ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Surendra Pai Column: ಸಾರ್ವಜನಿಕ ಶೌಚಾಲಯದ ಗೋಳು ಕೇಳುವವರಾರು ?

ಸಾರ್ವಜನಿಕ ಶೌಚಾಲಯಗಳಲ್ಲಿ ಅಶುಚಿತ್ವ ಮತ್ತು ನಿರ್ವಹಣೆಯ ಕೊರತೆಯು ಪ್ರಮುಖ ಸಮಸ್ಯೆಯಾಗಿದೆ. ಶೇ.76ಕ್ಕಿಂತ ಹೆಚ್ಚು ಶೌಚಾಲಯಗಳು ಕಳಪೆ ನಿರ್ವಹಣೆಯಿಂದಾಗಿ (ಅಂದರೆ ಸಮರ್ಪಕ ಬಾಗಿಲು, ಒಳಗಿನಿಂದ ಚಿಲಕಹಾಕುವ ವ್ಯವಸ್ಥೆ, ನೀರು ಮುಂತಾದವು ಇಲ್ಲದಿರು ವಿಕೆ) ಬಳಕೆಗೆ ಯೋಗ್ಯವಾಗಿಲ್ಲ; ಕೊಳಕು, ದುರ್ವಾಸನೆ ಮತ್ತು ಸೋಂಕು ಹರಡುವ ಭೀತಿ ಇಲ್ಲೆಲ್ಲಾ ಮಾಮೂಲು.

ಯಕ್ಷಪ್ರಶ್ನೆ

ಸುರೇಂದ್ರ ಪೈ, ಭಟ್ಕಳ

ಅರ್ಥಿಕತೆಯ ವಿಷಯದಲ್ಲಿ ಏರುಗತಿಯಲ್ಲಿ ಸಾಗುತ್ತಿರುವ ಭಾರತವು ಆರೋಗ್ಯ ಮತ್ತು ನೈರ್ಮಲ್ಯದ ಬಾಬತ್ತಿನಲ್ಲಿ ಮಾತ್ರ ದಿನೇ ದಿನೆ ಕುಸಿಯುತ್ತಿದೆ. ಕೃತಕ ಬುದ್ಧಿಮತ್ತೆಯ (ಎಐ) ವಲಯದಲ್ಲಿ ಅಗ್ರಸ್ಥಾನಕ್ಕೇರಲು ಬಯಸುತ್ತಿರುವ ಭಾರತದಲ್ಲಿ ಸಾರ್ವಜನಿಕ ಶೌಚಾಲಯ ಗಳು ಸಾಕಷ್ಟು ಸಂಖ್ಯೆಯಲ್ಲಿಲ್ಲದೆ ಜನರು ಪರದಾಡುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ.

ಇದರ ಸತ್ಯಾಸತ್ಯತೆಯನ್ನು ತಿಳಿಯಲು ಸರಕಾರದ ವತಿಯಿಂದ ಯಾವುದೇ ಸಮಿತಿಯನ್ನು ರಚಿಸುವ ಅಗತ್ಯವಿಲ್ಲ, ಒಮ್ಮೆ ಹಾಗೇ ನಮ್ಮ ತಾಲೂಕು/ನಗರ ಪ್ರದೇಶವನ್ನು ಸುತ್ತಾಡಿ ಬಂದರೆ ಸಾಕು, ಸಾರ್ವಜನಿಕ ಶೌಚಾಲಯಗಳ ಅಲಭ್ಯತೆಯಿಂದಾಗಿ ಪರಿಸರ ಮಲಿನ ಗೊಳ್ಳುತ್ತಿರುವುದು ಕಣ್ಣು-ಮೂಗಿಗೆ ರಾಚುತ್ತದೆ!

ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸಾರ್ವಜನಿಕ ಶೌಚಾಲಯಗಳ ಸಂಖ್ಯೆಯೂ ಜಾಸ್ತಿ ಯಾಗಬೇಕು. ಆದರೆ ದೆಹಲಿ, ಬೆಂಗಳೂರಿನಂಥ ಮಹಾನಗರಗಳು ಸೇರಿದಂತೆ ರಾಷ್ಟ್ರದ ಬಹುತೇಕ ನಗರ-ಪಟ್ಟಣ-ತಾಲೂಕು ಕೇಂದ್ರಗಳಲ್ಲಿ, ಪ್ರವಾಸಿ ತಾಣಗಳಲ್ಲಿ ಇಂಥ ಶೌಚಾಲಯಗಳ ಕೊರತೆ ತೀವ್ರವಾಗುತ್ತಿದೆ.

ತಂತಮ್ಮ ಕೆಲಸಗಳಿಗಾಗಿ ಅಥವಾ ವಿಹಾರಕ್ಕಾಗಿ ಪರಸ್ಥಳಗಳಿಂದ ಇಲ್ಲಿಗೆ ಬರುವವರು, ನೈಸರ್ಗಿಕ ಕರೆಯನ್ನು ನಿಭಾಯಿಸಲು ಪರದಾಡುವಂತಾಗಿದೆ. ಇದು ಸರಕಾರವು ತಕ್ಷಣ ನಿವಾರಿಸಬೇಕಾದ ಮೂಲಭೂತ ಸಮಸ್ಯೆ. ಜನಸಂಖ್ಯೆಗೆ ತಕ್ಕಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವುದು ಯಾವುದೇ ಸರಕಾರದ ಪ್ರಾಥಮಿಕ ಕರ್ತವ್ಯವಾಗಬೇಕು.

ಇದನ್ನೂ ಓದಿ: Surendra Pai Column: ಆನೆ ಮತ್ತು ಮಾನವನ ಸಂಘರ್ಷಕ್ಕೆ ಕೊನೆಯೆಂದು ?

ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾದ ‘ಸ್ವಚ್ಛ ಭಾರತ ಅಭಿಯಾನ’ಕ್ಕೆ ಚಾಲನೆ ದಕ್ಕಿ 10 ವರ್ಷಗಳಾಗಿವೆ, ಈ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ವಿಧಿಸಿದ ಗಡುವು ಮುಗಿದು 5 ವರ್ಷಗಳಾಗಿವೆ. ಆದರೆ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ. ಇತ್ತೀಚಿನ ವರದಿಗಳ ಪ್ರಕಾರ, ಭಾರತವು ನೈರ್ಮಲ್ಯದ ವಿಷಯಕ್ಕೆ ಸಂಬಂಧಿಸಿದಂತೆ ಬಿಕ್ಕಟ್ಟಿನತ್ತ ಸಾಗುತ್ತಿದೆ.

ಸಾರ್ವಜನಿಕ ಶೌಚಾಲಯಗಳಲ್ಲಿ ಅಶುಚಿತ್ವ ಮತ್ತು ನಿರ್ವಹಣೆಯ ಕೊರತೆಯು ಪ್ರಮುಖ ಸಮಸ್ಯೆಯಾಗಿದೆ. ಶೇ.76ಕ್ಕಿಂತ ಹೆಚ್ಚು ಶೌಚಾಲಯಗಳು ಕಳಪೆ ನಿರ್ವಹಣೆಯಿಂದಾಗಿ (ಅಂದರೆ ಸಮರ್ಪಕ ಬಾಗಿಲು, ಒಳಗಿನಿಂದ ಚಿಲಕಹಾಕುವ ವ್ಯವಸ್ಥೆ, ನೀರು ಮುಂತಾದವು ಇಲ್ಲದಿರುವಿಕೆ) ಬಳಕೆಗೆ ಯೋಗ್ಯವಾಗಿಲ್ಲ; ಕೊಳಕು, ದುರ್ವಾಸನೆ ಮತ್ತು ಸೋಂಕು ಹರಡುವ ಭೀತಿ ಇಲ್ಲೆಲ್ಲಾ ಮಾಮೂಲು.

ಇದರಿಂದಾಗಿ ಸಾರ್ವಜನಿಕರು, ಅದರಲ್ಲೂ ನಿರ್ದಿಷ್ಟವಾಗಿ ಮಹಿಳೆಯರು ಮತ್ತು ವಿಕಲ ಚೇತನರು ಕಸಿವಿಸಿಗೆ ಒಳಗಾಗುತ್ತಿದ್ದಾರೆ. ಶೌಚಾಲಯಗಳ ಕೊರತೆಯು ಕಾರ್ಯ ಕ್ಷೇತ್ರದ ಮನೋವಿಜ್ಞಾನದ ಮೇಲೆ ಪ್ರಭಾವವನ್ನು ಬೀರುತ್ತದೆ. ಶೌಚಾಲಯಕ್ಕೆ ಹೋಗುವು ದನ್ನು ತಪ್ಪಿಸಲೆಂದೇ ಕೆಲವು ಮಹಿಳೆಯರು ನೀರು ಕುಡಿಯುವುದನ್ನು ಉದ್ದೇಶ ಪೂರ್ವಕವಾಗಿ ತಪ್ಪಿಸುವುದಿದೆ.

ಇದರಿಂದಾಗಿ ಮೂತ್ರನಾಳದ ಸೋಂಕು ಮತ್ತು ನಿರ್ಜಲೀಕರಣದಂಥ ಆರೋಗ್ಯ ಸಮಸ್ಯೆ ಗಳು ಹುಟ್ಟಿಕೊಳ್ಳುತ್ತವೆ. ‘ಸಿಲಿಕಾನ್ ಸಿಟಿ’ ಎಂದೇ ಕರೆಸಿಕೊಳ್ಳುವ ಮತ್ತು ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದೆನಿಸಿಕೊಂಡಿರುವ ಬೆಂಗಳೂರಿನಲ್ಲಿ ಜನಸಂಖ್ಯೆಯು ಅಂದಾಜು 1.4 ಕೋಟಿಯನ್ನು ಮುಟ್ಟಿದ್ದರೂ, ಸಾರ್ವಜನಿಕ ನೈರ್ಮಲ್ಯ ಸಂಬಂಧಿತ ಮೂಲಸೌಕರ್ಯಗಳಲ್ಲಿ ಇದು ಹಿಂದುಳಿದಿದೆ.

ಅಂದರೆ, ಸ್ಥಳೀಕ ಜನರು ಮತ್ತು ಬೇರೆ ಕಡೆಗಳಿಂದ ವಲಸೆ ಬರುವವರ ಸಂಖ್ಯೆಗೆ ಅನುಗುಣವಾಗಿ ಸಾರ್ವಜನಿಕ ಶೌಚಾಲಯಗಳು ಈ ಮಹಾನಗರಿಯಲ್ಲಿಲ್ಲ. ‘ಸ್ಮಾರ್ಟ್ ಸಿಟಿ’ ಯೋಜನೆಯಡಿ ‘ಇ-ಟಾಯ್ಲೆಟ್’ಗಳನ್ನು ಪರಿಚಯಿಸಲಾಯಿತು; ಆದರೂ ಅವು ಕೂಡ

ಸಮರ್ಪಕ ನಿರ್ವಹಣೆಯಿಲ್ಲದೆ ಹಾಳಾಗಿವೆ. ಸಂಚಾರಿ ಶೌಚಾಲಯಗಳಂತೂ ನಿಂತೇ ಹೋಗಿವೆ. ಶೇ.66ರಷ್ಟು ಶೌಚಾಲಯಗಳಲ್ಲಿ ಸೂಕ್ತವಾದ ಬೆಳಕಿನ ವ್ಯವಸ್ಥೆಯಿಲ್ಲದೆ ರಾತ್ರಿ ವೇಳೆಯಲ್ಲಿ ಮಹಿಳೆಯರು ಇವನ್ನು ಬಳಸುವುದು ದುಸ್ತರವಾಗಿದೆ, ಅಪಾಯಕಾರಿಯೂ ಆಗಿದೆ. ರಾಜ್ಯದ ಮಿಕ್ಕ ನಗರ/ಪಟ್ಟಣಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ; ಬಸ್ ನಿಲ್ದಾಣಗಳಲ್ಲಿ ಸ್ವಚ್ಛವಾದ ಶೌಚಾಲಯಗಳಿಲ್ಲದೆ ಐದಾರು ತಾಸು ಕೂತು ಪ್ರಯಾಣಿಸಿಕೊಂಡು ಬರುವ ಜನರಿಗೆ ಬಸ್‌ನಿಂದ ಇಳಿದಾಕ್ಷಣ ದೇಹವನ್ನು ಹಗುರ ವಾಗಿಸಿಕೊಳ್ಳುವುದಕ್ಕೆ ಮಾರ್ಗೋಪಾಯವಿಲ್ಲ.

ಶೌಚಾಲಯಗಳು ಒಂದೊಮ್ಮೆ ಇದ್ದರೂ ಗಬ್ಬೆದ್ದು ನಾರುತ್ತಿರುವ ಪರಿಸ್ಥಿತಿ ಬಹಳ ಕಡೆ ಕಾಣಬರುತ್ತದೆ. ಹೀಗಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ (ರಾಜ್ಯದ ಬಹುತೇಕ ಸರಕಾರಿ ಶಾಲೆಗಳ ಶೌಚಾಲಯಗಳ ಪರಿಸ್ಥಿತಿಯೂ ಹೀಗೇ ಆಗಿದೆ. ಈ ಕಾರಣದಿಂದ ಹೆಣ್ಣು ಮಕ್ಕಳು ಮುಜುಗರಕ್ಕೆ ಒಳಗಾಗಿ ಶಾಲೆಗೆ ಗೈರಾಗುವುದು ಅಥವಾ ಖಾಸಗಿ ಶಾಲೆಗೆ ಸೇರಿಕೊಳ್ಳುವುದು ಮಾಮೂಲಾಗಿದೆ).

ನಿಯಮಗಳ ಪ್ರಕಾರ, ಬಸ್ ನಿಲ್ದಾಣಗಳಲ್ಲಿನ ಮೂತ್ರಾಲಯಗಳ ಬಳಕೆಯು ಉಚಿತ ವಾಗಿರಬೇಕು; ಆದರೆ ಇಲ್ಲಿಯೂ ಹಣವನ್ನು ವಸೂಲು ಮಾಡಲಾಗುತ್ತಿದೆ. ಆದರೆ ಕಲ್ಪಿಸ ಬೇಕಾದ ಅಗತ್ಯ ಮೂಲಸೌಕರ್ಯಗಳು ಮತ್ತು ಸ್ವಚ್ಛತೆಯನ್ನು ಮಾತ್ರ ಕೇಳಬೇಡಿ!ಹಾಗೆಂದ ಮಾತ್ರಕ್ಕೆ ಎಲ್ಲವೂ ಸರಕಾರದ್ದೇ ಜವಾಬ್ದಾರಿ ಎಂದೇನಲ್ಲ; ಶೌಚಾಲಯಗಳು ಇಂಥ ದುಸ್ಥಿತಿಗೆ ತಲುಪುವುದಕ್ಕೆ ‘ನಾಗರಿಕ ಪ್ರಜ್ಞೆಯ ಕೊರತೆ’ಯ ಪಾಲೂ ಇದೆ. ಈ ಕುರಿತಾಗಿ ಅದೆಷ್ಟು ಜಾಗೃತಿ ಅಭಿಯಾನಗಳನ್ನು ಕೈಗೊಂಡರೂ ಕೆಲ ಜನರು ದಾರಿಗೆ ಬರುತ್ತಿಲ್ಲ.

ಶೌಚಾಲಯಗಳಲ್ಲಿ ಮದ್ಯದ ಬಾಟಲಿ ಎಸೆಯುವ, ಗುಟ್ಕಾ ಜಗಿದು ಉಗಿಯುವ ಮಹಾನು ಭಾವರು ಸಾಕಷ್ಟು ಇದ್ದಾರೆ. ಹೀಗಾಗಿ ಶೌಚಾಲಯಗಳು ‘ಕಸದಬುಟ್ಟಿ’ಯೇ ಆಗುತ್ತಿವೆ. ಅಕ್ಟೋಬರ್ 2ರಂದು ಕೈಯಲ್ಲಿ ಪೊರಕೆ ಹಿಡಿದು ಬೀದಿಗಿಳಿದು ಸ್ವಚ್ಛತೆಯ ನಾಟಕವಾಡಿ ಫೋಟೋಗಳಿಗೆ ಪೋಸು ಕೊಡುವವರು, ವರ್ಷದ ಮಿಕ್ಕ ದಿನಗಳಲ್ಲಿ ಈ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದಕ್ಕೆ ಏನನ್ನುವುದು?

(ಲೇಖಕರು ಶಿಕ್ಷಕರು)