ಅಶ್ವತ್ಥಕಟ್ಟೆ
ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಕಳೆದ ಎರಡು ವಾರಗಳಿಂದ ಯಾವ ಕಡೆ ಹೊರಳಿದರೂ, ‘ಸ್ಟಿಂಗ್’ ಮಾಯೆಯ ಸುತ್ತಲೇ ಇಡೀ ರಾಜಕಾರಣ ಗಿರಕಿ ಹೊಡೆಯುತ್ತಿದೆ. ಕುಟುಕು ಕಾರ್ಯಚರಣೆ ಎನ್ನುವ ‘ಕುಟುಕಿ’ನ ಎಚ್ಚರಿಕೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ನೀಡಿದ್ದ ದಿನದಿಂದ ಈ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಅದರಲ್ಲಿಯೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಈ ಪ್ರಕರಣದಲ್ಲಿ ತಳುಕುಹಾಕಿಕೊಂಡ ಬಳಿಕ ಇಡೀ ಪ್ರಕರಣದ ಗಂಭೀರತೆ ಮತ್ತೊಂದು ಸ್ತರಕ್ಕೆ ಹೋಗಿದೆ ಎಂದರೆ ತಪ್ಪಾಗುವುದಿಲ್ಲ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ‘ಸ್ಟಿಂಗ್’ ಆಪರೇಷನ್ ಬಗ್ಗೆ ಎಚ್ಚರಿಕೆಯ ಪಾಠ ಮಾಡಿದ ದಿನದಿಂದ ರಾಜ್ಯದಲ್ಲಿ ಕುಟುಕು ಕಾರ್ಯಚರಣೆ ಬಗ್ಗೆಯೇ ದಿನಕ್ಕೊಂದು ಸುದ್ದಿ, ಚರ್ಚೆ, ವಿಶ್ಲೇಷಣೆಗಳು ಬರುತ್ತಿದೆ. ಅದರಲ್ಲಿಯೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರು, ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯಲು ಸ್ಟಿಂಗ್ ಆಪರೇಷನ್ ಕಾರಣ ಎನ್ನುವ ಆರೋಪ ಮಾಡಿದ ಬಳಿಕ ಇಡೀ ವಿಷಯ ಮತ್ತೊಂದು ಮಗ್ಗಲಿನಲ್ಲಿ ಚರ್ಚೆ ಯಾಗುತ್ತಿದೆ.
ಕುಮಾರಸ್ವಾಮಿ ಆರೋಪಕ್ಕೆ ಕಾಂಗ್ರೆಸ್ ಪ್ರತ್ಯಾರೋಪ, ರಾಕೇಶ್ ಶೆಟ್ಟಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ, ಅದಕ್ಕೆ ದೇವೇಗೌಡರ ಆಡಿಯೊ ಬಹಿರಂಗದ ಬೆಳವಣಿಗೆ ಸ್ಟಿಂಗ್ ಆಪರೇಷನ್ನ ಕರಾಳತೆ, ಯಾರೆಲ್ಲ ಈ ಜಾಲಕ್ಕೆ ಸಿಲುಕಿದ್ದಾರೆ ಎನ್ನುವ ಆತಂಕವನ್ನು ಸೃಷ್ಟಿಸಿದೆ. ಸಚಿವರುಗಳಿಗೆ ಡಿ.ಕೆ.ಶಿವಕುಮಾರ್ ನೀಡಿದ ‘ಎಚ್ಚರಿಕೆಯ ಪಾಠ’ದ ಬಳಿಕ ಇಡೀ ಪ್ರಕರಣವನ್ನು ಜೀವಂತ ವಾಗಿಡಲು ಏನೆಲ್ಲ ಸಾಧ್ಯವೋ ಅದನ್ನು ಕುಮಾರಸ್ವಾಮಿ ಮುಂದುವರೆಸಿದ್ದಾರೆ. ಈ ವಿಷಯದಲ್ಲಿ ಡಿ.ಕೆ.ಶಿವಕುಮಾರ್ ಸೇರಿದಂತೆ ಬಹುತೇಕ ನಾಯಕರು ಮೌನಕ್ಕೆ ಶರಣಾಗಿದ್ದರೂ, ಜೆಡಿಎಸ್ ಈ ವಿಷಯಕ್ಕೆ ಇನ್ನಷ್ಟು ಜೀವ ತುಂಬುವ ಪ್ರಯತ್ನದಲ್ಲಿದೆ ಎಂದರೆ ತಪ್ಪಾಗುವುದಿಲ್ಲ.
ಇದನ್ನೂ ಓದಿ: Ranjith H Ashwath Column: ಹೋರಾಟ ಎಸ್ʼಐಆರ್ ವಿರುದ್ಧವೋ ಸರಕಾರದ ವಿರುದ್ಧವೋ ?
ಹಾಗೆ ನೋಡಿದರೆ, ಕಳೆದ 15 ದಿನಗಳಿಂದ ಸ್ಟಿಂಗ್ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನಿರಂತರವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಇಡೀ ಸರಕಾರವನ್ನು ಟಾರ್ಗೆಟ್ ಮಾಡಿಕೊಂಡು ಬರುತ್ತಿದ್ದಾರೆ. ನಿರಂತರವಾಗಿ ಸುದ್ದಿಗೋಷ್ಠಿ, ಪೊಲೀಸ್ ಆಯುಕ್ತರ ಕಚೇರಿ ಮುಂಭಾಗ ಪ್ರತಿಭಟನೆ, ರಾಕೇಶ್ ಶೆಟ್ಟಿ ಬಂಧಿಸಲು ಆಗ್ರಹಿಸಿ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡುವ ಮೂಲಕ ‘ಟಾಕ್ ಆಫ್ ದಿ ಟೌನ್’ ಆಗಿದ್ದಾರೆ.
ಒಂದು ಪ್ರತಿಪಕ್ಷದ ನಾಯಕನಾಗಿ ಕುಮಾರಸ್ವಾಮಿ ಅವರು ನಡೆದುಕೊಳ್ಳುತ್ತಿರುವ ರೀತಿ ಸರಿಯಾಗಿಯೇ ಇದೆ ಎನ್ನುವುದು ಅನೇಕರ ವಾದವಾಗಿದೆ. ಆದರೆ ಕುಮಾರಸ್ವಾಮಿ ಅವರ ಈ ಅಬ್ಬರದ ನಡುವೆ ಬಿಜೆಪಿಯ ಮಹಾಮೌನ ಹಲವು ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಬಿಜೆಪಿಯ ಮಹಾಮೌನ ಪ್ರತಿಪಕ್ಷವಾಗಿ ಬಿಜೆಪಿ ಸಿಕ್ಕ ‘ಉತ್ತಮ’ ಅವಕಾಶವನ್ನು ಬಳಸಿಕೊಳ್ಳಲಿಲ್ಲ ಎನ್ನುವುದು ಒಂದು ವಾದವಾಗಿದೆ.
ಅದರಲ್ಲಿಯೂ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಮಾಡಿರುವ ಆರೋಪ ಕೇಳಿಬಂದಿರುವುದರಿಂದ ಈ ವಿಷಯವನ್ನು ಎತ್ತಿಕೊಂಡು ಹಿಂದುಳಿದ ಹಾಗೂ ದಲಿತ ಮತಗಳನ್ನು ಕಾಂಗ್ರೆಸ್ನಿಂದ ಸಣ್ಣ ಪ್ರಮಾಣ ದಲ್ಲಿ ಆದರೂ ಕಿತ್ತುಕೊಳ್ಳುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡಬೇಕಿತ್ತು ಎನ್ನುವ ಮಾತಿದೆ. ಇನ್ನೊಂದೆಡೆ ಈ ಸ್ಟಿಂಗ್ ಕೆಸರನ್ನು ಮೈ ಎಲ್ಲ ಕೆಸರು ಮಾಡಿಕೊಳ್ಳುವ ಬದಲು, ಬಿಜೆಪಿ ನಾಯಕರು ಅಂತರ ಕಾಯ್ದುಕೊಂಡು ಜಾಣ ನಡೆ ಅನುಸರಿಸುತ್ತಿದ್ದಾರೆ ಎನ್ನುವುದು ಮತ್ತೊಂದು ವಾದ.
ಈ ಸ್ಟಿಂಗ್ ಆಪರೇಷನ್ ವಿಷಯ ಶುರುವಾಗಿದ್ದು, ‘ಕಾಂಗ್ರೆಸ್’ನೊಳಗಿನ ಅಂತಃಕಲಹದ ಕಾರಣಕ್ಕೆ. ಆದರೆ ಈ ಅಂತಃಕಲಹದಲ್ಲಿ ಕೈಹಾಕಲು ಹೋದರೆ ಇಡೀ ಪ್ರಕರಣ ‘ಕಲಕಿ’ದಂತಾಗುತ್ತದೆ. ಇನ್ನು ಈ ವಿಷಯವನ್ನು ಎತ್ತುಕೊಳ್ಳುವುದರಿಂದ ‘ಟಾಕ್ ಆಫ್ ದಿ ಟೌನ್’ ಆಗುವುದು ಒಂದು ಭಾಗ. ಒಂದು ವೇಳೆ ಈ ಟೀಕೆ-ಪ್ರತಿ ಟೀಕೆಗಳು ಶುರುವಾಗಿ, ಬಿಜೆಪಿ ನಾಯಕರ ವಿಷಯಗಳನ್ನು ಎತ್ತಿಕೊಂಡರೆ ಸಾರ್ವಜನಿಕವಾಗಿ ತೀವ್ರ ಮುಜುಗರ ಅನುಭವಿಸಬೇಕಾಗುತ್ತದೆ.
ಒಬ್ಬರ ಬಟ್ಟೆ ಬಿಚ್ಚಲು ಹೋಗಿ, ತಾನೇ ಬೆತ್ತಲಾದರೆ ಎನ್ನುವ ಆತಂಕ ಕೇವಲ ಬಿಜೆಪಿ ನಾಯಕರಿಗೆ ಮಾತ್ರವಲ್ಲದೇ, ಕಾಂಗ್ರೆಸ್ ನಲ್ಲಿರುವ ಅನೇಕ ನಾಯಕರಲ್ಲಿದೆ. ಆ ಕಾರಣಕ್ಕೆ ಸ್ಟಿಂಗ್ ಆಪರೇಷನ್ ವಿಷಯ ದಲ್ಲಿ ಜಾಣ ಮೌನವನ್ನು ತಾಳಿದ್ದಾರೆ. ಇದರೊಂದಿಗೆ ಸ್ಟಿಂಗ್ ಆಪರೇಷನ್ ವಿಷಯವನ್ನು ಎತ್ತಿಕೊಳ್ಳುವು ದರಿಂದ ಮುಂದಿನ ಚುನಾವಣೆಗೆ ಬಿಜೆಪಿಗೆ ಬಹುದೊಡ್ಡ ಲಾಭವಾಗುತ್ತದೆ ಎನ್ನುವ ವಿಶ್ವಾಸವಿಲ್ಲ. ಆದ್ದರಿಂದ ಮೈಮೇಲೆ ಎಳೆದುಕೊಳ್ಳುವ ಬದಲು ಮೌನಕ್ಕೆ ಜಾರಿದ್ದಾರೆ ಎನ್ನುವ ವ್ಯಾಖ್ಯಾನಗಳು ರಾಜಕೀಯ ಮೊಗಸಾಲೆಯಲ್ಲಿ ಕೇಳಿ ಬರುತ್ತಿದೆ.
ಹಾಗೆಂದ ಮಾತ್ರಕ್ಕೆ, ಸ್ಟಿಂಗ್ ಆಪರೇಷನ್ ವಿಷಯದಲ್ಲಿ ಬಿಜೆಪಿ ನಾಯಕರು ತಮ್ಮ ಮೌನವನ್ನು ಒಂದು ಹಂತಕ್ಕೆ ಸಮರ್ಥಿಸಿಕೊಳ್ಳುತ್ತಿದ್ದರೂ, ಇನ್ನುಳಿದ ವಿಷಯದಲ್ಲಿ ಬಿಜೆಪಿ ನಾಯಕರ ನಡೆ ಪೂರ್ಣ ಸಮ್ಮತವಲ್ಲ.
ವಾಲ್ಮೀಕಿ ನಿಗಮದಲ್ಲಿ ನಡೆದ ಅಕ್ರಮದ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬಳ್ಳಾರಿ ಪಾದಯಾತ್ರೆ ನಡೆದಿದ್ದು ಬಿಟ್ಟರೆ, ಕಾಂಗ್ರೆಸ್ ವಿರುದ್ಧ ಕೇಳಿಬರುತ್ತಿರುವ ಸಾಲು-ಸಾಲು ಆರೋಪದ ವಿಷಯದಲ್ಲಿ ಬಿಜೆಪಿ ಜಾಣ ಕುರುಡು ಪ್ರದರ್ಶನ ಮಾಡುವ ಅಥವಾ ಸೋಷಿಯಲ್ ಮೀಡಿಯಾ ಪೋಸ್ಟ್ಗಳಿಗೆ ಸೀಮಿತವಾಗುವ ಪ್ರಯತ್ನ ಮಾಡುತ್ತಿದೆ.
ಕಾರ್ಯಕರ್ತರಿಂದ ಸರಕಾರದ ವಿರುದ್ಧದ ಹೋರಾಟಕ್ಕೆ ಹಲವು ರೀತಿಯ ಒತ್ತಡಗಳಿದ್ದರೂ, ಪಕ್ಷದ ನಾಯಕರ ನಡುವೆ ಇರುವ ಹತ್ತಾರು ಭಿನ್ನಾಭಿಪ್ರಾಯಗಳಿಂದ, ಯಾವುದೇ ಹೋರಾಟ ರೂಪಿಸಲು ಸಾಧ್ಯವಾಗುತ್ತಿಲ್ಲ. ಸಂಘಟನೆ ಸಂಪೂರ್ಣ ನೆಲಕಚ್ಚಿದ್ದರೂ ವಿಜಯೇಂದ್ರ ಕೇಂದ್ರ ಬಿಜೆಪಿ ನಾಯಕರು ಕೈಗೊಳ್ಳುವ ಸಂಘಟನಾ ಕಾರ್ಯಕ್ರಮದೊಂದಿಗೆ ರಾಜ್ಯಮಟ್ಟದಲ್ಲಿ ಕೆಲ ಹೋರಾಟ ರೂಪಿಸಿದ್ದಾರೆ. ಆದರೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಕೆಲ ನಾಯಕರಿಂದ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ ಎನ್ನುವ ಆರೋಪಗಳಿವೆ.
ರಾಜ್ಯದಲ್ಲಿ ಬಿಜೆಪಿಯಲ್ಲಿನ ಈ ಮೌನ ಹಾಗೂ ಗೊಂದಲಕ್ಕೆ ಕಾರಣಗಳು ಹತ್ತಾರಿರಬಹುದು. ಅದರಲ್ಲಿಯೂ ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕರನ್ನು ಬದಲಾಯಿಸಬೇಕು ಎನ್ನುವ ಆಲೋಚನೆ ದಿಲ್ಲಿ ಮಟ್ಟದ ನಾಯಕರಲ್ಲಿ ಸುಳಿದಿರುವ ಸುಳಿವು ಸಿಕ್ಕಿರುವುದರಿಂದ ವಿಜಯೇಂದ್ರ ಬದಲಾವಣೆಯ ಗೊಂದಲ ಮುಗಿಯುವ ತನಕ ಸಾವಧಾನವಾಗಿರುವ ಲೆಕ್ಕಾಚಾರದಲ್ಲಿದ್ದಾರೆ.
ಇನ್ನು ಪ್ರತಿಪಕ್ಷ ನಾಯಕ ಆರ್. ಅಶೋಕ್, ಏನೇ ಇದ್ದರೂ ಸದನದೊಳಗೆ ಮಾತನಾಡೋಣ ಎನ್ನುವ ಮನಸ್ಥಿತಿಗೆ ಬಂದಿದ್ದಾರೆ. ಇನ್ನುಳಿದ ನಾಯಕರು, ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕರ ಆಯ್ಕೆ ವಿಷಯದಲ್ಲಿ ನಡೆಯುತ್ತಿರುವ ‘ಅಂತೆ-ಕಂತೆ’ ಸುದ್ದಿಗಳು ತಾರ್ಕಿಕ ಅಂತ್ಯ ಕಂಡ ಬಳಿಕ ತಮ್ಮ ಶಕ್ತಿ ಸಾಮರ್ಥ್ಯ ತೋರಿಸುವ ಮನಸ್ಥಿತಿಗೆ ತಲುಪಿದ್ದಾರೆ.
ಪ್ರತಿಪಕ್ಷವಾಗಿ ಈ ಎಲ್ಲ ಕಾರಣಗಳನ್ನು ಮೀರಿ ಹೋರಾಟ ಮಾಡಬೇಕಾಗಿತ್ತು ಎನ್ನುವುದು ಕಾರ್ಯಕರ್ತರ ಅಭಿಪ್ರಾಯವಾಗಿದೆ. ಆದರೆ ಯಾವುದೇ ‘ಸ್ಪಷ್ಟನೆ’ ಇಲ್ಲದೇ ಯಾವುದೇ ರೀತಿಯ ಹೂಡಿಕೆ ಮಾಡಲು ನಾಯಕರು ಹಿಂದೇಟು ಹಾಕುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಬಿಜೆಪಿಯೊಳಗಿನ ಈ ಗೊಂದಲಗಳ ಸೂಕ್ಷ್ಮತೆಯನ್ನು ಅರಿತ ಕುಮಾರಸ್ವಾಮಿ ಅವರು, ಕರ್ನಾಟಕದಲ್ಲಿ ತನ್ನ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹಾಗೂ ತನ್ನ ‘ಪ್ರೆಸೆನ್ಸ್’ ಅನ್ನು ರಾಜ್ಯ ರಾಜಕೀಯದಲ್ಲಿ ಬಲಪಡಿಸಲು ಈ ಸಮಯ ಬಳಸಿಕೊಂಡರು. ಸ್ಟಿಂಗ್ ಆಪರೇಷನ್ ವಿಷಯ ವೈಯಕ್ತಿಕವಾಗಿ ತೆಗೆದುಕೊಂಡು ಹೋದರೂ, ಅದಕ್ಕೂ ಮೊದಲು ನೈಸ್ ಹಗರಣ, ಬಿಡದಿ ಟೌನ್ ಶಿಪ್, ಕೆಪಿಎಸ್ಸಿ ಹಗರಣ ಸೇರಿ ಹಲವು ವಿವಾದಗಳನ್ನು ಎತ್ತಿಕೊಂಡು ನಿರಂತರವಾಗಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಒಂದು ಹಂತಕ್ಕೆ ಯಶಸ್ವಿಯಾಗಿದ್ದಾರೆ.
ಸ್ಟಿಂಗ್ ವಿಷಯದಲ್ಲಿ ಬಿಜೆಪಿಯ ನಡೆಯನ್ನು ಒಪ್ಪಬಹುದಾಗಿದ್ದರೂ ಇತರೆ ಹೋರಾಟದಲ್ಲಿ ಬಿಜೆಪಿಯ ಮೌನ ಇದೀಗ ಬಿಜೆಪಿ ನಾಯಕರನ್ನು ಪ್ರಶ್ನಿಸುವ ಹಂತಕ್ಕೆ ತಲುಪಿದೆ. ಮೈತ್ರಿ ಪಕ್ಷ ಬಿಜೆಪಿಯ ಬೆಂಬಲವಿಲ್ಲದಿದ್ದರೂ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿರುವುದರಿಂದ ಇದರ ಲಾಭ ಭವಿಷ್ಯದಲ್ಲಿ ಯಾರಿಗೆ ಸಿಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಕುಮಾರಸ್ವಾಮಿ ಅವರು 2024ರ ಲೋಕಸಭಾ ಚುನಾವಣೆಯ ಬಳಿಕ ಕೇಂದ್ರ ಸಚಿವರಾಗಿ ದೆಹಲಿಯನ್ನೇ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದರು. ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಕುಮಾರಸ್ವಾಮಿ ಅವರಿದ್ದರೂ, ಕೇಂದ್ರ ಸಚಿವರಾಗಿದ್ದರಿಂದ ಪಕ್ಷದ ಸಂಘಟನೆಯ ಹೊಣೆಯನ್ನು ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಹೆಗಲಿಗೆ ಹೇರಿದ್ದರು.
ಒಂದು ಹಂತಕ್ಕೆ ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಮಾತುಗಳು ಜೆಡಿಎಸ್ ವಲಯದಲ್ಲಿ ಓಡಾಡಿತ್ತು. ಆದರೆ ಯಾವಾಗ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ಸ್ವೀಕರಿಸಿ, 2028ರ ಚುನಾವಣೆಗೆ ಸಿದ್ಧತೆ ಆರಂಭಿಸಿದರೋ, ಆ ಕ್ಷಣವೇ ಕುಮಾರಸ್ವಾಮಿ ದೆಹಲಿಯಲ್ಲಿದ್ದ ‘ಕರ್ಮಭೂಮಿ’ಯನ್ನು ಬೆಂಗಳೂರಿಗೆ ಶಿಫ್ಟ್ ಮಾಡಿಕೊಂಡರು.
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಎಚ್ಡಿಕೆ ತೀರ್ಮಾನ ಪಕ್ಷದ ಅಳಿವು-ಉಳಿವಿನ ದೃಷ್ಟಿಯಿಂದ ಅನಿವಾರ್ಯವಾಗಿತ್ತು. ಏಕೆಂದರೆ, ಡಿಕೆಶಿ ತಂತ್ರಗಾರಿಕೆಯ ಮೊದಲ ಭಾಗವೇ ಒಕ್ಕಲಿಗ ಮತಗಳನ್ನು ತಮ್ಮನ್ನ ಸೆಳೆದುಕೊಳ್ಳುವುದು ಹಾಗೂ ಹಳೇ ಮೈಸೂರು ಭಾಗದಲ್ಲಿ 2023ರ ಚುನಾವಣೆಯಲ್ಲಿ ಗೆಲುವು ಸಾಧಿಸಿದಷ್ಟೇ ಕ್ಷೇತ್ರಗಳನ್ನು ಪುನಃ ಸ್ಥಾಪನೆ ಮಾಡುವುದಾಗಿದೆ.
ಒಂದು ವೇಳೆ 2028ರಲ್ಲಿಯೂ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹೆಚ್ಚು ಸೀಟುಗಳನ್ನು ಗಳಿಸಿದರೆ, ಜೆಡಿಎಸ್ಗೆ ಬಾಕಿ ಉಳಿದಿರುವ ಏಕೈಕ ಭದ್ರಕೋಟೆಯೂ ನೆಲಕಚ್ಚಲಿದೆ. ಇದರ ನೇರ ಲಾಭ ಬಿಜೆಪಿಗಿಂತ ಹೆಚ್ಚಾಗಿ ಕಾಂಗ್ರೆಸ್ ಆಗಲಿದೆ ಎನ್ನುವ ಅರಿವು ಕುಮಾರಸ್ವಾಮಿ ಅವರಿಗಿದೆ. ಈ ರಾಜಕೀಯ ಸೂಕ್ಷ್ಮತೆಯ ಸುಳಿವನ್ನು ಅರಿತಿರುವ ಕುಮಾರಸ್ವಾಮಿ ಅವರು, ಡಿ.ಕೆ.ಶಿವಕುಮಾರ್ ವಿರುದ್ಧ ನಿರಂತರ ಒಂದಿಲ್ಲೊಂದು ಆರೋಪ ಮಾಡಿಕೊಂಡು ಬಂದಿದ್ದಾರೆ.
ರಾಜಕೀಯವಾಗಿ ನಡೆಯುತ್ತಿರುವ ಆರೋಪ-ಪ್ರತ್ಯಾರೋಪ ಯಾವುದೇ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗದಿದ್ದರೂ, ಸಾರ್ವಜನಿಕವಾಗಿ ಕುಮಾರಸ್ವಾಮಿ ಅವರು ತಾವಿನ್ನೂ ರಾಜ್ಯ ರಾಜಕೀಯದಲ್ಲಿ ಸಕ್ರಿಯ ಎನ್ನುವ ಸಂದೇಶ ರವಾನಿಸಲು ಅತ್ಯುತ್ತಮ ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.
ಕಳೆದ ಒಂದು ತಿಂಗಳಿನಿಂದ ರಾಜ್ಯ ಸರಕಾರದ ವಿರುದ್ಧ ಕುಮಾರಸ್ವಾಮಿ ನೈಸ್ ವಿಷಯದಲ್ಲಿ ನಿರಂತರ ವಾಗ್ದಾಳಿ ನಡೆಸಿಕೊಂಡು ಬಂದಿದ್ದರೂ ಬಿಜೆಪಿಯಿಂದ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ. ಇನ್ನು ಸ್ಟಿಂಗ್ ಆರಪೇಷನ್ ವಿಷಯದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿಕೊಂಡು ಬಂದಿದ್ದಾರೆ. ಇದರಲ್ಲಿಯೂ ಬಿಜೆಪಿ ನಾಯಕರು ಅಂತರ ಕಾಯ್ದುಕೊಂಡಿದ್ದಾರೆ.
ಬೀದಿಯಲ್ಲಿ ಇರಬೇಕಾದ ಪ್ರತಿಪಕ್ಷ ಸದ್ಯ ಮೌನಕ್ಕೆ ಶರಣಾಗಿರುವುದು ಮೈತ್ರಿಯೊಳಗಿರುವ ‘ಸಮನ್ವಯ’ ಕೊರತೆಯ ಕಾರಣವೋ ಅಥವಾ ರಾಜ್ಯ ಬಿಜೆಪಿ ನಾಯಕರ ರಾಜಕೀಯ ‘ಲೆಕ್ಕಾಚಾರ’ದ ಕಾರಣವೋ ಎನ್ನುವ ಸ್ಪಷ್ಟನೆ ಇಲ್ಲ. ಆದರೆ ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿರುವ ಕುಮಾರಸ್ವಾಮಿ ಕರ್ನಾಟಕ ರಾಜ್ಯ ರಾಜಕೀಯದ ಬಹುದೊಡ್ಡ ಫೈಲ್ ಅನ್ನು ಹಸ್ತಾಂತರಿಸಿ ಬೆಳವಣಿಗೆಗಳ ಬಗ್ಗೆ ಪೂರ್ಣ ಮಾಹಿತಿ ನೀಡಿದ್ದಾರೆ. ಇದೇ ಮಾಹಿತಿ ಅಮಿತ್ ಶಾ ಅವರಿಗೂ ತಲುಪಿರುವುದರಿಂದ, ರಾಜ್ಯ ಬಿಜೆಪಿಯನ್ನು ಎಲ್ಲಿ, ಯಾವಾಗ ಎಷ್ಟರ ಮಟ್ಟಿಗೆ ಟೈಟ್ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ಎನ್ನುವ ಸ್ಪಷ್ಟ ಅರಿವು ಕೇಂದ್ರ ನಾಯಕರಿಗೆ ಇದೆ.
ಇದೇ ಕಾರಣಕ್ಕೆ, ಕುಮಾರಸ್ವಾಮಿ ಅವರ ವಿಷಯದಲ್ಲಿಯೂ ದಿಲ್ಲಿ ನಾಯಕರು ಸಾಫ್ಟ್ ಕಾರ್ನರ್ ಹೊಂದಿದ್ದಾರೆ. ಕಾಂಗ್ರೆಸ್ ಸರಕಾರದಲ್ಲಿ ಆಗುತ್ತಿರುವ ‘ಅನ್ ಫೋರ್ಸ್ಡ್ ಎರರ್’ಗಳು ಹಾಗೂ ರಾಜ್ಯ ಬಿಜೆಪಿಯಲ್ಲಿನ ಗೊಂದಲಮಯ ವಾತಾವರಣದ ನೇರ ಲಾಭವಾಗುತ್ತಿರುವುದು ಮಾತ್ರ ತೆನೆಹೊತ್ತ ಮಹಿಳೆಗೆ.
ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯ ಬಳಿಕ ಮಂಕಾಗಿದ್ದ ಜೆಡಿಎಸ್ ಇದೀಗ ಲೈಮ್ ಲೈಟ್ಗೆ ಬರಲು ಯಾವೆಲ್ಲ ಪ್ರಯತ್ನ ಮಾಡಬೇಕೋ ಅದನ್ನೆಲ್ಲ ಮಾಡುತ್ತಿದೆ. ಕಾಂಗ್ರೆಸ್ ಸರಕಾರ ಎತ್ತಿಕೊಂಡುತ್ತಿರುವ ಪ್ರತಿ ವಿಷಯದಲ್ಲಿ ಬಿಜೆಪಿ ರಾಜ್ಯ ನಾಯಕರ ಮೌನ ಆಡಳಿತ ಪಕ್ಷಕ್ಕೆ ಎಷ್ಟು ಲಾಭವಾಗುತ್ತಿದೆಯೋ ಗೊತ್ತಿಲ್ಲ. ಆದರೆ ಬಿಜೆಪಿಯ ಮೈತ್ರಿ ಪಕ್ಷ ಜೆಡಿಎಸ್ಗಂತೂ ತನ್ನ ಬಿರುಕುಬಿದ್ದಿರುವ ಭದ್ರಕೋಟೆಗಳನ್ನು ಗಟ್ಟಿಪಡಿಸಿಕೊಳ್ಳುವಲ್ಲಿ ಹಾಗೂ ಹೊಸ ಭದ್ರಕೋಟೆ ಯನ್ನು ಸಿದ್ಧಪಡಿಸಿ ಕೊಳ್ಳುವುದಕ್ಕೆ ನೇರ ಸಹಾಯವಾಗುತ್ತಿರುವುದಂತೂ ಸ್ಪಷ್ಟ.