ಇದೇ ಅಂತರಂಗ ಸುದ್ದಿ
ಇಸ್ರೇಲ್ ಮತ್ತು ಗಾಜಾ ಪಟ್ಟಿಯಲ್ಲಿರುವ ಹಮಾಸ್ ಉಗ್ರರ ನಡುವಿನ ಎರಡು ವರ್ಷಗಳ ಯುದ್ಧಕ್ಕೆ ತೆರೆ ಬಿದ್ದಿದೆ. ಈ ಯುದ್ಧಕ್ಕೆ ಯಾವ ರೀತಿ ತೆರೆ ಬೀಳಬೇಕು ಎಂದು ಇಸ್ರೇಲಿಗಳು ಅಂದುಕೊಂಡಿ ದ್ದರೋ, ಅದೇ ರೀತಿ ಆಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸದಿದ್ದರೂ ಇನ್ನೊಂದು ತಿಂಗಳಲ್ಲಿ ಯುದ್ಧ ನಿಲ್ಲುತ್ತಿತ್ತು.
ಕಾರಣ ಅಷ್ಟೊತ್ತಿಗೆ ಗಾಜಾ ಬರಿದಾಗಿರುತ್ತಿತ್ತು. ಇಸ್ರೇಲಿ ಸೇನಾಪಡೆ ಈಗಾಗಲೇ ಶೇ.80ರಷ್ಟು ಗಾಜಾವನ್ನು ನಿರ್ನಾಮ ಮಾಡಿದೆ. ಗಾಜಾ ನಗರದಲ್ಲಿರುವ ಬಹುತೇಕರು ಈಗಾಗಲೇ ಊರು ಬಿಟ್ಟಿದ್ದಾರೆ. ಅಷ್ಟೇ ಪ್ರಮಾಣದ ಕಟ್ಟಡಗಳು ನೆಲಸಮವಾಗಿವೆ. ಅಲ್ಲಿ ಉಳಿದಿರುವುದು ಅರೆಬರೆ ಧ್ವಂಸವಾದ ಕಟ್ಟಡಗಳು ಮತ್ತು ಅವುಗಳ ಅವಶೇಷಗಳಷ್ಟೇ.
ಹಮಾಸ್ ಉಗ್ರರ ಪೈಕಿ ಹೆಚ್ಚಿನವರು ಹತರಾಗಿದ್ದಾರೆ. ಗಾಜಾದಲ್ಲಿರುವ ಪ್ಯಾಲೆಸ್ತೀನಿಯರು ನಿರಾಶ್ರಿತ ರಾಗಿದ್ದಾರೆ. ಇಸ್ರೇಲ್ ಗಾಜಾ ಪಟ್ಟಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಉಗ್ರರ ಚಟುವಟಿಕೆಯನ್ನು ನಿಗ್ರಹಿಸಲು ಗಾಜಾದಲ್ಲಿರುವ ಎಲ್ಲ ಸುರಂಗಗಳನ್ನು ಇಸ್ರೇಲಿನ ಸೇನಾಪಡೆ ಮುಚ್ಚಿದೆ.
ಅಕ್ಷರಶಃ ಇಸ್ರೇಲ್, ಗಾಜಾವನ್ನು ಎರಡು ಭಾಗಗಳಾಗಿ ಒಡೆದು ಹಾಕಿದೆ. ಇದರಿಂದ ಹಮಾಸ್‌ಗಳು ಮೊದಲಿನ ಹಾಗೆ ಕಾರ್ಯಾಚರಣೆ ಮಾಡುವುದು ಸುಲಭವಲ್ಲ. ಗಾಜಾವನ್ನು ಇಡಿಯಾಗಿಯೇ ಕಟ್ಟಬೇಕು, ಆ ರೀತಿ ಮಟ್ಟಸ ಮಾಡಿಬಿಟ್ಟಿದ್ದಾರೆ. ಗಾಜಾವನ್ನು ಪುನರ್‌ನಿರ್ಮಿಸಲು ಇನ್ನೂ ಏನಿಲ್ಲವೆಂದರೂ ಹತ್ತು ವರ್ಷಗಳಾದರೂ ಬೇಕು. ಸದ್ಯಕ್ಕಂತೂ ಹಮಾಸ್‌ಗಳು ಬಾಲ ಬಿಚ್ಚುವಂತಿಲ್ಲ.
ಇದನ್ನೂ ಓದಿ: Vishweshwar Bhat Column: ಹಳೆ ವಿಮಾನವನ್ನು ಬಳಸುವುದೇಕೆ ?
ಅವರಿಗೆ ಬೇರೆ ದೇಶಗಳು ಬೆಂಬಲ ನೀಡಿದರೂ ಯುದ್ಧ ಮಾಡುವ ಹುಮ್ಮಸ್ಸು ಅವರಲ್ಲಿ ಉಳಿದಿಲ್ಲ. ಈ ಯುದ್ಧ ಹೇಗೆ ಕೊನೆಗೊಳ್ಳಬಹುದು ಎಂಬ ಬಗ್ಗೆ ಯಾರಲ್ಲೂ ಆಸಕ್ತಿ ಇರಲಿಲ್ಲ. ಆದರೆ ಹಮಾಸ್ ಉಗ್ರರು ಎರಡು ವರ್ಷಗಳ ಹಿಂದೆ ಅಪಹರಿಸಿ ಒತ್ತೆಯಾಳುಗಳನ್ನಾಗಿಟ್ಟುಕೊಂಡ ಇಸ್ರೇಲಿ ನಾಗರಿಕರು ಸುರಕ್ಷಿತವಾಗಿ ಮನೆಗೆ ಮರಳುತ್ತಾರಾ, ಇಲ್ಲವಾ ಎಂಬ ಬಗ್ಗೆ ಕುತೂಹಲವಿತ್ತು.
ಅಂದುಕೊಂಡಂತೆ, ಎಲ್ಲ ಒತ್ತೆಯಾಳುಗಳನ್ನೂ ಹಮಾಸ್ ಉಗ್ರರು ಬಿಡುಗಡೆ ಮಾಡಿದ್ದಾರೆ. ಅಲ್ಲಿಗೆ ಯುದ್ಧ ಮುಗಿದಂತೆ ಆಗಿದೆ. ಎಲ್ಲ ಮುಗಿದ ಬಳಿಕ, ಇಸ್ರೇಲ್ ಕದನವಿರಾಮ ಘೋಷಿಸಿದಂತಾಗಿದೆ. ಒಂದು ವೇಳೆ ಆ ರೀತಿಯ ಸ್ಥಿತಿ ಭಾರತದಲ್ಲಿ ಇದ್ದಿದ್ದರೆ ಏನಾಗುತ್ತಿತ್ತು?
ಹಮಾಸ್ ವಿರುದ್ಧ ಕಾರ್ಯಾಚರಣೆ ಮಾಡಲು ಭಾರತ ಹತ್ತು ಸಲ ಯೋಚಿಸಬೇಕಾಗುತ್ತಿತ್ತು. ಹಮಾಸ್ ವಿರುದ್ಧದ ದಾಳಿಗೆ ಮುನ್ನ ದೇಶದೊಳಗೆ ಇರುವ ಪ್ರತಿಪಕ್ಷಗಳನ್ನು ಎದುರಿಸುವುದೇ ಸರಕಾರಕ್ಕೆ ದೊಡ್ಡ ಸಮಸ್ಯೆ ಆಗುತ್ತಿತ್ತು. ಅದರಲ್ಲೂ ಎರಡು ವರ್ಷಗಳ ತನಕ ಯುದ್ಧ ನಡೆದಿದ್ದರೆ, ಪ್ರತಿಪಕ್ಷಗಳು ಸರಕಾರವನ್ನು ತರಾಟೆಗೆ ತೆಗೆದುಕೊಂಡು ನಮ್ಮ ಸೈನಿಕರ ಜಂಘಾಬಲವನ್ನೇ ಉಡುಗಿಸಿ ಬಿಡುತ್ತಿದ್ದರು.
ಹಮಾಸ್ ಉಗ್ರರನ್ನು ಮಣಿಸಿದ ನಂತರ, ಪ್ರತಿಪಕ್ಷಗಳನ್ನು ಎದುರಿಸುವುದು ಸರಕಾರಕ್ಕೆ ಸುಲಭದ ತುತ್ತಾಗುತ್ತಿರಲಿಲ್ಲ. ಆ ರೀತಿ ಆಡಳಿತ ಪಕ್ಷವನ್ನು ಹಣ್ಣುಗಾಯಿ- ನೀರುಗಾಯಿ ಮಾಡಿಬಿಡುತ್ತಿದ್ದರು. ಹಮಾಸ್ ಉಗ್ರರನ್ನು ಎದುರಿ ಸಿದ್ದಕ್ಕಿಂತ ಪ್ರತಿಪಕ್ಷಗಳನ್ನು ಎದುರಿಸುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿತ್ತು.
ಹಾಗಾದರೆ, ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಇಸ್ರೇಲಿನ ಸರಕಾರಕ್ಕೆ ಈ ಸಮಸ್ಯೆ ಆಗಲಿಲ್ಲವೇ? ಆಶ್ಚರ್ಯವೆನಿಸಬಹುದು, ಈ ಸಮಸ್ಯೆ ಇಸ್ರೇಲಿ ಪ್ರಧಾನಿಗೆ ಆಗಲೇ ಇಲ್ಲ. ಇಡೀ ಪ್ರತಿಪಕ್ಷ, ಎರಡು ವರ್ಷಗಳ ಕಾಲ ಸರಕಾರದ ಪರವಾಗಿ ಗಟ್ಟಿಯಾಗಿ ನಿಂತು ಬಿಟ್ಟಿತು.
ಯುದ್ಧದ ಸಂದರ್ಭದಲ್ಲಿ ಪ್ರತಿಪಕ್ಷಗಳು ಪ್ರಧಾನಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಲಿಲ್ಲ, ಸಂಸತ್ ಕಲಾಪ ಬಹಿಷ್ಕರಿಸಲಿಲ್ಲ, ಯುದ್ಧ ಲಂಬಿಸುತ್ತಿರುವುದರ ಬಗ್ಗೆ ಸರಕಾರವನ್ನು ಟೀಕಿಸ ಲಿಲ್ಲ, ಒತ್ತೆಯಾಳುಗಳ ಬಿಡುಗಡೆಗೆ ವಿಳಂಬವಾಗುತ್ತಿದೆಯೆಂದು ಯಾರೂ ತಕರಾರು ತೆಗೆಯಲಿಲ್ಲ.
ಹಮಾಸ್ ಉಗ್ರರ ಹುಟ್ಟಡಗಿಸಿದ್ದೇವೆ ಎಂದು ಸರಕಾರ ಹೇಳಿದಾಗ, ಯಾರೂ ‘ಸಾಕ್ಷ್ಯ ಕೊಡಿ’ ಎಂದು ಹೇಳಲಿಲ್ಲ. ಹಮಾಸ್ ವಿರುದ್ಧದ ಕಾರ್ಯಾಚರಣೆಯಲ್ಲಿ ಸರಕಾರದ ಲೋಪ- ದೋಷಗಳನ್ನು ಎತ್ತಿ ಹಿಡಿದು, ಹೇಗೆ ಬೇಳೆ ಬೇಯಿಸಿಕೊಳ್ಳಬಹುದು ಎಂದು ಪ್ರತಿಪಕ್ಷಗಳು ಯೋಚಿಸಲೇ ಇಲ್ಲ.
ಹಾಗೆಂದು ಇಸ್ರೇಲಿನಲ್ಲಿರುವುದು ಎರಡೇ ಪಕ್ಷಗಳಲ್ಲ. ಭಾರತದಲ್ಲಿರುವಂತೆ ಅಲ್ಲಿ ಕೂಡ ಬಹು-ಪಕ್ಷ ವ್ಯವಸ್ಥೆಯಿದೆ. ಕಾಲಕಾಲಕ್ಕೆ ಹೊಸ ರಾಜಕೀಯ ಪಕ್ಷಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಇಸ್ರೇಲ್‌ನ ಈಗಿನ ಸರಕಾರದಲ್ಲಿ (ಬೆಂಜಮಿನ್ ನೆತನ್ಯಾಹು ನೇತೃತ್ವದ ಒಕ್ಕೂಟ), ಮುಖ್ಯ ಪ್ರತಿಪಕ್ಷವೆಂದರೆ ಯೇಶ್ ಅಟಿಡ್ ಪಕ್ಷ. ಇದರ ನಾಯಕ ಯಾಯಿರ್ ಲ್ಯಾಪಿಡ್. ಮಾಜಿ ರಕ್ಷಣಾ ಸಚಿವ ಬೆನ್ನಿ ಗಾಂಟ್ಜ ನೇತೃತ್ವದ ರಾಷ್ಟ್ರೀಯ ಐಕ್ಯತಾ ಪಕ್ಷ ( National Unity ) ಕೂಡ ಒಂದು ಪ್ರಬಲ ವಿರೋಧ ಶಕ್ತಿಯಾಗಿದೆ.
ನೆಸ್ಸೆಟ್‌ನಲ್ಲಿ (ಇಸ್ರೇಲ್‌ನ ಸಂಸತ್ತು) ಅತ್ಯಧಿಕ ಸ್ಥಾನಗಳನ್ನು ಹೊಂದಿರುವ ಪ್ರತ್ಯೇಕ ಪ್ರತಿಪಕ್ಷ ಯೇಶ್ ಅಟಿಡ್ ಆಗಿದೆ. ನೆಸ್ಸೆಟ್‌ನಲ್ಲಿ ಪ್ರಸ್ತುತ ಪ್ರತಿಪಕ್ಷ ಸ್ಥಾನಮಾನವನ್ನು ಹೊಂದಿರುವ ಒಟ್ಟು ಪಕ್ಷಗಳು-ಮೈತ್ರಿಗಳು ಆರರಿಂದ ಎಂಟು. ಆ ಪೈಕಿ ಯೇಶ್ ಅಟಿಡ್, ರಾಷ್ಟ್ರೀಯ ಐಕ್ಯತೆ (National Unity), ಯಿಸ್ರೇಲ್ ಬೈಟೇನು, ಯುನೈಟೆಡ್ ಅರಬ್ ಲಿ, ಹದಶ್-ತಾಲ್, ಲೇಬರ್, ದಿ ಡೆಮೊಕ್ರಾಟ್ಸ್ (ಹಿಂದಿನ ಬ್ಲೂ ಆಂಡ್ ವೈಟ್ ಪಕ್ಷದ ಭಾಗವಾಗಿದ್ದರೂ, ಪ್ರಸ್ತುತ ವಿರೋಧದಲ್ಲಿ ಸ್ಥಾನಪಡೆದಿದೆ.) ಸೇರಿವೆ.
ಇಸ್ರೇಲಿನ ಸಂಸತ್ತು ಒಟ್ಟು 120 ಸ್ಥಾನಗಳನ್ನು ಹೊಂದಿದೆ. 2023ರ ಅಕ್ಟೋಬರ್ ೭ರಂದು ಇಸ್ರೇಲ್ ಮೇಲೆ ಹಮಾಸ್ ಭಯೋತ್ಪಾದಕ ದಾಳಿ ನಡೆಸಿದ ನಂತರ, ಇಸ್ರೇಲ್‌ನ ರಾಜಕೀಯದಲ್ಲಿ ಒಂದು ಪ್ರಮುಖ ಬದಲಾವಣೆ ಕಂಡುಬಂದಿತು. ದೇಶಕ್ಕೆ ಎದುರಾದ ಈ ಭಾರಿ ಬಿಕ್ಕಟ್ಟಿನ ಸಮಯದಲ್ಲಿ, ಅನೇಕ ಪ್ರಮುಖ ವಿರೋಧ ಪಕ್ಷಗಳು ಸರಕಾರದ ಪರ ಗಟ್ಟಿಯಾಗಿ ನಿಂತವು.
ಒಂದು ಸಂದರ್ಭದಲ್ಲಿ ಪ್ರಮುಖ ಪ್ರತಿಪಕ್ಷಗಳು ರಾಷ್ಟ್ರೀಯ ಏಕತಾ ಸರಕಾರ (National Unity Government)ದಲ್ಲಿ ಭಾಗವಹಿಸಿದವು. ಇಸ್ರೇಲಿನ ರಾಜಕೀಯದಲ್ಲಿ ಆಡಳಿತಾರೂಢ ಲಿಕುಡ್ ಪಕ್ಷ ಮತ್ತು ಅದರ ಬಲಪಂಥೀಯ ಒಕ್ಕೂಟದ ವಿರುದ್ಧ ತೀವ್ರ ವಿರೋಧವಿದ್ದರೂ, ಅಕ್ಟೋಬರ್ ೭ರ ದಾಳಿಯು ದೇಶದ ಭದ್ರತೆಯ ವಿಷಯದಲ್ಲಿ ಪಕ್ಷಾತೀತ ಒಗ್ಗಟ್ಟಿಗೆ ಕಾರಣವಾಯಿತು.
ವಿರೋಧ ಪಕ್ಷದ ನಾಯಕರಲ್ಲಿ ಪ್ರಮುಖರಾದ ಬೆನ್ನಿ ಗಾಂಟ್ಜ್ ನೇತೃತ್ವದ ರಾಷ್ಟ್ರೀಯ ಐಕ್ಯತಾ ಪಕ್ಷವು ಬೆಂಜಮಿನ್ ನೆತನ್ಯಾಹು ಅವರ ಸರಕಾರವನ್ನು ಸೇರಿಕೊಂಡಿತು. ಈ ಒಪ್ಪಂದದ ಭಾಗವಾಗಿ, ಒಂದು ಸಣ್ಣ ಯುದ್ಧ ಸಚಿವ ಸಂಪುಟ (War Cabinet)ವನ್ನು ಸ್ಥಾಪಿಸಲಾಯಿತು.
ಇದರಲ್ಲಿ ಪ್ರಧಾನಿ ನೆತನ್ಯಾಹು, ರಕ್ಷಣಾ ಮಂತ್ರಿ ಯೋವ್ ಗ್ಯಾಲಂಟ್ ಮತ್ತು ವಿರೋಧ ಪಕ್ಷದಿಂದ ಬಂದ ಬೆನ್ನಿ ಗಾಂಟ್ಜ್ ಅವರು ಪ್ರಮುಖ ಸದಸ್ಯರಾಗಿದ್ದರು. ಈ ಕ್ರಮದ ಮುಖ್ಯ ಉದ್ದೇಶವೆಂದರೆ, ಹಮಾಸ್ ವಿರುದ್ಧದ ಯುದ್ಧವನ್ನು ಹೆಚ್ಚು ಕೇಂದ್ರೀಕೃತವಾಗಿ ಮತ್ತು ನಿರ್ಣಾಯಕವಾಗಿ ನಡೆಸಲು ಸಾಧ್ಯವಾಗುವಂತೆ, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಂಪೂರ್ಣ ರಾಷ್ಟ್ರೀಯ ಒಮ್ಮತವನ್ನು ಪ್ರದರ್ಶಿಸುವುದಾಗಿತ್ತು.
ಬೆನ್ನಿ ಗಾಂಟ್ಜ್ ಪಕ್ಷವು ಸರಕಾರಕ್ಕೆ ಸೇರಿಕೊಂಡರೂ, ಯಾಯಿರ್ ಲ್ಯಾಪಿಡ್ ನೇತೃತ್ವದ ಪ್ರಮುಖ ವಿರೋಧ ಪಕ್ಷವಾದ ಯೇಶ್ ಅಟಿಡ್ ಪಕ್ಷವು ರಾಷ್ಟ್ರೀಯ ಏಕತಾ ಸರಕಾರವನ್ನು ಸೇರಲು ನಿರಾ ಕರಿಸಿತು. ಲ್ಯಾಪಿಡ್ ಅವರು ಯುದ್ಧಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದರು. ಆದರೆ ಯುದ್ಧ ಸಂಪುಟದಲ್ಲಿ ತಾವು ಭಾಗವಹಿಸುವುದಿಲ್ಲ, ಬದಲಿಗೆ ಪರಿಣಾಮಕಾರಿ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದು ಹೇಳಿದರು.
ವಿರೋಧ ಪಕ್ಷದ ಇದ್ದು ಯುದ್ಧಕ್ಕೆ ಅಗತ್ಯವಾದ ಎಲ್ಲ ಬೆಂಬಲವನ್ನು ನೀಡುವುದಾಗಿ ಮತ್ತು ಯುದ್ಧ ಮುಗಿದ ನಂತರ ರಾಜಕೀಯ ವಿಮರ್ಶೆಯನ್ನು ಮಾಡುವುದಾಗಿ ಅವರ ಪಕ್ಷ ತಿಳಿಸಿತು. ಅರಬ್-ಪ್ರಬಲ ಪಕ್ಷಗಳನ್ನು ಹೊರತುಪಡಿಸಿ, ಬಹುತೇಕ ಎಲ್ಲ ವಿರೋಧ ಪಕ್ಷಗಳೂ ಹಮಾಸ್ ವಿರುದ್ಧದ ಮಿಲಿಟರಿ ಕ್ರಮಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದವು, ಭದ್ರತೆಯ ವಿಷಯದಲ್ಲಿ ದೇಶ ಒಗ್ಗಟ್ಟಾಗಿದೆ ಎಂದು ಜಗತ್ತಿಗೆ ತೋರಿಸಿದವು.
ಒಟ್ಟಾರೆ, ಪ್ರಮುಖ ವಿರೋಧ ಪಕ್ಷದ ನಾಯಕರು ಸರಕಾರದೊಂದಿಗೆ ಯುದ್ಧ ಸಂಪುಟವನ್ನು ರಚಿಸುವ ಮೂಲಕ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದರು. ಇದು ಯುದ್ಧದಂಥ ನಿರ್ಣಾಯಕ ಸಮಯ ದಲ್ಲಿ ಪಕ್ಷಾತೀತ ಬೆಂಬಲವನ್ನು ತೋರಿಸುವ, ಇತಿಹಾಸದಲ್ಲಿನ ಒಂದು ಅಪರೂಪದ ನಿದರ್ಶನ ವಾಗಿದೆ.
ಇಸ್ರೇಲ್‌ಗೆ, ಅಕ್ಟೋಬರ್ 7ರ ದಾಳಿಯು ಕೇವಲ ಗಡಿ ಉಲ್ಲಂಘನೆಯಾಗಿರಲಿಲ್ಲ, ಆದರೆ ಇಡೀ ರಾಷ್ಟ್ರದ ಅಸ್ತಿತ್ವಕ್ಕೆ ನೇರ ಬೆದರಿಕೆ ಮತ್ತು ಇತಿಹಾಸದಲ್ಲಿಯೇ ಅತಿ ದೊಡ್ಡ ಭದ್ರತಾ ವೈಫಲ್ಯ ವಾಗಿತ್ತು. ಇಂಥ ಸಂದರ್ಭದಲ್ಲಿ, ರಾಜಕೀಯ ಭಿನ್ನಾಭಿಪ್ರಾಯಗಳು ಅಪ್ರಸ್ತುತ ಇಂದು ಇಸ್ರೇಲಿ ನಾಯಕರು ಭಾವಿಸಿದರು.
ದೇಶದ ರಕ್ಷಣೆ ವಿಷಯ ಎಂಬುದು ಇಸ್ರೇಲಿಗರಿಗೆ ರಾಜಕೀಯಕ್ಕಿಂತ ದೊಡ್ಡ ವಿಷಯವಾಗುತ್ತದೆ. ವಿರೋಧ ಪಕ್ಷದ ನಾಯಕರು ಸರಕಾರವನ್ನು ಬೆಂಬಲಿಸುವುದು ದೇಶಭಕ್ತಿಯ ಮತ್ತು ಕರ್ತವ್ಯದ ಸಂಕೇತವೆಂದು ಪರಿಗಣಿಸುತ್ತಾರೆ. ಮಾಜಿ ಪ್ರಧಾನಿ ಯಾರು, ಪ್ರಸ್ತುತ ಪ್ರಧಾನಿ ಯಾರು ಎಂಬ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಮಾಜಿ ರಕ್ಷಣಾ ಸಚಿವ ಬೆನ್ನಿ ಗಾಂಟ್ಜ್ ಅವರು ನೆತನ್ಯಾಹು ಅವರೊಂದಿಗೆ ಯುದ್ಧದ ನಿರ್ವಹಣೆಗಾಗಿ ಸೀಮಿತ ಅವಧಿಯ ‘ರಾಷ್ಟ್ರೀಯ ಏಕತಾ ಸಮರ ಸಂಪುಟ’ ಸೇರಿಕೊಂಡಿದ್ದು ಒಂದು ಅಪರೂಪದ ನಡೆ. ರಾಜೀನಾಮೆಗೆ ಆಗ್ರಹಿಸುವ ಬದಲು, ವಿರೋಧ ಪಕ್ಷವು ರಾಷ್ಟ್ರೀಯ ಹಿತಾಸಕ್ತಿಗಾಗಿ ಸಹ-ಆಡಳಿತಕ್ಕೆ ಸಿದ್ಧವಾಯಿತು.
ನಮ್ಮಲ್ಲಿ, ‘ಆಪರೇಷನ್ ಸಿಂಧೂರ’ದ ಸಂದರ್ಭದಲ್ಲಿ ವಿರೋಧ ಪಕ್ಷಗಳು ಸರಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದರೂ, ನಂತರ ರಾಜಕೀಯ ವಿಮರ್ಶೆಯನ್ನು ಬದಿಗಿಡುವುದಿಲ್ಲ. ಬದಲಿಗೆ, ವೈಫಲ್ಯಕ್ಕೆ ರಾಜಕೀಯ ಹೊಣೆಗಾರಿಕೆಯನ್ನು ನಿಗದಿಪಡಿಸಲು, ಪ್ರಧಾನಿ ಅಥವಾ ಸಂಬಂಧಪಟ್ಟ ಸಚಿವರ ರಾಜೀನಾಮೆಗೆ ಒತ್ತಾಯ ಮಾಡುವುದು ಸಾಮಾನ್ಯ.
ಇದು ವಿರೋಧ ಪಕ್ಷದ ಪಾತ್ರವೆಂದು ಅವರು ಪರಿಗಣಿಸುತ್ತಾರೆ. ಭಾರತದಲ್ಲಿ ಪ್ರಮುಖ ವಿರೋಧ ಪಕ್ಷಗಳು ರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲಿ ಆಡಳಿತ ಪಕ್ಷದೊಂದಿಗೆ ಸೇರಿ ಸಮ್ಮಿಶ್ರ ಸರಕಾರ ರಚಿಸಿದ ಉದಾಹರಣೆಗಳು ಇಲ್ಲವೇ ಇಲ್ಲ. ದೇಶದ ಭದ್ರತಾ ವಿಷಯದಲ್ಲಿ ಒಗ್ಗಟ್ಟನ್ನು ತೋರಿಸಿ ದರೂ, ನಂತರ ತಮ್ಮ ವರಸೆಯನ್ನು ಮುಂದುವರಿಸುವುದು ಚಟವಾಗಿ ಬಿಟ್ಟಿದೆ.
ಹಮಾಸ್ ದಾಳಿಯ ಮೊದಲು, ಬೆಂಜಮಿನ್ ನೆತನ್ಯಾಹು ಅವರ ಸರಕಾರವು ವಿವಾದಾತ್ಮಕ ನ್ಯಾಯಾಂಗ ಸುಧಾರಣೆಗಳ ಕಾರಣದಿಂದ ಮತ್ತು ಭ್ರಷ್ಟಾಚಾರದ ಆರೋಪಗಳಿಂದಾಗಿ ದೇಶದಲ್ಲಿ ತೀವ್ರ ವಿರೋಧ ಎದುರಿಸುತ್ತಿತ್ತು. ಆದರೆ ಯಾವಾಗ ಹಮಾಸ್ ದಾಳಿ ಆರಂಭವಾಯಿತೋ, ನೆತನ್ಯಾಹು ಅವರಿಗೆ ಯುದ್ಧವನ್ನು ಸಮರ್ಥವಾಗಿ ಮುನ್ನಡೆಸಲು ರಾಷ್ಟ್ರೀಯ ಬೆಂಬಲದ ಕವಚ ಅತ್ಯಗತ್ಯವಾಗಿತ್ತು.
ಗಾಂಟ್ಜ್ ಅವರಂಥ ವಿರೋಧ ಪಕ್ಷದ ನಾಯಕರು ಸರಕಾರವನ್ನು ಸೇರಿಕೊಳ್ಳುವ ಮೂಲಕ ನೆತನ್ಯಾಹು ಅವರ ವೈಯಕ್ತಿಕ ರಾಜಕೀಯ ಸಮಸ್ಯೆಗಳು ತಾತ್ಕಾಲಿಕವಾಗಿ ಹಿನ್ನೆಲೆಗೆ ಸರಿಯುವಂತೆ ಆಯಿತು. ಇಸ್ರೇಲಿ ಸಾರ್ವಜನಿಕರು ಮತ್ತು ವಿರೋಧ ಪಕ್ಷಗಳು ಅಂತಿಮವಾಗಿ ಭದ್ರತಾ ವೈಫಲ್ಯದ ಬಗ್ಗೆ ನೆತನ್ಯಾಹು ಅವರನ್ನು ಪ್ರಶ್ನಿಸ ಬಹುದು. ಈ ಸಂಬಂಧ ಸಂಸತ್ತಿನಲ್ಲಿ ಜಟಾಪಟಿ ಆಗಬಹುದು. ಆದರೆ ಯುದ್ಧದ ಸಮಯದಲ್ಲಿ ಯಾರೂ ಈ ವಿಷಯವನ್ನು ಪ್ರಸ್ತಾಪಿಸಲೇ ಇಲ್ಲ.
ಯುದ್ಧ ಮುಗಿದ ನಂತರ ರಾಜ್ಯ ಮಟ್ಟದ ಆಯೋಗದಿಂದ ತನಿಖೆ ನಡೆಸಿ, ರಾಜಕೀಯ ಹೊಣೆಗಾರಿಕೆ ನಿಗದಿಪಡಿಸುವ ಸಂಪ್ರದಾಯ ಇಸ್ರೇಲ್‌ನಲ್ಲಿದೆ. ಇಸ್ರೇಲ್‌ನಲ್ಲಿ ‘ಹಮಾಸ್’ ಬಿಕ್ಕಟ್ಟಿನ ಸಂದರ್ಭ ಗಳಲ್ಲಿ, ರಾಷ್ಟ್ರದ ಉಳಿವಿನ ಆದ್ಯತೆಯು ಅಲ್ಲಿನ ನಾಯಕರಿಗೆ ರಾಜಕೀಯ ಲೆಕ್ಕಾಚಾರದ ವಿಷಯ ಆಗುವುದಿಲ್ಲ. ಭಾರತದಲ್ಲಿ, ಇಂಥ ಪರಿಸ್ಥಿತಿಯಲ್ಲೂ ಪ್ರತಿಪಕ್ಷಗಳು ಬೆಂಕಿಯಲ್ಲಿ ಮೈ ಕಾಯಿಸಿ ಕೊಳ್ಳುವುದನ್ನು ಮರೆಯುವುದಿಲ್ಲ.
ಜೆರುಸಲೆಮ್ ಕಲ್ಲು
ಮೊದಲ ಬಾರಿಗೆ ಜೆರುಸಲೆಮ್ ನಗರಕ್ಕೆ ಭೇಟಿಯಿತ್ತವರಿಗೆ ಒಂದು ಸಂಗತಿ ಗಮನಕ್ಕೆ ಬರದೇ ಹೋಗುವುದಿಲ್ಲ. ಅದೇನೆಂದರೆ, ಎಲ್ಲ ಕಟ್ಟಡಗಳೂ ಒಂದೇ ರೀತಿಯಾಗಿ ಏಕೆ ಕಾಣುತ್ತವೆ? ಎಲ್ಲ ಕಟ್ಟಡಗಳ ನಿರ್ಮಾಣದಲ್ಲೂ ಒಂದೇ ರೀತಿಯ ಕಲ್ಲನ್ನೇಕೆ ಬಳಸಿದ್ದಾರೆ? ಜೆರುಸಲೆಮ್‌ಗೆ ಅದರ ವಿಶಿಷ್ಟ, ಐತಿಹಾಸಿಕ ಮತ್ತು ದೈವಿಕ ನೋಟವನ್ನು ನೀಡುವ ಏಕೈಕ ಅಂಶವೆಂದರೆ, ನಗರದ ಪ್ರತಿ ಕಟ್ಟಡದ ಮೇಲೆ ಸ್ಥಳೀಯ ಸುಣ್ಣದ ಕಲ್ಲನ್ನು ( Limestone) ಕಡ್ಡಾಯವಾಗಿ ಬಳಸುವುದು. ಇದನ್ನು (The Jerusalem Stone Mandate) ಎಂದು ಕರೆಯುತ್ತಾರೆ.
ಹಾಗಾದರೆ ಈ ಜೆರುಸಲೆಮ್ ಕಲ್ಲು ಎಂದರೇನು?
‘ಜೆರುಸಲೆಮ್ ಕಲ್ಲು’ ಎಂಬುದು ಒಂದು ನಿರ್ದಿಷ್ಟ ಕಲ್ಲಿನ ಪ್ರಕಾರವಲ್ಲ. ಇದು ವಾಸ್ತವವಾಗಿ ಜೆರುಸಲೆಮ್ ಪ್ರದೇಶ ಮತ್ತು ಜೂಡಿಯನ್ ಬೆಟ್ಟಗಳ ಸುತ್ತಮುತ್ತ ಹೇರಳವಾಗಿ ಕಂಡುಬರುವ ವಿವಿಧ ರೀತಿಯ ತಿಳಿ ಬಣ್ಣದ ಸುಣ್ಣದ ಕಲ್ಲು, ಡಾಲೋಮೈಟ್ ಮತ್ತು ಡಾಲೋಮಿಟಿಕ್ ಸುಣ್ಣದ ಕಲ್ಲುಗಳ ಒಂದು ಸಾಮಾನ್ಯ ಹೆಸರು. ಈ ಕಲ್ಲುಗಳು ಬಿಳಿ, ತಿಳಿ ಹಳದಿ, ಗುಲಾಬಿ ಮತ್ತು ಕೇಸರಿ- ಕಂದು ಬಣ್ಣಗಳಲ್ಲಿ ಕಂಡುಬರುತ್ತವೆ.
ಸೂರ್ಯ ಮುಳುಗುವಾಗ, ಈ ತಿಳಿ ಬಣ್ಣಗಳು ಸುವರ್ಣ ಅಥವಾ ಚಿನ್ನದ ಛಾಯೆಯನ್ನು ಪ್ರತಿ-ಲಿಸುತ್ತವೆ. ಈ ಕಾರಣಕ್ಕಾಗಿಯೇ ಜೆರುಸಲೆಮ್‌ಗೆ ‘ಚಿನ್ನದ ಜೆರುಸಲೆಮ್ʼ ಎಂಬ ಅಂಕಿತನಾಮ ಬಂದಿದೆ. ಈ ಕಲ್ಲು ಸಾವಿರಾರು ವರ್ಷಗಳಿಂದ, ಬೈಬಲ್‌ನ ಕಾಲದಿಂದಲೂ ಜೆರುಸಲೆಮ್‌ನಲ್ಲಿ ನಿರ್ಮಾಣಕ್ಕೆ ಬಳಕೆಯಾಗುತ್ತಿದೆ.
ಪಶ್ಚಿಮ ಗೋಡೆ ( Western Wall), ಹಳೆಯ ನಗರದ ಗೋಡೆಗಳು ಮತ್ತು ದೇವಾಲಯದ ಸಂಕೀರ್ಣ ದಂಥ ಪ್ರಸಿದ್ಧ ಪ್ರಾಚೀನ ರಚನೆಗಳು ಈ ಕಲ್ಲಿನಿಂದಲೇ ನಿರ್ಮಾಣವಾಗಿವೆ. ಎಲ್ಲ ಸಾರ್ವಜನಿಕ ಕಟ್ಟಡಗಳಿಗೆ ಜೆರುಸಲೆಮ್ ಕಲ್ಲನ್ನೇ ಬಳಸಬೇಕು ಎಂಬ ನಿಯಮವನ್ನು ಕಡ್ಡಾಯ ಗೊಳಿಸಲಾಗಿದೆ. ಈ ನಿಯಮವು ಆಧುನಿಕ ನಗರ ಯೋಜನೆಯ ಇತಿಹಾಸದಲ್ಲಿ ಒಂದು ವಿಶಿಷ್ಟ ಅಧ್ಯಾಯವೇ ಸರಿ.
ಈ ಕಟ್ಟಳೆಯು ೨೦ನೇ ಶತಮಾನದ ಆರಂಭದಲ್ಲಿ, ಬ್ರಿಟಿಷ್ ಆಳ್ವಿಕೆ ಅವಧಿಯಲ್ಲಿ ಜಾರಿಗೆ ಬಂದಿತು. ೧೯೧೭ರಲ್ಲಿ ಒಟ್ಟೋಮನ್ ಸಾಮ್ರಾಜ್ಯದಿಂದ ನಗರವನ್ನು ವಶಪಡಿಸಿಕೊಂಡ ನಂತರ, ಮೊದಲ ಬ್ರಿಟಿಷ್ ಮಿಲಿಟರಿ ಗವರ್ನರ್ ಆಗಿದ್ದ ಸರ್ ರೊನಾಲ್ಡ ಸ್ಟೋರ್ಸ್ ಆಡಳಿತದಲ್ಲಿ ಈ ನಿಯಮ ವನ್ನು ಅನುಷ್ಠಾನಕ್ಕೆ ತರಲಾಯಿತು. ಅಲೆಕ್ಸಾಂಡ್ರಿಯಾದ ನಗರ ಎಂಜಿನಿಯರ್ ಆಗಿದ್ದ ಸರ್ ವಿಲಿಯಂ ಮೆಕ್ಲೀನ್ 1918ರಲ್ಲಿ ರೂಪಿಸಿದ ನಗರದ ಮಾಸ್ಟರ್ ಪ್ಲಾನ್‌ನ ಭಾಗವಾಗಿ ಈ ಕಲ್ಲಿನ ಬಳಕೆಯನ್ನು ಕಡ್ಡಾಯಗೊಳಿಸಲಾಯಿತು.
ಬ್ರಿಟಿಷ್ ಅಧಿಕಾರಿಗಳ ಪ್ರಮುಖ ಉದ್ದೇಶವು ನಗರದ ಐತಿಹಾಸಿಕ ಮತ್ತು ದೈವಿಕ ನೋಟವನ್ನು ಸಂರಕ್ಷಿಸುವುದಾಗಿತ್ತು. ಕೈಗಾರಿಕಾ ಕ್ರಾಂತಿಯ ನಂತರ ಜಗತ್ತಿನಾದ್ಯಂತ ಆಧುನಿಕ ಕಾಂಕ್ರೀಟ್ ಕಟ್ಟಡಗಳು ನಿರ್ಮಾಣವಾಗುತ್ತಿದ್ದ ಸಮಯದಲ್ಲಿ, ಜೆರುಸಲೆಮ್ ತನ್ನ ಶಾಶ್ವತ ಪುರಾತನ ಸೌಂದರ್ಯವನ್ನು ಕಾಯ್ದುಕೊಳ್ಳಬೇಕು ಎಂಬುದು ಅವರ ಆಶಯವಾಗಿತ್ತು. ಈ ನಿಯಮ ದಿಂದಾಗಿ ನಗರದ ವಾಸ್ತುಶಿಲ್ಪದಲ್ಲಿ ಏಕರೂಪತೆ (Visual Harmony) ಸೃಷ್ಟಿಯಾಯಿತು.
ಇಂದಿಗೂ, ಜೆರುಸಲೆಮ್ ನಗರಸಭೆಯು ಈ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಹಳೆಯ ನಗರದ ಸುತ್ತಮುತ್ತಲಿನ ಆಧುನಿಕ ವಿಸ್ತರಣೆಗಳಲ್ಲಿ ನಿರ್ಮಿಸಲಾಗುವ ವಸತಿ ಕಟ್ಟಡಗಳು, ಕಚೇರಿ ಕಟ್ಟಡಗಳು ಮತ್ತು ಎತ್ತರದ ಗಗನಚುಂಬಿ ಕಟ್ಟಡಗಳ ಹೊರಭಾಗವನ್ನು ಸಹ ಕಡ್ಡಾಯವಾಗಿ ಸ್ಥಳೀಯ ಕಲ್ಲಿನಿಂದ ಹೊದಿಸಬೇಕು.
ಇದರಿಂದ ನಗರದ ಮೇಲೆ ಆದ ಪರಿಣಾಮಗಳೇನು? ಇದು ಜೆರುಸಲೆಮ್‌ಗೆ ಅದರ ಐಕಾನಿಕ್ ‘ಚಿನ್ನದ ನಗರ’ ದೃಶ್ಯವನ್ನು ನೀಡಿದೆ. ಸೂರ್ಯನ ಬೆಳಕು ಮತ್ತು ನೆರಳಿನ ಆಟಕ್ಕೆ ಅನುಗುಣವಾಗಿ ನಗರದ ಬಣ್ಣವು ದಿನವಿಡೀ ಬದಲಾಗುತ್ತಿರುತ್ತದೆ. ಇದು ಪ್ರಪಂಚದ ಬೇರೆ ಯಾವುದೇ ನಗರದಲ್ಲಿ ಕಾಣಸಿಗದ ಸೌಂದರ್ಯ. ಈ ನಿಯಮವು ಆಧುನಿಕ ಕಟ್ಟಡಗಳನ್ನು ಸಹ ಪ್ರಾಚೀನ ಸಂಪ್ರದಾಯ ದೊಂದಿಗೆ ಮತ್ತು ಸುತ್ತಮುತ್ತಲಿನ ಭೂಪ್ರದೇಶದೊಂದಿಗೆ ವಿಲೀನಗೊಳಿಸಲು ಸಹಾಯ ಮಾಡುತ್ತದೆ.
ಹೊಸ ಮತ್ತು ಹಳೆಯ ಕಟ್ಟಡಗಳ ನಡುವಿನ ವ್ಯತ್ಯಾಸವನ್ನು ಇದು ಕಡಿಮೆ ಮಾಡುತ್ತದೆ. ಸ್ಥಳೀಯ ವಾಗಿ ಸುಲಭವಾಗಿ ದೊರೆಯುವ ಕಲ್ಲನ್ನು ಬಳಸುವುದರಿಂದ ದೂರದ ಸ್ಥಳಗಳಿಂದ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುವ ವೆಚ್ಚ ಮತ್ತು ಪರಿಸರ ಪರಿಣಾಮ ಕಡಿಮೆಯಾಗುತ್ತದೆ. 1947-1949ರ ಪ್ಯಾಲೆಸ್ತೀನ್ ಯುದ್ಧದ ಸಮಯದಲ್ಲಿ, ಹೊಸ ಕಟ್ಟಡಗಳಲ್ಲಿ ಕಡ್ಡಾಯವಾಗಿ ಕಲ್ಲನ್ನು ಬಳಸಬೇಕು ಎಂಬ ನಿಯಮದಿಂದ ಶೆಲ್ಲಿಂಗ್‌ನಿಂದ ಉಂಟಾದ ಹಾನಿಯನ್ನು ಮಿತಿಗೊಳಿಸಲು ಸಹಾಯ ಮಾಡಿತು.
ಒಟ್ಟಾರೆ, ಜೆರುಸಲೆಮ್‌ನಲ್ಲಿರುವ ಜೆರುಸಲೆಮ್ ಕಲ್ಲನ್ನೇ ಬಳಸಬೇಕೆಂಬ ಕಡ್ಡಾಯ ನಿಯಮವು ಕೇವಲ ನಿರ್ಮಾಣ ನಿಯಮಕ್ಕಿಂತ ಮಿಗಿಲಾದ ಅರ್ಥ ಮತ್ತು ಪ್ರಾಮುಖ್ಯವನ್ನು ಹೊಂದಿದೆ. ಇದು ನಗರದ ಸಾಂಸ್ಕೃತಿಕ ಗುರುತು, ಐತಿಹಾಸಿಕ ಸಂರಕ್ಷಣೆ ಮತ್ತು ದೈವಿಕ ಸೌಂದರ್ಯವನ್ನು ಜಾಗೃತ ವಾಗಿ ಕಾಯ್ದುಕೊಳ್ಳುವ ಒಂದು ಬದ್ಧತೆಯಾಗಿದೆ. ಈ ಕಾನೂನಿನ ಕಾರಣದಿಂದಾಗಿ, ನಗರವು ಇಂದಿಗೂ ಒಂದು ಪ್ರಾಚೀನ ಮತ್ತು ಪವಿತ್ರ ಸ್ಥಳದಂತೆ ಭಾಸವಾಗುತ್ತದೆ. ಆಧುನಿಕತೆಯ ಒತ್ತಡಗಳ ನಡುವೆಯೂ ತನ್ನ ಮೂಲರೂಪವನ್ನು ಅದು ಉಳಿಸಿಕೊಂಡಿದೆ.