ಮೂರ್ತಿಪೂಜೆ
ಮೇ ಒಂಭತ್ತರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಯಡಿಯೂರೋತ್ಸವ ದಿಲ್ಲಿಯ ಕಾಂಗ್ರೆಸ್ ನಾಯಕರಿಗೆ ಆತಂಕ ಮೂಡಿಸಿದೆ. ಕಾರಣ, ಈ ಉತ್ಸವ ಕರ್ನಾಟಕದ ಜಾತಿ ರಾಜಕೀಯದ ಚಿತ್ರವನ್ನು ಬದಲಿಸಲಿದೆ ಎಂಬ ಮಾಹಿತಿ. ಅಂದ ಹಾಗೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಅಭಿನಂದಿಸುವ ಈ ಉತ್ಸವ ಕೇವಲ ಬಲ ಪ್ರದರ್ಶನದ ಉದ್ದೇಶವನ್ನಷ್ಟೇ ಹೊಂದಿದ್ದರೆ ಅದು ಕಾಂಗ್ರೆಸ್ ನಾಯಕರಿಗೆ ಅಷ್ಟೇನೂ ಆತಂಕ ಮೂಡಿಸುತ್ತಿರಲಿಲ್ಲ.
ಆದರೆ ಈ ಉತ್ಸವದ ತಯಾರಿ ಹೇಗೆ ನಡೆದಿದೆ ಎಂದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೈ ಪಾಳಯಕ್ಕೆ ನಿಶ್ಚಿತವಾಗಿಯೂ ಹೊಡೆತ ಕೊಡುವಂತೆಯೇ ಇದೆ.
ಯಾಕೆಂದರೆ ಈಗಾಗಲೇ ಕಾಂಗ್ರೆಸ್ ಸರಕಾರದ ವಿರುದ್ದ ಲಿಂಗಾಯತ ಮತ್ತು ಒಕ್ಕಲಿಗ ರನ್ನು ಕನ್‌ಸಾಲಿಡೇಟ್ ಮಾಡಲು ಬಿಜೆಪಿ-ಜೆಡಿಎಸ್ ಹೊರಟಿವೆಯಾದರೂ, ಅದಕ್ಕೆ ಪೂರಕವಾಗಿ ಕರ್ನಾಟಕದ ಪ್ರಬಲ ನಾಯಕ ಸಮುದಾಯವನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಬಿಜೆಪಿ ಕಸರತ್ತು ನಡೆಸುತ್ತಿದೆ.
ಈಗ ಯಡಿಯೂರೋತ್ಸವದ ಹೆಸರಿನಲ್ಲಿ ಚಿತ್ರದುರ್ಗ ಮಾತ್ರವಲ್ಲದೆ ನಾಯಕರು ಸಾಲಿಡ್ಡಾಗಿರುವ ಜಿಲ್ಲೆಗಳಲ್ಲೂ ಒಂದು ವ್ಯವಸ್ಥಿತ ಪ್ರಚಾರ ನಡೆಯುತ್ತಿದೆ. ಈ ಪ್ರಚಾರದ ಪ್ರಕಾರ ನಾಯಕ ಸಮುದಾಯದ ಮತದಾರರ ಮೇಲೆ ಪ್ರಭಾವ ಬೀರುತ್ತಿರುವ ಪ್ರಚಾರಕರು, 1779ರಲ್ಲಿ ನಡೆದ ಇತಿಹಾಸದ ಒಂದು ಘಟನೆಯನ್ನು ವ್ಯವಸ್ಥಿತವಾಗಿ ನಾಯಕ ಸಮುದಾಯದ ತಲೆಗೆ ತುಂಬುತ್ತಿದ್ದಾರೆ.
ಅದರ ಪ್ರಕಾರ, ಚಿತ್ರದುರ್ಗವನ್ನು ಆಳುತ್ತಿದ್ದ ಮದಕರಿ ನಾಯಕ ಮತ್ತು ಹೈದರ್ ಆಲಿ ಮಧ್ಯೆ 1779ರಲ್ಲಿ ಯುದ್ದ ನಡೆಯಿತು. ಇದಕ್ಕೂ ಮುನ್ನ ಮದಕರಿ ನಾಯಕನ ವಿರುದ್ಧ ಹೈದರ್ ಆಲಿ ಎರಡು ಬಾರಿ ಹೋರಾಟ ನಡೆಸಿದ್ದನಾದರೂ ಆತನನ್ನು ಪರಾಭವ ಗೊಳಿಸಲು ಸಾಧ್ಯವಾಗಿರಲಿಲ್ಲ. ಕಾರಣ, ಮದಕರಿ ನಾಯಕ ಅಷ್ಟು ಶೂರ.
ಇದನ್ನೂ ಓದಿ: R T Vittalmurthy Column: ಸಿದ್ದರಾಮಯ್ಯ-ಡಿಕೆಶಿ ಕ್ಯಾಂಪಿನ ಫ್ರೆಷ್ ರಿಪೋರ್ಟು
ಆದರೆ 1779ರಲ್ಲಿ ತನ್ನ ಬಲವನ್ನು ದೊಡ್ಡ ಮಟ್ಟದಲ್ಲಿ ಕ್ರೋಢೀಕರಿಸಿಕೊಂಡು ಚಿತ್ರದುರ್ಗದ ಕೋಟೆಗೆ ಮುತ್ತಿಗೆ ಹಾಕಿದ ಹೈದರ್ ಆಲಿ ಕೊನೆಗೂ ಮದಕರಿ ನಾಯಕನನ್ನು ಯುದ್ದದಲ್ಲಿ ಸೋಲಿಸಿ ಚಿತ್ರದುರ್ಗದ ಕೋಟೆಯನ್ನು ವಶಪಡಿಸಿಕೊಂಡ. ಈ ಸಂದರ್ಭ ದಲ್ಲಿ ಮದಕರಿ ನಾಯಕನನ್ನು ಬಂಧಿಯಾಗಿಸಿ ಶ್ರೀರಂಗಪಟ್ಟಣಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಆತನಿಗೆ ವಿಷವುಣಿಸಿ ಕೊಲ್ಲಲಾಯಿತು ಎಂಬುದು ಇತಿಹಾಸ.
ಈ ಇತಿಹಾಸವನ್ನೇ ವ್ಯವಸ್ಥಿತವಾಗಿ ನಾಯಕ ಮತದಾರರಿಗೆ ವಿವರಿಸುತ್ತಿರುವ ಪ್ರಚಾರಕರು, ‘ನಿಮ್ಮ ಸ್ವಾಭಿಮಾನದ ಹೆಗ್ಗುರುತಾದ ಮದಕರಿ ನಾಯಕನನ್ನು ಸೋಲಿಸಿ ಸಾಯಿಸಿದ್ದು ಹೈದರ್ ಆಲಿ. ಈ ಹೈದರ್ ಆಲಿಯ ಮಗ ಟಿಪ್ಪು ಸುಲಾನ್. ಇವತ್ತು ಕಾಂಗ್ರೆಸ್ ಪಕ್ಷಕ್ಕೆ ಆದರ್ಶ. ಹೀಗೆ ನಿಮ್ಮ ಸ್ವಾಭಿಮಾನದ ಹೆಗ್ಗುರುತಾದ ಮದಕರಿ ನಾಯಕನನ್ನು ಕೊಂದ ವನು, ಅವನ ಪಾಳೇಪಟ್ಟನ್ನು ನಾಶ ಮಾಡಿದವನ ಮಗನನ್ನು ಆದರ್ಶವಾಗಿಟ್ಟುಕೊಂಡ ಕಾಂಗ್ರೆಸ್ ಪಕ್ಷಕ್ಕೆ ನೀವು ಮತ ಹಾಕುತ್ತೀರಾ?’ಎಂದು ಪ್ರಶ್ನಿಸುತ್ತಿದ್ದಾರೆ.
ಮೂಲಗಳ ಪ್ರಕಾರ, ಪ್ರಚಾರಕರ ಈ ತಂತ್ರ ಎಷ್ಞರ ಮಟ್ಟಿಗೆ ಯಶಸ್ವಿಯಾಗಿದೆ ಎಂದರೆ ಇದು ತಮ್ಮ ಸ್ವಾಭಿಮಾನದ ಪ್ರಶ್ನೆ ಎಂಬ ಭಾವನೆ ಮೆಲ್ಲಗೆ ನಾಯಕ ಮತದಾರರಲ್ಲಿ ಮೂಡತೊಡಗಿದೆ ಮತ್ತು ಈ ಅಂಶವೇ ಚಿತ್ರದುರ್ಗದಲ್ಲಿ ನಡೆಯಲಿರುವ ಯಡಿಯೂರೋ ತ್ಸವಕ್ಕೆ ದೊಡ್ಡ ಶಕ್ತಿ ನೀಡಲಿದೆ. ಅಂದ ಹಾಗೆ ಪ್ರಬಲ ಲಿಂಗಾಯತ ಮತದಾರರು ದೊಡ್ಡ ಸಂಖ್ಯೆಯಲ್ಲಿ ಬಿಜೆಪಿಯ ಜತೆಗಿದ್ದಾರೆ. ಬಿಜೆಪಿ ಜತೆಗಿನ ಜೆಡಿಎಸ್ ಸಖ್ಯದ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯವೂ ದೊಡ್ಡ ಮಟ್ಟದಲ್ಲಿ ಆ ಕಡೆಗಿದೆ. ಈ ಮಧ್ಯೆ ಸಿಎಂ ಸಿದ್ಧರಾಮಯ್ಯ ಅವರನ್ನು ಕೆಳಗಿಳಿಸುವ ಪ್ರಯತ್ನ ಸಫಲವಾಗಬಹುದು.ಅಥವಾ ಮುಂದಿನ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅವರ ನೇತೃತ್ವ ಕಾಂಗ್ರೆಸ್ ಗೆ ಇಲ್ಲದಿರಬಹುದು ಎಂಬ ಭಾವನೆ ಕುರುಬ ಮತದಾರರಲ್ಲಿ ವ್ಯಾಪಕವಾಗಿರುವುದರಿಂದ ಮುಂದಿನ ದಿನಗಳಲ್ಲಿ ಅವರು ಕೂಡಾ ಕಾಂಗ್ರೆಸ್ ಪಾಳಯದಿಂದ ದೂರ ಉಳಿಯುವ ಸಾಧ್ಯತೆ ಜಾಸ್ತಿ.
ಹೀಗೆ ಕರ್ನಾಟಕದ ಪ್ರಬಲ ಜಾತಿಗಳು ದೂರವಾದರೆ ಪಕ್ಷದ ಭವಿಷ್ಯವೇನು ಎಂಬುದು ದಿಲ್ಲಿಯ ಕಾಂಗ್ರೆಸ್ ನಾಯಕರ ಚಿಂತೆ. ಅಂದ ಹಾಗೆ ರಾಜ್ಯದ 141 ವಿಧಾನಸಭಾ ಕ್ಷೇತ್ರ ಗಳಲ್ಲಿ ಗಣನೀಯವಾಗಿರುವ ನಾಯಕ ಮತ ಬ್ಯಾಂಕಿಗೆ 40 ರಿಂದ 45 ಕ್ಷೇತ್ರಗಳಲ್ಲಿ ಡೆಡ್ಲಿ ಪವರ್ ಇದೆ.
ಇಂತಹ ಮತ ಬ್ಯಾಂಕನ್ನು ಕಾಂಗ್ರೆಸ್ ನಲ್ಲಿ ಸಂರಕ್ಷಿಸಲು ಸಚಿವ ಸತೀಶ್ ಜಾರಕಿಹೊಳಿ ಮತ್ತು ಕೆ.ಎನ್.ರಾಜಣ್ಣ ಅವರು ಹೋರಾಡುತ್ತಿದ್ದರು. ಆದರೆ ಈ ಪೈಕಿ ಕೆ.ಎನ್.ರಾಜಣ್ಣ ಅವರನ್ನು ತುಂಬ ವ್ಯವಸ್ಥಿತವಾಗಿ ಮಂತ್ರಿ ಮಂಡಲದಿಂದ ಹೊರಗಿಡಲಾಗಿದೆ. ಇದೇ ರೀತಿ ಸತೀಶ್ ಜಾರಕಿಹೊಳಿ ಅವರು ಕೂಡಾ ಅಸಮಾಧಾನದಿಂದ ಕುದಿಯುತ್ತಿದ್ದಾರೆ.
ಗಮನಿಸಬೇಕಾದ ಸಂಗತಿ ಎಂದರೆ ಈ ಪೈಕಿ ಸತೀಶ್ ಜಾರಕಿಹೊಳಿ ಅವರು ಉತ್ತರ ಕರ್ನಾಟಕ ಭಾಗದ ನಾಯಕ ಮತ ಬ್ಯಾಂಕ್ ಮೇಲೆ ಹಿಡಿತ ಹೊಂದಿದ್ದವರು.ಇದೇ ರೀತಿ ಕೆ.ಎನ್. ರಾಜಣ್ಣ ಅವರು ತುಮಕೂರು, ಚಿತ್ರದುರ್ಗ ಸೇರಿದಂತೆ ಹಳೆ ಮೈಸೂರು ಪಾಕೀಟಿ ನಲ್ಲಿ ನಾಯಕ ಮತ ಬ್ಯಾಂಕಿನ ವಿಶ್ವಾಸ ಗಳಿಸಿದ್ದವರು. ಈಗ ಕಾಂಗ್ರೆಸ್ ಪಾಳಯದಲ್ಲಿ ಇವರಿಬ್ಬರ ಶಕ್ತಿ ಕುಗ್ಗಿರುವುದು ನಾಯಕ ಮತ ಬ್ಯಾಂಕಿನ ವಲಸೆಗೆ ಪ್ರಶಸ್ತವಾಗಿದೆ.
ಇಂತಹ ಕಾಲಘಟ್ಟದ ಯಡಿಯೂರೋತ್ಸವದ ಹೆಸರಿನಲ್ಲಿ ನಾಯಕ ಮತದಾರರನ್ನು ಸಂಘಟಿಸಲು ಬಿಜೆಪಿ ನಡೆಸುತ್ತಿರುವ ಪ್ರಯತ್ನ ಕುತೂಹಲಕಾರಿಯಾಗಿದೆಯಷ್ಟೇ ಅಲ್ಲ, ಎರಡು ಶತಮಾನಕ್ಕೂ ಹಿಂದೆ ಕಣ್ಮರೆಯಾದ ಮದಕರಿ ನಾಯಕ ಮತ್ತು ಹೈದರ್ ಆಲಿಯನ್ನು ಜೀವಂತವಾಗಿಸುವ ಮೂಲಕ ಕಾಂಗ್ರೆಸ್ ಪಾಳಯಕ್ಕೆ ನಿರ್ಣಾಯಕ ಹೊಡೆತ ಕೊಡುತ್ತಿದೆ.
ಇವತ್ತು ಕಾಂಗ್ರೆಸ್ ವರಿಷ್ಠರು ಚಿಂತೆಗೆ ಬಿದ್ದಿರುವುದು ಇದೇ ಕಾರಣಕ್ಕಾಗಿ. ಅಂದ ಹಾಗೆ ಅವರ ಮತ್ತೊಂದು ಚಿಂತೆಯೆಂದರೆ, ಇವತ್ತು ಮೇಲೆದ್ದಿರುವ ಮದಕರಿ ನಾಯಕನ ವಿಷಯ ನಾಯಕ ಸಮುದಾಯದ ಯುವಜನರಲ್ಲಿ ಕಿಡಿ ಹೊತ್ತಿಸಿ ರುವುದು. ಯುವಜನರಲ್ಲಿ ಇಂತಹ ಕಿಡಿ ಹತ್ತಿಕೊಂಡರೆ ಅವರು ನಿರ್ದಾಕ್ಷಿಣ್ಯವಾಗಿ ಕಾಂಗ್ರೆಸ್ ವಿರುದ್ಧ ತಿರುಗಿ ಬೀಳುತ್ತಾರೆ.
ಯುವ ಜನರ ಮನ:ಸ್ಥಿತಿ ಆಯಾ ಕುಟುಂಬದ ಹೆಣ್ಣು ಮಕ್ಕಳ ಮೇಲೆ ಪ್ರಭಾವ ಬೀರುವು ದರಿಂದ ಆ ಆಂಗಲ್ಲಿನಲ್ಲೂ ಹೊಡೆತ ಬೀಳುತ್ತದೆ. ಮೊನ್ನೆ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮುಸ್ಲಿಂ ಮತ ಬ್ಯಾಂಕ್ ವರ್ತಿಸಿದ್ದು ಹೀಗೆಯೇ ತಾನೇ? ಹೀಗಾಗಿಯೇ ಕಾಂಗ್ರೆಸ್ ವರಿಷ್ಟರಿಗೆ ಚಿಂತೆ ಶುರುವಾಗಿದೆ.
ಇದು ವಿಜಯೇಂದ್ರ ವೈಭವಂ
ಹೀಗೆ ಚಿತ್ರದುರ್ಗದಲ್ಲಿ ನಡೆಯುತ್ತಿರುವ ಯಡಿಯೂರೋತ್ಸವ ಕಾಂಗ್ರೆಸ್ ವರಿಷ್ಠರ ಚಿಂತೆಗೆ ಕಾರಣವಾಗಿದ್ದರೆ, ಮತ್ತೊಂದು ಕಡೆ ರಾಜ್ಯ ಬಿಜೆಪಿಯ ಹಲವು ನಾಯಕರ ಚಿಂತೆಗೂ ಕಾರಣವಾಗಿದೆ.ಕಾರಣ?ಚಿತ್ರದುರ್ಗದಲ್ಲಿ ನಡೆಯುತ್ತಿರುವುದು ಯಡಿಯೂರೋ ತ್ಸವವಾದರೂ ಆಳದಲ್ಲಿ ಇದು ವಿಜಯೇಂದ್ರ ವೈಭವಂ ಸ್ಟೋರಿಯಾಗಲಿದೆ ಎಂಬುದು ಇವರ ಆತಂಕ.
ಮೂಲಗಳ ಪ್ರಕಾರ,ಯಡಿಯೂರೋತ್ಸವವನ್ನು ಆಚರಿಸಲು ನಿರ್ಧಾರವಾದ ನಂತರ ಈ ಉತ್ಸವವನ್ನು ಪಕ್ಷದ ವತಿಯಿಂದ ಆಚರಿಸಬೇಕು ಎಂದು ಪಕ್ಷದ ಹಲವು ನಾಯಕರು ಬಯಸಿದ್ದರು. ಆದರೆ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅಂಡ್ ಟೀಮ್ ಇದಕ್ಕೆ ಸೊಪ್ಪು ಹಾಕಿಲ್ಲ.
ಬದಲಿಗೆ ಇಡೀ ಉತ್ಸವದ ಜವಾಬ್ದಾರಿಯನ್ನು ಅಭಿನಂದನಾ ಸಮಿತಿಯ ಹೆಸರಿನಲ್ಲಿ ತನ್ನ ಹೆಗಲ ಮೇಲೆ ಹಾಕಿಕೊಂಡು, ಉಳಿದವರ ಸಹಕಾರವನ್ನು ಮಾತ್ರ ಬಯಸುತ್ತಿದೆ. ಈ ಅಂಶವೇ ರಾಜ್ಯ ಬಿಜೆಪಿಯ ಹಲವು ನಾಯಕರ ಕಣ್ಣುರಿಗೆ ಕಾರಣ. ಅಂದ ಹಾಗೆ 2004ರ ವಿಧಾನಸಭಾ ಚುನಾವಣೆಯ ನಂತರ ಕರ್ನಾಟಕದಲ್ಲಿ ಜೆಡಿಎಸ್ ಜತೆಗೂಡಿ ಮೈತ್ರಿಕೂಟ ಸರಕಾರ ರಚಿಸಲು ಬಿಜೆಪಿಯ ಅನಂತಕುಮಾರ್ ನಡೆಸಿದ್ದ ಯತ್ನ ಸಫಲವಾಗಲಿಲ್ಲವಲ್ಲ? ಇದಾದ ನಂತರ ಬಿಜೆಪಿ ಪ್ರತಿಪಕ್ಷದ ಸ್ಥಾನದಲ್ಲಿ ಕೂರುವ ಅನಿವಾರ್ಯತೆ ಸೃಷ್ಟಿಯಾ ದರೂ, ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಾಗುವುದಕ್ಕೆ ಅಡ್ಡಿ ಮಾಡಲಾಗಿತ್ತು.
ಯಾವಾಗ ತಮಗೆ ಪ್ರತಿಪಕ್ಷದ ನಾಯಕನ ಸ್ಥಾನ ಕೊಡಲು ಹಿಂದೇಟು ಹಾಕಲಾಗುತ್ತಿದೆ ಎಂಬುದು ಅರಿವಾಯಿತೋ? ಆಗ ಯಡಿಯೂರಪ್ಪನವರ ಹುಟ್ಟು ಹಬ್ಬದ ಹೆಸರಿನಲ್ಲಿ ದೊಡ್ಡ ಸಮಾವೇಶವೊಂದನ್ನು ಏರ್ಪಡಿಸಲಾಯಿತು. ಅವತ್ತು ಸಮಾವೇಶದಲ್ಲಿ ಯಡಿಯೂರಪ್ಪ ಅವರನ್ನು ಅಭಿನಂದಿಸುವ ಕೆಲಸ ನಡೆದರೂ, ಸಮಾವೇಶದಲ್ಲಿ ಪಾಲ್ಗೊಂಡ ಲಿಂಗಾಯತ ಸಮುದಾಯದ ಸ್ವಾಮೀಜಿಗಳು, ‘ತಮ್ಮ ಸಮುದಾಯವನ್ನು ನಿರ್ಲಕ್ಷಿಸಿದರೆ ಹುಷಾರ್’ ಎಂಬ ಎಚ್ಚರಿಕೆಯ ಸಂದೇಶ ಬಿಜೆಪಿ ವರಿಷ್ಠರಿಗೆ ತಲುಪುವಂತೆ ನೋಡಿಕೊಂಡರು.
ಯಾವಾಗ ಈ ಬೆಳವಣಿಗೆ ನಡೆಯಿತೋ? ಇದಾದ ನಂತರ ತರಾತುರಿಯಲ್ಲಿ ಮಧ್ಯೆ ಪ್ರವೇಶಿಸಿದ ಬಿಜೆಪಿ ವರಿಷ್ಠರು, ಯಡಿಯೂರಪ್ಪ ಇಲ್ಲಿಗೆ, ಅನಂತಕುಮಾರ್ ದಿಲ್ಲಿಗೆ ಎಂಬ ಸೂತ್ರವನ್ನು ರಚಿಸಿ ಕೈ ತೊಳೆದುಕೊಂಡರು. ಅದುವರೆಗೆ ಕರ್ನಾಟಕದ ರೈತ ನಾಯಕ ರಾಗಿದ್ದ ಯಡಿಯೂರಪ್ಪ ಕೂಡಾ ಲಿಂಗಾಯತ ನಾಯಕರಾಗಿ ಪಟ್ಟಾಭಿಷಿಕ್ತರಾದರು.
ಹೀಗೆ ಲಿಂಗಾಯತ ನಾಯಕರಾಗಿ ಪಟ್ಟಾಭಿಷಿಕ್ತರಾದ ಯಡಿಯೂರಪ್ಪ ಆನಂತರ ಹಿಂತಿರುಗಿ ನೋಡಲಿಲ್ಲ. ಬದಲಿಗೆ ಉಪಮುಖ್ಯಮಂತ್ರಿಯಾಗಿ,ಮುಖ್ಯಮಂತ್ರಿಯಾiಗಿ ಕರ್ನಾಟಕದ ರಾಜಕಾರಣದಲ್ಲಿ ಬಿಜೆಪಿಗೆ ಭದ್ರ ನೆಲೆ ಒದಗಿಸಿದರು.ಅಷ್ಟೇ ಅಲ್ಲ,ಪಕ್ಷದಲ್ಲಿ ತಮಗೆ ಪರ್ಯಾಯ ನಾಯಕನೇ ಇಲ್ಲ ಎಂಬುದನ್ನು ಸಾಬೀತುಪಡಿಸಿದರು.
ಇವತ್ತು ಚಿತ್ರದುರ್ಗದಲ್ಲಿ ನಡೆಯುತ್ತಿರುವ ಯಡಿಯೂರೋತ್ಸವ ಕೂಡಾ ಇದೇ ಮಾದರಿ ಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ನೆಲೆಗೊಳಿಸುವ ಮತ್ತು ತಮ್ಮನ್ನು ಮೂಲೋತ್ಪಾಟನೆಗೊಳಿಸುವ ತಂತ್ರ ಎಂಬುದು ಬಿಜೆಪಿಯ ವಿರೋಧಿ ಬಣದ ನಾಯಕರ ಯೋಚನೆ.
ರಾಹುಲ್ ಅಪ್ ಸೆಟ್ ಆಗಿದ್ದಾರೆ
ಈ ಮಧ್ಯೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅಪ್ ಸೆಟ್ ಆಗಿದ್ದಾರೆ. ಹೀಗೆ ಅವರು ಅಪ್ ಸೆಟ್ ಆಗಲು ಪಕ್ಷದ ಹಿರಿಯರೇ ಕಾರಣವಂತೆ. ಮೂಲಗಳ ಪ್ರಕಾರ,ಇತ್ತೀಚೆಗೆ ಐದು ರಾಜ್ಯ ಗಳ ವಿಧಾನಸಭಾ ಚುನಾವಣೆ ನಡೆಯಿತಲ್ಲ? ಈ ಚುನಾವಣೆಯ ವಿಷಯ ಬಂದಾಗ ತಮಿಳುನಾಡಿನ ರಾಜಕಾರಣದಲ್ಲಿ ಪಕ್ಷ ತೆಗೆದುಕೊಳ್ಳಬೇಕಾದ ನಿಲುವುಗಳ ಬಗ್ಗೆ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಪಿ.ಚಿದಂಬರಂ ಸೇರಿದಂತೆ ಪಕ್ಷದ ಹಲವು ಹಿರಿಯರ ಜತೆ ಚರ್ಚಿಸಿದ್ದರು.
ಈ ಸಂದರ್ಭದಲ್ಲಿ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಅವರು, ‘ಈ ಬಾರಿ ನಾವು ಸ್ಟಾಲಿನ್ ನೇತೃತ್ವದ ಡಿಎಂಕೆಯ ಜತೆ ಹೋಗುವ ಬದಲು ವಿಜಯ್ ಅವರ ಟಿವಿಕೆ (ತಮಿಳಿಗ ವೆಟ್ರಿ ಕಜಗಂ) ಜತೆ ಹೋಗೋಣ’ ಎಂದಿದ್ದಾರೆ.
ಅವರ ಪ್ರಕಾರ,‘ಡಿಎಂಕೆ ಜತೆ ನಾವು ಹೋದರೂ ಮತ್ತು ಡಿಎಂಕೆ ಅಧಿಕಾರಕ್ಕೆ ಬಂದರೂ ತಮಿಳುನಾಡಿನಲ್ಲಿ ನಾವು ಸ್ಟಾಲಿನ್ ಅವರ ಬೆನ್ನ ಹಿಂದೆ ಹೋಗಬೇಕು. ಆದರೆ ವಿಜಯ್ ಅವರ ಟಿವಿಕೆ ಪಕ್ಷದ ಕತೆ ಹಾಗಲ್ಲ,ಇವತ್ತು ಚುನಾವಣೆಯಲ್ಲಿ ಅವರು ಗೆದ್ದು ಅಧಿಕಾರ ಹಿಡಿಯಲಿ, ಹಿಡಿಯಲು ಸಾಧ್ಯವಾಗದೆ ಇರಲಿ, ಆದರೆ ಆ ಪಕ್ಷದ ಜತೆ ಇರುವ ಶೇಕಡಾ ಇಪ್ಪತ್ತು ಪ್ಲಸ್ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯದಲ್ಲಿ ಬಲ ತರಲಿವೆ.
ಎಲ್ಲಕ್ಕಿಂತ ಮುಖ್ಯವಾಗಿ ಟಿವಿಕೆ ಪಕ್ಷ ತಮಿಳುನಾಡಿನ ಯುವ ಮತದಾರರ ಮೇಲೆ ಗಣನೀಯ ಪ್ರಭಾವ ಬೀರಿರುವುದರಿಂದ ಮುಂದಿನ ದಿನಗಳಲ್ಲಿ ತಮಿಳುನಾಡಿನ ರಾಜಕಾರಣದಲ್ಲಿ ನಮ್ಮ ನೆಲೆಯನ್ನು ಭದ್ರಪಡಿಸಿಕೊಳ್ಳಬಹುದು. ಅದೇ ರೀತಿ ಟಿವಿಕೆ ಜತೆ ಹೋದರೆ ವಿಜಯ್ ಬೆನ್ನ ಹಿಂದೆ ಹೋಗುವ ಬದಲು ಅವರ ಸರಿಸಮನಾಗಿ ನಡೆಯ ಬಹುದು ಎಂಬುದು ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರ ಲೆಕ್ಕಾಚಾರ.
ಹಾಗಂತ ಹೇಳಿದರೆ ದಿಲ್ಲಿಯ ಸಭೆಯಲ್ಲಿ ಪಾಲ್ಗೊಂಡಿದ್ದ ಪಕ್ಷದ ಹಿರಿಯರು, ‘ನೋ,ನೋ, ಯಾರೇನೇ ಹೇಳಿದರೂ ಸ್ಟಾಲಿನ್ ನೇತೃತ್ವದ ಡಿಎಂಕೆ ಮುಂದಿನ ಎರಡು-ಮೂರು ದಶಕಗಳ ಕಾಲ ನಿರಾತಂಕವಾಗಿ ತಮಿಳುನಾಡಿನ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಹೀಗಾಗಿ ವಿಜಯ್ ಅವರ ಟಿವಿಕೆ ಜತೆ ಹೋಗುವ ಬದಲು ಸ್ಟಾಲಿನ್ ನೇತೃತ್ವದ ಡಿಎಂಕೆ ಜತೆಗೂಡಿ ಹೋಗುವುದೇ ಲೇಸು’ ಎಂದಿದ್ದಾರೆ.
ಯಾವಾಗ ಪಿ.ಚಿದಂಬರಂ ಸೇರಿದಂತೆ ಪಕ್ಷದ ಹಿರಿಯರು ಈ ಮಾತುಗಳನ್ನಾಡಿದರೋ? ಆನಂತರ ಕಾಂಗ್ರೆಸ್ ಪಕ್ಷ ಡಿಎಂಕೆ ಜತೆಗಿನ ಸ್ನೇಹವನ್ನು ಮುಂದುವರಿಸಿಕೊಂಡು ಹೋಯಿತು. ಆದರೆ ಈಗ ಬರುತ್ತಿರುವ ವರ್ತಮಾನಗಳ ಪ್ರಕಾರ ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರ ಹಿಡಿಯಲು ಹರಸಾಹಸ ಮಾಡುವ ಸ್ಥಿತಿ ಇದೆ.
ಒಂದು ವೇಳೆ ಅದು ಅಧಿಕಾರಕ್ಕೆ ಬಂದರೆ ತಕ್ಷಣದ ದೃಷ್ಟಿಯಿಂದ ಕಾಂಗ್ರೆಸ್ ಗೇನೂ ತೊಂದರೆಯಿಲ್ಲ. ಆದರೆ ಅಕಸ್ಮಾತ್ ಡಿಎಂಕೆ ಅಧಿಕಾರಕ್ಕೆ ಬರಲಿಲ್ಲ ಎಂದರೆ ನಾವು ಸೈಡ್ ಲೈನಿಗೆ ಸರಿದು ಬಿಡುತ್ತೇವೆ. ಒಂದು ವೇಳೆ ಅಧಿಕಾರಕ್ಕೆ ಬಂದರೂ ಗುಂಪಿನಲ್ಲಿ ಗೋವಿಂದ ಆಗುತ್ತೇವೆ ಎನ್ನುವುದು ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಆತಂಕ.
ಹೀಗಾಗಿಯೇ ಅವತ್ತು ತಮ್ಮ ಮಾತು ಕೇಳದೆ ತಮ್ಮದೇ ವಾದ ಮಂಡಿಸಿ ಆಟವಾಡಿದ ಪಕ್ಷದ ಹಿರಿಯರ ಬಗ್ಗೆ ಸೋನಿಯಾಗಾಂಧಿಯವರು ಮತ್ತು ಅದಕ್ಕಿಂತ ಮುಖ್ಯವಾಗಿ ರಾಹುಲ್ ಗಾಂಧಿ ಅಪ್ ಸೆಟ್ ಆಗಿದ್ದಾರೆ. ಪರಿಣಾಮ, ಸದ್ಯದಲ್ಲಿಯೇ ಎಐಸಿಸಿಗೆ ಮೇಜರ್ ಸರ್ಜರಿ ಮಾಡಿ, ಹಿರಿಯರನ್ನು ಒಕ್ಕಲೆಬ್ಬಿಸಿ ಯುವ ಮುಖಗಳನ್ನು ಫ್ರಂಟ್ ಲೈನಿಗೆ ತರುವ ಲೆಕ್ಕಾಚಾರ ಅವರಲ್ಲಿ ಬಂದಿದೆ.
ಲಾಸ್ಟ್ ಸಿಪ್: ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಅಧಿಕಾರ ಹಂಚಿಕೆಯ ಕಚ್ಚಾಟಕ್ಕೆ ಈ ತಿಂಗಳು ನಿರ್ಣಾಯಕ ತಿರುವು ದಕ್ಕುವ ಸಾಧ್ಯತೆ ಇದೆ.ಸಿಎಂ ಸಿದ್ದು ಪಾಳಯದ ಪ್ರಮುಖರು, ‘ನಾಯಕತ್ವ ಬದಲಾವಣೆ ಮಾಡಲು ರಾಹುಲ್ ಗಾಂಧಿ ಬಿಲ್ ಕುಲ್ ತಯಾರಿಲ್ಲ. ಹೀಗಾಗಿ ನಾಯಕತ್ವ ಬದಲಾವಣೆ ಅಸಾಧ್ಯದ ವಿಷಯ ಎನ್ನುತ್ತಿದ್ದರೆ, ಡಿಸಿಎಂ ಡಿಕೆಶಿ ಪಾಳಯದ ಪ್ರಮುಖರು, ಕುರ್ಚಿ ಬಿಟ್ಟು ಕೆಳಗಿಳಿಯುವಂತೆ ಸಿದ್ಧರಾಮಯ್ಯ ಅವರಿಗೆ ರಾಹುಲ್ ಸೂಚಿಸಲಿದ್ದಾರೆ ಮತ್ತು ಅವರು ಸೂಚನೆ ನೀಡಿದರೆ ಸಿದ್ಧರಾಮಯ್ಯ ಸುಮ್ಮನೆ ಒಪ್ಪುತ್ತಾರೆ. ಹೀಗಾಗಿ ನಾಯಕತ್ವ ಬದಲಾವಣೆಯ ಬೆಳವಣಿಗೆಯಿಂದ ಕಾಂಗ್ರೆಸ್ ನಲ್ಲಿ ಯಾವ ಕ್ರಾಂತಿಯೂ ನಡೆಯುವುದಿಲ್ಲ ಎನ್ನುತ್ತಿದ್ದಾರೆ.