ಅಶ್ವತ್ಥಕಟ್ಟೆ
ಯಾವುದೇ ದೇಶ ಅಭಿವೃದ್ಧಿ ಹೊಂದಲು ಆರ್ಥಿಕ ಭದ್ರತೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಯಾವುದೇ ಒಂದು ದೇಶದ ಅಥವಾ ರಾಜ್ಯ ಸಂಪೂರ್ಣ ಅಭಿವೃದ್ಧಿ ಕಾರ್ಯಗಳನ್ನು ರಾಜಸ್ವದಿಂದಲೇ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ವಿಶ್ವದ ದೊಡ್ಡಣ್ಣ ಎನಿಸಿಕೊಳ್ಳುವ ಅಮೆರಿಕದಿಂದ ಹಿಡಿದು ಪ್ರತಿಯೊಂದು ದೇಶಗಳೂ ಆಯಾ ಸಮಯಕ್ಕೆ ತಕ್ಕಂತೆ ಸಾಲಗಳನ್ನು ಮಾಡಿಕೊಂಡು, ಬಂಡವಾಳ ವೆಚ್ಚವನ್ನಾಗಿ ಬಳಸಿಕೊಳ್ಳುತ್ತಿವೆ. ಸಾಲ ಮಾಡುವುದು ದೊಡ್ಡ ತಪ್ಪಲ್ಲವಾದರೂ, ಮಾಡಿದ ಸಾಲ ಯಾವ ಕಾರಣಕ್ಕೆ ಬಳಕೆಯಾಗುತ್ತದೆ ಎನ್ನುವುದರ ಮೇಲೆ ಆ ಸಾಲ ಮಾಡಿದ ಸಾರ್ಥಕತೆ ತಿಳಿಯುತ್ತದೆ.
ಕರ್ನಾಟಕದಲ್ಲಿ ಕಳೆದೊಂದು ತಿಂಗಳುಗಳಿಂದ ಯಾರು ಎಷ್ಟು ಸಾಲ ಮಾಡಿದರು? ಸರಕಾರದ ಆರ್ಥಿಕತೆಯ ಬಗ್ಗೆ ಬಹುದೊಡ್ಡ ಪ್ರಮಾಣದಲ್ಲಿ ಚರ್ಚೆಯಾಗುತ್ತದೆ. ಅದರಲ್ಲಿಯೂ ಮಂಗಳೂರಿ ನಲ್ಲಿ ನಡೆದ ಸಚಿವ ಸಂಪುಟ ಸಭೆಯ ವೇಳೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಯೋಜನೆಯೊಂದಕ್ಕೆ ಆರ್ಥಿಕ ಇಲಾಖೆ ಸಲ್ಲಿಸಿದ್ದ ಆಕ್ಷೇಪಣೆ ಹಾಗೂ ಅದರಲ್ಲಿ ಕರ್ನಾಟಕದ ಆರ್ಥಿಕ ವಿಷಯದ ಬಗ್ಗೆ ಪ್ರಸ್ತಾಪಿಸಿದ್ದ ಕೆಲವೊಂದಷ್ಟು ಅಂಶಗಳು ಕೇವಲ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿರುವುದಷ್ಟೇ ಅಲ್ಲದೇ, ರಾಜ್ಯದ ಆರ್ಥಿಕ ಭವಿಷ್ಯ ಎತ್ತ ಸಾಗುತ್ತಿದೆ ಎನ್ನುವ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ.
ಹಣಕಾಸು ಇಲಾಖೆ ಸಲ್ಲಿಸಿದ ಆಕ್ಷೇಪಣೆಯ ಟಿಪ್ಪಣಿ ಬಹಿರಂಗವಾಗುತ್ತಿದ್ದಂತೆ ರಾಜ್ಯ ಖಜಾನೆ ಖಾಲಿಯಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದರೆ, ಆಡಳಿತ ಪಕ್ಷದ ನಾಯಕರು, ಸಚಿವರು ಉತ್ತರಿಸುವ ಮೊದಲೇ ಸ್ವತಃ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಆರ್ಥಿಕ ಇಲಾಖೆ ತನ್ನ ಅಭಿಪ್ರಾಯವನ್ನು ತಿಳಿಸಿದೆ. ಈ ವಿಷಯ ನನಗೆ ಗೊತ್ತಿದೆ.
ಇದನ್ನೂ ಓದಿ: Ranjith H Ashwath Column: ಬರಪೀಡಿತ ತಾಲೂಕು ಘೋಷಣೆ, ಸಂಭ್ರಮದ ಸರಕೇ ?
ಮುಖ್ಯಮಂತ್ರಿಯಾಗಿ ಯಾವ ಯೋಜನೆ ಕೈಬಿಡಬೇಕು. ಯಾವುದನ್ನು ಮಾಡಬೇಕು ಎನ್ನುವುದು ಗೊತ್ತಿದೆ’ ಎನ್ನುವ ಮೂಲಕ ಆರ್ಥಿಕ ಇಲಾಖೆಯ ಆಕ್ಷೇಪಣೆ ಮೀರಿ, ಯಾವ ರೀತಿಯ ತೀರ್ಮಾನ ತೆಗೆದುಕೊಳ್ಳಬೇಕು ಎನ್ನುವುದು ನನಗೆ ಗೊತ್ತಿದೆ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದರು. ಆರ್ಥಿಕ ಇಲಾಖೆಯ ಆಕ್ಷೇಪಣೆಗಳ ನಡುವೆಯೂ ಈ ಹಿಂದೆ ಯಡಿಯೂರಪ್ಪನವರು ಭಾಗ್ಯಲಕ್ಷ್ಮೀ ಬಾಂಡ್, ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಕುಮಾರಸ್ವಾಮಿ ಅವರು ಸಾಲಮನ್ನಾ ಸೇರಿದಂತೆ ಹಲವು ಸಾಮಾಜಿಕ ಭದ್ರತಾ ಕಾರ್ಯಕ್ರಮಗಳಿಗೆ ಅನುದಾನ ಹೊಂದಿಸಿದ್ದರು.
ಇನ್ನು ಗ್ಯಾರಂಟಿ ಆರಂಭದಲ್ಲಿಯೇ ರಾಜ್ಯ ಸರಕಾರಕ್ಕೆ ಪಂಚಗ್ಯಾರಂಟಿ ಯೋಜನೆಗಳ ಬಗ್ಗೆ ಆರ್ಥಿಕ ಇಲಾಖೆ ನೀಡಿದ್ದ ಆಕ್ಷೇಪಣೆಯ ನಡುವೆಯೇ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದರು. ಅಂದರೆ, ಒಂದಿಲ್ಲೊಂದು ಸಂದರ್ಭದಲ್ಲಿ ಆಡಳಿತದ ಚುಕ್ಕಾಣಿಯಲ್ಲಿರುವವರು, ಅಧಿಕಾರಿಗಳ ಮಾತು ‘ಮೀರಿ’ ಸಮಾಜಕ್ಕಾಗಿ ಕೆಲಸ ಮಾಡಿರುವುದು ಹೊಸದೇನಲ್ಲ. ಆದರೆ ಈ ಬಾರಿ ಆರ್ಥಿಕ ಶಿಸ್ತಿಗೆ ಹೆಸರಾಗಿದ್ದ ಕರ್ನಾಟಕದ ಮುಂದಿನ ವರ್ಷಗಳಲ್ಲಿ ಇದನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲವೇ ಎನ್ನುವ ಸ್ಥಿತಿಗೆ ತಲುಪಿರುವುದು ಆತಂಕಕಾರಿ ಅಂಶವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಿಸುತ್ತಿದ್ದಂತೆ ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ಹೊರೆಯ ನಿರೀಕ್ಷೆಯನ್ನು ಮಾಡಲಾಗಿತ್ತು. ಗ್ಯಾರಂಟಿ ಯೋಜನೆಗಳಿಗೆ ಬಹುಪಾಲು ಅನುದಾನ ಹೋಗುತ್ತಿರುವುದರಿಂದ, ಕ್ಷೇತ್ರಗಳ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಸಿಗುತ್ತಿಲ್ಲ ಕೊಸರಾಟ ಈಗಲೂ ಸಚಿವರು, ಶಾಸಕರುಗಳ ಬಾಯಲ್ಲಿ ಆಗಾಗ್ಗೆ ಕೇಳಿಬರುತ್ತಿದೆ.
ಏಕೆಂದರೆ ಗ್ಯಾರಂಟಿ ಯೋಜನೆ ಜಾರಿಯಾದಾಗಿನಿಂದ ಈವರೆಗೆ ಸುಮಾರು 1.21 ಲಕ್ಷ ಕೋಟಿ ರು. ಖರ್ಚಾಗಿದೆ ಎಂದು ಅಂದಾಜಿಸಲಾಗಿದೆ. ಅಂದರೆ ಮೂರು ವರ್ಷದಲ್ಲಿ ರಾಜ್ಯದ ಒಟ್ಟು ಬಜೆಟ್‌ನ ಶೇ.14ರಷ್ಟು ಅನುದಾನ ಗ್ಯಾರಂಟಿ ಯೋಜನೆಗೆ ಖರ್ಚಾಗುತ್ತಿದೆ. ಇದಿಷ್ಟೇ ಅಲ್ಲದೇ, ಕರ್ನಾಟಕದಲ್ಲಿ ಈಗಾಗಲೇ ಬದ್ಧತಾ ವೆಚ್ಚ ಶೇ.60ರ ಹತ್ತಿರ-ಹತ್ತಿರ ಬಂದು ಕೂತಿದೆ. ಇದರೊಂದಿಗೆ ಕಾಂಗ್ರೆಸ್ ಸರಕಾರ ಮಂಡಿಸಿರುವ ಮೂರು ಬಜೆಟ್‌ನಲ್ಲಿಯೂ ರಾಜಸ್ವ ಕೊರತೆಯ ಬಜೆಟ್ ಆಗಿರುವುದರಿಂದ ಈ ಯೋಜನೆಗಳಿಗೂ ಅನುದಾನ ಹೊಂದಿಸಲು ಸಾಲ ಮಾಡಿಯೇ ತುಂಬಬೇಕಾದ ಪರಿಸ್ಥಿತಿ ಎದುರಾಗಿದೆ.
ಮೂಲಸೌಕರ್ಯ ಅಭಿವೃದ್ಧಿಗೆ, ರಸ್ತೆ ನಿರ್ಮಾಣಕ್ಕೆ, ನೀರಾವರಿ ಯೋಜನೆ ಸೇರಿದಂತೆ ಶಾಶ್ವತ ಆಸ್ತಿ ಸೃಷ್ಟಿಗೆ ಸಾಲವನ್ನು ಬಳಸಿಕೊಂಡರೆ ಅದು ಭವಿಷ್ಯದಲ್ಲಿ ಒಂದಿಲ್ಲೊಂದು ರೀತಿಯ ‘ಲಾಭ’ವನ್ನು ಸರಕಾರಕ್ಕೆ ತಂದು ಕೊಡುತ್ತದೆ. ಆದರೆ ಸರಕಾರದ ನಿತ್ಯ ವೆಚ್ಚಗಳನ್ನು ಸಾಲದಲ್ಲಿಯೇ ಸರಿದೂಗಿ ಸಲು ಶುರು ಮಾಡಿದಾಗ ಬಹುದೊಡ್ಡ ಹೊಡೆತ ಯಾವುದೇ ರಾಜ್ಯದ ಆರ್ಥಿಕತೆಯ ಮೇಲೆ ಬೀಳುತ್ತದೆ ಎನ್ನುವುದು ಸ್ಪಷ್ಟ.
ಸದ್ಯ ಮೇಲೆ ಹೇಳಿದಂತೆ ಕರ್ನಾಟಕದ ಒಟ್ಟು ಬಜೆಟ್‌ನಲ್ಲಿ ಶೇ.60ರಷ್ಟು ಅನುದಾನ ಬದ್ಧತಾ ವೆಚ್ಚಕ್ಕೆ ಹೋದರೆ, 14ರಷ್ಟು ಅನುದಾನ ಗ್ಯಾರಂಟಿ ಯೋಜನೆಗಳಿಗೆ ಹೋಗುತ್ತದೆ. ಅಂದರೆ ಸರಕಾರದ ನೂರು ರುಪಾಯಿಯಲ್ಲಿ 74 ರುಪಾಯಿ ವೇತನ, ಪಿಂಚಣಿ, ಸಾಲ, ಬಡ್ಡಿ ಮರುಪಾವತಿ ಹಾಗೂ ಪಂಚಗ್ಯಾರಂಟಿ ಯೋಜನೆಗಳಿಗೆ ಹೋಗುತ್ತಿದೆ.
ಇನ್ನುಳಿದ 16 ರುಪಾಯಿ ಮಾತ್ರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೋಗುತ್ತದೆ. ಅದರಲ್ಲಿಯೂ ಈ ವರ್ಷದಂತೆ ಭೀಕರ ಪರಿಸ್ಥಿತಿ ಎದುರಾದರೆ, ಈ 16 ರುಪಾಯಿಯಲ್ಲಿಯೇ ಸರಕಾರ ಬರ ನಿರ್ವಹಣೆಗೆ ಇಂತಿಷ್ಟು ಹಣವನ್ನು ಎತ್ತಿಡಬೇಕಾಗುತ್ತದೆ. ಹಾಗೇ ನೋಡಿದರೆ, ಕರ್ನಾಟಕ ಕಳೆದ ಕೆಲ ವರ್ಷ ಗಳವರೆಗೂ ‘ಉಳಿಕೆಯ ಬಜೆಟ್’ಗಾಗಿಯೇ ಹೆಸರಾಗಿತ್ತು.
ಸುಮಾರು ಎರಡು ದಶಕಗಳ ಕಾಲ ಅಂದರೆ, 2004ರಿಂದ 2020ರವರೆಗೆ ಕರ್ನಾಟಕ ಉಳಿಕೆ ಬಜೆಟ್ ಅನ್ನೇ ಮಂಡಿಸಿತ್ತು. ಅದರಲ್ಲಿಯೂ ಸಿದ್ದರಾಮಯ್ಯ ಅವರು ತಮ್ಮ ಕೊನೆಯ ಬಜೆಟ್‌ನಲ್ಲಿ ಬರೋಬ್ಬರಿ ೧೩೭ ಕೋಟಿ ರು. ಉಳಿಕೆ ಬಜೆಟ್ ಅನ್ನು ಮಂಡಿಸಿದ್ದರು. ಇದಾದ ಬಳಿಕ ಇಡೀ ದೇಶವನ್ನು ಕಾಡಿದ ಕರೋನಾ ಕಾರಣಕ್ಕೆ ಕರ್ನಾಟಕದಲ್ಲಿ 2020-21ನೇ ಸಾಲಿನಲ್ಲಿ ಸುಮಾರು 19 ಸಾವಿರ ಕೋಟಿ ರಾಜಸ್ವ ಕೊರತೆಯೊಂದಿಗೆ 46 ಸಾವಿರ ಕೋಟಿ ವಿತ್ತೀಯ ಕೊರತೆ ಎದುರಾಯಿತು.
ಮರುವರ್ಷ ಸುಮಾರು 15134 ರಾಜಸ್ವ ಕೊರತೆ ಎದುರಾಯಿತು. ಇದಾದ ಬಳಿಕ 2023-24ನೇ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಕೊನೆಯ ಬಜೆಟ್‌ನಲ್ಲಿ ಸುಮಾರು 400 ಕೋಟಿ ರು. ಉಳಿಕೆ ಬಜೆಟ್ ಅನ್ನು ಮಂಡಿಸಿದ್ದರು. ಆದರೆ ಇದಾದ ಬಳಿಕ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳಿಗೆ ಬಹುದೊಡ್ಡ ಅನುದಾನ ಮೀಸಲಿಡಬೇಕಾಗಿದ್ದರಿಂದ, ಕೊರತೆಯ ಬಜೆಟ್ ಅನ್ನೇ ಮಂಡಿಸುವುದರೊಂದಿಗೆ ದೊಡ್ಡ ಪ್ರಮಾಣದ ಸಾಲವನ್ನು ಪಡೆಯಬೇಕಾದ ಅನಿವಾರ್ಯತೆ ಎದುರಾಗಿತ್ತು.
2013-18ರವರೆಗೆ ಉಳಿಕೆ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ ಅವರು, ಎರಡನೇ ಅವಧಿಯಲ್ಲಿ 2024-25ರಲ್ಲಿ 27 ಸಾವಿರ ಕೋಟಿ, 2025-2026ರಲ್ಲಿ 19 ಸಾವಿರ ಕೋಟಿ, 2026-27ರಲ್ಲಿ 22 ಸಾವಿರ ಕೋಟಿ ಕೊರತೆ ಬಜೆಟ್ ಅನ್ನು ಮಂಡಿಸಬೇಕಾದ ಅನಿವಾರ್ಯತೆ ಎದುರಾಯಿತು. ಇದಕ್ಕೆ ಗ್ಯಾರಂಟಿ ಯೋಜನೆಗಳೇ ಕಾರಣ ಎಂದು ಬಿಜೆಪಿ ನಾಯಕರು ವಾದಿಸಿದರೆ, ಕೇಂದ್ರ ಸರಕಾರದಿಂದ ಸೂಕ್ತ ಅನುದಾನ ಬಾರದಿರುವುದೇ ಇಂದಿನ ಈ ಪರಿಸ್ಥಿತಿ ಕಾರಣವೆಂದು ಕಾಂಗ್ರೆಸಿಗರು ವಾದಿಸು ತ್ತಿದ್ದಾರೆ. ಈ ಎಲ್ಲದರ -ಲವಾಗಿಯೇ ಇಷ್ಟು ದಿನ ಎಫ್ಆರ್‌ಪಿಎಂ ಕಾಯಿದೆಯೊಳಗಿದ್ದ ರಾಜ್ಯದ ಬಜೆಟ್ ಇದೀಗ ಶೇ.3ರಷ್ಟನ್ನು ದಾಟುವ ಸ್ಥಿತಿಯಲ್ಲಿದೆ ಎಂದು ಆರ್ಥಿಕ ಇಲಾಖೆ ಎಚ್ಚರಿಕೆ ನೀಡಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆಯ 10 ಸಾವಿರ ಕೋಟಿ ರು. ಯೋಜನೆಗೆ ಆಕ್ಷೇಪಣೆ ಸಲ್ಲಿಸಿದ್ದರೂ, ಅದರಲ್ಲಿ ರಾಜ್ಯದ ಒಟ್ಟು ಸಂಚಿತ ಬಾಧ್ಯತೆಗಳು ಶೇ.24.94ಕ್ಕೆ ತಲುಪಿವೆ. ಕರ್ನಾಟಕ ಸಾಲ ಪಡೆಯುವ ಸಾಮರ್ಥ್ಯದ ಮಿತಿಯನ್ನು ಬಳಸಿಕೊಂಡಿದೆ. ಬಜೆಟ್‌ನಲ್ಲಿ ಘೋಷಿಸಲಾದ ಯೋಜನೆ ಹಿನ್ನೆಲೆಯಲ್ಲಿ,ಹೊಸ ಯೋಜನೆಗಳಿಗೆ ಹೆಚ್ಚಿನ ಸಾಲ ಪಡೆಯಲು ಅವಕಾಶವಿಲ್ಲ. ಇನ್ನೂ 2 ಲಕ್ಷ ಕೋಟಿ ರು.ಗೂ ಹೆಚ್ಚಿನ ಮೊತ್ತವನ್ನು ಕಾಮಗಾರಿಗಳಿಗೆ ವಿನಿಯೋಗಿಸಬೇಕಾಗಿದೆ.
ಸರಕಾರ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮುನ್ನ ಅನಿವಾರ್ಯವಿರುವ ಯೋಜನೆಗಳು ಅಂತಿಮಗೊಳ್ಳುವವರೆಗೆ, ಕಾಯುವುದು ಒಳಿತು ಎನ್ನುವ ಎಚ್ಚರಿಕೆಯನ್ನು ಆರ್ಥಿಕ ಇಲಾಖೆ ನೀಡಿದೆ. ಇದರೊಂದಿಗೆ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಬರ ನಿರ್ವಹಣೆ, ಕುಡಿಯುವ ನೀರು, ಪರಿಹಾರಕ್ಕಾಗಿ ಬಜೆಟ್ ಹಂಚಿಕೆ ಮೀರಿ ಹೆಚ್ಚುವರಿ ಅನುದಾನದ ಅಗತ್ಯತೆ ಇದೆ. ಆದ್ದರಿಂದ ಹೊಸ ಯೋಜನೆಗಳಿಗೆ ಅನುದಾನ ಕೊಡಬೇಕಾದರೆ, ಈಗಾಗಲೇ ಬಜೆಟ್‌ನಲ್ಲಿ ಹಂಚಿಕೆಯಾಗಿರುವ ಅನುದಾನವನ್ನು ಕಡಿತಗೊಳಿಸಬೇಕಾಗುತ್ತದೆ ಎಂದಿದೆ.
ಸಾಲದ ಮಿತಿ ಈ ಪ್ರಮಾಣಕ್ಕೆ ಬಂದು ನಿಲ್ಲಲು ಕಾರಣಗಳು ಹತ್ತಾರಿವೆ. ಆದರೆ ಈ ಹಿಂದಿನ ವರ್ಷ ಗಳಲ್ಲಿ ಸರಕಾರಗಳು ಮಾಡುತ್ತಿದ್ದ ಸಾಲವನ್ನು ಮೂಲಸೌಕರ್ಯ, ಆಸ್ತಿ ಸೃಷ್ಟಿಗೆ ಬಳಕೆ ಮಾಡ ಲಾಗುತ್ತಿತ್ತು. ಆದರೆ ಕರೋನಾ ಕಾಲಘಟ್ಟದ ಬಳಿಕ ಸರಕಾರಗಳು ಮಾಡುತ್ತಿರುವ ಸಾಲದಲ್ಲಿ ದೈನಂದಿನ ಖರ್ಚುಗಳಾದ ವೇತನ, ಪಿಂಚಣಿ, ಗ್ಯಾರಂಟಿ ಯೋಜನೆಗಳಿಗೆ ಬಳಕೆಯಾಗುತ್ತಿರುವುದು ಆತಂಕದ ವಿಷಯ ಎನ್ನಲಾಗಿದೆ.
2020-21ರಲ್ಲಿ ಸುಮಾರು 19 ಸಾವಿರ ಕೋಟಿ, 2021-22ರಲ್ಲಿ 15 ಸಾವಿರ ಕೋಟಿ, 2022-230ರಲ್ಲಿ 6000 ಕೋಟಿ, 2023-24ರಲ್ಲಿ 13800 ಕೋಟಿ, 2024-25ರಲ್ಲಿ 27 ಸಾವಿರ ಕೋಟಿ, 25-26ರಲ್ಲಿ 25 ಸಾವಿರ ಕೋಟಿ, ಪ್ರಸಕ್ತ ಸಾಲಿನಲ್ಲಿ 22 ಸಾವಿರ ರು.ಗಳಷ್ಟು ಅನುದಾನ ಸಾಲದಿಂದ ರಾಜಸ್ವ ವೆಚ್ಚಕ್ಕೆ ಬಳಕೆಯಾಗುತ್ತಿದೆ ಎನ್ನುವುದು ಆತಂಕದ ವಿಷಯವಾಗಿದೆ.
ಕಳೆದ ವರ್ಷದ ಸಿಎಜಿ ವರದಿಯಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸಿ, ಸರಕಾರ ಮಾಡುತ್ತಿರುವ ಸಾಲ ಬಂಡವಾಳ ವೆಚ್ಚಾಗುವ ಬದಲು ಗ್ಯಾರಂಟಿ ಯೋಜನೆಗಳಿಗೆ ಬಳಕೆಯಾಗುತ್ತಿರುವುದು ರಾಜ್ಯದ ಆರ್ಥಿಕತೆಗೆ ಬಹುದೊಡ್ಡ ಹೊಡೆತ ತರುತ್ತಿದೆ ಎನ್ನುವ ಎಚ್ಚರಿಕೆಯನ್ನು ನೀಡಿತ್ತು. ಅಂಕಿ-ಅಂಶಗಳ ಪ್ರಕಾರ ಕರ್ನಾಟಕದ ಮೇಲೆ ಬರೋಬ್ಬರಿ 7.81 ಲಕ್ಷ ಕೋಟಿ ರು. ಸಾಲದ ಹೊರೆಯಿದೆ.
ಈಗಿರುವ ಒಟ್ಟು ಸಾಲದಲ್ಲಿ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಪಾಲು ಬಹುದೊಡ್ಡದಾಗಿದೆ. ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಬಂಡವಾಳ ವೆಚ್ಚಕ್ಕೆ ಸಾಲದ ಬಹುದೊಡ್ಡ ಪಾಲನ್ನು ಬಳಸಿದ್ದರು. ಇದರ ಒಂದು ಭಾಗವೇ ಕೃಷ್ಣ ನೀರಾವರಿ ಪ್ರಾಂತ್ಯದಲ್ಲಿ ನಡೆದಿರುವ ನೀರಾವರಿ ಕ್ರಾಂತಿ. ಆದರೆ ಎರಡನೇ ಅವಧಿಯಲ್ಲಿ ಗ್ಯಾರಂಟಿಯನ್ನು ಪೂರೈಸುವ ಮೂಲಕ ‘ಕೊಟ್ಟ ಮಾತು ಉಳಿಸಿಕೊಂಡ’ ಸರಕಾರ ಎನಿಸಿಕೊಳ್ಳಬೇಕಾದ ಒತ್ತಡಕ್ಕೆ ಸಿಲುಕಿದ್ದರಿಂದ ರಾಜಸ್ವ ವೆಚ್ಚಕ್ಕೆ ಮಾಡಿದ ಸಾಲವನ್ನು ಬಳಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಯಿತು.
ಸಿದ್ದರಾಮಯ್ಯ ಅವರ ಕಾಲದಲ್ಲಿ ಸುಮಾರು ಒಟ್ಟು 4,36,803 ಕೋಟಿ ಸಾಲ ಮಾಡಿದ್ದರೆ, ಯಡಿಯೂರಪ್ಪನವರ ಕಾಲದಲ್ಲಿ 1,63,713 ಕೋಟಿ, ಕುಮಾರಸ್ವಾಮಿ ಕಾಲದಲ್ಲಿ 1,01,419, ಬಸವರಾಜ ಬೊಮ್ಮಾಯಿ ಅವಧಿಯಲ್ಲಿ 67,000 ಕೋಟಿ, ಸದಾನಂದ ಗೌಡ 24,525 ಕೋಟಿ, ಕೃಷ್ಣ ಅವರ ಕಾಲದಲ್ಲಿ 20,576 ಕೋಟಿ ಸಾಲವಾಗಿದೆ. ಆದರೆ ಮುಂದಿನ ವರ್ಷ 2027-28ರ ಅವಧಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕನಿಷ್ಠ 1.22 ಲಕ್ಷ ಕೋಟಿಯಿಂದ 1.30 ಲಕ್ಷ ಕೋಟಿ ಸಾಲ ಪಡೆಯಬೇಕಾಗುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.
ಒಂದು ವೇಳೆ ಇದು ನಿಜವೇ ಆದರೆ ಕರ್ನಾಟಕದ ಒಟ್ಟು ಸಾಲ ಒಂಬತ್ತು ಲಕ್ಷ ಕೋಟಿ ರು. ದಾಟಲಿದೆ. ಒಂದು ವೇಳೆ ಇದಾದರೆ ಪ್ರತಿವರ್ಷ ಸುಮಾರು 40 ಸಾವಿರ ಕೋಟಿ ರು. ಸಾಲದ ಬಡ್ಡಿಗೆ ಮೀಸಲಿಡಬೇಕು. ಇದರಿಂದ ಬದ್ಧತಾ ವೆಚ್ಚದ ಲೆಕ್ಕಾಚಾರಗಳೂ ಬದಲಾಗಲಿದೆ. ಆಗ ಅನಿವಾರ್ಯ ವಾಗಿ ಅಭಿವೃದ್ಧಿ ಯೋಜನೆಗಳ ಅನುದಾನವನ್ನು ಬದ್ಧತಾ ವೆಚ್ಚದೆಡೆಗೆ ಡೈವರ್ಟ್ ಮಾಡುವ ಇಕ್ಕಟ್ಟಿಗೆ ಸರಕಾರ ಸಿಲುಕುವುದರಲ್ಲಿ ಅನುಮಾನವಿಲ್ಲ. ಇದರೊಂದಿಗೆ ಈಗಾಗಲೇ ರಾಜ್ಯ ಸರಕಾರ ಸುಮಾರು 50 ಸಾವಿರ ಖಾಲಿ ಹುದ್ದೆಗಳನ್ನು ಹಂತ-ಹಂತವಾಗಿ ಭರ್ತಿ ಮಾಡುವ ಭರವಸೆಯನ್ನು ನೀಡಿದೆ. ಇದರೊಂದಿಗೆ ಕಾಂಗ್ರೆಸ್ ಶಾಸಕರನ್ನು ಸಂತೈಸಲು ಪ್ರತಿ ಶಾಸಕರಿಗೆ ನೂರು ಕೋಟಿ ರು. ಅನುದಾನಧ ಭರವಸೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ್ದಾರೆ.
ಇದರೊಂದಿಗೆ ಈ ವರ್ಷ ಭೀಕರ ಬರ ಆವರಿಸಿರುವುದರಿಂದ ಅದಕ್ಕೂ ಅನುದಾನ ಮೀಸಲಿಡ ಬೇಕಾದ ಅನಿವಾರ್ಯತೆಯಿದೆ (ಕೇಂದ್ರದಿಂದ ಪೂರ್ಣ ಪ್ರಮಾಣದಲ್ಲಿ ಬರುವುದಿಲ್ಲ). ಕರೋನಾ ಬಳಿಕ ಆರ್ಥಿಕವಾಗಿ ಚೇತರಿಕೆಯ ಹಂತದಲ್ಲಿದ್ದ ಕರ್ನಾಟಕ ರಾಜ್ಯಕ್ಕೆ ಈ ಪ್ರಮಾಣದಲ್ಲಿ ಆರ್ಥಿಕ ಸಂಕಷ್ಟ ಎದುರಾಗಲು ಗ್ಯಾರಂಟಿ ಯೋಜನೆಗಳ ಪಾತ್ರ ಬಹುಮುಖ್ಯವಾಗಿದೆ ಎಂದರೆ ತಪ್ಪಾಗುವುದಿಲ್ಲ.
ಕರ್ನಾಟಕ ಮಾದರಿಯನ್ನು ಅನುಸರಿಸಲು ಹೋಗಿ ಹಿಮಾಚಲ ಪ್ರದೇಶ, ತೆಲಂಗಾಣ, ಪಂಜಾಬ್ ರಾಜ್ಯಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಈಗಾಗಲೇ ಆ ರಾಜ್ಯಗಳಲ್ಲಿ ಸರಕಾರಿ ನೌಕರರಿಗೆ ವೇತನ ಸಮಸ್ಯೆ ಸೇರಿದಂತೆ ಹಲವು ರೀತಿಯ ಆರ್ಥಿಕ ಸಮಸ್ಯೆ ಶುರುವಾಗಿದೆ. ಈ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕ ಆರ್ಥಿಕವಾಗಿ ‘ಸಬಲ’ವಾಗಿದ್ದು, ಆದಾಯ ತೆರಿಗೆ, ಜಿಎಸ್‌ಟಿ ಮರು ಪಾವತಿ ಸೇರಿದಂತೆ ಒಟ್ಟಾರೆ ಆರ್ಥಿಕ ವಿಷಯದಲ್ಲಿ ಉತ್ತಮ ಸ್ಥಿತಿಯಲ್ಲಿರುವುದರಿಂದ ರಾಜ್ಯಕ್ಕೆ ಇನ್ನು ಈ ಸ್ಥಿತಿ ಬಂದಿಲ್ಲ.
ಇನ್ನು ಕರ್ನಾಟಕಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಉಚಿತ ಘೋಷಣೆಗಳನ್ನು ನೀಡಿರುವ ತಮಿಳುನಾಡು ಮಿತಿ ಮೀರಿ ಸಾಲದ ಮೊರೆ ಹೋಗಿದ್ದು, ಅಲ್ಲಿನ ಆರ್ಥಿಕ ಪರಿಸ್ಥಿತಿ ಯಾವಾಗ ಬಿಗಡಾಯಿಸುವುದೋ ಗೊತ್ತಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಮಾತನಾಡುತ್ತಿರುವ ಬಿಜೆಪಿ ನಾಯಕರು ಇಂದು ಅಽಕಾರಕ್ಕೆ ಬಂದರೂ ಎಲ್ಲವನ್ನೂ ಸರಿಪಡಿಸಲು ಸಾಧ್ಯವಿಲ್ಲ.
ಆರ್ಥಿಕತೆಯ ವಿಷಯದಲ್ಲಿ ‘ಶಿಸ್ತಿ’ನ ಸಿಪಾಯಿಯಂತಿದ್ದ ಕರ್ನಾಟಕಕ್ಕೆ ಕರೋನಾ ಹಾಗೂ ಅದಾದ ಬಳಿಕ ಗ್ಯಾರಂಟಿ ಯೋಜನೆಗಳು ಆರ್ಥಿಕತೆಯ ಟ್ರ್ಯಾಕ್ ಅನ್ನು ತಪ್ಪುವಂತೆ ಮಾಡಿದೆ. ರಾಜಕೀಯ ಕಾರಣಕ್ಕೆ ‘ಉಚಿತ ಯೋಜನೆ’ಗಳನ್ನು ಘೋಷಿಸುತ್ತಾ ಹೋದರೆ ಮುಂದೊಂದು ದಿನ ಇತರೆ ರಾಜ್ಯಗಳಲ್ಲಿ ಎದುರಾಗಿರುವ ಆರ್ಥಿಕ ದಿವಾಳಿತನ ಕರ್ನಾಟಕಕ್ಕೆ ಬರುವುದು ದೂರದ ವಿಷಯ ವೇನಲ್ಲ. ಆಡಳಿತದ ಚುಕ್ಕಾಣಿ ಹಿಡಿದಿರುವ ನಾಯಕರು ಇನ್ನಾದರೂ, ಆರ್ಥಿಕ ಶಿಸ್ತಿನ ವಿಷಯದ ಬಗ್ಗೆ ಯೋಚಿಸುವುದು ಸೂಕ್ತ. ಏಕೆಂದರೆ ರೈಲು ಹೋದ ಮೇಲೆ ಟಿಕೆಟ್ ತೆಗೆದುಕೊಂಡರೆ ಅದರಿಂದ ಪ್ರಯೋಜನಕ್ಕಿಂತ ಮತ್ತಷ್ಟು ‘ನಷ್ಟ’ವೇ ಹೆಚ್ಚಾಗುತ್ತದೆ.