ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gururaj Gantihole Column: ಕರ್ನಾಟಕದಲ್ಲಿ ಒಂದರಿಂದ ಹಲವು ಬೆಂಗಳೂರು ಆಗಲಿಲ್ಲವೇಕೆ ?

ದಕ್ಷಿಣ ಭಾರತದ ಮ್ಯಾಂಚೆಸ್ಟರ್ ಎಂದೇ ಖ್ಯಾತವಾಗಿರುವ ಕೊಯಮತ್ತೂರು ಜವಳಿ, ನಿಖರ ಎಂಜಿನಿಯರಿಂಗ್, ಪಂಪ್ ಉತ್ಪಾದನೆ ಮತ್ತು ಫೌಂಡ್ರಿ ಘಟಕಗಳ ಜಾಗತಿಕ ಕೇಂದ್ರವಾಗಿ ಬೆಳೆದಿದ್ದರೆ; ಸಾಮಾನ್ಯ ಗಡಿ ಭಾಗವಾಗಿದ್ದ ಹೊಸೂರು ಇಂದು ಟಿವಿಎಸ್ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್‌ನಂತಹ ದೈತ್ಯ ಕಂಪನಿಗಳ ಮೂಲಕ ವಾಹನ ಉತ್ಪಾದನೆ, ಭಾರಿ ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್ ತಯಾರಿಕಾ ಕೇಂದ್ರವಾಗಿ ಬದಲಾಗಿದೆ.

ಗಂಟಾಘೋಷ

ದಶಕಗಳಿಂದ, ಅಭಿವೃದ್ಧಿಶೀಲ ಆರ್ಥಿಕತೆಗಳಲ್ಲಿ ಕೇವಲ ಒಂದು ಬೃಹತ್ ನಗರವನ್ನು ಮಾತ್ರ ಬೆಳೆಸುವ ಮಾದರಿ ರೂಢಿಯಲ್ಲಿದೆ. ಬಂಡವಾಳ, ಪ್ರತಿಭೆ ಮತ್ತು ಮೂಲಸೌಕರ್ಯಗಳೆಲ್ಲವೂ ಕೇವಲ ಒಂದು ಮಹಾನಗರದ ಪಾಲಾಗುತ್ತಿದ್ದು, ರಾಜ್ಯದ ಉಳಿದ ಭಾಗಗಳು ಆರ್ಥಿಕವಾಗಿ ಹಿಂದು ಳಿಯುತ್ತಿವೆ. ಆದರೆ, ಭಾರತದ ಕೆಲವು ರಾಜ್ಯಗಳು ಈ ಹಳೆಯ ಮಾದರಿಯನ್ನು ಮುರಿದು ಹೊಸ ದಾರಿ ಹಿಡಿದು ಯಶಸನ್ನು ಕಾಣುತ್ತಿವೆ. ತಮಿಳುನಾಡು, ಮಹಾರಾಷ್ಟ್ರ, ಗುಜರಾತ್ ಮತ್ತು ಕೇರಳ ದಂತಹ ರಾಜ್ಯಗಳು ಉದ್ದೇಶ ಪೂರ್ವಕವಾಗಿ ‘ಬಹುನಗರ’ ಅಭಿವೃದ್ಧಿ ಜಾಲವನ್ನು ಬೆಳೆಸಿವೆ.

ಇದರ ಮೂಲಕ ಆರ್ಥಿಕ ಸಂಪತ್ತನ್ನು ವಿಕೇಂದ್ರೀಕರಿಸಿ, ಸಂಪನ್ಮೂಲಗಳನ್ನು ಸರಿಯಾಗಿ ಹಂಚುವ ಜೊತೆಗೆ ವೈವಿಧ್ಯಮಯ ಕೈಗಾರಿಕಾ ನೆಲೆಗಳನ್ನು ನಿರ್ಮಿಸುವಲ್ಲಿ ಯಶಸ್ವಿ ಯಾಗಿವೆ. ಈ ರಾಜ್ಯಗಳ ಯಶಸ್ಸಿನ ನೋಟ ಇಲ್ಲಿದೆ. ತಮಿಳುನಾಡು: ವಿಕೇಂದ್ರೀಕರಣ ತಮಿಳುನಾಡು ಕೈಗಾರಿಕೆಗಳ ವಿಕೇಂದ್ರೀಕರಣಕ್ಕೆ ಅತ್ಯುತ್ತಮ ಉದಾಹರಣೆ. ರಾಜಧಾನಿ ಚೆನ್ನೈ ಮೇಲೆ ಮಾತ್ರ ಒತ್ತಡ ಹೇರುವ ಬದಲು, ಪ್ರತಿ ನಗರವನ್ನೂ ಜಾಗತಿಕ ಉದ್ಯಮದ ಕೇಂದ್ರವಾಗಿ ಬೆಳೆಸಿದೆ.

ದಕ್ಷಿಣ ಭಾರತದ ಮ್ಯಾಂಚೆಸ್ಟರ್ ಎಂದೇ ಖ್ಯಾತವಾಗಿರುವ ಕೊಯಮತ್ತೂರು ಜವಳಿ, ನಿಖರ ಎಂಜಿನಿಯರಿಂಗ್, ಪಂಪ್ ಉತ್ಪಾದನೆ ಮತ್ತು ಫೌಂಡ್ರಿ ಘಟಕಗಳ ಜಾಗತಿಕ ಕೇಂದ್ರವಾಗಿ ಬೆಳೆದಿದ್ದರೆ; ಸಾಮಾನ್ಯ ಗಡಿ ಭಾಗವಾಗಿದ್ದ ಹೊಸೂರು ಇಂದು ಟಿವಿಎಸ್ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್‌ನಂತಹ ದೈತ್ಯ ಕಂಪನಿಗಳ ಮೂಲಕ ವಾಹನ ಉತ್ಪಾದನೆ, ಭಾರಿ ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್ ತಯಾರಿಕಾ ಕೇಂದ್ರವಾಗಿ ಬದಲಾಗಿದೆ.

ಇದನ್ನೂ ಓದಿ: Gururaj Gantihole Column: ಬಿಡದಿ ಟೌನ್ʼಶಿಪ್‌ʼಗೆ ಬಿಡದ ಹಠ: ಬೇರೆಲ್ಲೂ ಯಾಕಿಲ್ಲ ?

ಬಿಹೆಚ್‌ಇಎಲ್ ಹಾಗೂ ನೂರಾರು ಸಣ್ಣ ಮತ್ತು ಮಧ್ಯಮ ಗಾತ್ರದ ಉತ್ಪಾದನಾ ಘಟಕಗಳನ್ನು ಹೊಂದಿರುವ ತಿರುಚ್ಚಿ (ತಿರುಚಿರಾಪಳ್ಳಿ) ಭಾರಿ ಎಂಜಿನಿ ಯರಿಂಗ್ ಕೇಂದ್ರವಾಗಿ ಹೊರ ಹೊಮ್ಮಿದ್ದು, ಮಧುರೈ ಮತ್ತು ಸೇಲಂ ನಗರಗಳು ದ್ವಿತೀಯ ಹಂತದ ಐಟಿ ಕೇಂದ್ರಗಳಾಗಿ, ಬಟ್ಟೆ ಉತ್ಪಾದನಾ ಕಾರಿಡಾರ್‌ಗಳಾಗಿ ಹಾಗೂ ಉಕ್ಕು ಸಂಸ್ಕರಣಾ ವಲಯಗಳಾಗಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. ತಮಿಳುನಾಡು ಭಾರತದ ಅತಿ ಹೆಚ್ಚು ಕಾರ್ಖಾನೆ ಹೊಂದಿರುವ ರಾಜ್ಯ. ಇಲ್ಲಿನ ದ್ವಿತೀಯ ಹಂತದ ನಗರಗಳು ರಾಷ್ಟ್ರೀಯ ಎಂಜಿನಿಯರಿಂಗ್ ಮತ್ತು ಜವಳಿ ರಫ್ತಿನಲ್ಲಿ ಬಹು‌ ದೊಡ್ಡ ಪಾಲು ಹೊಂದಿವೆ.

ಆರ್ಥಿಕ ಅವಕಾಶಗಳನ್ನು ಹಂಚುವ ಮೂಲಕ, ಚೆನ್ನೈಗೆ ವಲಸೆ ಹೋಗುವವರ ಸಂಖ್ಯೆಯನ್ನು ಕಡಿಮೆ ಮಾಡಿದ್ದು, ನಗರ ಮತ್ತು ಗ್ರಾಮೀಣ ಜನಸಂಖ್ಯೆಯ ನಡುವೆ ಉತ್ತಮ ಸಮತೋಲನ ಕಾಯ್ದುಕೊಂಡಿದೆ. ಸರಕಾರವು ಸಿಪ್ಕಾಟ್ ಮತ್ತು ಟಿಡ್ಕೊ ಸಂಸ್ಥೆಗಳ ಮೂಲಕ ಚೆನ್ನೈ -ಬೆಂಗಳೂರು ಹಾಗೂ ವೈಜಾಗ್- ಚೆನ್ನೈ ಕಾರಿಡಾರ್ ಆಧಾರಿತ ಯೋಜನೆಗಳನ್ನು ರೂಪಿಸಿ ಎರಡನೇ ಹಂತದ ನಗರಗಳಲ್ಲಿ ವಿಶೇಷ ಆರ್ಥಿಕ ವಲಯಗಳನ್ನು ಸ್ಥಾಪಿಸಿದೆ. ಈ ನಗರಗಳನ್ನು ಉತ್ತಮ ರಸ್ತೆಗಳಿಂದ ಮತ್ತು ವಿಮಾನ ನಿಲ್ದಾಣಗಳ ಮೂಲಕ ಸಂಪರ್ಕಿಸಲು ದೊಡ್ಡ ಮೊತ್ತದ ಹಣ ಮೀಸಲಿಟ್ಟಿದೆ.

ಮಹಾರಾಷ್ಟ್ರ: ಕೈಗಾರಿಕಾ ಜಾಲ

ಮುಂಬೈ ಭಾರತದ ಆರ್ಥಿಕ ರಾಜಧಾನಿಯಾಗಿದ್ದರೂ, ಮಹಾರಾಷ್ಟ್ರದ ನೈಜ ಶಕ್ತಿ ಇರುವುದು ಆ ರಾಜ್ಯದ ಎರಡನೇ ಹಂತದ ನಗರಗಳ ಸ್ವಾವಲಂಬನೆಯಲ್ಲಿದೆ. ಈ ನಗರಗಳು ಉಳಿವಿಗಾಗಿ ರಾಜಧಾನಿಯ ಮೇಲೆ ಅವಲಂಬಿತವಾಗಿಲ್ಲ. ಮಹಾರಾಷ್ಟ್ರದಲ್ಲಿ ಮುಂಬೈಗಿಂತ ಸಂಪೂರ್ಣ ಸ್ವತಂತ್ರ ವಾಗಿ ಕಾರ್ಯನಿರ್ವಹಿಸುತ್ತಿರುವ ಪುಣೆಯು ಜಾಗತಿಕ ಮಟ್ಟದ ವಾಹನ ಉತ್ಪಾದನಾ ಕೇಂದ್ರವಾಗಿ (ಟಾಟಾ ಮೋಟಾರ್ಸ್, ಬಜಾಜ್ ಆಟೋ) ಮತ್ತು ಭಾರತದ ಎರಡನೇ ಅತಿದೊಡ್ಡ ಐಟಿ ಕೇಂದ್ರವಾಗಿ ಬೆಳೆದಿದೆ; ಹಾಗೆಯೇ ತನ್ನ ಭೌಗೋಳಿಕ ಕೇಂದ್ರ ಸ್ಥಾನ ವನ್ನು ಬಳಸಿಕೊಂಡಿರುವ ನಾಗ್ಪುರವು ಭಾರತದ ಪ್ರಮುಖ ಸರಕು ಸಾಗಾಣಿಕೆ (ಲಾಜಿಸ್ಟಿಕ್ಸ್), ವಿಮಾನ ನಿರ್ವಹಣೆ ಮತ್ತು ಗೋದಾಮುಗಳ ಕೇಂದ್ರವಾಗಿ ಹೊರಹೊಮ್ಮಿದ್ದರೆ, ನಾಸಿಕ್ ಮತ್ತು ಛತ್ರಪತಿ ಸಂಭಾಜಿನಗರ (ಔರಂಗಾಬಾದ್) ನಗರಗಳು ಎಫ್‌ʼಎಂಸಿಜಿ, ಎಂಜಿನಿಯರಿಂಗ್, ಔಷಧ (ಫಾರ್ಮಾ) ಹಾಗೂ ವೈನ್ ಉತ್ಪಾದನಾ ಕೇಂದ್ರಗಳಾಗಿ ಅಭಿವೃದ್ಧಿ ಹೊಂದಿವೆ. ಈ ನಗರಗಳ ಒಗ್ಗಟ್ಟಿನಿಂದಾಗಿ ಭಾರತದ ಜಿಡಿಪಿಗೆ ಮಹಾರಾಷ್ಟ್ರವು ನಿರಂತರವಾಗಿ ಅತಿ ಹೆಚ್ಚು (ಸುಮಾರು 15%) ಕೊಡುಗೆ ನೀಡುತ್ತಿದೆ.

Screenshot_1 ok

ಕಾರ್ಪೊರೇಟ್ ತೆರಿಗೆ ಸಂಗ್ರಹದಲ್ಲಿ ಪುಣೆ ಮಹಾನಗರಗಳಿಗೆ ಪೈಪೋಟಿ ನೀಡುತ್ತಿದ್ದರೆ, ನಾಗ್ಪುರವು ದೇಶದ ಪೂರೈಕೆ ಜಾಲದ ಬೆನ್ನೆಲುಬಾಗಿದೆ. ರಾಜ್ಯ ಸರಕಾರವು ಎಂಐಡಿಸಿ ಮೂಲಕ ರಾಜ್ಯದಾ ದ್ಯಂತ 289 ಕ್ಕೂ ಹೆಚ್ಚು ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಿದೆ. ನಾಗ್ಪುರದಲ್ಲಿ 4000 ಹೆಕ್ಟೇರ್ ಪ್ರದೇಶದಲ್ಲಿ ‘ಮಿಹಾನ್’ ಎಂಬ ಸಮಗ್ರ ವಿಮಾನಯಾನ ಮತ್ತು ಸರಕು ಸಾಗಾಣಿಕೆ ನಗರವನ್ನು ನಿರ್ಮಿಸಿದೆ. ಅಲ್ಲದೆ, ರೂ.55,000 ಕೋಟಿ ವೆಚ್ಚದ ಸಮೃದ್ಧಿ ಎಕ್ಸ್‌ಪ್ರೆಸ್‌ವೇ (ಮುಂಬೈ-ನಾಗ್ಪುರ) ಮೂಲಕ 10 ಪ್ರಮುಖ ಜಿಗಳನ್ನು ಮುಖ್ಯ ಆರ್ಥಿಕ ಜಾಲಕ್ಕೆ ಜೋಡಿಸಿದೆ.

ಗುಜರಾತ್: ಮಾರುಕಟ್ಟೆ ಆಧಾರಿತ

ಗುಜರಾತ್‌ನ ಯಶಸ್ಸು ಕೇವಲ ಸಾಮಾನ್ಯ ಕೈಗಾರಿಕೆಗಳಲ್ಲ, ಬದಲಾಗಿ ಪ್ರತಿಯೊಂದು ನಗರಕ್ಕೂ ಒಂದು ಪ್ರತ್ಯೇಕ ಜಾಗತಿಕ ಮಾರುಕಟ್ಟೆಯ ಜವಾಬ್ದಾರಿಯನ್ನು ನೀಡಿರುವುದರಲ್ಲಿದೆ. ಜಗತ್ತಿನ 90% ವಜ್ರಗಳನ್ನು ಕತ್ತರಿಸಿ ಪಾಲಿಶ್ ಮಾಡುವ ಸೂರತ್ ನಿರ್ವಿವಾದವಾಗಿ ಜಾಗತಿಕ ವಜ್ರದ ರಾಜಧಾನಿ ಮತ್ತು ಬೃಹತ್ ಸಿಂಥೆಟಿಕ್ ಜವಳಿ ಕೇಂದ್ರವಾಗಿ ಬೆಳೆದಿದ್ದರೆ; ವಡೋದರಾ ನಗರವು ಪಶ್ಚಿಮ ಭಾರತದ ಭಾರೀ ಎಂಜಿನಿಯರಿಂಗ್, ವಿದ್ಯುತ್ ಉಪಕರಣಗಳು (ಎಬಿಬಿ, ಸೀಮೆ) ಮತ್ತು ರಾಸಾಯನಿಕ ಹಾಗೂ ಔಷಧ ತಯಾರಿಕಾ ಕೇಂದ್ರವಾಗಿ ರೂಪುಗೊಂಡಿದೆ. ಇದರ ಜೊತೆಗೆ, ರಾಜ್‌ಕೋಟ್ ಆಟೋಮೊಬೈಲ್ ಬಿಡಿಭಾಗಗಳು, ಕಾಸ್ಟಿಂಗ್, ಚಾರ್ಜಿಂಗ್ ಮತ್ತು ಯಂತ್ರಗಳ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಿದ್ದು, ಅಹಮದಾಬಾದ್ ಮತ್ತು ಗಾಂಧಿನಗರಗಳು ಹಣ ಕಾಸು ಸೇವೆಗಳು, ಫಿನ್‌ಟೆಕ್ (ಗಿಫ್ಟ್ ಸಿಟಿ), ಫಾರ್ಮಾ ಮತ್ತು ಜವಳಿ ವ್ಯಾಪಾರದ ಪ್ರಮುಖ ಕೇಂದ್ರ ಗಳಾಗಿ ಅಭಿವೃದ್ಧಿ ಹೊಂದಿವೆ.

ಭಾರತದ ಒಟ್ಟು ರಫ್ತಿನಲ್ಲಿ ಗುಜರಾತ್ 20%ಕ್ಕಿಂತ ಹೆಚ್ಚಿನ ಪಾಲು ಹೊಂದಿದೆ. ಕೈಗಾರಿಕೆಗಳನ್ನು ಹಂಚಿರುವ ಕಾರಣ, ಒಂದು ವಲಯದಲ್ಲಿ ಆರ್ಥಿಕ ಕುಸಿತವಾದರೂ (ಉದಾಹರಣೆಗೆ ಸೂರತ್ ವಜ್ರ ಉದ್ಯಮ) ಇನ್ನೊಂದು ವಲಯದ (ವಡೋದರಾದ ಎಂಜಿನಿಯರಿಂಗ್ ಅಥವಾ ರಾಜ್‌ಕೋಟ್‌ನ ವಾಹನ ಉದ್ಯಮ) ಆರ್ಥಿಕತೆಗೆ ಪೆಟ್ಟು ಬೀಳುವುದಿಲ್ಲ. ಸರಕಾರವು ಜಿಐಡಿಸಿ ಮಾದರಿ ಬಳಸಿ ಕೊಂಡು ಪ್ರತಿ ಕೈಗಾರಿಕಾ ಗುಂಪಿಗೂ (ಕ್ಲಸ್ಟರ್‌ಗೂ) ಸ್ವಾವಲಂಬಿ ಸೌಲಭ್ಯಗಳನ್ನು ನಿರ್ಮಿಸಿದೆ.

ಅಹಮದಾಬಾದ್ ಮತ್ತು ಗಾಂಧಿನಗರದ ನಡುವೆ ಗಿಫ್ಟ್ ಸಿಟಿ ನಿರ್ಮಿಸಿ ಜಾಗತಿಕ ಹಣಕಾಸು ಸಂಸ್ಥೆಗಳನ್ನು ಸೆಳೆಯಲಾಗಿದೆ ಹಾಗೂ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಮೂಲಕ ರಫ್ತು ಪ್ರಕ್ರಿಯೆ ಯನ್ನು ವೇಗಗೊಳಿಸಲಾಗಿದೆ.

ಕೇರಳ: ಸಮಾನ ಅಭಿವೃದ್ಧಿ ಜಾಲ‌

ಇತರ ರಾಜ್ಯಗಳ ನಗರ ಮಾದರಿಗಳಿಗಿಂತ ಭಿನ್ನವಾಗಿ, ಕೇರಳದ ಅಭಿವೃದ್ಧಿ ಮಾದರಿಯು ಯಾವುದೇ ಒಂದು ನಿರ್ದಿಷ್ಟ ಬೃಹತ್ ನಗರದ ಮೇಲೆ ಅವಲಂಬಿತ ವಾಗಿಲ್ಲ. ಬದಲಾಗಿ, ಇಡೀ ರಾಜ್ಯದಾದ್ಯಂತ ಆರ್ಥಿಕ ಮೂಲಸೌಕ ರ್ಯಗಳನ್ನು ಸಮಾನವಾಗಿ ಹಂಚಲಾಗಿದೆ. ಭಾರತದ ಮೊದಲ ಮತ್ತು ಕಾರ್ಯಾಚರಣೆಯ ವಿಸ್ತೀರ್ಣ ದಲ್ಲಿ ಅತಿದೊಡ್ಡ ಐಟಿ ಪಾರ್ಕ್ ಆದ ‘ಟೆಕ್ನೋ ಪಾರ್ಕ್’ ಮೂಲಕ ತಿರುವನಂತಪುರಂ ಐಟಿ ಮತ್ತು ಬಾಹ್ಯಾಕಾಶ ಸಂಶೋಧನೆಯ ಕೇಂದ್ರವಾಗಿ ಬೆಳೆದಿದ್ದರೆ; ವಾಣಿಜ್ಯ ಮತ್ತು ಕಡಲ ವ್ಯಾಪಾರದ ಕೇಂದ್ರವಾಗಿರುವ ಕೊಚ್ಚಿಯು ಬಂದರು ಆಧಾರಿತ ಸರಕು ಸಾಗಾಣಿಕೆ, ಹಡಗು ನಿರ್ಮಾಣ, ಅಂತಾರಾಷ್ಟ್ರೀಯ ಟರ್ಮಿನಲ್ ಸೇವೆಗಳು ಮತ್ತು ‘ಇನೋಪಾರ್ಕ್’ ಐಟಿ ವ್ಯವಸ್ಥೆಗೆ ಹೆಸರಾಗಿದೆ. ಇನ್ನು, ಕೋಝಿ ಕ್ಕೋಡ್ ಉತ್ತರ ಕೇರಳದ ಪ್ರಾದೇಶಿಕ ವ್ಯಾಪಾರ, ಸೈಬರ್ ಪಾರ್ಕ್ ಮತ್ತು ಸೇವಾ ರಾಜಧಾನಿಯಾಗಿ ಅಭಿವೃದ್ಧಿ ಹೊಂದಿದೆ.

ಬಂಡವಾಳವು ಕೇವಲ ಒಂದೇ ನಗರದಲ್ಲಿ ಕೇಂದ್ರೀಕೃತವಾಗದ ಕಾರಣ ಕೇರಳವು ಮಾನವ ಅಭಿವೃದ್ಧಿ ಸೂಚ್ಯಂಕ ಗಳಲ್ಲಿ ಉತ್ತಮ ಸಾಧನೆ ತೋರಿದೆ. ಈ ವಿಕೇಂದ್ರೀಕೃತ ಮಾದರಿಯು ಎಲ್ಲರಿಗೂ ಉತ್ತಮ ಕನಿಷ್ಠ ವೇತನ, ಸಮಾನ ರಿಯಲ್ ಎಸ್ಟೇಟ್ ಅಭಿವೃದ್ಧಿ ಮತ್ತು ಆರೋಗ್ಯ ಹಾಗೂ ಶಿಕ್ಷಣಕ್ಕೆ ಸಮಾನ ಅವಕಾಶಗಳನ್ನು ಖಾತ್ರಿಪಡಿಸಿದೆ. ಸರ್ಕಾರವು ಕಿಫ್ಬಿ (KIIFB) ಮೂಲಕ ಜಾಗತಿಕ ಮಾರುಕಟ್ಟೆ ಗಳಿಂದ ಬಂಡವಾಳ ಸಂಗ್ರಹಿಸಿ ವಿಕೇಂದ್ರೀಕೃತ ಮೂಲಸೌಕರ್ಯ ನಿರ್ಮಿಸಿದೆ.

ಟೆಕ್ನೋಪಾರ್ಕ್, ಇನೋಪಾರ್ಕ್ ಮತ್ತು ಸೈಬರ್ ಪಾರ್ಕ್‌ಗಳನ್ನು ಒಂದೇ ಆಡಳಿತದ ಅಡಿಯಲ್ಲಿ ತರಲಾಗಿದೆ. ವಿಝಿಂಜಂ ಅಂತಾರಾಷ್ಟ್ರೀಯ ಬಂದರು ಮತ್ತು ಕೊಚ್ಚಿ ಸ್ಮಾರ್ಟ್ ಸಿಟಿಯಂತಹ ಯೋಜನೆಗಳಿಂದ ಕಡಲ ಮತ್ತು ಡಿಜಿಟಲ್ ಪೂರೈಕೆ ಜಾಲವನ್ನು ಸಮಾನವಾಗಿ ಹಂಚಲಾಗಿದೆ.

ಅದೇ ಹಾದಿಯಲ್ಲಿರುವ ರಾಜ್ಯಗಳು ಕೇವಲ ಮೇಲಿನ ನಾಲ್ಕು ರಾಜ್ಯಗಳಲ್ಲದೆ, ಉತ್ತರ ಭಾರತದ ಪ್ರಮುಖ ರಾಜ್ಯಗಳೂ ಸಹ ಏಕನಗರ ಮಾದರಿಯನ್ನು ಕೈಬಿಟ್ಟು ವಿಕೇಂದ್ರೀಕರಣದ ಕಡೆಗೆ ವೇಗವಾಗಿ ಹೆಜ್ಜೆ ಹಾಕುತ್ತಿವೆ. ಎಕ್ಸ್‌ಪ್ರೆಸ್ ವೇ ಆಧಾರಿತ ಪ್ರಗತಿ ಸಾಧಿಸುತ್ತಿರುವ ಉತ್ತರ ಪ್ರದೇಶವು ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ವಲಯಗಳನ್ನು ಎಲೆಕ್ಟ್ರಾನಿಕ್ಸ್, ಮೊಬೈಲ್ ಉತ್ಪಾದನೆ ಹಾಗೂ ಸೆಮಿಕಂಡಕ್ಟರ್ ಕೇಂದ್ರವಾಗಿ ಬೆಳೆಸುತ್ತಿದ್ದರೆ, ಆರ್ಥಿಕತೆಯನ್ನು ರಾಜ್ಯದ ಒಳಗೆ ತರಲು ಕಾನ್ಪುರ ಮತ್ತು ಲಕ್ನೋವನ್ನು ರಕ್ಷಣಾ ಕಾರಿಡಾರ್ ಹಾಗೂ ಏರೋಸ್ಪೇಸ್ ಹಬ್ ಆಗಿ ಮತ್ತು ವಾರಣಾಸಿಯನ್ನು ಲಾಜಿಸ್ಟಿಕ್ಸ್ ಹಾಗೂ ಪ್ರವಾಸೋದ್ಯಮದ ಕೇಂದ್ರವಾಗಿ ಅಭಿವೃದ್ಧಿಪಡಿಸುತ್ತಿದೆ.‌

ಇದೇ ಹಾದಿಯಲ್ಲಿ, ವೈವಿಧ್ಯಮಯ ಪ್ರಾದೇಶಿಕ ಕೇಂದ್ರಗಳನ್ನು ಹೊಂದಿರುವ ಮಧ್ಯಪ್ರದೇಶವು ರಾಜಧಾನಿ ಭೋಪಾಲ್ ಅನ್ನು ಆಡಳಿತ ಮತ್ತು ಭಾರಿ ಎಂಜಿನಿಯರಿಂಗ್ ಕೇಂದ್ರವಾಗಿ ಉಳಿಸಿ ಕೊಂಡು, ಇಂದೋರ್ ಮತ್ತು ಪಿತಾಂಪುರವನ್ನು ರಾಜ್ಯದ ಅತಿದೊಡ್ಡ ಆಟೋಮೊಬೈಲ್ ಮತ್ತು ಫಾರ್ಮಾ ಹಬ್ ಆಗಿ ಹಾಗೂ ಜಬಲ್ಪುರವನ್ನು ರಕ್ಷಣಾ ಉತ್ಪಾದನಾ ಕೇಂದ್ರವಾಗಿ ಪ್ರತ್ಯೇಕ ವಾಗಿ ಪೋಷಿಸುತ್ತಿದೆ.

ಮತ್ತೊಂದೆಡೆ, ವಲಯವಾರು ಪ್ರಾದೇಶಿಕ ಹಂಚಿಕೆ ಮಾಡಿರುವ ರಾಜಸ್ಥಾನವು ತನ್ನ ರಾಜಧಾನಿ ಜೈಪುರವನ್ನು ಐಟಿ ಮತ್ತು ವಜ್ರಾಭರಣ ಕೇಂದ್ರವಾಗಿ ಇರಿಸಿಕೊಂಡು, ಹರಿಯಾಣದ ಗಡಿಯಲ್ಲಿ ರುವ ಭಿವಾಡಿ/ಆಳ್ವಾರ್ ವಲಯವನ್ನು ವಾಹನ ಮತ್ತು ಉಕ್ಕಿನ ಉದ್ಯಮದ ಕ್ಲಸ್ಟರ್ ಆಗಿ, ಜೋಧ್‌ ಪುರವನ್ನು ಕರಕುಶಲ ಮತ್ತು ಬೃಹತ್ ಸೌರಶಕ್ತಿ ಕೇಂದ್ರವಾಗಿ ಯಶಸ್ವಿಯಾಗಿ ಬೆಳೆಸುತ್ತಿದೆ.

ಕರ್ನಾಟಕದ ಕತೆಯೇನು?

ಕರ್ನಾಟಕದಲ್ಲಿ ಬೆಂಗಳೂರನ್ನು ಹೊರತುಪಡಿಸಿ ರಾಜ್ಯದ ಇತರ ಯಾವುದೇ ದ್ವಿತೀಯ ಹಂತದ ನಗರಗಳಿಗೆ ಒಂದು ವ್ಯವಸ್ಥಿತ ಮತ್ತು ದೀರ್ಘಕಾಲೀನ ಕೈಗಾರಿಕಾ ಯೋಜನೆಯೇ ಇಲ್ಲದಿರುವುದು ಆಡಳಿತದ ಬಹುದೊಡ್ಡ ವೈಫಲ್ಯ. ಈ ನಗರಗಳಲ್ಲಿ ಬೆರಳೆಣಿಕೆಯಷ್ಟು ಕಾರ್ಖಾನೆಗಳು ಯಾವುದೇ ಗುರಿಯಿಲ್ಲದೆ ಅಲ್ಲಲ್ಲಿ ಚದುರಿ ಹೋಗಿವೆಯೇ ಹೊರತು, ಭವಿಷ್ಯದಲ್ಲಿ ಆಯಾ ನಗರಗಳನ್ನು ಯಾವ ನಿರ್ದಿಷ್ಟ ಕೈಗಾರಿಕಾ ವಲಯದ ಜಾಗತಿಕ ಕೇಂದ್ರವಾಗಿ ಬೆಳೆಸಬೇಕು ಎಂಬ ಯಾವುದೇ ಸ್ಪಷ್ಟ ನೀತಿ ಅಥವಾ ‘ಮಾಸ್ಟರ್ ಪ್ಲಾನ್’ ಸರಕಾರದ ಬಳಿ ಇಲ್ಲ. ನಿರಂತರವಾದ ಈ ದೂರದೃಷ್ಟಿ ಯ ಕೊರತೆಯಿಂದಾಗಿಯೇ ನಮ್ಮ ಇತರ ನಗರಗಳು ವ್ಯವಸ್ಥಿತ ಕ್ಲಸ್ಟರ್‌ಗಳಾಗಿ ರೂಪುಗೊಳ್ಳದೆ, ಸಣ್ಣಪುಟ್ಟ ಉದ್ಯಮಗಳಿಗೆ ಸೀಮಿತ ವಾಗಿವೆ.

ಒಂದು ಕ್ಷಣ ಕಲ್ಪಿಸಿಕೊಳ್ಳಿ; ಕರ್ನಾಟಕದಲ್ಲಿ ಕೇವಲ ಒಂದು ‘ಬೆಂಗಳೂರು’ ಇರುವ ಬದಲು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮೈಸೂರು, ದಾವಣಗೆರೆ ಹಾಗೂ ಕಲಬುರಗಿಯಂತಹ ನಗರ ಗಳೂ ಸಹ ‘ಬೆಂಗಳೂರಿನಷ್ಟೇ’ ಬೃಹತ್ ಮತ್ತು ಸ್ವತಂತ್ರ ಆರ್ಥಿಕ ಶಕ್ತಿಗಳಾಗಿ ಬೆಳೆದಿದ್ದರೆ ನಮ್ಮ ರಾಜ್ಯದ ಪ್ರಗತಿ ಯಾವ ಮಟ್ಟದಲ್ಲಿರುತ್ತಿತ್ತು? ಒಂದೇ ನಗರದ ಮೇಲಿರುವ ಮೂಲ ಸೌಕರ್ಯದ ಒತ್ತಡ, ರಸ್ತೆ ದಟ್ಟಣೆ ಮತ್ತು ಕುಡಿಯುವ ನೀರಿನಂತಹ ಸಮಸ್ಯೆಗಳು ತಾನಾಗಿಯೇ ಮಾಯವಾಗು ತ್ತಿದ್ದವು.

ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಅಥವಾ ಕರಾವಳಿಯ ಯುವಕರು ಉದ್ಯೋಗ ಅರಸಿ ರಾಜಧಾನಿಗೆ ವಲಸೆ ಬರುವ ಅನಿವಾರ್ಯತೆಯೇ ಇರುತ್ತಿರಲಿಲ್ಲ. ಆರ್ಥಿಕ ಸಂಪತ್ತು ಇಡೀ ರಾಜ್ಯದ ಉದ್ದಗಲಕ್ಕೂ ಸಮಾನವಾಗಿ ಹರಿಯುತ್ತಿತ್ತು. ಇಂದು ಕೇವಲ ಒಂದು ನಗರದಿಂದಲೇ ದೇಶದ ಜಿಡಿಪಿಗೆ ಮತ್ತು ಐಟಿ ರಫ್ತಿಗೆ ಕರ್ನಾಟಕವು ಇಷ್ಟು ದೊಡ್ಡ ಕೊಡುಗೆ ನೀಡುತ್ತಿದೆ. ಅದೇ ಇನ್ನು ಮುಂದೆ ತನ್ನ ಒಡಲಲ್ಲಿ ನಾಲ್ಕೆ ದು ‘ಬೆಂಗಳೂರು’ಗಳನ್ನು ಸೃಷ್ಟಿಸಿಕೊಂಡರೆ ಮುಂದೆ ಭಾರತದ ಅತಿ ದೊಡ್ಡ, ಸುಸ್ಥಿರ ಮತ್ತು ಅಸಾಧಾರಣ ಆರ್ಥಿಕ ಮಹಾಶಕ್ತಿಯಾಗಿ ಹೊರಹೊಮ್ಮುವುದರಲ್ಲಿ

ಸಂಶಯವಿಲ್ಲ.

ಗುರುರಾಜ್ ಗಂಟಿಹೊಳೆ

View all posts by this author