ಇಂಧನ ಚಿಂತನ
- ಪ್ರಕಾಶ ಹೆಗಡೆ
ನಮ್ಮ ರಸ್ತೆಗಳಲ್ಲಿನ ಸಂಚಾರ ದಟ್ಟಣೆ, ರಸ್ತೆಗಳ ಸ್ಥಿತಿ ಹಾಗೂ ಸಿಗ್ನಲ್‌ಗಳಲ್ಲಿ ಸಮಯ ವ್ಯರ್ಥ ಇತ್ಯಾದಿ ಕಾರಣಗಳಿಂದ ವಾಹನಗಳ ಮೈಲೇಜ್ ಕಡಿತಗೊಂಡಿರುವುದನ್ನು ನಮ್ಮ ಹಣೆಬರಹ ಎಂದು ಒಪ್ಪಿಕೊಂಡಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಪೆಟ್ರೋಲ್ ಎಥೆನಾಲ್ ಮಿಶ್ರಣದಿಂದ ಮೈಲೇಜ್ ಇನ್ನೂ ಸುಮಾರು 3ರಿಂದ 6%ವರೆಗೆ ಇಳಿಯುವ ಸಾಧ್ಯತೆಯಿರುವ ವಿಷಯ ನಮ್ಮ ‘ಅಡ್ಜ ಮಾಡ್ಕೊಳ್ಳಿ’ ಮನೋಭಾವದ ಸಹನೆಯ ಎಲ್ಲೆ ಮೀರಿದಂತಿದೆ. ಈ ವಿರೋಧಾಭಾಸದ ಸತ್ಯಾಸತ್ಯತೆ ಅರಿಯಲು ನನ್ನ ಪರಿಚಯದ ನುರಿತ ಮೆಕ್ಯಾನಿಕ್‌ರನ್ನು ಸಂಪರ್ಕಿಸಿದೆ. ಪರಿಣತ ಮುತ್ತುಸ್ವಾಮಿ ದಶಕಗಳಿಂದ ಕಾರ್ ಗ್ಯಾರೇಜ್‌ನ ಮಾಲಿಕ. ಅವರ ಅನುಭವ ಹಾಗೂ ಜ್ಞಾನದ ತೂಕದ ಮಾತಿನಂತೆ- ಎಥನಾಲ್ ಎಂಜಿನ್‌ಗೆ ಒಂಥರಾ ಗೆಳೆಯನೆಂದೇ ಹೇಳಬಹುದು. ಮೂರು ವರ್ಷದೀಚಿಗಿನ ಕಾರಿಗೆ ಗಳಸ್ಯ ಕಂಠಸ್ಯ ದೋಸ್ತ. ಅದಕ್ಕಿಂತ ಹಳೆಯದಾದರೆ ಸ್ವಲ್ಪ ಹೆಚ್ಚು ಕಾಳಜಿ ಬೇಡುವ ಗೆಳೆಯ. ವಾಹನದ ಸರ್ವಿಸ್ ಸರಿಯಾಗಿ ಮಾಡಿಸಿದರೆ ಯಾವುದೇ ತೊಂದರೆ ಇಲ್ಲ. ಅವರೊಂದಿಗೆ ಒಂದರ್ಧ ಗಂಟೆ ಎಥೆನಾಲ್ ಮಿಶ್ರಿತ ಪೆಟ್ರೋಲ್ ಪರಿಣಾಮಗಳ ಬಗೆಗೆ ವಿಚಾರ ವಿನಿಮಯದಾನಂತರ, ವಿಷಯದ ಆಳಕ್ಕಿಳಿದೆ. ಸಂಬಂಧಿತ ಹಲವಾರು ಪ್ರಶ್ನೆಗಳ ಉತ್ತರಗಳನ್ನು ಹಂಚಿಕೊಳ್ಳುತ್ತಿದ್ದೇನೆ.
ಎಥೆನಾಲ್ ಒಂದು ಬಗೆಯ ಬಣ್ಣವಿಲ್ಲದ, ಸುಲಭವಾಗಿ ಉರಿಯುವ, ವಿಶಿಷ್ಟ ವಾಸನೆಯ ದ್ರವ. ರಾಸಾಯನಿಕವಾಗಿ ಇದು ಆಲ್ಕೊಹಾಲ್‌ಗಳ ಗುಂಪಿನ ಜೈವಿಕ ಸಂಯುಕ್ತ. ಹಲ ವರ್ಷಗಳ ಹಿಂದೆ ಉಪಯೋಗವಿಲ್ಲವೆಂದು ಎಣಿಸಲಾದ ಕಬ್ಬಿನ ಮೊಲಾಸಿಸ್‌ನ್ನು ಈಗ ಎಥೆನಾಲನ್ನು ಉತ್ಪಾದಿಸಲು ಉಪಯೋಗಿಸಲಾಗುತ್ತದೆ. ನಮ್ಮಲ್ಲನೇಕರು ಆಲೆಮನೆಯಲ್ಲಿ ಕಾಕಂಬಿ ತಯಾರಿಸುವುದನ್ನು ನೋಡಿಯೇ ಇರುತ್ತೇವೆ. ಕಾಕಂಬಿ ಅಥವಾ ಮೊಲಾಸಿಸ್ ಎಂದರೆ ಸಕ್ಕರೆ ತಯಾರಿಸುವ ಪ್ರಕ್ರಿಯೆ ಯಲ್ಲಿ ಕಬ್ಬಿನ ರಸದಿಂದ ಸಕ್ಕರೆಯನ್ನು ಬೇರ್ಪಡಿಸಿದ ನಂತರ ಉಳಿಯುವ ದಪ್ಪ, ಗಾಢ ಕಂದಿನ ಸಿಹಿ ಪಾಕ. ಮೊಲಾಸಿಸ್ ಅನ್ನು ಬೇಕರಿ ಪದಾರ್ಥಗಳು, ಅಡುಗೆ ತಿನಿಸುಗಳು ಹಾಗೂ ಸಾಂಪ್ರ ದಾಯಿಕ ಔಷಧಿಯ ತಯಾರಿಕೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದರ ಜೊತೆಗೆ ಎಥನಾಲ ನ್ನು ಆಲ್ಕೊಹಾಲಿಕ್ ಪಾನೀಯಗಳು ಮತ್ತು ವಿವಿಧ ಕೈಗಾರಿಕಾ ಉತ್ಪನ್ನಗಳ ತಯಾರಿಕೆಗೆ ಪ್ರಮುಖ ಕಚ್ಚಾ ವಸ್ತುವಾಗಿಯೂ ಉಪಯೋಗಿಸಲಾಗುತ್ತಿದೆ.
ಇದನ್ನೂ ಓದಿ: Prakash Hegde Column: ಜಗತ್ತು ಡಾಲರ್ʼನಿಂದ ದೂರ ಸಾಗುತ್ತಿದೆಯೇ ?
ಪೆಟ್ರೋಲ್ ವಾಹನ ಹೊಂದಿರುವವರಲ್ಲಿ ಎಥೆನಾಲ್ ಬಗೆಗಿನ ದ್ವಂದ್ವ ವಿಚಾರಗಳು ಈಗ ಬಿಸಿ ಚರ್ಚೆಯ ವಸ್ತು. ಭಾರತದಲ್ಲಿ ಇತ್ತೀಚಿನ ಐದು ವರ್ಷಗಳಿಂದ ಪೆಟ್ರೋಲ್‌ಗೆ ಎಥೆನಾಲ್ ಬೆರೆಸ ಲಾಗುತ್ತಿದೆ. ಮಿಶ್ರಣ ಪ್ರಮಾಣವನ್ನು ಪ್ರಾಯೋಗಿಕವಾಗಿ ಹಾಗೂ ಕ್ರಮೇಣವಾಗಿ ಹೆಚ್ಚಿಸಿ ಈಗ ಇಪ್ಪತ್ತು ಪ್ರತಿಶತಕ್ಕೆ ತಲುಪಿಸ ಲಾಗಿದೆ. ಮಿಶ್ರಣದ ಪ್ರಮಾಣವನ್ನು ‘E’ ಅಕ್ಷರದ ಮೂಲಕ ಸೂಚಿಸ ಲಾಗುತ್ತದೆ. ಉದಾಹರಣೆಗೆ ಇ20 ಎಂದರೆ ಇಪ್ಪತ್ತು ಪ್ರತಿಶತ ಎಥೆನಾಲ್ ಹಾಗೂ ಎಂಬತ್ತು ಪ್ರತಿಶತ ಪೆಟ್ರೋಲ್ ಎಂದರ್ಥ.
ಭಾರತದ ಲಕ್ಷಾಂತರ ಕೋಟಿ ವಿದೇಶಿ ವಿನಿಮಯ ವ್ಯಯಿಸುವ ವಸ್ತುವೆಂದರೆ ಕಚ್ಚಾ ತೈಲ. ಪೆಟ್ರೋಲ್‌ಗೆ ಎಥೆನಾಲ್ ಬೆರೆಸುವುದರಿಂದ ಕಚ್ಚಾ ತೈಲದ ಮೇಲಿನ ಅವಲಂಬನೆ ಕಡಿಮೆಯಾಗಿ ಇಲ್ಲಿಯವರೆಗೆ 1.9 ಲಕ್ಷ ಕೋಟಿ ವಿದೇಶಿ ವಿನಿಮಯದ ಉಳಿತಾಯವಾಗಿದೆ. ಜೊತೆಗೆ ದೇಶದ ಇಂಧನ ಭದ್ರತೆಯೂ ಹೆಚ್ಚಿರುವು ದರಿಂದ ಹೊರ್ಮುಜ್ ಜಲಸಂಧಿಯ ದಿಗ್ಬಂಧನದಿಂದುಂಟಾಗಿರುವ ಕಚ್ಚಾ ತೈಲದ ಕೊರತೆಯನ್ನು ನಿಭಾಯಿಸುವಲ್ಲಿ ಎಥೆನಾಲ್ ಪ್ರಮುಖ ಪಾತ್ರ ವಹಿಸಿದೆ.
ಎಥೆನಾಲ್ ಕಾರ್ಯಕ್ರಮದ ಮತ್ತೊಂದು ಮುಖ್ಯ ಲಾಭವೆಂದರೆ ರೈತರ ಬೆಳೆಗೆ ವರ್ಷವಿಡೀ ಸ್ಥಿರ ಬೇಡಿಕೆಯ ಮಳಿಗೆಯ ಲಭ್ಯತೆ. ಕಾರ್ಖಾನೆಗಳು ಸಕ್ಕರೆಯೊಂದಿಗೆ ಎಥೆನಾಲನ್ನೂ ತಯಾರಿಸಿ ಮಾರಾಟ ಮಾಡುವು ದರಿಂದ ಅವುಗಳ ಲಾಭಾಂಶ ಗಣನೀಯವಾಗಿ ಹೆಚ್ಚಾಗುತ್ತದೆ. ಉದಾಹರಣೆಗೆ, ಒಂದು ಟನ್ ಕಬ್ಬಿನಿಂದ ಸುಮಾರು 100 ಕಿಲೋ ಸಕ್ಕರೆ ಉತ್ಪಾದನೆ ಮಾಡಲಾಗುತ್ತದೆ. ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಪ್ರತಿ ಕಿಲೋಗೆ 31 ರೂಪಾಯಿ. ಇದರೊಟ್ಟಿಗೆ ಸುಮಾರು 10 ಲೀಟರ್ ಎಥೆನಾಲನ್ನೂ ತಯಾರಿಸಬಹುದು. ಎಥೆನಾಲ್‌ನ ಬೆಲೆ ಲೀಟರ್‌ಗೆ ಸುಮಾರು 60 ರೂಪಾಯಿ. ಕಂಪನಿಗಳಲ್ಲಿ ದ್ರವ ನಗದು ಹೆಚ್ಚಾಗುವುದರಿಂದ ರೈತರಿಗೆ ತಡವಿಲ್ಲದೇ ಹಣದ ಪಾವತಿಯಾಗು ತ್ತದೆ. ಕ್ಯಾಸ್ಕೇಡಿಂಗ್ ಪರಿಣಾಮವೆಂಬಂತೆ ರೈತರ ಹಾಗೂ ಗ್ರಾಮೀಣ ಆರ್ಥಿಕತೆ ಬಲಗೊಳ್ಳುತ್ತದೆ.
ಚಕಿತಗೊಳಿಸುವ ವಿಚಾರವೆಂದರೆ ವಿಶ್ವದ ಮೊದಲ ಕಾರು ತಯಾರಕರಬ್ಬರಾದ ಹೆನ್ರಿ ಫೋರ್ಡ್ ಇಪ್ಪತ್ತನೆಯ ಶತಮಾನದ ಮೊದಲಲ್ಲಿ ಪರಿಚಯಿಸಿದ ಕಾರನ್ನು ಎಥೆನಾಲ್‌ನಲ್ಲಿಯೂ ಓಡಿಸಬಹು ದಾದ ರೀತಿಯಲ್ಲಿ ವಿನ್ಯಾಸಗೊಳಿಸಿದ್ದರು. ಅಂದರೆ ಎಥೆನಾಲ್ ಬಳಕೆ ನೂರು ವರ್ಷ ಹಳೆಯದು. ಆದರೆ ಕಚ್ಚಾ ತೈಲದ ಬೆಲೆ ಅಗ್ಗವಾಗಿ ಲಭ್ಯವಾಗುತ್ತಿದ್ದುದರಿಂದ ಪೆಟ್ರೋಲ್ ಪ್ರಮುಖ ಇಂಧನವಾಗಿ ಮಾರ್ಪಟ್ಟಿತು. ಈಗ 1975ರಿಂದಲೂ ಎಥೆನಾಲ್ ಪೆಟ್ರೋಲ್ ಮಿಶ್ರಣ ವಿಶ್ವದ ಅನೇಕ ಕಡೆ ಬಳಕೆಯಲ್ಲಿದೆ. ಇಂದು ಈ ಮಿಶ್ರಣದ ಇಂಧನ ವಿಶ್ವದಾದ್ಯಂತ 60ಕ್ಕೂ ಹೆಚ್ಚು ದೇಶಗಳಲ್ಲಿ ಬಳಕೆಯಾಗುತ್ತಿದೆ.
ಎಥೆನಾಲ್ ಬಳಕೆಯ ವಿಚಾರದಲ್ಲಿ ಬ್ರೆಜಿಲ್ ವಿಶ್ವದ ಮಾದರಿ ದೇಶವೆಂದು ಮುಂಚೂಣಿಯಲ್ಲಿದೆ. ಐವತ್ತು ವರ್ಷಗಳ ಹಿಂದೆಯೇ ಬ್ರೆಜಿಲ್ ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಬ್ಬಿನಿಂದ ದೊಡ್ಡ ಪ್ರಮಾಣದಲ್ಲಿ ಎಥೆನಾಲ್ ಉತ್ಪಾದನೆಯನ್ನು ಆರಂಭಿಸಿತು. ಇಂದು ಬ್ರೆಜಿಲ್‌ನಲ್ಲಿ ಪೆಟ್ರೋಲ್‌ನಲ್ಲಿ ಸುಮಾರು 27% ಎಥೆನಾಲ್ ಮಿಶ್ರಣ ಕಡ್ಡಾಯವಾಗಿದೆ. ಅಲ್ಲದೆ, ದೇಶದಲ್ಲಿ ಮಾರಾಟವಾಗುವ ಬಹುತೇಕ ಹೊಸ ಕಾರುಗಳು ಫ್ಲೆಕ್ಸ್-ಫ್ಯೂಯೆಲ್ ವಾಹನಗಳಾಗಿರುವುದರಿಂದ 100% ಎಥೆನಾಲ್ ಬಳಸುವ ಸಾಮರ್ಥ್ಯ ಹೊಂದಿವೆ. ಗ್ರಾಹಕರಿಗೆ ಪೆಟ್ರೋಲ್ ಅಥವಾ ಎಥೆನಾಲ್ ಎರಡರಲ್ಲಿ ಯಾವುದನ್ನಾದರೂ ಆಯ್ಕೆ ಮಾಡುವ ಸ್ವಾತಂತ್ರ್ಯವಿದೆ.
ಮೆಕ್ಕೆ ಜೋಳದ ಮೂಲದಿಂದ ಎಥೆನಾಲ್ ಉತ್ಪಾದನೆಯಲ್ಲಿ ಅಮೆರಿಕ ವಿಶ್ವದ ಅತಿದೊಡ್ಡ ದೇಶವಾಗಿದೆ. ಅಮೆರಿಕದಲ್ಲಿ ಮಾರಾಟವಾಗುವ ಬಹುತೇಕ ಪೆಟ್ರೋಲ್ ಇ10 ಮಿಶ್ರಣದ್ದಾಗಿದೆ. ಅನೇಕ ರಾಜ್ಯಗಳಲ್ಲಿ ಇ15 ಸಾಮಾನ್ಯವಾಗಿ ಲಭ್ಯವಿದ್ದರೆ, ಫ್ಲೆಕ್ಸ್-ಫ್ಯೂಯೆಲ್ ವಾಹನಗಳಿಗೆ ಇ85 ಕೂಡ ವ್ಯಾಪಕವಾಗಿ ಬಳಸಲಾಗುತ್ತಿದೆ. ಯುರೋಪಿಯನ್ ರಾಷ್ಟ್ರಗಳಲ್ಲಿ ಎಥೆನಾಲ್ ಬಳಕೆ ದೇಶದಿಂದ ದೇಶಕ್ಕೆ ಬದಲಾಗುತ್ತದೆ. ಫ್ರಾನ್ಸ್, ಸ್ವೀಡನ್, ಫಿನ್ಲೆಂಡ್, ಜರ್ಮನಿ ಮುಂತಾದ ದೇಶಗಳಲ್ಲಿ ಇ5, ಇ10 ಮತ್ತು ಕೆಲವೆಡೆ ಇ85 ಬಳಕೆಯಲ್ಲಿದೆ. ಯುರೋಪ್‌ನಲ್ಲಿ ಎಥೆನಾಲ್ ಬಳಕೆಯ ಪ್ರೋತ್ಸಾಹಿಯೆಂದರೆ ಜೈವಿಕ ಇಂಧನದ ಬಳಕೆಯಿಂದ ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಗುರಿ.
ಎಥೆನಾಲ್ ಬಳಕೆಯಿಂದ ಕೆಲವು ಸವಾಲುಗಳು ಮತ್ತು ಅನನುಕೂಲಗಳನ್ನೂ ಅನೇಕರು ತರ್ಕಿಸು ತ್ತಿದ್ದಾರೆ. ಎಥೆನಾಲ್‌ನಲ್ಲಿ ಪೆಟ್ರೋಲ್‌ಗಿಂತ ಸುಮಾರು 30% ಕಡಿಮೆ ಶಕ್ತಿಯಿರುವುದರಿಂದ ಎಥೆನಾಲ್ ಮಿಶ್ರಣದ ಪ್ರಮಾಣ ಹೆಚ್ಚಿದಂತೆ ವಾಹನಗಳ ಮೈಲೇಜ್ ಕಡಿಮೆಯಾಗಬಹುದು. ಇ20 ಬಳಸುವುದರಿಂದ 3-6% ಮೈಲೇಜ್ ಕಡಿಮೆಯಾಗಬಹುದೆಂದು ನೀತಿ ಆಯೋಗವೂ ತಿಳಿಸಿದೆ. ಆದರೆ ಸೂಕ್ತ ಎಂಜಿನ್ ವಿನ್ಯಾಸ, ಹೆಚ್ಚಿನ ಕಂಪ್ರೆಷನ್ ಅನುಪಾತ ಮತ್ತು ಎಲೆಕ್ಟ್ರಾನಿಕ್ ಎಂಜಿನ್ ಟ್ಯೂನಿಂಗ್ ಮೂಲಕ ಈ ನಷ್ಟವನ್ನು ಬಹುತೇಕ ಸರಿದೂಗಿಸಬಹುದು ಎಂದು ನೀತಿ ಆಯೋಗವೇ ಸ್ಪಷ್ಟಪಡಿಸಿದೆ.
ಹಳೆಯ ಮಾದರಿಯ ಅಂದರೆ, 2023ರ ಹಿಂದಿನ ವಾಹನಗಳ ಎಂಜಿನ್ ಹಾಗೂ ಇಂಧನ ವ್ಯವಸ್ಥೆ ಗಳನ್ನು ಎಥೆನಾಲ್‌ಗೆ ಹೊಂದುವಂತೆ ವಿನ್ಯಾಸಗೊಳಿಸಿಲ್ಲದಿರುವುದರಿಂದ ರಬ್ಬರ್, ಪ್ಲಾಸ್ಟಿಕ್ ಮತ್ತು ಕೆಲವು ಲೋಹದ ಭಾಗಗಳ ಮೇಲೆ ದೀರ್ಘಾವಧಿಯಲ್ಲಿ ಪರಿಣಾಮ ಬೀರಿ ಇಂಧನ ಕೊಳವೆಗಳು, ಸೀಲುಗಳು ಮತ್ತು ಗ್ಯಾಸ್ಕೆಟ್‌ಗಳು ಹಾಳಾಗುವ ಸಾಧ್ಯತೆ ಇದೆ. ಈ ತರ್ಕಕ್ಕೆ ವಿರುದ್ಧವೆಂಬಂತೆ ಇತ್ತೀಚೆಗೆ ನಡೆದ ಕೇಂದ್ರ ಸರಕಾರದ ಪತ್ರಿಕಾಗೋಷ್ಠಿಯಲ್ಲಿ ಮಾರುತಿ, ಟೊಯೋಟಾ, ಹ್ಯುಂಡೈ, ಹೀರೋ, ಟಿವಿಎಸ್ ಮತ್ತು ಬಜಾಜ್ ಕಂಪನಿಗಳ ಪ್ರತಿನಿಧಿಗಳು, ಹಲವು ವರ್ಷಗಳ ಪರೀಕ್ಷೆಗಳು ಮತ್ತು ನೈಜ ರಸ್ತೆ ಅನುಭವದ ಆಧಾರದ ಮೇಲೆ ಇ20 ಪೆಟ್ರೋಲ್ ಈಗಾಗಲೇ ರಸ್ತೆಯಲ್ಲಿರುವ ವಾಹನಗಳಿಗೆ ಸುರಕ್ಷಿತವಾಗಿದೆ ಎಂದು ತಿಳಿಸಿದ್ದಾರೆ.
ಟೊಯೋಟಾ ನೀಡಿದ ಮಾಹಿತಿಯ ಪ್ರಕಾರ, 2025-26ನೇ ಹಣಕಾಸು ವರ್ಷದಲ್ಲಿ ಕಂಪನಿಯು 2.84 ಕೋಟಿ ವಾಹನಗಳ ಸರ್ವೀಸ್ ಮಾಡಿದ್ದು, ಅವುಗಳಲ್ಲಿ 1.5 ಕೋಟಿಗೂ ಹೆಚ್ಚು ವಾಹನಗಳು ಮೂರು ವರ್ಷಕ್ಕಿಂತ ಹಳೆಯವು. ಈ ವಾಹನಗಳ ಪರಿಶೀಲನೆಯಲ್ಲಿ ಇ20 ಬಳಕೆಯಿಂದ ಉಂಟಾಗುವ ತುಕ್ಕು, ಅಸಹಜ ಸವೆತ ಅಥವಾ ವಾಹನದ ಬಿಡಿಭಾಗಗಳ ಆಯುಷ್ಯ ಕಡಿಮೆಯಾಗಿ ರುವ ಯಾವುದೇ ಪುರಾವೆ ಕಂಡುಬಂದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಮಾರುತಿ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ದೀರ್ಘಾವಧಿಯ ಪರೀಕ್ಷೆಗಳು ಮತ್ತು ಗ್ರಾಹಕರ ಅನುಭವದ ಆಧಾರದ ಮೇಲೆ ಇ20 ಪೆಟ್ರೋಲ್‌ನಿಂದ ವಾಹನಗಳ ಕಾರ್ಯಕ್ಷಮತೆ ಅಥವಾ ಪ್ರಮುಖ ಬಿಡಿ ಭಾಗಗಳ ಬಾಳಿಕೆಗೆ ಯಾವುದೇ ಗಮನಾರ್ಹ ಹಾನಿಯಾಗಿಲ್ಲ ಎಂದು ತಿಳಿಸಿದೆ.
ಭಾರತದಲ್ಲಿ ಎಥೆನಾಲ್‌ನ ಪ್ರಮುಖ ಕಚ್ಚಾ ವಸ್ತುವಾದ ಕಬ್ಬು ಅಧಿಕ ನೀರು ಬೇಡುವ ಬೆಳೆ. ಹೆಚ್ಚಿನ ಹಣದ ಆಸೆಯಿಂದ ಕಬ್ಬಿನ ಕೃಷಿ ಹೆಚ್ಚಿನ ಪ್ರದೇಶಗಳಿಗೆ ವಿಸ್ತಾರವಾಗುವ ಸಾಧ್ಯತೆಯಿದೆ. ಪರ್ಯಾಯವೆಂ ಬಂತೆ ರೈತರು ವರ್ಷದಿಂದ ವರ್ಷಕ್ಕೆ ನಿರಂತರವಾಗಿ ಕಬ್ಬನ್ನೇ ಬೆಳೆಯುವುದನ್ನು ತಡೆಯಲು ಕಡ್ಡಾಯ ಬೆಳೆ ಪರಿವರ್ತನೆ ನೀತಿಯನ್ನು ಜಾರಿಗೆ ತರಬಹುದು. ಹಾಗೆಯೇ ಕಬ್ಬು ಬೆಳೆಯಬಹುದಾದ ಪ್ರದೇಶಗಳನ್ನು ಸರಕಾರ ನಿಗದಿಪಡಿಸಿ ಕೃಷಿ ವಿಸ್ತರಣೆಯನ್ನು ತಡೆಯಬಹುದು.
ಎಥೆನಾಲ್ ತೇವಾಂಶವನ್ನು ಸುಲಭವಾಗಿ ಹೀರಿಕೊಳ್ಳುವ ಗುಣ ಹೊಂದಿದೆ. ಆದ್ದರಿಂದ ಎಥೆನಾಲ್ ಮಿಶ್ರಿತ ಇಂಧನದ ಗುಣಮಟ್ಟ ಕಾಪಾಡಲು ಜಲನಿರೋಧಕ ಸಂಗ್ರಹಣಾ ಟ್ಯಾಂಕ್‌ಗಳು, ಸೋರಿಕೆ ರಹಿತ ಸಾಗಣೆ ವ್ಯವಸ್ಥೆ ಮತ್ತು ಕಟ್ಟುನಿಟ್ಟಾದ ಗುಣಮಟ್ಟ ನಿಯಂತ್ರಣದ ಅವಶ್ಯಕತೆಯ ಪರಿಸರ ವನ್ನು ಕಲ್ಪಿಸುವ ಅವಶ್ಯಕತೆಯಿದೆ.
ವಿಜ್ಞಾನಿಗಳು ಮತ್ತು ನೀತಿ ತಜ್ಞರು ಎಥೆನಾಲ್‌ನ ಭವಿಷ್ಯವನ್ನು ಕೇವಲ ಕಬ್ಬಿನ ಮೇಲೆ ಅವಲಂಬಿ ಸದೆ, ಮೆಕ್ಕೆಜೋಳ, ಕೃಷಿ ತ್ಯಾಜ್ಯ, ಅಕ್ಕಿ ಹುಲ್ಲು, ಕಬ್ಬಿನ ಬಗಾಸ್, ಬಿದಿರು ಹಾಗೂ ನಗರಗಳ ಜೈವಿಕ ತ್ಯಾಜ್ಯ ಗಳಿಂದ ಉತ್ಪಾದಿಸುವ ಎರಡನೇ ಮತ್ತು ಮೂರನೇ ತಲೆಮಾರಿನ ಎಥೆನಾಲ್ ಕಡೆಗೆ ಗಮನಹರಿಸುವ ಧಾವಂತ ತೋರುತ್ತಿದ್ದಾರೆ. ಜೊತೆಗೆ ಹನಿ ನೀರಾವರಿ, ಕಮ್ಮಿ ನೀರು ಬಳಕೆಯ ತಳಿಗಳು ಮತ್ತು ನೀರಿನ ಸಮರ್ಥ ನಿರ್ವಹಣೆಯನ್ನೂ ಕಡ್ಡಾಯವಾಗಿ ಅಳವಡಿಸಬೇಕೆಂಬ ಕರಡು ಪ್ರಶಾಸನವನ್ನು ಜಾರಿಗೊಳಿಸುವ ಪ್ರಯತ್ನ ನಡೆದಿದೆ.
ಜಗತ್ತಿನ ಬಹುತೇಕ ದೇಶಗಳಲ್ಲಿ ಎಥೆನಾಲ್‌ನ್ನು ಪೆಟ್ರೋಲ್‌ಗೆ ಮಾತ್ರ ಬೆರೆಸಲಾಗುತ್ತದೆ. ಎಥೆನಾಲ್ ಆಲ್ಕೊಹಾಲ್ ಆಧಾರಿತ ಜೈವಿಕ ಇಂಧನವಾಗಿರುವುದರಿಂದ ಇದು ಸ್ಪಾರ್ಕ್ ಇಗ್ನಿಷನ್ ತಂತ್ರಜ್ಞಾನ ದಲ್ಲಿ ಕಾರ್ಯನಿರ್ವಹಿಸುವ ಪೆಟ್ರೋಲ್ ಎಂಜಿನ್‌ಗಳಿಗೆ ಮಾತ್ರ ಸೂಕ್ತವಾಗಿದೆ. ಇದಕ್ಕೆ ತದ್ವಿರುದ್ಧ ವೆಂಬಂತೆ ಡೀಸೆಲ್ ಎಂಜಿನ್‌ಗಳು ಕಂಪ್ರೆಷನ್ ಇಗ್ನಿಷನ್ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸು ತ್ತವೆ. ಎಥೆನಾಲ್ ಮತ್ತು ಡೀಸೆಲ್ ಸುಲಭವಾಗಿ ಒಂದಕ್ಕೊಂದು ಬೆರೆಯುವುದಿಲ್ಲ. ಜೊತೆಗೆ ಎಥೆನಾಲ್‌ನ ಸೆಟೇನ್ ಸಂಖ್ಯೆ ಕಡಿಮೆ ಇರುವುದರಿಂದ ಡೀಸೆಲ್ ಎಂಜಿನ್‌ನಲ್ಲಿ ಸಮರ್ಪಕ ದಹನ ವಾಗುವುದಿಲ್ಲ. ಆದ್ದರಿಂದ ಸಾಮಾನ್ಯ ಡೀಸೆಲ್ ವಾಹನಗಳಲ್ಲಿ ಎಥೆನಾಲ್ ಬಳಕೆ ಪ್ರತೀತಿಯಲ್ಲಿಲ್ಲ.
ಎಥೆನಾಲ್ ಪರಿಸರ ಸ್ನೇಹಿಯೆನ್ನುವುದರಲ್ಲಿ ಕಿಂಚಿತ್ತೂ ಸಂದೇಹವಿಲ್ಲ. ಆದರೆ ಎಥೆನಾಲ್ ನಿಜವಾದ ಹಸಿರು ಇಂಧನವಾಗಬೇಕಾದರೆ, ಕಚ್ಚಾ ವಸ್ತುಗಳ ಆಯ್ಕೆ, ನೀರಿನ ಬಳಕೆ ಮತ್ತು ಉತ್ಪಾದನಾ ವಿಧಾನಗಳೂ ಅಷ್ಟೇ ಸುಸ್ಥಿರವಾಗಿರಬೇಕು. ಇ೨೦ ಬಗ್ಗೆ ಚರ್ಚಿಸುವಾಗ ಅದರ ಪರಿಸರ ಮತ್ತು ಇಂಧನ ಭದ್ರತೆಯ ಲಾಭಗಳ ಜೊತೆಗೆ, ಮೈಲೇಜ್‌ನಲ್ಲಿ ಆಗಬಹುದಾದ ಸಣ್ಣ ಇಳಿಕೆಯನ್ನು ವಾಸ್ತವಿಕವಾಗಿ ಪರಿಗಣಿಸುವುದು ಅಗತ್ಯ. ಈಗ ಹೇಳಿ. ನಮ್ಮ ಮುತ್ತುಸ್ವಾಮಿಯ ಹೇಳಿಕೆಯಲ್ಲಿ ಅನುಭವದ ಸತ್ಯವಿದೆಯಲ್ಲವೇ?