ಅಶ್ವತ್ಥಕಟ್ಟೆ
ಭಾರತ ಜಾತ್ಯತೀತ ದೇಶ ಎಂದು ತನ್ನನ್ನು ತಾನು ಗುರುತಿಸಿಕೊಂಡಿದ್ದರೂ, ದೇಶದೊಳಗೆ ಇರುವ ಜಾತಿ ಲೆಕ್ಕಾಚಾರವಿಲ್ಲದ ಯಾವುದೇ ಕೆಲಸಗಳು ನಡೆಯುವುದಿಲ್ಲ. ಅದರಲ್ಲಿಯೂ ಪ್ರಜಾಪ್ರಭುತ್ವದ ‘ಆಧಾರ’ವಾಗಿರುವ ಚುನಾವಣೆಗಳಲ್ಲಿ ಇರುವಷ್ಟು ಜಾತಿ ಲೆಕ್ಕಾಚಾರಗಳು ಇನ್ಯಾವುದರಲ್ಲಿಯೂ ಇಲ್ಲ. ಟಿಕೆಟ್ ಹಂಚಿಕೆಯಿಂದ ಹಿಡಿದು ವೋಟ್ ಹಾಕಿ, ಸಚಿವರ ಆಯ್ಕೆಯವರೆಗೆ ಜಾತಿ ಲೆಕ್ಕಾಚಾರ ದೇಶದ ವ್ಯವಸ್ಥೆ ಯಲ್ಲಿ ಕಾಣಬಹುದು. ಉತ್ತರ ಭಾರತದಲ್ಲಿ ಜಾತಿ ಲೆಕ್ಕಾಚಾರದೊಂದಿಗೆ ಧರ್ಮಾ ಧಾರಿತ ರಾಜಕೀಯವೂ ಕೆಲಸ ಮಾಡುತ್ತದೆ. ಆದರೆ ಕರ್ನಾಟಕದಲ್ಲಿ ಮಾತ್ರ ಧರ್ಮಕ್ಕಿಂತ ಜಾತಿ ಲೆಕ್ಕಾಚಾರದಲ್ಲಿ ಅಗ್ರಪಂಕ್ತಿ.
ರಾಜ್ಯ ರಾಜಕೀಯದ ಇತಿಹಾಸವನ್ನು ನೋಡಿದರೆ, ಲಿಂಗಾಯತ-ಒಕ್ಕಲಿಗ ಪ್ರಭಾವ ಕಾಣಬಹುದು. ಆದರೆ ಕಳೆದ ಎರಡುವರೆ ದಶಕದಲ್ಲಿ ರೂಪುಗೊಂಡ ‘ಅಹಿಂದ’ ಸಂಘಟನೆ ಇದೀಗ ಲಿಂಗಾಯತ-ಒಕ್ಕಲಿಗ ಮೀರಿದ ಸಾಮಾಜಿಕ- ರಾಜಕೀಯ ಲೆಕ್ಕಾಚಾರಗಳನ್ನು ತೀರ್ಮಾನಿಸುತ್ತಿದೆ. ಅಹಿಂದ ಎನ್ನುವುದು ಒಂದು ನಿರ್ದಿಷ್ಟ ಜಾತಿಯಾಗಿರದಿದ್ದರೂ, ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಸಮುದಾಯಗಳ ಗುಚ್ಛವಾಗಿರುವುದರಿಂದ ಸಹಜವಾಗಿಯೇ, ಸಂಖ್ಯಾಬಲದಲ್ಲಿ ಬಹು ದೊಡ್ಡದಾಗಿ ಕಾಣಿಸುತ್ತದೆ.
ಲಿಂಗಾಯತ ಮತಬ್ಯಾಂಕ್ ಉತ್ತರ ಹಾಗೂ ಮಧ್ಯ ಕರ್ನಾಟಕದಲ್ಲಿದ್ದರೆ, ಒಕ್ಕಲಿಗ ಮತಬ್ಯಾಂಕ್ ಹಳೇ ಮೈಸೂರು ಭಾಗದಲ್ಲಿದೆ. ಆದರೆ ಈ ಎರಡರೊಂದಿಗೆ ಅಹಿಂದ ಸಮುದಾಯದ ಯಾವುದಾ ದರೂ ಒಂದು ವರ್ಗ ಕೈಹಿಡಿದರೆ ಮಾತ್ರ ಚುನಾವಣೆಯಲ್ಲಿ ಗೆಲುವು ಸುಲಭ ಎನ್ನುವುದು ಸ್ಪಷ್ಟ ವಾಗಿರುವುದರಿಂದ ಕಳೆದ 25 ವರ್ಷದ ಅವಧಿಯಲ್ಲಿ ರಾಜಕೀಯವಾಗಿ ಬಲಿಷ್ಠ ಸಂಘಟನೆಯಾಗಿ ಅಹಿಂದ ರೂಪುಗೊಂಡಿದೆ ಎಂದರೆ ತಪ್ಪಾಗುವುದಿಲ್ಲ.
ಇದನ್ನೂ ಓದಿ: Ranjith H Ashwath Column: ಕೊನೆಗೂ ಸದನದಲ್ಲಿ ಅಬ್ಬರಿಸಿದ ಕಮನ ಕಲಿಗಳು !
ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ‘ಶಕ್ತಿ’ಶಾಲಿಯಾಗಿ ಕಾಣಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಹರಿದು ಹಂಚಿ ಹೋಗಿದ್ದ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಸಮುದಾಯ ಗಳನ್ನು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನಗಳು ನಡೆದವು. ಆದರೆ ಈ ಪ್ರಯತ್ನಕ್ಕೆ ಸ್ಪಷ್ಟ ರೂಪ ಸಿಕ್ಕಿದ್ದು ಮಾತ್ರ ಸಿದ್ದರಾಮಯ್ಯ ಅವರಿಂದ. ಜೆಡಿಎಸ್‌ನಿಂದ ಹೊರಬಂದ ಸಿದ್ದರಾಮಯ್ಯ ಅವರು ತಮ್ಮ ‘ಅಸ್ತಿತ್ವ’ವನ್ನು ಗಟ್ಟಿಗೊಳಿಸಿಕೊಳ್ಳಲು ಅಹಿಂದ ಸಂಘಟನೆಗೆ ನೀರೆರೆದರು.
ಈ ಆಲೋಚನೆಯಿಂದ ಅಹಿಂದ ಸಮುದಾಯದ ಮತಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಬೇರೆಬೇರೆ ನಾಯಕ ರೊಂದಿಗೆ, ಪಕ್ಷದೊಂದಿಗೆ ಕಾಣಿಸಿಕೊಂಡರೂ ಸಿದ್ದರಾಮಯ್ಯ ವಿಷಯದಲ್ಲಿ ಮಾತ್ರ ಎಲ್ಲರೂ ಒಂದಾ ಗುವುದನ್ನು ಕಾಣಬಹುದಾಗಿದೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಬಹುಮತ ಗಳಿಸುವುದಕ್ಕೆ ಬಿಜೆಪಿ ಸರಕಾರದ ವಿರುದ್ಧವಿದ್ದ ಭ್ರಷ್ಟಾಚಾರದ ಆರೋಪ, ಗ್ಯಾರಂಟಿ ಯೋಜನೆಗಳ ಘೋಷಣೆ ಸೇರಿದಂತೆ ಹಲವು ಕಾರಣಗಳೊಂದಿಗೆ ಅಹಿಂದ ಮತಗಳು ಒಡೆದು ಹೋಗದಂತೆ ನೋಡಿಕೊಂಡಿದ್ದು ಕಾಂಗ್ರೆಸ್ ಗೆ ಬಹುದೊಡ್ಡ ಪ್ಲಸ್ ಪಾಯಿಂಟ್ ಆಯಿತು ಎಂದರೆ ತಪ್ಪಾಗುವುದಿಲ್ಲ.
ಅಹಿಂದ ಕಾರಣಕ್ಕೆ 2023ರಲ್ಲಿಯೇ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸ್ಥಾನವನ್ನು ಕ್ಲೇಮ್ ಮಾಡಿ ದರೂ, ಸಿದ್ದರಾಮಯ್ಯ ಅವರನ್ನು ಮೊದಲಿಗೆ ಸಿಎಂ ಸ್ಥಾನದಲ್ಲಿ ಕೂರಿಸಲು ಹೈಕಮಾಂಡ್ ತೀರ್ಮಾನಿಸಿತ್ತು. ಆದರೆ ಇದೀಗ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿ ಚುನಾವಣಾ ರಾಜಕೀಯದಿಂದ ದೂರ ಸರಿಯುವುದಾಗಿ ಘೋಷಿಸಿದ್ದಾರೆ.
ಪಕ್ಷ ರಾಜಕೀಯದಿಂದ ಅಂತರ ಕಾಯ್ದು ಕೊಂಡು ತಮ್ಮ ಶಕ್ತಿಯಾಗಿದ್ದ ಅಹಿಂದ ಸಂಘಟನೆಗೆ ಮತ್ತಷ್ಟು ಬಲ ತುಂಬುವ ಆಲೋಚನೆಯನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಚುನಾವಣಾ ರಾಜಕೀಯದಿಂದ ಅಂತರ ಕಾಯ್ದುಕೊಳ್ಳುವುದಾಗಿ ಹೇಳಿದ ಬಳಿಕ, ಅಹಿಂದ ಮತಬ್ಯಾಂಕ್ ಡಿಸ್ಟರ್ಬ್ ಆಗಿದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ ಅಹಿಂದದ ಮುಂದಿನ ನಾಯಕತ್ವದ ಬಗ್ಗೆ ಗೊಂದಲಗಳಿರುವುದರಿಂದ ಬಹುಪಾಲು ಮತಬ್ಯಾಂಕ್ ಈಗಲೂ ಸಿದ್ದರಾಮಯ್ಯ ಜತೆಯಿದೆ. ಸಿದ್ದರಾಮಯ್ಯ ಅವರೊಂದಿಗೆ ಈ ಪ್ರಮಾಣದಲ್ಲಿ ಅಹಿಂದ ಮತಬ್ಯಾಂಕ್ ನಿಲ್ಲುತ್ತದೆ ಎನ್ನುವ ಕಾರಣಕ್ಕೆ ನಾಯಕತ್ವ ಬದಲಾವಣೆಯ ವಿಷಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಏಕಾಏಕಿ ತೀರ್ಮಾನ ಕೈಗೊಂಡಿರಲಿಲ್ಲ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮುಂದಿನ ಚುನಾ ವಣೆಯಲ್ಲಿ ಸ್ಪರ್ಧಿಸಲ್ಲ ಎನ್ನುವ ಮಾತುಗಳನ್ನು ಹೇಳಿದ್ದರೂ, ಅಹಿಂದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಮಾತುಗಳನ್ನು ಹೇಳಿಕೊಂಡು ಬಂದಿದ್ದಾರೆ. ಇದರಿಂದ ತಾವು ಸಕ್ರಿಯ ರಾಜಕೀಯದಲ್ಲಿ ಇಲ್ಲದಿದ್ದರೂ, ತಮ್ಮ ರಾಜಕೀಯ ಮರುಹುಟ್ಟು ನೀಡಿದ ಅಹಿಂದ ಸಂಘಟನೆ ಯಿಂದ ದೂರ ಉಳಿಯುವುದಿಲ್ಲ ಎನ್ನುವ ಸಂದೇಶ ರವಾನಿಸಿದ್ದಾರೆ.
ಸೆಪ್ಟಂಬರ್ ನಲ್ಲಿಯೇ ಅಹಿಂದ ಸಂಘಟನೆಗೆ 25 ವರ್ಷಗಳಾಗಿವೆ ಎನ್ನುವ ನೆಪದಲ್ಲಿ ಬೃಹತ್ ಸಮಾವೇಶ ನಡೆಸುವ ಆಲೋಚನೆಯಿದೆ. ಈ ಬೃಹತ್ ಕಾರ್ಯಕ್ರಮದ ಮೂಲಕ ತಾನಿನ್ನೂ ‘ಬಲಿಷ್ಠ’ ಎನ್ನುವ ಸಂದೇಶವನ್ನು ಪಕ್ಷದ ಹೈಕಮಾಂಡ್‌ಗೆ ರವಾನಿಸುವ ಆಲೋಚನೆಯಲ್ಲಿ ಸಿದ್ದರಾಮಯ್ಯನವರಿದ್ದಾರೆ. ಹಾಗೆ ನೋಡಿದರೆ, ಕರ್ನಾಟಕದಲ್ಲಿ ಅಹಿಂದ ಸಮುದಾಯ ಚುನಾವಣಾ ರಾಜಕೀಯದಲ್ಲಿ ತನ್ನದೇಯಾದ ಪಾತ್ರವನ್ನು ನಿರ್ವಹಿಸುತ್ತಿದೆ.
ಶೇ.15ರಷ್ಟು ಮತದಾರರನ್ನು ಹೊಂದಿರುವ ಅಲ್ಪಸಂಖ್ಯಾತರು ಕಾಂಗ್ರೆಸ್ ಪರವಾಗಿದ್ದಾರೆ. ಇನ್ನುಳಿದ ಶೇ.24ರಷ್ಟು ಮತ ಷೇರು ಹೊಂದಿರುವ ದಲಿತ ಸಮುದಾಯದಲ್ಲಿ ಪರಿಶಿಷ್ಟ ಜಾತಿ ಬಲಗೈ ಕಾಂಗ್ರೆಸ್ ನೊಂದಿಗಿದ್ದರೆ, ಎಡಗೈ ಹಾಗೂ ಎಸ್‌ಟಿ ಸಮುದಾಯ ಬಿಜೆಪಿ ಪರವಾಗಿದೆ. ಶೇ.30ರಷ್ಟು ಮತಬ್ಯಾಂಕ್ ಹೊಂದಿರುವ ಹಿಂದುಳಿದ ವರ್ಗಗಳ ಸಮುದಾಯ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್‌ನೊಂದಿಗೆ ಹರಿದು ಹಂಚಿಹೋಗಿದೆ.
ಜೆಡಿಎಸ್‌ನಿಂದ ಹೊರಬಂದು ಅಹಿಂದ ಸಂಘಟನೆ ಶುರುವಾದ ಬಳಿಕ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಸಮುದಾಯದ ಒಂದಿಷ್ಟು ಮತಗಳು ಸಿದ್ದರಾಮಯ್ಯ ಅವರ ಬಳಿಯಿದೆ. ಅದರಲ್ಲಿ ಯೂ ಹಿಂದುಳಿದ ವರ್ಗದ ಕುರುಬ ಸಮುದಾಯದ ಶೇ.8ರಷ್ಟು ಮತಗಳು ಮಾತ್ರ ಸಾಲಿಡ್ ಆಗಿ ಸಿದ್ದರಾಮಯ್ಯ ಅವರೊಂದಿಗೆ ನಿಂತಿದೆ.
ಕರ್ನಾಟಕದ 90ಕ್ಕೂ ಹೆಚ್ಚು ಮತಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಐದರಿಂದ 10 ಸಾವಿರ ಮತಗಳು ಹರಿದು ಹಂಚಿರುವುದರಿಂದ ಈ ಎಲ್ಲ ಕ್ಷೇತ್ರಗಳಲ್ಲಿಯೂ ಇತರೆ ಸಮುದಾಯದ ಮತಗಳೊಂದಿಗೆ ಕುರುಬ ಸಮುದಾಯದ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತಿವೆ. ಕಳೆದ ಚುನಾವಣೆಯ ಅಂಕಿ-ಅಂಶವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕಾಂಗ್ರೆಸ್ 136 ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿ 65 ಹಾಗೂ ಜೆಡಿಎಸ್ 20 ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಆದರೆ ಗೆಲುವಿನ ಅಂತರವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸುಮಾರು ಐದು ಸಾವಿರ ಮತಗಳ ಅಂತರದಲ್ಲಿ ಬರೋಬ್ಬರಿ 42 ಶಾಸಕರು ಆಯ್ಕೆಯಾಗಿದ್ದಾರೆ. ಅದರಲ್ಲಿ 22 ಕಾಂಗ್ರೆಸ್ ಶಾಸಕರಿದ್ದಾರೆ.
ಇನ್ನು ಎರಡು ಸಾವಿರ ಅಥವಾ ಅದಕ್ಕಿಂತ ಕಡಿಮೆ ಅಂತರದಲ್ಲಿ 12, 5ರಿಂದ 10 ಸಾವಿರ ಮತಗಳ ಅಂತರದಲ್ಲಿ 25 ಕ್ಷೇತ್ರ (ಕಾಂಗ್ರೆಸ್ 15, ಬಿಜೆಪಿ 10)ಗಳಲ್ಲಿ ಗೆಲುವು ಸಾಧಿಸಿದೆ. ಅಂದರೆ, 5 ರಿಂದ 15 ಸಾವಿರ ಮತಗಳ ಅಂತರದಲ್ಲಿ 77ರಿಂದ 80 ಕ್ಷೇತ್ರಗಳ ಭವಿಷ್ಯ ನಿರ್ಧಾರವಾಗಿದೆ. ಒಂದು ವೇಳೆ ಸಿದ್ದರಾಮಯ್ಯ ಅವರ ‘ಮೌನ’ ಕುರುಬ ಮತದಾರರನ್ನು ಕಾಂಗ್ರೆಸ್‌ನಿಂದ ಬಿಜೆಪಿ ಅಥವಾ ದಳಕ್ಕೆ ಇಲ್ಲವೇ ತಟಸ್ಥ ಧೋರಣೆ ತಾಳುವಂತೆ ಮಾಡಿದರೆ 2023ರ ಐತಿಹಾಸಿಕ ಬಹುಮತ ಬರುವುದು ತೀರಾ ಕಷ್ಟ.
ಕನಿಷ್ಠ ಐದು ಸಾವಿರ ಕುರುಬ ಮತಗಳನ್ನು ಹೊಂದಿರುವ 90 ಕ್ಷೇತ್ರಗಳಲ್ಲಿ ಕನಿಷ್ಠ 40 ಕ್ಷೇತ್ರದಲ್ಲಿ ಕುರುಬ ಮತಗಳ ಕ್ಲೀನ್ ಸ್ವೀಪ್ ಮಾಡುವಲ್ಲಿ ಬಿಜೆಪಿ ಯಶಸ್ವಿಯಾದರೆ, ಇಡೀ ಅಂಕಿ-ಅಂಶ ಮೇಲೆ ಕೆಳಗಾಗುವು ದರಲ್ಲಿ ಅನುಮಾನವೇ ಇಲ್ಲ. ಹಿಂದುಳಿದ ವರ್ಗಗಳ ಮತ ವಿಭಜನೆ ಒಂದು ಭಾಗ ವಾದರೆ, ವಾಲ್ಮೀಕಿ ಸಮುದಾಯಕ್ಕೆ ಸೇರಿರುವ ಬಿ. ನಾಗೇಂದ್ರ ಅವರ ರಾಜೀನಾಮೆಯನ್ನು ಸಮು ದಾಯ ಯಾವ ರೀತಿಯಲ್ಲಿ ತೆಗೆದುಕೊಳ್ಳಲಿದೆ ಎನ್ನುವುದು ಈಗಿರುವ ಮತ್ತೊಂದು ಕುತೂಹಲ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದ ಆರೋಪದಲ್ಲಿ ಎರಡೆರಡು ಬಾರಿ ನಾಗೇಂದ್ರ ರಾಜೀನಾಮೆ ಪಡೆಯಲಾಗಿದೆ. ಆದರೆ ಭ್ರಷ್ಟಾಚಾರ ಮೀರಿ ‘ಆದಿವಾಸಿ’ ಎನ್ನುವ ಕಾರಣಕ್ಕೆ ಬಿಜೆಪಿಯವರು ತನ್ನ ರಾಜೀನಾಮೆ ಪಡೆದಿದ್ದಾರೆ ಎನ್ನುವ ಆರೋಪವನ್ನು ನಾಗೇಂದ್ರ ಮಾಡಿದ್ದಾರೆ.
ನಾಗೇಂದ್ರ ಅವರಿಂದ ರಾಜೀನಾಮೆ ಪಡೆದಿರುವ ಸ್ಥಾನಕ್ಕೆ ವಾಲ್ಮೀಕಿ ಸಮುದಾಯ ದವರಿಗೆ ನೀಡದೇ ಬೇರೆ ಸಮುದಾಯದ ಶಾಸಕರಿಗೆ ಅವಕಾಶ ನೀಡಿದರೆ, ಬಿಜೆಪಿಯಿಂದಲೇ ಸಮುದಾಯಕ್ಕೆ ಅನ್ಯಾಯವಾಗಿದೆ ಎನ್ನುವ ಸಂದೇಶ ರವಾನಿಸುವ ಲೆಕ್ಕಾಚಾರಗಳಿವೆ. ಇದರೊಂದಿಗೆ ವಾಲ್ಮೀಕಿ ಎನ್ನುವ ಕಾರಣಕ್ಕೆ ನಾಗೇಂದ್ರ ಅವರಿಗೆ ಬಿಜೆಪಿಗರು ಟಾರ್ಗೆಟ್ ಮಾಡಿದ್ದಾರೆ ಎನ್ನುವ ‘ನರೇಟಿವ್’ ಫಿಕ್ಸ್ ಮಾಡಲು ಕಾಂಗ್ರೆಸಿಗರು ಪ್ರಯತ್ನಿಸುತ್ತಿದ್ದಾರೆ.
ಒಂದು ವೇಳೆ ಈ ನರೇಟಿವ್ ಫಿಕ್ಸ್ ಮಾಡುವಲ್ಲಿ ಕಾಂಗ್ರೆಸ್ ಯಶಸ್ವಿಯಾದರೆ, ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ 15 ಕ್ಷೇತ್ರದಲ್ಲಿ ಬಿಜೆಪಿಗೆ ಬಹುದೊಡ್ಡ ಹಿನ್ನಡೆಯಾಗುವ ಆತಂಕವಿದೆ. ಇದರೊಂದಿಗೆ ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಕೊಪ್ಪಳ, ರಾಯಚೂರು, ತುಮಕೂರು ಜಿಲ್ಲೆಯ 11 ರಿಂದ 13 ಜಿಲ್ಲೆಗಳ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಲಿದೆ. ಇದೇ ಕಾರಣಕ್ಕೆ ಬಿಜೆಪಿಗರು ನಾಗೇಂದ್ರ ರಾಜೀನಾಮೆಯ ಬೆನ್ನಲ್ಲೇ, ‘ನಾಗೇಂದ್ರ ತೇಜೋವಧೆಗಿಂತ ಸಮುದಾಯದ ಅಭಿವೃದ್ಧಿಗಾಗಿ ನಮ್ಮ ಹೋರಾಟ’ ಎನ್ನುವ ಮಾತುಗಳನ್ನು ಆಡುವ ಮೂಲಕ ಸಮುದಾಯಕ್ಕೆ ಅನ್ಯಾಯ ಮಾಡಿಲ್ಲ ಎನ್ನುವ ಸಂದೇಶವನ್ನು ರವಾನಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಈ ಎಲ್ಲದರ ಹೊರತಾಗಿಯೂ ಕರ್ನಾಟಕ ವಿಧಾನಸಭಾ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿ ದರೆ, ಯಾವುದೇ ಪಕ್ಷ ಪೂರ್ಣಾವಧಿ ಸರಕಾರ ನಡೆಸಿದರೆ, ಮುಂದಿನ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ಸಹಜವಾಗಿಯೇ ಕಾಣಿಸುತ್ತಿದೆ. ಹೀಗಿರುವಾಗ, ಅಹಿಂದ ಮತಗಳ ಗೊಂದಲ ಹಾಗೂ ಆಡಳಿತ ವಿರೋಧಿ ಅಲೆಯ ಮತಗಳನ್ನು ಉಳಿಸಿಕೊಳ್ಳುವ ಸವಾಲು ಕಾಂಗ್ರೆಸ್ ಪಕ್ಷದ ಮೇಲಿದೆ.
ಸಿದ್ದರಾಮಯ್ಯ ಅವರ ಫ್ಯಾಕ್ಟರ್‌ನಿಂದ ಏನಾಗಲಿದೆ ಎನ್ನುವ ಗೊಂದಲ, ಅಹಿಂದ ನಾಯಕತ್ವ ಹೊಣೆ ಯಾರ ಹೆಗಲಿಗೆ ಬರಲಿದೆ ಎನ್ನುವ ಕುತೂಹಲದ ನಡುವೆ ಈ ಗೊಂದಲವನ್ನು ಬಿಜೆಪಿ ಯಾವ ರೀತಿ ಬಳಸಿಕೊಳ್ಳಲಿದೆ ಎನ್ನುವ ಕುತೂಹಲವೂ ಅನೇಕರಲ್ಲಿದೆ. ಮುಂದಿನ ಚುನಾವಣೆ ಯಲ್ಲಿ ಅಹಿಂದ ಮತಗಳು ಒಡೆದು ಹೋಗುವುದು ನಿಶ್ಚಿತವಾಗಿದ್ದರೂ, ಈ ಮತಗಳನ್ನು ತನ್ನತ್ತ ಸೆಳೆಯಲು ಈವರೆಗೆ ಬಿಜೆಪಿ ನಿರ್ದಿಷ್ಟ ಯೋಚನೆ ರೂಪಿಸಿಲ್ಲ ಎನ್ನುವುದು ಬಿಜೆಪಿಯೊಳಗಿರುವ ಮಾತು.
ಅಹಿಂದ ಸಮುದಾಯದ ಪೈಕಿ ಅಲ್ಪಸಂಖ್ಯಾತ ಮತಗಳನ್ನು ಸೆಳೆಯುವುದು ಬಿಜೆಪಿಗೆ ಸಾಧ್ಯವಿಲ್ಲ ವಾದರೂ, ಹಿಂದುಳಿದ ಹಾಗೂ ದಲಿತ ಸಮುದಾಯದ ಮತಗಳ ವಿಚಾರದಲ್ಲಿ ಈ ಆತಂಕವಿಲ್ಲ. ಕರ್ನಾಟಕದ ಹಿಂದುಳಿದ ವರ್ಗಗಳ ಸಮುದಾಯದ ಮತದಾರರಿಗೆ ಬಿಜೆಪಿಗೆ ಮತ ಹಾಕೇ ಇಲ್ಲ ಎನ್ನುವ ಹಾಗೇನಿಲ್ಲ. ಲೋಕಸಭಾ ಚುನಾವಣೆಗಳಲ್ಲಿ ಹಿಂದುಳಿದ ಅದರಲ್ಲಿಯೂ ಕುರುಬ ಮತಗಳು ಬಿಜೆಪಿ ಪರವಾಗಿ ಬಿದ್ದಿರುವ ಉದಾಹರಣೆಗಳಿವೆ.
ಹೀಗಿರುವಾಗ, ಸಿದ್ದರಾಮಯ್ಯ ಅವರ ‘ಅನುಪಸ್ಥಿತಿ’ಯಲ್ಲಿ ಈ ಮತಗಳು ಯಾವ ಪಕ್ಷದ ಪಾಲಾಗ ಲಿದೆ? ಎನ್ನುವುದರ ಮೇಲೆ 2028 ವಿಧಾನಸಭಾ ಚುನಾವಣಾ ಫಲಿತಾಂಶ ನಿಂತಿದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಪದೇಪದೆ ಸಿದ್ದರಾಮಯ್ಯ ಹೇಳುತ್ತಿರುವುದರಿಂದ, ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿಯೇ ಪ್ರಚಾರ ಮಾಡಿದರೂ, ಒಳಯೇಟಿನ ಪ್ರಮಾಣ ಎಷ್ಟಿರುತ್ತದೆ? ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿ ಅಥವಾ ಸರಕಾರದಲ್ಲಿರುವುದರಿಂದ ಎನ್ನುವುದು ಸ್ಪಷ್ಟವಾದ ಬಳಿಕ ಇಡೀ ಅಹಿಂದ ಸಮುದಾಯ ಈ ಹಿಂದಿನ ಟ್ರೆಂಡ್‌ನಂತೆಯೇ ಕಾಂಗ್ರೆಸ್ ಪರ ನಿಲ್ಲುವುದೇ? ಅಥವಾ ಬಿಜೆಪಿಯತ್ತ ವಾಲುವುದೇ ಎನ್ನುವುದಕ್ಕೆ ಈವರೆಗೆ ಸ್ಪಷ್ಟನೆ ಇಲ್ಲ. ಒಂದು ವೇಳೆ ಅಹಿಂದ ಸಂಘಟನೆ ಗಟ್ಟಿಯಾಗಿ ಕೆಲವೊಂದಷ್ಟು ಕ್ಷೇತ್ರದಲ್ಲಿ ಕಾಂಗ್ರೆಸ್ -ಬಿಜೆಪಿ-ಜೆಡಿಎಸ್ ಮೀರಿ ಪಕ್ಷೇತರ ಗೆಲುವು ಸಾಽಸಿದರೆ ಆಗ ರಾಜ್ಯ ರಾಜಕೀಯ ಇಡೀ ಚಿತ್ರಣವೇ ಬದಲಾಗುವುದು ನಿಶ್ಚಿತ.
ಸಿದ್ದರಾಮಯ್ಯ ರಾಜೀನಾಮೆಯ ಬಳಿಕ ಕದಡಿರುವ ‘ಅಹಿಂದ ಮತಬ್ಯಾಂಕ್’ನ್ನು ಯಾವ ಪಕ್ಷ ಹೆಚ್ಚು ಒಗ್ಗೂಡಿಸುವುದೋ ಆ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಬೋನಸ್ ಸಿಗುತ್ತದೆ. ಆದರೆ ಈ ಬೋನಸ್ ಯಾವ ಪ್ರಮಾಣದಲ್ಲಿರಲಿದೆ ಎನ್ನುವುದೇ ಈಗಿರುವ ಕುತೂಹಲ.