ಲೋಕಮತ
ಕರ್ನಾಟಕದಲ್ಲಿ ಪ್ರತೀ ವರ್ಷ ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಡಿಗ್ರಿ ಮುಗಿಸಿ ಹೊರಡುತ್ತಾರೆ. ಸಾವಿರಾರು ವಿದ್ಯಾರ್ಥಿಗಳು ಎಂಬಿಬಿಎಸ್ ಡಿಗ್ರಿಯೊಂದಿಗೆ ಹೊರ ಬರುತ್ತಾರೆ. ದೇಶದ ಲೆಕ್ಕಾಚಾರ ತೆಗೆದುಕೊಂಡರೆ ಪ್ರತೀ ವರ್ಷ ಕೋಟಿ ಲೆಕ್ಕದಲ್ಲಿ ಪದವೀಧರರನ್ನು ಸೃಷ್ಟಿ ಮಾಡುತ್ತಿದ್ದೇವೆ. ಇವರಲ್ಲಿ ಬಹುತೇಕರು ಯಾವುದಾದರೊಂದು ಸಂಸ್ಥೆಯಲ್ಲಿ ನೌಕರಿ ಗಿಟ್ಟಿಸಿ ತಮ್ಮ ಬದುಕಿನ ದಾರಿಯನ್ನು ಕಂಡುಕೊಳ್ಳುತ್ತಾರೆ. ಇಂದಿನ ಅಂಕಣದ ಸಾಧಕ ವ್ಯಕ್ತಿಯೂ 70ರ ದಶಕದಲ್ಲಿ ಹೀಗೆ ಎಂಜಿನಿಯರಿಂಗ್ ಮುಗಿಸಿ ಹೊರ ಬಂದವರು.
ಎಲ್ಲರಂತಾಗಿದ್ದರೆ ಇವರ ಬದುಕೂ ಹೀಗೆಯೇ ಸಾಗುತ್ತಿತ್ತೇನೋ ? ಆದರೆ ಎಂಜಿನಿಯರಿಂಗ್ ಮುಗಿಸಿ ನೌಕರಿ ತಲಾಶೆಯಲ್ಲಿದ್ದ ಮಗನನ್ನು ಕರೆದ ತಂದೆ, ‘ನೀನು ಊರಲ್ಲಿದ್ದುಕೊಂಡೇ ಕೆಲಸ ಮಾಡು’ ಎಂದರು. ದೊಡ್ಡ ಕಂಪನಿ ಸೇರುವ ಹುರುಪಿನಲ್ಲಿದ್ದ ಮಗ ತಂದೆಯ ಮಾತು ಮೀರಲಾಗದೆ, ಅತ್ತ ಪೇಟೆಯೂ ಅಲ್ಲದ, ಇತ್ತ ಹಳ್ಳಿಯೂ ಅಲ್ಲದ ಸುಳ್ಯದಂತಹ ಊರಿನಲ್ಲಿ ತಮ್ಮದೇ ಎಂಜಿನಿಯ ರಿಂಗ್ ವರ್ಕ್ ಶಾಪ್ ಆರಂಭಿಸಿದರು.
ಹಳ್ಳಿಗರಿಗೆ ಬೇಕಾದ ಮನೆ ಗೇಟ್ ನಿರ್ಮಾಣದಂತಹ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಲೇ ರೈತರಿಗೆ ಉಪಯೋಗವಾಗುವಂತಹ ಸಲಕರಣೆಗಳನ್ನು ಮಾಡಿಕೊಟ್ಟರು. ಪರಿಚಿತರೊಬ್ಬರು ಒಮ್ಮೆ ರಾಮ ಸೇತು ಮಾದರಿಯಲ್ಲಿ ನೀವೇಕೆ ಸೇತುವೆ ನಿರ್ಮಿಸಬಾರದು ಎಂದು ಸವಾಲು ಹಾಕಿದರು. ತಮಾಷೆಯ ಮಾತನ್ನು ಗಂಭೀರವಾಗಿ ತೆಗೆದುಕೊಂಡ ಗಿರೀಶರು, ತಾವು ಹುಟ್ಟಿ ಬೆಳೆದ ಅರಂಬೂರಿ ನಲ್ಲಿಯೇ ಪಯಸ್ವಿನಿ ನದಿಗೆ ತೂಗು ಸೇತುವೆ ಕಟ್ಟಲು ಹೊರಟರು. ಇದರ ಖರ್ಚಿನಲ್ಲಿ ಇವರ ಪಾಲೇ ಹೆಚ್ಚಿತ್ತು.
ಇದನ್ನೂ ಓದಿ: Lokesh Kayarga Column: ಸ್ಟೆತಸ್ಕೋಪ್ ಮತ್ತು ಲೇಖನಿಯ ನೈತಿಕ ತೊಳಲಾಟ
ತೂಗು ಸೇತುವೆಯಲ್ಲಿ ಬೈಕ್‌ನಲ್ಲಿ ಸಂಚರಿಸುವ ಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾದವು. ಇದನ್ನು ಕಂಡವರೊಬ್ಬರು ಕುಶಾಲನಗರದ ನಿಸರ್ಗಧಾಮದಲ್ಲಿ ತೂಗುಸೇತುವೆ ಪ್ರಸ್ತಾಪ ಮುಂದಿಟ್ಟರು. ಅದೂ ಯಶಸ್ವಿಯಾದಾಗ ರಾಜ್ಯದ ಮೂಲೆ ಮೂಲೆಗಳಿಂದ ತೂಗು ಸೇತುವೆ ನಿರ್ಮಾಣದ ಬೇಡಿಕೆ ಗಳು ಬರಲಾರಂಭಿಸಿದವು. ಬೇರೆಯವಾಗಿದ್ದರೆ ಇದನ್ನೇ ಒಂದು ಉದ್ಯಮವನ್ನಾಗಿ ಮಾಡಿಕೊಂಡು ದುಡ್ಡು ಮಾಡುತ್ತಿದ್ದರು. ಆದರೆ ಈ ಎಂಜಿನಿಯರ್‌ಗೆ ಜನರ ಸಂಕಷ್ಟ ನಿವಾರಣೆಯೇ ಮೊದಲ ಆದ್ಯತೆಯಾಗಿತ್ತು. 1989ರಲ್ಲಿ ಇವರು ಹುಟ್ಟೂರಲ್ಲಿ ಕಟ್ಟಿದ ಸೇತುವೆ ಇಂದಿಗೂ ಬಳಕೆ ಯಲ್ಲಿದ್ದು, ಗಿರೀಶರ ಎಂಜಿನಿಯರಿಂಗ್ ಕೌಶಲ್ಯಕ್ಕೆ ಸಾಕ್ಷಿಯಾಗಿ ನಿಂತಿದೆ.
ಅಲ್ಲಿದ ಮುಂದಕ್ಕೆ ಗಿರೀಶ್ ಭಾರದ್ವಾಜ್ ಹೆಸರಿನ ಈ ಎಂಜಿನಿಯರ್ ಹೆಸರು ‘ತೂಗುಸೇತುವೆ ಗಿರೀಶರು’ ಎಂದಾಯಿತು. ಮುಂದೆ ಕರ್ನಾಟಕ ಮಾತ್ರವಲ್ಲ ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ಒರಿಸ್ಸಾ ಮುಂತಾದ ಭಾರತದ ಹಲವು ರಾಜ್ಯಗಳಲ್ಲೂ 160ಕ್ಕೂ ಹೆಚ್ಚು ತೂಗು ಸೇತುವೆ ನಿರ್ಮಿಸಿ ಅಲ್ಲಿನ ಜನರ ಬದುಕನ್ನು ಬೆಸೆದರು. ಉಕ್ಕಿ ಹರಿಯುವ ನದಿಗಳನ್ನು ದಾಟಲು ಹೋಗಿ ನೀರು ಪಾಲಾಗುವವರ ಸಂಖ್ಯೆ ಇಳಿಯಿತು. ಸುತ್ತು ಬಳಸಿ ಶಾಲೆ, ಅಂಗಡಿ, ಬ್ಯಾಂಕ್, ಅಂಚೆ ಎಂದು ಹತ್ತಾರು ಕಿಲೋ ಮೀಟರ್ ಸುತ್ತಿ ಬರುತ್ತಿದ್ದವರಿಗೆ ಇವರ ತೂಗುಸೇತುವೆ ಜೀವನಾಡಿಯಾಯಿತು.
ಒರಿಸ್ಸಾದ ನಕ್ಸಲ್ ಪೀಡಿತ ಪ್ರದೇಶದಲ್ಲಿ ಸುಮಾರು ಒಂದೂವರೆ ಕಿಲೋ ಮೀಟರ್‌ನಷ್ಟು ಉದ್ದದ ತೂಗು ಸೇತುವೆ ನಿರ್ಮಿಸಿದಾಗ ನಕ್ಸಲರು ಬಂದೂಕು ಕೆಳಗಿಳಿಸಿ ಗಿರೀಶರಿಗೆ ನಮಸ್ಕರಿಸಿದ್ದರು. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇವರ ಕೌಶಲ್ಯ ಮತ್ತು ಕಾಯಕ ನಿಷ್ಠೆ ಕಂಡು, ಕಾಲಿಗೆರಗಿದ್ದರು.
ಗಿರೀಶರು ಕಟ್ಟಿಕೊಟ್ಟ ಸೇತುವೆಗೆ ಹತ್ತಾರು ಕೋಟಿ ರು.ಗಳ ಬಂಡವಾಳ ಬೇಕಿರಲಿಲ್ಲ. ಹೆಚ್ಚು ಉದ್ದ ವಿರುವ ಕೆಲವೇ ಸೇತುವೆಗಳಿಗೆ ಮಾತ್ರ ಕೋಟಿ ಮೇಲೆ ಖರ್ಚಾಗಿತ್ತು. ಬಹುತೇಕ ಸೇತುವೆಗಳ ಖರ್ಚನ್ನು ಆಯಾ ಹಳ್ಳಿಯ ಜನರೇ ಭರಿಸಿದ್ದರು. ಕೆಲವೊಮ್ಮೆ ಹಣ ಕಡಿಮೆ ಬಿದ್ದಾಗ ಗಿರೀಶ್ ಅವರು ತಾವೇ ಕೈಯಿಂದ ಹಣ ಭರಿಸಿ ಸೇತುವೆ ಕಾರ್ಯ ಪೂರ್ಣಗೊಳಿಸುತ್ತಿದ್ದರು. ಸೇತುವೆ ನಿರ್ಮಾಣಕ್ಕೆ ಟೆಂಡರ್ ಕರೆಯುವ ಮುನ್ನವೇ ಕೋಟಿ ಲೆಕ್ಕದಲ್ಲಿ ಹಣ ನುಂಗುವವರ ಮಧ್ಯೆ ಗಿರೀಶ್ ಅವರಿಗೆ ಕೆಲಸವೊಂದೇ ಆದ್ಯತೆಯಾಗಿತ್ತು. ಹಳ್ಳಿ ಜನರ ಮುಖದಲ್ಲಿ ಮೂಡುತ್ತಿದ್ದ ಮಂದಹಾಸವೇ ಅತಿ ದೊಡ್ಡ ಸಂಭಾವನೆಯಾಗಿತ್ತು.
ಈ ಕಾಯಕವೇ ಇವರನ್ನು ರಾಷ್ಟ್ರಪತಿ ಭವನದವರೆಗೆ ಕೊಂಡೊಯ್ಯಿತು. 2017ರಲ್ಲಿ ಕೇಂದ್ರ ಸರಕಾರ ಇವರಿಗೆ ಪದ್ಮಶ್ರೀ ಪುರಸ್ಕಾರವಿತ್ತು ಗೌರವಿಸಿತು. ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಗೌರವ ಡಾಕ್ಟರೇಟ್ ನೀಡಿ ಇವರ ಸೇವೆಯನ್ನು ಸ್ಮರಿಸುವ ಕೆಲಸ ಮಾಡಿತು. ಗಿರೀಶ್ ಭಾರದ್ವಾಜ್ ಇಂದು (ಜುಲೈ 7) ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಆದರೆ ಅವರು ಕಟ್ಟಿದ ಸೇತುವೆಯಲ್ಲಿ ಓಡಾಡುವವರೆಲ್ಲರೂ ಗಿರೀಶರನ್ನು ಸದಾ ಸ್ಮರಿಸುತ್ತಲೇ ಇರುತ್ತಾರೆ. ಹುಟ್ಟಿದವರೆಲ್ಲರೂ ಒಂದು ದಿನ ಇಲ್ಲಿಂದ ಹೊರಡಲೇಬೇಕು. ಆದರೆ ಅಷ್ಟರೊಳಗೆ ನಾವು ಏನು ಮಾಡಬಹುದೆನ್ನುವುದಷ್ಟೇ ಮುಖ್ಯ.
ನೆಲಮೂಲದ ಸಾಧಕರೆಲ್ಲಿ ?
ಗಿರೀಶರ ನಿರ್ಗಮನ ಬೇಸರ ತರಿಸುವುದು ಏಕೆಂದರೆ, ಇನ್ನೊಬ್ಬ ಗಿರೀಶರು ಸಿಗಬಹುದೇ ಎನ್ನುವ ವಿಚಾರದಲ್ಲಿ. ತಾವು ಕಲಿತ ವಿದ್ಯೆಯನ್ನು ತಾವು ಹುಟ್ಟಿ ಬೆಳೆದ ಊರಿನ ಸಮಸ್ಯೆಗಳಿಗೆ ಪರಿಹಾರ ವಾಗಿ ಬಳಸಬಹುದೆಂದು ನಮ್ಮ ಹೊಸ ಪೀಳಿಗೆಯ ಎಂಜಿನಿಯರ್‌ಗಳ ಪೈಕಿ ಎಷ್ಟು ಜನ ಯೋಚಿಸ ಬಲ್ಲರು ?. ಪ್ರತಿಷ್ಠಿತ ಕಾರ್ಪೋರೇಟ್ ಕಂಪನಿಗಳ ಅತ್ಯಂತ ಕ್ಲಿಷ್ಟ ಪ್ರಾಜೆಕ್ಟ್‌ಗಳನ್ನು ಸಲೀಸಾಗಿ ಮಾಡಿ ಕೊಡುವ ನಮ್ಮ ಎಂಜಿನಿಯರ್ ಪ್ರತಿಭೆಗಳು, ನೆಲ ಮೂಲದ ಸಮಸ್ಯೆಗಳಿಗೂ ಇಷ್ಟೇ ಸುಲಭದ ಪರಿಹಾರವೊಂದನ್ನು ಹುಡುಕಿ ಕೊಟ್ಟರೆ ನಮ್ಮ ದೇಶ ಪ್ರಗತಿ ಪಥ ಹೇಗಿರಬಹುದು ಯೋಚಿಸಿ.
ದುರದೃಷ್ಟವಶಾತ್ ನಮ್ಮ ನಿತ್ಯದ ಬೇಕು ಬೇಡಗಳಿಗೆ ನಮ್ಮ ದೊಡ್ಡ ದೊಡ್ಡ ಎಂಜಿನಿಯರ್‌ಗಳು ಎಂದೂ ಬೆಂಗಾವಲಾಗಲಿಲ್ಲ. ಕನ್ನಡವನ್ನು ಕಂಪ್ಯೂಟರ್ ಸ್ನೇಹಿ ಭಾಷೆಯಾಗಿ ಪರಿವರ್ತಿಸುವ ಆರಂಭಿಕ ಕೆಲಸವನ್ನೇ ತೆಗೆದುಕೊಳ್ಳಿ. 80ರ ದಶಕದಲ್ಲಿ ಕರ್ನಾಟಕ ಸರಕಾರವಾಗಲಿ, ಕನ್ನಡಿಗರೇ ಕಟ್ಟಿ ಬೆಳೆಸಿದ ಅಂತಾರಾಷ್ಟ್ರೀಯ ಮಟ್ಟದ ಸಾಫ್ಟ್ ವೇರ್ ಕಂಪನಿಗಳಾಗಲಿ ಕನ್ನಡ ಫಾಂಟ್ ಮತ್ತು ಕೀಲಿ ಮಣೆ ವಿನ್ಯಾಸದ ಬಗ್ಗೆ ಯೋಚಿಸಲಿಲ್ಲ. ಆದರೆ ಕನ್ನಡ ಕೀಲಿ ಮಣೆಯನ್ನು ಅಭಿವೃದ್ಧಿ ಪಡಿಸಿದ್ದಲ್ಲದೆ, ಇದಕ್ಕೆ ಸೂಕ್ತವಾದ ಫಾಂಟ್ ಮಾಡಿಕೊಟ್ಟಿದ್ದು ಡಾ. ಕೆ.ಪಿ. ರಾವ್ ಎಂಬ ಸಾಧಕ. ಹಲವು ವರ್ಷಗಳ ಬಳಿಕ ಕರ್ನಾಟಕ ಸರಕಾರವು ಕೆ.ಪಿ.ರಾವ್ ಅವರು ಅಭಿವೃದ್ಧಿಪಡಿಸಿದ ‘ಕೀ ಬೋರ್ಡ್’ ಅನ್ನು ಅಧಿಕೃತ ಕೀ ಬೋರ್ಡ್ ಎಂದು ಮಾನ್ಯತೆ ನೀಡಿತು.
ಉಡುಪಿ ಮೂಲದ ಕೆ.ಪಿ.ರಾವ್ ಅವರು ರಸಾಯನ ಶಾಸ್ತ್ರದಂತಹ ಮೂಲ ವಿಜ್ಞಾನ ಓದಿದವರು. ಕಂಪ್ಯೂಟರ್, ಮುದ್ರಣ ತಂತ್ರಜ್ಞಾನವನ್ನು ನಂತರ ಕರಗತ ಮಾಡಿಕೊಂಡರು. ನಿವೃತ್ತಿಯ ಅಂಚಿನಲ್ಲಿದ್ದಾಗ ಕಂಪ್ಯೂಟರ್ ಸಂವಾದಿ ಭಾಷೆಯಾಗಿ ಕನ್ನಡವನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯನ್ನು ಮನಗಂಡು ಈ ಕಾರ‌್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕೊನೆಯಲ್ಲಿ ಅವರೇ ಕನ್ನಡ ಕೀಲಿ ಮಣೆಯ ರೂವಾರಿಯಾದರು. ನಾಡೋಜ ಕೆ.ಪಿ. ರಾವ್ ಅವರು ಅಂದು ಸಕಾಲಕ್ಕೆ ಈ ಕೆಲಸ ಮಾಡಿದ್ದರಿಂದ ಕಂಪ್ಯೂಟರ್ ಯುಗದೊಂದಿಗೆ ನಮ್ಮ ಭಾಷೆಯೂ ದಿಟ್ಟ ಹೆಜ್ಜೆ ಇಡುವಂತಾಯಿತು.
ಮಿಲ್ಕ್ ಮಾಸ್ಟರ್
ದಶಕಗಳ ಹಿಂದಿನ ಮಾತು. ಗಿರೀಶ್ ಅವರದ್ದೇ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಚಾರ್ವಾಕ ಎಂಬಲ್ಲಿ ರಾಘವ ಗೌಡ ಎಂಬ ಹೈಸ್ಕೂಲ್ ಅಧ್ಯಾಪಕರಿದ್ದರು. ಶಿಕ್ಷಣ ವೃತ್ತಿಯ ಜತೆಗೆ ಕೃಷಿ, ಹೈನುಗಾರಿಕೆ ಯಲ್ಲಿ ತೊಡಗಿಸಿಕೊಂಡಿದ್ದ ಅವರಿಗೆ, ಬೆಳಿಗ್ಗೆ ಎದ್ದು ಮೂರ್ನಾಲ್ಕು ದನಗಳ ಹಾಲು ಕರೆಯಲು ಎಷ್ಟು ಸಮಯ ಬೇಕಾಗುತ್ತದೆ ಎಂಬ ಅರಿವಿತ್ತು. ಹಾಲು ಕರೆಯಲು ಮೆಷಿನ್ ಇರುತ್ತಿದ್ದರೆ ಎಂದ ವರು ಆಗಾಗ ಯೋಚಿಸುತ್ತಿದ್ದರು. ಕೆಲವು ವರ್ಕ್ ಶಾಪ್‌ನವರ ಬಳಿ ಹಾಲು ಕರೆಯಲು ಮೆಷಿನ್ ಮಾಡಿಕೊಡಬಹುದೇ ಎಂದು ಕೇಳಿದಾಗ ಅವರು ಲೇವಡಿಗೊಳಗಾಗಿದ್ದರು. ಮುಂದೊಂದು ದಿನ ಇದೇ ಮೇಷ್ಟ್ರು ತಮ್ಮದೇ ಚಿಂತನೆಯಲ್ಲಿ ವರ್ಕ್ ಶಾಪ್‌ನವರ ನೆರವು ಪಡೆದು ಯಂತ್ರ ರೂಪಿಸಿಯೇ ಬಿಟ್ಟರು. ಜಾನುವಾರುಗಳ ಕೆಚ್ಚಲಿಗೆ ಒಂದಿನಿತೂ ನೋವಾಗದ ಹಾಗೆ ರಬ್ಬರ್ ಹಿಡಿತವಿರುವ ಹಾಲು ಕರೆಯುವ ಸ್ಟೀಲ್ ಯಂತ್ರ ಅಂದು ದೇಶವ್ಯಾಪಿ ಸದ್ದಾಯಿತು.
2005ರಲ್ಲಿ ದೇಶದ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಪ್ರಶಸ್ತಿ ರಾಘವ ಗೌಡರನ್ನು ಹುಡುಕಿಕೊಂಡು ಬಂತು. ರಾಷ್ಟ್ರಪತಿ ಕೈಯಲ್ಲಿ ಪ್ರಶಸ್ತಿ ಪಡೆಯುವ ವೇಳೆಗೆ ಅವರು ಅಧ್ಯಾಪಕ ವೃತ್ತಿಯಿಂದ ನಿವೃತ್ತರಾಗಿದ್ದರು. ಆದರೆ ಸಂಶೋಧನೆಯಲ್ಲಿ ಸಕ್ರಿಯರಾಗಿದ್ದರು. ರಾಘವ ಗೌಡರು ಇಂದು ನಮ್ಮ ಜತೆಗಿಲ್ಲ. ಆದರೆ ದೇಶಾ ದ್ಯಂತ ನೂರಾರು ಕಂಪನಿಗಳು ರಾಘವ ಗೌಡರ ಸಂಶೋಧನೆಯ ಹಾಲು ಕರೆಯವ ಸಾಧನವನ್ನು ತಯಾರಿಸುತ್ತಿವೆ. ದೇಶದ ಕೋಟ್ಯಂತರ ರೈತರು ಇದನ್ನು ಬಳಸುತ್ತಿದ್ದಾರೆ.
ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ ಮತ್ತು ನಾನಾ ಬೆಳೆಗಳ ಹೆಸರಿನಲ್ಲಿ ಸ್ಥಾಪನೆ ಯಾದ ವಿವಿಗಳಲ್ಲಿ ಕುಳಿತ ಸಂಶೋಧಕರು ಇಂತಹ ಸಾಧ್ಯತೆ ಇದೆಯೇ ಎಂದು ಯಾವತ್ತೂ ಯೋಚಿಸ ಲಿಲ್ಲ. ಆದರೆ ರಾಘವ ಗೌಡರಿಗೆ ಇತರರಿಗೆ ನೆರವಾಗಬೇಕೆಂಬ ತುಡಿತವಿತ್ತು. ಹೈನುಗಾರ ರಿಗೊಂದು ಯಂತ್ರದ ಕನಸು ಕಾಣುತ್ತಲೇ ಅದನ್ನು ಸಾಕಾರಗೊಳಿಸಿದರು. ಸಂಶೋಧನೆಗಳಿಗೆ ಬುದ್ಧಿಮತ್ತೆ ಯೊಂದೇ ಸಾಕಾಗುವುದಿಲ್ಲ. ಅದಕ್ಕೆ ಬದ್ಧತೆ ಬೇಕು. ಋಷಿ ಸದೃಶವಾದ ಏಕಾಗ್ರತೆ, ತಪಸ್ಸು ಬೇಕು.
ನಿಮಗೆ ಗೊತ್ತಿರಬಹುದು. ಈಗ ಅಡಿಕೆ, ತೆಂಗಿನ ಮರ ಏರಲು ಈಗ ಸುಲಭ ಸಾದನೆಗಳು ಬಂದಿವೆ. ಅಡಿಕೆ ಮತ್ತು ತೆಂಗಿನ ಕಾಯಿ ಸುಲಿಯಲೂ ಸರಳ ಯಂತ್ರಗಳು ಬಂದಿವೆ. ಆದರೆ ಎರಡು ದಶಕಗಳ ಹಿಂದೆ ಈ ಯಂತ್ರಗಳನ್ನು ಮೊದಲು ಶೋಧಿಸಿದವರು ನಮ್ಮ ರೈತರೇ ಹೊರತು ಸರಕಾರಿ ವಿಜ್ಞಾನಿ ಗಳೂ ಅಲ್ಲ, ತಜ್ಞರೂ ಅಲ್ಲ. ಈಗಲೂ ನಮ್ಮ ಹಳ್ಳಿ, ಹಳ್ಳಿಗಳಲ್ಲಿ ಸಂಶೋಧಕರಿದ್ದಾರೆ. ಇವರಾರೂ ದೊಡ್ಡ, ದೊಡ್ಡ ಡಿಗ್ರಿ ಪಡೆದವರಲ್ಲ. ಅಬ್ಬಬ್ಬಾ ಎಂದರೆ ಐಟಿಐ, ಡಿಪ್ಲೊಮಾ ಮುಗಿಸಿದವರು. ಗುಜರಿ ಸೇರಿದ ಹಳೆಯ ಬೈಕ್, ಸ್ಕೂಟರ್ ಅನ್ನು ಮಿನಿ ಹೈಡ್ರಾಲಿಕ್ ಟಿಪ್ಪರ್ ಆಗಿ ಪರಿವರ್ತನೆ ಮಾಡಿ ನಮ್ಮ ರೈತರ ಶ್ರಮವನ್ನು ಕಡಿಮೆ ಮಾಡಿದ ನೂರಾರು ಸಾಧಕರಿದ್ದಾರೆ. ಹಳೆಯ ಬೈಕ್ ಅನ್ನು ಉಳುಮೆ ಯಂತ್ರವನ್ನಾಗಿ ಪರಿವರ್ತಿಸಿದವರಿದ್ದಾರೆ.
ನಮ್ಮ ದೇಶದ ಶೇಕಡಾ 65ಕ್ಕೂ ಹೆಚ್ಚು ಮಂದಿ ವ್ಯವಸಾಯ ವೃತ್ತಿಯನ್ನು ಅವಲಂಬಿಸಿದ್ದಾರೆ ಎಂದು ನಾವು ಈಗಲೂ ಪಾಠ ಮಾಡುತ್ತಿದ್ದೇವೆ. ಆದರೆ ಕೃಷಿಗೆ ಸಂಬಂಧಿಸಿ ಎಷ್ಟರ ಮಟ್ಟಿಗೆ ಯಂತ್ರೋಪಕರಣಗಳಿವೆ ಎಂದು ಒಮ್ಮೆ ಯೋಚಿಸಿ. ಇತ್ತೀಚಿನ ದಿನಗಳಲ್ಲಿ ಕೆಲವು ಪರಿಕರಗಳು ಬಂದಿವೆ. ಆದರೆ ಇವುಗಳಲ್ಲಿ ಹೆಚ್ಚಿನವು ಚೀನಾ ನಿರ್ಮಿತ ಯಂತ್ರಗಳು. ಹುಲ್ಲು ಕತ್ತರಿಸುವ ಒಂದು ಸಾಮಾನ್ಯ ಯಂತ್ರದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಭಾರತದ ಕಂಪನಿಗಳು ಚೀನಾದಿಂದ ಬಿಡಿ ಭಾಗಗಳನ್ನು ತರಿಸಿಕೊಂಡು ಇಲ್ಲಿ ಜೋಡಿಸಿ, ತಮ್ಮದೇ ಬ್ರ್ಯಾಂಡ್‌ನಲ್ಲಿ ರೈತರಿಗೆ ಹಂಚುತ್ತಿವೆ. ಇವುಗಳಿಗೆ ಮೂರ್ನಾಲ್ಕು ಪಟ್ಟು ದರ ನಿಗದಿ ಮಾಡಿ ಸರಕಾರ ನೀಡುವ ಸಬ್ಸಿಡಿ ಹಣವನ್ನೂ ತಾವೇ ನುಂಗಿ ಹಾಕುತ್ತವೆ.
ಅಡಿಕೆಗೆ ಹಳದಿ ರೋಗ ಬಂದು ಕರಾವಳಿ, ಮಲೆನಾಡು ಭಾಗದ ರೈತರ ಬದುಕನ್ನು ಅಸಹನೀಯ ಗೊಳಿಸುತ್ತಿದೆ. ಇದೇ ರೀತಿ ಸಾಗಿದರೆ ಇನ್ನು ಕೆಲವೇ ವರ್ಷಗಳಲ್ಲಿ ಇಲ್ಲಿ ಅಡಿಕೆ ಕೃಷಿ ಗತ ವೈಭವದ ಮಾತಾಗಬಹುದು. ಅಡಿಕೆ ಹೆಸರಿನಲ್ಲಿಯೇ ಇರುವ ಸಂಶೋಧನಾ ಕೇಂದ್ರಗಳು, ಕೃಷಿ ವಿವಿಗಳು, ಇನ್ನುಳಿದ ತಜ್ಞರಿಂದ ಅಡಿಕೆ ಹಳದಿ ರೋಗಕ್ಕೆ ಪರಿಹಾರ ದೊರಕಲಿದೆ ಎಂದು ನಿರೀಕ್ಷಿಸಲೂ ಸಾಧ್ಯವಿಲ್ಲ.
ಅವಶ್ಯಕತೆಯೇ ಸಂಶೋಧನೆಯ ಮೂಲ ಎಂಬ ಮಾತಿದೆ. ನೆಲ ಮೂಲದ ಸಮಸ್ಯೆಗಳ ಅರಿವಿದ್ದ ವರಿಗೆ ಸಂಶೋಧನೆಯ ಅಗತ್ಯ ಗೊತ್ತಿರುತ್ತದೆ. ದುರದೃಷ್ಟವಶಾತ್, ನಮ್ಮ ವಿಶ್ವವಿದ್ಯಾಲಯ, ಸಂಶೋಧನಾ ಕೇಂದ್ರಗಳಿಗೆ ಸೇರಿಕೊಂಡ ಬಳಿಕ ತಜ್ಞರೆನಿಸಿಕೊಂಡವರಿಗೆ ವೇತನ, ಬಡ್ತಿ, ಭತ್ಯೆಯೇ ಮುಖ್ಯವಾಗುತ್ತದೆ ಹೊರತು ಸಂಶೋಧನೆ ಅಲ್ಲ. ಒಂದು ವೇಳೆ ಅವರು ತಮ್ಮ ವಿದ್ವತ್ತು ಮತ್ತು ಜ್ಞಾನವನ್ನು ತಾವು ಹುಟ್ಟಿ ಬೆಳೆದ ಪರಿಸರಕ್ಕೆ ಪೂರಕವಾಗುವಂತೆ ಧಾರೆ ಎರೆಯುವಂತಾದರೆ ದೇಶ ನಿಜಕ್ಕೂ ವಿಕಸಿತ ಭಾರತವಾಗಲು ಸಾಧ್ಯವಿದೆ.
ಮಣಿಪಾಲದಂತಹ ಸಣ್ಣ ಊರು ಇಂದು ಅಂತಾರಾಷ್ಟ್ರೀಯ ಭೂಪಟದಲ್ಲಿ ಸ್ಥಾನ ಪಡೆದಿದೆ. ಆದರೆ ಐದಾರು ದಶಕಗಳ ಹಿಂದೆ ಡಾ. ತೋನ್ಸೆ ಮಾಧವ ಅನಂತ ಪೈ ಎಂಬ ವ್ಯಕ್ತಿ ಅಲ್ಲೊಂದು ಆಸ್ಪತ್ರೆ ಕಟ್ಟುವ, ಬ್ಯಾಂಕ್ ತೆರೆಯುವ ಕನಸು ಕಾಣದೇ ಹೋಗಿದ್ದರೆ ಮಣಿಪಾಲ ಇಂದಿಗೂ ಭಾರತದ ಇನ್ನೊಂದು ಹಳ್ಳಿಯಾಗಿರುತ್ತಿತ್ತು. ನೆಲದ ಅವಶ್ಯಕತೆಯನ್ನು ಮನಗಂಡು ಆ ನಿಟ್ಟಿನಲ್ಲಿ ದುಡಿದವರು ಸಾಧಕರೆನಿಸಿಕೊಳ್ಳುತ್ತಾರೆ. ತೂಗು ಸೇತುವೆಯ ಮೂಲಕ ನೂರಾರು ಹಳ್ಳಿಗಳನ್ನು, ಹೃದಯಗಳನ್ನು ಬೆಸೆದ ಗಿರೀಶ್ ಭಾರದ್ವಾಜರಂತಹ ಸಾಧಕರು ನಮ್ಮ ಯುವ ಪ್ರತಿಭೆಗಳಿಗೆ ಸ್ಫೂರ್ತಿಯಾಗಲಿ.