ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Srivathsa Joshi Column: ಕಬ್ಬಿಗರ ರಚನೆ ಕಬ್ಬಿಣದ ಕಡಲೆಯಾಗದೆ ಕಬ್ಬಿನ ರಸವಾದಾಗ...

ಕೆಲವು ಚಿತ್ರಗೀತೆಗಳಲ್ಲೂ, ‘ಜಲ್ಲೆಕಬ್ಬು ವಲ್ಲಿ ವಸ್ತ್ರ ನಲ್ಲ ನಿನಗೆ ಪಟ್ಟು ಸೀರೆ ಬೊಟ್ಟು ರವಿಕೆ ನಲ್ಲ ನನಗೆ’ಯಂಥ ಜನಪದ ಗೀತೆಗಳಲ್ಲೂ ಕಬ್ಬು ಕಂಗೊಳಿಸಿರುವುದು ನಿಮಗೆ ನೆನಪಾಗಬಹುದು. ಆದರೆ ನಾನಿಲ್ಲಿ ಬೇರೆ ಕಾವ್ಯಪ್ರಕಾರಗಳನ್ನೂ ಅವಲೋಕಿಸುವವನಿದ್ದೇನೆ. ವಚನಸಾಹಿತ್ಯಕ್ಕೆ ಕಾಲಿಟ್ಟರೆ ನಮಗಲ್ಲಿ ‘ಕಬ್ಬು ಬೆಳೆವುದಯ್ಯ ಕರಿಯ ಭೂಮಿಯಿದ್ದಲ್ಲಿ ಉಬ್ಬುಬ್ಬಿ ಬೆಳೆವುದಯ್ಯ ಜಲ ಪ್ರಮಾಣ ವಿರ್ದಲ್ಲಿ...’ ಎಂದು ಅಲ್ಲಮಪ್ರಭುಗಳ ಒಂದು ವಚನ ಸಿಗುತ್ತದೆ

ಕಬ್ಬಿಗರ ರಚನೆ ಕಬ್ಬಿಣದ ಕಡಲೆಯಾಗದೆ ಕಬ್ಬಿನ ರಸವಾದಾಗ...

ತಿಳಿರು ತೋರಣ

srivathsajoshi@yahoo.com

ಅಕ್ಷರಗಳೊಂದಿಗೆ ಆಟ ಚೆನ್ನಾಗಿರುತ್ತದೆ ಎಂಬ ಒಂದೇ ಕಾರಣವಲ್ಲ, ರವಿ ಕಾಣದ ಕವಿ ಕಾಣ್ಕೆಗಳೂ
ಅಲ್ಲಲ್ಲಿ ಹೊಳೆಯುತ್ತಿರುತ್ತವೆ ಎಂಬ ಕಾರಣಕ್ಕೆ ಡುಂಡಿರಾಜರ ಹನಿ-ದನಿ ಚುಟುಕಗಳನ್ನು ನಾನು ನಿತ್ಯವೂ ಓದುತ್ತೇನೆ. ಅವರ ಇತ್ತೀಚಿನದೊಂದು ರಚನೆ ಹೀಗಿತ್ತು: ‘ಬರೀ ತಲೆಶೂಲೆ| ಕಬ್ಬಿಣದ ಕಡಲೆ| ಆಗಬಾರದು ನಮ್ಮ ಕವಿತೆ| ಕಬ್ಬಿಗರ ರಚನೆಯೂ| ರಸಭರಿತವಾಗಿರಲಿ| ಮಂಡ್ಯದ ನೆಲದ
ಕಬ್ಬಿನಂತೆ|’ ಇದರಲ್ಲಿ ರವಿ ಕಾಣದ ಕವಿ ಕಾಣ್ಕೆಯೇನೋ ಹೊಳೆಯಿತು ಅಂತಲ್ಲ, ನನಗೆ ‘ತಿಳಿರು ತೋರಣ’ ಅಂಕಣಕ್ಕೊಂದು ವಿಷಯ ಹೊಳೆದದ್ದು ಹೌದು!

ಏನೆಂದರೆ, ಪ್ರಪಂಚದ ಅಸಂಖ್ಯ ಕಬ್ಬಿಗರು ಕಬ್ಬಿನಂಥ ರಸಭರಿತ ರಚನೆಗಳನ್ನು ಮಾಡಿಯೇ ಇದ್ದಾರೆ, ಮಾಡುತ್ತಲೇ ಇದ್ದಾರೆ, ಮುಂದೆಯೂ ಮಾಡುವವರಿದ್ದಾರೆ. ಆದರೆ ಕಬ್ಬಿನ ಮೇಲೆಯೇ ಕಬ್ಬ ಕಟ್ಟಿದವರು ಇದ್ದಾರೆಯೇ? ಅರ್ಥಾತ್ ಕಬ್ಬಿನ ಬಗ್ಗೆಯೇ ಕವಿತೆ ಬರೆದವರಿದ್ದಾರೆಯೇ? ಕನಿಷ್ಠಪಕ್ಷ ಕಬ್ಬನ್ನು ಉಲ್ಲೇಖಿಸಿರುವ, ಉಪಮೆ ಮತ್ತಿತರ ಅಲಂಕಾರ ರೂಪದಲ್ಲಿ ಕಬ್ಬನ್ನು ಬಳಸಿರುವ ಕವಿತೆಗಳು ಕಾವ್ಯಭಾಗಗಳು ಸಿಗಬಹುದೇ? ಸಿಕ್ಕರೆ ನಾವೆಲ್ಲ ಅವನ್ನೊಮ್ಮೆ ಸಿಗಿದು ಜಗಿಯಬಹುದೇ? ಜಗಿದರೆ ಅದರಲ್ಲಿ ಸಿಹಿ ಸಿಗಬಹುದೇ? ಕನ್ನಡ ಚಿತ್ರಗೀತೆಗಳಿಂದಲೇ ಆರಂಭಿಸಿದರೆ ತತ್‌ಕ್ಷಣಕ್ಕೆ ನೆನಪಾಗುವುದು ‘ದೇವರ ದುಡ್ಡು’ ಚಿತ್ರದ ‘ತರೀಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ’ ಹಾಡಿನ ‘ಕಬ್ಬಿನ್ ಗದ್ದೆ ಮಧ್ಯದಲ್ಲಿ ಉಬ್ಬಿದ್ ಕೊಬ್ಬಿದ್ ಗಬ್ಬದ್ ತೋಳ ಕುರೀನ್ ನೋಡಿ ಹಬ್ಬ ಎಂದು ಕಾಯ್ತಿತ್ತು...’ ಸಾಲು.

ಇನ್ನೊಂದು, ‘ಕಸ್ತೂರಿ ನಿವಾಸ’ ಚಿತ್ರದ ‘ಆಡಿಸಿ ನೋಡು ಬೀಳಿಸಿ ನೋಡು’ ಹಾಡಿನ ‘ಮೈಯನೇ ಹಿಂಡಿ ನೊಂದರೂ ಕಬ್ಬು ಸಿಹಿಯ ಕೊಡುವುದು...’ ಸಾಲು. ಮೊದಲನೆಯದರಲ್ಲಿ ಕಬ್ಬಿನ ಗದ್ದೆ ಜಸ್ಟ್ ಒಂದು ಲೊಕೇಷನ್ ರೆಫರೆನ್ಸ್ ಅಷ್ಟೇ. ಎರಡನೆಯದರಲ್ಲಿ ಹಾಗಲ್ಲ, ಅದು ಕಬ್ಬಿನ ಆದರ್ಶದ ಗುಣಗಾನ.

ಇದೇ ರೀತಿ ಬೇರೆ ಕೆಲವು ಚಿತ್ರಗೀತೆಗಳಲ್ಲೂ, ‘ಜಲ್ಲೆಕಬ್ಬು ವಲ್ಲಿ ವಸ್ತ್ರ ನಲ್ಲ ನಿನಗೆ ಪಟ್ಟು ಸೀರೆ ಬೊಟ್ಟು ರವಿಕೆ ನಲ್ಲ ನನಗೆ’ಯಂಥ ಜನಪದ ಗೀತೆಗಳಲ್ಲೂ ಕಬ್ಬು ಕಂಗೊಳಿಸಿರುವುದು ನಿಮಗೆ ನೆನಪಾಗಬಹುದು. ಆದರೆ ನಾನಿಲ್ಲಿ ಬೇರೆ ಕಾವ್ಯಪ್ರಕಾರಗಳನ್ನೂ ಅವಲೋಕಿಸುವವನಿದ್ದೇನೆ. ವಚನಸಾಹಿತ್ಯಕ್ಕೆ ಕಾಲಿಟ್ಟರೆ ನಮಗಲ್ಲಿ ‘ಕಬ್ಬು ಬೆಳೆವುದಯ್ಯ ಕರಿಯ ಭೂಮಿಯಿದ್ದಲ್ಲಿ ಉಬ್ಬುಬ್ಬಿ ಬೆಳೆವುದಯ್ಯ ಜಲ ಪ್ರಮಾಣವಿರ್ದಲ್ಲಿ...’ ಎಂದು ಅಲ್ಲಮಪ್ರಭುಗಳ ಒಂದು ವಚನ ಸಿಗುತ್ತದೆ.

ಇದನ್ನೂ ಓದಿ: Srivathsa Joshi Column: ಮದರ್ಸ್‌ ಡೇ ಆರಂಭಿಸಿದವಳೇ ಅದನ್ನು ನಿಲ್ಲಿಸಲಿಕ್ಕೂ ಹೋರಾಡಿದ್ದಳು !

ಹಾಗೆಯೇ ‘ಕುರಿವಿಂಡು ಕಬ್ಬಿನ ಉಲಿವ ತೋಂಟವ ಹೊಕ್ಕು- ತೆರನನರಿಯದೆ ತನಿರಸದ, ಹೊರ ಗಣೆಲೆಯನೆ ಮೇದುವು! ನಿಮ್ಮನರಿವ ಮದಕರಿಯಲ್ಲದೆ, ಕುರಿ ಬಲ್ಲುದೆ ಕೂಡಲಸಂಗಮ ದೇವಾ?’ ಎಂದು ಕೇಳಿದ್ದಾರೆ ಬಸವಣ್ಣನವರು ತಮ್ಮದೊಂದು ವಚನದಲ್ಲಿ. ಇದರ ಭಾವಾರ್ಥ ತುಂಬ ಚೆನ್ನಾಗಿದೆ: ಕುರಿವಿಂಡು ಕಬ್ಬಿನ ತೋಟಕ್ಕೆ ಹೋದರೂ ಹೊರಗಿನ ಸೋಗೆಯನ್ನು ತಿನ್ನ ಬಲ್ಲುದೇ ಹೊರತು ಕಬ್ಬಿನ ತನಿರಸವನ್ನು ಕುಡಿಯಲಾರದು.

ಆನೆಯಾದರೋ ಕಬ್ಬನ್ನು ಸಿಗಿದು ರಸವನ್ನು ಹಿಂಡಿ ಕುಡಿಯುತ್ತದೆ. ಬರೀ ಶಾಸ್ತ್ರಗಳನ್ನೋದಿ ದವರು ಧರ್ಮಗ್ರಂಥಗಳಲ್ಲಿರುವ ಅನುಭಾವದ ಸಾರವನ್ನು ಗ್ರಹಿಸಲಾರರು. ನಿಜವಾದ ಸಾಧಕರು ಮಾತ್ರ ಶಿವಾನುಭವದ ಸಾರವನ್ನು ಹೀರಿ ಕುಡಿಯುವರು. ಇದನ್ನೇ ಸರ್ವಜ್ಞನು ಇನ್ನೊಂದು ರೀತಿಯಲ್ಲಿ ಹೇಳಿದ್ದಾನೆ: ‘ಓದಿದಾ ಓದು ತಾ ವೇದ ಕಬ್ಬಿನ ಸಿಪ್ಪೆ| ಓದಿನಾ ಒಡಲನರಿಯದಿಹರೆ ಸಿಪ್ಪೆ ಕ| ಬ್ಬಾದಂತೆ ಕಾಣೋ ಸರ್ವಜ್ಞ’ ಓದಿದ್ದನ್ನು ಅರ್ಥಮಾಡಿಕೊಳ್ಳದೆ ಓದಿದರೆ ಅದು ಕಬ್ಬಿನ ಸಿಪ್ಪೆಯಂತೆ ವ್ಯರ್ಥ, ರಸಹೀನ, ಯಾವ ಫಲವನ್ನೂ ಕೊಡದು.

ಅರ್ಥ ತಿಳಿದು ಓದಿದರೆ ಕಬ್ಬಿನಂತೆ ಸಿಹಿ ಕೊಡುವುದು, ತಿಳಿವಳಿಕೆಯ ಫಲ ಕೊಡುವುದು. ಇಲ್ಲಿ ಕಬ್ಬನ್ನು ಒಂದು ಹೋಲಿಕೆಗಾಗಿಯಷ್ಟೇ ಬಳಸಲಾಗಿದೆ. ಆದರೆ ಅಕ್ಕಮಹಾದೇವಿ ನಿಜವಾಗಿಯೂ ಕಬ್ಬಿನ ಗುಣಗಾನ ಮಾಡಿದ್ದಾರೆ: ‘ಸಂದು ಸಂದನು ಕಡಿದು ಕಬ್ಬನು ತಂದು ಗಾಣದಲಿಕ್ಕಿ ಅರೆದಡೆ| ಬೆಂದು ಪಾಕಗುಡದೆ ಸಕ್ಕರೆಯಾಗಿ ನೊಂದೆನೆಂದು ಸವಿಯ ಬಿಟ್ಟಿತ್ತೆ?’ ಎಂದು ಕೇಳಿದ್ದಾರೆ. ಕಬ್ಬು ಕಾಣಿಸಿಕೊಳ್ಳುವ ಇನ್ನೊಂದು ವಚನ ಅಕ್ಕ ಬರೆದಿದ್ದೆಂದರೆ ‘ಈಳೆ ನಿಂಬೆ ಮಾವು ಮಾದಲಕೆ ಹುಳಿನೀರನೆರೆದವರಾರಯ್ಯಾ? ಕಬ್ಬು ಬಾಳೆ ಹಲಸು ನಾರಿವಾಳಕ್ಕೆ ಸಿಹಿನೀರನೆರೆದವರಾರಯ್ಯಾ?’.

62 R

ವಚನ ಸಾಹಿತ್ಯ ಆದ ಮೇಲೆ ದಾಸ ಸಾಹಿತ್ಯಕ್ಕೆ ಬಂದರೆ ಪುರಂದರ ದಾಸರ ‘ಕಬ್ಬು ಡೊಂಕಾದರೇನು ಸಿಹಿಯು ಡೊಂಕೇ ವಿಠಲಾ...’ ಸಾಲು ನೆನಪಾಗದಿರುತ್ತದೆಯೇ? ಪುರಂದರ ದಾಸರದೇ, ಆದರೆ ಅಷ್ಟೇನೂ ಪ್ರಸಿದ್ಧವಲ್ಲದ ಇನ್ನೊಂದು ಕೀರ್ತನೆಯಿದೆ- ‘ಬೇನೆ ತಾಳಲಾರೆ ಬಾ ಎನ್ನ ಗಂಡ ಬೇನೆ ತಾಳಲಾರೆನು...’ ಇದರಲ್ಲೂ ‘ಗಸಗಸೆ ಲಡ್ಡಿಗೆ ಹಸನಾದ ಕೆನೆ ಹಾಲು ಬಿಸಿಯ ಹುರಿಗಡಲೆ ಬಿಳಿಯ ಬೆಲ್ಲ| ರಸದಾಳಿ ಕಬ್ಬು ಸುಲಿದು ಮುಂದಿಟ್ಟರೆ ವಿಷ ವಿಷವೆಂದು ನಾ ತಿಂಬೆನೊ’ ಅಂತೊಂದು ಚರಣವಿದೆ.

ಇಲ್ಲಿ ಕಬ್ಬಿನ ಗುಣಗಾನ ಏನಿಲ್ಲ, ಸಿಹಿ ಪದಾರ್ಥಗಳ ಪೈಕಿ ಕಬ್ಬು ಕೂಡ ಒಂದು ಎಂಬ ಉಲ್ಲೇಖ ಮಾತ್ರ ಇರುವುದು. ‘ಸಾರುತಿದೆ ಸೃಷ್ಟಿ’ ಎಂಬ ಭಾವಗೀತೆಯೊಂದರಲ್ಲಿ ಕಾವ್ಯಾನಂದ (ಸಿದ್ಧಯ್ಯ ಪುರಾಣಿಕ)ರು ‘ಹಣ್ಣಿನಲಿ ಬೆಣ್ಣೆಯಲಿ ಕೆನೆ ಮೊಸರು ಹಾಲಿನಲಿ| ಕಂದದಲಿ ಜೇನಿನಲಿ ರಸಗಬ್ಬು ಬಾಳೆಯಲಿ| ಎಳನೀರು ಹೊಳೆನೀರು ಹಾಲ್ದೆನೆಯ ಕಾಳಿನಲಿ| ಸಾರುತಿದೆ ಸೃಷ್ಟಿಯಿದು ಸವಿಯಾಗು ಎಂದು’ ಎಂದಿದ್ದಾರಲ್ಲ ಹಾಗೆ. ಅಂದರೆ ಕಬ್ಬನ್ನು ಸಿಹಿಯ ಒಂದು ದ್ಯೋತಕವಾಗಿಯಷ್ಟೇ ಬಳಸಿರು ವುದು.

ಪಂಜೆ ಮಂಗೇಶರಾಯರನ್ನು ಕೊಂಡಾಡುತ್ತ ಬರೆದ ಸುನೀತವೊಂದರಲ್ಲಿ ರಸಋಷಿ ಕುವೆಂಪು ಅಂಥದೊಂದು ಬಳಕೆ ಮಾಡಿದ್ದಾರೆ. ‘ಕಚ್ಚಿದರೆ ಕಬ್ಬಾಗಿ, ಹಿಂಡಿದರೆ ಜೇನಾಗಿ, ನಿಮ್ಮುತ್ತಮಿಕೆಯನೆ ಮೆರೆದಿರಯ್ಯ...’ ಎಂದಿದ್ದಾರೆ. ಬೇರೆಲ್ಲ ಏಕೆ, ಕನ್ನಡ ಭಾಷೆಯೇ ಕಬ್ಬಿನಂತೆ ಸಿಹಿಯಾದುದು ಎಂದು ಬಣ್ಣಿಸುವ ಮಹಲಿಂಗರಂಗ ಕವಿಯ ಪ್ರಖ್ಯಾತ ಸೂಕ್ತಿಯೇ ಇದೆಯಲ್ಲ!

‘ಸುಲಿದ ಬಾಳೆಯ ಹಣ್ಣಿನಂದದಿ| ಕಳೆದ ಸಿಗುರಿನ ಕಬ್ಬಿನಂದದಿ| ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ| ಲಲಿತವಹ ಕನ್ನಡದ ನುಡಿಯಲಿ| ತಿಳಿದು ತನ್ನೊಳು ತನ್ನ ಮೋಕ್ಷವ| ಗಳಿಸಿ ಕೊಂಡೊಡೆ ಸಾಲದೇ ಸಂಸ್ಕೃತದೊಳಿನ್ನೇನು?’. ಸಂಸ್ಕೃತದೊಳಿನ್ನೇನು ಎಂದು ಆ ಕವಿ ಕೇಳಿ ದ್ದರೂ ನಾವಿಲ್ಲಿ ಕಬ್ಬಿನ ಸಿಹಿ ಸಂಸ್ಕೃತದಲ್ಲಿ ಹೇಗಿದೆ ಎಂಬುದನ್ನೂ ತಿಳಿದುಕೊಳ್ಳೋಣ. ಸಂಸ್ಕೃತ ದಲ್ಲಿ ‘ಇಕ್ಷು’ ಎಂದರೆ ಕಬ್ಬು.

ಇಕ್ಷುಚಾಪ ಅಂದರೆ ಕಬ್ಬನ್ನೇ ಬಿಲ್ಲಿನಂತೆ ಬಳಸುವವನು, ಮನ್ಮಥ. ಸಪ್ತಸಾಗರಗಳ ಪೈಕಿ ಎರಡನೆ ಯದು ಇಕ್ಷುರಸದಿಂದ ತುಂಬಿರುವುದೆಂದು ನಂಬಿಕೆ. ಇಕ್ಷುವಿನಂತೆ ಸಿಹಿಯಾದ ಮಾತನ್ನಾ ಡುವವನು ಎಂಬರ್ಥದಲ್ಲಿ ಇಕ್ಷ್ವಾಕು ಎಂಬ ಹೆಸರು, ಸೂರ್ಯನ ಮೊಮ್ಮಗನಿಗೆ, ಅಂದರೆ ವೈವಸ್ವತಮನುವಿನ ಮಗನಿಗೆ. ಅವನಿಂದಲೇ ಇಕ್ಷ್ವಾಕು ವಂಶ ಎಂಬ ಹೆಸರು ಬಂದಿರುವುದು. ಭಗವದ್ಗೀತೆಯನ್ನು ಕೃಷ್ಣಪರಮಾತ್ಮನು ಅರ್ಜುನನಿಗೆ ಉಪದೇಶಿಸಿದನು ಎಂದು ನಾವು ತಿಳಿದು ಕೊಳ್ಳುತ್ತೇವಾದರೂ ಅದೇ ಭಗವದ್ಗೀತೆಯ ನಾಲ್ಕನೆಯ ಅಧ್ಯಾಯದ ಮೊದಲನೆಯ ಶ್ಲೋಕದಲ್ಲಿ ಹೇಳಿರುವಂತೆ ಕೋಟಿಗಟ್ಟಲೆ ವರ್ಷಗಳ ಹಿಂದೆ ಭಗವಂತನು ಆ ದಿವ್ಯಸಂದೇಶವನ್ನು ಮೊತ್ತ ಮೊದಲಿಗೆ ಹೇಳಿದ್ದು ಸೂರ್ಯನಿಗೆ.

ಸೂರ್ಯ ಅದನ್ನು ಮನುವಿಗೆ ಹೇಳಿದನು. ಮನು ತನ್ನ ಮಗ ಇಕ್ಷ್ವಾಕುವಿಗೆ ಹೇಳಿದನು. ಇರಲಿ, ವಿಷಯಾಂತರ ಅಲ್ಲ, ಇಕ್ಷುವಿನಿಂದಲೇ ಇಕ್ಷ್ವಾಕುವಿನ ಹೆಸರು ಬಂದಿದ್ದೆನ್ನುವಾಗ ಇದೂ ನೆನಪಾ ಯಿತು. ಕನ್ನಡದ ಕವಿಗಳು ಇಕ್ಷು ಎಂಬ ಪದದ ಮೂಲಕವೂ ಕಬ್ಬನ್ನು ಉಲ್ಲೇಖಿಸಿರುವ ಅನೇಕ ಉದಾಹರಣೆಗಳಿವೆ. ಕುಮಾರವ್ಯಾಸನು ಕರ್ಣಾಟಭಾರತ ಕಥಾಮಂಜರಿಯ ಅರಣ್ಯ ಪರ್ವದಲ್ಲಿ ಇಂದ್ರಕೀಲಕ ಪರ್ವತವನ್ನು ಬಣ್ಣಿಸಿದ ಷಟ್ಪದಿ ಒಳ್ಳೆಯ ಉದಾಹರಣೆ: ‘ಚಾರುತರ ಪರಿಪಕ್ವ ನವ ಖ| ರ್ಜೂರ ರಸಧಾರಾ ಪ್ರವಾಹ ಮ| ನೋರಮೇಕ್ಷು ವಿಭೇದ ವಿದ್ರುಮ ರಸದ ದಾಳಿಂಬ| ಭೂರಿ ಜಂಬುಮಧೂಕ ಪನಸ| ಸಾರ ರಸಪೂರಾನುಕಲಿತ ವಿ| ಹಾರ ಸುರಮಹಿಳಾಭಿರಂಜನವಖಿಳ ವನಭೂಮಿ’ ಪರಿಪಕ್ವವಾದ ಖರ್ಜೂರ ರಸಗಳ ಧಾರೆ, ಮನಸ್ಸನ್ನು ಸೆಳೆಯುವ ಅನೇಕ ವಿಧವಾದ ಕಬ್ಬುಗಳು, ಚಿಗುರಿನ ಬಣ್ಣದ ದಾಳಿಂಬೆ, ದೊಡ್ಡ ನೇರಳೆ, ಹಿಪ್ಪೆ, ಹಲಸು ಮೊದಲಾದ ಹಣ್ಣುಗಳು ಸಮೃದ್ಧವಾಗಿದ್ದ ಆ ವನವು ಅಪ್ಸರೆಯರ ಮನೋರಂಜನ ಭೂಮಿಯಾಗಿತ್ತಂತೆ!

ಇಕ್ಷುಪಾಕ ಎಂಬ ಪದವನ್ನೂ ನೀವು ಕೇಳಿರಬಹುದು/ ಓದಿರಬಹುದು. ಅದರ ವಿವರಣೆ ಹೀಗಿದೆ: ಪಂಡಿತರು ಕಾವ್ಯವನ್ನು ಮೂರು ರೀತಿಯಲ್ಲಿ ಬರೆಯಬಲ್ಲರು. ಅದನ್ನು ಸೂಚ್ಯವಾಗಿ ನಾರಿಕೇಳ ಪಾಕ, ಇಕ್ಷುಪಾಕ ಹಾಗೂ ದ್ರಾಕ್ಷಾಪಾಕ ಎಂದು ಕರೆಯುವುದುಂಟು. ತೆಂಗಿನಕಾಯಿಯ ತಿರುಳನ್ನು ಆಸ್ವಾದಿಸಬೇಕಾದರೆ ಅದರ ನಾರನ್ನು ತೆಗೆಯಬೇಕು. ಕರಟವನ್ನು ಒಡೆಯಬೇಕು. ತಿರುಳನ್ನು ಕರಟದಿಂದ ಬೇರ್ಪಡಿಸಿ ತಿನ್ನಬೇಕು.

ಅಂದರೆ ತೆಂಗಿನ ತಿರುಳನ್ನು ತಿನ್ನಲು ಕಷ್ಟಪಡಬೇಕಾಗುತ್ತದೆ. ಇಕ್ಷುಪಾಕ ಎಂದರೆ ಕಬ್ಬಿನ ರಸ ವನ್ನು ಆಸ್ವಾದಿಸುವುದು. ಕಬ್ಬಿನ ಜಲ್ಲೆಯನ್ನು ಸಣ್ಣಸಣ್ಣ ತುಂಡುಗಳಾಗಿ ಕತ್ತರಿಸಬೇಕು. ಸಿಪ್ಪೆ ಯನ್ನು ಹಲ್ಲಿನಿಂದ ಸಿಗಿದು ಬೇರ್ಪಡಿಸಬೇಕು. ಸಿಪ್ಪೆಯಿಲ್ಲದ ಕಬ್ಬನ್ನು ಹಲ್ಲಿನಿಂದ ತುಂಡರಿಸಿ ಜಗಿಯಬೇಕು.

ಆಗ ಕಬ್ಬಿನ ರುಚಿಯನ್ನು ನಾವು ಸವಿಯಬಹುದು. ಹಾಗಾಗಿ ಕಬ್ಬಿನ ರಸವನ್ನು ಸವಿಯಲು, ತೆಂಗಿನಷ್ಟು ಅಲ್ಲದಿದ್ದರೂ ಸ್ವಲ್ಪ ಕಷ್ಟ ಪಡಲೇಬೇಕಾಗುತ್ತದೆ. ಆದರೆ ದ್ರಾಕ್ಷಾಪಾಕ ಹಾಗಲ್ಲ. ದ್ರಾಕ್ಷಿಯನ್ನು ನೇರವಾಗಿ ಬಾಯಿಗೆ ಹಾಕಿಕೊಂಡು ಜಗಿದು ಅದರ ರುಚಿಯನ್ನು ನೋಡಿ ಆನಂದಿಸ ಬಹುದು. ಮೂರೂ ಪಾಕಗಳಿಗೂ (ಕಾವ್ಯಪ್ರಕಾರ ಗಳಿಗೂ) ಅವುಗಳದೇ ಆದ ಶ್ರೇಷ್ಠತೆ ಇರುತ್ತದೆನ್ನಿ. ಹಾಗೆ, ಇಕ್ಷುಪಾಕದ ರೀತಿಯಲ್ಲಿ ಕಾವ್ಯ ಬರೆಯುತ್ತಿದ್ದ, ಅಂದರೆ ಸಂಸ್ಕೃತದ ಶ್ರೀಮಂತ ಶಬ್ದ ಭಾಂಡಾರವನ್ನು ಕನ್ನಡ ಕವಿತೆಗಳಲ್ಲಿ ಯಥೇಚ್ಛವಾಗಿ ಬಳಸುತ್ತಿದ್ದ ಕುವೆಂಪು ತಮ್ಮದೊಂದು ಕವನಸಂಕಲನಕ್ಕೆ ‘ಇಕ್ಷುಗಂಗೋತ್ರಿ’ ಎಂಬ ಹೆಸರನ್ನಿಟ್ಟಿದ್ದಾರೆ.

ಜೀವನದಲ್ಲಿ ಒದಗಿದ ರಸಗಳಿಗೆಗಳನ್ನು ರಸದಾಳಿ ಕಬ್ಬಿನಂತೆ ಸವಿಯುತ್ತ ಅದರ ಆನಂದವನ್ನು ಅಭಿವ್ಯಕ್ತಿಗೊಳಿಸಲಿಕ್ಕೆಂದೇ ಇಕ್ಷುಗಂಗೋತ್ರಿ ಎಂಬ ಪದವನ್ನು ಹೆಣೆದಿದ್ದಾರೆ. ಆ ಕವನ ಸಂಕಲನದ ಕೊನೆಯ ಕವಿತೆಯ ಶೀರ್ಷಿಕೆ ಇಕ್ಷುಗಂಗೋತ್ರಿ ಎಂದೇ ಇದೆ. ಗಂಗೋತ್ರಿ ಎಂದರೆ ಹಿಮಾಲಯದಲ್ಲಿ ಗಂಗೆ ಹುಟ್ಟುವ (ದೇವಲೋಕದಿಂದ ಬಂದಿಳಿದ) ಸ್ಥಳ. ಕುವೆಂಪು ಅದನ್ನು ಮಧುರವಾದ ಸವಿ, ಸಿಹಿ, ಚೈತನ್ಯ ನೀಡಿ ತಣಿಸುವ ಕಬ್ಬು ಎಂದು ಬಣ್ಣಿಸಿದ್ದಾರೆ.

‘ಇದೊ ಗಂಗೋತ್ರಿ, ಹೇ ಮಾನಸಯಾತ್ರಿ! ಇದು ನಕ್ಷತ್ರೇಕ್ಷು ಸೂಸಿದ ರಸಧಾರೆಗೆ ಸಂಭವಿಸಿಹ ಶೃಂಗಸರೋವರ ಚಕ್ಷು! ಮಾನಸ ಅತಿಮಾನಸಕೇರುವೆಡೆ; ಅತಿಮಾನಸ ಮಾನಸಕಿಳಿಯುವೆಡೆ; ಅಧಿಮಾನಸ ಮೈದೋರುವೆಡೆ...’ ಎಂದು ಆರಂಭವಾಗುವ ಕವಿತೆಯಲ್ಲಿ ತಾನೊಬ್ಬ ಮಾನಸ ಯಾತ್ರಿಯಾಗಿ ಮನಸ್ಸಿನಲ್ಲೇ- ಆದಿಶಂಕರಾಚಾರ್ಯರು ಶಿವಮಾನಸ ಸ್ತೋತ್ರದ ಮೂಲಕ ಭವ್ಯ ವಾದ ಶಿವಪೂಜೆ ಮಾಡಿದಂತೆ- ಗಂಗೋತ್ರಿಯಯಾತ್ರೆಗೈದಿದ್ದಾರೆ. ಗಂಗೆಯನ್ನಷ್ಟೇ ಅಲ್ಲ, ತುಂಗೆ, ಯಮುನೆ, ಕೃಷ್ಣೆ, ಥೇಮ್ಸ್, ಮಿಸ್ಸಿಸ್ಸಿಪ್ಪಿ, ಅಮೆಝಾನ್ ನದಿಗಳನ್ನೆಲ್ಲ ಆ ಮಾನಸಯಾತ್ರೆ ಯಲ್ಲೇ ಕಂಡಿದ್ದಾರೆ.

ಬಹುಶಃ ಈ ಕವಿತೆಯ ಗುಂಗಿನಿಂದಲೇ ಇರಬಹುದು, ಕುವೆಂಪು ಅವರು ಮೈಸೂರು ವಿಶ್ವವಿದ್ಯಾ ಲಯದ ಉಪಕುಲಪತಿಗಳಾಗಿದ್ದಾಗ, ವಿಶಾಲವಾದ ಸ್ಥಳದಲ್ಲಿ ಅದನ್ನು ವಿಸ್ತರಿಸಿದಾಗ ಇಟ್ಟ ಹೆಸರು ‘ಮಾನಸಗಂಗೋತ್ರಿ’. ಇಕ್ಷು ಅಥವಾ ಕಬ್ಬು ಉಲ್ಲೇಖಗೊಂಡಿರುವ ಸುಭಾಷಿತಗಳು ಸಂಸ್ಕೃತದಲ್ಲಿ ಬಹಳಷ್ಟಿವೆ. ‘ಭಾರತಂ ಚೇಕ್ಷುದಂಡಂ ಚ ಕಲಾನಾಥಂ ಚ ವರ್ಣಯ| ಕಾಲಿದಾಸಃ ಕವಿರ್ಬ್ರೂತೇ ಪ್ರತಿಪರ್ವರಸಾಯನಂ’ ಅಂತ ಒಂದಿದೆ.

ಭೋಜರಾಜ ಕಾಲಿದಾಸನನ್ನು ಕೇಳುತ್ತಾನೆ- ಮಹಾಭಾರತ, ಕಬ್ಬು, ಮತ್ತು ಚಂದ್ರ ಈ ಮೂರನ್ನೂ ಒಂದೇ ವಾಕ್ಯದಿಂದ ವರ್ಣಿಸು ಎಂದು. ಆಗ ಕಾಲಿದಾಸನ ಉತ್ತರ- ‘ಪ್ರತಿಪರ್ವರಸಾಯನ’. ಮಹಾ ಭಾರತದ ಪ್ರತಿಪರ್ವದಲ್ಲೂ ಉತ್ತರೋತ್ತರ ರಸಾಧಿಕ್ಯ. ಕಬ್ಬಿನಲ್ಲಿ ಗೆಣ್ಣುಗೆಣ್ಣಿಗೂ ಉತ್ತರೋತ್ತರ ರಸಾಽಕ್ಯ. ಚಂದ್ರನು ಶುಕ್ಲಪಕ್ಷದಲ್ಲಿ ದಿನದಿನವೂ ವೃದ್ಧಿಹೊಂದುವುದರಿಂದ ರಸಿಕರ ಮನಸ್ಸಿಗೆ ರಸಾಽಕ್ಯ. ಭೋಜರಾಜ ಮತ್ತು ಮಯೂರಕವಿಯದು ಎನ್ನಲಾದ ಇನ್ನೊಂದು ಪ್ರಸಂಗ ಹೀಗಿದೆ: ‘ಕಾಂತೋಧಿಸಿ ನಿತ್ಯಮಧುರೋಧಿಸಿ ರಸಾಕುಲೋಧಿಸಿ| ಕಿಂಚಾಸಿ ಪಂಚ ಶರಕಾರ್ಮ ಕಮದ್ವಿತೀಯಂ| ಇಕ್ಷೋ ತವಾಸ್ತಿ ಸಕಲಂ ಪರಮೇಕನೂನಂ| ಯತ್ಸೇವಿತೋ ಭಜಸಿ ನೀರಸತಾಂ ಕ್ರಮೇಣ|’ ಇದರ ಅರ್ಥ: ‘ಎಲೈ ಇಕ್ಷುವೇ, ನೀನು ಬಹಳ ಸುಂದರವಾಗಿರುವೆ; ಸದಾ ಮಧುರ ವಾಗಿರುವೆ; ರಸಪೂರ್ಣವೂ ಆಗಿರುವೆ. ಮೇಲಾಗಿ ನೀನು ಪಂಚಬಾಣನಾದ ಮನ್ಮಥನಿಗೆ ಅದ್ವಿತೀಯ ಧನುಸ್ಸೂ ಆಗಿರುವೆ.

ಹೀಗೆ ಎಲ್ಲ ಗುಣಗಳೂ ನಿನ್ನಲ್ಲಿದ್ದರೂ ಒಂದೇ ಒಂದು ನ್ಯೂನತೆಯೆಂದರೆ, ನೀನು ಸವಿಯಲ್ಪ ಟ್ಟಂತೆಲ್ಲ ರಸಹೀನನಾಗುವೆ!’ ಇಲ್ಲಿ ಮಯೂರಕವಿ ಭೋಜರಾಜನ ಕಾಲೆಳೆದದ್ದು. ‘ಎಲೈ ರಾಜನೇ, ನೀನು ಸುಂದರನಾಗಿರುವೆ; ಮಧುರವಾಗಿ ಮಾತನಾಡುವೆ; ಮನ್ಮಥನಂತೆ ಮೋಹಕನೂ ಆಗಿರುವೆ. ಹೀಗೆ ನಿನ್ನಲ್ಲಿ ಎಷ್ಟೇ ಗುಣಗಳಿದ್ದರೂ, ನಿನ್ನನ್ನು ನಿಷ್ಠೆಯಿಂದ ಎಷ್ಟೇ ಕಾಲ ಸೇವೆ ಮಾಡಿದರೂ, ಅಂಥ ಸೇವಾತತ್ಪರನ ವಿಷಯದಲ್ಲಿ ದಿನೇದಿನೆ ನೀನು ಔದಾಸೀನ್ಯವನ್ನೇ ತೋರುವೆ!’ ಎಂದು ತಿವಿದು ಎಚ್ಚರಿಸಿ ಭೋಜರಾಜನಿಂದ ಸಮ್ಮಾನಿತನಾದದ್ದು. ಚಾಣಾಕ್ಷ ಕವಿಗಳ ಕಿತಾಪತಿಗಳು ಇಂಥವೇ.

‘ಇಕ್ಷೋರಗ್ರಾತ್ಕ್ರಮಶಃ ಪರ್ವಣಿ ಪರ್ವಣಿ ಯಥಾ ರಸವಿಶೇಷಃ| ತದ್ವತ್ಸಜ್ಜನಮೈತ್ರೀ ವಿಪರೀತಾನಾಂ ತು ವಿಪರೀತಾ’ ಅಂತ ಭೋಜಪ್ರಬಂಧದಲ್ಲಿ ಬರುವ ಒಂದು ಉಕ್ತಿಯಿದೆ. ಇದರ ಭಾವಾರ್ಥ: ಕಬ್ಬಿನ ತುದಿಯಿಂದ ಬುಡದವರೆಗೆ ಗೆಣ್ಣುಗೆಣ್ಣಿಗೂ ರಸ(ರುಚಿ) ಹೆಚ್ಚುತ್ತ ಹೋಗುತ್ತದೆ. ಅಂತೆಯೇ ಸಜ್ಜನ ರೊಡನೆ ಮೈತ್ರಿಯ ಸವಿ ದಿನದಿನಕ್ಕೂ ಹೆಚ್ಚುತ್ತ ಹೋಗುತ್ತದೆ.

ಇದಕ್ಕೆ ವಿರುದ್ಧವಾಗಿ, ಕಬ್ಬಿನ ಬುಡದಿಂದ ತುದಿಗೆ ರಸ ಕಡಿಮೆಯಾಗುತ್ತ ಹೋಗಿ ಸುಳಿಯಲ್ಲಿ ನೀರಸವಾಗುವಂತೆ, ದುರ್ಜನರ ಮೈತ್ರಿಯು ಮೊದಲು ಗಾಢವಾಗಿದ್ದು, ಕ್ರಮೇಣ ಕ್ಷೀಣಿಸುತ್ತ ಕಡೆಗೆ ನಾಶವಾಗುತ್ತದೆ. ‘ಪರಾರ್ಥೇ ಯಃ ಪೀಡಾಮನುಭವತಿ ಭಂಗೇಧಿಪಿ ಮಧುರೋ| ಯದೀಯಃ ಸರ್ವೇಷಾಮಿಹ ಖಲು ವಿಕಾರೋಧಿಪ್ಯಭಿಮತಃ| ನ ಸಂಪ್ರಾಪ್ತೋ ವೃದ್ಧಿಂ ಯದಿ ಸ ಭೃಶಮಕ್ಷೇತ್ರ ಪತಿತಃ| ಕಿಮಿಕ್ಷೋರ್ದೋಷೋಧಿಸೌ ನ ಪುನರಗುಣಾಯಾ ಮರುಭುವಃ’ ಅಂತಲೂ ಒಂದಿದೆ.

ಇದರ ಅರ್ಥ, ಕಬ್ಬು ಬೇರೆಯವರಿಗೋಸ್ಕರ ತೊಂದರೆಯನ್ನು ಅನುಭವಿಸುತ್ತದೆ; ತುಂಡರಿಸಿದರೂ ಸಿಹಿಯಾಗಿಯೇ ಇರುತ್ತದೆ; ಅದರ ಹಾಲು, ಬೆಲ್ಲವೇ ಮುಂತಾದ ರೂಪಗಳೂ ಎಲ್ಲರಿಗೂ ಇಷ್ಟವೇ. ಇಂಥ ಕಬ್ಬು ಹಸನಾಗಿರದ ಭೂಮಿಯಲ್ಲಿ ಬಿದ್ದು ಬೆಳೆಯದಿದ್ದರೆ ಅದು ಕಬ್ಬಿನ ದೋಷವೇ? ಅಥವಾ ಸಾರವಿಲ್ಲದ ಮರುಭೂಮಿಯ ದೋಷವೇ? ಇನ್ನೊಬ್ಬರ ಪ್ರಯೋಜನಕ್ಕಾಗಿ ಕಷ್ಟವನ್ನು ಅನುಭವಿಸುವ, ಆದರೆ ವಿಽವಶಾತ್ ಅನುಚಿತವಾದ ಸ್ಥಳದಲ್ಲಿ ಇರಬೇಕಾಗಿ ಬಂದು ಬೆಳೆಯಲಾಗದ ಸ್ಥಿತಿಯನ್ನು ತಲುಪಿರುವ ಸಜ್ಜನರ ಪಾಡೂ ಹೀಗೆಯೇ ಅಲ್ಲವೇ? ಕಬ್ಬನ್ನು ಕೊಂಡಾಡುವ ಇನ್ನೊಂದು ಸುಭಾಷಿತ ಬಹಳ ಮಾರ್ಮಿಕವಾಗಿದೆ. ‘ಸುಕ್ಷೇತ್ರಂ ತವ ಜನ್ಮಭೂರಿತಿ ಪುನಃ ಪರ್ವಾನು ಬಂಧಾದಿಯಂ| ಮೇಧ್ಯಾ ಮೂರ್ತಿರಿತಿ ಪ್ರಭೂತಗರಿಮಗ್ರಾಮಾ ನ ಕೇ ಕೇ ಗುಣಾಃ| ಮಾಧುರ್ಯಂ ಪರಪೀಡಿತೋಧಿಪಿ ಧರಸಿ ಕ್ರಾಂತೋ ಗುರುಗ್ರಂಥಿಭಿಃ| ಸಾಂಗಂ ಸಜ್ಜನಚೇಷ್ಟಿತಂ ಕ್ವ ಭವತಾ ಸಂಪ್ರಾಪ್ತಮಿಕ್ಷೋ ವದ|| ಇದರ ಅರ್ಥ- “-ಲವತ್ತಾದ ಭೂಮಿ ನೀನು ಹುಟ್ಟುವ ಸ್ಥಳ.

ನಿನ್ನ ಆಕಾರದಲ್ಲಿ ಪರ್ವಗಳು (ಗೆಣ್ಣುಗಳು ಅಥವಾ ಪ್ರಗತಿಯ ಹಾದಿಯಲ್ಲಿ ಮೈಲಿಗಲ್ಲುಗಳು) ಇವೆ. ನಿನ್ನ ಆಕೃತಿ ಶುಭಸಂಕೇತವೂ ಹೌದು. ನಿನ್ನಲ್ಲಿ ಅನೇಕ ಒಳ್ಳೆಯ ಗುಣಗಳಿವೆ. ತೊಂದರೆ ಕೊಟ್ಟರೂ (ಹಿಂಡಿದಾಗಲೂ) ಸಿಹಿಯಾದ ರಸವನ್ನೇ ಕೊಡುತ್ತೀಯೇ. ಎಲೈ ಕಬ್ಬೇ! ಮೈಯೆಲ್ಲ ಗಂಟು ಗಳಿದ್ದರೂ ಸತ್ಪುರುಷರ ಎಲ್ಲ ಗುಣಗಳನ್ನೂ ನೀನು ಹೇಗೆ ಪಡೆದೆ, ಹೇಳು!" ನನಗನಿಸುತ್ತದೆ, ಕಬ್ಬಿನ ಮೇಲೆಯೇ ಬರೆದ ಅತ್ಯುತ್ತಮ ಕಬ್ಬವೊಂದಿದ್ದರೆ ಅದು ಇದೇ!

ಈಗ ಈ ಕಬ್ಬುಪುರಾಣ ನಿಮ್ಮ ಹೃದಯದಲ್ಲಿ ಅಚ್ಚಳಿಯದೇ ನಿಲ್ಲುತ್ತದೋ ಇಲ್ಲವೋ ನೋಡೋಣ. ಅದನ್ನು ತಿಳಿಸುವುದಕ್ಕೂ ಒಂದು ಸುಭಾಷಿತವಿದೆ, ಹೀಗೆ: ‘ಸಂಚಿತ್ಯ ಸಂಚಿತ್ಯ ಜಗತ್ಸಮಸ್ತಂ| ತ್ರಯಃ ಪದಾರ್ಥಾ ಹೃದಯಂ ಪ್ರವಿಷ್ಟಾಃ| ಇಕ್ಷೋರ್ವಿಕಾರಾ ಮತಯಃ ಕವೀನಾಂ| ಮುಗ್ಧಾಂಗನಾ ಪಾಂಗತರಂಗಿತಾನಿ||’ ಅಂದರೆ, ಸಮಸ್ತ ಜಗತ್ತನ್ನೆಲ್ಲ ಪರಿಶೀಲಿಸಲಾಗಿ- ಇಕ್ಷುವಿನ ವಿಕಾರಗಳು (ಕಬ್ಬಿನಹಾಲು, ಬೆಲ್ಲ, ಸಕ್ಕರೆ ಇತ್ಯಾದಿ), ಪ್ರತಿಭೆಯಿಂದ ಕೂಡಿದ ಕವಿಗಳ ಮತಿತ್ವ, ಮತ್ತು ಮುಗ್ಧ ಸ್ತ್ರೀಯರ ಕಡೆಗಣ್ಣೋಟಗಳ ಪರಂಪರೆ- ಈ ಮೂರು ವಿಷಯಗಳು ಮಾತ್ರವೇ ಹೃದಯದಲ್ಲಿ ಅಚ್ಚಳಿಯದೇ ನಿಲ್ಲುತ್ತವೆ. ಅಂದಮೇಲೆ, ಪ್ರತಿಭೆಯಿಂದ ಕೂಡಿದ ಕವಿಯು ಇಕ್ಷುವಿನ ಬಗ್ಗೆಯೇ ಕವಿತೆ ಬರೆದರೆ ಅದು ಹೃದಯದಲ್ಲಿ ನಿಲ್ಲದಿರುತ್ತದೆಯೇ?!