ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಾವಿನ ಸರಣಿಗಳಿಗೆ ಕೊನೆ ಎಂದು?

ಯುಜಿಸಿ ವರದಿಯ ಪ್ರಕಾರ ದೇಶದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ನಡೆದ ಜಾತಿ ತಾರತಮ್ಯ ಕುರಿತಾದ ದೂರುಗಳು ಕಳೆದ ಐದು ವರ್ಷಗಳಲ್ಲಿ ಕನಿಷ್ಠ 118% ರಷ್ಟು ಏರಿಕೆಯಾಗಿದೆ. 2019-20ರಲ್ಲಿ 173 ದೂರುಗಳು, 2023-24ರಲ್ಲಿ 378 ದೂರುಗಳು ದಾಖಲಾಗಿರುವುದು ಸತ್ಯಾಂಶವನ್ನು ಬಿಚ್ಚಿಡುತ್ತವೆ ಹಾಗೂ ಕಳವಳಕ್ಕೆ ಪುಷ್ಟಿ ನೀಡುತ್ತಿವೆ. ಈ ಎಲ್ಲ ಕಾರಣದ ಭಾಗವಾಗಿ ಕ್ಯಾಂಪಸ್ ತ್ಯಾಗ ಮತ್ತು ಅರ್ಧಕ್ಕೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುತ್ತಿರುವುದು ಅಧಿಕ ಸಂಖ್ಯೆಯಲ್ಲಿದೆ.

ತಾರತಮ್ಯ

ಡಾ.ಎಲ್ಲಪ್ಪ ಜಿ. ಬಾಗಲಕೋಟೆ

ಶಿಕ್ಷಣ ಬಹುಜನರ ಸೊತ್ತು. ಅದು ವಿದ್ಯಾರ್ಥಿಗಳಲ್ಲಿ ತಮ್ಮ ಬದುಕಿಗೆಬೇಕಾದ ಸಹನೆ ಮತ್ತು ಆತ್ಮವಿಶ್ವಾಸ ಗಳನ್ನು ರೂಪಿಸುವಲ್ಲಿ ಸಾಧ್ಯವಾಗಿದೆಯೇ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳು ವುದು ಕಷ್ಟವಾಗುತ್ತಿದೆ. ನಿರಂತರವಾಗಿ ಆತ್ಮಹತ್ಯೆ ಸರಣಿಗಳು ನಡೆಯುತ್ತಿರುವುದರಿಂದ ಸಮರ್ಥನೆಗೆ ಅಶಕ್ತವಾಗುತ್ತದೆ. ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಾದ ಐಐಟಿ, ಐಐಎಂ ಮತ್ತು ಎನ್‌ಐಟಿಗಳಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ದೇಶಾದ್ಯಂತ ದೊಡ್ಡ ಕಳವಳಕ್ಕೆ ಕಾರಣವಾಗಿವೆ.

ತಲ್ಲಣಿಸದಿರು ಕಂಡ್ಯ ತಾಳು ಮನವೇ, ಈಸಬೇಕು ಇದ್ದು ಜೈಸಬೇಕು ಎಂದು ಹೇಳಿದ ದಾಸರ ಮಾತುಗಳು ಪ್ರಸ್ತುತ ವಿದ್ಯಮಾನಗಳಲ್ಲಿ ತಲ್ಲಣಗೊಳ್ಳುತ್ತಿವೆ. ತಾಳಲಾರದಷ್ಟು ಮನಸ್ಸು ತಲ್ಲಣ ಗೊಂಡಿತೇ? ಮುಂದೆ ಬಂದರೆ ಹಾಯಬೇಡಿ ಹಿಂದೆ ಬಂದರೆ ಒದೆಯಬೇಡಿ ಎಂದು ಮಾತೃ ಸಮಾನತೆಯ ಪರಂಪರೆಯನ್ನು ಹೇಳಿ ಕೊಡುವ ಈ ದೇಶದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಸರಣಿಗಳು ಬೆಚ್ಚಿ ಬೀಳಿಸುವಂತೆ ಮಾಡುತ್ತಿವೆ.

ಇಂತಹ ಸಾವುಗಳಿಗೆ ಕಾರಣವೇನು? ಎನ್ನುವುದಕ್ಕೆ ಮಾನಸಿಕ ಒತ್ತಡ, ಖಿನ್ನತೆ ಮತ್ತು ಜಾತಿ ತಾರತಮ್ಯ ದಂತಹ ಸಂಗತಿಗಳು ಜೋರಾಗಿ ಕೇಳಿ ಬರುತ್ತಿವೆ. ಇದು ನಿಜಕ್ಕೂ ಕೂಡ ಘನ ಘೋರ ವಾದದ್ದು. ಜ್ಞಾನದ ಬದಲಿಗೆ ಒತ್ತಡ ಮತ್ತು ಶೋಷಣೆಯನ್ನು ಉತ್ಪಾದಿಸುವ ಕೇಂದ್ರ ಗಳಾದವೇ? ಎನ್ನುವ ಗುಮಾನಿ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿವೆ.

ಇದನ್ನೂ ಓದಿ: S N Bhat Column: ಕಪಿಲ್‌ ಸಿಬಲ್‌ ಸೂತ್ರ: ಪ್ರಯೋಜನವೇನು ?

2021ರ ಡಿಸೆಂಬರ್‌ನಲ್ಲಿ, ಕೇಂದ್ರ ಸರ್ಕಾರವು ಸಂಸತ್ತಿಗೆ ನೀಡಿದ ಮಾಹಿತಿಯ ಪ್ರಕಾರ, 2014ರಿಂದ 2021ರ ಅವಧಿಯಲ್ಲಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಟ್ಟು 122 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ 122 ವಿದ್ಯಾರ್ಥಿಗಳಲ್ಲಿ 24 ಮಂದಿ ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯಕ್ಕೆ, 3 ಮಂದಿ ಪರಿಶಿಷ್ಟ ಪಂಗಡ (ಎಸ್‌ಟಿ) ಸಮುದಾಯಕ್ಕೆ ಹಾಗೂ 41 ಮಂದಿ ಇತರೆ ಹಿಂದುಳಿದ ವರ್ಗ (ಒಬಿಸಿ) ಸಮುದಾಯಕ್ಕೆ ಸೇರಿದವರಾಗಿದ್ದರು.

ಯುಜಿಸಿ ವರದಿಯ ಪ್ರಕಾರ ದೇಶದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ನಡೆದ ಜಾತಿ ತಾರತಮ್ಯ ಕುರಿತಾದ ದೂರುಗಳು ಕಳೆದ ಐದು ವರ್ಷಗಳಲ್ಲಿ ಕನಿಷ್ಠ 118% ರಷ್ಟು ಏರಿಕೆಯಾಗಿದೆ. 2019-20ರಲ್ಲಿ 173 ದೂರುಗಳು, 2023-24ರಲ್ಲಿ 378 ದೂರುಗಳು ದಾಖಲಾಗಿರುವುದು ಸತ್ಯಾಂಶ ವನ್ನು ಬಿಚ್ಚಿಡುತ್ತವೆ ಹಾಗೂ ಕಳವಳಕ್ಕೆ ಪುಷ್ಟಿ ನೀಡುತ್ತಿವೆ. ಈ ಎಲ್ಲ ಕಾರಣದ ಭಾಗವಾಗಿ ಕ್ಯಾಂಪಸ್ ತ್ಯಾಗ ಮತ್ತು ಅರ್ಧಕ್ಕೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುತ್ತಿರುವುದು ಅಧಿಕ ಸಂಖ್ಯೆಯಲ್ಲಿದೆ.

ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯಾದ ರೋಹಿತ್ ವೇಮುಲ ಎಂಬಾತ, 2015 ಡಿಸೆಂಬರ್ 18ರಂದು ಅಂದಿನ ಉಪಕುಲಪತಿಗಳಿಗೆ ಒಂದು ಪತ್ರ ಬರೆಯುತ್ತಾನೆ. ಆತನ ಇತರ ಅಂಶಗಳ ಜೊತೆಗೆ ಈ ಎರಡು ಅಂಶಗಳನ್ನು ಗಮನ ಹರಿಸಬೇಕಿದೆ. ಒಂದು, ಎಲ್ಲ ದಲಿತ ವಿದ್ಯಾರ್ಥಿಗಳಿಗೆ ಅವರ ದಾಖಲಾತಿ ಸಮಯದಲ್ಲಿ 10 ಮಿಲಿಗ್ರಾಂ ವಿಷ ಕೊಟ್ಟು ಬಿಡಿ. ಅದರ ಜೊತೆಗೆ ಅಂಬೇಡ್ಕರ್ ಕುರಿತು ಅಧ್ಯಯನ ಮಾಡಲು ಇಚ್ಛೆಯಾದಾಗ ಇದನ್ನು ಸೇವಿಸಿ ಎಂಬ ಆದೇಶವನ್ನು ಕೊಟ್ಟುಬಿಡಿ.

ಎರಡು, ದಲಿತ ವಿದ್ಯಾರ್ಥಿಗಳು ವಾಸಿಸುವ ಎಲ್ಲಾ ಕೋಣೆಗಳಿಗೆ ಚಂದದ ಒಂದು ಹಗ್ಗವನ್ನು ಒದಗಿಸಿ ಬಿಡಿ. ಈ ಪತ್ರ ಬರೆದ ಸರಿಯಾಗಿ ತಿಂಗಳ ಬಳಿಕ ಜನವರಿ, 17, 2016ರಂದು ನೇಣಿಗೆ ಶರಣಾದ. ಎಂತಹ ವಿಚಿತ್ರ ನೋಡಿ. ದರ್ಶನ್ ಸೋಲಂಕಿ (ಐಐಟಿ ಬಾಂಬೆ, 2023) ಜಾತೀಯ ತಾರತಮ್ಯ ಮತ್ತು ಮಾನಸಿಕ ಕಿರುಕುಳದ ಆರೋಪದಡಿ ದೊಡ್ಡ ಮಟ್ಟದ ತನಿಖೆಗೆ ಒಳಪಟ್ಟ ಪ್ರಕರಣಗಳಲ್ಲಿ ಈ ಸಾವೂ ಒಂದು.

ಸೋಲಂಕಿಯ ಸಾವಿನ ಪ್ರಕರಣವು ಮತ್ತೊಮ್ಮೆ ‘ಕೆಳಜಾತಿ’ ಎಂದು ಪರಿಗಣಿಸಲ್ಪಡುವ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳು ಎದುರಿಸುತ್ತಿರುವ ನಿರಂತರ ಜಾತಿ ತಾರತಮ್ಯದ ಸಮಸ್ಯೆಯನ್ನು ಬೆಳಕಿಗೆ ತಂದಿದೆ. ಇದಾದ ಮೂರು ವರ್ಷಗಳಲ್ಲಿಯೇ ಅದೇ ಸಂಸ್ಥೆಯಲ್ಲಿ ಸೆಪ್ಟೆಂಬರ್ 18, 2026ರಂದು ಸಾಹಿಲ್ ವಾಕೋಡೆ ಆತ್ಮಹತ್ಯೆ ಪ್ರಕರಣದ ಚರ್ಚೆ ಈಗ ತೀವ್ರ ಸ್ವರೂಪದಲ್ಲಿ ವ್ಯಕ್ತವಾಗುತ್ತಿದೆ.

ಸೆಪ್ಟೆಂಬರ್ 18ರಂದು ನಡೆದ ಮಧ್ಯಂತರ ಪರೀಕ್ಷೆಯ ವೇಳೆಯಲ್ಲಿ ಸಾಹಿಲ್ ಮೊಬೈಲ್ ಫೋನ್ ಮತ್ತು ಕೃತಕ ಬುದ್ಧಿಮತ್ತೆ ಬಳಸುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಪರೀಕ್ಷೆಯ ನಂತರ ಅವರು ತಮ್ಮ ಹಾಸ್ಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾದರು. ಅವರ ಪೋಷಕರು ತಮ್ಮ ಮಗನ ಸಾವಿಗೆ ಆಡಳಿತ ಮಂಡಳಿಯ ಕಿರುಕುಳ ಹಾಗೂ ಜಾತೀಯ ತಾರತಮ್ಯವೇ ಕಾರಣ ಎಂದು ಆರೋಪಿಸಿದ್ದಾರೆ.

ಈ ಘಟನೆಯ ನಂತರ ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿ, ಪಾರದರ್ಶಕ ತನಿಖೆಗೆ ಆಗ್ರಹಿಸಿದರು. ವಿದ್ಯಾರ್ಥಿಗಳು 18 ಪ್ರಮುಖ ಬೇಡಿಕೆ ಗಳನ್ನು ಆಡಳಿತ ಮಂಡಳಿಯ ಮುಂದಿಟ್ಟಿದ್ದು, ಪ್ರಾಧ್ಯಾಪಕರ ಅಮಾನತು ಹಾಗೂ ಮಾನಸಿಕ ಆರೋಗ್ಯ ಬೆಂಬಲ ವ್ಯವಸ್ಥೆಯನ್ನು ಬಲಪಡಿಸಲು ಒತ್ತಾಯಿಸಿ‌ದ್ದಾರೆ.. ವಿದ್ಯಾರ್ಥಿಯ ಕುರಿತು ತನಿಖೆ ಪೂರ್ಣಗೊಳ್ಳುವ ಮುನ್ನವೇ ಪರೀಕ್ಷಾ ಅಕ್ರಮದ ವಿವರಗಳನ್ನು ಬಹಿರಂಗಪಡಿಸಿದ್ದಕ್ಕಾಗಿ ಆಡಳಿತ ಮಂಡಳಿಯು ಬಹಿರಂಗ ಕ್ಷಮೆಯಾಚಿಸಿದೆ.

ಆರೋಪಕ್ಕೆ ಒಳಗಾದವರನ್ನು ಡೀನ್ ಹುದ್ದೆಯಿಂದ ತೆರವುಗೊಳಿಸಲಾಗಿದೆ. ಪ್ರಕರಣದ ನಂತರ ಈ ರೀತಿಯಾದ ವಿಧಿ ವಿಧಾನಗಳು ನಡೆಯುವ ಸಂಪ್ರದಾಯಗಳು. ಆದರೆ ಹೋದ ಜೀವವಂತೂ ಮರಳಿ ತರಲಾಗದು. ಹೀಗೆ ಒಂದಲ್ಲ ಒಂದು ಕಾರಣಕ್ಕಾಗಿ ಸಾವಿನ ಮೆರವಣಿಗೆಯ ಸರಣಿಗಳಿಗೆ ಕೊನೆ ಎಂದು?