ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Sajangadde Column: ಕನಸುಗಳನ್ನು ನನಸಾಗಿಸಿದ ನಿಟ್ಟೆಯ ವಿನಯವಂತ!

ಉತ್ಪನ್ನಗಳ ಗುಣಮಟ್ಟದ ಕುರಿತು ಹೆಚ್ಚಿನ ಗಮನ ಹರಿಸುವ ಈ ಸಂಸ್ಥೆಯು ಯುರೋಪ್ ಸೇರಿದಂತೆ ಪ್ರಪಂಚದ ಅನೇಕ ಭಾಗಗಳಿಗೆ ತನ್ನ ಉತ್ಪನ್ನಗಳನ್ನು ರಫ್ತು ಮಾಡುವ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ವಾರ್ಷಿಕ ಅಂದಾಜು 150 ರು. ಕೋಟಿ ವ್ಯವಹಾರ ನಡೆಸುವ ಈ ಸಂಸ್ಥೆಯಲ್ಲಿ ಸಾವಿರಕ್ಕೂ ಮಿಕ್ಕಿ ಉದ್ಯೋಗಿಗಳಿದ್ದಾರೆ.

ನುಡಿನಮನ

ರವೀ ಸಜಂಗದ್ದೆ

ಕರಾವಳಿ ಪ್ರದೇಶದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿ ಕ್ರಾಂತಿಕಾರಿ ಬದಲಾವಣೆಗಳ ಹರಿಕಾರ ಎನಿಸಿಕೊಂಡಿದ್ದ ಡಾ. ಎನ್.ವಿನಯ್ ಹೆಗ್ಡೆ (86) ಅವರು ಜನವರಿ 1ರ ಮುಂಜಾನೆ ಇಹದ ಯಾತ್ರೆ ಮುಗಿಸಿದ್ದಾರೆ.

ನಿಟ್ಟೆ ಸಮೂಹ ಸಂಸ್ಥೆಗಳ ಸಂಸ್ಥಾಪಕರು ಮತ್ತು ಕೆ.ಎಸ್.ಹೆಗ್ಡೆ ಚಾರಿಟಬಲ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶ್ರೀಯುತರು, ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಬದುಕು ಕಟ್ಟಿಕೊಟ್ಟ ಕರಾವಳಿಯ ಶ್ರೇಷ್ಠ ಶಿಕ್ಷಣತಜ್ಞರ ಸಾಲಿನಲ್ಲಿ ಅಗ್ರಗಣ್ಯರಾಗಿದ್ದಾರೆ.

ಅವರಿಗೆ ಕಂಬನಿ ಪೂರ್ಣ ನುಡಿನಮನವಿದು. ಹೆಚ್ಚಿನವರ ಬಾಯಲ್ಲಿ ‘ವಿನಯಣ್ಣ’ ಎಂದೇ ಪ್ರೀತ್ಯಾ ದರಗಳಿಂದ ಕರೆಸಿಕೊಳ್ಳುತ್ತಿದ್ದ ಶ್ರೀಯುತರು ಐವತ್ತು ವರ್ಷಗಳ ಹಿಂದೆ ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಹುಟ್ಟೂರು ನಿಟ್ಟೆಯನ್ನು ಶಿಕ್ಷಣ ಕಾಶಿ ಮತ್ತು ಕೈಗಾರಿಕಾ ಹಬ್ ಆಗಿ ಅಭಿವೃದ್ಧಿಪಡಿಸಿ ಸೈ ಎನಿಸಿಕೊಂಡರು.

ಬಿಎಸ್ಸಿ ಪದವಿ ಪೂರೈಸಿದ ನಂತರ ಹುಟ್ಟೂರಿನವರಿಗಾಗಿ ಊರಿನಲ್ಲಿಯೇ ಏನಾದರೊಂದು ಮಾಡಿ ತೋರಿಸಬೇಕು ಎಂಬ ಮಹದಾಸೆಯಿಂದ 1975ರಲ್ಲಿ ‘ಲಮಿನಾ ಸಸ್ಪೆನ್ಷನ್ ಪ್ರೈವೇಟ್ ಲಿಮಿಟೆಡ್’ ಹೆಸರಿನ, ಅಟೋಮೊಬೈಲ್ ಬಿಡಿಭಾಗಗಳ ತಯಾರಿಕಾ ಸಂಸ್ಥೆಯನ್ನು ಆರಂಭಿಸಿದರು. ಇದು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವಿಶ್ವಾಸಾರ್ಹ ಸಂಸ್ಥೆಯಾಗಿ ಹೆಸರು ಗಳಿಸಿದ್ದು ISO 9001:2008 ಪ್ರಮಾಣೀಕೃತವಾಗಿದೆ.

ಇದನ್ನೂ ಓದಿ: Ravi Sajangadde Column: ಕೃತಘ್ಞ ಬಾಂಗ್ಲಾದೇಶದ ಬಾಲ ಕತ್ತರಿಸಲು ಇದು ಸಕಾಲ !

ಉತ್ಪನ್ನಗಳ ಗುಣಮಟ್ಟದ ಕುರಿತು ಹೆಚ್ಚಿನ ಗಮನ ಹರಿಸುವ ಈ ಸಂಸ್ಥೆಯು ಯುರೋಪ್ ಸೇರಿ ದಂತೆ ಪ್ರಪಂಚದ ಅನೇಕ ಭಾಗಗಳಿಗೆ ತನ್ನ ಉತ್ಪನ್ನಗಳನ್ನು ರಫ್ತು ಮಾಡುವ ದೊಡ್ಡ ಸಂಸ್ಥೆ ಯಾಗಿ ಬೆಳೆದಿದೆ. ವಾರ್ಷಿಕ ಅಂದಾಜು 150 ರು. ಕೋಟಿ ವ್ಯವಹಾರ ನಡೆಸುವ ಈ ಸಂಸ್ಥೆಯಲ್ಲಿ ಸಾವಿರಕ್ಕೂ ಮಿಕ್ಕಿ ಉದ್ಯೋಗಿಗಳಿದ್ದಾರೆ.

ತಮ್ಮ ತಂದೆಯವರಾದ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮತ್ತು ಲೋಕಸಭೆಯ ಮಾಜಿ ಸ್ಪೀಕರ್ ದಿ.ಜಸ್ಪಿಸ್ ಕೆ.ಎಸ್.ಹೆಗ್ಡೆಯವರ ‘ನಮ್ಮ ಊರಿನ ಮಕ್ಕಳಿಗೆ ಒಳ್ಳೆಯ ಶಿಕ್ಷಣವು ದೊರಕುವಂತಾಗಬೇಕು’ ಎನ್ನುವ ಆಶಯದಂತೆ 1979ರಲ್ಲಿ ಹುಟ್ಟೂರು ಕಾರ್ಕಳದ ನಿಟ್ಟೆ ಗ್ರಾಮ ದಲ್ಲಿ ಶಾಲೆ ಮತ್ತು ಕಾಲೇಜುಗಳನ್ನು ವಿನಯ್ ಹೆಗ್ಡೆ ಸ್ಥಾಪಿಸಿದರು.

‘ನಿಟ್ಟೆ ಎಜ್ಯುಕೇಷನ್ ಟ್ರಸ್ಟ್’ (ಎನ್‌ಇಟಿ) ಹೆಸರಿನ ಸೇವಾಸಂಸ್ಥೆ ಸ್ಥಾಪಿಸಿದರು. ಕೆಲವೇ ವಿದ್ಯಾರ್ಥಿ‌ ಗಳು ಮತ್ತು ಸಣ್ಣ ಕಟ್ಟಡದೊಂದಿಗೆ ಆರಂಭವಾದ ಈ ಶಿಕ್ಷಣ ಕ್ರಾಂತಿಯು ಕಳೆದ ನಾಲ್ಕೂವರೆ ದಶಕಗಳಿಂದ ಬೆಳೆದು ನಿಂತ ಪರಿ, ವ್ಯಾಪಿಸಿದ ಪ್ರದೇಶ ನೋಡಿದರೆ ಅಚ್ಚರಿ! ಎನ್‌ಇಟಿ ಅಡಿಯಲ್ಲಿ ನಿಟ್ಟೆ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ನಲವತ್ತಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ!

ಎಲ್‌ಕೆಜಿಯಿಂದ ತೊಡಗಿ ಉನ್ನತ ಶಿಕ್ಷಣದವರೆಗಿನ ಶಿಕ್ಷಣವು ಈ ಸಂಸ್ಥೆಗಳಲ್ಲಿ ಲಭ್ಯವಿದೆ. ಈ ಶಿಕ್ಷಣ ಸಂಸ್ಥೆಗಳು ದೇಶದ ಮುಂದಿನ, ಜವಾಬ್ದಾರಿಯುತ, ಸುಶಿಕ್ಷಿತ ಜನಾಂಗವನ್ನು ರೂಪಿಸುವ ಕೈಂಕರ್ಯದಲ್ಲಿ ನಿರತವಾಗಿವೆ. ತಂದೆ ಕೆ.ಎಸ್. ಹೆಗ್ಡೆಯವರ ಹೆಸರಿನ ಸುಸಜ್ಜಿತ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಿ, ಮೆಡಿಕಲ್ ಕಾಲೇಜುಗಳ ಮೂಲಕ ಹುಟ್ಟೂರಿನವರಿಗೆ ಉನ್ನತ ಶಿಕ್ಷಣ ಮತ್ತು ಕಡಿಮೆ ದರದಲ್ಲಿ ಆರೋಗ್ಯ ಸೇವೆಗಳನ್ನು ನಿರಂತರ ನೀಡಿಕೊಂಡು ಬಂದ ಹೆಗ್ಗಳಿಕೆ ವಿನಯ್ ಹೆಗ್ಡೆ ಅವರದ್ದು.

“ಒಬ್ಬ ಸಾಮಾನ್ಯ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು, ತನ್ಮೂಲಕ ಆತ ಸಮಾಜದ ಆಸ್ತಿಯಾಗಬೇಕು" ಎಂಬ ಕನಸನ್ನು ಸಾಕಾರಗೊಳಿಸಿದ ಅವರು, 86ರ ಇಳಿವಯಸ್ಸಿ ನಲ್ಲೂ ಸಂಸ್ಥೆಗಳನ್ನು ಸಮರ್ಥವಾಗಿ ಮುನ್ನಡೆಸುತ್ತಾ ಲವಲವಿಕೆಯಿಂದಲೇ ಇದ್ದರು. ಆರೋಗ್ಯ ಮತ್ತು ಆಹಾರದ ವಿಷಯದಲ್ಲಿ ಅತೀವ ಶಿಸ್ತು ಬೆಳೆಸಿಕೊಂಡಿದ್ದರು.

ನಿಟ್ಟೆ ಡೀಡ್ಮ್ ವಿಶ್ವವಿದ್ಯಾಲಯದ ಪ್ರಸಕ್ತ ಕುಲಪತಿಗಳಾಗಿದ್ದರು. ಶಿಕ್ಷಣವನ್ನು ವ್ಯವಹಾರವಾಗಿ ನೋಡದೆ, ‘ಸೇವೆ’ಯಾಗಿ ಸ್ವೀಕರಿಸಿದ ದೊಡ್ಡ ಗುಣ ಅವರನ್ನು ಜನನಾಯಕರನ್ನಾಗಿ ಮಾಡಿತು ಎಂದರೆ ತಪ್ಪಾಗಲಾರದು. ನಿಟ್ಟೆ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತ ಲಕ್ಷಾಂತರ ಮಂದಿ ಇಂದು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ‌

ಸಹಾಯ ಅಪೇಕ್ಷಿಸಿ ತಮ್ಮನ್ನು ಸಂಪರ್ಕಿಸಿದ ಪ್ರತಿಯೊಬ್ಬರಿಗೂ ಕೈಲಾದ ಸಹಾಯ-ಸಹಕಾರ ನೀಡಿ ಜನಾನುರಾಗಿ ಎನಿಸಿಕೊಂಡ ಶ್ರೇಯಸ್ಸು ವಿನಯ್ ಹೆಗ್ಡೆಯವರಿಗೆ ಸಲ್ಲುತ್ತದೆ. ಶಿಕ್ಷಣಕ್ಕೆ ಸಂಬಂಧಿ ಸಿದ ರಾಜ್ಯದ ಹಲವಾರು ಸಮಿತಿಗಳಲ್ಲಿ ಮತ್ತು ಕೈಗಾರಿಕಾ ಒಕ್ಕೂಟಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡು ಸಲಹೆ, ಸೂಚನೆ, ಮಾರ್ಗದರ್ಶನ ಅವರು ನೀಡುತ್ತಿದ್ದರು.

ದಶಕಗಳ ಹಿಂದೆ ಸಣ್ಣ ಗ್ರಾಮೀಣ ಪ್ರದೇಶವಾಗಿದ್ದ ‘ನಿಟ್ಟೆ’ಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೈಗಾರಿಕೆ-ಶಿಕ್ಷಣದ ಕ್ಷೇತ್ರದಲ್ಲಿ ಗುರುತಿಸುವಂತೆ ಮಾಡಿದ ಅನನ್ಯ ಸಾಧಕರು ಎನ್. ವಿನಯ್ ಹೆಗ್ಡೆ. ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲೂ ಗುರುತಿಸಿಕೊಂಡು ತಮ್ಮ ಕೊಡುಗೆಯನ್ನು ಆ ಕ್ಷೇತ್ರಗಳಿಗೂ ವಿಸ್ತರಿಸಿದ ಮಹಾನುಭಾವರು ಇವರು.

ಕ್ರಿಕೆಟ್ ಮತ್ತಿತರ ಆಟಗಳ ಬಗ್ಗೆಯೂ ಶ್ರೀಯುತರಿಗೆ ವಿಶೇಷ ಆಸಕ್ತಿಯಿತ್ತು. ಅದರ ಭಾಗವಾಗಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಮೂಲತಃ ಕರಾವಳಿಯವರಾದ ಬಿ.ಸಿ. ಆಳ್ವಾರ ಹೆಸರಿ ನಲ್ಲಿ ಕ್ರೀಡಾಂಗಣವೊಂದನ್ನು ನಿರ್ಮಿಸಿ, ಪ್ರತಿವರ್ಷ ಕ್ರೀಡಾಕೂಟಗಳನ್ನು ಆಯೋಜಿಸಿ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಿದ್ದರು.

ಹೆಸರಿಗೆ ಒಪ್ಪುವಂತೆ ವಿನಯವಂತ ವ್ಯಕ್ತಿಯಾಗಿದ್ದ ಇವರು, ಉತ್ತಮ ಯೋಜನೆಗಳನ್ನು ಹಾಕಿ ಕೊಂಡು, ನಿಖರ ಹೆಜ್ಜೆಗಳನ್ನಿಟ್ಟು ಯಶಸ್ವಿಯಾದ ದಾರ್ಶನಿಕ. ಸ್ಥಳೀಯರಿಗೆ ಉದ್ಯೋಗ, ಊರಿನ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿ, ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಿದವರು. ಜೀವನಪರ್ಯಂತ ಮೌಲ್ಯಾಧಾರಿತ ಬದುಕು ಬಾಳಿದವರು.

ಕೈಗಾರಿಕೋದ್ಯಮಿ, ವಿದ್ಯಾದೇಗುಲಗಳ ಸಾರಥಿ, ಶಿಕ್ಷಣ ಭೀಷ್ಮ ಇಂದು ದೈಹಿಕವಾಗಿ ನಮ್ಮನ್ನು ಅಗಲಿದ್ದರೂ ಅವರು ಹಚ್ಚಿಹೋದ ಜ್ಞಾನದೀವಿಗೆ ಲಕ್ಷಾಂತರ ಮನೆ-ಮನಗಳಲ್ಲಿ ಸದಾ ಬೆಳಗು ತ್ತಿರುತ್ತದೆ. ಓರ್ವ ವ್ಯಕ್ತಿ ‘ಎಷ್ಟು ವರುಷ ಬದುಕಿದ್ದರು?’ ಎನ್ನುವುದಕ್ಕಿಂತ ‘ಎಷ್ಟು ಜನರ ಬದುಕಿಗೆ ನೆರವಾದರು-ಬೆಳಕಾದರು?’ ಎನ್ನುವುದು ಬಹುಮುಖ್ಯ.

ಆ ದೃಷ್ಟಿಯಿಂದ ಡಾ.ಎನ್.ವಿನಯ್ ಹೆಗ್ಡೆಯವರು ಸಾರ್ಥಕ ಜೀವನವನ್ನು ಬಾಳಿ ತೋರಿಸಿದರು. ಅವರು ಸೃಷ್ಟಿಸಿದ ವಿದ್ಯಾದೇಗುಲಗಳು, ನೀರೆರೆದು ಪೋಷಿಸಿದ ಸಂಬಂಧಗಳು, ಗಳಿಸಿದ ಪ್ರೀತಿ-ವಿಶ್ವಾಸ, ಗೌರವ-ಅಭಿಮಾನ ಚಿರಾಯು!

ಅವರ ನಿಧನವು ಒಂದು ಯುಗದ ಅಂತ್ಯದ ಸಂಕೇತವಾಗಿ ಕಾಣಿಸುತ್ತದೆ. ಹೆಗ್ಡೆಯವರ ನಾಯಕತ್ವ, ನಮ್ರತೆ, ದೂರದೃಷ್ಟಿ ಮತ್ತು ನೀಡಿದ ಕೊಡುಗೆಗಳು ಶಾಶ್ವತ ಮತ್ತು ಚಿರಸ್ಮರಣೀಯ. ತಮ್ಮ ಪಾಲಿನ ಎ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಬಾರದ ಲೋಕಕ್ಕೆ ಪಯಣಿಸಿದ, ‘ಕಾಯಕವೇ ಕೈಲಾಸ’ ಎಂದು ನಂಬಿ ಬದುಕಿದ ಈ ಧೀಮಂತ-ಶ್ರೀಮಂತ ವ್ಯಕ್ತಿತ್ವಕ್ಕೆ ಕೋಟಿ ನಮನಗಳು. ಅವರು ಹಾಕಿಕೊಟ್ಟ ಆದರ್ಶ-ಸನ್ಮಾರ್ಗದಲ್ಲಿ ಸಾಗುವುದರ ಮೂಲಕ ಅವರಿಗೆ ನಿಜಾರ್ಥದಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)