ಸಂಗತ
ಪಾಕ್ ಆಕ್ರಮಿತ ಕಾಶ್ಮೀರದಿಂದ ಬರುತ್ತಿರುವ ಸುದ್ದಿಗಳು ನಿಜಕ್ಕೂ ದುಃಖ ತರಿಸುವಂತಿವೆ. ಅಲ್ಲಿನ ನಾಗರಿಕರ ಮೇಲೆ ಪಾಕಿಸ್ತಾನಿ ಸೇನೆಯ ದೌರ್ಜನ್ಯ ಮತ್ತು ಹಿಂಸಾಚಾರ ಮಿತಿ ಮೀರಿದೆ. ಕಳೆದ ಎರಡು ತಿಂಗಳಲ್ಲಿ 150ಕ್ಕೂ ಹೆಚ್ಚು ಜನರು ರಾವಲ್‌ಕೋಟ್‌ನಲ್ಲಿ ಹತ್ಯೆಯಾಗಿದ್ದಾರೆ. ಸಾವಿರಾರು ಜನರನ್ನು ಸೇನೆ ತನ್ನ ವಶದಲ್ಲಿರಿಸಿಕೊಂಡಿದೆ. ಅಲ್ಲಿಂದ ಬರುತ್ತಿರುವ ವರ್ತಮಾನಗಳ ಪ್ರಕಾರ ಪಾಕಿಸ್ತಾನದ ಮಿಲಿಟರಿ ದೊರೆಗಳು ಪಿಒಕೆ ಮೇಲಿನ ದಬ್ಬಾಳಿಕೆಯನ್ನು ತೀರಾ ಅತಿರೇಕಕ್ಕೆ ಕೊಂಡೊಯ್ದಿದ್ದಾರೆ.
ಪಾಪ, ಅಲ್ಲಿನ ಜನರು ಮಾಡಿರುವ ಅಪರಾಧವಾದರೂ ಏನು? ಅವರ ಬೇಡಿಕೆಗಳು ಕ್ರಾಂತಿಕಾರಿಗಳ ಬೇಡಿಕೆಗಳೇನೂ ಅಲ್ಲ. ಅವರು ಈಗ ಕತ್ತು ಉದ್ದ ಮಾಡಿಕೊಂಡು ಕಣಿವೆಯಾಚೆ ಇರುವ ಭಾರತದ ಕಾಶ್ಮೀರದ ಕಡೆಗೆ ಆಸೆಗಣ್ಣಿನಿಂದ ನೋಡುತ್ತಿದ್ದಾರೆ. ಭಾರತದ ಕಾಶ್ಮೀರದಲ್ಲಿನ ಸುಂದರ ಬದುಕು ತಮ್ಮದೂ ಆಗಬೇಕು ಎಂದು ಅವರು ಬಯಸುತ್ತಿದ್ದಾರೆ. ಅವರು ಕೇಳುತ್ತಿರುವುದು ಮನುಷ್ಯನ ಮೂಲಭೂತ ಅವಶ್ಯಕತೆ ಗಳನ್ನಷ್ಟೆ: ಸಾಕಷ್ಟು ಆಹಾರ ಮತ್ತು ವಿದ್ಯುತ್. ಆದರೆ ಅವರಿಗೆ ಪಾಕಿಸ್ತಾನದ ಸೇನೆಯಿಂದ ಸಿಗುತ್ತಿರುವುದು ಗುಂಡೇಟು ಮತ್ತು ದೌರ್ಜನ್ಯ.
ಭೌಗೋಳಿಕವಾಗಿ ಪಾಕ್ ಆಕ್ರಮಿತ ಕಾಶ್ಮೀರವನ್ನೂ ಭಾರತದ ಕಾಶ್ಮೀರವನ್ನೂ ಕೆಲ ಪರ್ವತಗಳು ಹಾಗೂ ನದಿಗಳು ಬೇರ್ಪಡಿಸಿವೆ. ಒಮ್ಮೆ ನಾನು ಪಾಕಿಸ್ತಾನಕ್ಕೆ ಹೋಗಿದ್ದಾಗ ಪಿಒಕೆಗೆ ಹೋಗಿಬರುವ ಆಸೆ ವ್ಯಕ್ತಪಡಿಸಿದ್ದೆ. ಆದರೆ ಸಾಕಷ್ಟು ಸಮಯ ಇರಲಿಲ್ಲ. ಪಾಕಿಸ್ತಾನದ ಸ್ನೇಹಿತರು ನನ್ನ ಬಳಿ ಪಿಒಕೆಯ ಅಪ್ರತಿಮ ಸೌಂದರ್ಯವನ್ನು ಸಾಕಷ್ಟು ವಿಸ್ತಾರವಾಗಿ ವರ್ಣಿಸಿದ್ದರು. ಅಲ್ಲಿನ ಪ್ರಕೃತಿಯು ಸ್ವರ್ಗಸದೃಶ ವಾಗಿದೆ ಎಂದು ಹೇಳಿದ್ದರು. ಈಗ ನಡೆಯುತ್ತಿರುವ ಹಿಂಸಾಚಾರದ ಕೇಂದ್ರ ಪ್ರದೇಶ ವಾಗಿರುವ ರಾವಲ್‌ಕೋಟ್‌ಗೆ ‘ಮುತ್ತಿನ ಕಣಿವೆ’ ಎಂದೂ ಕರೆಯುತ್ತಾರೆ. ಆದರೆ ಪಾಕಿಸ್ತಾನದ ಸೇನೆಯು ಆ ಕಣಿವೆಯನ್ನು ಸಾಕ್ಷಾತ್ ‘ಮೃತ್ಯು ಕಣಿವೆ’ಯಾಗಿಸಿದೆ.
ಇದನ್ನೂ ಓದಿ: Vijay Darda Column: ಬೇಕಿರೋದು ರಾಜಕೀಯವಲ್ಲ, ವಿಶ್ವಾಸಾರ್ಹ ಶಿಕ್ಷಣ ಸಂಸ್ಥೆ !
ಒಂದೆಡೆ ಪಾಕಿಸ್ತಾನದಲ್ಲಿ ಹಣದುಬ್ಬರ ತಾಂಡವವಾಡುತ್ತಿದೆ. ಅದರ ಬಿಸಿ ಅನುಭವಿಸಲು ಸಾಧ್ಯ ವಾಗದ ಆಡಳಿತ ವ್ಯವಸ್ಥೆ ಪಿಒಕೆಯ ಜನರ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ. ಪರಿಣಾಮ, ಜೀವನಾವಶ್ಯಕ ಹಿಟ್ಟು ಮತ್ತು ಗ್ಯಾಸ್‌ನಂತಹ ವಸ್ತುಗಳು ಕೂಡ ಪಿಒಕೆಗೆ ಸರಿಯಾಗಿ ಪೂರೈಕೆ ಯಾಗುತ್ತಿಲ್ಲ. ಅಲ್ಲಿನ ಹಳ್ಳಿಗಳಲ್ಲಿ ಕೆಲವೊಮ್ಮೆ ವಾರಗಟ್ಟಲೆ ಕರೆಂಟ್ ಇರುವುದಿಲ್ಲ. ಪಾಕಿಸ್ತಾನಕ್ಕೆ ವಿದ್ಯುತ್ ಬರುವುದೇ ಪಿಒಕೆಯ ಮಂಗ್ಲಾ ಡ್ಯಾಂ ಮತ್ತು ನೀಲಂ ಝೇಲಂ ಹೈಡ್ರೋ ಪ್ರಾಜೆಕ್ಟ್ ಗಳಿಂದ. ಆದರೆ, ದೀಪದ ಬುಡದಲ್ಲಿ ಕತ್ತಲೆ. ಪಿಒಕೆಯಲ್ಲೇ ಕರೆಂಟ್ ಇರುವುದಿಲ್ಲ.
ಭಾರತದ ಕಾಶ್ಮೀರ ಮತ್ತು ಪಿಒಕೆಯ ನಡುವೆ ಹರಿಯುತ್ತಿರುವ ನದಿಯ ದಂಡೆಯ ಮೇಲೆ ನಿಂತರೆ ಅನೇಕ ಪ್ರದೇಶಗಳಲ್ಲಿ ಪಿಒಕೆಯ ಜನರು ಭಾರತದ ಕಾಶ್ಮೀರವನ್ನು ನೇರವಾಗಿ ನೋಡಬಹುದು. ರಾತ್ರಿ ಹೊತ್ತು ಭಾರತದ ಕಾಶ್ಮೀರದ ಹಳ್ಳಿಗಳು ವಿದ್ಯುತ್ತಿನಿಂದ ಬೆಳಗುತ್ತಿದ್ದರೆ, ತಮ್ಮ ಊರು ಕತ್ತಲೆ ಯಲ್ಲಿ ಮುಳುಗಿದೆ ಯಲ್ಲಾ ಎಂದು ಅವರು ಮರುಗುತ್ತಾರೆ. ಹೀಗಾಗಿ ತಮ್ಮ ಮಕ್ಕಳ ಭವಿಷ್ಯವನ್ನು ನೆನೆದು ಸಹಜವಾಗಿಯೇ ಅವರು ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸತೊಡಗಿದ್ದಾರೆ.
ಭಾರತದ ಕಾಶ್ಮೀರದ ಶ್ರೀಮಂತಿಕೆಯ ಜೊತೆಗೆ ಹೋಲಿಸಿಕೊಂಡಾಗ ತಮಗೂ ಇಂತಹ ನೆಮ್ಮದಿಯ ಬದುಕು ಬೇಕೆಂದು ಅವರಿಗೆ ಅನ್ನಿಸುವುದರಲ್ಲಿ ಏನೂ ತಪ್ಪಿಲ್ಲ. ಭಾರತದ ಕಾಶ್ಮೀರದಲ್ಲಿನ ಅವಕಾಶಗಳು ಹಾಗೂ ಬದುಕಿಗೆ ಇರುವ ಭದ್ರತೆಯನ್ನು ನೋಡಿದಾಗ ಅವರಿಗೆ ತಮ್ಮ ಪರಿಸ್ಥಿತಿ ಯನ್ನು ನೆನೆದು ದುಃಖವಾಗುವುದು ಸಹಜವೇ ಆಗಿದೆ. ದಶಕಗಳ ಕಾಲ ಪಾಕಿಸ್ತಾನದಿಂದ ಉಗ್ರರು ಗಡಿಯೊಳಗೆ ನುಸುಳಿ ಭಯೋತ್ಪಾದಕ ಕೃತ್ಯಗಳನ್ನು ಎಸಗುತ್ತಿದ್ದರೂ ಭಾರತದ ಕಾಶ್ಮೀರವು ಪ್ರಗತಿ ಸಾಧಿಸಿದ್ದು, ತಕ್ಕಮಟ್ಟಿಗೆ ಶಾಂತಿಯನ್ನೂ ತನ್ನದಾಗಿಸಿಕೊಂಡಿದೆ ಎಂಬುದು ಪಿಒಕೆಯ ಜನರಿಗೆ ತಿಳಿದಿದೆ.
ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ನಂತರವಂತೂ ಪರಿಸ್ಥಿತಿ ಇನ್ನೂ ಸುಧಾರಿಸಿರು ವುದನ್ನು ಅವರು ನೋಡುತ್ತಿದ್ದಾರೆ. ಇಂದು ಕಾಶ್ಮೀರಿ ಕಣಿವೆಗೆ ವಂದೇ ಭಾರತ್ ರೈಲಿನ ಸಂಪರ್ಕ ವಿದೆ. ಜಗತ್ತಿನ ಅತಿ ಎತ್ತರದ ರೈಲ್ವೆ ಬ್ರಿಜ್ ಎಂಬ ಖ್ಯಾತಿ ಪಡೆದಿರುವ ಚೆನಾಬ್ ರೈಲ್ವೆ ಸೇತುವೆಯ ಮೇಲೆ ನಿತ್ಯ ರೈಲುಗಳು ಓಡಾಡುತ್ತವೆ. ಆದರೆ, ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಆಚೆಗಿರುವ ಪಿಒಕೆಗೆ ಯಾವ ರೈಲ್ವೆ ಸಂಪರ್ಕವೂ ಇಲ್ಲ.
ಇಷ್ಟಕ್ಕೂ ಪಿಒಕೆಯ ಜನರಿಗೆ ಇರುವ ಆಯ್ಕೆಯಾದರೂ ಏನು? ಪಾಕಿಸ್ತಾನ ಹೇಳಿದ್ದನ್ನು ಅವರು ಕೇಳಲೇಬೇಕು. ಸದ್ಯಕ್ಕೆ ಅವರಿಗೆ ಬೇಕಿರುವುದು ರೋಟಿ, ವಿದ್ಯತ್ ಮತ್ತು ಸೇನಾಪಡೆಯ ಹಿಂಸಾ ಚಾರಕ್ಕೊಂದು ಅಂತ್ಯ. ಒಮ್ಮೆ ಈ ತುರ್ತು ಬೇಡಿಕೆಗಳು ಈಡೇರಿದರೆ ಅವರಲ್ಲಿ ಇನ್ನಷ್ಟು ಆಳವಾದ ಆಸೆಗಳೂ ಹುದುಗಿವೆ. ಅವರಿಗೆ ಭಾರತದ ಭಾಗವಾಗಬೇಕೆಂಬ ಬಯಕೆಯಿದೆ.
ಅಫ್ʼಕೋರ್ಸ್, ಭಾರತಕ್ಕೆ ಈ ವಿಷಯದಲ್ಲಿ ತನ್ನದೇ ಆದ ರಾಜತಾಂತ್ರಿಕ ಅಗತ್ಯಗಳು ಹಾಗೂ ವ್ಯೂಹಾತ್ಮಕ ಅಡೆತಡೆಗಳಿವೆ. ಆದರೂ ಒಂದಲ್ಲಾ ಒಂದು ದಿನ ಪಿಒಕೆ ಕೂಡ ಭಾರತದ ಭಾಗವಾಗು ತ್ತದೆ ಎಂದು ನಮ್ಮ ದೇಶದ ಹಿರಿಯ ನಾಯಕರೇ ಅನೇಕ ಬಾರಿ ಹೇಳಿಕೆ ನೀಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಂತಾದವರು ಇಂತಹ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ‘ಪಿಒಕೆಯು ಭಾರತದ ಕೋಣೆಯಿದ್ದಂತೆ. ಅದನ್ನು ಹೊರಗಿನವರು ಆಕ್ರಮಿಸಿಕೊಂಡಿದ್ದಾರೆ.
ಒಂದು ದಿನ ಅದನ್ನು ನಾವು ಪಡೆದೇ ತೀರುತ್ತೇವೆ’ ಎಂದು ಹೇಳಿದ್ದಾರೆ. ಇವತ್ತಿಗೂ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯಲ್ಲಿ ಇಪ್ಪತ್ತನಾಲ್ಕು ಸೀಟು ಗಳನ್ನು ಪಿಒಕೆಯ ಪ್ರತಿನಿಧಿಗಳಿಗಾಗಿ ಮೀಸಲಿಡಲಾಗಿದೆ. ಪ್ರತಿಯೊಬ್ಬ ಪ್ರಜೆಗೂ ಉತ್ತಮ ಬದುಕು ನಡೆಸುವ ಹಕ್ಕಿದೆ ಎಂದು ಭಾರತ ನಂಬುತ್ತದೆ. ಹೀಗಾಗಿ ಮಾನವೀಯತೆಗೆ ಹೆಚ್ಚು ಒತ್ತು ನೀಡುತ್ತದೆ. ಇದನ್ನು ಗಮನಿಸಿದ ಪಿಒಕೆಯ ಜನರು ಭಾರತಕ್ಕೆ ಸೇರಬೇಕೆಂದು ಬಯಸುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.
ಪಾಕಿಸ್ತಾನಕ್ಕೂ ಈ ವಿಷಯ ತಿಳಿದಿದೆ. ಆದ್ದರಿಂದಲೇ ಅದು ಭಾರತದ ಗಮನವನ್ನು ಉಪಾಯ ದಿಂದ ಬೇರೆಡೆಗೆ ಸೆಳೆಯಲು ಅಗತ್ಯವಿರುವ ನೀತಿಗಳನ್ನೇ ಅನುಸರಿಸುತ್ತದೆ. ಭಾರತದ ಆರ್ಥಿಕ ಮತ್ತು ಭೂ ರಾಜಕೀಯ ಅಭಿವೃದ್ಧಿಯನ್ನು ಆತಂಕದಿಂದ ನೋಡುತ್ತಿರುವ ಇನ್ನೂ ಕೆಲ ಶಕ್ತಿಗಳು ಪಾಕಿಸ್ತಾನದ ಜೊತೆಗೆ ಕೈಜೋಡಿಸಿವೆ. ಈ ಆತಂಕದಿಂದಾಗಿಯೇ ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಮಾಲ್ಡೀವ್ಸ್‌ನಂತಹ ನೆರೆದೇಶಗಳನ್ನು ಭಾರತದ ವಿರುದ್ಧ ಎತ್ತಿಕಟ್ಟುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ನೇಪಾಳದಲ್ಲಿ ಇದನ್ನೆಲ್ಲ ನೋಡಿ ಬೇಸತ್ತ ಜೆನ್‌ಜೀಗಳು ದೊಡ್ಡ ಹೋರಾಟ ವನ್ನೇ ನಡೆಸಿ ತಮ್ಮ ದೇಶವು ಸಂಪೂರ್ಣವಾಗಿ ಚೀನಾದ ಹಿಡಿತಕ್ಕೆ ಸಿಗುವುದನ್ನು ತಪ್ಪಿಸಿದರು.
ಇತ್ತ ಶ್ರೀಲಂಕಾ ನಮಗೆ ಸ್ನೇಹಿತ ರಾಷ್ಟ್ರವೇ ಆಗಿದ್ದರೂ ಚೀನಾದವರು ಆ ದೇಶದಲ್ಲಿ ಮಾಡಿರುವ ಹೂಡಿಕೆಯಿಂದಾಗಿ ಸಹಜವಾಗಿಯೇ ಶ್ರೀಲಂಕಾದ ಸರಕಾರ ಚೀನಾದ ಪ್ರಭಾವ ಹಾಗೂ ಒತ್ತಡಕ್ಕೆ ಸಿಲುಕಿಕೊಂಡಿದೆ. ಇದನ್ನೆಲ್ಲ ನೋಡಿದರೆ ಅಂತಾರಾಷ್ಟ್ರೀಯ ರಾಜಕಾರಣ ಕೂಡ ಹಳ್ಳಿ ರಾಜಕಾರಣದ ವಿಸ್ತತ ರೂಪದಂತೆಯೇ ಕಾಣಿಸುತ್ತದೆ!
ಆದರೂ ಭಾರತವನ್ನು ನಿಯಂತ್ರಿಸಬೇಕು ಎಂದು ಹವಣಿಸುತ್ತಿರುವ ಶಕ್ತಿಗಳು ಒಂದು ಸಂಗತಿ ಯನ್ನು ಮನದಟ್ಟು ಮಾಡಿಕೊಳ್ಳಬೇಕು. ಇಂದಿನ ಭಾರತ ದೀರ್ಘಕಾಲೀನ ಭವಿಷ್ಯವನ್ನು ಗಮನ ದಲ್ಲಿರಿಸಿಕೊಂಡು ಬೆಳೆಯುತ್ತಿದೆ. ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಎಲ್ಲಾ ಶಕ್ತಿ ಹಾಗೂ ಆತ್ಮವಿಶ್ವಾಸ ಭಾರತಕ್ಕಿದೆ. ಪಹಲ್ಗಾಂ ದಾಳಿಗೆ ಆಪರೇಷನ್ ಸಿಂದೂರ್ ಮೂಲಕ ಹೇಗೆ ಉತ್ತರ ನೀಡಬೇಕೆಂಬುದು ಭಾರತಕ್ಕೆ ಗೊತ್ತಿದೆ!
ಒಳಗೆ ಏನೋ ನಡೆಯುತ್ತಿದೆ!
ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಕಳೆದ ತಿಂಗಳು ಆಡಿದ ಮಾತುಗಳನ್ನು ಕೇಳಿ ಅನೇಕರಿಗೆ ಆಶ್ಚರ್ಯವಾಯಿತು. ಡಿಸೆಂಬರ್ ವೇಳೆಗೆ ತಾನು ಬಾಂಗ್ಲಾ ದೇಶಕ್ಕೆ ಮರಳುವುದಾಗಿ ಆಕೆ ಹೇಳಿದರು. ಇದು ಆಶ್ಚರ್ಯಕರ ಹೇಳಿಕೆ ಏಕೆಂದರೆ, ಈಗಾಗಲೇ ಬಾಂಗ್ಲಾದೇಶದ ಕೋರ್ಟ್ ಶೇಖ್ ಹಸೀನಾಗೆ ಆಕೆಯ ಗೈರಿನಲ್ಲಿ ಗಲ್ಲುಶಿಕ್ಷೆ ವಿಽಸಿ ತೀರ್ಪು ನೀಡಿದೆ. ಅವರೀಗ ಮರಳಿ ಸ್ವದೇಶಕ್ಕೆ ಹೋದರೆ ಅಲ್ಲಿ ಗಲ್ಲಿಗೇರಿಸುವುದಿಲ್ಲವೇ? ಆದರೆ, ರಾಜಕೀಯದಲ್ಲಿ ಕೆಲವೊಮ್ಮೆ ಸಂಗತಿಗಳು ಮೇಲ್ನೋಟಕ್ಕೆ ಹೇಗೆ ಕಾಣಿಸುತ್ತವೆಯೋ ಹಾಗೆ ಇರುವುದಿಲ್ಲ.
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಹತ್ತಿರದಿಂದ ಗಮನಿಸಿದವರಿಗೆ ಹಿಂದೊಮ್ಮೆ ಅಲ್ಲಿನ ಮುಸ್ಲಿಂ ಮೂಲಭೂತವಾದಿ ಗುಂಪುಗಳು ಸರಕಾರ ರಚಿಸಿ ಇಡೀ ದೇಶವನ್ನೇ ತಮ್ಮ ಕೈವಶ ಮಾಡಿಕೊಳ್ಳುವ ಮಟ್ಟಕ್ಕೂ ಹೋಗಿದ್ದ ಸನ್ನಿವೇಶ ನೆನಪಿರುತ್ತದೆ. ಆಗ ನಮ್ಮ ದೇಶವು ಅಮೆರಿಕದೊಂದಿಗೆ ರಾಜತಾಂತ್ರಿಕ ಜಾಲವನ್ನು ಹೆಣೆದು ಬಾಂಗ್ಲಾದೇಶದ ರಾಜಕಾರಣದ ದಿಕ್ಕನ್ನು ಬದಲಿಸಿತ್ತು. ಪರಿಣಾಮ, ತಾರೀಖ್ ರೆಹಮಾನ್ ಬಾಂಗ್ಲಾದೇಶಕ್ಕೆ ಮರಳಿ ಅಲ್ಲಿನ ಪ್ರಧಾನಿಯಾಗಿ ಆಯ್ಕೆಯಾದರು.
ಆದರೂ ಎರಡು ಸವಾಲುಗಳು ಈಗಲೂ ಹಾಗೇ ಇವೆ. ಮೊದಲನೆಯದಾಗಿ, ಇಸ್ಲಾಮಿಕ್ ಮೂಲ ಭೂತ ವಾದಿ ತೀವ್ರಗಾಮಿಗಳು ವಿರೋಧ ಪಕ್ಷವಾಗಿ ಹೊರಹೊಮ್ಮುವುದನ್ನು ತಪ್ಪಿಸಬೇಕಿದೆ. ಎರಡನೆಯದಾಗಿ, ಬಾಂಗ್ಲಾದೇಶದ ಕೆಲ ಭಾಗಗಳಲ್ಲಿ ಬಾಹ್ಯ ಬೆಂಬಲದೊಂದಿಗೆ ಕಾರ್ಯಾಚರಣೆ ನಡೆಸುತ್ತಿರುವ ಭಯೋ ತ್ಪಾದಕರ ಜಾಲವನ್ನು ನಾಶಗೊಳಿಸಬೇಕಿದೆ. ತೀವ್ರಗಾಮಿ ಸಂಘಟನೆ ಗಳನ್ನು ಹೇಗೆ ಮಟ್ಟಹಾಕಬೇಕು ಎಂಬುದು ಹಸೀನಾಗೆ ಗೊತ್ತಿದೆ. ಆ ವಿಷಯದಲ್ಲಿ ಅವರಿಗೆ ಸಾಕಷ್ಟು ಅನುಭವವಿದೆ. ಅವರು ಬಾಂಗ್ಲಾದೇಶದ ಪ್ರಧಾನಿಯಾಗಿದ್ದಾಗ ಭಯೋತ್ಪಾದಕ ಗುಂಪು ಗಳ ವಿರುದ್ಧ ಸಾಕಷ್ಟು ಕಾರ್ಯಾಚರಣೆ ಗಳನ್ನು ನಡೆಸಿದ್ದರು. ಅನೇಕ ಭಯೋತ್ಪಾದಕರನ್ನು ಗಲ್ಲಿಗೂ ಏರಿಸಿದ್ದರು.
ನಿಜವಾದ ಆಟವಿರುವುದೇ ಇಲ್ಲಿ! ಈಗ ಆಟಗಾರರು ಮತ್ತೊಮ್ಮೆ ಸಿದ್ಧರಾಗಿದ್ದಾರೆ. ಹೀಗಾಗಿ ಶೇಖ್ ಹಸೀನಾ ಬಾಂಗ್ಲಾದೇಶಕ್ಕೆ ಮರಳಿ, ಇಸ್ಲಾಮಿಕ್ ಮೂಲಭೂತವಾದಿಗಳನ್ನು ಮಟ್ಟಹಾಕುವ ಕಾರ್ಯಾಚರಣೆಗೆ ನೆರವು ನೀಡಿದರೂ ಆಶ್ಚರ್ಯವಿಲ್ಲ! ರಾಜಕೀಯ ಮತ್ತು ರಾಜತಾಂತ್ರಿಕತೆಯಲ್ಲಿ ಯಾವುದೂ ಅಸಾಧ್ಯವಲ್ಲ. ಭಾರತದ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ದೊಡ್ಡ ಪ್ರಮಾಣದಲ್ಲಿ ರಹಸ್ಯ ಅಥವಾ ಸೂಕ್ಷ್ಮ ಪ್ರಾದೇಶಿಕ ಕಾರ್ಯಾಚರಣೆಗಳನ್ನು ನಡೆಸುತ್ತಿರುತ್ತಾರೆ. ಇತ್ತೀಚೆಗೆ ಕೆಲ ತಿಂಗಳುಗಳಿಂದ ಡಾ.ಜೈಶಂಕರ್ ಏಕೆ ಪದೇಪದೆ ಮಧ್ಯಪ್ರಾಚ್ಯ ದೇಶಗಳಿಗೆ ಹೋಗಿಬರುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೂ, ಒಳಗೊಳಗೇ ಏನೋ ಸಿದ್ಧತೆ ನಡೆಯುತ್ತಿರುವ ಸಾಧ್ಯತೆಯಂತೂ ಇದ್ದೇ ಇದೆ! ಸದ್ಯಕ್ಕೆ ಕಾದು ನೋಡೋಣ!