ಸಂಪಾದಕರ ಸದ್ಯಶೋಧನೆ
ಇಂಗ್ಲೆಂಡಿನಲ್ಲಿ ಒಂದು ಮಾತಿದೆ - Life is better when nobody knows what you are doing. ಅಂದರೆ ನೀವು ಏನು ಮಾಡುತ್ತಿದ್ದೀರಿ ಎಂಬುದು ಯಾರಿಗೂ ತಿಳಿಯದಿದ್ದಾಗ ಜೀವನವು ಉತ್ತಮವಾಗಿರುತ್ತದೆ. ಜೀವನದ ಪಯಣದಲ್ಲಿ ನಾವು ಅನೇಕ ಘಟ್ಟಗಳನ್ನು ದಾಟುತ್ತೇವೆ.
ಹಿಂದೆಲ್ಲ ನಮ್ಮ ಸಾಧನೆ, ನೋವು-ನಲಿವು ಕೇವಲ ಆಪ್ತ ವಲಯಕ್ಕೆ ಮಾತ್ರ ಸೀಮಿತ ವಾಗಿರುತ್ತಿತ್ತು. ಆದರೆ ಇಂದಿನ ‘ಸೋಷಿಯಲ್ ಮೀಡಿಯಾ’ ಯುಗದಲ್ಲಿ ನಾವು ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಏನು ಮಾಡುತ್ತೇವೆ ಎಂಬ ಪ್ರತಿಯೊಂದು ಸಣ್ಣ ವಿಚಾರವನ್ನೂ ಜಗತ್ತಿಗೆ ಸಾರುತ್ತೇವೆ. ಈ ಹಂತದಲ್ಲಿ, ‘ಜೀವನವು ಯಾರಿಗೂ ತಿಳಿಯ ದಿದ್ದಾಗ ಸುಂದರವಾಗಿರುತ್ತದೆ’ ಎಂಬ ಮಾತು ಅತ್ಯಂತ ಪ್ರಸ್ತುತವೆನಿಸುತ್ತದೆ. ಈ ತತ್ವವು ಕೇವಲ ರಹಸ್ಯದ ಬಗ್ಗೆ ಅಲ್ಲ, ಬದಲಾಗಿ ಅದು ಆತ್ಮಸ್ಥೈರ್ಯ, ಗೌಪ್ಯತೆ ಮತ್ತು ಮಾನಸಿಕ ಶಾಂತಿಯ ಬಗ್ಗೆ ಮಾತನಾಡುತ್ತದೆ.
ನಾವು ಮಾಡುತ್ತಿರುವ ಕೆಲಸದ ಬಗ್ಗೆ ನಾಲ್ಕು ಜನರಿಗೆ ತಿಳಿಸಿದ ತಕ್ಷಣ, ನಮಗೆ ಗೊತ್ತಿಲ್ಲದೇ ಒಂದು ಸಾಮಾಜಿಕ ಒತ್ತಡ ಸೃಷ್ಟಿಯಾಗುತ್ತದೆ. ‘ಅವನು ಆ ಕೆಲಸ ಮಾಡುತ್ತಿದ್ದಾನೆ, ಅದರ ಫಲಿತಾಂಶ ಏನಾಯಿತು?’ ಎಂದು ಜನರು ಕೇಳಲಾರಂಭಿಸುತ್ತಾರೆ. ಈ ಪ್ರಶ್ನೆಗಳು ನಮ್ಮ ಕೆಲಸದ ಗುಣಮಟ್ಟದ ಮೇಲೆ ಪ್ರಭಾವ ಬೀರಬಹುದು.
ಇದನ್ನೂ ಓದಿ:Vishweshwar Bhat Column: ರೋಲಿಂಗ್ ಮತ್ತು ಗುಪ್ತನಾಮ
ಯಾವಾಗ ನಾವು ನಮ್ಮ ಗುರಿಗಳನ್ನು ಗುಪ್ತವಾಗಿಡುತ್ತೇವೆಯೋ, ಆಗ ನಾವು ಕೇವಲ ನಮಗಾಗಿ ಕೆಲಸ ಮಾಡುತ್ತೇವೆ. ಅಲ್ಲಿ ಬೇರೆಯವರ ನಿರೀಕ್ಷೆಗಳಿಗೆ ಉತ್ತರ ನೀಡುವ ಹೊಣೆ ಇರುವುದಿಲ್ಲ. ಸೋತರೂ ಅದು ನಮಗೆ ಕಲಿಕೆಯಾಗುತ್ತದೆ ಹೊರತು ಸಮಾಜದ ಮುಂದೆ ಅವಮಾನವೆನಿಸುವುದಿಲ್ಲ.
ಜಗತ್ತು ಸುಂದರವಾಗಿದೆ ನಿಜ, ಆದರೆ ಎಲ್ಲರ ದೃಷ್ಟಿಕೋನ ಒಂದೇ ಆಗಿರುವುದಿಲ್ಲ. ನಾವು ನಮ್ಮ ಸಂತೋಷದ ಕ್ಷಣಗಳನ್ನು ಅಥವಾ ಹಂತ-ಹಂತದ ಪ್ರಗತಿಯನ್ನು ಹಂಚಿ ಕೊಂಡಾಗ, ಅದನ್ನು ಕಂಡು ಎಲ್ಲರೂ ಸಂಭ್ರಮಿಸುವುದಿಲ್ಲ. ಕೆಲವು ಬಾರಿ ನಕಾರಾತ್ಮಕ ಶಕ್ತಿಗಳು ಅಥವಾ ಅಸೂಯೆಯ ಕಣ್ಣುಗಳು ನಮ್ಮ ಪ್ರಗತಿಗೆ ಅಡ್ಡಿಯಾಗಬಹುದು.
ಹಿರಿಯರು ಹೇಳುವಂತೆ ‘ದೃಷ್ಟಿ ತಗುಲುವುದು’ ಎಂಬುದು ಕೇವಲ ಮೂಢನಂಬಿಕೆಯಲ್ಲ, ಅದು ವ್ಯಕ್ತಿಯೊಬ್ಬನ ಏಳಿಗೆಯ ಬಗ್ಗೆ ಬೇರೆಯವರು ಹೊಂದಿರುವ ನಕಾರಾತ್ಮಕ ಆಲೋ ಚನೆಗಳ ಪ್ರಭಾವ. ಮೌನವಾಗಿ ಕೆಲಸ ಮಾಡುವುದು ಇಂಥ ಅನಗತ್ಯ ಅಡ್ಡಿಗಳಿಂದ ನಮ್ಮನ್ನು ರಕ್ಷಿಸುತ್ತದೆ.
ಬೇರೆಯವರು ನೋಡುತ್ತಿದ್ದಾರೆ ಎಂದಾಗ ನಾವು ನಮಗಾಗಿ ಬದುಕುವುದಕ್ಕಿಂತ ಹೆಚ್ಚಾಗಿ ಸಮಾಜಕ್ಕೆ ತೋರಿಸಿಕೊಳ್ಳಲು ಬದುಕುತ್ತೇವೆ. ಉದಾಹರಣೆಗೆ, ಒಂದು ಪ್ರವಾಸಕ್ಕೆ ಹೋದಾ ಗ ಆ ಕ್ಷಣವನ್ನು ಆನಂದಿಸುವುದಕ್ಕಿಂತ ಅದನ್ನು ಫೋಟೋ ತೆಗೆದು ಅಪ್ಲೋಡ್ ಮಾಡುವು ದರ ನಾವು ನಿರತರಾಗಿರುತ್ತೇವೆ.
ಯಾವಾಗ ನಮ್ಮ ಬದುಕಿನ ಬಗ್ಗೆ ಯಾರಿಗೂ ತಿಳಿದಿರುವುದಿಲ್ಲವೋ, ಆಗ ನಾವು ನಮ್ಮ ನೈಜ ರೂಪದಲ್ಲಿ ಇರುತ್ತೇವೆ. ಅಲ್ಲಿ ಯಾವುದೇ ಪ್ರದರ್ಶನ ( Show of ) ಇರುವುದಿಲ್ಲ. ಆ ಬದುಕು ಅತ್ಯಂತ ಪ್ರಾಮಾಣಿಕವಾಗಿರುತ್ತದೆ. ಗುಟ್ಟಾಗಿ ಕೆಲಸ ಮಾಡಿ ಗೆದ್ದಾಗ ಸಿಗುವ ಮಜವೇ ಬೇರೆ. ‘Work hard in silence, let success be your noise’ ಎಂಬಂತೆ, ನಿಮ್ಮ ಸಾಧನೆ ಜಗತ್ತಿಗೆ ಹಠಾತ್ ಕಾಣಿಸಿಕೊಂಡಾಗ ಅದರ ತೂಕ ಹೆಚ್ಚಿರುತ್ತದೆ.
ನೀವು ಏನು ಮಾಡುತ್ತಿದ್ದೀರಿ ಎಂದು ತಿಳಿಯದ ಜನರು, ನಿಮ್ಮ ಯಶಸ್ಸನ್ನು ಕಂಡು ಬೆರಗಾಗುತ್ತಾರೆ. ಈ ಗೌಪ್ಯತೆಯು ನಿಮ್ಮ ವ್ಯಕ್ತಿತ್ವಕ್ಕೆ ಒಂದು ರೀತಿಯ ಘನತೆ ಮತ್ತು ನಿಗೂಢತೆಯನ್ನು ನೀಡುತ್ತದೆ. ಇತರರ ಅಭಿಪ್ರಾಯಗಳಿಗೆ ಕಿವಿಗೊಡದಿದ್ದಾಗ ಮನಸ್ಸು ಪ್ರಶಾಂತವಾಗಿರುತ್ತದೆ.
ಟೀಕೆಗಳು ಅಥವಾ ಅನಗತ್ಯ ಸಲಹೆಗಳು ನಮ್ಮ ಏಕಾಗ್ರತೆಯನ್ನು ಭಂಗಗೊಳಿಸುವುದಿಲ್ಲ. ನಮ್ಮ ಜೀವನದ ನಿರ್ಧಾರಗಳು ಸಂಪೂರ್ಣವಾಗಿ ನಮ್ಮದಾಗಿರುತ್ತವೆ. ಬೇರೆಯವರ ‘ಸಮ್ಮತಿ’ಗಾಗಿ ಕಾಯುವ ಅಭ್ಯಾಸ ತಪ್ಪುತ್ತದೆ. ಇದರಿಂದ ನಮ್ಮ ಆತ್ಮವಿಶ್ವಾಸ ವೃದ್ಧಿ ಯಾಗುತ್ತದೆ. ನಮ್ಮ ಖಾಸಗಿ ಬದುಕನ್ನು ನಾವು ಎಷ್ಟು ಗುಪ್ತವಾಗಿಡುತ್ತೇವೆಯೋ, ನಮ್ಮ ಸಂಬಂಧಗಳು ಅಷ್ಟು ಗಟ್ಟಿಯಾಗುತ್ತವೆ.
ಸಂಗಾತಿಯೊಂದಿಗೆ ಕಳೆದ ಸಮಯ ಅಥವಾ ಕುಟುಂಬದ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಸ್ತುವಾಗಬಾರದು. ಆಪ್ತ ಕ್ಷಣಗಳು ಕೇವಲ ಆ ಕ್ಷಣದಲ್ಲಿ ಭಾಗಿಯಾದವರಿಗೆ ಮಾತ್ರ ತಿಳಿದಿರಲಿ. ಇದು ಸಂಬಂಧಗಳಲ್ಲಿ ನಂಬಿಕೆ ಮತ್ತು ಗೌರವ ವನ್ನು ಹೆಚ್ಚಿಸುತ್ತದೆ.