವಿದೆ ಎಂಬುದನ್ನು ಎಲ್ಲೂ ಉಲ್ಲೇಖಿಸಿಲ್ಲ.

ಯುಎಇ ವಿಶಾಲ ಹೃದಯದ ದೇಶ ಎಂಬುದನ್ನು ಮುಶಾಹಿದ್ ಹುಸೇನ್ ಮರೆಯಬಾರದು. ಮುಸ್ಲಿಂ ದೇಶವಾಗಿದ್ದರೂ ಅದು ತನ್ನ ಗಡಿಯೊಳಗೆ ಹಿಂದೂ ದೇವಸ್ಥಾನಗಳನ್ನು ನಿರ್ಮಿಸಲು ಅನುಮತಿ ನೀಡಿದೆ. ಯಾವ ಕಾರಣಕ್ಕೆ ಯುಎಇಗೆ ತನ್ನ ಮೇಲೆ ಬೇಸರವಾಗಿದೆ ಎಂಬುದನ್ನು ಪಾಕಿಸ್ತಾನ ತಿಳಿದುಕೊಳ್ಳಬೇಕೇ ಹೊರತು ಅದಕ್ಕೂ ಭಾರತವನ್ನು ದೂಷಿಸಿದರೆ ಏನು ಪ್ರಯೋಜನ?ಮಜಾ ನೋಡಿ, ಬಾಂಗ್ಲಾದೇಶ ಕೂಡ ಕದನ ವಿರಾಮವನ್ನು ಸ್ವಾಗತಿಸುವಾಗ ಪಾಕಿಸ್ತಾನದ ಹೆಸರು ಹೇಳಿಲ್ಲ. ಅದಕ್ಕೂ ಭಾರತ ಕಾರಣವೇ? ಖಂಡಿತ ಅಲ್ಲ.

ಬಾಂಗ್ಲಾದೇಶದ ಹೊಸ ಸರಕಾರಕ್ಕೆ ಪಾಕಿಸ್ತಾನದ ಯೋಗ್ಯತೆಯೇನು ಎಂಬುದು ಅರ್ಥವಾಗಿದೆ. ನಾವು ಪಾಕಿಸ್ತಾನದ ಕಡೆಗೆ ವಾಲಿದರೆ ಪ್ರಪಾತಕ್ಕೆ ಬೀಳುತ್ತೇವೆ ಎಂಬುದು ಬಾಂಗ್ಲಾದೇಶದ ಅರಿವಿಗೆ ಬಂದಿದೆ. ಶೇಖ್ ಹಸೀನಾ ಪದಚ್ಯುತಿಯ ಬಳಿಕ ಮೊಹಮ್ಮದ್ ಯೂನಸ್‌ರನ್ನು ಬಳಸಿಕೊಂಡು ಬಾಂಗ್ಲಾದೇಶವನ್ನು ಮೂಲಭೂತವಾದದತ್ತ ತಳ್ಳಲು ಪಾಕಿಸ್ತಾನ ಸಾಕಷ್ಟು ಪ್ರಯತ್ನ ಮಾಡಿತು. ಆದರೆ, ಅದು ಬಹಳ ಕಾಲ ನಡೆಯಲಿಲ್ಲ. ಬಾಂಗ್ಲಾದೇಶದ ಜನರಿಗೆ ಪಾಕಿಸ್ತಾನದ ಕಿತಾಪತಿ ಅರ್ಥವಾಯಿತು.

ಹೀಗಾಗಿ ಅವರು ಪ್ರಜಾಪ್ರಭುತ್ವವನ್ನು ಆಯ್ಕೆ ಮಾಡಿಕೊಂಡರು. ಬಾಂಗ್ಲಾದೇಶದ ಹೊಸ ಪ್ರಧಾನ ಮಂತ್ರಿ ತಾರೀಖ್ ರೆಹಮಾನ್ ಒಬ್ಬ ಉದಾರವಾದಿ ಮತ್ತು ಪ್ರಜಾಪ್ರಭುತ್ವವಾದಿ ನಾಯಕ. ಅವರ ವಿದೇಶಾಂಗ ಸಚಿವ ಡಾ.ಖಲೀಲುರ್ ರೆಹಮಾನ್ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದರು. ಅವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ರನ್ನು ಭೇಟಿಯಾಗಿ, ಒಟ್ಟಿಗೇ ಊಟ ಮಾಡಿದರು.

ಮರುದಿನವೇ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಜತೆಗೆ ಅವರ ಸಭೆ ನಡೆಯಿತು. ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಮತ್ತು ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ ಜತೆಗೂ ಅವರು ಮಾತುಕತೆ ನಡೆಸಿದರು. ಮರುದಿನ ಜೈಶಂಕರ್ ಜತೆಗೆ ಒಂದೇ ವಿಮಾನದಲ್ಲಿ ಅವರು ಮಾರಿಷಸ್‌ಗೆ ತೆರಳಿದರು.

ಉಭಯ ದೇಶಗಳ ಸಚಿವರ ಮಧ್ಯೆ ಏನು ಚರ್ಚೆ ನಡೆಯಿತು ಎಂಬುದು ಪಾಕಿಸ್ತಾನವನ್ನು ಕಾಡುತ್ತಿದೆ. ಏಕೆಂದರೆ ಎರಡೂ ದೇಶದ ನಾಯಕರು ಆ ಬಗ್ಗೆ ತುಟಿಯನ್ನೇ ಬಿಚ್ಚಿಲ್ಲ. ಭಾರತ ಮತ್ತು ಬಾಂಗ್ಲಾದೇಶ ಮತ್ತೊಮ್ಮೆ ತಮ್ಮ ಹಳೆಯ ಗೆಳೆತನವನ್ನು ಮರುಸ್ಥಾಪನೆ ಮಾಡಿಕೊಳ್ಳುವತ್ತ ಸಾಗುತ್ತಿವೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಇದನ್ನು ನೋಡಿ ಪಾಕಿಸ್ತಾನಕ್ಕೆ ಹೊಟ್ಟೆ ಉರಿದರೆ ಅದಕ್ಕೆ ಭಾರತವೇನು ಮಾಡಲು ಸಾಧ್ಯ? ಹೊಟ್ಟೆಕಿಚ್ಚು ಪಡುವುದೇ ಪಾಕಿಸ್ತಾನದ ಹಣೆಯಲ್ಲಿ ಬರೆದಿದ್ದರೆ ಹಾಗೇ ಆಗಲಿ ಬಿಡಿ!