ಮೂರ್ತಿಪೂಜೆ
ಕಳೆದ ವಾರ ದಿಲ್ಲಿಗೆ ಹೋದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ರಾಹುಲ್ ಗಾಂಧಿ ತುಂಬ ಕಕ್ಕುಲತೆ ತೋರಿಸಿದರಂತೆ. ‘ಸಿದ್ಧರಾಮಯ್ಯಾಜೀ. ನೀವು ನಮ್ಮ ಪಕ್ಷದ ಆಸ್ತಿ. ಮುಂದಿನ ದಿನಗಳಲ್ಲಿ ನಾವು ಮರಳಿ ಕರ್ನಾಟಕದ ಅಧಿಕಾರ ಸೂತ್ರ ಹಿಡಿಯಲು ನಿಮ್ಮ ಶಕ್ತಿ ಮುಖ್ಯ. 2029ರ ಲೋಕಸಭಾ ಚುನಾವಣೆಯಲ್ಲಿ ನಾವು ಬಿಜೆಪಿ ಮಿತ್ರಕೂಟವನ್ನು ಎದುರಿಸಬೇಕು ಎಂದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಮರಳಿ ಕರ್ನಾಟಕವನ್ನು ಗೆಲ್ಲಲೇಬೇಕು.
ಹೀಗಾಗಿ ನೀವು ಪಕ್ಷ ಸಂಘಟನೆಗೆ ನಿಮ್ಮ ಶಕ್ತಿ ಹಾಕಬೇಕು. ಅಂದ ಹಾಗೆ ನೀವು ಈಗ ಚುನಾವಣಾ ರಾಜಕೀಯದಿಂದ ನಿವೃತ್ತಿಯ ಮಾತನಾಡುತ್ತಿದ್ದೀರಿ. ಹಾಗೆ ಹೇಳಿದರೆ ಅಹಿಂದ ಮತ ಬ್ಯಾಂಕ್ ಛಿದ್ರವಾಗುವುದಿಲ್ಲವೇ? ಎಲ್ಲಕ್ಕಿಂತ ಮುಖ್ಯವಾಗಿ ನೀವು ಚುನಾವಣಾ ರಾಜಕೀಯದಿಂದ ಏಕೆ ನಿವೃತ್ತಿಯಾಗಬೇಕು? ಪಕ್ಷ ನಿಮ್ಮಿಂದ ಬಹಳಷ್ಟನ್ನು ಬಯಸಿದೆ. ನಿಮ್ಮ ನಾಯಕತ್ವದ ಅಗತ್ಯ ಪಕ್ಷಕ್ಕಿದೆ’ ಎಂದಿದಾರೆ. ಹೀಗೆ ರಾಹುಲ್ ಗಾಂಧಿ ತಮ್ಮ ಜತೆ ಅಚ್ಚಾ, ಅಚ್ಚಾ ಮಾತನಾಡಿದರೂ ದೊಡ್ಡ ಮಟ್ಟದ ಪ್ರತಿಕ್ರಿಯೆ ನೀಡದ ಸಿದ್ದರಾಮಯ್ಯ ಅವರು, ‘ದಸರಾ ಕಳೆಯಲಿ. ಪಕ್ಷ ಸಂಘಟನೆಗೆ ರಾಜ್ಯ ಪ್ರವಾಸ ಮಾಡುತ್ತೇನೆ’ ಅಂತ ಮೊಟಕಾಗಿ ಹೇಳಿದ್ದಾರೆ.
ಈ ಹಂತದಲ್ಲಿ ರಾಹುಲ್ ಗಾಂಧಿಯವರು, ‘ನೀವೇನು ಬಯಸುತ್ತೀರೋ? ಪಕ್ಷ ಅದನ್ನು ಮಾಡುತ್ತದೆ. ನಿಮಗೆ ಸಂಪೂರ್ಣ ಗೌರವ ಕೊಡುತ್ತದೆ’ ಎಂದಿದ್ದಾರಾದರೂ, ಸಿದ್ದರಾಮಯ್ಯ ಅವರು ಕೂಲಾಗಿ, ‘ಸಂಪುಟಕ್ಕೆ ಮೈನರ್ ಸರ್ಜರಿ ಮಾಡಿದರೆ ಹಾವೇರಿಯ ಬಸವರಾಜ ಶಿವಣ್ಣನವರ್ ಮತ್ತು ಬಳ್ಳಾರಿ ಜಿಲ್ಲೆಯ ಅನ್ನಪೂರ್ಣ ತುಕಾರಾಂ ಅವರನ್ನು ತೆಗೆದುಕೊಳ್ಳಲು ಸೂಚಿಸಿ’ ಅಂತ ಹೇಳಿ ವಾಪಸ್ಸು ಬಂದಿದ್ದಾರೆ. ಆದರೆ ಹೀಗೆ ದಿಲ್ಲಿಗೆ ಹೋಗಿ ಹೇಳಬೇಕಾದ್ದನ್ನು ಹೇಳಿ ವಾಪಸ್ಸು ಬಂದರೂ ಸಿದ್ದರಾಮಯ್ಯ ಅವರು ಸಮಾಧಾನದಿಂದಿಲ್ಲ.
ಇದನ್ನೂ ಓದಿ: R T Vittalmurthy Column: ಕುಮಾರಣ್ಣ ಬಾಂಬು ಹಾಕುವ ಟೈಂ ಬಂತು
ಕಾರಣ? ತಮ್ಮನ್ನು ಯಾವ ಕಾರಣಕ್ಕೂ ಕೆಳಗಿಳಿಸುವುದಿಲ್ಲ ಎಂದಿದ್ದ ರಾಹುಲ್ ಗಾಂಧಿ ಏಕಾಏಕಿ ಮನಸ್ಸು ಬದಲಾಯಿಸಿದ್ದು ಅವರ ಮನಸ್ಸನ್ನು ಕೊರೆಯುತ್ತಲೇ ಇದೆ. ಅದಕ್ಕಿಂತ ಮುಖ್ಯವಾಗಿ ತಮ್ಮ ಕಟ್ಟರ್ ಬೆಂಬಲಿಗರಾಗಿದ್ದ ಸತೀಶ್ ಜಾರಕಿಹೊಳಿ ಮತ್ತು ಜಮೀರ್ ಅಹ್ಮದ್ ಅವರಂತವರು ಏಕಾಏಕಿ ಡಿಕೆ ಪಾಳಯಕ್ಕೆ ಶಿಫ್ಸ್ ಆದ ಬೆಳವಣಿಗೆ ಅವರನ್ನು ಕೊರೆಯುತ್ತಿದೆ. ವಾಸ್ತವವಾಗಿ ತಾವು ಅಧಿಕಾರದಲ್ಲಿದ್ದಾಗಲೇ ಈ ನಾಯಕರು ಡಿಕೆ ಪಾಳಯಕ್ಕೆ ಶಿಫ್ಟ್ ಆದ ಬಗ್ಗೆ ಸಿದ್ದರಾಮಯ್ಯ ಅವರಿಗೆ ಮಾಹಿತಿ ಸಿಕ್ಕಿತ್ತಂತೆ.
ಮೂಲಗಳ ಪ್ರಕಾರ ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್ ಸೇರಿದಂತೆ ತಮ್ಮ ಹಿಂದಿದ್ದ ಹಲ ನಾಯಕರು ಡಿಕೆ ಕ್ಯಾಂಪಿಗೆ ಶಿಫ್ಟ್ ಆದಾಗ, ಅವರ ಸಂಪುಟದ ಪರಮಾಪ್ತ ಸಚಿವರೊಬ್ಬರು ಈ ಕುರಿತು ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದ್ದಾರೆ.
‘ಸಾರ್, ಸತೀಶ್ ಜಾರಕಿಹೊಳಿ ಮತ್ತು ಜಮೀರ್ ಅಹ್ಮದ್ ಸೇರಿದಂತೆ ಮೂರು ಜನರಿಗೆ ಡಿಸಿಎಂ ಹುದ್ದೆಯ ಆಫರ್ರು ನೀಡಲಾಗಿದೆ. ಅದರಲ್ಲೂ ಡಿಕೆ ಅವರ ಪರವಾಗಿ ಸುರ್ಜೇವಾಲಾ ಅವರೇ ಈ ಮೂವರು ನಾಯಕರಿಗೆ ‘ನೀವು ಡಿಸಿಎಂ ಹುದ್ದೆಗೇರುತ್ತೀರಿ. ಈ ಪೈಕಿ ಜಾರಕಿಹೊಳಿ ಅವರು ಡಿಸಿಎಂ ಹುದ್ದೆಯ ಜತೆ ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ’ ಅಂತ ಪ್ರಾಮಿಸ್ಸು ಮಾಡಿದ್ದಾರೆ.
ಹೀಗಾಗಿ ಐದು ವರ್ಷ ನೀವು ಸಿಎಂ ಹುದ್ದೆಯಿಂದ ಇಳಿಯಬಾರದು ಎನ್ನುತ್ತಿದ್ದವರು ಇವತ್ತು ಆ ಕಡೆ ಹೋಗಿದ್ದಾರೆ’ ಅಂತ ಈ ಪರಮಾಪ್ತ ಸಚಿವರು ಹೇಳಿದ ಮೇಲೆ ಸಿದ್ದರಾಮಯ್ಯ ಎಚ್ಚೆತ್ತಿದ್ದಾ ರಾದರೂ ಅಷ್ಟರ ಕಾಲ ಮೀರಿ ಹೋಗಿದೆ. ಇಷ್ಟಾದರೂ ಮುಂದೆ ಡಿಕೆ ಮುಖ್ಯಮಂತ್ರಿಯಾದ ನಂತರ ಡಿಸಿಎಂ ಹುದ್ದೆಗೇರುವ ಕನಸು ಕಾಣುತ್ತಿದ್ದ ಸತೀಶ್ ಜಾರಕಿಹೊಳಿ, ಜಮೀರ್ ಸೇರಿದಂತೆ ಮೂವರಿಗೆ ಅಡ್ಡಗಾಲು ಹಾಕಿದ ಸಿದ್ದರಾಮಯ್ಯ ಅವರು ಪರಮೇಶ್ವರ್ ಒಬ್ಬರೇ ಡಿಸಿಎಂ ಅಗುವಂತೆ ನೋಡಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಈ ಸಂದರ್ಭದಲ್ಲಿ ‘ಮೂವರ ಜತೆ ನಾಲ್ಕನೆಯವರಾಗಿ ನಿಮ್ಮ ಪುತ್ರ ಯತೀಂದ್ರ ಅವರನ್ನು ಡಿಸಿಎಂ ಮಾಡೋಣ’ ಎಂಬ ಪ್ರಪೋಸಲ್ಲನ್ನು ನಿರಾಕರಿಸಿದ್ದಾರೆ. ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಸತೀಶ್ ಜಾರಕಿಹೊಳಿ ಅವರ ಬದಲು ಬಿ.ಕೆ. ಹರಿಪ್ರಸಾದ್ ಆ ಜಾಗಕ್ಕೆ ಬರುವಂತೆ ಸಿದ್ದರಾಮಯ್ಯ ನೋಡಿಕೊಂಡಿದ್ದಾರಾದರೂ ಇದಿಷ್ಟರಿಂದ ಸಿದ್ದರಾಮಯ್ಯ ಅವರ ಸಿಟ್ಟು ತಣಿದಿಲ್ಲ.
ಹೀಗಾಗಿ ಜಮೀರ್ ಅಹ್ಮದ್ ಸಂಪುಟದಿಂದ ಹೊರಬರುವವರೆಗೆ ಪಕ್ಷ ಸಂಘಟನೆಗೆ ರಾಜ್ಯ ಪ್ರವಾಸ ಮಾಡುವುದಿಲ್ಲ ಅಂತ ಸಿಗ್ನಲ್ಲು ರವಾನಿಸಿ ಮೌನವಾಗಿ ಕುಳಿತಿದ್ದಾರೆ. ಹೀಗಾಗಿ ‘ಸಂಪುಟಕ್ಕೆ ಮೈನರ್ ಸರ್ಜರಿ ಮಾಡುವ ಬಗ್ಗೆ ಚರ್ಚಿಸಲು ವರಿಷ್ಟರ ಟೈಮು ತೆಗೆದುಕೊಂಡಿದ್ದೇನೆ. ದಿಲ್ಲಿಗೆ ಬನ್ನಿ. ನಾನು, ನೀವು, ಹರಿಪ್ರಸಾದ್ ದಿಲ್ಲಿಗೆ ಹೋಗಿ ಬರೋಣ’ ಅಂತ ಡಿಕೆ ಕರೆದರೂ, ‘ಮೊದಲು ಜಮೀರ್ ವಿಷಯ ಸೆಟ್ಲ್ ಮಾಡಿಕೊಂಡು ಬನ್ನಿ. ಆನಂತರ ದಿಲ್ಲಿಗೆ ಹೋಗುವ ಮಾತು’ ಅಂತ ಹೇಳಿದ್ದಾರೆ.
ಹೀಗೆ ಡಿಕೆಗೆ ಹೇಳಿದವರು ನಂತರ ತಾವೊಬ್ಬರೇ ದಿಲ್ಲಿಗೆ ಹೋಗಿ, ‘ಬಸವರಾಜ ಶಿವಣ್ಣನವರ್ ಮತ್ತು ಅನ್ನಪೂರ್ಣ ತುಕಾರಾಂ’ ಅವರ ಹೆಸರು ಹೇಳಿ ವಾಪಸ್ಸು ಬಂದಿದ್ದಾರೆ. ಪರಿಣಾಮ? ಸಿದ್ದರಾಮ ಯ್ಯ ಅವರು ಇಡುತ್ತಿರುವ ಹೆಜ್ಜೆ ರಾಹುಲ್ ಗಾಂಧಿ ಅವರಿಗೆ ಮಾತ್ರವಲ್ಲದೆ ಒಂದು ಕಾಲದ ಕಟ್ಟರ್ ಬೆಂಬಲಿಗರಾಗಿದ್ದ ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್ ಅವರಂತವರಿಗೂ ತಲೆನೋವಾಗಿ ಹೋಗಿದೆ. ಆದರೆ ಇದನ್ನು ಸರಿಪಡಿಸುವ, ಸಿದ್ದರಾಮಯ್ಯ ಅವರನ್ನು ಸಮಾಧಾನಿಸುವ ಮಾರ್ಗ ಯಾರಿಗೂ ಗೋಚರವಾಗುತ್ತಿಲ್ಲ.
ಹೀಗಾಗಿ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ಎಂಬ ಕತೆಯಂತೆ ಸಿದ್ದು ಕೊರಳಿಗೆ ಗಂಟೆ ಕಟ್ಟುವವರು ಯಾರು? ಅಂತ ಯೋಚಿಸತೊಡಗಿದ್ದಾರೆ.
ಬೇರೆ ದಾರಿಯತ್ತ ರಾಜಣ್ಣ?
ಈ ಮಧ್ಯೆ ಸಿದ್ದರಾಮಯ್ಯ ಬ್ರಿಗೇಡ್‌ನ ಲಾಯಲ್ ಬ್ರಿಗೇಡಿಯರ್ ಕೆ.ಎನ್. ರಾಜಣ್ಣ ಬೇರೆ ಮಾರ್ಗ ನೋಡಿ ಕೊಳ್ಳಲು ಬಯಸಿದ್ದಾರೆ. ಅಂದ ಹಾಗೆ ಈ ಹಿಂದೆ ಮಂತ್ರಿಗಿರಿ ಕಳೆದುಕೊಂಡರೂ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಲು ರಾಜಣ್ಣ ತಯಾರಿ ನಡೆಸಿದ್ದರು. ಅವರ ಆಪ್ತ ಮೂಲಗಳ ಪ್ರಕಾರ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷಗಿರಿಗೆ ಚುನಾವಣೆ ನಡೆದಿದ್ದರೂ ಗೆಲ್ಲುವ ವಿಶ್ವಾಸ ರಾಜಣ್ಣ ಅವರಿಗಿತ್ತು.
ಆದರೆ ಸಿಎಂ ಡಿ.ಕೆ.ಶಿವಕುಮಾರ್ ದಿಲ್ಲಿ ಮಟ್ಟದಲ್ಲಿ ನಡೆಸಿದ ಕಸರತ್ತು ಅವರ ಸಂಬಂಧಿ ರವಿಯವರ ದಾರಿಯನ್ನು ಸುಗಮಗೊಳಿಸಿತಲ್ಲದೆ ಚುನಾವಣೆ ನಡೆಯದೆಯೇ ಅವರು ಅಧ್ಯಕ್ಷ ಗಾದಿಯನ್ನೇರಿದರು. ಅದರೆ ಸಿದ್ದರಾಮಯ್ಯ ಅವರ ಬೆಂಬಲವಿದ್ದರೂ ದಿಲ್ಲಿ ವರಿಷ್ಠರ ಒಲವು ಇಲ್ಲದ ಕಾರಣ ರಾಜಣ್ಣ ನಿರಾಶರಾಗಬೇಕಾಯಿತು. ಹೀಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷಗಿರಿ ದೊರೆಯದೆ ನಿರಾಸರಾಗಿರುವ ರಾಜಣ್ಣ ಈಗ ಬೇರೆ ದಾರಿ ಹಿಡಿಯಲು ನಿರ್ಧರಿಸಿದ್ದಾರೆ. ಅರ್ಥಾತ್, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದೆ, ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟು ಸಂಸತ್ತಿನ ಕಡೆ ಹೋಗಲು ಬಯಸಿದ್ದಾರೆ. ಅಂದ ಹಾಗೆ ಕ್ಷೇತ್ರ ಪುನರ್ವಿಂಗಡಣೆ ಕಾರ್ಯ ನಡೆದು ಹೆಚ್ಚುವರಿ ಸಂಸತ್ ಕ್ಷೇತ್ರಗಳು ಕರ್ನಾಟಕದಲ್ಲಿ ಸೃಷ್ಟಿಯಾಗಲಿದ್ದು, ಅದರ ಸ್ವರೂಪ ಸ್ಪಷ್ಟವಾದ ನಂತರ ತಾವು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ನಿರ್ಧರಿಸಲಿದ್ದಾರೆ.
ಯಡಿಯೂರಪ್ಪ ಖುಷಿಗೆ ಏನು ಕಾರಣ?
ತಮ್ಮ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ ಬಳ್ಳಾರಿ ಪಾದಯಾತ್ರೆಯ ನಂತರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಖುಷಿಯಾಗಿದ್ದಾರಂತೆ. ತಮ್ಮ ಸುದೀರ್ಘ ರಾಜಕೀಯ ಬದುಕಿನ ದಿನಗಳನ್ನು ನೆನಪಿಸಿಕೊಳ್ಳು ತ್ತಿರುವ ಅವರು, ‘ಪಾದಯಾತ್ರೆಗಳ ಸಂದರ್ಭದಲ್ಲಿ ಜನ ನನ್ನನ್ನು ಯಾವ ರೀತಿ ಬೆಂಬಲಿಸು ತ್ತಿದ್ದರೋ? ಈಗ ನನ್ನ ಮಗನಿಗೆ ಅದಕ್ಕಿಂತ ಜಾಸ್ತಿ ಬೆಂಬಲ ಕೊಡುತ್ತಿದ್ದಾರೆ’ ಅಂತ ಹೇಳುತ್ತಿದ್ದಾರೆ.
ಅರ್ಥಾತ್, ಯಡಿಯೂರಪ್ಪ ಅವರಿಗೆ ವಿಜಯೇಂದ್ರ ಅವರ ಬಳ್ಳಾರಿ ಪಾದಯಾತ್ರೆಯ ಯಶಸ್ಸಿ ನಿಂದ ಖುಷಿ ಆಗಿದೆ. ಅಂದ ಹಾಗೆ ಪುತ್ರ ವಿಜಯೇಂದ್ರ ನೇತೃತ್ವದ ಪಾದಯಾತ್ರೆಗೆ ಬಹುತೇಕ ಹಿರಿಯ ನಾಯಕರು ಸಾಥ್ ಕೊಡದ ಬೆಳವಣಿಗೆಯ ಬಗ್ಗೆ ಅವರಿಗೆ ಅಸಮಾಧಾನವಿದ್ದರೂ ಯಡಿಯೂರಪ್ಪ ಅವರು ಮಾತ್ರ ಈ ಬಗ್ಗೆ ನೆಗೆಟಿವ್ ಕಾಮೆಂಟ್ ಪಾಸ್ ಮಾಡುತ್ತಿಲ್ಲ. ಕಾರಣ? ಪಾದಯಾತ್ರೆಯಂತಹ ಎಪಿಸೋಡುಗಳಿಗೆ ಯಾರು ಬೆಂಬಲ ಕೊಡಲಿ, ಬಿಡಲಿ, ಆದರೆ ಆ ಸಂದರ್ಭದಲ್ಲಿ ಕಣ್ಣಿಗೆ ಕಾಣುವ ನಾಯಕ ಜನರ ವಿಶ್ವಾಸ ಗಳಿಸಲು ಶಕ್ತನಾಗುತ್ತಾನೆ ಎಂಬ ಮೂಲ ಸತ್ಯ ಯಡಿಯೂರಪ್ಪ ಅವರಿಗೆ ಗೊತ್ತಿದೆ. ಹಾಗೆ ನೋಡಿದರೆ ಅವರು ಪಾದಯಾತ್ರೆ ಮಾಡುತ್ತಿದ್ದ ದಿನಗಳಲ್ಲಿ ಪಕ್ಷದ ನಾಯಕರ ದಂಡೇನೂ ನೆರೆದಿರುತ್ತಿರಲಿಲ್ಲ.
ಮತ್ತದರ ಪರಿಣಾಮವಾಗಿ ಜನರಿಗೆ ಬಿಜೆಪಿ ಎಂದರೆ ಯಡಿಯೂರಪ್ಪ, ಯಡಿಯೂರಪ್ಪ ಎಂದರೆ ಬಿಜೆಪಿ ಎಂಬ ಭಾವನೆ ಗಟ್ಟಿಯಾಯಿತು. ಇವತ್ತು ಸಚಿವ ನಾಗೇಂದ್ರ ರಾಜೀನಾಮೆಯ ನಂತರ ಪಕ್ಷ ನಡೆಸಿದ ಪಾದಯಾತ್ರೆಯಲ್ಲಿ ವಿಜಯೇಂದ್ರ ಏಕಾಂಗಿ ವೀರನಂತೆ ಕಂಗೊಳಿಸಿದರೂ ಮತ್ತು ಬಹುತೇಕ ಹಿರಿಯ ನಾಯಕರ ಉಪಸ್ಥಿತಿ ಇಲ್ಲದೆ ಹೋದರೂ ಇತಿಹಾಸ ಮರುಕಳಿಸಲಿದೆ ಮತ್ತು ಬಿಜೆಪಿ ಎಂದರೆ ವಿಜಯೇಂದ್ರ, ವಿಜಯೇಂದ್ರ ಎಂದರೆ ಬಿಜೆಪಿ ಅಂತ ಜನ ಗುರುತಿಸುವ ಸ್ಥಿತಿ ಸೃಷ್ಟಿಯಾಗಲಿದೆ ಎಂಬುದು ಯಡಿಯೂರಪ್ಪ ಥಿಂಕಿಂಗು.
ಪರಿಣಾಮ? ‘ಮುಂದಿನ ದಿನಗಳಲ್ಲಿ ವಿಜಯೇಂದ್ರ ಅವರ ಪಾದಯಾತ್ರೆಯ ಎಪಿಸೋಡುಗಳು ಹೆಚ್ಚಾಗಲಿವೆ. ಈ ಎಪಿಸೋಡುಗಳಿಗೆ ಸಹಕಾರ ಕೊಡುವ ನಾಯಕರು ಉಳಿಯುತ್ತಾರೆ ಇಲ್ಲವಾದರೆ ಸೈಡ್ ಲೈನಿಗೆ ಸರಿಯುತ್ತಾರೆ’ ಎಂಬುದು ಯಡಿಯೂರಪ್ಪ ಅವರ ಲೆಕ್ಕಾಚಾರ. ಪ್ರೆಸಿಡೆಂಟ್ ವಾರ್ ಕ್ಲೆ ಮ್ಯಾP ಇನ್ನು ರಾಜ್ಯ ಬಿಜೆಪಿಯಲ್ಲಿ ಮೂರು ವರ್ಷದಿಂದ ನಡೆಯುತ್ತಾ ಬಂದ ಪ್ರೆಸಿಡೆಂಟ್ ವಾರ್ ಅಂತಿಮ ಹಂತಕ್ಕೆ ಬಂದಿದೆ.
ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಅಧಿಕಾರಾವಧಿ ಇನ್ನು ಎರಡು ತಿಂಗಳಷ್ಟೇ ಉಳಿದಿದ್ದು, ಈ ಹಿನ್ನೆಲೆಯ ನೂತನ ಅಧ್ಯಕ್ಷರ ಆಯ್ಕೆ ಜವಾಬ್ದಾರಿ ಹೊತ್ತು ವೀಕ್ಷಕರ ತಂಡ ಕರ್ನಾಟಕಕ್ಕೆ ಆಗಮಿಸಲಿದೆ. ಹೀಗೆ ಬರುವ ವೀಕ್ಷಕರು ರಾಜ್ಯ ಬಿಜೆಪಿಯ ಪ್ರಮುಖರನ್ನು ಕೂರಿಸಿಕೊಂಡು, ಪ್ರತ್ಯೇಕವಾಗಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿ ಯಾರ ಒಲವು ಯಾರ ಕಡೆಗೆ ಎಂಬ ಕುರಿತು ಸ್ಪಷ್ಟ ಚಿತ್ರ ಪಡೆಯಲಿzರೆ. ಈ ವಿಷಯ ಬಂದಾಗ ವೀಕ್ಷಕರು ವಿಜಯೇಂದ್ರ ಅವರ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಅಂತಿಮಗೊಳಿಸಲಿದ್ದಾರೆ.
ಯಾಕೆಂದರೆ ಬಳ್ಳಾರಿ ಪಾದಯಾತ್ರೆಯ ನಂತರ ನಿತಿನ್ ನಬಿನ್, ಜೆ.ಪಿ.ನಡ್ಡಾ ಸೇರಿದಂತೆ ಬಹುತೇಕ ನಾಯಕರು ವಿಜಯೇಂದ್ರ ಅವರ ಪರವಾಗಿ ನಿಲ್ಲುವ ಸೂಚನೆ ನೀಡಿದ್ದಾರೆ ಎಂಬುದು ಯಡಿಯೂ ರಪ್ಪ ಬಣದ ವಿಶ್ವಾಸ. ಆದರೆ ಯಡಿಯೂರಪ್ಪ ವಿರೋಧಿ ಬಣ, ‘ವಿಜಯೇಂದ್ರ ಅವರನ್ನು ಮುಂದಿನ ವಿಧಾನಸಭೆ ಚುನಾವಣೆಯ ತನಕ ಮುಂದುವರಿಸುವುದು ಡೌಟು. ಹೀಗಾಗಿ ಮುರುಗೇಶ್ ನಿರಾಣಿ, ವಿ.ಸೋಮಣ್ಣ ಇಲ್ಲವೇ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಪೈಕಿ ಯಾರಾದರೊಬ್ಬರು ಮುಂದಿನ ಅಧ್ಯಕ್ಷರಾಗುವುದು ಗ್ಯಾರಂಟಿ’ ಎನ್ನುತ್ತಿದೆ.