ಶಿಶಿರಕಾಲ
ಮಕ್ಕಳೇಕೆ ಸುಳ್ಳು ಹೇಳುತ್ತಾರೆ? ಈ ಲೇಖನಕ್ಕೆ ಹೀಗೊಂದು ಹೆಡಿಂಗ್ ಕೊಟ್ಟ ಮರುಕ್ಷಣ ನನಗೆ ಈ ಪ್ರಶ್ನೆಯೇ ಬಹಳ ವಿಚಿತ್ರವೆನಿಸುತ್ತಿದೆ. ಏಕೆಂದರೆ ಭೂಮಿಯ ಮೇಲಿನ ಎಲ್ಲರೂ ಸುಳ್ಳು ಹೇಳುತ್ತಾರೆ. ಹಾಗಿರುವಾಗ ಇದೆಂತಹ ಪ್ರಶ್ನೆ? ಆದರೂ ದೊಡ್ಡವರಾದ ನಮಗೆ ಇದಕ್ಕೆ ಉತ್ತರ ಬೇಕಿದೆ. ಮಕ್ಕಳೇಕೆ ಸುಳ್ಳು ಹೇಳುತ್ತಾರೆ? ನಾನಾಗ ಪಿಯುಸಿ ಎರಡನೇ ವರ್ಷ. ವರ್ಷದ ಕ್ಲಾಸುಗಳೆಲ್ಲ ಮುಗಿದಿದ್ದವು. ಕಾಲೇಜಿನಲ್ಲಿ ವಾರ್ಷಿಕ ಪರೀಕ್ಷೆಗಿಂತ ಮೊದಲು ಪ್ರಿಪರೇಟರಿ (ಪೂರ್ವ ತಯಾರಿ) ಪರೀಕ್ಷೆ ಇತ್ತು.
ಆ ಪರೀಕ್ಷೆ ಕಾಲಹರಣ ಎಂದೇ ನನಗಿದ್ದ ಗಟ್ಟಿ ನಿಲುವು. ವಾರ್ಷಿಕ ಪರೀಕ್ಷೆ ತಯಾರಿ ಹೇಗಿದೆ ಎಂದು ತಿಳಿಯುವ ಉದ್ದೇಶಕ್ಕೇ ಆದರೂ, ಅದರ ಫಲಿತಾಂಶಕ್ಕೆ ಯಾವುದೇ ಪರಿಣಾಮದ ಮಹತ್ವ ಇರಲಿಲ್ಲ. ಪ್ರತಿಫಲವಿಲ್ಲದ ಕೆಲಸ ಎಂದೆನಿಸುತ್ತಿತ್ತು. ಆದರೆ ಪ್ರಿಪರೇಟರಿ ಪರೀಕ್ಷೆ ತಪ್ಪಿಸಿಕೊಳ್ಳು ವಂತಿರಲಿಲ್ಲ.
‘ತಪ್ಪಿಸಿಕೊಂಡರೆ ವಾರ್ಷಿಕ ಪರೀಕ್ಷೆಗೆ ಹಾಲ್ ಟಿಕೆಟ್ ಕೊಡುವುದಿಲ್ಲ’ ಎಂದು ಪ್ರಾಂಶುಪಾಲರು ಕ್ಲಾಸಿಗೆ ಬಂದು ಹೆದರಿಸಿದ್ದರು. ಹಾಗಾಗಿ ಪರೀಕ್ಷೆಗೆ ಹೋಗುವುದು ಅನಿವಾರ್ಯವಾಗಿತ್ತು. ಆದರೆ ಉತ್ತರ ಪತ್ರಿಕೆಯಲ್ಲಿ ಏನು ಮತ್ತು ಎಷ್ಟು ಉತ್ತರ ಬರೆಯಬೇಕು ಎನ್ನುವುದು ನಮ್ಮ ಕೈಲಿದೆಯಲ್ಲ !
ಪಾಸ್ ಆಗಲು ಎಷ್ಟು ಬೇಕೋ ಅಷ್ಟೇ - ನಲವತ್ತು ಮಾರ್ಕ್ಸಿಗೆ ಆಗುವಷ್ಟು ಬರೆದು ಬರುವುದು ಎಂದು ಸ್ನೇಹಿತರೆಲ್ಲ ಮಾತನಾಡಿಕೊಂಡೆವು. ಪ್ರಿಪರೇಟರಿ ಪರೀಕ್ಷೆ ಒತ್ತಾಯಕ್ಕೆ ಹೀಗೊಂದು ಪ್ರತಿಭಟನೆ. ಉತ್ತರಗಳು ನಲವತ್ತು ಮಾರ್ಕ್ಸ್ ದಾಟುತ್ತಿದ್ದಂತೆ ಪೇಪರ್ ಮರಳಿ ಕೊಟ್ಟು, ಸ್ನೇಹಿತ ರೆಲ್ಲ ಸೇರಿ ಕ್ರಿಕೆಟ್ ಆಡಲು ಹೊರಟು ಬಿಡುತ್ತಿದ್ದೆವು.
ಇದನ್ನೂ ಓದಿ: Shishir Hegde Column: ಮರದ ವಿಮಾನ ಅರ್ಧ ಮೈಲಿ ಹಾರಿದ ಕಥೆ !
ಪ್ರಿಪರೇಟರಿ ಪರೀಕ್ಷೆ ಮುಗಿಯಿತು. ವಾರ್ಷಿಕ ಪರೀಕ್ಷೆಗೆ ಓದಿಕೊಳ್ಳಲು ಬಿಡುವು. ಆ ವೇಳೆ ಕಾಲೇಜಿನಲ್ಲಿ ಉಳಿದ ಡಿಗ್ರಿ, ಬ್ಯಾಕ್ ಲಾಗ್ ಪರೀಕ್ಷೆಗಳು ನಡೆಯುತ್ತಿದ್ದವು. ನನ್ನ ತಂದೆ ಅದೇ ತಾಲೂಕಿನ ಇನ್ನೊಂದು ಕಾಲೇಜಿನಲ್ಲಿ ಪ್ರಾಧ್ಯಾಪಕರು. ಅವರಿಗೆ ಸ್ಕ್ವಾಡ್ ಡ್ಯೂಟಿ - ಜಿಲ್ಲೆಯ ಪರೀಕ್ಷಾ ಮೇಲ್ವಿಚಾರಣೆಯ ಜವಾಬ್ದಾರಿ ಆ ವರ್ಷ.
ಸರಕಾರೀ ಜೀಪು ಹತ್ತಿ ಜಿಲ್ಲೆಯ ಬೇರೆ ಬೇರೆ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಿತ್ತು. ಅಂತೆಯೇ ಅವರ ಸ್ಕ್ವಾಡ್ ಡ್ಯೂಟಿಯ ಅಶ್ವಮೇಧದ ಜೀಪು ನಮ್ಮ ಕಾಲೇಜಿಗೂ ಬಂದೇಬಿಟ್ಟಿತು. ಅಲ್ಲಿಯವರೆಗೆ ನಾನೆಂದೂ ಪ್ರಾಧ್ಯಾಪಕರ ಮಗ ಎನ್ನುವ ಗುಟ್ಟು ಯಾರಲ್ಲೂ ಬಿಟ್ಟುಕೊಟ್ಟಿರಲಿಲ್ಲ. ಎಲ್ಲ ಮಾಸ್ತರ್ ಮಕ್ಕಳಂತೆ ನಾನು ಕೂಡ ಈ ವಿಷಯವನ್ನು ಶಾಲೆ, ಕಾಲೇಜಿ ನಲ್ಲಿ ಗೌಪ್ಯವಾಗಿಟ್ಟರೇ ಒಳ್ಳೆಯದೆಂದು ಪಾಲಿಸಿಕೊಂಡು ಬಂದಿದ್ದೆ.
ನಮ್ಮ ಕಿತಾಪತಿ, ಹುಡುಗಾಟಿಕೆಯ ಕೆಲಸಗಳಿಗೆ ‘ಪಿತ್ರಾರ್ಜಿತ ಗೌರವ’ ತಡೆಯಾಗಬಾರದಲ್ಲ. ಅಪ್ಪ ಆ ದಿನ ಕಾಲೇಜಿಗೆ ಬಂದವರು ‘ನನ್ನ ಮಗ ಇಲ್ಲಿಯೇ ಕಲಿಯುವುದು, ಈ ಹೆಸರು’ ಎಂದಿರಬೇಕು. ನಮ್ಮ ಪ್ರಾಂಶುಪಾಲರು ಕಾಲೇಜಿನ ಎಲ್ಲಾ ‘ಎಕ್ಸ್‌ಟ್ರಾ ಕರಿಕ್ಯುಲಂ’ ಪಟ್ಟಿಯಲ್ಲಿ ಇರುತ್ತಿದ್ದ ಹೆಸರನ್ನು ತಕ್ಷಣ ಗುರುತಿಸಿಬಿಟ್ಟರು. ಅಷ್ಟೇ ಆಗಿ ಸುಮ್ಮನಿದ್ದರೆ ಮುಗಿಯುತ್ತಿತ್ತು. ಬದಲಿಗೆ ಎಲ್ಲಿಲ್ಲದ ಹುರುಪಿನಿಂದ ನನ್ನ ಪ್ರಿಪರೇಟರಿ ಪರೀಕ್ಷೆಯ ಫಲಿತಾಂಶದ ಅಂಕಪಟ್ಟಿಯನ್ನು ಅಪ್ಪನ ಕೈಗೆ ಕೊಟ್ಟುಬಿಟ್ಟರು. ಅಲ್ಲಿ ನೋಡಿದರೆ ಒಂದಿಷ್ಟು 35, ಇನ್ನೊಂದಿಷ್ಟು 40. ಯಾವುದೂ ಅರ್ಧಶತಕ ದಾಟಿರಲಿಲ್ಲ!
ಅಪ್ಪ ಮನೆಗೆ ಬಂದವರೇ ನನ್ನನ್ನು ಕರೆದರು. ‘ಪರೀಕ್ಷೆ ತಯಾರಿ ಹೇಗೆ ನಡೆಯುತ್ತಿದೆ?’ ಎಂದು ಕೇಳಿದರು. ‘ಚೆನ್ನಾಗಿ ನಡೆಯುತ್ತಿದೆ’ ಎಂದೆ. ‘ಎಷ್ಟು ಮಾರ್ಕ್ಸ್ ಬರಬಹುದು?’ ನಾನು ಉತ್ತರಿಸಲಿಲ್ಲ. ‘ಪ್ರಿಪರೇಟರಿ ಪರೀಕ್ಷೆ ಪ್ರಕಾರ? ಡಿಸ್ಟಿಂಕ್ಷನ್ ಬರಬಹುದಾ?’ ಎಂದು ಕೇಳಿದರು. ಏನೋ ಸ್ವಲ್ಪ ಉಲ್ಟಾ ಹೊಡೆಯುತ್ತಿದೆಯಲ್ಲ ಎಂದೆನಿಸಿತು.
‘ಹೌದು, ಆ ದಿನವೇ ಹೇಳಿದೆನಲ್ಲ, ಪ್ರಿಪರೇಟರಿ ಪರೀಕ್ಷೆ ಚೆನ್ನಾಗಿ ಮಾಡಿದ್ದೇನೆ ಎಂದು.’ ‘ಇವತ್ತು ಸ್ಕ್ವಾಡ್ ಡ್ಯೂಟಿ - ನಿನ್ನ ಕಾಲೇಜಿಗೆ ಹೋಗಿದ್ದೆ’ ಎಂದರು. ಚಿಕ್ಕ ಚೀಟಿಯನ್ನು ಮೇಜಿನ ಮೇಲಿಟ್ಟರು. ಅದರಲ್ಲಿ ಪ್ರಿನ್ಸಿಪಾಲರು ಬರೆದುಕೊಟ್ಟ ನನ್ನ ಮಾರ್ಕ್ಸ್ ಗಳಿದ್ದವು!
ಪ್ರಿಪರೇಟರಿ ಪರೀಕ್ಷೆಯೆಂಬ ಒತ್ತಾಯಕ್ಕೆ ಮಾಡಿದ ಪ್ರತಿಭಟನೆ ಹೀಗೊಂದು ರೂಪ ತಾಳಿ ಬಿಡುತ್ತದೆ ಎಂಬ ಅಂದಾಜಿರಲಿಲ್ಲ. ಅಪ್ಪ ಹೇಳಿದರು - ನನಗೆ ಮಾರ್ಕ್ಸ್ ಬಗ್ಗೆ ಚಿಂತೆಯಿಲ್ಲ. ಆದರೆ ನಾನು ನನ್ನ ಮಗನನ್ನು ಸುಳ್ಳು ಹೇಳುವಂತೆ ಬೆಳೆಸಿದೆನಲ್ಲ. ನಾನು ತಪ್ಪಿzಲ್ಲಿ ಎಂದು ಯೋಚಿಸ ಬೇಕಾ ಗಿದೆ.. ಅವರು ಮತ್ತಿನ್ನೇನೂ ಮಾತಾಡಲಿಲ್ಲ. ಅವರು ಆಮೇಲೆ ಏನು ಯೋಚಿಸಿದರೋ ಗೊತ್ತಿಲ್ಲ. ಆದರೆ ಆ ದಿನ ನಾನು ಮಾತ್ರ ಸಾವಿರ ಬಾರಿ ನಾನೇಕೆ ಸುಳ್ಳು ಹೇಳಿದೆ ಎಂದು ಪ್ರಶ್ನಿಸಿಕೊಂಡೆ.
ಹೌದು, ನಾನು ಆ ದಿನ ಏಕೆ ಸುಳ್ಳು ಹೇಳಿದೆ? ಇಷ್ಟು ದಿನ ಏನೇನೋ ಸುಳ್ಳು ಹೇಳಿದೆನಲ್ಲ. ಏಕೆ? ಮಕ್ಕಳೇಕೆ ಸುಳ್ಳು ಹೇಳುತ್ತಾರೆ? ಮನೆಯ ಏನೋ ಒಂದು ವಸ್ತು ಹಾಳಾಗಿರುತ್ತದೆ, ಗ್ಲಾಸಿನ ವಸ್ತು ಒಡೆದುಹೋಗಿರುತ್ತದೆ. ಅಮ್ಮ ‘ನೀನು ಮಾಡಿz?’ ಎಂದು ಗದರಿಸುತ್ತಾಳೆ.
‘ಇಲ್ಲ, ನಾನಲ್ಲ ಮಾಡಿದ್ದು’ ಎನ್ನುವಾಗ ಮಗುವಿನೊಳಗೆ ಮೂಡುವ ಗೊಂದಲದಿಂದ ಕಣ್ಣು ‘ಕೆಳ ಅಡ್ಡ’ ಸರಿಯುತ್ತದೆ. ತಕ್ಷಣ ಅಮ್ಮನಿಗೆ ಸುಳ್ಳು ತಿಳಿದುಬಿಡುತ್ತದೆ. ಅಪ್ಪ, ಅಮ್ಮ ಯಾರೇ ಇರಲಿ, ಮಕ್ಕಳ ಸುಳ್ಳನ್ನು ಮಾತ್ರ ಸಹಿಸುವುದಿಲ್ಲ. ತಾವು ಹೇಗೇ ಇರಲಿ, ಎಷ್ಟೇ ಸುಳ್ಳು ಹೇಳಲಿ, ಮಕ್ಕಳು ಮಾತ್ರ ಸತ್ಯಹರಿಶ್ಚಂದ್ರರಾಗಬೇಕು. ಕೋಟೆ ಲೂಟಿ ಮಾಡುವ ರಾಜಕಾರಣಿಗೂ ಮಗನ ಮೊದಲ ಸುಳ್ಳು ತೀವ್ರವಾಗಿಯೇ ಬಾಧಿಸುತ್ತದೆ!
ಸುಳ್ಳು ಎಂದರೆ ಮೋಸ, ಅಪ್ರಾಮಾಣಿಕತನ ಇತ್ಯಾದಿ. ಸರಿ. ಆದರೆ ಒಂದು ಪ್ರಶ್ನೆ. ದೊಡ್ಡವರು ಹೇಳುವ ಸುಳ್ಳು ಮತ್ತು ಚಿಕ್ಕ ಮಕ್ಕಳು ಹೇಳುವ ಸುಳ್ಳು ಎರಡೂ ಒಂದೇ ತೂಕದ್ದೇ? ದೊಡ್ಡವರ ಪ್ರಪಂಚದಲ್ಲಿ ಸುಳ್ಳೆಂದರೆ ಉದ್ದೇಶವಿಟ್ಟು ಮಾಡಿದ ನಿರ್ಧಾರ. ಹೆಚ್ಚಾಗಿ ಪೂರ್ವ ಯೋಜಿತ ಅಥವಾ ಎದುರಿಗಿರುವವರನ್ನು ದಾರಿತಪ್ಪಿಸಲು ಆಯ್ದುಕೊಂಡ ಮಾರ್ಗ. ಆದರೆ ಮಕ್ಕಳಲ್ಲಿ? ‘ಇದನ್ನು ಮಾಡಿದ್ದು ನೀನು ಹೌದಾ?’ ಎಂದು ಕೇಳಿದಾಗ ಮಕ್ಕಳಲ್ಲಿ ದೊಡ್ಡವರಷ್ಟು ಮುಂದಿನ ಪರಿಣಾಮವನ್ನು ಗ್ರಹಿಸುವ ಚಾಲಾಕಿತನ ಬೆಳೆದಿರುವುದಿಲ್ಲ.
ಇಂತಹ ಪ್ರಶ್ನೆ ಎದುರಾದಾಗ ಅವರಲ್ಲಿ ಮೂಡುವ ಪ್ರಶ್ನೆಗಳೇ ಬೇರೆ. ಈಗ ನಾನು ಬೈಸಿಕೊಳ್ಳ ಬೇಕಾಗುತ್ತದೆಯೇ? ಸತ್ಯ ಹೇಳಿದರೆ ಪ್ರೀತಿಸುವ ಅಪ್ಪ ಅಮ್ಮನ ಕೋಪಕ್ಕೆ ಕಾರಣವಾಗಬಹುದೇ? ಅವರ ಕಣ್ಣಲ್ಲಿ ಕೆಟ್ಟವನಾಗಿ ಕಾಣಿಸಿಬಿಡುತ್ತೇನೆಯೇ? ಆಗ ಅವರ ಮನಸ್ಸು ಲಭ್ಯವಿರುವ, ಅತ್ಯಂತ ವೇಗದಲ್ಲಿ ಸನ್ನಿವೇಶದಿಂದ ತಪ್ಪಿಸಿಕೊಳ್ಳುವ ಸಾಧ್ಯತೆಯನ್ನು ಹುಡುಕುತ್ತದೆ.
ಎಲ್ಲರಿಗೂ ಪ್ರಾಮಾಣಿಕತೆಗಿಂತ ಉಳಿವಿನ ಪ್ರಶ್ನೆ ಯಾವತ್ತೂ ದೊಡ್ಡದು. ಸತ್ಯ ಹೇಳಿದರೆ ಮುಂದಿನ ಸನ್ನಿವೇಶ, ಆಗಬಹುದಾದ ಪರಿಣಾಮ ಮಕ್ಕಳಿಗೆ ಅಂದಾಜಿಸಲು ಬರುವುದಿಲ್ಲ. ಪರಿಣಾಮ ಸುಳ್ಳು ಸರಿಯಾದ ಆಯ್ಕೆಯೆನಿಸುತ್ತದೆ. ಪ್ರಾಮಾಣಿಕತೆ ಮತ್ತು ಸುಳ್ಳು - ನಮ್ಮ ಪ್ರಕಾರ ಎರಡು ವಿರುದ್ಧ ಧ್ರುವಗಳು. ಆದರೆ ಬೆಳೆಯುವ, ಜೀವನ ಕಲಿಯುವ ಪ್ರಕ್ರಿಯೆಯಲ್ಲಿ ಅವೆರಡು ಒಂದೇ ಸಬ್ಜೆಕ್ಟಿನ ಎರಡು ಪಾಠಗಳು.
ಸುಳ್ಳು ಹೇಳಬೇಕೆಂದರೆ ಮಗುವಿಗೆ ಮೊದಲು ಉಳಿದವರಲ್ಲಿ ಮನಸ್ಸು, ಯೋಚನೆಗಳಿವೆ ಎನ್ನು ವುದು ತಿಳಿಯಬೇಕು. ನಾನು ಇನ್ನೊಬ್ಬರ ಮನಸ್ಸಿನ ಮೇಲೆ ಪ್ರಭಾವ ಬೀರಬಹುದು, ಅದನ್ನು manipulate ಮಾಡಬಹುದು ಎನ್ನುವುದು ಅರ್ಥವಾದಾಗ ಮಾತ್ರ ಮಗುವಿಗೆ ಸುಳ್ಳೊಂದು ಎಸ್ಕೇಪ್ - ಪಾರಾಗುವ ಮಾರ್ಗ ಎನ್ನುವ ತಿಳುವಳಿಕೆ ಬರುವುದು.
ಮೊದಲ ಸುಳ್ಳುಗಳು ಮಗುವಿನ ಆ ಪ್ರಯೋಗ. ಆದರೆ ಅದನ್ನು ಕ್ಷಣಮಾತ್ರದಲ್ಲಿ ಕಂಡು ಹಿಡಿಯುವ ಪಾಲಕರಾದ ನಾವು ಅವರ ಜೊತೆ ಸ್ಪರ್ಧೆಗಿಳಿದುಬಿಡುತ್ತೇವೆ. ‘ನೀನು ಸುಳ್ಳು ಹೇಳಿದರೆ ನನಗೆ ಗೊತ್ತಾಗಿ ಬಿಡುತ್ತದೆ, ಹಾಗಾಗಿ ಇನ್ನು ಮುಂದೆ ಸುಳ್ಳು ಹೇಳಬೇಡ’ ಎಂದು ಗದರಿಸುತ್ತೇವೆ. ಸುಳ್ಳನ್ನು ಕಂಡುಹಿಡಿದ ನಮ್ಮ ಬುದ್ಧಿವಂತಿಕೆಯನ್ನು ಅವರೆದುರು ಕುಹಕ ಸಂಭ್ರಮಿಸುತ್ತೇವೆ.
ಮೇಜಿನ ಮೇಲಿಟ್ಟ ಚಾಕಲೇಟ್ ಮಾಯವಾದಾಗ, ‘ನಾನು ತಿಂದಿಲ್ಲ’ವೆನ್ನುವ ಮಗುವಿನ ಮುಗ್ಧ ಸುಳ್ಳು ಅರಿವಿನ ಬೆಳವಣಿಗೆಯ ಮೊದಲ ಲಕ್ಷಣ. ಮಕ್ಕಳು ಸ್ವಲ್ಪ ದೊಡ್ಡವರಾಗುತ್ತಿದ್ದಂತೆ ತಮ್ಮ ತಪ್ಪುಗಳನ್ನು ಗೌಪ್ಯ ಮಾಡುತ್ತಾರೆ. ದೊಡ್ಡವರಾದ ನಾವು ಸುಳ್ಳನ್ನೇ ಹೇಳುವುದಿಲ್ಲ ಎಂದರೂ ಸತ್ಯವನ್ನೇ ಇನ್ನಷ್ಟು ಮೃದುಮಾಡಿ ಹೇಳುತ್ತೇವೆ. ಕಷ್ಟವೆನಿಸುವ ಮಾತುಕತೆಯನ್ನು ಏನೋ ಒಂದು ಪೋಕ್ಲಾಟ್ ಸುಳ್ಳನ್ನು ಹೇಳಿ ತಪ್ಪಿಸಿಕೊಳ್ಳುತ್ತೇವೆ. ಸನ್ನಿವೇಶಗಳಲ್ಲಿ ವಾಕ್ಯವನ್ನು ಯೋಚಿಸಿ, ತೂಗಿ ಪ್ರಯೋಗಿಸುತ್ತೇವೆ.
ಮಕ್ಕಳು ಮಾಡುವುದೂ ಅದನ್ನೇ. ಆದರೆ ಮಕ್ಕಳದ್ದು ಪರಿಷ್ಕೃತವಲ್ಲದ, ಯೋಜಿತವಲ್ಲದ ಸುಳ್ಳು. ಅಪರಿಷ್ಕೃತ, ಬಾಲಿಶ. ಹಾಗಾಗಿಯೇ ಮುಗ್ಧ. ಮಕ್ಕಳ ಸುಳ್ಳನ್ನು ಅಲಕ್ಷಿಸುವುದು, ನಿರ್ಲಕ್ಷಿಸುವುದು ಕೂಡ ಪರಿಹಾರವಲ್ಲ. ಸುಳ್ಳು ಸಿಕ್ಕಿಬಿದ್ದ ಸನ್ನಿವೇಶದಲ್ಲಿ - ಪಾಲಕರು ಹೇಳಿದ ಮೌಲ್ಯಗಳನ್ನಷ್ಟೇ ಮಕ್ಕಳು ಕೇಳುವುದಿಲ್ಲ. ಜೊತೆಯಲ್ಲಿ ‘ನಾನು ಏನನ್ನು ಹೇಳಿದರೆ ಏನಾಗುತ್ತದೆ? ಯಾವ ರೀತಿ, ಹೇಗೆ ಹೇಳಿದರೆ ಯಾವುದಕ್ಕೆ ಯಾವ ಪರಿಣಾಮ?’ ಎನ್ನುವುದನ್ನು ಮಕ್ಕಳು ಆಗಲೇ ಕಲಿಯುವುದು. ಸತ್ಯಕ್ಕೆ ಸಿಟ್ಟು, ಅವಮಾನ, ಕಠಿಣ ಶಿಸ್ತುಕ್ರಮ ಎದುರಾದಾಗ ಪ್ರಾಮಾಣಿಕತನ ಎಂದರೆ ಅಪಾಯ ಎಂಬುದು ಸಮೀಕರಣ.
ಒಮ್ಮೆ ಕಲಿತ ಈ ಸಮೀಕರಣ ಅಷ್ಟು ಸುಲಭದಲ್ಲಿ ಮಕ್ಕಳು ಮರೆಯುವುದಿಲ್ಲ. ಮಕ್ಕಳು ಸುಳ್ಳು ಹೇಳಿ ಸಿಕ್ಕಿಬಿದ್ದಾಗ, ‘ಸುಳ್ಳೇಕೆ ಹೇಳಿದೆ?’ ಎಂದು ಸಿಟ್ಟಿನಿಂದ ಪ್ರತಿಕ್ರಿಯಿಸುವ ಬದಲು ‘ಏನಾಯ್ತು? ವಿವರಿಸುವೆಯಾ?’ ಎಂದು ಕುತೂಹಲದಿಂದ, ಶಾಂತತೆಯಿಂದ ಕೇಳಿದಾಗ ಮಾತ್ರ ಸತ್ಯದ ಮೇಲೊಂದು ಭರವಸೆ ಅವರಲ್ಲಿ ಮೂಡುತ್ತದೆ.
ಮಕ್ಕಳು ಪ್ರಮಾಣಿಕತೆಯನ್ನು ಕಲಿಯುವುದು ಗದರಿಕೆ ಅಥವಾ ಬೋಧನೆಯಿಂದಲ್ಲ. ಭಾವನಾತ್ಮಕ ರಕ್ಷಣೆಯ ಭರವಸೆ ಇದ್ದಲ್ಲಿ ಮಾತ್ರ ಪ್ರಾಮಾಣಿಕತೆ ಸುಲಭದ ಮಾರ್ಗವೆನಿಸುತ್ತದೆ. ಪ್ರಾಮಾಣಿಕತೆ ಯ ಮೇಲೆ ನಂಬಿಕೆ ಮೂಡುತ್ತದೆ. ‘ಸುಳ್ಳೇಕೆ ಹೇಳಿದೆ?’ ಇದು ಪಾಲಕರ ಪ್ರಾಮಾಣಿಕ ಪ್ರಶ್ನೆ. ಆದರೆ ಅದಕ್ಕುತ್ತರ ನೀಡುವ ಪ್ರೌಢತೆ ಮಕ್ಕಳಲ್ಲಿ ಬೆಳೆದಿರುವುದಿಲ್ಲ. ಮಕ್ಕಳೇನಿದ್ದರೂ ನಡೆದ ಘಟನೆ ಯನ್ನು ಮಾತ್ರ ವಿವರಿಸಬಲ್ಲರು. ಸರಿಯಾಗಿ ಕೇಳಬೇಕಷ್ಟೆ !
ಬಹುತೇಕ ಪಾಲಕರಲ್ಲಿ ಒಂದು ದೊಡ್ಡ ತಪ್ಪು ತಿಳುವಳಿಕೆ ಇದೆ. ಸ್ಟ್ರಿಪ್ಟ್ - ತಂದೆ ತಾಯಿ ಬೇಕಾ ದಷ್ಟು ಕಟ್ಟುನಿಟ್ಟು ಇದ್ದರೆ ಮಕ್ಕಳು ಪ್ರಾಮಾಣಿಕರಾಗಿಬಿಡುತ್ತಾರೆ, ಪ್ರಾಮಾಣಿಕತೆಯ ಕೊರತೆ ಎಂದರೆ ಅದು ಪಾಲಕರ ಶಿಸ್ತಿನ, ಕಟ್ಟುನಿಟ್ಟಿನ ಕೊರತೆ ಎಂದು. ಕಟ್ಟುನಿಟ್ಟುತನ ಅವಶ್ಯಕ, ಇರಲೇ ಬೇಕು. ಆದರೆ ಅದರ ಜೊತೆ Emotional Predictability (ಭಾವ ಭರವಸೆ - ಸತ್ಯ ಹೇಳಿದರೆ ಅಪಾಯ ವಿಲ್ಲ ಎಂಬ ನಂಬಿಕೆ) ಎಲ್ಲಕ್ಕಿಂತ ಮುಖ್ಯ. ಅದುವೆ ಮಕ್ಕಳ ಸತ್ಯ ಸುಳ್ಳಿನ ನಡುವಿನ ಆಯ್ಕೆಯನ್ನು ನಿರ್ದೇಶಿಸುವುದು. ಅತಿಯೆನಿಸುವಷ್ಟು ಶಿಸ್ತಿನಿಂದ ಬೆಳೆಸಿದ ಮಕ್ಕಳು ಚತುರ ಸುಳ್ಳುಗಾರರಾಗುವುದು Emotional Predictability ಕೊರತೆಯಿದ್ದಲ್ಲಿ.
ಪಾಲಕರ ಪ್ರತಿಕ್ರಿಯೆಯನ್ನು ಸರಿಯಾಗಿ ಊಹಿಸಲು ಸಾಧ್ಯವಾದಾಗ ಮಾತ್ರ ಸತ್ಯ ಅಪಾಯವಲ್ಲ ಎಂದೆನ್ನಿಸುವುದು. ಸುಳ್ಳು ತಿಳಿದಾಗ ಪಾಲಕರು ಒಮ್ಮೆ ಸಿಟ್ಟು, ಇನ್ನೊಮ್ಮೆ ತಾತ್ಸಾರ, ಮತ್ತೊಮ್ಮೆ ಕ್ಷಮೆ ಈ ರೀತಿ ಒಂದೊಂದು ಬಾರಿ ಒಂದೊಂದು ವ್ಯವಹರಿಸಿದಾಗ ಮಕ್ಕಳು ಗೊಂದಲಕ್ಕೊಳ ಗಾಗುತ್ತಾರೆ. ಕೇವಲ ದಿನಕ್ಕೊಂದು ನೀತಿ ಕಥೆ ಹೇಳಿದರೆ ಮಕ್ಕಳು ನೀತಿವಂತರಾಗಿ ಬಿಡುವುದಿಲ್ಲ !
‘ಸುಳ್ಳು ಹೇಳಿದೆಯಾ?’ ಎಂಬುದು ಮೊಕದ್ದಮೆಯಾಗುವ ಬದಲು ಕುತೂಹಲದ, ಭರವಸೆಯ ಪ್ರಶ್ನೆಯಾದಾಗ ಮಾತ್ರ ಸತ್ಯಕ್ಕೊಂದು ಅವಕಾಶ ನಿರ್ಮಾಣವಾಗುತ್ತದೆ. ಎಲ್ಲ ಮಕ್ಕಳ ಎಲ್ಲಾ ಸುಳ್ಳುಗಳೂ ಒಂದೇ ಅಲ್ಲ. ಕೆಲವು ಅವರ ಪ್ರಯೋಗ, ಕೆಲವು ಅವರ ಕಲ್ಪನೆ, ಕೆಲವೊಮ್ಮೆ ಸಾಂದರ್ಭಿಕ, ತಕ್ಷಣದ ಪರಿಹಾರ ಇತ್ಯಾದಿ. ಪಾಲಕರು ಮಕ್ಕಳ ಸುಳ್ಳಿಗಿಂತ ಗ್ರಹಿಸಬೇಕಾದದ್ದು ಅದು ಮರುಕಳಿಸುವ ರೀತಿಯನ್ನು. ಅಪರೂಪಕ್ಕೆ ಸುಳ್ಳು ಹೇಳುವುದು ಮುಗ್ಧ. ಅದುವೆ ಅಭ್ಯಾಸ ವಾಗಿದ್ದಲ್ಲಿ, ಸುಳ್ಳು ಭಾವರಹಿತವಾಗಿ ಹೇಳುತ್ತಿದ್ದಲ್ಲಿ ಅದು ಸಮಸ್ಯೆ. ಆಗ ಪಾಲಕರ ಆತ್ಮಾವ ಲೋಕನವಾಗಬೇಕು.
ಸುಳ್ಳನ್ನೇ ಹೇಳದ ಮಕ್ಕಳನ್ನು ಬೆಳೆಸುವುದು ಪಾಲನೆಯ ಗುರಿಯಾಗಿಸಿಕೊಳ್ಳಬಾರದು. ಎಲ್ಲ ಕಾಲಕ್ಕೂ ಸತ್ಯವನ್ನೇ ಹೇಳುವ ಕಥೆಯಲ್ಲಷ್ಟೇ ಚಂದ, ಸರಿ. ನಿಜ ಜೀವನದಲ್ಲಿ ಸತ್ಯವನ್ನೇ ಹೇಳಿ ಕೊಂಡಿದ್ದರೆ ಬದುಕು ಹೀಗಾಗುತ್ತದೆ ಎನ್ನುವುದೂ ಸತ್ಯಹರಿಶ್ಚಂದ್ರನ ಕಥೆ ಹೇಳುವ ಸತ್ಯವೇ ಅಲ್ಲವೇ? ಸತ್ಯಹರಿಶ್ಚಂದ್ರನ ಗುಣ ಮಾದರಿ, ಆದರೆ ಅದು ಮಾನವಸಹಜವಲ್ಲ ಅಲ್ಲವೇ? ಪಾಲನೆ ಯ ಉದ್ದೇಶ ಒಳ್ಳೆಯ ಇನ್ನೊಂದು ಮನುಷ್ಯನನ್ನು ಬೆಳೆಸುವುದು.
ಸತ್ಯ ಹೇಳಲು ಹೆದರದ ಮಕ್ಕಳನ್ನು ಬೆಳೆಸುವುದು. ಯಾವುದೇ ತಪ್ಪನ್ನು ರಿಪೇರಿ ಮಾಡಿಕೊಳ್ಳಲು ಸಾಧ್ಯವೆಂಬ ನಂಬಿಕೆ ಬೆಳೆಯಲು ಅವಕಾಶ ಮಾಡಿಕೊಡುವುದು. ಪ್ರಮಾಣಿಕತೆ ಎನ್ನುವುದು ಪರಿಪೂರ್ಣತೆಯಲ್ಲ, ಅದು ನಂಬಿಕೆಯ ವಿಷಯ. ನಾವು ದೊಡ್ಡವರು ಯಾರಲ್ಲಿ ಸುಳ್ಳು ಹೇಳು ತ್ತೇವೆ? ಯಾರಲ್ಲಿ ಯಾವಾಗ ಸತ್ಯಹೇಳುತ್ತೇವೆ? ಎಂದು ಒಮ್ಮೆ ಯೋಚಿಸಿ ನೋಡಿ.
ಯಾರಲ್ಲಿ ಭಾವಭರವಸೆ ಇರುತ್ತದೆಯೋ, ಅವರಲ್ಲಿಯೇ ನಾವು ಸತ್ಯ ಇದ್ದದ್ದು ಇದ್ದ ಹಾಗೆ ಹೇಳುವುದು ಅಲ್ಲವೇ? ಪ್ರಾಮಾಣಿಕತೆ, ನೈತಿಕತೆ, ಅಪರಾಧಭಾವ, ಸತ್ಯ- ಸುಳ್ಳು ಇದೊಂದಿಷ್ಟು ವಿಷಯದ ಬಗ್ಗೆ ಹೇಳುವಾಗ, ‘ಗಾಂಧೀಜಿ ಹಣ, ಚಿನ್ನ ಕದ್ದು ಬೀಡಿ ಸೇದಿದ ಕಥೆ’ ನೆನಪು ಮಾಡಿ ಕೊಳ್ಳುತ್ತೇವೆ. ಇನ್ನೊಂದು ಅಷ್ಟು ಪ್ರಚಲಿತವಲ್ಲದ ಕಥೆಯಿದೆ.
ಇದು ಗಾಂಧೀಜಿ ಮಗ ಮತ್ತು ಮೊಮ್ಮಗನದ್ದು. ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ವಾಪಸ್ ಭಾರತಕ್ಕೆ ಬಂದಾಗ ಅವರ ಮಗ ಮಣಿಲಾಲ್ ಗಾಂಧಿ ದಕ್ಷಿಣ ಆಫ್ರಿಕಾದಲ್ಲಿಯೇ ಉಳಿದುಕೊಳ್ಳು ತ್ತಾರೆ. ಅಲ್ಲಿಯೇ ಇದ್ದು ‘ಇಂಡಿಯನ್ ಒಪೀನಿಯನ್’ ಪತ್ರಿಕೆ ಮತ್ತು ಉಳಿದ ಕೆಲಸ, ವ್ಯವಹಾರ ವನ್ನು ಮಣಿಲಾಲ್ ಮುಂದುವರಿಸಿಕೊಂಡು ಹೋಗುತ್ತಾರೆ.
ಒಮ್ಮೆ ಮಣಿಲಾಲರಿಗೆ ಜೊಹನಾಸ್ ಬರ್ಗ್ʼನಲ್ಲಿ ದಿನವಿಡೀ ಮೀಟಿಂಗ್ ಇರುತ್ತದೆ. ಆಗ ಅವರ ಮಗ ಅರುಣ್ ಗಾಂಽಯಲ್ಲಿ ತಮ್ಮನ್ನು ಕಾರಿನಲ್ಲಿ ಡ್ರೈವ್ ಮಾಡಿಕೊಂಡು ಕರೆದುಕೊಂಡು ಹೋಗಲು ಹೇಳುತ್ತಾರೆ. ಅಪ್ಪ ಮೀಟಿಂಗ್ ನಲ್ಲಿ ಭಾಗವಹಿಸುವ ವೇಳೆ ಕಾರು ಸರ್ವೀಸ್ ಮಾಡಿಸಿದರಾಯ್ತು ಎಂದು ಅವರಿಬ್ಬರು ಹೊರಡುತ್ತಾರೆ.
ಅರುಣ್ ಗಾಂಧಿ ಈ ಘಟನೆಯನ್ನು ಬರೆದುಕೊಂಡದ್ದು ಹೀಗೆ : ನಾನು ತಂದೆಯನ್ನು ಅಲ್ಲಿ ಬಿಟ್ಟು, ಕಾರ್ ಅನ್ನು ರಿಪೇರಿಗೆ ಗ್ಯಾರೇಜ್ ನಲ್ಲಿ ಬಿಟ್ಟೆ. ಅಪ್ಪನ ಮೀಟಿಂಗ್ ಮುಗಿಯುವುದು ಸಂಜೆ ಐದಕ್ಕೆ. ಅಲ್ಲಿಯವರೆಗೆ ಏನು ಮಾಡುವುದು? ಹಾಗಾಗಿ ಅಲ್ಲಿಯೇ ಇದ್ದ ಸಿನಿಮಾ ಒಂದಕ್ಕೆ ಹೋದೆ. ಆ ದಿನ ಒಂದೇ ಟಿಕೆಟ್- ಒಂದರ ಬೆನ್ನಿಗೆ ಇನ್ನೊಂದು, ಎರಡು ಸಿನಿಮಾ ನೋಡುವ ಡಬಲ್ ಫೀಚರ್ ಇತ್ತು.
ಎರಡು ಸಿನಿಮಾ ಮುಗಿಯುವಾಗ ಆರು ಗಂಟೆಯಾಗಿ ಹೋಯ್ತು ! ಬೆಳಿಗ್ಗೆ ಹೊರಡುವಾಗ ತಂದೆ ಯಲ್ಲಿ ಇಂತಹ ರಸ್ತೆಯ ಮುರ್ಕಿಯಲ್ಲಿ ನಿಂತಿರುತ್ತೇನೆ ಎಂದು ಹೇಳಿದ್ದೆ. ಕಾರನ್ನು ಓಡಿಸಿಕೊಂಡು ಗಡಿಬಿಡಿಯಲ್ಲಿ ಹೋದೆ. ಜೋರಾಗಿ ಮಳೆ ಸುರಿಯುತ್ತಿತ್ತು. ಅಪ್ಪ ಅಲ್ಲಿ ಮಳೆಯಲ್ಲಿ ನೆನೆಯುತ್ತ ನಿಂತಿದ್ದರು. ಓಡೋಡಿ ಅವರ ಬಳಿ ಹೋಗಿ, ಅಪ್ಪಾ ಕ್ಷಮಿಸಿ, ಕಾರ್ ಗ್ಯಾರೇಜ್‌ನವನು ಅಂದು ಕೊಂಡದ್ದಕ್ಕಿಂತ ಹೆಚ್ಚಿಗೆ ಸಮಯ ತೆಗೆದುಕೊಂಡುಬಿಟ್ಟ ಎಂದೆ.
ಅಪ್ಪ ಮಾತಾಡಲಿಲ್ಲ. ಬದಲಿಗೆ ತಲೆತಗ್ಗಿಸಿದರು. ನೀನಿನ್ನೂ ಬರಲಿಲ್ಲವಲ್ಲ ಎಂದು ಗ್ಯಾರೇಜ್ ನವನಿಗೆ ಫೋನ್ ಮಾಡಿದೆ. ಅವನು ಮೂರು ಗಂಟೆಗೆಲ್ಲ ಕಾರು ರೆಡಿಯಾಗಿದೆ ಎಂದ. ವಿಷಯ ಅದಲ್ಲ - ನಾನೀಗ ಗಂಭೀರವಾಗಿ ಒಂದು ವಿಷಯವನ್ನು ಯೋಚಿಸಬೇಕಾಗಿದೆ. ಸುಳ್ಳು ಹೇಳದ ಮಗನನ್ನು ಬೆಳೆಸುವಲ್ಲಿ ನಾನೆಲ್ಲಿ ಸೋತೆ? ಎಂದು ಧ್ಯಾನಿಸಬೇಕಾಗಿದೆ. ಅಪ್ಪ ಆ ದಿನ ಕಾರು ಹತ್ತಲಿಲ್ಲ. ಮಳೆಯಲ್ಲಿ ನಡೆದುಕೊಂಡೇ ಹೊರಟರು. ನಾನು ಕಾರೊಳಗೆ ಅವರನ್ನು ಮನೆಯವರೆಗೆ ಹಿಂಬಾಲಿಸಿದೆ. ನಾವಿಬ್ಬರು ಮನೆ ಸೇರಿದಾಗ ನನ್ನ ಅಂಗಿ ಅವರಿಗಿಂತ ಹೆಚ್ಚು ತೊಯ್ದಿತ್ತು !
Honesty is not built through instru ctions. It is built through emotional safety.