ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Hari Paraak Column: ಸಚಿವರಾಗೋಕೆ ಎಂಥ ಜನ? ಅನ್ನೋದಕ್ಕಿಂತ ಯಾವ್‌ ಜನ? ಅನ್ನೋದ್‌ ಮುಖ್ಯ ?

ಕನ್ನಡ ಚಿತ್ರರಂಗದಲ್ಲಿ ರೀ ರಿಲೀಸ್ ಅನ್ನೋ ಟ್ರೆಂಡ್ ಆಗಾಗ ಸುದ್ದಿ ಮಾಡುತ್ತಿರುತ್ತದೆ. ಆದರೆ ಇಷ್ಟು ದಿನ ಇದು ಕೇವಲ ಮಾಸ್ ಹೀರೋಗಳ ಚಿತ್ರಗಳಿಗೆ ಸೀಮಿತ ಆಗಿತ್ತು. ಈಗ ನಮ್ಮ ಕನಸುಗಾರ ರವಿಚಂದ್ರನ್ ಅವರ ಸಿನಿಮಾ ಕೂಡಾ ಈ ಟ್ರೆಂಡ್ ಗೆ ತುತ್ತಾಗಿದೆ. ರವಿಚಂದ್ರನ್ ಅವರ ಶಾಂತಿ ಕ್ರಾಂತಿ ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡಬೇಕು ಅನ್ನೋ ಕೂಗು ಸೋಷಿ ಯಲ್ ಮೀಡಿಯಾದಲ್ಲಿ ಎದ್ದಿದೆ. ಕೆಲವರು ಇದಕ್ಕೆ ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ.

ತುಂಟರಗಾಳಿ

ಸಿನಿಗನ್ನಡ

ಕನ್ನಡ ಚಿತ್ರರಂಗದಲ್ಲಿ ರೀ ರಿಲೀಸ್ ಅನ್ನೋ ಟ್ರೆಂಡ್ ಆಗಾಗ ಸುದ್ದಿ ಮಾಡುತ್ತಿರುತ್ತದೆ. ಆದರೆ ಇಷ್ಟು ದಿನ ಇದು ಕೇವಲ ಮಾಸ್ ಹೀರೋಗಳ ಚಿತ್ರಗಳಿಗೆ ಸೀಮಿತ ಆಗಿತ್ತು. ಈಗ ನಮ್ಮ ಕನಸುಗಾರ ರವಿಚಂದ್ರನ್ ಅವರ ಸಿನಿಮಾ ಕೂಡಾ ಈ ಟ್ರೆಂಡ್ ಗೆ ತುತ್ತಾಗಿದೆ. ರವಿಚಂದ್ರನ್ ಅವರ ಶಾಂತಿ ಕ್ರಾಂತಿ ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡಬೇಕು ಅನ್ನೋ ಕೂಗು ಸೋಷಿ ಯಲ್ ಮೀಡಿಯಾದಲ್ಲಿ ಎದ್ದಿದೆ. ಕೆಲವರು ಇದಕ್ಕೆ ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಅಂದು ಬಾಕ್ಸ್ ಆಫೀಸ್ ನಲ್ಲಿ ಯಾವ ಕ್ರಾಂತಿಯನ್ನೂ ಮಾಡ ದ ಪ್ಲಾಪ್ ಚಿತ್ರವನ್ನು ಕೆಲವರು ಯಾಕೋ ಈಗ ಅತಿಯಾಗಿ ಪ್ರೀತಿಸುತ್ತಿದ್ದಾರೆ. ಆದರೆ ಅಂದೇ ನೋಡದ ಸಿನಿಮಾವನ್ನು ಜನ, ಇಂದೇ ನೋಡಿ ಅಂತ ಈಗ ಬೋರ್ಡ್ ಹಾಕಿದರೆ ನೋಡ್ತಾರೆಯೇ ಅನ್ನೋದು ಇಲ್ಲಿನ ಪ್ರಶ್ನೆ. ಅಲ್ಲದೆ ತಾಂತ್ರಿಕವಾಗಿ ಉತ್ತಮ ಮಟ್ಟದಲ್ಲಿದ್ದ ಶಾಂತಿಕ್ರಾಂತಿ ಚಿತ್ರವನ್ನು ಮತ್ತೆ ಬಿಡುಗಡೆ ಮಾಡಬೇಕು ಅಂದ್ರೆ ಅದಕ್ಕೆ ಒಂದಿಷ್ಟು ಸುಣ್ಣ ಬಣ್ಣ ಬಳಿಯಬೇಕಾಗುತ್ತದೆ. ಅದಕ್ಕೆ ತಗಲುವ ವೆಚ್ಚವನ್ನೂ ಈ ಚಿತ್ರ ಮರು ಬಿಡುಗಡೆಯಲ್ಲಿ ಗಳಿಸುವುದು ಅನುಮಾನ.

ಹಾಗಾಗಿ ಮೊದಲೇ ಸಾಲದ ಸುಳಿಯಲ್ಲಿ ಇರುವ ರವಿಚಂದ್ರನ್ ಅವರಿಗೆ ಇದು ಬೇಕಾ ಅನ್ನೋ ಅಮಾಯಕ ಪ್ರಶ್ನೆ ಸಹಜವಾದದ್ದೇ. ಅಲ್ಲದೆ, ಇದರ ಬಗ್ಗೆ ಊರವರೆ ಆಸಕ್ತಿ ತೋರಿಸುತ್ತಿದ್ದರೂ ರವಿಚಂದ್ರನ್ ಅರು ಇದಕ್ಕೆ ಮನಸ್ಸು ಮಾಡಿಲ್ಲ. ಮಾತೆತ್ತಿದ್ದರೆ ನಾನು ಪ್ರೇಮಲೋಕ ಮಾಡುವಾಗ ಅಂತಲೇ ಇನ್ನೂ ಮಾತನಾಡುವ ರವಿ, ಈಗ ಶಾಂತಿಕ್ರಾಂತಿ ಚಿತ್ರದ ಬದಲು ಪ್ರೇಮಲೋಕ ಚಿತ್ರವನ್ನು ಮರು ಬಿಡುಗಡೆ ಮಾಡಿ ಅಂತ ಒತ್ತಾಯ ತಂದಿದ್ದರೆ ಮನಸ್ಸು ಮಾಡುತ್ತಿದ್ದರೇನೋ. ಒಟ್ಟಿನಲ್ಲಿ ಗುಂಪಿನಲ್ಲಿ ಗೋವಿಂದ ಎನ್ನುವಂಥ ಜನರ ಮಾತುಗಳನ್ನು ಕೇಳಿ ರವಿಚಂದ್ರನ್ ಅವರು ತಮ್ಮ ಇನ್ನಷ್ಟು ಹಣವನ್ನು ಗೋವಿಂದ ಮಾಡಿಕೊಳ್ಳದೇ ಇರಲಿ ಅನ್ನೋದಷ್ಟೇ ಅವರ ಅಭಿಮಾನಿಗಳ ಆಶಯ.

ಇದನ್ನೂ ಓದಿ: Hari Paraak Column: ವಿಲ್‌ ಪವರಿಗಿಂತ ವಿಲ್ಸ್‌ ಪವರ್‌ ದೊಡ್ಡದು

ಲೂಸ್‌ ಟಾಕ್-ಡಿ.ಕೆ.ಶಶಿಕುಮಾರ್

ನಿಮ್ಮ ಸಂಪುಟಕ್ಕೆ ಸಚಿವರನ್ನು ಆಯ್ಕೆ ಮಾಡುವಾಗ ಯಾವ ಮಾನದಂಡ ಅಳವಡಿಸಿಕೊಂಡಿ ದ್ದೀರಿ?

- ಸಾರ್ವಜನಿಕ ಜೀವನದಲ್ಲಿ ಅವರ ಮಾನದಂಡ ಆಗಿರಬಾರದು ಅನ್ನೋದಷ್ಟೇ ನನ್ನ ಮಾನದಂಡ. ‌

ಸರಿ, ಆದ್ರೂ ಈ ಸಮಯದಲ್ಲಿ ಜಾತಿ ವಿಷಯ ಮುನ್ನೆಲೆಗೆ ಬರುತ್ತಲ್ಲ?

- ಹೌದು ಸಚಿವರನ್ನಾಗಿ ಮಾಡೋಕೆ ಅವರು ಎಂಥ ಜನ ಅನ್ನೋದಕ್ಕಿಂತ ಯಾವ ಜನ ಅನ್ನೋದು ಮುಖ್ಯ ಆಗುತ್ತೆ.

ಇದರ ಜೊತೆಗೆ ಅಪ್ಪ ತನ್ನ ಸೀಟನ್ನ ಮಗಳಿಗೆ ಬಿಟ್ಟುಕೊಡೋ ಪ್ರವೃತ್ತಿ ಬೇರೆ ಶುರು ಆಗಿದೆಯಲ್ಲ?

- ಏನ್ ಮಾಡೋಕಾಗಲ್ಲ ಅಪ್ಪನ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಪಾಲಿದೆಯಲ್ಲ

ಸರಿ, ನಿಮ್ಮ ಸಂಪುಟದ ಅದ್ಭುತ ಸಚಿವರನ್ನು ನೀವು ಯಾವ ರೀತಿ ಹೊಗಳ್ತೀರಿ?

- ಅಂತಹವರನ್ನು ಸಂಪುಟಕ್ಕಿಟ್ಟ ಚಿನ್ನ ಅಂತ ಕರೀತೀನಿ

ಜಮೀರ್ ಅಹ್ಮದ್ ಅವರನ್ನು ಮತ್ತೆ ಮಂತ್ರಿ ಮಾಡಿದ್ದೀರ?

- ಮತ್ತೆ, ಬೇರೆಯವರನ್ನು ಮಂತ್ರಿ ಮಾಡಿ, ಆಮೇಲೆ ಜಮೀರ್ ಅವರು ಅವರಿಗೆ ಕರೆ ಮಾಡಿ ಕಂಜಾಜುಲೇಷನ್ ಬ್ರದರ್ ಅಂತ ಹೇಳೋದನ್ನು ಕೇಳಿಸಿಕೊಳ್ಳೋಕಾಗಲ್ಲ ಅದಕ್ಕೆ.

(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್ ‌

ನ್ಯೂ ಇಯರ್ ಹಿಂದಿನ ದಿನ ಆಫೀಸಿನಿಂದ ಬಂದವನೇ, ನಾಳೆಯಿಂದ ಮೂರು ದಿನ ಆಫೀಸ್ ಬ್ಯುಸಿನೆಸ್ ಟ್ರಿಪ್ ಇದೆ ಅಂತ ಖೇಮು ಹೆಂಡತಿ ಖೇಮುಶ್ರೀಗೆ ಹೇಳಿದ. ಬೆಳಗ್ಗೆ ಬೇಗನೇ ಹೋಗಬೇಕು ನನ್ನ ಎಲ್ಲಾ ಲಗೇಜ್ ಅನ್ನು ಈಗ್ಲೇ ಪ್ಯಾಕ್ ಮಾಡು. ಬೆಳಗ್ಗೆ ಲೇಟ್ ಆಗುತ್ತೆ ಅಂತ ಹೇಳಿದ. ಆಫೀಸ್ ಬ್ರೀಫ್ ಕೇಸ್‌ನಲ್ಲಿ ಈ ಎಲ್ಲಾ ಫೈಲ್‌ಗಳನ್ನೂ, ಡಾಕ್ಯುಮೆಂಟ್ ಅನ್ನು ಇಡು. ನನ್ನ ಪರ್ಸನಲ್ ಸಾಮಾನುಗಳನ್ನು ಇನ್ನೊಂದು ಸೂಟ್ ಕೇಸ್‌ನಲ್ಲಿ ಇಡು. ಅಂದಹಾಗೆ ನನ್ನ ಆ ಬ್ಲೂ ಕಲರ್ ಸಿಲ್ಕ್ ಪೈಜಾಮ ಇಡೋದನ್ನು ಮರೀಬೇಡ ಅಂತ ಹೆಂಡತಿಗೆ ಹೇಳಿ ಬಾತ್ ರೂಮ್‌ಗೆ ಹೋದ ಖೇಮು. ಡಿಸೆಂಬರ್ 31ರ ರಾತ್ರಿ ಗಂಡ ಬ್ಯುಸಿನೆಸ್ ಟ್ರಿಪ್ ಅಂತ ಹೇಳ್ತಾ ಇರೋದು ನೋಡಿ ಖೇಮುಶ್ರೀಗೆ ಅನುಮಾನ ಬಂತು.

ಆದರೂ ಏನೂ ಮಾತಾಡದೇ, ಸರಿ ಖೇಮುಶ್ರೀ ಎಲ್ಲವನ್ನೂ ಪ್ಯಾಕ್ ಮಾಡಿದಳು. ಬೆಳಗ್ಗೆ ಬೇಗ ಎದ್ದವನೇ ಖೇಮು ಟೂರ್‌ಗೆ ಹೊರಟ. ಆ ಮೂರು ದಿನದಲ್ಲಿ ಖೇಮುಶ್ರೀ ಖೇಮುಗೆ ಹಲವಾರು ಬಾರಿ ಕಾಲ್ ಮಾಡಿದಳು. ಆದರೆ ಖೇಮು ಕಾಲ್ ರಿಸೀವ್ ಮಾಡಲಿಲ್ಲ ನಾನು ಮೀಟಿಂಗ್ ನಲ್ಲಿ ಇದ್ದೇನೆ. ಬ್ಯುಸಿ ಅಂತ ಮೆಸೇಜ್ ಮಾಡುತ್ತಿದ್ದ. ಸರಿ ಮೂರು ದಿನ ಕಳೆಯಿತು. ಖೇಮು ವಾಪಸ್ ಬಂದ. ಏನು ಬ್ಯುಸಿನೆಸ್ ಟ್ರಿಪ್‌ನಲ್ಲಿ ತುಂಬಾ ಬ್ಯುಸಿಯಾಗಿದ್ರಿ ಅನ್ಸುತ್ತೆ. ಕಾಲ್ ಕೂಡಾ ರಿಸೀವ್ ಮಾಡಲಿಲ್ಲ, ತುಂಬಾ ಸುಸ್ತಾಗಿದ್ದೀರ ಅಂದಳು ಖೇಮುಶ್ರೀ. ಅಯ್ಯೋ, ಅದ್ಯಾಕ್ ಕೇಳ್ತೀಯ ಸಿಕ್ಕಾಪಟ್ಟೆ ಕೆಲಸ ಅಂದ ಖೇಮು, ಅದ್ಸರಿ ನನ್ನ ಬ್ಲೂ ಕಲರ್ ಸಿಲ್ಕ್ ಪೈಜಾಮ ಪ್ಯಾಕ್ ಮಾಡು ಅಂತ ಹೇಳಿದ್ದೆ ಅಲ್ವಾ, ಅದನ್ನ ನೀನು ಮರೆತೇ ಬಿಟ್ಟಿದ್ದೀಯ ಅಂದ. ಅದಕ್ಕೆ ಖೇಮು ಹೇಳಿದಳು, ಮರೆತಿರಲಿಲ್ಲ, ಇಟ್ಟಿದ್ದೆ, ಅದು ನಿಮ್ಮ ಆಫೀಸ್ ಬ್ರೀಫ್ ಕೇಸ್‌ನಲ್ಲಿದೆ.

ಲೈನ್‌ ಮ್ಯಾನ್

ಲಾಯರ್ ಪಾತ್ರವನ್ನು ಚೆನ್ನಾಗಿ ನಿಭಾಯಿಸಿರೋ ನಟನ ಬಗ್ಗೆ ಬರೆಯೋ ವಿಮರ್ಶೆ ‌

- ತಮ್ಮ ಪಾತ್ರಕ್ಕೆ ‘ನ್ಯಾಯ’ ಸಲ್ಲಿಸಿದ್ದಾರೆ ಆರ್ಚರಿಯಲ್ಲಿ ಫೇಮಸ್ ಆಗಿರೋ ಆಟಗಾರ

- ಅರ್ಚಕ

ಆರ್ಚರಿಯಲ್ಲಿ ಗೆದ್ದವರಿಗೆ ವಿಶ್ ಮಾಡೋದು ಹೇಗೆ?-

Take a bow’

ರವಿಚಂದ್ರನ್ ಅವರ ‘ಚಿನ್ನ’ ಸಿನಿಮಾನ ಮರು ಬಿಡುಗಡೆ ಮಾಡಿದ್ರೆ

- ಪ್ರೇಕ್ಷಕ ಮೇಕಿಂಗ್ ಚಾರ್ಜಸ್ ಎಕ್ಸ್‌ಟ್ರಾ ಕೊಡಬೇಕಾಗುತ್ತೆ.

ದೇವೇಗೌಡರಿಗೆ ಪುತ್ರ ವ್ಯಾಮೋಹ ಯಾಕೆ ಜಾಸ್ತಿ?

- ಯಾಕಂದ್ರೆ ಅವರು ಹಾ‘ಸನ್’ ಗೌಡ್ರು

ಗಂಡು ಮಗು ಹುಟ್ಟಲಿ ಅಂತ ಆಶೀರ್ವಾದ ಮಾಡೋದು ಹೇಗೆ?

- ‘ಸನ್’ತಾನ ಪ್ರಾಪ್ತಿರಸ್ತು

ಸಿನಿಸತ್ಯ

- ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ಕೊಟ್ಟ ಕಾಸಿಗೆ ಮೋಸ ಇಲ್ಲ ಅನ್ನೋದು ಕಾಮನ್. ಆದ್ರೆ ಓಟಿಟಿಯಲ್ಲಿ ಬಂದಾಗ ನೋಡದೇ ಇದ್ರೆ, ಕೊಟ್ಟ ಕಾಸಿಗೆ ಮೋಸನೇ. ಯಾಕಂದ್ರೆ subscription charges ಮೊದಲೇ ಕೊಟ್ಟಿರ್ತೀವಲ್ಲ

ಚಿಂಪಾಂಜಿಗಳ ಮೂಗು ಯಾಕೆ ಅಷ್ಟು ದಪ್ಪ ಇರುತ್ತೆ?

- ಯಾಕಂದ್ರೆ ಅವುಗಳ ಕೈ ಬೆರಳುಗಳೂ ದಪ್ಪ ಇರುತ್ತೆ ‌

ಸೆಲ್ಫ್ ಕಂಟ್ರೋಲ್ ಅಂದ್ರೆ ಏನು?

- ಮೀನು ಜಾಸ್ತಿ ತಿನ್ನೋ ಮಂಗಳೂರಿನವರು ಅಕ್ವೇರಿಯಂನಲ್ಲಿ ಮೀನು ಸಾಕೋದು

ಹರಿ ಪರಾಕ್‌

View all posts by this author