ವಿಶ್ವರಂಗ
ನಮ್ಮ ಹುಟ್ಟು ನಮ್ಮ ಕೈಲಿಲ್ಲ. ನಾವು ಇಂತಹ ಕುಟುಂಬದಲ್ಲಿ ಹುಟ್ಟಬೇಕು ಎಂದು ಬಯಸುವುದು ಕೂಡ ಸಾಧ್ಯವಿಲ್ಲ. ಜಗತ್ತಿನ ವ್ಯವಹಾರಗಳು ತಿಳಿಯಲು ಶುರುಮಾಡಿದ ಮೇಲಷ್ಟೇ ಓಹೋ ನಾನು ಇಂತಹ ಜಾತಿಗೆ, ಧರ್ಮಕ್ಕೆ ಅಥವಾ ಇಂತಹ ಪ್ರಭಾವಿ ಅಥವಾ ಬಡ ಕುಟುಂಬದಲ್ಲಿ ಹುಟ್ಟಿದ್ದೇನೆ ಎನ್ನುವುದು ತಿಳಿಯುತ್ತದೆ. ವ್ಯಕ್ತಿಯ ಮಟ್ಟಿಗೆ ಹುಟ್ಟಿನ ಮತ್ತು ಸಾವಿನ ಮೇಲೆ ಎಳ್ಳಷ್ಟೂ ನಿಯಂತ್ರಣವಿಲ್ಲ.
ಇವುಗಳ ನಡುವಿನ ಜೀವನದಲ್ಲೂ ಕೂಡ ನಮ್ಮ ನಿಯಂತ್ರಣ ಅಷ್ಟಕಷ್ಟೇ. ನಮ್ಮ ಕೈಲಿರುವುದು ಯಾವ ಮಾರ್ಗದಲ್ಲಿ ಬದುಕ ಸಾಗಿಸಬೇಕು ಎನ್ನುವುದಷ್ಟೆ. ನಂತರದ ಪ್ರಯಾಣದಲ್ಲಿ ಎದುರಾಗುವ ಗೆಲುವು ಅಥವಾ ಸೋಲುಗಳಲ್ಲಿ ಕೂಡ ನಮ್ಮ ನಿಯಂತ್ರಣ ಹೇಳಿಕೊಳ್ಳುವಂತದ್ದಲ್ಲ. ಫಲಿತಾಂಶ ನಮ್ಮ ಕೈಲಿಲ್ಲ. ಜೀವನದಲ್ಲಿ ನಡೆಯುವ 99 ಪ್ರತಿಶತ ಘಟನೆಗಳ ಮೇಲೆ ನಮ್ಮ ಹಿಡಿತವಿಲ್ಲ. ನಮ್ಮ ಕೈಲಿರುವುದು 1 ಪ್ರತಿಶತ ಮಾತ್ರ!
ನಮ್ಮ ಕೈಲಾದದ್ದ ಸರಿಯಾಗಿ ನಿಷ್ಠೆಯಿಂದ ಮಾಡುವುದು, ಫಲಿತಾಂಶ ಅಂದುಕೊಂಡ ಮಟ್ಟಕ್ಕೆ ಬರದಿದ್ದರೆ ಮರಳಿ ಪ್ರಯತ್ನಿಸುವುದು ಮಾತ್ರ ನಮ್ಮ ಕೈಲಿದೆ. ಆದರೆ ನಾವು? ನಮಗೆ ಇದ್ಯಾವುದೂ ಬೇಕಿಲ್ಲ. ಸಮಾಜದಲ್ಲಿನ ಬದಲಾವಣೆಗಳಿಗೆ, ಅವರಿವರ ಬಗ್ಗೆ ಪ್ರತಿಕ್ರಿಯೆ ಕೊಡುವುದರಲ್ಲಿ ನಮಗೆ ಇನ್ನಿಲ್ಲದ ಆತ್ಮತೃಪ್ತಿ ಸಿಗುತ್ತಿದೆ.
ಕಳೆದ ಎರಡು ಮೂರು ದಿನದಿಂದ ಮಹಾರಾಷ್ಟ್ರದಲ್ಲಿ ಹುಡುಗನೊಬ್ಬ ಐಫೋನ್ ಕೊಡಿಸಲಿಲ್ಲ ಎನ್ನುವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡದ್ದು, ಅವನನ್ನು ಉಳಿಸಿಕೊಳ್ಳುವ ಭರದಲ್ಲಿ ಆತನ ಅಪ್ಪನೂ ಬೆಟ್ಟದಿಂದ ಬಿದ್ದದ್ದು ಅದನ್ನು ಕಂಡು ಆತನ ತಾಯಿಯೂ ಕ್ಷಣ ಮಾತ್ರವೂ ಯೋಚಿಸದೆ ಬೆಟ್ಟದಿಂದ ಹಾರಿ ಜೀವತೆತ್ತದ್ದು ಭಾರಿ ಸುದ್ದಿಯಾಗಿದೆ. ಇವತ್ತು ಹೇಳಿ ಕೇಳಿ ಸೋಶಿಯಲ್ ಮೀಡಿಯಾ ಯುಗ. ಕಂಟೆಂಟ್ ಕ್ರಿಯೇಟರ್ಸ್ ಎನ್ನುವ ಮಹಾ ಸಮೂಹಕ್ಕೆ ಸದಾ ಹೊಸ ಆಹಾರ ಬೇಕು.
ಇದನ್ನೂ ಓದಿ: Rangaswamy Mookanahalli Column: ಅನುಭವವೇ ಬದುಕು, ಅದೇ ಮಹಾಗುರು !
ಕೇಳುವುದಿನ್ನೇನು? ಒಬ್ಬರು ಒಂದು ಕೋನದಲ್ಲಿ ವಿವರಿಸಿದರೆ ಸಾಕು. ಅದು ಸರಿಯೇ, ತಪ್ಪೇ ಎಂದು ಪರಾಮರ್ಶಿಸುವ ವ್ಯವಧಾನ ಯಾರಿಗೂ ಇಲ್ಲ. ಎಲ್ಲರಿಗೂ ಸುದ್ದಿ ಹಳತಾಗುವ ಮುನ್ನ ತಮ್ಮ ತಮ್ಮ ಚಾನಲ್‌ನಲ್ಲಿ ಬಿತ್ತರಿಸಿ ವ್ಯೂಸ್ ಪಡೆದುಕೊಳ್ಳುವ ತರಾತುರಿ. ನಾವು ನಮ್ಮ ತಪ್ಪುಗಳಿಗೆ ವಕೀಲರಾಗಿ ಬದಲಾಗುತ್ತೇವೆ. ಅದೇ ಇತರರ ತಪ್ಪಿಗೆ ನ್ಯಾಯಾಧೀಶರಾಗಿ ಬದಲಾಗಿ ಬಿಡುತ್ತೇವೆ.
ನಮ್ಮಲ್ಲಿ ಒಂದು ಆಡುಮಾತಿದೆ, ಪ್ರತ್ಯಕ್ಷ ಕಂಡರೂ, ಪ್ರಮಾಣಿಸಿ ನೋಡು ಎನ್ನುತ್ತದೆ ಆ ಮಾತು. ಇವತ್ತಿಗೆ ಇಂತಹ ಮಾತುಗಳಿಗೆ ಬೆಲೆ ಇಲ್ಲವಾಗಿದೆ. ಎಲ್ಲವೂ ಟೈಮ್ ಬೌಂಡ್! ಈ ಕ್ಷಣದ ಸುದ್ದಿ ಮುಂದಿನ ಕ್ಷಣಕ್ಕೆ ಹಳಸಿರುತ್ತದೆ ಎನ್ನುವ ಕಾಲಘಟ್ಟದಲ್ಲಿದ್ದೇವೆ. ಸರಿ ತಪ್ಪು ವಿವೇಚಿಸುತ್ತಾ ಕುಳಿತರೆ ಅವಕಾಶ ಕೈ ತಪ್ಪಿ ಹೋಗುತ್ತದೆ ಎನ್ನುವ ಮಟ್ಟಕ್ಕೆ ನಾವು ಸಮಾಜವಾಗಿ ಬದಲಾಗಿದ್ದೇವೆ.
ಮೀಡಿಯಾ ಹೌಸುಗಳನ್ನು ನಾವು ಬೈಯುತ್ತೇವೆ. ವಿವೇಚನೆ ಇಲ್ಲ ಎನ್ನುತ್ತೇವೆ. ಇವತ್ತಿನ ಸೋಶಿ ಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ಸ್ ಏನು ಮಾಡುತ್ತಿದ್ದಾರೆ? ಎಲ್ಲೋ ಬೆರೆಳೆಣಿಕೆಯ ಜನ ಹೊಸತಿಗೆ, ಮೌಲ್ಯ ಹೆಚ್ಚಿಸುವ ಕಂಟೆಂಟ್ ಬಗ್ಗೆ ಯೋಚಿಸುತ್ತಿದ್ದಾರೆ. ಉಳಿದಂತೆ ಸುದ್ದಿ ಮಾಧ್ಯಮ ಗಳಿಗಿಂತ ವೇಗವಾಗಿ ನೀಡಬೇಕು ಎನ್ನುವ ಧಾವಂತಕ್ಕೆ ಯುಟ್ಯೂಬ್ ಮತ್ತಿತರ ಸೋಶಿಯಲ್ ಮೀಡಿಯಾ ಸ್ಟಾರು ಗಳು, ಚಾನಲ್ ಗಳು ಪೈಪೋಟಿಗೆ ಬಿದ್ದಿವೆ.
ಅಸಲಿಗೆ ಆತ್ಮಹತ್ಯೆ ಮಾಡಿಕೊಂಡ ಹುಡುಗ ಐಫೋನಿಗಾಗಿ ಹಾಗೆ ಮಾಡಲಿಲ್ಲ ಎನ್ನುವ ಸತ್ಯ ಯಾರಿಗೂ ಬೇಕಾಗಿರುವುದಿಲ್ಲ. ಕಂಟೆಂಟ್ ಅಪ್ಲೋಡ್ ಮಾಡಿದವರ ಕಥೆ ಒಂದು ಕಡೆಯಾದರೆ, ಅದನ್ನು ಕನ್ಸ್ಯೂಮ್ ಮಾಡುವ ಬಹುದೊಡ್ಡ ಸಮೂಹದ ಕಥೆ ಇನ್ನಷ್ಟು ದೊಡ್ಡ ಕಥೆ. ಇವತ್ತಿಗೆ ಯಾರನ್ನಾದರೂ ದೂಷಿಸಬೇಕು ಎನ್ನುವ ನಾಲಿಗೆಯ ತೀಟೆಗೆ ಇಂತಹ ಘಟನೆಗಳು ಆಹಾರ ಅಷ್ಟೇ.
ಇಂತಹ ಮಕ್ಕಳು ಏಕೆ ಹುಟ್ಟುತ್ತಾರೆ ಎಂದು ಪ್ರಶ್ನಿಸುವ ಜನ ಒಂದು ಕಡೆ, ಅವನ ಬೆಳಸಿದ್ದರಲ್ಲಿ ತಪ್ಪಿದೆ, ಅವನ ಪೋಷಕರದ್ದೇ ತಪ್ಪು ಎನ್ನುವ ಜಡ್ಜ್‌ಮೆಂಟ್ ನೀಡುವ ಸಮೂಹ ಇನ್ನೊಂದು ಕಡೆ. ಒಟ್ಟಾರೆ ತಲೆಗೊಂದು ಮಾತು. ಈ ಎಲ್ಲಾ ಗದ್ದಲಗಳ ನಡುವೆ ಸತ್ಯ ಉಸಿರುಗಟ್ಟಿ ಸತ್ತು ಹೋಗುತ್ತದೆ. ಥೇಟ್ ಆ ಮೂರು ಜೀವಗಳು ಕ್ಷಣದಲ್ಲಿ ಇಲ್ಲವಾದಂತೆ!
ಹೊಸ ಕಂಟೆಂಟ್, ಸುದ್ದಿ ಬರುವವರೆಗೆ ಈ ಸುದ್ದಿ ಜೀವಂತ. ಇವತ್ತಿನ ಯುವ ಜನಾಂಗದ ಬಗ್ಗೆಯಂತೂ ತಲೆಗೊಂದು ಮಾತು, ತಲೆಗೊಂದು ಒಪಿನಿಯನ್ನು ದಾಖಲಿಸುತ್ತಾ ಸಾಗುತ್ತಿದ್ದೇವೆ. ಇವತ್ತಿನ ಯುವ ಜನತೆ ಅಂದರೆ 15ರಿಂದ 29 ವಯಸ್ಸಿನವರು ನಮ್ಮ ದೇಶದ ಒಟ್ಟು ಜನಸಂಖ್ಯೆ ಯಲ್ಲಿ 36.7 ಕೋಟಿ ಇದ್ದಾರೆ. ಇದು ನಮ್ಮ ದೇಶದ ಜನಸಂಖ್ಯೆಯ ಸರಿಸುಮಾರು 26 ಪ್ರತಿಶತ!
ಇವರಲ್ಲಿ ಸರಿಸುಮಾರು 9 ಕೋಟಿ ಜನರನ್ನು NEET ಎಂದು ವರ್ಗಿಕರಿಸಲಾಗಿದೆ. ಅಂದರೆ Not in Education, Employment, or Training ಎಂದರ್ಥ. ಇಷ್ಟು ದೊಡ್ಡ ಸಂಖ್ಯೆಯ ಮಕ್ಕಳಿಗೆ ಯಾವುದೇ ಭವಿಷ್ಯವಿಲ್ಲ. ಬದುಕಿನಲ್ಲಿ ಉದ್ದೇಶವಿಲ್ಲ. ಬೆಳಿಗ್ಗೆ ಏಳುವುದಕ್ಕೆ ಒಂದು ಉದ್ದೇಶ ಬೇಕು. ಉದ್ದೇಶ ವೇ ಇಲ್ಲದೆ ಹೋದರೆ ಬದುಕಿಗೇನರ್ಥ? ಈ ಖಿನ್ನತೆ ಎನ್ನುವುದು ಈ ರೀತಿಯ ಉದ್ದೇಶವಿಲ್ಲದ ಬದುಕಿನಲ್ಲಿ ಬಹುಬೇಗ ಪ್ರವೇಶ ಪಡೆದುಕೊಳ್ಳುತ್ತದೆ. ಅದು ಯಾವಾಗ ಎಂಟ್ರಿ ಪಡೆದುಕೊಂಡಿತು, ಹೇಗೆ ಬೆಳೆಯುತ್ತಾ ಹೋಯ್ತು ಎನ್ನುವುದು ಕೂಡ ಗೊತ್ತಾಗುವುದಿಲ್ಲ.
ಆತ್ಮಹತ್ಯೆ ಎನ್ನುವುದು ಒಂದು ದಿನದಲ್ಲಿ, ಆ ಕ್ಷಣದಲ್ಲಿ ಮಾಡಿದ ನಿರ್ಧಾರವಂತೂ ಅಲ್ಲ. ನಿಧಾನವಾಗಿ ಅದು ರೂಪುಗೊಳ್ಳುತ್ತಾ ಹೋಗುತ್ತದೆ. ಅದನ್ನು ಗುರುತಿಸಿ, ಆರಂಭಿಕ ಹಂತದಲ್ಲಿ ಅದಕ್ಕೊಂದು ಸಮಾಧಾನ ಕಂಡುಕೊಳ್ಳಬೇಕು. ಪ್ರಸ್ತುತ ಸುದ್ದಿಯಲ್ಲಿರುವ ಹುಡುಗ ವರ್ಷದ ಹಿಂದೆಯೇ ಈ ರೀತಿಯ ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದ ಎನ್ನುವ ಸುದ್ದಿ ಇದನ್ನು ಪುಷ್ಟೀಕರಿಸುತ್ತದೆ.
ಯಾವುದೂ ಒಂದು ದಿನದಲ್ಲಿ ಬಲಿಯುವುದಿಲ್ಲ. ಒಳಿತು ಅಥವಾ ಕೆಡುಕು ಎರಡಕ್ಕೂ ಸಮಯ ತಗಲುತ್ತದೆ. ಇವತ್ತಿಗೆ ಧ್ಯಾನ, ಯೋಗ, ಪ್ರಾಣಾಯಾಮ ಅಥವಾ ಇದ್ಯಾವುದೂ ಇಷ್ಟವಿಲ್ಲ ಎಂದವರು ಬಿರುಸು ನಡಿಗೆಯನ್ನಾದರೂ ರೂಢಿಸಿಕೊಂಡರೆ ಅಷ್ಟರಮಟ್ಟಿಗೆ ತಲೆಯಲ್ಲಿ ಕೆಟ್ಟ ಆಲೋಚನೆಗಳು ದೂರವಾಗುತ್ತವೆ. ಆದರೆ ಇವತ್ತಿಗೆ ಒಳ್ಳೆಯ ವಿಚಾರಗಳಿಗೆ ಬೆಲೆಯಿಲ್ಲ. ವಿವೇಕದ ಮಾತನ್ನಾಡಿದರೆ ಅವರನ್ನು ಅನ್ಯ ಗ್ರಹದ ಜೀವಿಯಂತೆ ಕಾಣಲಾಗುತ್ತದೆ.
ಬೆಂಗಳೂರು, ಮೈಸೂರು ಇತ್ಯಾದಿ ನಗರಗಳಲ್ಲಿ ಶಾಲೆ ಕಾಲೇಜಿನ ಮಕ್ಕಳನ್ನು ಉದ್ದೇಶಿಸಿ ಮಾತಾಡುವ ಅವಕಾಶ ನನಗೆ ಸಿಕ್ಕಿದೆ. ಎಡೆ ಕಾಣ ಸಿಗುವ ಒಂದು ಸಾಮಾನ್ಯ ಅಂಶ, ಮಕ್ಕಳಿಗೆ ಕೇಳುವ ವ್ಯವಧಾನ, ತನ್ಮಯತೆ ಇಲ್ಲವಾಗಿರುವುದು. ಒಂದು ತಾಸು ಕುಳಿತು ಹೇಳುವ ಮಾತನ್ನು ಕೇಳುವ ಶಕ್ತಿ ಅವರು ಕಳೆದುಕೊಂಡಿದ್ದಾರೆ. ಇನ್ನು ನಮ್ಮ ಶಿಕ್ಷಣ ವ್ಯವಸ್ಥೆಯ ಬಗ್ಗೆ ಅದೆಷ್ಟು ಬರೆದರೂ, ಹೇಳಿದರೂ ಅದು ಕಡಿಮೆ. ಶಾಲೆ, ಕಾಲೇಜುಗಳು ಫೀಡರ್ ಸೆಂಟರ್‌ಗಳು ಅಷ್ಟೇ!
ಒಂದು ಹಂತದಿಂದ ಇನ್ನೊಂದು ಹಂತದ ಶಾಲೆ, ಕಾಲೇಜಿಗೆ ವಿದ್ಯಾರ್ಥಿಯನ್ನು ಒದಗಿಸುವ ಕಾರ್ಖಾನೆಗಳು. ಜಸ್ಟ್ ಫೀಡರ್ ಸೆಂಟರ್‌ಗಳು. 36 ಕೋಟಿ ಯುವ ಜನತೆಯಲ್ಲಿ 9 ಕೋಟಿ ಯುವ ಜನತೆಗೆ ನಾಳಿನ ಬಗ್ಗೆ ಕನಸಿಲ್ಲ, ಯೋಚನೆಯಿಲ್ಲ ಎನ್ನುವುದು ಬಹುದೊಡ್ಡ ಚಿಂತೆಯ ವಿಷಯ. ಇದು ಯೂರೋಪಿನ ಒಂದೆರಡು ದೇಶದ ಜನಸಂಖ್ಯೆಗೆ ಸಮ!
ಇದು ಭಾರತೀಯ ಸಮಾಜದ ಅತಿ ದೊಡ್ಡ ಪಿಡುಗು. ಇದರ ಬಗ್ಗೆ ಚರ್ಚೆಯಾಗಬೇಕು. ಇದು ಸುದ್ದಿ ಯಾಗಬೇಕು. ಆದರೆ ಇಂತಹ ಮಾತುಗಳು ಟ್ರಾಕ್ಷನ್ ಪಡೆದುಕೊಳ್ಳುವುದಿಲ್ಲ. ಇವತ್ತಿನ ಡಿಜಿಟಲ್ ಯುಗದಲ್ಲಿ ಎಲ್ಲವೂ ಟ್ರಾಕ್ಷನ್ ಮೇಲೆ ನಿಂತಿದೆ. ಎಲ್ಲವೂ ಹಣದ ಸುತ್ತ ಸುತ್ತುತ್ತದೆ. ಹಣ ಎಷ್ಟು ವ್ಯೂಸ್ ಬಂತು ಎನ್ನುವುದರ ಆಧಾರದ ಮೇಲೆ ನಿರ್ಧಾರವಾಗುತ್ತೆ ಹೊರತು ಕಂಟೆಂಟ್ ಮೌಲ್ಯದಿಂದಲ್ಲ!
36 ಕೋಟಿಯಲ್ಲಿ 9 ಕೋಟಿ ಹೊರತುಪಡಿಸಿದಾಗ 27 ಕೋಟಿ ಯುವ ಜನತೆ ಉಳಿದುಕೊಳ್ಳುತ್ತಾರೆ. ಇವರ ಭವಿಷ್ಯದ ಕಥೆಯೇನು? ಇದು ಇನ್ನಷ್ಟು ಭಯಕ್ಕೆ ತಳ್ಳುವ ಅಂಶ. ಇವತ್ತು ಇಂಜಿನಿಯರಿಂಗ್ ಮುಗಿಸಿದ ಮಕ್ಕಳ ಆರಂಭಿಕ ವೇತನ 26/27 ವರ್ಷದ ಹಿಂದೆ ನಾನು ಪಡೆಯುತ್ತಿದ್ದ ವೇತನಕ್ಕೆ ಸಮವಾಗಿದೆ.
ಟೈಮ್ ವ್ಯಾಲ್ಯೂ ಆಫ್ ಮನಿ ನಿಯಮದ ಪ್ರಕಾರ ಇವತ್ತಿನ ಮಕ್ಕಳು ಪಡೆಯುತ್ತಿರುವ ವೇತನಕ್ಕೆ ಬೆಲೆಯೇ ಇಲ್ಲ ಎನ್ನುವಂತಾಗಿದೆ. ಮೈಸೂರಿನಂತಹ ನಗರದಲ್ಲಿ ಹೊಸದಾಗಿ ಇಂಜಿನಿಯರಿಂಗ್ ಮುಗಿಸಿ ಬಂದ ಮಕ್ಕಳಿಗೆ ಹತ್ತು, ಹದಿನೈದು ಸಾವಿರ ರೂಪಾಯಿ ಮಾಸಿಕ ವೇತನವನ್ನು ಆಫರ್ ಮಾಡಲಾಗುತ್ತಿದೆ. ಇದು ಬೆಂಗಳೂರಿನಲ್ಲಿ ಸಹ ಹೆಚ್ಚು ಕಡಿಮೆ ಸೇಮ್ ಇದೆ. ಯಾವ ಪುರುಷಾರ್ಥಕ್ಕೆ ಓದಬೇಕು ಎಂದು ಮಕ್ಕಳು ಕೇಳಿದರೆ, ಈ ಕಾರಣಕ್ಕೆ ಓದಬೇಕು ಎಂದು ಪೋಷಕರು ಕೂಡ ಹೇಳುವ ಸ್ಥಿತಿಯಲ್ಲಿಲ್ಲ.
ಭಾರತದಲ್ಲಿ ಅತ್ಯಂತ ವೇಗವಾಗಿ ಇಂಜಿನಿಯರಿಂಗ್ ಕಾಲೇಜುಗಳು ಮುಚ್ಚುತ್ತಿವೆ. ಇದೊಂದು ರೀತಿಯಲ್ಲಿ ಒಳ್ಳೆಯದು. ನಾಲ್ಕು ವರ್ಷ ಪ್ರಯೋಜನಕ್ಕೆ ಬಾರದ ಅಥವಾ ಮಾಸಿಕ ಹದಿನೈದು ಸಾವಿರ ವೇತನ ಪಡೆಯಲು, ಮಾಸಿಕ 25/30 ಸಾವಿರ ವ್ಯಯಿಸಿ ಏಕೆ ಓದಬೇಕು? ಇಲ್ಲಿಯವರೆಗೆ ಇದು ಸರಿ. ಆದರೆ ಹೀಗೆ ಕಾಲೇಜು ಮುಚ್ಚುವ ಬದಲು ಬದುಕಿಗೆ ಬೇಕಾಗುವ ಕೌಶಲ ಕಲಿಸುವ ಶಾಲೆಗಳನ್ನಾಗಿ ಏಕೆ ಇವನ್ನು ಪರಿವರ್ತಿಸುತ್ತಿಲ್ಲ? ಕೆಲಸ, ಟ್ರೇನಿಂಗ್, ಓದು ಯಾವುದೂ ಇಲ್ಲದ ಕನಸಿಲ್ಲದ 9 ಕೋಟಿ ಜನಸಂಖ್ಯೆ ಟೈಮ್ ಬಾಂಬ್ ಇದ್ದಹಾಗೆ. ಯಾವಾಗ ಬೇಕಾದರೂ ಸೋಟಿಸಬಹುದು.
ಇಂಗ್ಲೀಷಿನಲ್ಲಿ ‘ಎ ಸ್ಪಾರ್ಕ್ ನೆಗ್ಲೆಕ್ಟೆಡ್ ಬರ್ನ್ಸ್ ದ ಹೌಸ್’ ಎನ್ನುವ ಮಾತಿದೆ. ಒಂದು ಸಣ್ಣ ಬೆಂಕಿ ಕಿಡಿ ಇಡೀ ಊರನ್ನೇ ಸುಡುವ ಶಕ್ತಿಯನ್ನು ಹೊಂದಿದೆ. ನಾವು ಈ ಸಮಸ್ಯೆಯ ಅಗಾಧತೆಯನ್ನು ಕಡೆಗಣಿಸು ತ್ತಿದ್ದೇವೆ. ಇದು ನಮ್ಮ ಸಮಾಜವನ್ನು ಸುಡುವ ಮುಂಚೆ ನಾವು ಎಚ್ಚೆತ್ತುಕೊಳ್ಳಬೇಕಿದೆ. ಮಾನಸಿಕ ಆರೋಗ್ಯದ ಬಗ್ಗೆ ನಮ್ಮ ದೇಶದಲ್ಲಿ ಹೆಚ್ಚಿನ ಮಾತುಕತೆ ಆಗುವುದೇ ಇಲ್ಲ. ಬದುಕಿ ಗೊಂದು ಉದ್ದೇಶ ವಿಲ್ಲದ ಬಹುದೊಡ್ಡ ಸಮೂಹದ ಮಾನಸಿಕತೆ ಬಗ್ಗೆ ನಾವು ಎಚ್ಚರ ವಹಿಸಬೇಕಿದೆ.
ಉದ್ದೇಶವಿಲ್ಲದ ಪ್ರತಿಯೊಂದು ಜೀವಿಯೂ ಟೈಮ್ ಬಾಂಬ್ ಇದ್ದ ಹಾಗೆ. ಅವು ಸಿಡಿಯುವ ಮುಂಚೆ ನಾವು ಅದರ ಬಗ್ಗೆ ಒಂದಷ್ಟು ಕ್ರಮವನ್ನು ಕೈಗೊಳ್ಳಬೇಕಿದೆ. ಈಗ ಮತ್ತೊಮ್ಮೆ ಮೊದಲ ಪ್ಯಾರಾ ಓದಿ ಪ್ಲೀಸ್! ನಮ್ಮ ನಿಯಂತ್ರಣವಿಲ್ಲದ ವಿಚಾರಗಳಲ್ಲಿ ಸಮಯ ಸರಿದು ಹೋಗುತ್ತಿದೆ. ನಮ್ಮ ಕೈಲಿರುವುದು ಕೇವಲ ಒಂದು ಪ್ರತಿಶತ. ಸರಕಾರ, ಸಂಘ-ಸಂಸ್ಥೆಗಳು ಶೀಘ್ರ ಇದರ ಬಗ್ಗೆ ಕ್ರಮವನ್ನು ಕೈಗೊಳ್ಳುವ ಅವಶ್ಯಕತೆ ಯಿದೆ.
ಸೋಶಿಯಲ್ ಮೀಡಿಯಾಕ್ಕೂ ಒಂದು ಕಡಿವಾಣದ ಅವಶ್ಯಕತೆಯಿದೆ. ಸಮಾಜವನ್ನು ಒಳ್ಳೆಯ ಕಡೆಗೆ ಕರೆದೊಯ್ಯುವ ಕೆಲಸವಾಗಬೇಕಿದೆ. ಕಂಡಿದ್ದು, ಕೇಳಿದ್ದು ಎಲ್ಲವನ್ನೂ ಬಿತ್ತರಿಸುವ ಮುನ್ನ ಫ್ಯಾಕ್ಟ್ ಚೆಕ್ ಕಡ್ಡಾಯಗೊಳಿಸಬೇಕಿದೆ. ಶಾಲೆ, ಕಾಲೇಜು ಕಲಿಕೆಯ ಜೊತೆಗೆ ವಿದ್ಯಾರ್ಥಿಯ ಇಷ್ಟದ ಒಂದು ಕೌಶಲ ಕಲಿಯಲು ಅವರನ್ನು ಪ್ರೇರೇಪಿಸುವ ಅವಶ್ಯಕತೆಯಿದೆ. ಇನ್ ಫ್ಯಾಕ್ಟ್ ಕೆಲವು ಕೌಶಲಗಳನ್ನು ಕಡ್ಡಾಯ ಗೊಳಿಸಿದರೂ ತಪ್ಪಿಲ್ಲ. ಈ ವೇಳೆಗೆ ಕೆಲವರಿಗೆ ಇವೆಲ್ಲವೂ ಹೇಳಲು, ಕೇಳಲು ಬಹಳ ಚಂದ ಆದರೆ ಇದು ಸಾಧ್ಯವೇ ಎನ್ನುವ ಪ್ರಶ್ನೆ ಹುಟ್ಟಿರುತ್ತದೆ.
ಅವರಿಗಾಗಿ ಮತ್ತು ನಿಮ್ಮೆಲ್ಲರಿಗಾಗಿ, ಕಳೆದ ಎರಡು ದಶಕಗಳ ಹಿಂದೆ ಇದ್ದ ಪ್ರಪಂಚವನ್ನು ಒಮ್ಮೆ ಗಮನಿಸಿ ನೋಡಿ, ಇಂದಿನ ಪ್ರಪಂಚವನ್ನು ಗಮನಿಸಿ ನೋಡಿ. ಆಗಿರುವ ಅಗಾಧ ಬದಲಾವಣೆ ಕಣ್ಣಿಗೆ ಕಾಣುತ್ತದೆ. ನೀವು ಅಂದುಕೊಂಡ ತಕ್ಷಣ, ನಿರ್ಧಾರ ತೆಗೆದುಕೊಂಡ ತಕ್ಷಣ ಬದುಕು ಬದಲಾಗುವುದಿಲ್ಲ. ಬೆಂಬಿಡದೆ ಅಂದುಕೊಂಡ ಕಡೆಗೆ ನಿಲ್ಲದ ಪ್ರಯಾಣವಿರಬೇಕು. ಅಂದುಕೊಂಡ ದ್ದನ್ನು ಕಾರ್ಯರೂಪಕ್ಕೆ ತರಬೇಕು. ಆಗ ಸಮಯದ ಜೊತೆಗೆ ಬದುಕು ಖಂಡಿತ ಬದಲಾಗುತ್ತದೆ. ಎಲ್ಲವೂ ಸರಿ, ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರಾರು?