ಒಂದೊಳ್ಳೆ ಮಾತು
ಶ್ರೀಧರ ಸ್ವಾಮಿಗಳು ಆಗ ಸಜ್ಜನಗಢದಲ್ಲಿದ್ದು, ಸಮರ್ಥ ರಾಮದಾಸರ ಸಮಾಧಿಗೆ ಅತ್ಯಂತ ನಿಷ್ಠೆಯಿಂದ ಸೇವೆ ಮಾಡುತ್ತಿದ್ದರು. ಅದೇ ಆಶ್ರಮದಲ್ಲಿದ್ದ ಒಬ್ಬ ವಾಮಾಚಾರಿಗೆ ಶ್ರೀಧರ ಸ್ವಾಮಿಗಳನ್ನು ಕಂಡರೆ ಆಗುತ್ತಿರಲಿಲ್ಲ. ಏಕೆಂದರೆ ಇಷ್ಟು ಚಿಕ್ಕ ಯುವಕನಿಗೆ ಬಂದವರೆಲ್ಲ ಪಾದ ಮುಟ್ಟಿ ನಮಸ್ಕಾರ ಮಾಡುತ್ತಾರೆ, ಗೌರವ ಕೊಡುತ್ತಾರೆ; ತನ್ನನ್ನು ಯಾರೂ ನೋಡು ವುದಿಲ್ಲ ಎಂಬ ಕೋಪ ಅವನನ್ನು ಆವರಿಸಿತ್ತು.
ಆದರೆ ಶ್ರೀಧರರು ಆಶ್ರಮದ ಹಲವು ಕೆಲಸಗಳ ಜತೆಗೆ ಆ ವಾಮಾಚಾರಿಯು ಹೇಳುವ ಕೆಲಸ ಗಳನ್ನೂ ಶ್ರದ್ಧೆಯಿಂದ ಮಾಡುತ್ತಿದ್ದರು. ಶ್ರೀಧರ ಸ್ವಾಮಿಗಳೇ ಹಾಗೆ, ಒಂದು ಕ್ಷಣವೂ ಯಾರ ಮೇಲೂ ಕೋಪಿಸಿಕೊಂಡವರಲ್ಲ. ಅವರ ಈ ಸಾಧನೆಯನ್ನು ನೋಡಿದವರೆಲ್ಲಾ, ‘ಈ ಹದಿಹರೆಯದ ಯುವಕ ಕೇವಲ ಲಂಗೋಟಿಯಲ್ಲಿ (ಕೌಪಿನ) ಇರುತ್ತಾನೆ, ಅದೆಷ್ಟು ಬದ್ಧನಾಗಿ ಬ್ರಹ್ಮಚರ್ಯ ಪಾಲನೆ ಮಾಡುತ್ತಾನೆ, ರಾತ್ರಿ ಹಾಸಿ-ಹೊದೆಯದೆ ಬರೀ ನೆಲದ ಮೇಲೆ ಮಲಗುತ್ತಾನೆ, ಒಂದು ದಿನವೂ ತಪ್ಪದೇ ಸಮರ್ಥ ರಾಮದಾಸರ ಸಮಾಧಿಗೆ ಸೇವೆ ಮಾಡುತ್ತಾನೆ’ ಎನ್ನುತ್ತಿದ್ದರು.
ಆಶ್ರಮದಲ್ಲಿರುವ ಎಲ್ಲರೂ ಹೀಗೆ ಶ್ರೀಧರರೆಡೆಗೆ ತೋರುತ್ತಿದ್ದ ಇಂಥ ಮಮತೆ, ಪ್ರೀತಿ ಯನ್ನು ಕಂಡು ಆ ವಾಮಾಚಾರಿಯು ಶ್ರೀಧರರ ಮೇಲೆ ಅಸೂಯೆ ಪಡುತ್ತಿದ್ದ, ವಿನಾ ಕಾರಣ ಕೋಪ ತೋರುತ್ತಿದ್ದ. ಏನಾದರೂ ಮಾಡಿ ಇವರು ಮಾಡುವ ಎಲ್ಲಾ ಸಾಧನೆ ಯನ್ನು ನಿಲ್ಲಿಸಿಬಿಡಬೇಕು ಎಂದು ಸಂಚುಹೂಡಿ, ಒಂದು ದಿನ ಶ್ರೀಧರರ ಮೇಲೆ ವಾಮಾ ಚಾರ ಪ್ರಯೋಗ ಮಾಡಿದ.
ಇದನ್ನೂ ಓದಿ: Roopa Gururaj Column: ಕಾಡುಜನಾಂಗದ ಮುಗ್ಧ ಬಾಲಕನ ಹಂಚಿ ತಿನ್ನುವ ಗುಣ
ಅಂದು ಶ್ರೀಧರ ಸ್ವಾಮಿಗಳು ಎಂದಿನಂತೆ ರಾತ್ರಿ ನೆಲದ ಮೇಲೆ ಮಲಗಿದ್ದಾಗ, ಒಂದು ಕಪ್ಪನೆ ಆಕೃತಿಯು ಅವರ ಮುಂದೆ ಬಂದು ನಿಂತಿತು, ಶ್ರೀಧರರನ್ನು ನುಂಗುವಂತೆ ಹಾತೊ ರೆಯಿತು. ಅದನ್ನು ನೋಡಿದ ಶ್ರೀಧರರು ಆತಂಕ ಪಡದೆ ‘ಶ್ರೀರಾಮ ಜಯರಾಮ ಶ್ರೀ ರಾಮ ಜಯರಾಮ’ ಎಂದು ರಾಮನಾಮ ಸ್ಮರಣೆಯನ್ನು ಮಾಡಿದರು. ಅವರ ಉಸಿರು ಉಸಿರಿ ನಲ್ಲೂ ರಾಮನಾಮ ಸ್ಮರಣೆ ತುಂಬಿತ್ತು.
ಆ ಕಪ್ಪು ಆಕೃತಿಯ ಭೂತ ಮತ್ತೆ ಕಾಣಲಿಲ್ಲ. ಮರುದಿನ ಎಂದಿನಂತೆ ಶ್ರೀಧರರು ಮುಂಜಾ ನೆ ಎದ್ದು ತಮ್ಮ ನಿತ್ಯಕರ್ಮದಲ್ಲಿ ತೊಡಗಿರುವಾಗ ವಾಮಾಚಾರಿಯು ಶ್ರೀಧರರ ಬಳಿ ಬಂದು ಅವರ ಕಾಲಿಗೆ ನಮಸ್ಕರಿಸಿ, “ನನ್ನನ್ನು ಕ್ಷಮಿಸಿಬಿಡು" ಎಂದು ಕೈ ಮುಗಿದು ಬೇಡಿದ. ಶ್ರೀಧರರಿಗೆ ಆಶ್ಚರ್ಯವಾಯಿತು.
ಇಲ್ಲಿಯ ತನಕ ಈ ಮನುಷ್ಯ ನನ್ನ ಮೇಲೆ ದಬ್ಬಾಳಿಕೆ ಮಾಡಿ ಹೆದರಿಸಿ ತನ್ನ ವೈಯುಕ್ತಿಕ ಕೆಲಸ ಮಾಡಿಸಿಕೊಳ್ಳುತ್ತಿದ್ದ, ಈ ದಿನ ಏಕೆ ಈ ರೀತಿ ಕ್ಷಮೆ ಬೇಡುತ್ತಿದ್ದೇನೆ ಎಂದೆನಿಸಿತು ಅವರಿಗೆ. ಆಗ ಶಾಂತಮೂರ್ತಿ ಶ್ರೀಧರರು, “ಯಾಕಪ್ಪ ಏನಾಯ್ತು?" ಎಂದು ಕೇಳಿದರು. ಆತ ಹೇಳಿದ- “ನಾನು ಏನು ಹೇಳಲಿ, ನಾನು ಮಾಡಿದ ಮಣ್ಣು ತಿನ್ನುವ ಕೆಲಸಕ್ಕೆ, ನನ್ನ ಕನಸಿ ನಲ್ಲಿ ಸಮರ್ಥ ರಾಮದಾಸರು ಬಂದು ಚಾವಟಿಯಿಂದ ಹೊಡೆದು, ‘ನನ್ನ ಪ್ರೀತಿಯ ಶಿಷ್ಯ ಶ್ರೀಧರನ ಸಾಧನೆಗೆ ತೊಂದರೆ ಮಾಡಲು ವಾಮಾಚಾರ ಮಾಡಿದ್ದೀಯಾ?’ ಎಂದು ಹೇಳು ತ್ತಾ ಮೈ ಮೇಲೆ ಬಾಸುಂಡೆ ಬರುವಂತೆ ಹೊಡೆದಿದ್ದಾರೆ ನೋಡು" ಎಂದು ತೋರಿಸಿದ.
ವಾಮಾಚಾರಿಯ ಮೈಮೇಲೆ ಕೆಂಪಗೆ ಬಾಸುಂಡೆ ಬಂದಿತ್ತು, ಆತ ಉರಿ ತಡೆಯಲಾಗದೆ ಒzಡುತ್ತಾ, “ದಯವಿಟ್ಟು ನನ್ನನ್ನು ಕ್ಷಮಿಸು. ನೀನು ಕ್ಷಮಿಸಿದರೆ ನಿನ್ನ ಗುರುಗಳು ನನ್ನನ್ನು ಹೊಡೆಯುವುದಿಲ್ಲ. ಇನ್ನೆಂದೂ ನಿನ್ನ ತಂಟೆಗೆ ಬರುವುದಿಲ್ಲ, ಇದೊಂದು ಸಲ ಕ್ಷಮಿಸಿ ಬಿಡು" ಎಂದು ಹೇಳಿದಾಗ, ಶ್ರೀಧರರಿಗೆ ಆಶ್ಚರ್ಯವಾಯಿತು.
ಮನಸ್ಸಿನ ಸಮರ್ಥ ರಾಮದಾಸರನ್ನು ಪ್ರಾರ್ಥಿಸಿ ಕೈ ಮುಗಿದು, “ಗುರುಗಳೇ ನನ್ನ ಕಷ್ಟಕ್ಕೆ ನೀವು ತೊಂದರೆ ತೆಗೆದುಕೊಂಡು ಕನಸಿನಲ್ಲಿ ಬಂದು ಆತನಿಗೆ ಶಿಕ್ಷೆ ಕೊಟ್ಟಿದ್ದೀರಿ. ಅವನನ್ನು ಕ್ಷಮಿಸಿ ಬಿಡಿ" ಎಂದು ಬೇಡಿದರು. ಜೀವನದಲ್ಲಿ ಭಗವಂತನ, ತಂದೆ-ತಾಯಿಗಳ, ಗುರು-ಹಿರಿಯರ ಕಾಲು ಮುಗಿದು ನಮಸ್ಕರಿಸಿ ಸದಾ ಅವರ ಆಶೀರ್ವಾದವನ್ನು ಪಡೆಯು ವುದು ಇದೇ ಕಾರಣಕ್ಕೆ. ಇಂಥವರ ಆಶೀರ್ವಾದ ನಮ್ಮ ಮೇಲಿದ್ದಾಗ ಎಂಥ ಕೆಟ್ಟ ದೃಷ್ಟಿ ಯಿಂದಲೂ ಅದು ನಮ್ಮನ್ನು ಕಾಪಾಡುತ್ತದೆ.
ನಮ್ಮ ಏಳಿಗೆಯನ್ನು ನೋಡಿ ನಿಷ್ಕಲ್ಮಶ ಮನಸ್ಸಿನಿಂದ ಸಂತೋಷಪಟ್ಟು ನಮ್ಮನ್ನು ಆಶೀರ್ವದಿಸುವ ಜೀವಗಳು ಸದಾ ನಮ್ಮನ್ನು ಕೆಟ್ಟ ದೃಷ್ಟಿಯಿಂದ ಕಾಪಾಡುವ ಶಕ್ತಿಯನ್ನು ಕೂಡ ಹೊಂದಿರುತ್ತಾರೆ. ಇಂಥವರ ಆಶೀರ್ವಾದ ಸದಾ ನಮ್ಮನ್ನು ಕಾಯಲಿ....