Mohan Vishwa Column: ನಗರ ನಕ್ಸಲರ ಬಂಧನ ಯಾವಾಗ ?
‘ಅಲ್ ಜಜೀರಾ’ ಅಂತಾರಾಷ್ಟ್ರೀಯ ಮಾಧ್ಯಮದಲ್ಲಿ ‘ಕರ್ನಾಟಕದ, ಮಂಗಳೂರಿನ ಬಳಿಯ ಹಿಂದೂ ದೇವಸ್ಥಾನದ ಬಳಿ ಸಾವಿರಾರು ಶವಗಳನ್ನು ಹೂತಿಡಲಾಗಿದೆ’ ಎಂಬ ಸುದ್ದಿ ಪ್ರಕಟವಾಗಿತ್ತು. ಪ್ರತಿಷ್ಠಿತ ರಿಪಬ್ಲಿಕ್ ಇಂಗ್ಲಿಷ್ ಮಾಧ್ಯಮದಲ್ಲಿ ಪಾಕಿಸ್ತಾನಿ ಪ್ಯಾನಲಿಸ್ಟ್ ಒಬ್ಬ ಧರ್ಮಸ್ಥಳದ ವಿಚಾರವನ್ನು ಮಾತನಾಡಿದ್ದ. ಧರ್ಮಸ್ಥಳದ ವಿರುದ್ಧ ನಡೆಸಿದ ಅಪಪ್ರಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯ್ತು.

-

ವೀಕೆಂಡ್ ವಿತ್ ಮೋಹನ್
camohanbn@gmail.com
ಧರ್ಮಸ್ಥಳದ ವಿರುದ್ಧ ನಗರ ನಕ್ಸಲರು ನಡೆಸಿದ್ದ ಅಪಪ್ರಚಾರಗಳಿಗೆ ಎಳ್ಳಷ್ಟೂ ಬೆಲೆಯಿಲ್ಲ ವೆಂಬುದು ತನಿಖೆಯಿಂದ ದಿನದಿಂದ ದಿನಕ್ಕೆ ಬಯಲಾಗುತ್ತಿದೆ. ಕೃತಕ ಬುದ್ಧಿಮತ್ತೆಯ (ಎಐ) ವಿಡಿಯೋ ಮೂಲಕ ಸಮೀರ ಎಂಬ ಯುವಕ ಧರ್ಮಸ್ಥಳದ ವಿರುದ್ಧ ದೊಡ್ಡಮಟ್ಟದಲ್ಲಿ ಸುಳ್ಳು ಸುದ್ದಿಗಳನ್ನು ಹರಡಿಸಿ ಮನೆ ಮನೆಗೆ ತಲುಪಿಸಿದ್ದ.
ಕೋವಿಡ್ ಸಂದರ್ಭದಲ್ಲಿ ಮನೆಯಲ್ಲಿ ಕುಳಿತು ಓಟಿಟಿಯಲ್ಲಿ ಕ್ರೈಂ ಥ್ರಿಲ್ಲರ್ ಸಿನಿಮಾಗಳನ್ನು ನೋಡುವುದಕ್ಕೆ ಒಗ್ಗಿಕೊಂಡಿದ್ದ ಒಂದಷ್ಟು ಜನರು ಆತ ಮಾಡಿದ್ದ ವಿಡಿಯೋವನ್ನು ನಂಬುವ ಹಂತದಲ್ಲಿದ್ದರು. ಮಾಡಿದ ಆರೋಪಗಳಿಗೆ ಕವಡೆ ಕಾಸಿನ ಪುರಾವೆಯನ್ನೂ ನೀಡಲಾಗದೆ ‘ಬುರುಡೆ ಗ್ಯಾಂಗ್’ ಜನರ ಮುಂದೆ ಬೆತ್ತಲಾಗಿದೆ.
ಸರಕಾರ ರಚಿಸಿದ್ದ ಎಸ್‌ಐಟಿ ತನಿಖೆ ಮುಗಿಯುವ ಹಂತಕ್ಕೆ ಬಂದು, ವೀರೇಂದ್ರ ಹೆಗ್ಗಡೆಯವರ ಕುಟುಂಬದ ವಿರುದ್ಧ ಬುರುಡೆ ಗ್ಯಾಂಗ್ ಮಾಡಿದ ಆರೋಪಗಳಿಗೆ ಒಂದೇ ಒಂದು ಪುರಾವೆ ನೀಡಲಾಗಲಿಲ್ಲ. ತನಿಖೆ ಮುಗಿದ ನಂತರ ‘ಮಾಸ್ಕ್ ಮ್ಯಾನ್’ ಚಿನ್ನಯ್ಯನನ್ನು ‘ಹರಕೆಯ ಕುರಿ’ ಮಾಡಿ ಜೈಲಿಗಟ್ಟುವ ಕೆಲಸವಾಗುತ್ತದೆ.
ವೀರೇಂದ್ರ ಹೆಗ್ಗಡೆಯವರ ಕುಟುಂಬದ ವಿರುದ್ಧ ಮಾಡಿದ್ದ ಆರೋಪಗಳಿಗೆ ಎಸ್‌ಐಟಿ ತನಿಖೆ ಯಿಂದ ಕ್ಲೀನ್ ಚಿಟ್ ಸಿಗಬಹುದು. ಆದರೆ ಹಿಂದೂಗಳ ಪವಿತ್ರ ಶ್ರದ್ಧಾಕೇಂದ್ರ ಧರ್ಮಸ್ಥಳದ ವಿರುದ್ಧ ಮಾಡಿದ ಅಪಪ್ರಚಾರಕ್ಕೆ ನ್ಯಾಯ ಸಿಗುವುದು ಯಾವಾಗ? ಧರ್ಮಸ್ಥಳದ ವಿರುದ್ಧ ನಡೆಸಿದ ಅಪಪ್ರಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುವಂತೆ ಮಾಡಿದ್ದು ಎಡಚರರ ಪಟಾಲಂ.
ಇದನ್ನೂ ಒದಿ: Mohan Vishwa Column: ಆಪರೇಷನ್ ʼಡೈಮಂಡ್ʼ: ಮಿಗ್ -21
‘ಅಲ್ ಜಜೀರಾ’ ಅಂತಾರಾಷ್ಟ್ರೀಯ ಮಾಧ್ಯಮದಲ್ಲಿ ‘ಕರ್ನಾಟಕದ, ಮಂಗಳೂರಿನ ಬಳಿಯ ಹಿಂದೂ ದೇವಸ್ಥಾನದ ಬಳಿ ಸಾವಿರಾರು ಶವಗಳನ್ನು ಹೂತಿಡಲಾಗಿದೆ’ ಎಂಬ ಸುದ್ದಿ ಪ್ರಕಟ ವಾಗಿತ್ತು. ಪ್ರತಿಷ್ಠಿತ ರಿಪಬ್ಲಿಕ್ ಇಂಗ್ಲಿಷ್ ಮಾಧ್ಯಮದಲ್ಲಿ ಪಾಕಿಸ್ತಾನಿ ಪ್ಯಾನಲಿಸ್ಟ್ ಒಬ್ಬ ಧರ್ಮಸ್ಥಳದ ವಿಚಾರವನ್ನು ಮಾತನಾಡಿದ್ದ. ಧರ್ಮಸ್ಥಳದ ವಿರುದ್ಧ ನಡೆಸಿದ ಅಪಪ್ರಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯ್ತು.
ಆದರೆ ಎಸ್‌ಐಟಿ ತನಿಖೆಯಲ್ಲಿ ಬುರುಡೆ ಗ್ಯಾಂಗ್ ಬಿಟ್ಟ ಬುರುಡೆಗಳಿಗೆ ಸಾಕ್ಷ್ಯವಿಲ್ಲದ ವಿಷಯ ಮಾತ್ರ ಸುದ್ದಿಯಾಗಲಿಲ್ಲ. ಎಡಚರರಿಗೆ ಧರ್ಮಸ್ಥಳದ ವಿರುದ್ಧದ ಅಪಪ್ರಚಾರವು ದೊಡ್ಡ ಹುಯಿಲಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿ ಭಕ್ತರ ಮನಸ್ಸಿನಲ್ಲಿ ಗೊಂದಲ ಸೃಷ್ಟಿಯಾಗಬೇಕಿತ್ತು, ಅಷ್ಟೇ!
ನಗರ ನಕ್ಸಲರ ಟಾರ್ಗೆಟ್ ಇದ್ದದ್ದು ಹಿಂದೂ ದೇವಾಲಯಗಳು. ಧರ್ಮಸ್ಥಳದ ಹೆಸರಿಗೆ ಕಳಂಕ ತರುವ ಏಕೈಕ ಉದ್ದೇಶದಿಂದ ಇವರು ಸುಳ್ಳು ಕಥೆಯೊಂದನ್ನು ಸೃಷ್ಟಿ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ತನಿಖೆಯಲ್ಲಿ ಪುರಾವೆಗಳನ್ನು ನೀಡಲಾಗುವುದಿಲ್ಲವೆಂಬ ವಿಷಯ ಅವರಿಗೂ ತಿಳಿದಿತ್ತು. ಆದರೆ ಹಿಂದೂ ದೇವಾಲಯದ ವಿರುದ್ಧ ಕೆಟ್ಟದೊಂದು ನಿರೂಪಣೆ ಮೂಡಿಸುವುದು ಅವರ ಮೂಲ ಉದ್ದೇಶವಾಗಿತ್ತು.
ಕ್ರೈಂ ಚಿತ್ರಗಳಲ್ಲಿ ಬರುವಂತೆ ಒಂದೊಂದು ಸಮಯದಲ್ಲಿ ಒಂದೊಂದು ಪಾತ್ರಗಳನ್ನು ಸೃಷ್ಟಿ ಮಾಡಿದರು. ಸುಜಾತ ಭಟ್ ಎಂಬುವವರನ್ನು ಕರೆ ತಂದು, ಇಲ್ಲದ ಮಗಳನ್ನು ಸೃಷ್ಟಿ ಮಾಡಿ ಆಕೆ ಕಾಣೆಯಾಗಿದ್ದಾಳೆಂಬ ಕಣ್ಣೀರ ಕಥೆ ಹೇಳಿಸಿ ಮಾಧ್ಯಮಗಳಲ್ಲಿ ಸಂಚಲನ ಸೃಷ್ಟಿಸಿದರು.
ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುವ ’ಬುರುಡೆ ಗ್ಯಾಂಗ್’ ಮಾತಿಗೆ ಸರಕಾರ ಮತ್ತು ಮಾಧ್ಯಮಗಳು ಕೂಡ ಕುರಿಗಳಾದವು. ಎರಡು ತಿಂಗಳುಗಳ ಕಾಲ ಸತತವಾಗಿ ಮಾಧ್ಯಮಗಳಲ್ಲಿ ರ್ಮಸ್ಥಳದ ಸುದ್ದಿಯನ್ನು ಒಂದು ಧಾರಾವಾಹಿಯಂತೆ ರಾಜ್ಯದ ಜನರಿಗೆ ತೋರಿಸಿದ್ದು ಬುರುಡೆ ಗ್ಯಾಂಗ್. ಈ ಧಾರಾವಾಹಿಯ ನಿರ್ದೇಶಕರು, ನಿರ್ಮಾಪಕರು ನಗರ ನಕ್ಸಲರು.
ಸೂಕ್ಷ್ಮವಾಗಿ ಗಮನಿಸಿದರೆ ’ಬುರುಡೆ ಗ್ಯಾಂಗ್’ನವರು ಸುಳ್ಳು ಹೇಳುವಾಗ ಆತ್ಮವಿಶ್ವಾಸದಿಂದ ನ್ಯಾಯ, ಸತ್ಯ, ದೇವರು ಎಂಬ ಪದಗಳನ್ನು ಹೆಚ್ಚಾಗಿ ಬಳಸುತ್ತಾರೆ. ಅವರ ಮಾತುಗಳನ್ನು ಕೇಳಿದವರಿಗೆ ಒಂದು ಕ್ಷಣ ‘ಅಯ್ಯೋ ಪಾಪ’ವೆನಿಸುವುದು ಖಚಿತ.
ತನಿಖೆ ನಡೆಯುತ್ತಿದ್ದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡಿ ಜನರನ್ನು ರೊಚ್ಚಿಗೆಬ್ಬಿಸಲು ಸಮೀರ ಕರೆ ಕೊಡುತ್ತಾನೆ. ಆತನ ವಿರುದ್ಧ ಪ್ರಕರಣ ದಾಖಲಾದ ಸಂದರ್ಭದಲ್ಲಿ ಕಾಂಗ್ರೆಸ್ಸಿನ ದ್ವಾರಕಾನಾಥ್, ಆತನ ವಕೀಲರಾಗುತ್ತಾರೆ. ತನಿಖೆ ಮುಗಿಯುವ ಹಂತಕ್ಕೆ ತಲುಪುತ್ತಿದೆ. ಆದರೆ ಸಮೀರ, ಮಟ್ಟಣ್ಣರನ್ನು ಬಂಧಿಸಿ ಖಾರದಪುಡಿ ಹಾಕಿ ಏರೋಪ್ಲೇನ್ ಹತ್ತಿಸುವ ಕೆಲಸವನ್ನು ಪೊಲೀಸರು ಇನ್ನೂ ಮಾಡಿಲ್ಲ.
ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದರೂ ಪೊಲೀಸರು ಕೈಕಟ್ಟಿ ಕುಳಿತಿದ್ದರು. ಸ್ವತಃ ಡಿ.ಕೆ.ಶಿವಕುಮಾರ್ ಅವರು ‘ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿದೆ’ ಎಂದರು. ದಿನೇಶ್ ಗುಂಡೂರಾವ್ ಅವರು ‘ಎಡಚರರ ಒತ್ತಡಕ್ಕೆ ಮಣಿದು ಎಸ್‌ಐಟಿ ರಚನೆ ಮಾಡಲಾಗಿದೆ’ ಎಂದರು.
ಎಸ್‌ಐಟಿ ತನಿಖೆ ಮುಗಿಯುವ ಹಂತಕ್ಕೆ ಬಂದಿದೆ. ಬುರುಡೆ ಗ್ಯಾಂಗ್ ಮಾಡಿದ ಆರೋಪಗಳಿಗೆ ಪುರಾವೆಗಳಿಲ್ಲವೆಂಬುದು ಪ್ರತಿನಿತ್ಯ ಸಾಬೀತಾಗುತ್ತಿದೆ. ಇಷ್ಟಾದರೂ ನಗರ ನಕ್ಸಲರು ಮತ್ತೊಂದು ಸಭೆ ನಡೆಸಿ ಧರ್ಮಸ್ಥಳದ ವಿರುದ್ಧ ಹೊಸ ಆರೋಪಗಳನ್ನು ಮಾಡಲು ಸಜ್ಜಾಗುತ್ತಿದ್ದಾರೆ. ಎಡಚರರ ಉದ್ದೇಶ ಸ್ಪಷ್ಟ- ಹಿಂದೂ ದೇವಾಲಯಗಳನ್ನು ಟಾರ್ಗೆಟ್ ಮಾಡಿ ಭಕ್ತರ ಧಾರ್ಮಿಕ ನಂಬಿಕೆಗಳಿಗೆ ಕುತ್ತು ತಂದು, ಜನರಿಗೆ ದೇವಸ್ಥಾನದ ಮೇಲಿನ ನಂಬಿಕೆಯನ್ನು ಕಡಿಮೆ ಮಾಡಿಸುವುದು.
ಕಾಂಗ್ರೆಸ್ಸಿನ ತಮಿಳುನಾಡು ಸಂಸದ ಶಶಿಕಾಂತ್ ಸೆಂಥಿಲ್ ಹೆಸರು ಈ ಪ್ರಕರಣದಲ್ಲಿ ಕೇಳಿ ಬಂತು. ಬೆಣ್ಣೆಯಲ್ಲಿ ಕೂದಲು ತೆಗೆಯುವಂತೆ ನಿಧಾನವಾಗಿ ಮಾತನಾಡುವುದು ಸೆಂಥಿಲ್ ಶೈಲಿ. ಈ ವ್ಯಕ್ತಿಯ ಸಂದರ್ಶನಗಳನ್ನು ವೀಕ್ಷಿಸಿದರೆ ಮತ್ತದೇ ತಮಿಳುನಾಡಿನ ಪುರಾವೆಯಿಲ್ಲದ ಆರ್ಯ ಮತ್ತು ದ್ರಾವಿಡ ಸುಳ್ಳು ಸಿದ್ಧಾಂತದ ನೆನಪಾಗುತ್ತದೆ.
2023ರ ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಪರವಾಗಿ ಕೆಲಸ ಮಾಡಿದ್ದ ಸೆಂಥಿಲ್, ಚುನಾವಣಾ ಸಮಯದಲ್ಲಿ ಕಾಂಗ್ರೆಸ್ಸಿನ ಹೈಕಮಾಂಡಿಗೆ ಹತ್ತಿರವಾದ ವ್ಯಕ್ತಿ. ಬೊಮ್ಮಾಯಿಯವರ ಸರಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸಮರ್ಥಕವಾಗಿ ಹಬ್ಬಿಸಿದ್ದ ಕಾಂಗ್ರೆಸ್ ಪಕ್ಷದ ಟೂಲ್ ಕಿಟ್‌ನಲ್ಲಿ ಕೆಲಸ ಮಾಡಿದ ವ್ಯಕ್ತಿ ಶಶಿಕಾಂತ್ ಸೆಂಥಿಲ್.
ಇವರು ಚುನಾವಣಾ ಸಮಯದಲ್ಲಿ ತಮ್ಮನ್ನು ತಾವು ಪ್ರಚಾರ ಮಾಡಿಕೊಳ್ಳಲು ಹೆಚ್ಚಾಗಿ ಯುಟ್ಯೂಬ್ ಮಾಧ್ಯಮಗಳನ್ನು ಬಳಸಿಕೊಂಡಿದ್ದರು. ಅವರ ಸಂದರ್ಶನಗಳನ್ನು ಗಮನಿಸಿದರೆ ಚುನಾವಣಾ ಭಾಷಣಗಳಂತಿರುತ್ತವೆ. ಸಂದರ್ಶನ ನಡೆಸುವ ಮಾಧ್ಯಮದ ನಿರೂಪಕ ಸೆಂಥಿಲ್ ಹೇಳುವ ವಿಷಯಗಳ ಬಗ್ಗೆ ಅಡ್ಡ ಪ್ರಶ್ನೆಗಳನ್ನು ಕೇಳುವುದಿಲ್ಲ. ಹೇಳಬೇಕಿರುವ ವಿಷಯವನ್ನು ಭಾಷಣದ ಶೈಲಿಯಲ್ಲಿ ವೀಕ್ಷಕರಿಗೆ ಹೇಳುವ ಕೆಲಸವನ್ನು ಸೆಂಥಿಲ್ ಮಾಡಿರುವುದು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ.
ಧರ್ಮಸ್ಥಳದ ವಿರುದ್ಧ ನಡೆದ ಅಪಪ್ರಚಾರಕ್ಕೆ ಹೆಚ್ಚಾಗಿ ಬಳಕೆಯಾಗಿದ್ದು ಯುಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳು. ಮುಖ್ಯವಾಹಿನಿ ಮಾಧ್ಯಮಗಳು ಪುರಾವೆಗಳಿಲ್ಲದೆ ಸುದ್ದಿಗಳನ್ನು ಬಿತ್ತರಿಸಲಾಗುವುದಿಲ್ಲ. ಯುಟ್ಯೂಬರ್ ಗಳನ್ನು ಬಳಸಿಕೊಂಡು ಧರ್ಮಸ್ಥಳದ ವಿರುದ್ಧ ಹೆಚ್ಚು ಅಪಪ್ರಚಾರ ನಡೆಸಲಾಯಿತು. ಬಂಗ್ಲೆಗುಡ್ಡದ ಕಾಡಿನೊಳಗೆ ಹೊಕ್ಕು ಭಯ ಹುಟ್ಟಿಸುವ ವಿಡಿಯೋಗಳನ್ನು ಚಿತ್ರೀಕರಿಸಿ ಜನರಿಗೆ ತಲುಪಿಸಿದ್ದು ಬುರುಡೆ ಗ್ಯಾಂಗ್.
ಸುಳ್ಳನ್ನು ಸತ್ಯ ಮಾಡುವ ಸಲುವಾಗಿ, ಮತ್ತಷ್ಟು ಸುಳ್ಳುಗಳನ್ನು ಪೋಣಿಸಿ ದಿನನಿತ್ಯ ಪೊಲೀಸ ರನ್ನೂ ಮಂಗ್ಯಾ ಮಾಡಿದರು. ಧರ್ಮಸ್ಥಳದ ಪರವಾಗಿ ನಿಂತವರ ಕುಟುಂಬದವರನ್ನು ಮುನ್ನೆಲೆಗೆ ತಂದು ತೇಜೋವಧೆ ಮಾಡುವ ಕೆಲಸವನ್ನು ಬುರುಡೆ ಗ್ಯಾಂಗ್ ನಿರಂತರವಾಗಿ ಮಾಡಿತು. ತನಿಖೆಯ ಸಂದರ್ಭದಲ್ಲೂ ಬುರುಡೆ ಗ್ಯಾಂಗ್ ನಿರಂತರವಾಗಿ ಆರೋಪಗಳನ್ನು ಮಾಡುವುದರ ಹಿಂದೆ ಬಲವಾದ ಬೆಂಬಲವಿರಬೇಕು.
ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಸರಕಾರವನ್ನು ಪ್ರಶ್ನಿಸಿ ಪೋಸ್ಟ್ ಹಾಕುವವರ ವಿರುದ್ಧ ಕೆಲವೇ ಗಂಟೆಗಳಲ್ಲಿ ಎಫ್ಐಆರ್ ಮಾಡಲಾಗುತ್ತದೆ. ಆದರೆ ಧರ್ಮಸ್ಥಳದ ವಿರುದ್ಧ ಪ್ರತಿನಿತ್ಯ ಹೇಳುವ ಸುಳ್ಳುಗಳಿಗೆ ಕಡಿವಾಣ ಹಾಕಲಿಕ್ಕಾಗಲಿಲ್ಲ. ಪೋಲೀಸರ ಭಯವಿಲ್ಲದ ಬುರುಡೆ ಗ್ಯಾಂಗ್‌ನ ಸದಸ್ಯರು ಮನಸ್ಸಿಗೆ ಬಂದಂತೆ ಹೇಳಿಕೆಗಳನ್ನು ನೀಡಿದರು.
ಕಾಡಿನಿಂದ ಬುರುಡೆಯೊಂದನ್ನು ಮಾ ಮ್ಯಾನ್ ತೆಗೆದುಕೊಂಡು ಹೋದಾಗ, ಪೊಲೀಸರು ಮೊದಲು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಿತ್ತು. ಮನುಷ್ಯ ಸತ್ತ ನಂತರ ದೇಹವನ್ನು ಮಣ್ಣು ಮಾಡುವವರೆಗಷ್ಟೇ ಆತನ ಕುಟುಂಬದವರಿಗೆ ಹಕ್ಕಿರುತ್ತದೆ. ಮಣ್ಣು ಮಾಡಿದ ನಂತರ ಅದರ ಸಂಪೂರ್ಣ ಜವಾಬ್ದಾರಿ ಸರಕಾರದ್ದು. ದೇಹದ ಭಾಗವನ್ನು ಹೊರಗೆ ತೆಗೆಯ ಬೇಕಾದರೆ ತಹಸೀಲ್ದಾರ್ ಅಥವಾ ಜಿಲ್ಲಾಧಿಕಾರಿಯ ಸಮ್ಮುಖದಲ್ಲಿ ಕಾನೂನಾತ್ಮಕವಾಗಿ ಪ್ರಕ್ರಿಯೆಗಳು ನಡೆಯಬೇಕು.
ನಿಯಮಗಳನ್ನು ಗಾಳಿಗೆ ತೂರಿ ಬುರುಡೆಯನ್ನು ಕೊಂಡೊಯ್ದ ಮಾ ಮ್ಯಾನ್ ಹಿಂದಿರುವ ನಗರ ನಕ್ಸಲರ ಬಂಧನವಾಗಿಲ್ಲ ಯಾಕೆ? ಸತ್ತ ವ್ಯಕ್ತಿಯ ಬುರುಡೆಯನ್ನು ಭೂಮಿಯೊಳಗಿನಿಂದ ಹೊರ ತೆಗೆದು ಪೊಲೀಸರ ಮುಂದೆ ಬರುತ್ತಾರೆಂದರೆ ಇವರ ಭಂಡಧೈರ್ಯದ ಹಿಂದೆ ಯಾರ ಪ್ರಭಾವವಿರ ಬಹುದು? ಕಣ್ಣ ಮುಂದೆ ಕೊಲೆಯಾದರೂ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಹೆದರುವ ಕಾಲದಲ್ಲಿ ನಾವಿದ್ದೇವೆ. ಆದರೆ ಬುರುಡೆ ಗ್ಯಾಂಗ್ ಸದಸ್ಯರು ಧರ್ಮಸ್ಥಳದ ವಿಚಾರದಲ್ಲಿ ನೀರು ಕುಡಿದಷ್ಟು ಸಲೀಸಾಗಿ ಮಾಧ್ಯಮಗಳ ಮುಂದೆ ನಿಂತು ಪ್ರತಿನಿತ್ಯ ರಾಜಾರೋಷವಾಗಿ ಹೇಳಿಕೆ ನೀಡುವುದನ್ನು ಭಂಡಧೈರ್ಯ ಎನ್ನಬೇಕೆಂದರೆ ಅವರ ಪರವಾಗಿ ನಿಲ್ಲಲು ಒಂದು ದೊಡ್ಡ ವ್ಯವಸ್ಥೆಯೇ ಸೃಷ್ಟಿಯಾಗಿರಬೇಕು.
ಎಸ್‌ಐಟಿ ತನಿಖೆಯಲ್ಲಿ ಬುರುಡೆ ಗ್ಯಾಂಗ್‌ನ ಸುಳ್ಳುಗಳು ಒಂದೊಂದಾಗಿ ಬಯಲಾಗುತ್ತಿರಬಹುದು. ಅವರ ಆರೋಪಕ್ಕೆ ಸಾಕ್ಷಿಗಳಿಲ್ಲದ ವಿಷಯ ಪ್ರತಿನಿತ್ಯ ಮಾಧ್ಯಮಗಳ ವರದಿಯಿಂದ ಸಾಬೀತಾಗು ತ್ತಿದೆ. ಆದರೆ ಹಿಂದೂಗಳ ಪವಿತ್ರ ಯಾತ್ರಾಸ್ಥಳ ಧರ್ಮಸ್ಥಳಕ್ಕೆ ಕಳಂಕ ತಂದ ನಗರ ನಕ್ಸಲರ ವಿರುದ್ಧ ಕ್ರಮ ಯಾವಾಗ? ನಗರ ನಕ್ಸಲರ ತಾಳಕ್ಕೆ ಕುಣಿದ ಬುರುಡೆ ಗ್ಯಾಂಗ್ ಸದಸ್ಯರನ್ನು ಜೈಲಿಗೆ ಕಳುಹಿಸುವುದು ಯಾವಾಗ? ಷಡ್ಯಂತ್ರದ ತೆರೆಯ ಹಿಂದಿರುವವರನ್ನು ಬಂಧಿಸದಿದ್ದರೆ, ಈಗ ಧರ್ಮಸ್ಥಳವನ್ನು ಟಾರ್ಗೆಟ್ ಮಾಡಿದ ಹಾಗೆ ಮುಂದೊಂದು ದಿನ ಮತ್ತೊಂದು ಹಿಂದೂ ದೇವಾಲಯವನ್ನೂ ಇವರು ಟಾರ್ಗೆಟ್ ಮಾಡುತ್ತಾರೆ.
ಷಡ್ಯಂತ್ರದ ಹಿಂದಿರುವವರಿಗೆ ಬಿಸಿ ಮುಟ್ಟಿಸದಿದ್ದರೆ, ಸಮಾಜದಲ್ಲಿ ಯಾರ ಮೇಲೆ ಬೇಕಾದರೂ ಆರೋಪಗಳನ್ನು ಮಾಡಿ ಸಾಮಾಜಿಕ ಜಾಲತಾಣದ ಮೂಲಕ ತೇಜೋವಧೆ ಮಾಡಬಹುದೆಂಬ ವಾತಾವರಣ ಸೃಷ್ಟಿಯಾಗುವುದರಲ್ಲಿ ಸಂದೇಹವಿಲ್ಲ, ಆ ನಿಟ್ಟಿನಲ್ಲಿ ಆಶ್ಚರ್ಯ ಪಡಬೇಕಿಲ್ಲ. ಕೇವಲ ಲೈಕ್ ಮತ್ತು ಬೆಂಬಲಿಗರ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುವ ಸಲುವಾಗಿ ಸಿಕ್ಕ ಸಿಕ್ಕವರ ತೇಜೋವಧೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತದೆ.
ನಮ್ಮ ಮುತ್ತಾತನ ಕಾಲದಿಂದ ಧರ್ಮಸ್ಥಳವೆಂದರೆ ಸತ್ಯ, ನ್ಯಾಯ ನೀಡುವ ಪುಣ್ಯಸ್ಥಳ; ನಮ್ಮ ಮಕ್ಕಳು, ಮೊಮ್ಮಕ್ಕಳ ಕಾಲಕ್ಕೂ ಅದೇ ನಂಬಿಕೆ ಮುಂದುವರಿಯಬೇಕು. ಧರ್ಮಸ್ಥಳದ ಮೇಲಿನ ನಂಬಿಕೆ ಮುಂದಿನ ಪೀಳಿಗೆಗೆ ಮುಂದುವರಿಯಬಾರದೆಂಬುದು ನಗರ ನಕ್ಸಲರ ಮೂಲ ಉದ್ದೇಶ. ಮಲಗಿರುವ ಹಿಂದೂಗಳು ಎಚ್ಚರವಾಗದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.