ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vijay Darda Column: ಬೇಕಿರೋದು ರಾಜಕೀಯವಲ್ಲ, ವಿಶ್ವಾಸಾರ್ಹ ಶಿಕ್ಷಣ ಸಂಸ್ಥೆ !

ದೆಹಲಿಯ ಜಂತರ್ ಮಂತರ್‌ನಲ್ಲಿ ಹೊತ್ತಿದ ಕಿಡಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನರ ರಾಜೀನಾಮೆಯೊಂದಿಗೆ ಶಮನಗೊಂಡಿದೆ. ಅದರ ಜೊತೆಗೆ, ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರವಷ್ಟೇ ದೇಶದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ನಂದನ್ ನಿಲೇಕಣಿ ನೇತೃತ್ವದ ಉನ್ನತಾಽಕಾರ ಕಾರ್ಯಪಡೆಯನ್ನು ರಚಿಸುವ ಘೋಷಣೆ ಮಾಡಿದ್ದಾರೆ.

ಬೇಕಿರೋದು ರಾಜಕೀಯವಲ್ಲ, ವಿಶ್ವಾಸಾರ್ಹ ಶಿಕ್ಷಣ ಸಂಸ್ಥೆ !

-

ಸಂಗತ

ಪ್ರತಿಯೊಂದು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವೂ ಕೇವಲ ಶೈಕ್ಷಣಿಕ ಪರೀಕ್ಷೆಗೆ ಸಂಬಂಧಿಸಿದ ಸಂಗತಿ ಯಲ್ಲ, ಬದಲಿಗೆ ಅದು ಲಕ್ಷಾಂತರ ಯುವಕರ ಕನಸು ಮತ್ತು ನಂಬಿಕೆಯ ಪರೀಕ್ಷೆ. ಧರ್ಮೇಂದ್ರ ಪ್ರಧಾನರ ರಾಜೀನಾಮೆ ಬಳಿಕ ಈಗ ಇಡೀ ದೇಶದ ಶಿಕ್ಷಣ ವ್ಯವಸ್ಥೆ ದಕ್ಷವಾಗಿ ಮತ್ತು ಆರೋಗ್ಯಕರ ವಾಗಿ, ಮಾಫಿಯಾಮುಕ್ತವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವುದು ಕೇಂದ್ರ ಸರಕಾರಕ್ಕೆ ಅನಿವಾರ್ಯವಾಗಿದೆ.

ದೆಹಲಿಯ ಜಂತರ್ ಮಂತರ್‌ನಲ್ಲಿ ಹೊತ್ತಿದ ಕಿಡಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನರ ರಾಜೀನಾಮೆಯೊಂದಿಗೆ ಶಮನಗೊಂಡಿದೆ. ಅದರ ಜೊತೆಗೆ, ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರವಷ್ಟೇ ದೇಶದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ನಂದನ್ ನಿಲೇಕಣಿ ನೇತೃತ್ವದ ಉನ್ನತಾಽಕಾರ ಕಾರ್ಯಪಡೆಯನ್ನು ರಚಿಸುವ ಘೋಷಣೆ ಮಾಡಿದ್ದಾರೆ.

ನಿಲೇಕಣಿಯವರ ಅಪಾರ ಬುದ್ಧಿವಂತಿ ಕೆಯನ್ನು ನಾನು ಖುದ್ದಾಗಿ ಬಲ್ಲೆ. ಆಧಾರ್‌ಗೆ ಸಂಬಂಧಿಸಿದ ಸಂಸದೀಯ ಸಮಿತಿಯಲ್ಲಿ ನಾನು ಸದಸ್ಯನಾಗಿದ್ದಾಗ, ಆಧಾರ್ ಪ್ರಾಧಿಕಾರದ ಮುಖ್ಯಸ್ಥನಾಗಿ ನಿಲೇಕಣಿ ಹೇಗೆ ಕೆಲಸ ಮಾಡುತ್ತಿದ್ದರು ಎಂಬುದನ್ನು ಹತ್ತಿರದಿಂದ ನೋಡಿದ್ದೇನೆ. ಅವರಿಗೆ ಶಿಕ್ಷಣ ವ್ಯವಸ್ಥೆಯ ಸುಧಾರಣೆಯ ಹೊಣೆ ನೀಡಿರುವುದರಿಂದ ಆ ಕ್ಷೇತ್ರದಲ್ಲಿ ಬಹುದೊಡ್ಡ ರೂಪಾಂತರ ಉಂಟಾಗುವುದರಲ್ಲಿ ಅನುಮಾನವಿಲ್ಲ. ಈ ಬೆಳವಣಿಗೆ ಏನನ್ನು ಸೂಚಿಸುತ್ತದೆ? ನಮ್ಮ ದೇಶದ ರಾಜಕಾರಣಿಗಳಿಗೆ ಕೊನೆಗೂ ಯುವಕರ ಆಶೋತ್ತರಗಳ ಮಹತ್ವವೇನು ಎಂಬುದು ಅರ್ಥವಾಗಿದೆ ಎಂಬುದನ್ನೇ? ಅಥವಾ ಇದೂ ಕೂಡ ಯುವಕರ ಸಿಟ್ಟನ್ನು ಶಮನಗೊಳಿಸಲು ಕೈಗೊಂಡ ಇನ್ನೊಂದು ತಾತ್ಕಾಲಿಕ ರಾಜಕೀಯ ಪ್ರತಿಕ್ರಿಯೆಯೇ? ಸಾರ್ವಜನಿಕ ನೀತಿ ರೂಪಿಸುವವರಿಗೆ ಜೆನ್ ಝೀಗಳು ಎಂದು ಕರೆಸಿಕೊಳ್ಳುವ ಇಂದಿನ ಯುವಕರಲ್ಲಿರುವ ಅಸಮಾಧಾನದ ಬಗ್ಗೆ ಆಳವಾದ ಅರಿವು ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಈ ಸಲ ಯುವಕರ ಮನಸ್ಸಿನ ಭಾವನೆಗಳು ತೀರಾ ಅನಿರೀಕ್ಷಿತವಾದ ರೀತಿಯಲ್ಲಿ ಹೊರಬಿದ್ದಿವೆ.

ಇದನ್ನೂ ಓದಿ: Dr Vijay Darda Column: ರಷ್ಯಾದ ‘ಪ್ರಳಯ ವಿಮಾನ’ ಇರಾನ್‌ನಲ್ಲಿ ಲ್ಯಾಂಡ್ ಆಗಿದ್ದೇಕೆ?

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಅಭಿಜಿತ್ ದೀಪ್ಕೆ ಬಗ್ಗೆ ಕೆಲವೇ ದಿನಗಳ ಹಿಂದಿನವರೆಗೆ ಯಾರಿಗೂ ಗೊತ್ತಿರಲಿಲ್ಲ. ಉನ್ನತ ವಿದ್ಯಾಭ್ಯಾಸಕ್ಕೆಂದು ಅವನು ಅಮೆರಿಕಕ್ಕೆ ಹೋಗಿದ್ದ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ನಿರುದ್ಯೋಗಿ ಯುವಕರನ್ನು ಜಿರಳೆಗಳೆಂದು ಕರೆದಿದ್ದನ್ನು ಕೇಳಿ ಬೇಸರಗೊಂಡು ಅವನು ಸೋಷಿಯಲ್ ಮೀಡಿಯಾದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಎಂಬ ಖಾತೆಯೊಂದನ್ನು ತೆರೆದಿದ್ದ. ನಂತರ ನಡೆದಿದ್ದು ಇತಿಹಾಸ.

ಬಹಳ ಕಡಿಮೆ ಅವಧಿಯಲ್ಲಿ ಆ ಖಾತೆಗೆ 2.5 ಕೋಟಿ ಯುವಕರು -ಲೋವರ್‌ಗಳಾದರು. ಇದು ಸಾಂಕೇತಿಕವೋ ಅಥವಾ ವಾಸ್ತವವೋ ಗೊತ್ತಿಲ್ಲ, ಆದರೆ ಈಗಿನ ತಲೆಮಾರಿನ ಯುವಕರಿಗೆ ತಮ್ಮ ಭಾವನೆಯನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ ಅಥವಾ ತಮ್ಮನ್ನು ತಪ್ಪಾಗಿ ಅರ್ಥೈಸಿ ಕೊಳ್ಳುತ್ತಿದ್ದಾರೆ ಅನ್ನಿಸುತ್ತಿದೆ ಎಂಬ ಆಳವಾದ ಸತ್ಯವೊಂದು ಈ ಪ್ರಕರಣದಿಂದ ಬೆಳಕಿಗೆ ಬಂತು.

ಇದೇ ಚಡಪಡಿಕೆ ಅಥವಾ ತಳಮಳ ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ಒಂದೆಡೆ ಸೇರಿ, ‘ನೀಟ್ ಪೇಪರ್ ಸೋರಿಕೆಯ ಹೊಣೆ ಹೊತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು’ ಎಂದು ಘೋಷಣೆ ಕೂಗುವಾಗಲೂ ಅವರ ಮುಖದಲ್ಲಿ ಕಾಣಿಸುತ್ತಿತ್ತು. ಪರಿಸರ ಹೋರಾಟಗಾರ ಹಾಗೂ ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ ಅವರು ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಿದಾಗ ಈ ಹೋರಾಟ ಇನ್ನಷ್ಟು ತೀವ್ರಗೊಂಡಿತು.

ಯುವಕರ ಸಂದೇಶ ಸ್ಪಷ್ಟವಾಗಿತ್ತು: ‘ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ನಾವು ಸಹಿಸಿ ಕೊಳ್ಳುವುದಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಮಾಫಿಯಾಗಳು ಕೆಲಸ ಮಾಡುವುದನ್ನು ನೋಡಿಕೊಂಡು ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ.’ ಸರಕಾರ ಮಾಡಿದ ಒಂದು ಒಳ್ಳೆಯ ಕೆಲಸ ಏನೆಂದರೆ, ಪರಿಸ್ಥಿತಿ ಕೈಮೀರಿ ಹೋಗುವುದಕ್ಕೂ ಮೊದಲೇ ಎಚ್ಚೆತ್ತುಕೊಂಡು ಧರ್ಮೇಂದ್ರ ಪ್ರಧಾನ್‌ರ ರಾಜೀನಾಮೆ ಪಡೆದುಕೊಂಡಿತು. ಆದರೆ ಕತೆ ಇಲ್ಲಿಗೇ ಮುಗಿದಿಲ್ಲ.

ಇನ್ನಷ್ಟು ಆಳಕ್ಕಿಳಿದು ಮೂಲಭೂತ ಪ್ರಶ್ನೆಯನ್ನು ನಾವು ಕೇಳಬೇಕು. ದೇಶದ ಶಿಕ್ಷಣ ವ್ಯವಸ್ಥೆಯೇ ಅಭದ್ರವಾಗಿದ್ದರೆ ಯುವಕರ ಭವಿಷ್ಯ ಭದ್ರವಾಗುವುದು ಹೇಗೆ? ದೇಶದ ಭವಿಷ್ಯ ರೂಪುಗೊಳ್ಳು ವುದು ಕ್ಲಾಸ್ ರೂಮ್‌ಗಳಲ್ಲೇ ಹೊರತು ರಾಜಕೀಯ ವೇದಿಕೆಯಲ್ಲಿ ಅಲ್ಲ ಎಂಬುದನ್ನು ಪ್ರತ್ಯೇಕ ವಾಗಿ ಹೇಳಬೇಕಿಲ್ಲ. ಆದರೂ ದುರದೃಷ್ಟವಶಾತ್ ಶಿಕ್ಷಣ ವ್ಯವಸ್ಥೆಯ ಒಳಗೆ ರಾಜಕೀಯ ನುಸುಳಿ ಕೊಂಡಿದೆ. ಇತ್ತೀಚಿನ ಹೋರಾಟದಲ್ಲೇ ಇದಕ್ಕೂ ಸಾಕ್ಷಿಗಳಿವೆ.

ವಿದ್ಯಾರ್ಥಿಗಳ ಹೋರಾಟವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಅನೇಕ ರಾಜಕೀಯ ಶಕ್ತಿಗಳು ಪ್ರಯತ್ನಿಸಿದವು. ಆದರೆ ಯುವಕರು ಅಂತಹ ಪ್ರಯತ್ನಗಳನ್ನು ತಿರಸ್ಕರಿಸಿದರು. ಯುವಕರ ಮೆದುಳನ್ನು ಕೊರೆಯುತ್ತಿರುವ ಪ್ರಶ್ನೆಗಳೇ ಬೇರೆ. ಏಕೆ ನಮ್ಮ ದೇಶದ ಒಂದೇ ಒಂದು ಶಿಕ್ಷಣ ಸಂಸ್ಥೆ ಜಗತ್ತಿನ ಟಾಪ್ 100 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಅವರು ಕೇಳುತ್ತಾರೆ. ದುಡ್ಡಿರುವವರು, ರಾಜಕಾರಣಿಗಳು, ಅಧಿಕಾರಿಗಳು ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳುಹಿಸಿ ಓದಿಸುತ್ತಾರೆ. ಆದರೆ ಬಡವರ ಮಕ್ಕಳು, ಜನಸಾಮಾನ್ಯರ ಮಕ್ಕಳು ಏನು ಮಾಡಬೇಕು? ನಾನಿದನ್ನು ಪದೇಪದೆ ಹೇಳಿದ್ದೇನೆ.

ಸಂಸತ್ತಿ ನೊಳಗೂ ಇದರ ಬಗ್ಗೆ ಮಾತನಾಡಿದ್ದೇನೆ. ಸರಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕ ಹುದ್ದೆಯಲ್ಲಿರುವವರ ಮಕ್ಕಳು ಸರಕಾರಿ ಶಾಲೆ ಮತ್ತು ಕಾಲೇಜಿನಲ್ಲೇ ಓದಬೇಕು ಎಂಬ ನಿಯಮ ಜಾರಿಗೊಳಿಸಬೇಕು. ಆಗ ನೋಡಿ ನಮ್ಮ ಶಿಕ್ಷಣ ಸಂಸ್ಥೆಗಳು ಹೇಗೆ ರೂಪಾಂತರಗೊಳ್ಳುತ್ತವೆ! ಕೆಲವೇ ವರ್ಷಗಳಲ್ಲಿ ನಮ್ಮ ಸರಕಾರಿ ಶಿಕ್ಷಣ ಸಂಸ್ಥೆಗಳು ಖಾಸಗಿ ಶಿಕ್ಷಣ ಸಂಸ್ಥೆಗಳನ್ನೂ ಮೀರಿಸುವಂತೆ ಅದ್ಭುತವಾಗಿ ಬದಲಾಗುತ್ತವೆ.

ಯುವಕರು ನಡೆಸಿದ ಹೋರಾಟದ ಹಿನ್ನೆಲೆಯಲ್ಲಿ ಈ ದೇಶದ ನೀತಿ ನಿರೂಪಕರಿಗೆ ನಾನು ಕೆಲ ವಿಷಯಗಳನ್ನು ಹೇಳಬೇಕು. ಇಂದಿನ ಯುವಕರು ರಾಜಕೀಯದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅವರಿಗೆ ಪಾರದರ್ಶಕವಾದ, ವಿಶ್ವಾಸಾರ್ಹವಾದ ಮತ್ತು ನ್ಯಾಯಬದ್ಧವಾದ ಶಿಕ್ಷಣ ವ್ಯವಸ್ಥೆ ಬೇಕು. ವ್ಯವಸ್ಥೆಯಲ್ಲಿ ಅವರು ನಂಬಿಕೆ ಕಳೆದುಕೊಂಡರೆ ದೇಶವು ತನ್ನ ಅಮೂಲ್ಯವಾದ ಸಂಪತ್ತನ್ನು ಕಳೆದುಕೊಂಡಂತಾಗುತ್ತದೆ. ಆ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಅಂದರೆ ಅದಕ್ಕೆ ಕೇವಲ ಆಡಳಿತಾತ್ಮಕ ಸುಧಾರಣೆಗಳನ್ನು ತಂದರೆ ಸಾಲದು, ಅದರ ಜೊತೆಗೆ ಯುವಜನರ ಮನಸ್ಥಿತಿ ಯನ್ನು ಕೂಡ ಅರ್ಥ ಮಾಡಿಕೊಳ್ಳಬೇಕು.

ಜನಪ್ರತಿನಿಧಿಗಳು ಯುವಕರ ಭಾಷೆಯಲ್ಲಿ ಮಾತನಾಡುವುದನ್ನು ಕಲಿಯಬೇಕು. ಅವರ ಆಶೋತ್ತರಗಳನ್ನು ಅರ್ಥ ಮಾಡಿಕೊಳ್ಳಬೇಕು. ಅವರ ಅಭಿಪ್ರಾಯಗಳನ್ನು ಗೌರವಿಸಬೇಕು. ಹೇಗೆ ತಾಯಿಗೆ ತನ್ನ ಮಗು ಏನನ್ನೂ ಹೇಳದಿದ್ದರೂ ಅದರ ಭಾವನೆ ಅರ್ಥವಾಗುತ್ತದೆಯೋ ಹಾಗೆ ಈ ದೇಶದ ಯುವಕರ ಆಸೆ ಆಕಾಂಕ್ಷೆಗಳು ನಮ್ಮ ರಾಜಕಾರಣಿಗಳಿಗೆ ಅರ್ಥವಾಗಬೇಕು. ಇಲ್ಲಿ ತಲೆಮಾರಿಗೆ ಸಂಬಂಽಸಿದ ಸವಾಲು ಎದುರಾಗುತ್ತದೆ. ಇಂದಿನ ಬಹುತೇಕ ರಾಜಕಾರಣಿಗಳು ಹಳೆಯ ತಲೆಮಾರಿನವರು. ಇವರು ಯುವಕರಾಗಿದ್ದಾಗ ‘ಹಿರಿಯರನ್ನು ಗೌರವಿಸಿ’ ಎಂದು ಹಿರಿಯರು ಹೇಳುತ್ತಿದ್ದರು. ಅದನ್ನಿವರು ಮರುಮಾತಿಲ್ಲದೆ ಒಪ್ಪಿಕೊಂಡಿದ್ದರು.

ನಾನು ಕೂಡ ಇದೇ ತಲೆಮಾರಿಗೆ ಸೇರಿದವನು. ಆದರೆ ಇಂದಿನ ಯುವಕರು ಬೇರೆ ರೀತಿ ಯೋಚಿಸು ತ್ತಾರೆ. ‘ನಾವು ಹಿರಿಯರಿಗೆ ಗೌರವ ಕೊಡುತ್ತೇವೆ, ಆದರೆ ಆ ವ್ಯಕ್ತಿ ಗೌರವ ಪಡೆದುಕೊಳ್ಳಲು ಯೋಗ್ಯನಾಗಿದ್ದಾನೆ ಎಂಬ ನಂಬಿಕೆ ನಮಗೆ ಬರಬೇಕು’ ಎಂದು ನಮ್ಮ ಮಕ್ಕಳು ಹೇಳುತ್ತಾರೆ. ಈ ವ್ಯತ್ಯಾಸವಿದೆಯಲ್ಲಾ ಇದು ಅಗೌರವವನ್ನು ಸೂಚಿಸುವುದಿಲ್ಲ, ಬದಲಿಗೆ ನಮ್ಮ ನಂತರದ ತಲೆಮಾರಿನವರ ನಿರೀಕ್ಷೆಗಳು ಬದಲಾಗಿರುವುದನ್ನು ಸೂಚಿಸುತ್ತದೆ. ಹೀಗಾಗಿ ನಾಯಕರಿಗೂ ಯುವಕರಿಗೂ ನಡುವೆ ಇರುವ ತಲೆಮಾರಿನ ಅಂತರವನ್ನು ಮೊದಲು ನಿವಾರಿಸಿಕೊಳ್ಳಬೇಕು. ಅದಕ್ಕಾಗಿ ಅಽಕಾರಸ್ಥರು ಯುವಕರ ಜೊತೆಗೆ ಬೆರೆಯಬೇಕು.

ಯುವಕರ ನಿರೀಕ್ಷೆಗೆ ತಕ್ಕಂತೆ, ಅವರ ಭಾಷೆಯಲ್ಲೇ ಅವರ ಅಗತ್ಯಗಳನ್ನು ತಿಳಿದುಕೊಳ್ಳಬೇಕು. ನಾವು ತಿಳಿದುಕೊಳ್ಳಬೇಕಾದ ಇನ್ನೊಂದು ಸಂಗತಿಯಿದೆ. ಈಗಿನ ತಲೆಮಾರಿನವರು ಬ್ರ್ಯಾಂಡ್‌ಗಳು, ಸಂಸ್ಥೆಗಳು ಅಥವಾ ಪೂರ್ವಜರಿಂದ ಬಂದ ಒಲವುಗಳಿಗೆ ಕಟ್ಟುಬೀಳುವವರಲ್ಲ. ಇವರು ಎಲ್ಲವನ್ನೂ ತಮ್ಮದೇ ಆದ ಮಾನದಂಡದಲ್ಲಿ ಅಳೆಯುತ್ತಾರೆ. ಪದವಿ, ಘನತೆ ಅಥವಾ ಹೆಸರಿನ ಬಗ್ಗೆ ಇವರು ತಲೆಕೆಡಿಸಿಕೊಳ್ಳುವುದಿಲ್ಲ. ತಮ್ಮ ಭವಿಷ್ಯವನ್ನು ರೂಪಿಸುವ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾಮಾಣಿಕವಾದ ಸುಧಾರಣೆ ಬರಬೇಕೆಂದು ಇವರು ನಿರೀಕ್ಷಿಸುತ್ತಾರೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧ ಯುವಕರು ಹೋರಾಟ ಆರಂಭಿಸಿದ ನಂತರ ಪ್ರಧಾನಿ ನರೇಂದ್ರ ಮೋದಿಯವರು ಕೆಲ ಕಠಿಣ ಕ್ರಮಗಳನ್ನು ಜಾರಿಗೊಳಿಸಿದರು. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆ ನಡೆಸುವುದಕ್ಕೆಂದೇ ತ್ವರಿತಗತಿ ಕೋರ್ಟ್‌ಗಳನ್ನು ಸ್ಥಾಪಿಸುವುದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (ಎನ್‌ಟಿಎ) 47 ಅಧಿಕಾರಿಗಳನ್ನು ವಜಾಗೊಳಿಸಿದ್ದು, ಕೊನೆಗೆ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್‌ರಿಂದ ರಾಜೀನಾಮೆ ಪಡೆದಿದ್ದು ಈ ಕ್ರಮಗಳು ವ್ಯವಸ್ಥೆಯಲ್ಲಿ ಜನಸಾಮಾನ್ಯರ ನಂಬಿಕೆಯನ್ನು ಪುನರ್ ಸ್ಥಾಪಿಸುವುದಕ್ಕೆ ಪೂರಕವಾಗಿದ್ದವು.

ಇದನ್ನು ಸ್ವಾಗತಿಸಬೇಕು. ಭವಿಷ್ಯದಲ್ಲಿ ಇಂತಹ ಹಗರಣಗಳು ನಡೆಯದಂತೆ ಕಠಿಣಾತಿಕಠಿಣ ಕಾಯ್ದೆಯನ್ನು ಜಾರಿಗೊಳಿಸು ವುದೂ ಸೇರಿದಂತೆ ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳು ವುದಕ್ಕೂ ಸರಕಾರ ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿಯ ವರ ನಾಯಕತ್ವದಲ್ಲಿ ಭಾರತ ಈಗಾಗಲೇ ಜಾಗತಿಕ ಮಟ್ಟದಲ್ಲಿ ಹೊಸ ಎತ್ತರವನ್ನು ಏರುವ ಹಾಗೂ ಪ್ರಭಾವಶಾಲಿ ದೇಶವಾಗಿ ರೂಪುಗೊಳ್ಳುವ ಹಾದಿಯಲ್ಲಿದೆ.

ಹಾಗೆಯೇ, ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಸಂಘಟಿತ ಅಪರಾಧ ಚಟುವಟಿಕೆ ಗಳನ್ನು ಮಟ್ಟಹಾಕಲು, ಡ್ರಗ್ಸ್ ಮಾಫಿಯಾವನ್ನು ಸದೆಬಡಿಯಲು ಸಾಕಷ್ಟು ಕ್ರಮ ಕೈಗೊಳ್ಳ ಲಾಗುತ್ತಿದೆ. ಹೀಗಿರುವಾಗ ದೇಶದ ಶಿಕ್ಷಣ ವ್ಯವಸ್ಥೆಯನ್ನು ಮುನ್ನಡೆಸುವವರು ಅಷ್ಟೇ ಗುರುತರವಾದ ಜವಾಬ್ದಾರಿಯನ್ನು ನಿಭಾಯಿಸಬೇಕಾಗುತ್ತದೆ. ಅವರ ಕೆಲಸ ಕೇವಲ ಪರೀಕ್ಷೆಗಳ ಮೇಲ್ವಿಚಾರಣೆ ನಡೆಸುವುದಲ್ಲ, ಬದಲಿಗೆ ಅವರು ನಮ್ಮ ದೇಶದ ಯುವಕರಿಗೆ ಗುಣಮಟ್ಟದ ಶಿಕ್ಷಣ, ಆಧುನಿಕ ಸಿಲೆಬಸ್‌ಗಳು ಹಾಗೂ ಉತ್ತಮ ಶಿಕ್ಷಣ ಸಂಸ್ಥೆಗಳು ಲಭಿಸುವಂತೆಯೂ ನೋಡಿಕೊಳ್ಳ ಬೇಕಾಗುತ್ತದೆ.

ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ನಾಚಿಕೆಗೇಡಿನ ವಿಷಯ ಯಾವುದೂ ಇಲ್ಲ. ಈ ಎಡವಟ್ಟಿನಿಂದ ಬೇಸತ್ತು ಅನೇಕ ವಿದ್ಯಾರ್ಥಿಗಳು ಜೀವ ಕಳೆದುಕೊಂಡಿದ್ದಾರೆ. ಆದ್ದರಿಂದಲೇ ಪ್ರತಿಯೊಂದು ಪ್ರಶ್ನೆಪತ್ರಿಕೆ ಸೋರಿಕೆಯೂ ಪರೀಕ್ಷಾ ಹಗರಣಕ್ಕಿಂತ ದೊಡ್ಡದು ಎಂದು ನಾನು ಹೇಳುತ್ತಿರುತ್ತೇನೆ. ಇದು ಕನಸುಗಳಿಗೆ ಒಡ್ಡಿದ ಪರೀಕ್ಷೆ. ಲಕ್ಷಾಂತರ ಯುವಕರ ನಂಬಿಕೆಯ ಜೊತೆಗಿನ ಆಟ. ಇನ್ನೊಂದು ಸುತ್ತಿನ ರಾಜಕೀಯ ಚರ್ಚಾಗೋಷ್ಠಿ ನಮ್ಮ ದೇಶಕ್ಕೆ ಬೇಕಿಲ್ಲ. ಈ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ನಿರ್ಣಾಯಕವಾದ ಬದಲಾವಣೆಯನ್ನು ಯುವಸಮೂಹ ಎದುರುನೋಡುತ್ತಿದೆ.

ಯಾರು ಬಲಾಢ್ಯರೋ ಅವರೇ ಸರಿ! ನನಗೆ ಡೊನಾಲ್ಡ್ ಟ್ರಂಪ್ ಬಗ್ಗೆ ತುಂಬಾ ಗೌರವವಿದೆ. ಇಷ್ಟಕ್ಕೂ ಅವರು ಜಗತ್ತಿನ ಅತ್ಯಂತ ಬಲಾಢ್ಯ ರಾಷ್ಟ್ರದ ಅಧ್ಯಕ್ಷ. ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಜಗತ್ತಿನ ಎಲ್ಲಾ ದೇಶಗಳು ಅಮೆರಿಕದ ಅಧ್ಯಕ್ಷರ ಕಚೇರಿಗೆ ಗೌರವ ನೀಡುತ್ತವೆ. ಆದರೂ ಅವರ ಸರಕಾರ ಭಾರತ ಸೇರಿದಂತೆ 60 ವಾಣಿಜ್ಯ ಪಾಲುದಾರ ದೇಶಗಳಿಗೆ ಹೊಸ ತೆರಿಗೆ ವಿಧಿಸಲು ತಯಾರಿ ಮಾಡಿಕೊಳ್ಳುತ್ತಿದೆ ಎಂಬ ವಿಷಯ ಕೇಳಿ ನನಗೆ ಇಂಗ್ಲಿಷ್ ಗಾದೆಯೊಂದು ನೆನಪಾಯಿತು. Might is right ! ಕನ್ನಡದಲ್ಲಿ ಇದನ್ನು ಹೇಗೆ ಹೇಳಬಹುದು? ‘ಯಾರು ಬಲಶಾಲಿ ಗಳೋ ಅವರೇ ಸರಿ’ ಎನ್ನಬಹುದು.

ಇಷ್ಟಾಗಿಯೂ ನಿಟ್ಟುಸಿರು ಬಿಡಲು ಟ್ರಂಪ್ ಒಂದು ಅವಕಾಶ ನೀಡಿದ್ದಾರೆ. ಉದ್ದೇಶಿತ ಹೊಸ ತೆರಿಗೆಯ ವ್ಯಾಪ್ತಿಯಿಂದ ಸದ್ಯ ಅಮೆರಿಕಕ್ಕೆ ಬೇರೆ ಬೇರೆ ದೇಶಗಳು ರಫ್ತು ಮಾಡುವ ಜನರಿಕ್ ಔಷಧಗಳನ್ನು ಅವರು ಹೊರಗೆ ಇರಿಸಿದ್ದಾರೆ. ಅಮೆರಿಕವು ಬೇರೆ ದೇಶಗಳಿಂದ ತರಿಸಿಕೊಳ್ಳುವ ಜನರಿಕ್ ಔಷಧಿಗಳ ಪೈಕಿ ಶೇ.45ರಷ್ಟು ಔಷಧಿಗಳನ್ನು ಭಾರತವೇ ಅಲ್ಲಿಗೆ ರಫ್ತು ಮಾಡುತ್ತದೆ!

ಹೀಗಾಗಿ ಟ್ರಂಪ್ ನೀಡಿದ ವಿನಾಯ್ತಿಗೆ ನಾವು ಕೃತಜ್ಞರಾಗಿರಬೇಕು. ಮುಂದಿನ ವರ್ಷ ಏನಾಗುತ್ತದೆ ಯೋ ದೇವರೇ ಬಲ್ಲ. ಮೊದಲೇ ಟ್ರಂಪ್ ದಿನಕ್ಕೊಂದು ನಿರ್ಧಾರ ಬದಲಿಸುವ ವ್ಯಕ್ತಿ. ಅಲ್ಲದೆ, ಇನ್ನು ಹನ್ನೆರಡು ತಿಂಗಳು ಕಳೆದ ಮೇಲೆ ಭಾರತ- ಅಮೆರಿಕದ ವ್ಯಾಪಾರಿ ಸಂಬಂಧ ಹೇಗಿರುತ್ತದೆ ಎಂಬುದನ್ನು ಈಗಲೇ ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಈ ಕ್ಷಣಕ್ಕೆ ಬಿಗ್ ಬಾಸ್‌ಗೆ ಜೈ ಅಂದುಬಿಡೋಣ!