ಸಂಗತ
ಚೀನಾ ಜತೆಗೆ ಗಡಿ ಹೊಂದಿರುವ ಲಡಾಖ್ ನಮ್ಮ ದೇಶದ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಒಂದು. ಅಲ್ಲಿ ನಡೆಯುವ ಯಾವುದೇ ಷಡ್ಯಂತ್ರಗಳು ಅನಾಹುತಕಾರಿಯಾಗಿ ಪರಿಣಮಿಸ ಬಲ್ಲವು. ಹೀಗಾಗಿ ಭಾರತ ಎಚ್ಚರಿಕೆಯ ಹೆಜ್ಜೆ ಇರಿಸಬೇಕಿದೆ. ಲಡಾಖ್‌ನ ಬೇಡಿಕೆ ಮತ್ತು ಭಾವನೆಗಳನ್ನೂ ಗೌರವಿಸಬೇಕಿದೆ.
ದಶಕದ ಹಿಂದೆ ಬಾಕ್ಸಾಫೀಸನ್ನು ಕೊಳ್ಳೆ ಹೊಡೆದಿದ್ದ ಆಮಿರ್ ಖಾನ್ ಅಭಿನಯದ ‘3 ಈಡಿಯಟ್ಸ್’ ಸಿನಿಮಾ ನೆನಪಿದೆಯೇ? ಅದರಲ್ಲಿದ್ದ ಫುನ್ಸುಖ್ ವಾಂಗ್ಡು ಪಾತ್ರವು ಸೋನಮ್ ವಾಂಗ್‌ಚುಕ್‌ನ ಜೀವನವನ್ನು ಆಧರಿಸಿದ್ದು ಎಂದು ಹೇಳಲಾಗುತ್ತದೆ. ಸೋನಮ್ ವಾಂಗ್‌ಚುಕ್ ಲಡಾಖ್‌ನ ಲೇಹ್ ನಲ್ಲಿರುವ ಪರಿಸರ ಮತ್ತು ಸಾಮಾಜಿಕ ಹೋರಾಟಗಾರ. ಜನರಿಗೆ ಈ ಹಿಂದೆಯೂ ಅವನು ಪರಿಚಿತನೇ ಆಗಿದ್ದ. ಆದರೆ ಸಿನಿಮಾ ಬಂದ ನಂತರ ಭಾರತದ ಎಲ್ಲೆಡೆಯ ಜನರ ಹೃದಯದಲ್ಲಿ ಅವನಿಗೊಂದು ಸ್ಥಾನ ಪ್ರಾಪ್ತವಾಗಿತ್ತು.
ಈಗ ಚೋದ್ಯವೆಂದರೆ, ಲಡಾಖ್‌ನಲ್ಲಿ ನಡೆದ ವ್ಯಾಪಕ ಹಿಂಸಾಚಾರದ ಬಳಿಕ ಅವನ ಮೇಲೇ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಈಗಾಗಲೇ ಪೊಲೀಸರು ಅವನನ್ನು ಬಂಧಿಸಿದ್ದಾರೆ. ಪ್ರಶ್ನೆ ಏನೆಂದರೆ, ನಿಜವಾಗಿಯೂ ಹಿಂಸಾಚಾರಕ್ಕೆ ಅವನ ಪ್ರಚೋದನೆಯೇ ಕಾರಣವೇ ಅಥವಾ ಗಡಿಯ ಗುಂಟ ಭಾರತವನ್ನು ದುರ್ಬಲಗೊಳಿಸಲು ಬೇರೆ ಯಾವುದಾದರೂ ಹಿತಾಸಕ್ತಿಗಳು ಸಂಚು ರೂಪಿಸಿವೆಯೇ? ಈವರೆಗೂ ಲೇಹ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ಜೀವ ಕಳೆದು ಕೊಂಡಿದ್ದಾರೆ.
ಇದನ್ನೂ ಓದಿ: Dr Vijay Darda Column: ದೊಡ್ಡ ಶಕ್ತಿಗಳ ಷಡ್ಯಂತ್ರದ ಬಲಿಪಶು ನೇಪಾಳ
ಇನ್ನೂ ಸಾಕಷ್ಟು ಜನರು ಗಾಯಗೊಂಡಿದ್ದಾರೆ. ಗಲಭೆಗೆ ಕಾರಣವಾದ ಗಂಭೀರ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಿಂತಲೂ ಮೊದಲು ಈ ವಿವಾದದ ಹಿನ್ನೆಲೆಯನ್ನು ಕೊಂಚ ಅರಿತುಕೊಳ್ಳ ಬೇಕು. ಲಡಾಖ್ ಎಂಬುದು ಒಂದು ಪ್ರದೇಶದ ಹೆಸರು. ಅಲ್ಲಿನ ಪ್ರಮುಖ ಪಟ್ಟಣ ಲೇಹ್. ಲಡಾಖ್ ಈ ಹಿಂದೆ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭಾಗವಾಗಿತ್ತು.
ಆದರೆ ಲಡಾಖ್‌ನ ಜನರಿಗೆ ತಾವು ಯಾವತ್ತೂ ನಿರ್ಲಕ್ಷಿತರು ಎಂಬ ಭಾವನೆಯಿತ್ತು. ಸ್ವಾತಂತ್ರ್ಯಾ ನಂತರ ಕೆಲವೇ ವರ್ಷಗಳಲ್ಲಿ ಆಗಿನ ಲಡಾಖ್ ಬುದ್ಧಿಸ್ಟ್ ಅಸೋಸಿಯೇಷನ್‌ನ ಅಧ್ಯಕ್ಷ ಚೆವಾಂಗ್ ರಿಗ್ಜಿನ್ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಒಂದು ಪತ್ರ ಬರೆದು, ‘ಲಡಾಖನ್ನು ಜಮ್ಮು ಮತ್ತು ಕಾಶ್ಮೀರದಿಂದ ಪ್ರತ್ಯೇಕಿಸಬೇಕು.
ಏಕೆಂದರೆ ಕಾಶ್ಮೀರಕ್ಕೂ ಈ ಪ್ರದೇಶಕ್ಕೂ ಯಾವುದೇ ಸಂಬಂಧವಿಲ್ಲ. ದೂರದ ಜತೆಗೆ ಧರ್ಮ, ಜನಾಂಗ, ಭಾಷೆ, ಸಂಸ್ಕೃತಿಗಳೂ ಭಿನ್ನವಾಗಿವೆ’ ಎಂದು ಹೇಳಿದ್ದರು. ಲಡಾಖ್‌ನ ಇನ್ನೊಬ್ಬ ಪ್ರಭಾವಿ ನಾಯಕ ಲಾಮಾ ಕುಶೋಕ್ ಬಕುಲ ಕೂಡ ಶೇಖ್ ಅಬ್ದುಲ್ಲಾ ಜತೆಗಿನ ವೈಮನಸ್ಯವನ್ನು ಮುಂದಿಟ್ಟು, ಲಡಾಖ್‌ನ ಬೇಡಿಕೆಗಳನ್ನು ಈಡೇರಿಸದಿದ್ದರೆ ನಾವು ಟಿಬೆಟ್‌ನ ಜತೆ ಕೈಜೋಡಿಸ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದ.

ಅದು ಕೇವಲ ಎಚ್ಚರಿಕೆಯೇ ಆಗಿದ್ದರೂ ಲಡಾಖ್ ಕೇಂದ್ರಾಡಳಿತ ಪ್ರದೇಶದ ಸೃಜನೆಗಾಗಿ ಶಾಂತಿಯುತ ಹೋರಾಟ ನಡೆಯುತ್ತಲೇ ಇತ್ತು. 1979ರಲ್ಲಿ ಲಡಾಖನ್ನು ಲೇಹ್ ಮತ್ತು ಕಾರ್ಗಿಲ್ ಎಂಬ ಎರಡು ಜಿಲ್ಲೆಗಳಾಗಿ ವಿಭಾಗಿಸಲಾಯಿತು. ಕಾರ್ಗಿಲ್ ಮುಸ್ಲಿಂ ಬಹು ಸಂಖ್ಯಾತ ಜಿಲ್ಲೆ ಯಾಗಿದ್ದರೆ, ಲೇಹ್ ಬೌದ್ಧರ ಬಹುಸಂಖ್ಯಾತ ಜಿಲ್ಲೆಯಾಗಿತ್ತು. ಆದರೆ ಬಹಳ ಬೇಗ ಲಡಾಖ್‌ನ ಬೌದ್ಧರು ಜಮ್ಮು ಮತ್ತು ಕಾಶ್ಮೀರ ರಾಜ್ಯ ಕಾರ್ಗಿಲ್‌ನ ಮುಸ್ಲಿಮರಿಗೆ ಹೆಚ್ಚು ಒತ್ತು ನೀಡಿ, ನಮ್ಮನ್ನು ಕಡೆಗಣಿಸುತ್ತಿದೆ ಎಂದು ಕ್ಯಾತೆ ತೆಗೆದರು. ಈ ಭಿನ್ನಮತ 1989ರ ವೇಳೆಗೆ ದೊಡ್ಡ ಹೋರಾಟವಾಗಿ ಭುಗಿಲೆದ್ದು, ಹಿಂಸಾಚಾರದಲ್ಲಿ ಮೂವರು ಮೃತಪಟ್ಟಿದ್ದರು.
ಕೊನೆಗೆ 2019ರಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಒಡೆದು ಲಡಾಖ್ ಕೇಂದ್ರಾಡಳಿತ ಪ್ರದೇಶ ಮಾಡಲಾಯಿತು. ಆಗ ಲಡಾಖ್ ಪ್ರಾಂತದಲ್ಲಿ ಸಂಭ್ರಮಾಚರಣೆ ನಡೆಯಿತು. ಎಲ್ಲೆಡೆ ವಿಜಯೋ ತ್ಸಾಹ. ವಾಂಗ್‌ಚುಕ್ ಕೂಡ ಪ್ರಧಾನಿ ನರೇಂದ್ರ ಮೋದಿಯವರನ್ನು ಮುಕ್ತ ಕಂಠದಿಂದ ಹೊಗಳಿ ದರು. ಹೀಗೆ ಇಡೀ ಪ್ರದೇಶವೇ ಇನ್ನಿಲ್ಲದಂತೆ ವಿಜಯೋತ್ಸವ ನಡೆಸಿದ ಮೇಲೆ ಈಗ ಇದ್ದಕ್ಕಿದ್ದಂತೆ ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡಬೇಕು ಮತ್ತು ಸಂವಿಧಾನದ ಆರನೇ ಪರಿಚ್ಛೇದದಲ್ಲಿ ಅದನ್ನು ಸೇರಿಸಬೇಕು ಎಂದು ಕೆಲವೇ ವರ್ಷಗಳಲ್ಲಿ ಹಿಂಸಾಚಾರ ಆರಂಭವಾಗಿದ್ದು ಏಕೆ ಮತ್ತು ಹೇಗೆ? ಆರನೇ ಪರಿಚ್ಛೇದ ಅಂದರೇನು ಎಂಬುದು ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ.
ಇದು ಅವರ ಅವಗಾಹನೆಗಾಗಿ: ಆರನೇ ಪರಿಚ್ಛೇದವು ನಿರ್ಲಕ್ಷಿತ ಪ್ರದೇಶಗಳ ಕಲೆ, ಸಂಸ್ಕೃತಿ, ಭೂಮಿ ಮತ್ತು ಇನ್ನಿತರ ಸಂಪನ್ಮೂಲಗಳನ್ನು ರಕ್ಷಿಸಲು ಮಾಡಿಕೊಳ್ಳುವ ಒಂದು ಆಡಳಿತಾತ್ಮಕ ವ್ಯವಸ್ಥೆ. ನಾಲ್ಕು ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ಮಿಜೋರಂ ಮತ್ತು ತ್ರಿಪುರಾಗೆ ಈಗಾಗಲೇ ಈ ಪರಿಚ್ಛೇದದಡಿ ಮಾನ್ಯತೆ ನೀಡಲಾಗಿದೆ.
ಲೇಹ್‌ನ ಸಂಸ್ಕೃತಿಯನ್ನು ಕೂಡ ರಕ್ಷಿಸಲೇಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಅಲ್ಲಿನ ಸಂಪನ್ಮೂಲಗಳ ಮೇಲೆ ಅಲ್ಲಿನ ಜನರಿಗೇ ಮೊದಲ ಹಕ್ಕಿದೆ. ಆದರೆ ಆ ಗುರಿಯನ್ನು ಸಾಧಿಸಲು ಹಿಂಸಾಚಾರ ಖಂಡಿತ ಸರಿಯಾದ ಮಾರ್ಗ ಅಲ್ಲ. ಗಲಭೆಯನ್ನು ಯಾರೂ ಸಮರ್ಥಿಸಿಕೊಳ್ಳ ಬಾರದು. ನಾನು ಲಡಾಖ್‌ಗೆ ಹಲವು ಬಾರಿ ಹೋಗಿ ಬಂದಿದ್ದೇನೆ. ಅಲ್ಲಿನ ಜನರು ತುಂಬಾ ಸರಳ, ಸಜ್ಜನರು ಮತ್ತು ಕಷ್ಟಜೀವಿಗಳು.
ಇತ್ತೀಚೆಗೆ ನನ್ನ ತಮ್ಮ ರಾಜೇಂದ್ರನ ಜತೆಗೆ ಅಲ್ಲಿಗೆ ಹೋಗಿ ಲೋಕಮತ್ ಮೀಡಿಯಾ ಗ್ರೂಪ್‌ನಿಂದ ಕಾರ್ಗಿಲ್‌ನಲ್ಲಿ ಸೈನಿಕರಿಗಾಗಿ ನಿರ್ಮಿಸಿದ ಬೆಚ್ಚ ಗಿನ ಆಶ್ರಯ ತಾಣಗಳನ್ನು ಉದ್ಘಾಟಿಸಿ ಬಂದಿ ದ್ದೇನೆ. ಮಾರ್ಗಮಧ್ಯೆ ಲೇಹ್‌ನಲ್ಲಿ ಸ್ವಲ್ಪ ಹೊತ್ತು ನಿಂತಾಗ ಅಲ್ಲಿನ ಜನರ ಜತೆಗೆ ಮಾತನಾಡುತ್ತಿದ್ದೆ. ಈ ಹಿಮ ಮರುಭೂಮಿಯಲ್ಲಿ ಬದುಕು ತುಂಬಾ ಕಷ್ಟ. ಮೈನಸ್ 10 ಡಿಗ್ರಿಯಷ್ಟು ಕೆಳಗೆ ತಾಪಮಾನ ಕುಸಿಯುತ್ತದೆ.
ಜನವರಿ ಮತ್ತು ಡಿಸೆಂಬರ್ ತಿಂಗಳಲ್ಲಿ ತಾಪ ತುಂಬಾ ಕಡಿಮೆಯಾಗುತ್ತದೆ. ಆ ಕಷ್ಟದಲ್ಲಿಯೂ ಖುಷಿಯಿಂದ ಬದುಕುವ ಸ್ಥಳೀಯ ಜನರು ಸದಾ ಶಾಂತಿಪ್ರಿಯರು. ತಮ್ಮ ಸಂಸ್ಕೃತಿಯನ್ನು ಉಳಿಸಿ ಕೊಳ್ಳಲು ಯಾವಾಗಲೂ ಕಟಿಬದ್ಧರಾಗಿರುತ್ತಾರೆ. 50 ವರ್ಷಗಳ ಹಿಂದೆಯೇ ಅವರು ಪ್ಲಾಸ್ಟಿಕ್ ನಿಷೇಧ ಮಾಡಿಕೊಂಡಿದ್ದಾರೆ.
ಸ್ಥಳೀಯಾಡಳಿತದ ಸೂಚನೆಗಿಂತ ಹೆಚ್ಚಾಗಿ ಜನರೇ ಸ್ವಯಂಪ್ರೇರಿತರಾಗಿ ಪ್ಲಾಸ್ಟಿಕ್ ನಿಷೇಧಿಸಿದ್ದಾರೆ. ಅಲ್ಲಿನ ಸುದೀರ್ಘ ಇತಿಹಾಸ, ಸಂಸ್ಕೃತಿ, ಪರಂಪರೆ ಹಾಗೂ ಶಾಂತಿಪ್ರಿಯ ಜನರ ಬದುಕಿನ ಹಿನ್ನೆಲೆಯಲ್ಲಿ ನೋಡಿದರೆ ಈಗ ನಡೆಯುತ್ತಿರುವ ಹಿಂಸಾಚಾರ ಆಶ್ಚರ್ಯ ಹುಟ್ಟಿಸುತ್ತದೆ. ಶಾಂತ ಜನರು ಈ ಪರಿ ಹಿಂಸೆಗೆ ಪ್ರಚೋದಿತರಾಗುತ್ತಿರುವುದು ಹೇಗೆ? ಜನರು ಹೇಳುವ ಪ್ರಕಾರ ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್ ಸೆಪ್ಟೆಂಬರ್ 10ರಂದು 35 ದಿನಗಳ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ. ಅದಕ್ಕೆ ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ)ಯ ಯುವ ಘಟಕ ಲೇಹ್ ನಲ್ಲಿ ಬೆಂಬಲ ಸೂಚಿಸಿ ಶಾಂತಿಯುತ ಬಂದ್‌ಗೆ ಕರೆ ನೀಡಿತ್ತು.
ಆ ದಿನ ಮಾರುಕಟ್ಟೆ ಮುಚ್ಚಿತ್ತು. ಇನ್ನುಳಿದ ಎಲ್ಲವೂ ಸಹಜವಾಗಿತ್ತು. ಆದರೆ ಇದ್ದಕ್ಕಿದ್ದಂತೆ ಯಾರೋ ಕಿಡಿಗೇಡಿಗಳು ಬಂದು ಬಿಜೆಪಿ ಕಚೇರಿ ಮೇಲೆ ದಾಳಿ ನಡೆಸಿ, ಕಲ್ಲು ತೂರಾಟ ಆರಂಭಿಸಿ ದರು. ಕಾಂಪೌಂಡ್‌ನಲ್ಲಿದ್ದ ಕಟ್ಟಡವೊಂದಕ್ಕೆ ಬೆಂಕಿ ಹಚ್ಚಿ, ವಾಹನಗಳಿಗೂ ಬೆಂಕಿಯಿಟ್ಟರು. ಅದಕ್ಕೆ ಪ್ರತಿಯಾಗಿ ಪೊಲೀಸರು ಮತ್ತು ಅರೆಸೇನಾಪಡೆಯವರು ಗಾಳಿಯಲ್ಲಿ ಗುಂಡು ಹಾರಿಸಿ, ಅಶ್ರುವಾಯು ಸಿಡಿಸಿ, ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದರು.
ಆಗ ಬಹಳಷ್ಟು ಜನರು ಗಾಯಗೊಂಡರು. ಹಿಂಸಾಚಾರವನ್ನು ಗಮನಿಸಿ ಬೇಸರಗೊಂಡ ಸೋನಮ್ ವಾಂಗ್‌ಚುಕ್ ತನ್ನ ಉಪವಾಸ ಅಂತ್ಯಗೊಳಿಸಿ, ಎಲ್ಲರೂ ಸಂಯಮ ಕಾಯ್ದುಕೊಳ್ಳು ವಂತೆ ಕರೆ ನೀಡಿದ. ‘ಯುವ ಕರೇ, ನಿಮ್ಮ ಉದ್ದೇಶ ನನಗೆ ಅರ್ಥವಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಹಿಂಸೆಯಲ್ಲಿ ತೊಡಗಬಾರದು’ ಎಂದು ತಿಳಿಹೇಳಿದ.
ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಡಿ ಲೇಹ್‌ನ ಕಾಂಗ್ರೆಸ್ ಕಾರ್ಪೊರೇಟರ್ ಫುಂಟ್ಸೋಗ್ ಸ್ಟಾಂಜಿನ್ ತ್ಸೆಪಾಗ್ ವಿರುದ್ಧ ಪೊಲೀಸರು ಕೇಸು ದಾಖಲಿಸಿದರು. ಸೋನಮ್ ವಾಂಗ್‌ಚುಕ್‌ನ ಸಂಸ್ಥೆಯ ವಿರುದ್ಧವೂ ಕ್ರಮ ಕೈಗೊಂಡರು. ಅವನ ಸಂಸ್ಥೆಯಿನ್ನು ವಿದೇಶಗಳಿಂದ ಹಣಕಾಸಿನ ದೇಣಿಗೆ ಸ್ವೀಕರಿಸುವಂತಿಲ್ಲ. ಈಗ ನಮ್ಮ ಮನಸ್ಸಿನಲ್ಲಿ ಮೂಡುವ ಪ್ರಶ್ನೆಯೇನೆಂದರೆ, ಲಡಾಖ್‌ನ ಜನಪ್ರತಿನಿಧಿಗಳ ಜತೆಗೆ ಕೇಂದ್ರ ಸರಕಾರ ನಿರಂತರವಾಗಿ ಮಾತುಕತೆ ನಡೆಸುತ್ತಿದ್ದರೂ ಸೋನಮ್ ವಾಂಗ್‌ಚುಕ್ ಅಥವಾ ಇನ್ನಾರೇ ಆಗಲಿ, ಏಕೆ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದರು? ಅದರ ಉದ್ದೇಶವೇನು? ಅಕ್ಟೋಬರ್ 6ರಂದು ಇನ್ನೊಂದು ಸುತ್ತಿನ ಮಾತುಕತೆ ನಿಗದಿಯಾಗಿದೆ.
ಅದರಲ್ಲಿ ಎಲ್‌ಎಬಿ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಮೈತ್ರಿಕೂಟದ ನಾಯಕರು ಭಾಗವಹಿಸ ಲಿದ್ದಾರೆ. ಹೀಗೆ ಹಿಂಸಾಚಾರ ನಡೆಸುವುದರಿಂದ ಲಡಾಖ್‌ನ ಜನರ ಪ್ರತ್ಯೇಕ ರಾಜ್ಯದ ಬೇಡಿಕೆ ದುರ್ಬಲವಾಗುತ್ತದೆಯೇ ಹೊರತು ಅದಕ್ಕೆ ಹೆಚ್ಚಿನ ತೂಕವೇನೂ ಬರುವುದಿಲ್ಲ!
ಲಡಾಖ್‌ನ ಯುವಕರನ್ನು ಉದ್ದೇಶಪೂರ್ವಕವಾಗಿ ದಾರಿ ತಪ್ಪಿಸಲಾಗಿದೆ. ಹಾಗೆ ಮಾಡಿದವರು ಯಾರು, ಈ ಪ್ರಚೋದನೆಯ ಮೂಲ ಯಾವುದು ಎಂಬುದನ್ನು ಮೊದಲು ಪತ್ತೆಹಚ್ಚಬೇಕು. ಆಂತರಿಕ ಶಕ್ತಿಗಳು ಇದನ್ನು ಹುಟ್ಟುಹಾಕಿವೆಯೇ ಅಥವಾ ಬಾಹ್ಯ ಶಕ್ತಿಗಳ ಪಾತ್ರವೇನಾದರೂ ಇದೆಯೇ? ಈ ಪ್ರಶ್ನೆಗೆ ಉತ್ತರ ಹುಡುಕಿಕೊಳ್ಳುವುದು ಮುಖ್ಯ. ಏಕೆಂದರೆ ಲಡಾಖ್‌ಗೆ ಚೀನಾದ ಗಡಿ ಇದೆ.
ಅದು ಬಹಳ ಸೂಕ್ಷ್ಮ ಪ್ರದೇಶ. ಆಂತರಿಕವಾಗಿ ತಲೆದೋರುವ ಯಾವುದೇ ದೌರ್ಬಲ್ಯಗಳು ದೇಶದಲ್ಲಿ ಅಸ್ಥಿರತೆಯನ್ನು ಹರಡಬಹುದು. ಕಾಶ್ಮೀರಿ ಕಣಿವೆಯಲ್ಲಿ ಉಂಟಾಗಿದ್ದ ಆಂತರಿಕ ಭದ್ರತಾ ಸಮಸ್ಯೆಗಳು ದೇಶಕ್ಕೆ ಎಷ್ಟು ದೊಡ್ಡ ತಲೆನೋವು ನೀಡಿದ್ದವು ಎಂಬುದನ್ನು ನಾವು ನೋಡಿದ್ದೇವೆ.
ಹಾಗಿದ್ದರೆ ಲಡಾಖ್‌ನ ಸಮಸ್ಯೆಗೆ ಪರಿಹಾರ ಏನು? ನನ್ನ ಪ್ರಕಾರ, ಲಡಾಖಿನ ಜನರ ಭಾವನೆಗಳನ್ನು ನಾವು ಗೌರವಿಸಿ, ಅವರು ಏನು ಬಯಸುತ್ತಿದ್ದಾರೆಂಬುದನ್ನು ಅರ್ಥಮಾಡಿಕೊಳ್ಳಬೇಕು. ಸೋನಮ್ ವಾಂಗ್‌ಚುಕ್ ದೇಶದ್ರೋಹಿಯಲ್ಲ ಎಂಬುದನ್ನೂ ತಿಳಿದುಕೊಳ್ಳಬೇಕು. ಲಡಾಖ್ ಮೂಲತಃ ಹೇಗಿತ್ತೋ ಹಾಗೇ ಉಳಿಸಿಕೊಳ್ಳಬೇಕು ಎಂದು ಆತ ಬಯಸುತ್ತಿದ್ದಾನೆ.
ಇದೇ ವೇಳೆ, ಕೆಲ ಅಂತಾರಾಷ್ಟ್ರೀಯ ಶಕ್ತಿಗಳು ಭಾರತದ ಆರ್ಥಿಕತೆಯು ದೈತ್ಯಾಕಾರದಲ್ಲಿ ಬೆಳೆಯುತ್ತಿರುವುದನ್ನು ನೋಡಿ ಹೊಟ್ಟೆಕಿಚ್ಚಿನಿಂದ ಕುದಿಯುತ್ತಿದ್ದು, ನಮ್ಮನ್ನು ದಮನ ಮಾಡಲು ಯತ್ನಿಸುತ್ತಿವೆ ಎಂಬುದನ್ನೂ ಅರ್ಥ ಮಾಡಿಕೊಳ್ಳಬೇಕು. ಲಡಾಖ್‌ನ ವಿಷಯದಲ್ಲಿ ಎಚ್ಚರಿಕೆಯ ನಡೆ ಅಗತ್ಯವಿದೆ.
ನಾವು ಏನೇ ಕ್ರಮಗಳನ್ನು ಕೈಗೊಂಡರೂ ಅದರಿಂದ ಭಾರತವಿರೋಧಿ ಶಕ್ತಿಗಳಿಗೆ ಲಾಭವಾಗದಂತೆ ನೋಡಿಕೊಳ್ಳಬೇಕು. ನಾವು ಇರಿಸುವ ಒಂದೇ ಒಂದು ತಪ್ಪು ಹೆಜ್ಜೆ ನಮ್ಮ ವಿರೋಧಿಗಳಿಗೆ ಭಾರತವನ್ನು ಮಟ್ಟ ಹಾಕಲು ಸಿಗುವ ಅಸವಾಗಿ ಪರಿಣಮಿಸಬಹುದು.
(ಲೇಖಕರು ಹಿರಿಯ ಪತ್ರಿಕೋದ್ಯಮಿ)