ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Naveen Sagar Column: ತಪ್ಪು ಮಾಡದವ್ರ್‌ ಯಾರವ್ರೆ...ತಪ್ಪೇ ಮಾಡದವ್ರ್‌ ಎಲ್ಲವ್ರೆ !

20 ನಿಮಿಷದ ಎಪಿಸೋಡನ್ನು ಫ್ರೇಮ್-ಟು-ಫ್ರೇಮ್ ನಿಲ್ಲಿಸಿ ನೋಡಿ ತಪ್ಪು ಹುಡುಕುತ್ತಾರೆ. ಹುಡು ಕೋದು ಎಂಥ ತಪ್ಪು ಅಂತೀರಿ. ನೀವು ಅವರ ಹಾಗೆ ಆ 20 ನಿಮಿಷದ ಎಪಿಸೋಡನ್ನು ಎರಡೂವರೆ ಗಂಟೆ ನಿಲ್ಲಿಸಿ ನಿಲ್ಲಿಸಿ ನೋಡಿದ್ರೆ ಮಾತ್ರ ಸಿಗುವಂಥ ತಪ್ಪು. ಆ ತಪ್ಪಿಗೆ ರೀಶೂಟ್ ಮಾಡಿಸಿ ಲಕ್ಷಗಟ್ಟಲೆ ಖರ್ಚು ಮಾಡಿಸೋವ್ರೂ ಇದ್ದಾರೆ ಇಲ್ಲಿ. ಇಂಥವರು ಕೆಲಸ ಮಾಡಬೇಕಿರೋದು ಶೂಟಿಂಗ್ ಸೆಟ್‌ನಲ್ಲಿ. ಆಗ ಲಕ್ಷಗಟ್ಟಲೆ ಹಣವೂ ಉಳಿಯುತ್ತದೆ, ತಪ್ಪುಗಳೂ ಆಗುವುದಿಲ್ಲ. ಆದರೆ ಇಂಥವರೇನಿದ್ದರೂ ಎಲ್ಲ ಕೆಲಸಗಳಾದ ಮೇಲೆ ತಪ್ಪುಹುಡುಕಬಲ್ಲ ಬುದ್ಧಿವಂತರೇ ಹೊರತು, ಅದಕ್ಕಿಂತ ಇನ್ಯಾವ ಸಾಮರ್ಥ್ಯವೂ ಇವರಿಗಿರುವುದಿಲ್ಲ. ತಪ್ಪು ಹುಡುಕೋದು ಸುಲಭ, ತಪ್ಪಾಗದಂತೆ ಕೆಲಸ ಮಾಡೋದು ಕಷ್ಟ.

ಪದಸಾಗರ

ಬಹಳ ಸಮಯದ ನಂತರ ಒಂದು ಕನ್ನಡ ಸಿನಿಮಾ ರಾಷ್ಟ್ರವ್ಯಾಪಿ ಚರ್ಚೆಯಾಗ್ತಾ ಇದೆ. ಒಂದಲ್ಲಾ ಒಂದು ಕಾರಣಕ್ಕೆ ಟ್ರೆಂಡ್ ಆಗ್ತಾ ಇದೆ. ‘ಕೆಜಿಎಫ್-2’ ಸಿನಿಮಾ ಕೇವಲ ಗೆದ್ದಿತ್ತು. ಆದರೆ ‘ಕಾಂತಾರ’ ವಿವಿಧ ಚರ್ಚೆ, ಸಂವಾದ, ವಿವಾದಗಳಿಗೆ ವೇದಿಕೆಯಾಯ್ತು. ‘ಕಾಶ್ಮೀರ್ ಫೈಲ್ಸ್‌ʼ ಇನ್ನಿತರ ರಾಷ್ಟ್ರೀಯವಾದದ ಸಿನಿಮಾಗಳ ಥರದ ಅಲ್ಲದೆಯೂ ದೇಶದ ಆಚೆಯ ತನಕ ತುಂಬ ಸದ್ದು ಮಾಡಿತು.

ಎಡಪಂಥೀಯರ, ಹಿಂದೂ ವಿರೋಧಿಗಳ ಬುಡಕ್ಕೆ ಬೆಂಕಿ ಹಚ್ಚಿತು. ಸಿನಿಮಾವನ್ನು ಸೋಲಿಸುವ ಅವರ ಎಲ್ಲ ಪ್ರಯತ್ನಗಳೂ ವಿಫಲವಾದವು. ಅವೇ ಸಿನಿಮಾಗೆ ಇನ್ನಷ್ಟು ಪ್ರಚಾರವನ್ನೂ ನೀಡಿದವು. ಕೊನೆಗೆ ಗೆಲುವನ್ನು ಒಪ್ಪಿಕೊಳ್ಳಲಾಗದೇ ‘ಈ ಸಿನಿಮಾದಿಂದ ಸಮಾಜಕ್ಕೇನು ಉಪಯೋಗ?’ ಎಂದು ಕೇಳುತ್ತಾ, ಮೌಢ್ಯದ ಬಿತ್ತನೆ, ಸಮಾಜವನ್ನು ದಿಕ್ಕು ತಪ್ಪಿಸೋ ಕೆಲಸ ಎಂದೆಲ್ಲ ದೂರಿ ಉರಿಶಮನ ಮಾಡಿಕೊಳ್ಳುವ ಕೆಲಸ ಶುರುವಾಯಿತು.

‘ಕಾಂತಾರ ಚಾಪ್ಟರ್-1 ಚಿತ್ರವು, 3 ವರ್ಷ ಮೊದಲು ಬಂದಿದ್ದ ‘ಕಾಂತಾರ’ ಕೊಟ್ಟಷ್ಟು ಥ್ರಿಲ್ ಕೊಡಲಿಲ್ಲ, ಏನೋ ಮಿಸ್ಸಿಂಗ್ ಅನಿಸ್ತಿದೆ’ ಎಂಬುದು ಜೆನ್ಯೂನ್ ಸಿನಿಮಾಪ್ರೇಮಿಗಳ ಅಭಿಪ್ರಾಯ ವಾಗಿತ್ತು. ಆದರೆ ಅದರಾಚೆಗೆ ಈ ಸಿನಿಮಾವನ್ನು ಗೆಲ್ಲಲು ಬಿಡಬಾರದು ಎಂಬ ರಿವ್ಯೂಗಳೇನು ಬಂದವೋ, ನರೇಟಿವ್ ಏನು ಸೃಷ್ಟಿಯಾಯಿತೋ ಅವೆಲ್ಲವೂ ಸಿನಿಮಾಗೆ ಲಾಭವನ್ನೇ ಮಾಡಿ ಕೊಟ್ಟವು.

ಇದನ್ನೂ ಓದಿ: Naveen Sagar Column: ಕಾಂತಾರ ಮತ್ತು ಸೀಕ್ವೆಲ್‌ ಪ್ರೀಕ್ವೆಲ್‌ʼಗಳೆಂಬ ಹಗ್ಗದ ಮೇಲಿನ ನಡಿಗೆ

ಚಿತ್ರತಂಡದ ಗೆಲ್ಲುವ ಹಟವನ್ನು ಇನ್ನಷ್ಟು ಹೆಚ್ಚು ಮಾಡಿತು. ಜನ ಏನೇ ಮಾತಾಡಿದ್ರೂ ಅದು ಪ್ರಚಾರವೇ. ಅದು ಸಿನಿಮಾಗೆ ಪೂರಕವೇ ಎಂಬುದನ್ನು ಕಾಂತರ ಸಾಬೀತುಪಡಿಸಿಕೊಂಡುಬಿಟ್ಟಿತು. ಈಗ ಕಾಂತಾರ ಹೊಸ ಹೊಸ ರೀತಿಯ ಪ್ರಚಾರಗಳನ್ನು ಆಹಾರವಾಗಿಸಿಕೊಳ್ಳುತ್ತಿದೆ. ಅಂಥವುಗಳಂದು ‘ಕ್ಯಾನ್’ ಪ್ರಚಾರ!

ಕಾಂತಾರ ಚಿತ್ರದ ಹಾಡಿನ ದೃಶ್ಯವೊಂದರಲ್ಲಿ ಈಗಿನ ಕಾಲದ ಫಿಲ್ಟರ್ ವಾಟರ್ ಕ್ಯಾನ್ ಕಾಣಿಸಿ ಕೊಂಡಿದೆ. ಅದು ಯಾರ ಕಣ್ಣಿಗೆ ಮೊದಲು ಬಿತ್ತೋ ಗೊತ್ತಿಲ್ಲ. ರಾತ್ರೋರಾತ್ರಿ ಆ ಚಿತ್ರ ವೈರಲ್ ಆಗಿದೆ. ನೂರಾರು ಕೋಟಿ ಖರ್ಚು ಮಾಡಿ ತೆಗೆದ, ಸಾವಿರಾರು ವರ್ಷಗಳ ಹಿಂದಿನ ಕಥೆಯ ಸಿನಿಮಾದಲ್ಲಿ ಆಧುನಿಕ ಯುಗದ ಒಂದು ವಾಟರ್ ಕ್ಯಾನ್ ಕಾಣಿಸೋದು ಅಂದ್ರೆ ಏನು? ರಿಷಬ್ ಶೆಟ್ಟಿಯನ್ನು ಮತ್ತು ಕಾಂತಾರವನ್ನು ಹಣಿಯುವುದಕ್ಕೆ ಒಂದು ಅಸ್ತ್ರ ಸಿಕ್ಕಿಬಿಟ್ಟಿತು ಎಂಬಂತೆ ಸೋಷಿಯಲ್ ಮೀಡಿಯಾ ರೆಬೆಲ್ ಸ್ಟಾರ್‌ಗಳು ರೊಚ್ಚಿಗೆದ್ದುಬಿಟ್ಟರು.

ಕೆಲವರಿಗೆ ಇದು ತಾವೇನೋ ನೊಬೆಲ್ ಪ್ರೈಜ್ ಸಿಗುವಂಥ ಆವಿಷ್ಕಾರ ಮಾಡಿಬಿಟ್ಟಿದ್ದೇವೆಂಬ ಹೆಮ್ಮೆ. ಇನ್ನು ಕೆಲವರು ಹಣ ಕೊಟ್ಟು ಸಿನಿಮಾ ನೋಡಿದ ತಮಗೆ ಭಾರಿ ಮೋಸ ಆಗಿ ಬಿಟ್ಟಿದೆ ಎಂಬಂತೆ ಆಡುತ್ತಿದ್ದಾರೆ. ಕೆಲವರು ಇದನ್ನು ನೋಡೋದಕ್ಕೆ ಸಿನಿಮಾ ನೋಡ್ತೀನಿ ಅಂತ ಓವರ್ ಆಕ್ಟಿಂಗ್ ಮಾಡ್ತಿದಾರೆ. ಯುಟ್ಯೂಬಲ್ಲಿ ಅಪ್‌ಲೋಡ್ ಆಗಿರೋ ಹಾಡ ಕಾಣಿಸೋ ಒಂದು ಕ್ಯಾನನ್ನ ನೋಡೋಕೆ ಇವ್ರು ದುಡ್ಡುಖರ್ಚು ಮಾಡಿ ಸಿನಿಮಾ ನೋಡೋಕೆ ಹೋಗ್ತಾರಂತೆ. ಅತಿರೇಕದ ಪರಮಾವಧಿ.

naveen S 14

ಸಿನಿಮಾ ಮೇಕಿಂಗ್ ಬಲ್ಲವರಿಗೆ ಇದು ಮಹಾನ್ ಅಚ್ಚರಿ ಅನಿಸುವ ವಿಚಾರವೇನಲ್ಲ. ಎಷ್ಟೇ ಎಚ್ಚರಿಕೆ ವಹಿಸಿದರೂ ಆಗಿ ಬಿಡಬಹುದಾದ ಕೆಲವು ಮಿಸ್ಟೇಕ್‌ಗಳಿವು. ನೀವು ಯುಟ್ಯೂಬ್ ಹೊಕ್ಕು ನೋಡಿದರೆ, ‘ಟೈಟಾನಿಕ್’ನಿಂದ ‘ಬಾಹುಬಲಿ’ ತನಕ ಸಾವಿರಾರು ಸಿನಿಮಾಗಳಲ್ಲಿ ಆಗಿರುವ ಎಡವಟ್ಟುಗಳ ಸರಣಿಯೇ ಸಿಗುತ್ತದೆ. ಕಂಟಿನ್ಯೂಟಿಗಳ ಪ್ರಮಾದ, ಕಾಲಘಟ್ಟದ ವಸ್ತುಗಳ ದೋಷ, ಲಾಜಿಕಲ್, ಟೆಕ್ನಿಕಲ್ ಹೀಗೆ ಸಾಕಷ್ಟು ತಪ್ಪುಗಳು ಸಿನಿಮಾದಲ್ಲಿ ನಡೆಯುತ್ತವೆ. ‌

ಯುಟ್ಯೂಬ್ ಬಂದಮೇಲೆ, ಸಿನಿಮಾ ಸಿಡಿ, ಡೌನ್ ಲೋಡಿಂಗ್ ಇವೆಲ್ಲ ಬಂದ ನಂತರ ತಪ್ಪು ಹುಡುಕುವ ಕೆಲಸ ಸಲೀಸಾಗಿದ್ದು. ಸಿನಿಮಾವನ್ನು ನಮಗೆ ಬೇಕೆಂದಲ್ಲಿ ನಿಲ್ಲಿಸಿ, ಹಿಂದೆ ಹೋಗಿ ಮುಂದೆ ಹೋಗಿ ನೋಡುವ ಆಯ್ಕೆ ನಮಗೆ ಸಿಕ್ಕಿದೆ. ಸ್ಕ್ರೀನ್ ಶಾಟ್ ತೆಗೆಯಬಹುದು. ಜೂಮ್ ಮಾಡಬಹುದು. ಇವೆಲ್ಲ ಆಯ್ಕೆ ಇದ್ದಾಗ ತಪ್ಪು ಹುಡುಕುವುದು ಸುಲಭ.

ಹೀಗಾಗಿ ತಪ್ಪು ಹುಡುಕಿ ಅದರ ಪಟ್ಟಿ ಮಾಡುವ ‘ಡಿಜಿಟಲ್ ಏಜ್’ ವಿಮರ್ಶಕರೂ ಹುಟ್ಟಿ ಕೊಂಡರು. ಗೂಗಲ್ ಹೊಕ್ಕರೆ, ಯುಟ್ಯೂಬ್ ನೋಡಿದರೆ ನೂರಾರು ಹಾಲಿವುಡ್ ಹಿಟ್ ಸಿನಿಮಾ ಗಳಲ್ಲಿರುವ ಸಾವಿರಾರು ತಪ್ಪುಗಳ ಪಟ್ಟಿ ಸಿಗುತ್ತದೆ. ಸಿನಿಮಾ ಬಂದಿದ್ದಾಗಿದೆ.

ತಪ್ಪುಗಳೂ ಆಗಿ ಹೋಗಿವೆ. ಸಿನಿಮಾವೇ ಹಾಗೆ. ತೆರೆಯ ಮೇಲೆ ಬಂದ ನಂತರ ತಿದ್ದಲಾಗುವುದಿಲ್ಲ. ಅಕ್ಷೇಪಾರ್ಹ ವಿಷಯಗಳಿದ್ದಾಗ ಕತ್ತರಿ ಪ್ರಯೋಗಗಳಾಗಬಹುದಷ್ಟೆ. ಕಾಂತಾರ ಚಿತ್ರದಲ್ಲಿ ಅಂದು ಕ್ಯಾನ್ ಕಂಡಿದ್ದು ಸಿನಿಮಾವನ್ನು ತಾಂತ್ರಿಕವಾಗಿ ಗಮನಿಸುವವರಿಗೆ ‘ಛೆ, ಕ್ಯಾಮೆರಾ ಟೀಮ್ ಹುಷಾ ರಾಗಿರಬೇಕಿತ್ತು, ಡೈರೆಕ್ಷನ್ ಟೀಮ್ ಎಚ್ಚರ ವಹಿಸಬೇಕಿತ್ತು’ ಅನಿಸುವ ವಿಷಯವಷ್ಟೆ. ಈಗಾಗಲೇ ಕೋಟಿಗಟ್ಟಲೆ ಜನ ಕಾಂತಾರ ನೋಡಿದ್ದಾರೆ.

ಯಾರಿಗೂ ಆ ಕ್ಯಾನ್ ಕಾಣಿಸಿರಲಿಲ್ಲ. ಈಗ ಯಾರೋ ಅದನ್ನು ಗುರುತಿಸಿ ತೋರಿಸಿದ ಮೇಲೆ, ಬೇಡವೆಂದರೂ ಅದು ಕಂಡೇ ಕಾಣುತ್ತದೆ. ಅದೇ ರೀತಿ ಹಾಡಿನ ಇನ್ನೊಂದು ದೃಶ್ಯದಲ್ಲಿ ಯಾರೋ ಇಂದಿನ ಕಾಲದ ಶರ್ಟ್-ಪ್ಯಾಂಟ್ ಹಾಕಿ ನಿಂತದ್ದು ಕಾಣುತ್ತದೆ. ಇದೂ ಇನ್ನೊಂದು ಲೆವೆಲ್ ಸ್ಕ್ಯಾನಿಂಗಲ್ಲಿ ಸಿಕ್ಕ ಕಪ್ಪುಚುಕ್ಕೆ. ಇಂಥದ್ದನ್ನು ಹುಡುಕಿದವನದ್ದು ಮಹಾನ್ ಸಾಧನೆ ಅಲ್ಲದೇ ಹೋದ್ರೂ ಅವನ ತಾಳ್ಮೆಯನ್ನು, ಚುರುಕುಗಣ್ಣನ್ನು ಮೆಚ್ಚಬಹುದು.

ನೋಡಿ ಒಮ್ಮೆ ನಕ್ಕು ಸಾಗಬಹುದು. ಅದರ ಹೊರತಾಗಿ ಇದು ಮಹಾನ್ ಚರ್ಚೆಯ ವಿಷಯವಾಗ ಬೇಕಿತ್ತಾ? ಇದನ್ನು ಇಟ್ಟುಕೊಂಡು ಕಾಂತಾರವನ್ನು ಹಣಿಯಲು ಹೋಗಬೇಕಿತ್ತಾ? ಒಂದು ಅರ್ಥ ಮಾಡಿಕೊಳ್ಳಬೇಕು. ಚಿತ್ರದ ಕ್ಯಾನ್ವಾಸ್ ದೊಡ್ಡದಾದಷ್ಟೂ ತಪ್ಪುಗಳಾಗುವ ಸಾಧ್ಯತೆಯೂ ಹೆಚ್ಚಾಗುತ್ತದೆ.

ಇಂಥ ತಪ್ಪುಗಳು ‘ಕಾಂತಾರ’, ‘ಬಾಹುಬಲಿ’, ‘ಆರ್‌ಆರ್‌ಆರ್’ ಥರ ದೊಡ್ಡ ಚಿತ್ರಗಳಲ್ಲಿ ಆಗಬಹುದೇ ಹೊರತು ನಾಲ್ಕು ಗೋಡೆ ಮಧ್ಯ ಕ್ಯಾಮೆರಾ ಇಟ್ಟು ಮಾಡುವ ಗುರುಪ್ರಸಾದ್ ಬ್ರ್ಯಾಂಡ್‌ನ ಚಿತ್ರ ಗಳಲ್ಲಿ ಆಗುವುದಿಲ್ಲ.

ನೂರಾರು ಆರ್ಟಿಗಳನ್ನಿಟ್ಟು ದೊಡ್ಡ ಸೆಟ್ ಹಾಕಿ ಚಿತ್ರಿಸುವಾಗ, ಅಥವಾ ಸಾರ್ವಜನಿಕ ಸ್ಥಳದಲ್ಲಿ ಚಿತ್ರಿಸುವಾಗ ತಪ್ಪುಗಳು ನುಸುಳುವ ಸಾಧ್ಯತೆ ಹೇರಳ. ಸಿನಿಮಾ ಒಂದು ಕಣ್ಕಟ್ಟು ಕಲೆ. ಪಕ್ಕಾ ಅದೊಂದು ಮ್ಯಾಜಿಕ್. ಇಲ್ಲದ್ದನ್ನು ಇದೆ ಎಂಬಂತೆ, ಇರೋದನ್ನು ಇಲ್ಲವೆಂಬಂತೆ ತೋರಿಸುವ ಕಲೆ.

ಅಲ್ಲಿನ ಫೈಟು, ಹಾಡು, ನಟನೆ, ಸೆಟ್ಟು, ತಾಂತ್ರಿಕತೆ ಎಲ್ಲವೂ ನಮ್ಮನ್ನು ನಂಬಿಸುವ ವಿದ್ಯೆಗಳೇ ಹೊರತು ಯಾವುವೂ ನಿಜವಲ್ಲ. ಒಂದಷ್ಟು ಸಿನಿಮ್ಯಾಟಿಕ್ ಲಾಜಿಕ್‌ಗಳನ್ನು ನಾವು ಹುಡುಕಬೇಕೇ ಹೊರತು, ಸಲ್ಲದ ಲಾಜಿಕ್ ಹುಡುಕಾಟಕ್ಕೆ ಹೊರಟರೆ ಸಿನಿಮಾ ಕೊಡುವ ಅನುಭೂತಿಯನ್ನು ಕಳೆದುಕೊಳ್ಳುತ್ತೇವೆ.

ಹೋಟೆಲಿನ ಮಸಾಲೆದೋಸೆ ತಿನ್ನುವ ಖುಷಿ ಉಳಿಯಬೇಕು ಅಂದರೆ ಅಡುಗೆ ಮನೆಯಲ್ಲಿ ಅದರ ತಯಾರಿಕೆಯತ್ತ ಕಣ್ಣು ಹಾಯಿಸಬಾರದು. ಸಿನಿಮಾ ಕೂಡ ಹಾಗೆಯೇ. ಒಂದು ಮಿನಿಮಮ್ ಮುಗ್ಧತೆ ಹಾಗೂ ಅಚ್ಚರಿಯೊಂದಿಗೆ ಸಿನಿಮಾ ನೋಡದೇ ಹೋದರೆ ಯಾವ ಸಿನಿಮಾವನ್ನೂ ಎಂಜಾಯ್ ಮಾಡಲಾಗುವುದೇ ಇಲ್ಲ.

ಚಿತ್ರರಂಗದ ಒಳಗಿನ ಬಹುತೇಕ ಮಂದಿಗೆ ಸಿನಿಮಾವನ್ನು ಒಬ್ಬ ಪ್ರೇಕ್ಷಕನಾಗಿ ನೋಡೋದು ಸಾಧ್ಯವೇ ಆಗೋದಿಲ್ಲ. ಪ್ರೇಕ್ಷಕನಿಗೆ ಅದು ಸಾಧ್ಯವಿತ್ತು. ದುರಂತವೆಂದರೆ ಈಗ ಪ್ರೇಕ್ಷಕನೂ ಸಿನಿಮಾ ಮೇಕರ್ ರೇಂಜಿಗೆ ಸಿನಿಮಾವನ್ನು ಪೋಮಾರ್ಟಮ್ ಮಾಡಲಾರಂಭಿಸಿದ್ದಾನೆ. ಅದರಿಂದ ತನ್ನ ಸುಖವನ್ನು ತಾನೇ ಕಳೆದುಕೊಳ್ಳುತ್ತಿದ್ದಾನೆ. ದೋಷಗಳನ್ನೇ ಹುಡುಕಿ ವಿಕೃತ ಖುಷಿ ಅನುಭವಿಸು ತ್ತಿದ್ದಾನೆ.

ಪ್ರೇಕ್ಷಕನ ಪಾಲಿಗೆ ಸಿನಿಮಾ ಎಂಬುದು pause & play ಮಾಡಿ ನೋಡುವ ಮಾಧ್ಯಮವಲ್ಲ. ಹಾಗಾಗಲೂ ಕೂಡದು. ಒಂದು ಸೆಕೆಂಡ್ ಕೂಡ ಕಾಣಿಸದ ಆ ಕ್ಯಾನ್ ನಿಮಗೆ ಕಾಣಿಸಬೇಕು ಅಂದ್ರೆ ನೀವು ಅದೇ ಪಾಯಿಂಟ್‌ಗೆ ಹೋಗಿ ಸಿನಿಮಾವನ್ನು ನಿಲ್ಲಿಸಬೇಕು. ಚೂರು ಮುಂದಕ್ಕೋ ಹಿಂದ ಕ್ಕೋ ಹೋಯ್ತು ಅಂದ್ರೆ ಮತ್ತೆ ಎಳೆದು ತಂದು ನಿಲ್ಲಿಸಿ ಆ ಕ್ಯಾನ್ ನೋಡಬೇಕು.

ಸಿನಿಮಾ ಆಗಲೀ ಸೀರಿಯಲ್ ಆಗಲೀ ಹಾಗೆ ನೋಡುವ ವಸ್ತುವಾ? ಅದು ಒಂದು ಹರಿವಿನಲ್ಲಿ ನೋಡುವಂಥದ್ದು. ಕಿರುತೆರೆಯಲ್ಲಿ ಪ್ರಸಾರವಾಗುವ ಸೀರಿಯಲ್‌ಗಳನ್ನು ಮಾನಿಟರ್ ಮಾಡೋಕೆ ಅಂತ ವಾಹಿನಿಗಳಲ್ಲಿ ಒಂದಷ್ಟು ಸಿಬ್ಬಂದಿಗಳಿರುತ್ತಾರೆ. ಅವರನ್ನು ‘ಇ.ಪಿ’ ಅಂತ ಕರೆಯುತ್ತಾರೆ.

ಪ್ರೊಡಕ್ಷನ್ನಿನ ಗಂಧಗಾಳಿ ಗೊತ್ತಿಲ್ಲದ ಈ ಮಂದಿ ಚಾನೆಲ್‌ನಲ್ಲಿ ಕೆಲಸ ಸಿಗುತ್ತಿದ್ದ ಹಾಗೆಯೇ ಬೃಹಸ್ಪತಿಗಳಾಗಿ ಬಿಡುತ್ತಾರೆ. ದಶಕಗಟ್ಟಲೆ ಸಿನಿಮಾ-ಸೀರಿಯಲ್ ಮಾಡಿದ ನಿರ್ದೇಶಕರಿಗೆ ಪಾಠ ಕಲಿಸೋಕೆ ಕೂರುತ್ತಾರೆ. ಅವರು ಶೂಟ್ ಮಾಡಿ ಎಡಿಟ್ ಮಾಡಿ ಕಳಿಸಿದ ಎಪಿಸೋಡನ್ನು ಕಂಪ್ಯೂಟರಲ್ಲಿ ಪ್ಲೇ ಮಾಡ್ಕೊಂಡು ಕೂರುತ್ತಾರೆ.

20 ನಿಮಿಷದ ಎಪಿಸೋಡನ್ನು ಫ್ರೇಮ್-ಟು-ಫ್ರೇಮ್ ನಿಲ್ಲಿಸಿ ನೋಡಿ ತಪ್ಪು ಹುಡುಕುತ್ತಾರೆ. ಹುಡುಕೋದು ಎಂಥ ತಪ್ಪು ಅಂತೀರಿ. ನೀವು ಅವರ ಹಾಗೆ ಆ 20 ನಿಮಿಷದ ಎಪಿಸೋಡನ್ನು ಎರಡೂವರೆ ಗಂಟೆ ನಿಲ್ಲಿಸಿ ನಿಲ್ಲಿಸಿ ನೋಡಿದ್ರೆ ಮಾತ್ರ ಸಿಗುವಂಥ ತಪ್ಪು. ಆ ತಪ್ಪಿಗೆ ರೀಶೂಟ್ ಮಾಡಿಸಿ ಲಕ್ಷಗಟ್ಟಲೆ ಖರ್ಚು ಮಾಡಿಸೋವ್ರೂ ಇದ್ದಾರೆ ಇಲ್ಲಿ. ಇಂಥವರು ಕೆಲಸ ಮಾಡಬೇಕಿ ರೋದು ಶೂಟಿಂಗ್ ಸೆಟ್‌ನಲ್ಲಿ. ಆಗ ಲಕ್ಷಗಟ್ಟಲೆ ಹಣವೂ ಉಳಿಯುತ್ತದೆ, ತಪ್ಪುಗಳೂ ಆಗುವುದಿಲ್ಲ. ಆದರೆ ಇಂಥವರೇನಿದ್ದರೂ ಎಲ್ಲ ಕೆಲಸಗಳಾದ ಮೇಲೆ ತಪ್ಪುಹುಡುಕಬಲ್ಲ ಬುದ್ಧಿವಂತರೇ ಹೊರತು, ಅದಕ್ಕಿಂತ ಇನ್ಯಾವ ಸಾಮರ್ಥ್ಯವೂ ಇವರಿಗಿರುವುದಿಲ್ಲ. ತಪ್ಪು ಹುಡುಕೋದು ಸುಲಭ, ತಪ್ಪಾಗದಂತೆ ಕೆಲಸ ಮಾಡೋದು ಕಷ್ಟ. ಕಾಂತಾರದಂಥ ಸಿನಿಮಾ ಮಾಡುವುದು ಕಷ್ಟ. ಕಾಂತಾರ ದಲ್ಲಿ ಆಗಿರುವ ತಪ್ಪು ಪಟ್ಟಿ ಮಾಡುವುದು ಬಹಳ ಸುಲಭ. ಜನ ಸುಲಭದ್ದು ಆಯ್ಕೆ ಮಾಡಿ ಕೊಳ್ಳುತ್ತಾರಷ್ಟೆ.

ಕ್ಯಾನ್ ತರಹದ ವಿಷಯಕ್ಕೆ ಫೇಸ್‌ಬುಕ್‌ನಲ್ಲಿ ಹೀಗೊಂದು ತಮಾಷೆಯ ಸ್ಟೇಟಸ್ ಹಾಕಿದ್ದೆ- “ರಿಷಬ್ ಶೆಟ್ಟಿ ಆ ಕ್ಯಾನ್ ಅನ್ನು ಉದ್ದೇಶಪೂರ್ವಕವಾಗಿಯೇ ಇಟ್ಟಿದ್ದಾರೆ. ಅದು ಅವರ ಸೆಂಟಿ ಮೆಂಟ್ ಅಂತ. ರಿಷಬ್ ಶೆಟ್ಟಿ, ಕಾಂತಾರ ಚಾಪ್ಟರ್-1 ಚಿತ್ರದಲ್ಲಿ ತಮ್ಮ ಹಿಂದಿನ ಚಿತ್ರದ ಹಲವಾರು ಪಾತ್ರಧಾರಿಗಳನ್ನು ತುರುಕಿಸಿಟ್ಟಿದ್ದಾರೆ. ಬೇಕಿತ್ತೋ ಬೇಡವಾಗಿತ್ತೋ ಅವರೆಲ್ಲರನ್ನೂ ಚಿತ್ರದಲ್ಲಿ ಸೇರಿಸಿದ್ದಾರೆ.

ಅದೇ ರೀತಿ ಈ ಕ್ಯಾನ್ ಕೂಡ ಅವರ ಸೆಂಟಿಮೆಂಟ್ ಭಾಗವಾಗಿ ಬಂದಿದೆ. ರಿಷಬ್ ಈ ಹಿಂದೆ ವಾಟರ್ ಕ್ಯಾನ್ ಸಪ್ಲೈ ಮಾಡ್ತಾ ಇದ್ದರಂತೆ. ಅವರಿಗೆ ಬದುಕು ಕೊಟ್ಟಿರುವ ವಾಟರ್ ಕ್ಯಾನ್‌ಗೆ ಸ್ಕ್ರೀನ್‌ನಲ್ಲಿ ಜಾಗ ಕೊಟ್ಟು ಕೃತಜ್ಞತೆ ಮೆರೆದಿದ್ದಾರೆ. ಕ್ಯಾನ್ ಕೂಡ ಈಗ ಸ್ಟಾರ್ ಆಗಿದೆ" ಎಂದು ತಮಾಷೆಯಾಗಿ ಬರೆದಿದ್ದೆ. ಹಾಗೆ ಬರೆಯುವಾಗ, ಅದು ನಿಜವೂ ಯಾಕಾಗಿರಬಾರದು ಎಂದು ಮನಸ್ಸಿನಲ್ಲಿ ಯೋಚನೆ ಸುಳಿದದ್ದಂತೂ ಸತ್ಯ.

‘ಬಂಗಾರದ ಮನುಷ್ಯ’ ಚಿತ್ರದಲ್ಲಿ ಅಕಸ್ಮಾತ್ತಾಗಿ ಶೂಟಿಂಗ್ ಪರಿಕರವೊಂದು ನುಸುಳಿಬಿಟ್ಟಿತ್ತಂತೆ. ಆದರೆ ಸಿನಿಮಾ ಹಿಟ್ ಆಗಿತ್ತು. ಆ ದೋಷ ಇದ್ದದ್ದಕ್ಕೇ ಸಿನಿಮಾ ಹಿಟ್ ಆಗಿರಬಹುದೆಂಬ ಸೆಂಟಿ ಮೆಂಟ್‌ಗೆ ಸಿದ್ದಲಿಂಗಯ್ಯ ತಮ್ಮ ಎಲ್ಲ ಚಿತ್ರಗಳಲ್ಲೂ ಅದೇ ತಪ್ಪು ಮಾಡುತ್ತಿದ್ದರಂತೆ. ಆ ಪರಿಕರ ಕಾಣುವಂತೆ ಮಾಡುತ್ತಿದ್ದರಂತೆ. ಹೀಗೆ ಸಿನಿಮಾದವರ ಸೆಂಟಿಮೆಂಟುಗಳು ವಿಚಿತ್ರ ವಾಗಿರುತ್ತವೆ.

ಇಂಥವರಿಂದಲೇ ಕ್ಲಾಪ್ ಮಾಡಿಸೋದು, ಇಂಥ ಜಾಗದಲ್ಲಿ ಒಂದಾದ್ರೂ ಶಾಟ್ ತೆಗೆಯೋದು, ಇಂಥವರು ಹೇಗಾದ್ರೂ ಸಿನಿಮಾದಲ್ಲಿ ಮುಖ ತೋರಿಸೋದು, ಹೀರೊ ಹೆಸರು ಇದೇ ಇರಬೇಕು ಅನ್ನೋದು, ಹೀಗೆ ಹಲವಾರು ಸೆಂಟಿಮೆಂಟ್ಸ್ ಇಲ್ಲಿ ಇವೆ. ಕ್ಯಾನ್ ಕೂಡ ಸೆಂಟಿಮೆಂಟ್ ಭಾಗವಾಗಿ‌ ದ್ದರೂ ಇರಬಹುದು. ರಿಷಬ್ ಅವರ ಹಳೆಯ ಚಿತ್ರಗಳಲ್ಲೂ ಎದರೊಂದು ಕಡೆ ಕ್ಯಾನ್ ಇದ್ದಿರ ಬಹುದು. ಡಿಟೆಕ್ಟಿವ್ ದಿವಾಕರರು ಯಾಕೆ ಹುಡುಕಬಾರದು? ಕಾಂತಾರ ಚಿತ್ರದ ಶೂಟಿಂಗ್ ಟೈಮಲ್ಲಿ ತಮ್ಮ ಕಾಲುಗಳು ಹೇಗಾಗಿದ್ದವು ಎಂದು ರಿಷಬ್ ಫೋಟೋ ಹಂಚಿಕೊಂಡಿದ್ದಾರೆ.

ಅದನ್ನು ನೋಡಿದ ಯಾರಿಗೂ ಈ ರೀತಿ ಕ್ಯಾನ್ ವಿಷಯ ಇಟ್ಕೊಂಡು ಕಾಂತಾರ ಚಿತ್ರವನ್ನು ತುಳಿಯೋಣ ಅಂತ ಅನಿಸದು. ಹಾಗೂ ಅನಿಸಿತೆಂದರೆ ಆತ ಸಿನಿಮಾ ಪ್ರೇಮಿಯಲ್ಲ, ವಿಕೃತವ್ಯಕ್ತಿ ಅಷ್ಟೆ.

ನವೀನ್‌ ಸಾಗರ್‌

View all posts by this author