ಅಶ್ವತ್ಥಕಟ್ಟೆ
ರಾಜ್ಯದಲ್ಲಿ ಐತಿಹಾಸಿಕ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ಸಣ್ಣದಾಗಿ ಕೇಳಿಬರುತ್ತಿರುವ ಪ್ರಶ್ನೆಯೆಂದರೆ ಪವರ್ ಶೇರಿಂಗ್ ವಿಷಯಕ್ಕೆ ಸಂಬಂಧಿಸಿದ್ದು. ಪವರ್ ಶೇರಿಂಗ್ ವಿಷಯದಲ್ಲಿ ಯಾರಿಗೂ ಸ್ಪಷ್ಟನೆ ಇಲ್ಲದಿದ್ದರೂ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವ ಕುಮಾರ್ ಬಣಗಳ ನಾಯಕರು ತಮ್ಮದೇ ಆದ ವ್ಯಾಖ್ಯಾನಗಳನ್ನು ಮಾಡುತ್ತಿದ್ದಾರೆ.
ಒಪ್ಪಂದವಾಗಿದೆ ಎನ್ನುವ ವಾದವನ್ನು ಈವರೆಗೆ ಯಾರೊಬ್ಬರೂ ಒಪ್ಪಿಕೊಳ್ಳದಿದ್ದರೂ ಆಗಾಗ್ಗೆ ‘ಆತ್ಮಸಾಕ್ಷಿಯ’ ಮಾತಿನ ಮೂಲಕ ಒಪ್ಪಂದ ನಡೆದಿದೆ ಎನ್ನುವ ಮಾತನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೆನಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಒಪ್ಪಂದವೇನು? ಮುಂದೇನು? ಎನ್ನುವ ಪ್ರಶ್ನೆಗೆ ಆರು ಜನರನ್ನು ಹೊರತುಪಡಿಸಿ ಇನ್ನುಳಿದವರೆಲ್ಲ ಉತ್ತರಿಸುತ್ತಿರುವುದೇ ಇಂದಿನ ಈ ಗೋಜಲಿಗೆ ಕಾರಣವೆಂದರೆ ತಪ್ಪಾಗುವುದಿಲ್ಲ.
ಅಷ್ಟಕ್ಕೂ ಆಗಿರುವ ಒಪ್ಪಂದವೇನು ಎನ್ನುವ ಪ್ರಶ್ನೆ ಬಂದಾಗಲೆಲ್ಲ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ‘ತೇಲಿಸಿ’ ಮಾತಾಡುತ್ತಿದ್ದಾರೆ. ಈ ಹಿಂದೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಯಾವುದೇ ಒಪ್ಪಂದವಾಗಿಲ್ಲ ಎಂದು ಸಿದ್ದರಾಮಯ್ಯ ನುಡಿದಿದ್ದರೆ, ‘ಆಗಿದೆ’ ಎನ್ನುವ ಮಾತನ್ನು ಡಿ.ಕೆ.ಶಿವಕುಮಾರ್ ಹೇಳಿದ್ದರು.
ಅದಾದ ಬಳಿಕ ಈ ವಿಷಯ ಬಂದಾಗಲೆಲ್ಲ, ಜಾರಿಕೊಳ್ಳುವ ಪ್ರಯತ್ನವನ್ನು ಇಬ್ಬರೂ ನಾಯಕರು ಮಾಡಿದ್ದಾರೆ. ಬದಲಾವಣೆಯ ಮಾತು ಬಂದಾಗಲೆಲ್ಲ ಸಿದ್ದರಾಮಯ್ಯ ಅವರು, “ಹೈಕಮಾಂಡ್ ತೀರ್ಮಾನವೇ ಅಂತಿಮ" ಎನ್ನುತ್ತಿದ್ದರೆ, ಡಿ.ಕೆ.ಶಿವಕುಮಾರ್ ಅವರು “ಪ್ರಯತ್ನ ಫಲಿಸದಿದ್ದರೂ, ಪ್ರಾರ್ಥನೆ ಫಲಿಸುತ್ತದೆ" ಎನ್ನುವ ಹೇಳಿಕೆಗೆ ಗಟ್ಟಿಯಾಗಿ ನಿಂತಿದ್ದಾರೆ. ಈ ಹೇಳಿಕೆಗಳ ಹೊರತಾಗಿ ಯೂ ಇಬ್ಬರು ನಾಯಕರು ತಮ್ಮದೇ ಆದ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.
ಸಂಪುಟ ಪುನಾರಚನೆ ಮಾಡಿಕೊಳ್ಳುವ ಮೂಲಕ ನಾಯಕತ್ವ ಬದಲಾವಣೆ ಚರ್ಚೆಗೆ ‘ಫುಲ್‌ಸ್ಟಾಪ್’ ಇಡುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡುತ್ತಿದ್ದರೆ, ಡಿ.ಕೆ.ಶಿವಕುಮಾರ್ ಅವರು ಸಂಪುಟ ಪುನಾರಚನೆಗೂ ಮೊದಲೇ ಹೈಕಮಾಂಡ್ ತಮಗೆ ನೀಡಿದೆ ಎನ್ನಲಾಗುತ್ತಿರುವ ‘ವರ’ವನ್ನು ನೆನಪಿಸಿ ಪಡೆದುಕೊಳ್ಳುವ ಉತ್ಸಾಹದಲ್ಲಿದ್ದಾರೆ.
ಈ ಅಧಿಕಾರ ಹಂಚಿಕೆಯ ಗೊಂದಲ, ಗೋಜಲುಗಳು ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಇದ್ದೇ ಇತ್ತು. ಕೆಲವರು ‘30-30 ತಿಂಗಳು’ ಅಂದರೆ ಎರಡೂವರೆ ವರ್ಷ ಸಮಾನ ಹಂಚಿಕೆ ಎಂದರೆ, ಇನ್ನು ಕೆಲವರು ‘ಮೂರು ವರ್ಷ, ಎರಡು ವರ್ಷ’ ಎಂದು ಹೇಳಿದ್ದರು. ಇನ್ನೂ ಕೆಲವರು ಚುನಾವಣಾ ವರ್ಷದಲ್ಲಿ ಸಿದ್ದರಾಮಯ್ಯ ಅವರು ಡಿಕೆಗೆ ಸ್ಥಾನ ಬಿಟ್ಟುಕೊಡಬಹುದು ಎನ್ನುವ ಥಿಯರಿಯನ್ನು ಹೇಳಿದರು. ಆದರೆ, ಈ ಮಾತುಗಳನ್ನು ಹೇಳುವ ಎಲ್ಲರಿಗೂ ಅಂದಿನ ಸಭೆಯಲ್ಲಿ ಅಧಿಕಾರ ಹಂಚಿಕೆಯ ಸೂತ್ರ ಯಾವ ರೀತಿಯಲ್ಲಾಗಿದೆ ಎನ್ನುವ ಕಲ್ಪನೆಯಿಲ್ಲ ಎನ್ನುವುದು ವಾಸ್ತವ.
ಏಕೆಂದರೆ, ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮಾತ್ರ ಹಾಜರಿದ್ದರು. ಇನ್ನುಳಿದಂತೆ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಿಡಿಯೊ ಕಾಲ್‌ನಲ್ಲಿ ಮಾತಾಡಿದ್ದರು.
ಸಭೆ ನಡೆದ ಕೋಣೆಯಲ್ಲಿ ಈ ಆರು ಜನರನ್ನು ಬಿಟ್ಟು ಇನ್ಯಾರಿಗೂ ಪ್ರವೇಶವೂ ಇರಲಿಲ್ಲ. ಆದ್ದರಿಂದ ಆ ಸಭೆಯಲ್ಲಿ ಏನಾಯಿತು ಎನ್ನುವುದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ‘ಆತ್ಮಸಾಕ್ಷಿ’ಗೆ ಮಾತ್ರ ಗೊತ್ತಿದೆ. ಈ ಇಬ್ಬರನ್ನುಬಿಟ್ಟರೆ ರಾಹುಲ್ ಗಾಂಧಿ ಅವರಿಂದ ವಿಷಯ ತಿಳಿದುಕೊಳ್ಳಲು ರಾಜ್ಯ ನಾಯಕರಿಗೆ ಸಾಧ್ಯವಿಲ್ಲ.
ಇನ್ನುಳಿದಂತೆ ಸಭೆಯಲ್ಲಿದ್ದ ಖರ್ಗೆ, ವೇಣುಗೋಪಾಲ್ ಹಾಗೂ ಸುರ್ಜೇವಾಲ ಅವರಿಗೆ ಈ ಸಭೆ ಯಲ್ಲಿನ ತೀರ್ಮಾನದ ‘ಸೂಕ್ಷ್ಮತೆ’ಯ ಅರಿವು ಇರುವುದರಿಂದ ಯಾರೊಂದಿಗೂ ಸಭೆಯ ವಿಷಯ ವನ್ನು ಹಂಚಿಕೊಂಡಿಲ್ಲ. ಸಿದ್ದರಾಮಯ್ಯ ಅವರು ‘ಏನೂ ಆಗಿಲ್ಲ’ ಎನ್ನುವ ಮಾತನ್ನು ಹೇಳಿದ್ದರೆ, ಡಿ.ಕೆ.ಶಿವಕುಮಾರ್ ಅವರು ‘ಎಲ್ಲಕ್ಕೂ ಕಾಲವೇ ಉತ್ತರಿಸಲಿದೆ’ ಎನ್ನುವ ಮಾತನ್ನು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.
ಇದರೊಂದಿಗೆ ಬದಲಾವಣೆಯ ಒಪ್ಪಂದವಾಗಿದ್ದರೆ ಅದನ್ನು ಬಹಿರಂಗಗೊಳಿಸಿದರೆ ಸರಕಾರ ನಡೆಸಲಾಗುವುದಿಲ್ಲ ಎನ್ನುವ ಕಾರಣಕ್ಕೆ ಪ್ರಮಾಣ ವಚನದ ಸಮಯದಲ್ಲಿ ಯಾವುದೇ ಸ್ಪಷ್ಟತೆ ಯನ್ನು ಹೈಕಮಾಂಡ್ ನೀಡಿಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಈ ವಿಷಯಕ್ಕೆ ಆಸ್ಪದ ನೀಡಿಲ್ಲ. ಹೀಗಿರುವಾಗ, ಈ ಆರು ಮಂದಿಯ ನಡುವೆ ನಡೆದಿರುವ ಸಭೆಯ ಮಾಹಿತಿ ಹೊರಗೆ ಬಂದಿಲ್ಲ ಎನ್ನುವುದಾದರೆ ನಾಯಕತ್ವ ಬದಲಾವಣೆ ಒಪ್ಪಂದ ಆಗಿದೆಯೋ ಇಲ್ಲವೋ ಎನ್ನುವ ಬಗ್ಗೆ ಯಾವ ಆಧಾರದಲ್ಲಿ ಮಾತಾಡಲು ಸಾಧ್ಯ? ಸದ್ಯ ಕರ್ನಾಟಕದ ಪಾಲಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂ ಮುಖ್ಯರಾಗಿರುವುದರಿಂದ ಪಕ್ಷದ ಹೈಕಮಾಂಡ್ ಸಹ ಈ ವಿಷಯದಲ್ಲಿ ಸ್ಪಷ್ಟ ತೀರ್ಮಾನ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.
ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಈ ಮುಸುಕಿನೊಳಗಿನ ಗುದ್ದಾಟವನ್ನು ಬಗೆಹರಿಸುವುದಕ್ಕೆ ಇರುವ ಸುಲಭ ಮಾರ್ಗವೆಂದರೆ ಅದು ‘ಗಾಂಧಿ ಕುಟುಂಬ’ದಿಂದ ಸಂದೇಶ ರವಾನೆ. ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಅವರು ಈ ಇಬ್ಬರಲ್ಲಿ ಯಾರಿಗೇ ‘ಹೊಂದಾಣಿಕೆ’ ಮಾಡಿಕೊಳ್ಳಿ ಎನ್ನುವ ಸಂದೇಶ ರವಾನಿಸಿದರೂ, ಅಲ್ಲಿಗೆ ಕುರ್ಚಿ ಕಾದಾಟಕ್ಕೆ ತೆರೆ ಬೀಳಲಿದೆ. ಆದರೆ ಈ ಮಾತನ್ನು ಯಾರಿಗೆ ಹೇಳಬೇಕು ಎನ್ನುವ ಗೊಂದಲ ಇಂದಿನ ಈ ಸಮಸ್ಯೆಗೆ ಕಾರಣ ಎಂದರೆ ತಪ್ಪಾಗುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಾಲಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಾಗಲಿ ಅವರದ್ದೇ ಕಾರಣಗಳಿಗೆ ಸೋನಿಯಾ ಗಾಂಧಿ ಮಾತಿಗೆ ಕಟ್ಟುಬೀಳುವುದರಲ್ಲಿ ಅನುಮಾನವಿಲ್ಲ.
ಆದರೆ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಉದಯಿಸಿದ್ದ ‘ನಾಯಕತ್ವ’ದ ಸಮಸ್ಯೆ ಯಿಂದ ಪಾರಾಗಲು ಇಬ್ಬರಿಗೂ ಸೋನಿಯಾ ಹಾಗೂ ರಾಹುಲ್ ಗಾಂಧಿ ಕೊಟ್ಟಿರುವ ಮಾತುಗಳೇ ಹೈಕಮಾಂಡ್ ಅನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿವೆಯೇ ಎನ್ನುವ ಪ್ರಶ್ನೆಗೆ ನಾಯಕರ ಬಳಿ ಉತ್ತರವಿಲ್ಲ. ಇದ್ದರೂ ಈ ಹಂತದಲ್ಲಿ ‘ಬಾಯಿ’ ಬಿಡಲು ಸಿದ್ಧರಿಲ್ಲ.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದು 30 ತಿಂಗಳು ಅಂದರೆ ಎರಡೂವರೆ ವರ್ಷದ ಹೊಸ್ತಿಲಿನಲ್ಲಿ ಈ ರೀತಿಯ ಗೊಂದಲ ಸೃಷ್ಟಿಯಾಗುವುದು ನಿಶ್ಚಿತ ಎನ್ನುವುದು ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಸಿಎಂ ಹಾಗೂ ಡಿಸಿಎಂ ಇಬ್ಬರಿಗೂ ತಿಳಿದಿತ್ತು. ಆಗಾಗ್ಗೆ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಗಳಾಗುತ್ತಿದ್ದರೂ, ಹೈಕಮಾಂಡ್ ಎಚ್ಚರಿಕೆಯ ಬಳಿಕ ಎಲ್ಲವೂ ಬೂದಿ ಮುಚ್ಚಿದ ಕೆಂಡ ವಾಗಿತ್ತು. ಆದರೆ ‘ಬೂದಿ ಮುಚ್ಚಿದ್ದ ಕೆಂಡವಾಗಿದ್ದ’ ರಾಜ್ಯ ಕಾಂಗ್ರೆಸ್‌ನಲ್ಲಿ ಕಾಡ್ಗಿಚ್ಚಾಗುವಂತೆ ಮಾಡಿದ್ದು ಮಾತ್ರ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರ ಉತ್ತರಾಧಿಕಾರಿ ಹೇಳಿಕೆ. ಈ ಹೇಳಿಕೆಯ ಬೆನ್ನಲ್ಲೇ, ದಲಿತ ಮುಖ್ಯಮಂತ್ರಿ ಹಾಗೂ ಬಿಹಾರ ವಿಧಾನಸಭಾ ಚುನಾವಣೆ ಬಳಿಕ ಸಿದ್ದರಾಮಯ್ಯ ಅವರು ದೆಹಲಿಗೆ ಹೋಗುವುದಾಗಿ ಹೇಳುತ್ತಿದ್ದಂತೆ, ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಒಂದು ಸುತ್ತು ಹಾಕಿಬಂದರು.
ಈ ವೇಳೆ ಯಾರನ್ನು ಭೇಟಿಯಾಗಿದ್ದಾರೆ ಎನ್ನುವ ವಿಷಯದಲ್ಲಿ ಈಗಲೂ ಹಲವು ರೀತಿಯ ‘ಥಿಯರಿ’ಗಳಿವೆ. ಈ ಎಲ್ಲ ಥಿಯರಿಗಳ ಹೂರಣವೆಂದರೆ ಅದು ‘ಅಧಿಕಾರ ಹಂಚಿಕೆಯ ಸೂತ್ರ’ ಎನ್ನುವುದು ಸ್ಪಷ್ಟ. ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿದ್ದ ಸಮಯದಲ್ಲಿ ಹೈಕಮಾಂಡ್ ಮಟ್ಟ ದಲ್ಲಿ ಯಾರನ್ನೂ ಅಧಿಕೃತವಾಗಿ ಭೇಟಿಯಾಗಿಲ್ಲ. ಆದರೆ ಭೇಟಿಯ ಮೂಲಕ ಸಂದೇಶ ರವಾನಿ ಸುವ ಪ್ರಯತ್ನವನ್ನು ಮಾಡಿದ್ದರು. ಅದಕ್ಕೆ ಪೂರಕವಾಗಿಯೇ, ಡಿಕೆಶಿ ದೆಹಲಿಗೆ ತೆರಳುತ್ತಿದ್ದಂತೆ, ಸಿದ್ದರಾಮಯ್ಯ ಆಪ್ತರು ‘ನಾಯಕತ್ವ’ ಬದಲಾವಣೆಯಿಲ್ಲ ಎನ್ನುವ ಕೂಗನ್ನು ಶುರು ಮಾಡಿದರು.
ಈ ಎಲ್ಲ ಗೊಂದಲಗಳ ನಡುವೆಯೂ ಡಿ.ಕೆ.ಶಿವಕುಮಾರ್ ಅವರು ಮಾತ್ರ ಮಹಾಮೌನಕ್ಕೆ ಜಾರಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ. ಈ ಮೌನದ ಹಿಂದೆ ಹತ್ತಾರು ಆಲೋಚನೆ ಗಳಿದ್ದರೂ, ಅವರು ‘ಆತ್ಮಸಾಕ್ಷಿ’ಯ ಮಾತನ್ನು ಆಡುತ್ತಿರುವುದನ್ನು ನೋಡಿದರೆ ದೆಹಲಿಯಲ್ಲಿ ಅಧಿಕಾರ ಹಂಚಿಕೆಯ ಸೂತ್ರ ಸಿದ್ಧಪಡಿಸುವುದಕ್ಕೆ ನಡೆದ ಸಭೆಯಲ್ಲಿ ಏನೆಲ್ಲ ಚರ್ಚೆಗಳಾಗಿವೆ ಎನ್ನುವ ಕಲ್ಪನೆಗಳಿಗೆ ಮತ್ತಷ್ಟು ಹೊಸ ಕುತೂಹಲಗಳಿಗೆ ಅದು ನಾಂದಿ ಹಾಡುವಂತಿದೆ.
2023ರಲ್ಲಿ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ವಾರಗಟ್ಟಲೇ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ನಡೆದಿದೆ, ನಡೆದಿಲ್ಲ ಎನ್ನಲಾಗುತ್ತಿರುವ ಒಪ್ಪಂದದ ಬಗ್ಗೆ ಈ ಆರು ಜನರನ್ನು ಬಿಟ್ಟು ಇನ್ಯಾರಿಗೂ ಗೊತ್ತಿಲ್ಲ. ಹೀಗಿರುವಾಗ, ಈ ಆರು ಮಂದಿಯನ್ನು ಬಿಟ್ಟು ಇನ್ಯಾರೇ ಈ ಬಗ್ಗೆ ಮಾತನಾಡಿದರೂ, ಉತ್ತರಾಧಿಕಾರಿ, ನಾಯಕತ್ವ ಬದಲಾವಣೆ, ಪವರ್ ಶೇರಿಂಗ್ ನ ಮಾತುಗಳನ್ನು ಆಡಿದರೂ ಅದು ‘ಅಧಿಕೃತ’ವಲ್ಲ ಎನ್ನುವುದು ವಾಸ್ತವ.
ಆದರೂ ತಮ್ಮ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳಲು, ತಮ್ಮ ತಮ್ಮ ನಾಯಕರನ್ನು ಒಲಿಸಿ ಕೊಳ್ಳಲು ಅಥವಾ ಇಬ್ಬರ ಕಿತ್ತಾಟದಲ್ಲಿ ನಮಗೇನಾದರೂ ಲಾಭವಾಗಬಹುದೇ ಎನ್ನುವ ಕಾರಣಕ್ಕೆ ‘ಕೇಳಿಸಿಕೊಂಡದ್ದು, ತಿಳಿದುಕೊಂಡದ್ದನ್ನು’ ಮುಂದಿಟ್ಟುಕೊಂಡು ಕಾಂಗ್ರೆಸ್‌ನ ಎಲ್ಲ ನಾಯಕರೂ ಮಾತನಾಡುತ್ತಿದ್ದಾರೆ. ಈ ಅಂತೆ-ಕಂತೆ ಕಥೆಗಳಿಂದ ಪಕ್ಷಕ್ಕೆ ಆಗುವ ಲಾಭವೇನು ಎನ್ನುವುದು ಯಾರಿಗೂ ಗೊತ್ತಿಲ್ಲ.
ಸದ್ಯ ಬಿಹಾರ ವಿಧಾನಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಕರ್ನಾಟಕ ಕಾಂಗ್ರೆಸ್‌ನ ಗೊಂದಲವನ್ನು ಮುಂದೂಡುವ ಲೆಕ್ಕಾಚಾರದಲ್ಲಿ ದೆಹಲಿಯಲ್ಲಿರುವ ನಾಯಕರು ಪ್ರಯತ್ನಿಸು ತ್ತಿದ್ದಾರೆ. ಆದರೆ ಆ ರಾಜ್ಯದ ಫಲಿತಾಂಶ ಬಂದ ಬಳಿಕ ಈ ಎಲ್ಲ ಗೊಂದಲಗಳಿಗೆ ರಾಹುಲ್ ಗಾಂಧಿ ಅವರು ತೆರೆ ಎಳೆಯುವ ಪ್ರಯತ್ನವನ್ನು ಮಾಡಲೇಬೇಕು.
ಇಲ್ಲದೇ ಹೋದರೆ, ಈಗಿರುವ ಹತ್ತಾರು ‘ಕಥೆ’ಗಳಿಗೆ ಮುಂದಿನ ದಿನದಲ್ಲಿ ಇನ್ನೂ 10 ಹೆಚ್ಚುವರಿ ಕಥೆಗಳು ಸೇರಿಕೊಂಡರೂ ಅಚ್ಚರಿಯಿಲ್ಲ. ಸಿಕ್ಕರೆ ಒಂದು ಅವಕಾಶ ನೋಡಿಯೇ ಬಿಡೋಣ ಎಂದು ಕೆಲವರು ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವಂತೆ, ಮುಂದಿನ ದಿನದಲ್ಲಿ ಈ ಸಂಖ್ಯೆ ಕೈ ಮೀರುವ ಹಂತ ತಲುಪುವದರಲ್ಲಿ ಅನುಮಾನವೂ ಇಲ್ಲ.
ಕೊನೆಯದಾಗಿ ಇತರೆ ರಾಜ್ಯಗಳಲ್ಲಿನ ನಾಯಕತ್ವದ ಕೊರತೆಯು ದೆಹಲಿ ನಾಯಕರಿಗೆ ತಲೆ ನೋವಾಗಿದ್ದರೆ, ಕರ್ನಾಟಕದಲ್ಲಿ ನಾಯಕತ್ವ ಹೆಚ್ಚಾಗಿ ತಲೆಬಿಸಿಯಾಗುತ್ತಿದೆ ಎಂದರೆ ತಪ್ಪಾಗುವು ದಿಲ್ಲ. ಒಟ್ಟಾರೆ, ಕಾಂಗ್ರೆಸ್ ಪಾಲಿಗೆ ಪ್ರಮುಖ ರಾಜ್ಯ ಎನಿಸಿರುವ ಕರ್ನಾಟಕದಲ್ಲಿನ ಆಂತರಿಕ ಬೇಗುದಿಯನ್ನು ಶಮನ ಮಾಡುವಲ್ಲಿ ಹೈಕಮಾಂಡ್ ಸಫಲವಾಗುವುದೋ ಅಥವಾ ಸಿದ್ದು-ಡಿಕೆಯಲ್ಲಿ ಒಬ್ಬರನ್ನು ಸಮಾಧಾನಪಡಿಸುವಲ್ಲಿ ವಿಫಲವಾಗಿ ಏನಾಗುವುದೋ ಆಗಲಿ ಎಂದು ಕೈಚೆಲ್ಲಿ ಕೂರುವುದೋ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.