ಲೋಕಮತ
ಕೇಂದ್ರ ಸರಕಾರ ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ತಡೆಗೆ ಹಲವು ಕ್ರಮ ಗಳನ್ನು ಕೈಗೊಂಡರೂ ಸೈಬರ್ ಚಾಲಾಕಿಗಳ ಮುಂದೆ ಇವು ನಗಣ್ಯ ಎನಿಸಿವೆ. ವಂಚನೆಗೆ ಒಳಗಾದವರು ತಕ್ಷಣವೇ 1930ಕ್ಕೆ ಕರೆ ಮಾಡಿ ದೂರು ದಾಖಲಿಸಲು ಅವಕಾಶ ನೀಡಲಾಗಿದೆ. ಆದರೆ ದಾಖಲಾದ ದೂರುಗಳ ಬೆನ್ನು ಹತ್ತಿ ವಂಚಕರನ್ನು ಪತ್ತೆ ಮಾಡಿ, ಹಣವನ್ನು ಮರಳಿ ಪಡೆಯುವ ವಿಧಾನ ಇನ್ನೂ ಓಬೀರಾಯನ ಕಾಲದಲ್ಲಿದೆ.
ನಮ್ಮ ಪೊಲೀಸರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲರು. ಎಂಥದ್ದೇ ಅಪರಾಧ ಪ್ರಕರಣಗಳನ್ನು ಭೇದಿಸಬಲ್ಲರು. ಕನ್ನಡದ ಹಿರಿಯ ನಟ ಉಪೇಂದ್ರ ಅವರ ಪತ್ನಿ ನಟಿ ಪ್ರಿಯಾಂಕಾ ಉಪೇಂದ್ರ ಅವರ ವಾಟ್ಸ್ ಆ್ಯಪ್ ಹ್ಯಾಕ್ ಮಾಡಿದ ಖದೀಮನನ್ನು ದೂರದ ಬಿಹಾರದಲ್ಲಿ ಪತ್ತೆ ಹಚ್ಚಿ ಕರೆ ತರುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿ ದ್ದಾರೆ. ಈ ಖದೀಮ ಬಿಹಾರದಿಂದ ತಪ್ಪಿಸಿಕೊಂಡು ದೆಹಲಿಗೆ ಹಾರಿದರೂ ನಮ್ಮ ಪೊಲೀ ಸರ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಪೊಲೀಸರ ಈ ಸಾಧನೆಗೆ ಭೇಷ್ ಎನ್ನಲೇಬೇಕು. ಆದರೆ ಇಂಥದ್ದೇ ಇತರ ಪ್ರಕರಣಗಳಲ್ಲಿ ನಮ್ಮ ಪೊಲೀಸರ ಸಾಧನೆ ಗಮನಿಸಿದರೆ ಕಳಪೆ ಎನ್ನದೇ ವಿಧಿ ಇಲ್ಲ.
ಆನ್‌ಲೈನ್ ವಂಚನೆಗೆ ಗುರಿಯಾದ ನಿಮ್ಮ ಹತ್ತಿರದ ಸಂಬಂಧಿಕರು ಇಲ್ಲವೇ ಸ್ನೇಹಿತರನ್ನು ಕೇಳಿ ನೋಡಿ. ಅವರು ಕಳೆದುಕೊಂಡ ಹಣ ಬರುವುದಿರಲಿ, ಕನಿಷ್ಠ ಪಕ್ಷ ಅಪರಾಧಿಯನ್ನು ಪತ್ತೆ ಹಚ್ಚುವ ಕೆಲಸವೂ ನಡೆಯುವುದಿಲ್ಲ. ಪೊಲೀಸ್ ಠಾಣೆಗೆ ಹೋದರೆ, ‘‘ ನಾವು ಪ್ರಕರಣ ದಾಖಲು ಮಾಡುತ್ತೇವೆ. ಆದರೆ ನಿಮ್ಮ ದುಡ್ಡು ವಾಪಸ್ ಬರುವುದು ಕಷ್ಟ ’’ ಎಂಬ ನಿರುತ್ಸಾಹಿ ಮಾತುಗಳು ಕೇಳಿ ಬರುತ್ತವೆ. ಬಹುತೇಕ ಸಂದರ್ಭಗಳಲ್ಲಿ ಎಫ್‌ಐಆರ್ ದಾಖಲಾದ ಬಳಿಕ ಹಲವು ಬಾರಿ ಠಾಣೆಗೆ ಎಡತಾಕಿದರೂ, ಅಪರಾಧಿಗಳ ಜಾಡು ಹಿಡಿಯುವ ಪ್ರಯತ್ನವೇ ನಡೆದಿರುವುದಿಲ್ಲ. ವಂಚಕರು ಎಲ್ಲಿಯವರು ? ಅವರ ಬ್ಯಾಂಕ್ ಖಾತೆ ಎಲ್ಲಿದೆ ? ವಂಚಕರ ಖಾತೆಯಲ್ಲಿರುವ ಹಣ ಸ್ತಂಭನಕ್ಕೆ ಆಯಾ ಬ್ಯಾಂಕ್‌ಗಳಿಗೆ ಮನವಿ ಮಾಡಬಹುದೇ ಇತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟು ಠಾಣೆಗೆ ಹೋಗುವ ಸಂತ್ರಸ್ತ ರಿಗೆ ಸಿಗುವುದು, ‘ನಾಳೆ ಬನ್ನಿ’ ಎಂಬ ಸಿದ್ಧ ಉತ್ತರ.
ಇದನ್ನೂ ಓದಿ: Lokesh Kaayarga Column: ಸೇನೆಯಲ್ಲೂ ಮತಭೇದ ರಾಜಕೀಯ !
ಆನ್‌ಲೈನ್ ವಂಚನೆ ಪ್ರಕರಣಗಳಲ್ಲಿ ಸಮಯ ಎಲ್ಲಕ್ಕಿಂತ ಮುಖ್ಯ. ಹಣ ಕಳೆದುಕೊಂಡ ವರು ತಕ್ಷಣವೇ ಸೈಬರ್ ಠಾಣೆಗೆ ಬಂದು ದೂರು ನೀಡಿದರೆ, ದುಡ್ಡು ವಂಚಕರ ಖಾತೆಗೆ ಸೇರದಂತೆ ಮಾಡಲು ಸಾಧ್ಯವಿದೆ. ಆದರೆ ಇದನ್ನು ಮಾಡಬೇಕಾದವರು ಸೈಬರ್ ಠಾಣೆ ಪೊಲೀಸರು. ನಮ್ಮ ಪೊಲೀಸರು ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತರಾಗದೇ ಹೋದರೆ ಅದೆಷ್ಟೇ ಮೊತ್ತದ ಪ್ರಕರಣವಾದರೂ ಹಳ್ಳ ಹಿಡಿಯುವುದು ಖಚಿತ. ಸೈಬರ್ ಅಪರಾಧವಾಗಲಿ, ಆನ್‌ಲೈನ್ ವಂಚನೆ ಪ್ರಕರಣಗಳಾಗಲಿ ಪೊಲೀಸರ ಮೇಲೆ ಮೇಲ್ಮಟ್ಟ ದಲ್ಲಿ ಒತ್ತಡ ಹೇರದೇ ಹೋದರೆ, ಪ್ರಕರಣಗಳು ಮುಂದಕ್ಕೆ ಸಾಗುವುದಿಲ್ಲ ಎನ್ನುವುದು ಬಹುತೇಕರ ಅಭಿಪ್ರಾಯ.
ಇದೀಗ ರಾಜ್ಯದಲ್ಲೇ ಅತಿ ದೊಡ್ಡ ಡಿಜಿಟಲ್ ಅರೆಸ್ಟ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೆಂಗಳೂರಿನ ಮಹಿಳಾ ಟೆಕ್ಕಿಯೊಬ್ಬರು ‘ಡಿಜಿಟಲ್ ಅರೆಸ್ಟ್ ’ ಹೆಸರಿನಲ್ಲಿ 31.83 ಕೋಟಿ ಹಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಗೃಹಸಚಿವ ಪರಮೇಶ್ವರ್ ಅವರು ಎಂದಿನಂತೆ, ‘ವಂಚಕರನ್ನು ಹಿಡಿದೇ ಸಿದ್ಧ’ ಎಂದು ಗುಡುಗಿದ್ದಾರೆ. ಆದರೆ ಕಳೆದ ಐದು ವರ್ಷಗಳಲ್ಲಿ ಸೈಬರ್ ವಂಚನೆಗೆ ಸಂಬಂಧಿಸಿದ ಬಹುತೇಕ ಪ್ರಕರಣ ಗಳಲ್ಲಿ ನಮ್ಮ ಗುಡುಗಾಟಗಳೆಲ್ಲವೂ ಗೊಣಗಾಟವಾಗಿ ಪರಿವರ್ತನೆಯಾಗಿವೆಯೇ ಹೊರತು ಫಲಿತಾಂಶ ಸಿಕ್ಕಿಲ್ಲ.
ಯಾವುದೇ ವ್ಯಕ್ತಿ ಜೀವನ ಪರ‌್ಯಂತ ಕಷ್ಟಪಟ್ಟು ದುಡಿದು ಗಳಿಸಿದ ಹಣವನ್ನು ಕ್ಷಣ ಮಾತ್ರದಲ್ಲಿ ಕಳೆದುಕೊಂಡಾಗ ಆಗುವ ಯಾತನೆಯನ್ನು ಬಣ್ಣಿಸಲು ಸಾಧ್ಯವಿಲ್ಲ. ಇಂಥ ವರು ಅಲ್ಪ ಸ್ವಲ್ಪ ಹಣವಾದರೂ ಸಿಗಲಿ ಎಂದು ಪೆಚ್ಚು ಮೋರೆ ಹಾಕಿಕೊಂಡು ಠಾಣೆಗಳಿಗೆ ಬಂದಾಗ ಪೊಲೀಸರೇ ಸಾಂತ್ವನ ಹೇಳಿ, ಧೈರ್ಯ ತುಂಬಬೇಕಾಗುತ್ತದೆ. ಇದರಿಂದ ಆಘಾತಕ್ಕೊಳಗಾದ ವ್ಯಕ್ತಿ ಜೀವಕ್ಕೆ ಅಪಾಯ ತಂದುಕೊಳ್ಳುವುದನ್ನು ತಡೆಯಬಹುದು. ಆದರೆ ನಮ್ಮ ಪೊಲೀಸರ ಬಾಯಲ್ಲಿ ಇಂತಹ ಉಪಚಾರದ ಮಾತುಗಳು ಬರುವುದು ಅಪರೂಪ. ಕನಿಷ್ಠ ಪಕ್ಷ ಅಪರಾಧಿಯನ್ನು ಪತ್ತೆ ಹಚ್ಚುವ ಕೆಲಸವಾದರೂ ಅಗಲಿ ಎಂದರೆ, ಹೆಚ್ಚಿನ ಪ್ರಕರಣಗಳಲ್ಲಿ ತನಿಖೆಯನ್ನೇ ನಡೆಸದೆ ‘ಬಿ’ ರಿಪೋರ್ಟ್ ಸಲ್ಲಿಸ ಲಾಗುತ್ತದೆ.
ಸೈಬರ್ ಅಪರಾಧಕ್ಕೆ ಸಂಬಂಧಿಸಿ ಕಳೆದ ವರ್ಷ ನವೆಂಬರ್ 30ರ ತನಕ ರಾಜ್ಯದಲ್ಲಿ 20,875 ಎಫ್‌ಐಆರ್ ದಾಖಲಾಗಿವೆ. ಈ ಪೈಕಿ ಪತ್ತೆಯಾಗಿರುವುದು ಕೇವಲ 873 ಪ್ರಕರಣ ಗಳು. 112 ಪ್ರಕರಣಗಳಲ್ಲಿ ಬಿ ರಿಪೋರ್ಟ್ ದಾಖಲಾಗಿದೆ. 16784 ಪ್ರಕರಣಗಳಲ್ಲಿ ಇನ್ನೂ ತನಿಖೆ ಮುಂದುವರಿದಿದೆ. ಇದು ಕಳೆದ ವಿಧಾನಸಭಾ ಅಧಿವೇಶನದಲ್ಲಿ ನಮ್ಮ ಗೃಹ ಇಲಾಖೆ ಸದನಕ್ಕೆ ನೀಡಿದ ಮಾಹಿತಿ. ಇದರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ, ಬೆದರಿಕೆ ಒಡ್ಡಿದ ಪ್ರಕರಣಗಳೂ ಸೇರಿವೆ. ಪೊಲೀಸರು ಬಗೆಹರಿಸಿದ 873 ಪ್ರಕರಣಗಳಲ್ಲಿ ಹೆಚ್ಚಿನವು ಈ ರೀತಿಯ ಸ್ಥಳೀಯ ದೂರುಗಳು.
ಆನ್‌ಲೈನ್ ವಂಚನೆ ವಿಷಯಕ್ಕೆ ಬಂದಾಗ 2023ರಿಂದ ಈ ತನಕ ರಾಜ್ಯದಲ್ಲಿ 60 ಸಾವಿರ ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಸೈಬರ್ ವಂಚಕರನ್ನು ಬಂಧಿಸಿ, ಚಾರ್ಜ್‌ಶೀಟ್ ಸಲ್ಲಿಸಲಾದ ಅಥವಾ ಪತ್ತೆ ಹಚ್ಚಿದ ಪ್ರಕರಣಗಳ ಪ್ರಮಾಣವು ಶೇ.10 ಕ್ಕಿಂತಲೂ ಕಡಿಮೆ ಇದೆ. ಇನ್ನು ಶಿಕ್ಷೆಗೆ ಗುರಿಯಾದ ಆರೋಪಿಗಳ ಸಂಖ್ಯೆ ಇನ್ನೂ 80 ದಾಟಿಲ್ಲ. ರಾಜಧಾನಿ ಬೆಂಗಳೂರು ಒಂದರಲ್ಲಿಯೇ ದಿನವೊಂದಕ್ಕೆ ಸರಾಸರಿ 48ರಿಂದ 50 ಆನ್‌ಲೈನ್ ವಂಚನೆ ಪ್ರಕರಣಗಳು ದಾಖಲಾಗುತ್ತಿವೆ. ಕಳೆದ ವರ್ಷ ಸುಮಾರು 17,560 ಪ್ರಕರಣಗಳು ದಾಖಲಾಗಿವೆ. ಜನರು 2,000 ಕೋಟಿಗೂ ಮಿಕ್ಕಿದ ಹಣವನ್ನು ಕಳೆದುಕೊಂಡಿ ದ್ದಾರೆ. ಆದರೆ ಪತ್ತೆಯಾದ ಪ್ರಕರಣಗಳು ಮೂರಂಕಿ ದಾಟಿಲ್ಲ. ವಂಚಕರ ಖಾತೆಯಲ್ಲಿದ್ದ ಸುಮಾರು 652 ಕೋಟಿ ಹಣ ಫ್ರೀಜ್ ಮಾಡಲಾಗಿದ್ದರೂ ವಸೂಲಿ ಮಾಡಲು ಸಾಧ್ಯ ವಾಗಿದ್ದು ಕೇವಲ 139 ಕೋಟಿ ರು. ಮಾತ್ರ.
ಇನ್ನು ರಾಷ್ಟ್ರ ಮಟ್ಟಕ್ಕೆ ಬಂದರೆ ಆನ್‌ಲೈನ್ ವಂಚನೆ ಪ್ರಕರಣಗಳು ಇನ್ನಷ್ಟು ಬೆಚ್ಚಿ ಬೇಳಿಸುವಂತಿದೆ. ದೇಶದಲ್ಲಿ ದಿನಕ್ಕೆ ಸರಾಸರಿ 7,000 ಸೈಬರ್ ಅಪರಾಧ ದೂರುಗಳು ದಾಖಲಾಗುತ್ತಿವೆ. ಇವುಗಳಲ್ಲಿ ಶೇ.85ರಷ್ಟು ಪ್ರಕರಣಗಳು ಆನ್‌ಲೈನ್ ಹಣಕಾಸು ವಂಚನೆಗೆ ಸಂಬಂಧಿಸಿವೆ. 2024 ರಲ್ಲಿ ಸುಮಾರು 22.68 ಲಕ್ಷ ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿದ್ದು, ಭಾರತೀಯರು ಒಂದೇ ವರ್ಷ ಸುಮಾರು 22,845 ಕೋಟಿ ರು. ಕಳೆದು ಕೊಂಡಿದ್ದಾರೆ. ಅಂದರೆ ದಿನವೊಂದಕ್ಕೆ ಸರಾಸರಿ 6.25 ಕೋಟಿ ದುಡ್ಡು ವಂಚಕರ ಪಾಲಾಗುತ್ತಿದೆ.
ಇಷ್ಟೆಲ್ಲ ಅಂಕಿ ಅಂಶಗಳನ್ನು ಮುಂದಿಡಲು ಕಾರಣ, ನಮ್ಮ ಪೊಲೀಸರ ವೈಫಲ್ಯವನ್ನು ಬೊಟ್ಟು ಮಾಡುವುದಲ್ಲ. ಸೈಬರ್ ಅಪರಾಧವನ್ನು ತಡೆಯುವುದು ನಮ್ಮ ಪೊಲೀಸರ ವ್ಯಾಪ್ತಿಯನ್ನು ಮೀರಿದ್ದು. ಇದು ಉಳಿದ ಅಪರಾಧ ಪ್ರಕರಣಗಳಂತೆ ಠಾಣೆಗಳ ಸರಹದ್ದಿ ನಲ್ಲಿ ನಡೆಯುವಂಥದ್ದಲ್ಲ. ಬಹುತೇಕ ಪ್ರಕರಣಗಳೆಲ್ಲವೂ ದೇಶದ ಗಡಿ ದಾಟಿ ಅಂತಾ ರಾಷ್ಟ್ರೀಯ ವ್ಯಾಪ್ತಿಯನ್ನು ಹೊಂದಿವೆ. ಕಾಂಬೋಡಿಯಾ, ಲಾವೋಸ್, ಮ್ಯಾನ್ಮಾರ್ ಮುಂತಾದ ಆಗ್ನೇಯ ಏಷ್ಯಾ ದೇಶಗಳು, ಮಲೇಷ್ಯಾ, ಅಘ್ಘಾನಿಸ್ತಾನ, ಪಾಕಿಸ್ತಾನದಂತಹ ನೆರೆ ರಾಷ್ಟ್ರಗಳು, ನೈಜೀರಿಯಾದಂತಹ ಆಫ್ರಿಕಾದ ದೇಶಗಳ ಬ್ಯಾಂಕ್ ಖಾತೆಗಳಿಗೆ ವರ್ಗಾ ವಣೆಯಾಗುವ ಹಣವನ್ನು ತಡೆಯುವುದು ಇಲ್ಲವೇ ಮರಳಿ ಪಡೆಯುವುದು ನಮ್ಮ ಪೊಲೀಸರ ಕಾರ‌್ಯವ್ಯಾಪ್ತಿಗೆ ನಿಲುಕದ ಸಂಗತಿ.
ಬಿಹಾರ, ಜಾರ್ಖಂಡ್, ಉತ್ತರಪ್ರದೇಶ, ಹರಿಯಾಣ ಮುಂತಾದ ಉತ್ತರ ಭಾರತದ ರಾಜ್ಯ ಗಳಿಂದ ಕಾರ್ಯಾಚರಿಸುವ ಸೈಬರ್ ವಂಚಕರನ್ನು ಪತ್ತೆ ಮಾಡಬೇಕಾದರೂ ಮೊದಲು ನಮ್ಮ ಬ್ಯಾಂಕ್‌ಗಳನ್ನು ಸಂಪರ್ಕಿಸಿ, ಖಾತೆ ಫ್ರೀಜ್ ಮಾಡಲು ತಿಳಿಸಬೇಕು. ನಂತರ ಆಯಾ ರಾಜ್ಯದ ಪೊಲೀಸರನ್ನು ಸಂಪರ್ಕಿಸಿ ವಂಚಕರ ಪತ್ತೆಗೆ ಮುಂದಾಗಬೇಕು. ಇಡೀ ಊರಿಗೆ ಊರೇ ಸೈಬರ್ ವಂಚಕರಿಂದ ತುಂಬಿದ ಹಳ್ಳಿಗಳು ನಮ್ಮ ದೇಶದಲ್ಲಿವೆ. ಇಂಥ ಕಡೆ ನಮ್ಮ ಪೊಲೀಸರು ಹೋದರೂ ಅಪರಾಧಿಗಳನ್ನು ಬಂಧಿಸಿ, ತರುವುದು ಸುಲಭದ ಕೆಲಸವಲ್ಲ.
ಸೈಬರ್ ವಂಚನೆಯನ್ನು ಸಮರ್ಥವಾಗಿ ತಡೆಯಬೇಕಾದರೆ ಪೊಲೀಸರು, ಸೈಬರ್ ತಜ್ಞರು, ಬ್ಯಾಂಕಿಂಗ್ ತಜ್ಞರು ಮತ್ತು ವಿದೇಶಾಂಗ ಖಾತೆಗೆ ಸಂಬಂಧಿಸಿದ ಸಿಬ್ಬಂದಿಯನ್ನೊಳಗೊಂಡ ಪ್ರತ್ಯೇಕ ಕೇಂದ್ರೀಯ ದಳ ಅತ್ಯಗತ್ಯ. ಈ ಪಡೆ ಇಲಾಖೆಗಳನ್ನು ಮತ್ತು ಗಡಿಗಳನ್ನು ಮೀರಿ ಕೆಲಸ ನಿರ್ವಹಿಸಲು ಸಾಧ್ಯವಾದರೆ ಮಾತ್ರ ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚಲು ಮತ್ತು ಅಪರಾಧಿಗಳನ್ನು ಶಿಕ್ಷಿಸಲು ಸಾಧ್ಯವಿದೆ.
ಕೇಂದ್ರ ಸರಕಾರ ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ತಡೆಗೆ ಹಲವು ಕ್ರಮಗಳನ್ನು ಕೈಗೊಂಡರೂ ಸೈಬರ್ ಚಾಲಾಕಿಗಳ ಮುಂದೆ ಇವು ನಗಣ್ಯ ಎನಿಸಿವೆ. ವಂಚನೆಗೆ ಒಳಗಾದ ವರು ತಕ್ಷಣವೇ 1930ಕ್ಕೆ ಕರೆ ಮಾಡಿ ದೂರು ದಾಖಲಿಸಲು ಅವಕಾಶ ನೀಡಲಾಗಿದೆ. ಆದರೆ ದಾಖಲಾದ ದೂರುಗಳ ಬೆನ್ನು ಹತ್ತಿ ವಂಚಕರನ್ನು ಪತ್ತೆ ಮಾಡಿ, ಹಣವನ್ನು ಮರಳಿ ಪಡೆಯುವ ವಿಧಾನ ಇನ್ನೂ ಓಬೀರಾಯನ ಕಾಲದಲ್ಲಿದೆ. ಇಂತಹ ವಂಚನೆ ಪ್ರಕರಣ ಗಳಲ್ಲಿ ಒಂದೊಂದು ಬ್ಯಾಂಕಿನ ನೀತಿ ಒಂದೊಂದು ರೀತಿಯದ್ದಾಗಿದೆ. ಕೆಲವು ಬ್ಯಾಂಕ್ ಗಳು ಪೊಲೀಸರ ಮನವಿಗೆ ತಕ್ಷಣ ಸ್ಪಂದಿಸಿ ಅಕೌಂಟ್ ಫ್ರೀಜ್ ಮಾಡುವ ಜತೆಗೆ ಹಣವನ್ನು ಹಿಂತಿರುಗಿಸಲು ಸಹಕರಿಸುತ್ತವೆ. ಇನ್ನು ಕೆಲವು ಬ್ಯಾಂಕುಗಳು ಕೋರ್ಟ್ ಆದೇಶದ ಹೊರತಾಗಿ ಹಣ ವರ್ಗಾವಣೆ ಸಾಧ್ಯವಿಲ್ಲ ಎನ್ನುತ್ತವೆ.
ಸೈಬರ್ ವಂಚಕರು ತಮ್ಮ ಖಾತೆಗೆ ಹಣ ವರ್ಗಾವಣೆಯಾದ ಕೆಲವೇ ಕ್ಷಣಗಳಲ್ಲಿ ಬೇರೆ ಖಾತೆಗಳಿಗೆ ಈ ಹಣವನ್ನು ವರ್ಗಾಯಿಸಿಕೊಳ್ಳುತ್ತಾರೆ. ವಂಚನೆಗೊಳಗಾದವರು ದೂರು ನೀಡಿದ ತಕ್ಷಣವೇ ಯಾವ ಖಾತೆಗೆ ಈ ಹಣ ವರ್ಗಾವಣೆಯಾಗಿದೆ ಎಂದು ಪತ್ತೆ ಹಚ್ಚುವುದು ಮುಖ್ಯ. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಬ್ಯಾಂಕ್ ಸಿಬ್ಬಂದಿ ನಿಮಿಷಗಳಲ್ಲಿ ಕಾರ್ಯಾಚರಣೆ ನಡೆಸಿದರಷ್ಟೇ ಹಣ ಮರಳಿ ಪಡೆಯಲು ಸಾಧ್ಯ. ಇಲ್ಲಿ ಯಾರೇ ವಿಳಂಬ ಮಾಡಿದರೂ ನಷ್ಟ ಗ್ರಾಹಕರಿಗೆ.
ಬಹುತೇಕ ಸಂದರ್ಭಗಳಲ್ಲಿ ವಂಚಕರು ಹಲವು ಖಾತೆಗಳಿಗೆ ಹಣ ವರ್ಗಾಯಿಸಿಕೊಂಡು ಹಣ ಡ್ರಾ ಮಾಡಲು ಪ್ರಯತ್ನಿಸುತ್ತಾರೆ. ಯಾವುದೋ ಒಂದು ಖಾತೆಯಲ್ಲಿ ಕೆಲವು ಲಕ್ಷ ಹಣ ಉಳಿದಿದೆ ಎಂದಿಟ್ಟುಕೊಳ್ಳೋಣ. ಬ್ಯಾಂಕ್ ಸಿಬ್ಬಂದಿ ಇದನ್ನು ಮನದಟ್ಟು ಮಾಡಿ ಕೊಂಡು ಹಣ ವರ್ಗಾಯಿಸಿದರೆ ಸರಿ. ಒಂದು ವೇಳೆ ಕೋರ್ಟ್ ಆದೇಶಕ್ಕೆ ಪಟ್ಟು ಹಿಡಿದರೆ ಗ್ರಾಹಕರು ವಕೀಲರನ್ನು ಹಿಡಿದು ನ್ಯಾಯಾಲಯದ ಆದೇಶ ತರಬೇಕಾದರೆ ಮತ್ತೆ ಇಷ್ಟೇ ಹಣ ಖರ್ಚು ಮಾಡಬೇಕು. ಆನ್‌ಲೈನ್ ವಂಚನೆಗೊಳಗಾದ ಬಹುತೇಕರು ತಮ್ಮ ಹಣ ‘ದೇವರ ಹುಂಡಿ ಸೇರಿದೆ’ ಎಂದು ಸುಮ್ಮನಾಗುವುದೇ ಹೆಚ್ಚು. ಕೆಲವರು ಸಂಬಂಧಿಕರ ಕಿಡಿ ನುಡಿ, ಮರ್ಯಾದೆಗೆ ಅಂಜಿ ದೂರು ನೀಡಲೂ ಮುಂದಾಗುವುದಿಲ್ಲ.
ವ್ಯಕ್ತಿಯೊಬ್ಬನ ದುಡಿಮೆಯ ಹಣವನ್ನು ಮೋಸದಿಂದ ಲಪಟಾಯಿಸಿ ಆತನ ಬದುಕನ್ನು ಕತ್ತಲೆಗೆ ತಳ್ಳುವ ಸೈಬರ್ ವಂಚನೆ ದೇಶದ್ರೋಹಕ್ಕಿಂತಲೂ ಮಿಗಿಲಾದ ಅಪರಾಧ ಕೃತ್ಯ. ಇಂಥವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲು ಕಾನೂನು ತಿದ್ದುಪಡಿ ತರುವುದು ಅತ್ಯವಶ್ಯಕ. ಸೈಬರ್ ವಂಚನೆಯನ್ನು ಪೂರ್ತಿ ತಡೆಯುವುದು ಸದ್ಯಕ್ಕಂತೂ ಆಗದ ಮಾತು. ಆದರೆ ಈ ಆರ್ಥಿಕ ಅಪರಾಧವನ್ನು ನಿಯಂತ್ರಿಸಲು ಸಾಧ್ಯವಿದೆ. ಜನರಲ್ಲಿ ಅದರಲ್ಲೂ ದಿನಪತ್ರಿಕೆ, ಟಿ.ವಿ ಸುದ್ದಿಗಳನ್ನು ನೋಡಲೂ ಪುರುಸೊತ್ತಿಲ್ಲದೆ, ಸದಾ ‘ಕಾಯಕ’ ನಿರತ ದೊಡ್ಡ ಮನುಷ್ಯರಿಗೆ ಈ ದೇಶದ ಕಾನೂನಿನಲ್ಲಿ ‘ಡಿಜಿಟಲ್ ಅರೆಸ್ಟ್' ಎಂಬ ಪದ ಇಲ್ಲ ಎನ್ನುವು ದನ್ನು ತಿಳಿ ಹೇಳಬೇಕಾಗಿದೆ.
ಸೈಬರ್ ವಂಚನೆಗಳು ನಡೆದಾಗ ತಕ್ಷಣ ಕಾರ್ಯೋನ್ಮುಖವಾಗಲು ಕೇಂದ್ರ ಮತ್ತು ರಾಜ್ಯ ಇಲಾಖೆಗಳ ಸಿಬಂದಿಯನ್ನೊಳಗೊಂಡ ಪ್ರತ್ಯೇಕ ದಳ ಅತ್ಯಗತ್ಯ. ವಂಚನೆಗೊಳಗಾದವರು ದೂರುಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸಾಮಾನ್ಯ ಕೋರ್ಟ್‌ಗಳಲ್ಲಿ ವರ್ಷಗಟ್ಟಲೆ ಕಾಯಬೇಕು. ಇದನ್ನು ತಪ್ಪಿಸಲು ಲೋಕ ಅದಾಲತ್ ಮಾದರಿಯಲ್ಲಿ ಪ್ರತ್ಯೇಕ ಅದಾಲತ್ ನಡೆಸುವುದು ಉತ್ತಮ.
ಇಂದಿನ ಡಿಜಿಟಲೀಕರಣದ ಯುಗದಲ್ಲಿ ನಮ್ಮ ಬಹುತೇಕ ಎಲ್ಲ ದಾಖಲೆಗಳು ಆನ್‌ಲೈನ್ ನಲ್ಲಿ ಲಭ್ಯ. ಇವುಗಳು ಸೋರಿಕೆಯಾಗದಂತೆ ತಡೆಯುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ನಮ್ಮ ಸೈಬರ್ ತಜ್ಞರು ಇನ್ನಷ್ಟು ಸುರಕ್ಷತಾ ಕ್ರಮಗಳನ್ನು ಸೂಚಿಸಬೇಕಾಗಿದೆ. ಸಂಭಾವ್ಯ ಅಪಾಯಗಳ ಬಗ್ಗೆ ಮುಂಚಿತವಾಗಿ ಮಾಹಿತಿ ಹಂಚಿಕೊಳ್ಳಬೇಕಾಗಿದೆ. ಎಲ್ಲಕ್ಕಿಂತ ಮುಖ್ಯ ವಾಗಿ ನಾವು ಆತುರಕ್ಕೆ ಬೀಳದೆ ನಮ್ಮ ಹಣ ಮತ್ತು ದಾಖಲೆಗಳ ಸುರಕ್ಷತೆ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ. ವಂಚಕರ ಚಾಲಾಕಿತನಕ್ಕೆ ನಾವೇ ಮದ್ದರೆಯಬೇಕಿದೆ.