ಒಂದೊಳ್ಳೆ ಮಾತು
rgururaj628@gmail.com
ಅಂದು ಹಬ್ಬದ ದಿನವಾಗಿತ್ತು. ‘ಇಂದು ಊರಲ್ಲಿ ಭಾರಿ ಭಿಕ್ಷೆ ಸಿಗಬಹುದು’ ಎಂದು ಆ ಊರಿನ ಭಿಕ್ಷುಕನಿಗೆ ಸಂತೋಷ ವಾಗಿತ್ತು. ಅವನು ತನ್ನ ಜೋಳಿಗೆಯಲ್ಲಿ ಒಂದು ಮುಷ್ಟಿಯಷ್ಟು ಅಕ್ಕಿಯನ್ನು ಹಾಕಿಕೊಂಡು ಹೊರಟಿದ್ದನು. ಊರಲ್ಲಿ ಇನ್ನು ಯಾರೂ ಎಚ್ಚರಗೊಂಡಿರಲಿಲ್ಲ. ಯಾರಾದರೂ ತನ್ನ ಜೋಳಿಗೆಯನ್ನು ನೋಡಿದರೆ ಯಾರೋ ಒಬ್ಬರು ಆಗಲೇ ಇವನಿಗೆ ಭೀಕ್ಷೆಯಲ್ಲಿ ಅಕ್ಕಿ ನೀಡಿದ್ದಾರೆ ಎಂದು ಅದನ್ನೇ ನೀಡಲಿ ಎಂದು ಅವನ ಯೋಚನೆ. ಓಡಾಡುವ ದಾರಿಗಳೆಲ್ಲ ನಿರ್ಜನವಾಗಿದ್ದವು. ಈಗೀಗ ಜನ ಎಚ್ಚರವಾಗಿ ಅಲ್ಲೊಬ್ಬ ಇನ್ನೊಬ್ಬರಂತೆ ಓಡಾಡ ತೊಡಗಿದ್ದರು.
ಮುಖ್ಯ ಬೀದಿಯಿಂದ ಮನೆಗಳಿರುವ ಓಣಿಯಲ್ಲಿ ಪ್ರವೇಶಿಸಿದ ಭಿಕ್ಷುಕನು ಎದುರಿಗೆ ಮಹಾರಾಜನ ರಥ ಬರುವುದು ಕಾಣುತ್ತಾನೆ. ಇನ್ನು ಮಹಾರಾಜನಿಂದ ಒಳ್ಳೆಯ ಭಿಕ್ಷೆ ಸಿಗಬಹುದು ಎಂದುಕೊಳ್ಳು ವಾಗಲೇ ರಾಜನ ರಥವು ಅವನ ಮುಂದೆ ಬಂದು ನಿಲ್ಲುತ್ತದೆ.
ಆಗ ಅವನು ‘ಧನ್ಯನಾದೆ ನಾನು..! ಜೀವನದಲ್ಲಿ ಇದುವರೆಗೂ ಯಾವ ರಾಜನಿಂದಲೂ ಭಿಕ್ಷೆಯನ್ನು ಬೇಡಿರಲಿಲ್ಲ. ಕಾರಣ, ದ್ವಾರಪಾಲಕರು ಹೊರಗಿನಿಂದಲೇ ಹಿಂದಿರುಗಿಸುತ್ತಿದ್ದರು. ಈಗ ನೋಡಿದರೆ ಸ್ವಯಂ ರಾಜನೇ ನನ್ನ ಎದುರು ಬಂದು ನಿಂತಿದ್ದಾನೆ ಇದು ನನ್ನ ಭಾಗ್ಯ’ ಎಂದುಕೊಳ್ಳುತ್ತಿರು ವಾಗಲೇ ಆ ಮಹಾರಾಜನು ಇವನ ಮುಂದೆ ಬಂದು ‘ಇಂದು ದೇಶದ ಮೇಲೆ ಬಹಳ ದೊಡ್ಡ ಸಂಕಟ ಬಂದಿದೆ.
ಇದನ್ನೂ ಓದಿ: Roopa Gururaj Column: ಮೂರು ಉಳಿಸುವ ಸ್ವಾರ್ಥದಿಂದ ಆರು ನಷ್ಟ
ಒಬ್ಬ ಜ್ಯೋತಿಷ್ಯನು ಹೇಳಿದ ಪ್ರಕಾರ, ಈ ಸಂಕಟದಿಂದ ಪಾರಾಗಲು ನಾನು ನನ್ನ ಎಲ್ಲವನ್ನೂ ತ್ಯಾಗ ಮಾಡಿ ಒಬ್ಬ ಯಾಚಕನ ಹಾಗೆ ಭಿಕ್ಷೆಯನ್ನು ಬೇಡಿ ತಂದ ಮೇಲೆ ಈ ಸಂಕಟದ ಪರಿಹಾರ ತಿಳಿಯುವುದು. ನೀನು ಈ ಹಾದಿಯಲ್ಲಿ ಸಿಕ್ಕ ಮೊದಲನೇ ವ್ಯಕ್ತಿ, ಹೀಗಾಗಿ ಇಂದು ನಾನು ನಿನ್ನ ಬಳಿ ಭಿಕ್ಷೆ ಬೇಡುತ್ತೇನೆ. ನೀನು ಭಿಕ್ಷೆ ನೀಡಿದರೆ ದೇಶದ ಮೇಲೆ ಬಂದು ಒದಗಿದ ಸಂಕಟ ದೂರಾಗ ಬಹುದು.
ಇಂದು ನೀನು ನನಗೆ ಭಿಕ್ಷೆಯಲ್ಲಿ ಏನಾದರೂ ಕೊಡು’ ಎಂದನು. ಭಿಕ್ಷುಕನು ಜೀವನಪೂರ್ತಿ ತಾನು ಬೇಡಿ ತಿನ್ನುವುದರಲ್ಲೇ ಕಳೆದಿದ್ದನು. ಯಾವತ್ತೂ ಏನೂ ಕೊಡಲು ಅವನ ಕೈ ಮುಂದಾಗಿದ್ದೇ ಇಲ್ಲ. ‘ಹೇ ದೇವರೇ, ಇದೆಂತಹ ಸಮಯ ಬಂತು.!’ ಎಂದು ಯೋಚಿಸತೊಡಗಿದ. ‘ಒಬ್ಬ ರಾಜನೇ, ಭಿಕ್ಷೆ ಯಾಚಿಸುತ್ತಿದ್ದಾನೆ ನಾನು ಅದನ್ನು ನಿರಾಕರಿಸಲಾರೆ.
ಬಹಳ ಕಷ್ಟದಿಂದ ಒಂದು ಹಿಡಿ ಅಕ್ಕಿಯಲ್ಲಿ ಒಂದು ಅಕ್ಕಿಯ ಕಾಳನ್ನು ತೆಗೆದು ಅವನು ರಾಜನ ಕೈಗೆ ಹಾಕುತ್ತಾನೆ. ರಾಜನು ಸಂತೋಷದಿಂದ ಅದೇ ಅಕ್ಕಿಯ ಒಂದು ಕಾಳನ್ನು ತೆಗೆದುಕೊಂಡು ಮುಂದೆ ಭಿಕ್ಷೆಗಾಗಿ ಹೊರಟು ಹೋದ. ರಾಜನು ಭಿಕ್ಷೆಗೆ ಬರುತ್ತಿರುವುದು ನೋಡಿ ನಾ ಮುಂದು ತಾ ಮುಂದು ಎಂದು ಜನರೆಲ್ಲ ಭಿಕ್ಷೆ ಹಾಕಲು ಬಂದರು. ಆದರೆ ಇಲ್ಲಿ ಭಿಕ್ಷುಕನಿಗೆ ತನ್ನ ಹಿಡಿಯ ಅಕ್ಕಿಯಲ್ಲಿನ ಒಂದು ಅಕ್ಕಿ ಕಾಳು ಹೋಯಿತಲ್ಲ ಎಂಬ ನೋವು ಕಾಡತೊಡಗಿತು.
ಹಾಗೂ ಹೀಗೂ ಮಾಡಿ ಮನೆಗೆ ಬಂದಾಗ ಭಿಕ್ಷುಕನ ಪತ್ನಿ ಅವನ ಜೋಳಿಗೆಯನ್ನು ಸುರಿದು ನೋಡಿದಾಗ ಆಕೆಗೆ ಒಂದೇ ಒಂದು ಬಂಗಾರದ ಅಕ್ಕಿ ಕಾಳು ಕಾಣಿಸಿತು. ಬಿಕ್ಷುಕನ ಹೆಂಡತಿಯು ಈ ವಿಷಯವನ್ನು ಅವನಿಗೆ ತಿಳಿಸಿದಾಗ ಅವನ ಎದೆ ಹೊಡೆದುಕೊಂಡು ಅಳತೊಡಗಿದ. ಅವನ ಹೆಂಡತಿ ಅಳುವಿನ ಕಾರಣವನ್ನು ಕೇಳಿದಾಗ ಬೆಳಗ್ಗೆ ನಡೆದಿರುವ ಸಂಗತಿಯನ್ನು ಅವಳಿಗೆ ತಿಳಿಸಿದ.
ಆಗ ಅವನ ಪತ್ನಿ ಹೇಳಿದಳು ‘ದಾನ ಮಾಡಿದ್ದು ಬಂಗಾರವಾಗಿ ಬಂದಿದೆ’ ಈ ವಿಷಯ ತಿಳಿದು ಇನ್ನು ಮೇಲೆ ಕಷ್ಟಪಟ್ಟು ದುಡಿದು ದಾನ ಮಾಡೋಣ ಎಂದಳು. ಹಿರಿಯರು ಒಂದು ಮಾತು ಹೇಳುತ್ತಾರೆ, ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ ಎಂದು. ಜೀವನಪೂರ್ತಿ ನಾವು ಕಷ್ಟಪಟ್ಟು ದುಡಿದ ಹಣವನ್ನು ಬ್ಯಾಂಕು ಲಾಕರ್‌ಗಳಲ್ಲಿ ಬಚ್ಚಿಟ್ಟು ಯಾರಿಗೋ ಬಿಟ್ಟು ಹೊರಟು ಬಿಡುತ್ತೇವೆ.
ಆದರೆ ಕಷ್ಟ ಎಂದು ಬಂದವರಿಗೆ ಸಹಾಯ ಮಾಡಿ ಗಳಿಸಿದ ಪುಣ್ಯ ನಮ್ಮ ಪಾಲಿಗೆ ಉಳಿಯುತ್ತದೆ.