ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr D C Nanjunda: ಬಡ ರೋಗಿಗಳೇ ಯಾಕೆ ಬ್ರೈನ್‌ ಡೆಡ್‌ ಆಗುತ್ತಾರೆ ?

ನಗರಗಳಲ್ಲಿನ ದೊಡ್ಡ ಆಸ್ಪತ್ರೆಗಳಿಗೆ ತಲುಪುವ ವೇಳೆಗೆ ಸ್ಥಿತಿ ಗಂಭೀರವಾಗಿ, ಮೆದುಳು ಸಂಪೂರ್ಣ ನಿಶ್ಚೇಶ್ಟವಾಗುತ್ತದೆ. ಮಧ್ಯಮ ಮತ್ತು ಶ್ರೀಮಂತ ವರ್ಗದಲ್ಲಿ ಖಾಸಗಿ ಆಂಬ್ಯುಲೆನ್ಸ್, ವಿಮಾ ಸೌಲಭ್ಯ ಹಾಗೂ ತ್ವರಿತ ಚಿಕಿತ್ಸೆ ದೊರೆತರೂ, ಬಡವರಲ್ಲಿ ಅದು ಕಷ್ಟ. ಹೆಚ್ಚಿನ ಬಡ ಕುಟುಂಬಗಳಲ್ಲಿ ರಕ್ತದೊ ತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಂತಹ ಅಪಾಯಕಾರಕ ಅಂಶಗಳು ಸಮಯಕ್ಕೆ ಪತ್ತೆಯಾಗುವುದಿಲ್ಲ.

ಬಡ ರೋಗಿಗಳೇ ಯಾಕೆ ಬ್ರೈನ್‌ ಡೆಡ್‌ ಆಗುತ್ತಾರೆ ?

-

Ashok Nayak Ashok Nayak Sep 17, 2025 9:06 AM

ಆರೋಗ್ಯ

ಡಾ.ಡಿ.ಸಿ.ನಂಜುಂಡ

ದೇಶದ ಕೆಲವು ಆಸ್ಪತ್ರೆಗಳಲ್ಲಿ ಬ್ರೈನ್ ಡೆಡ್ ಪ್ರಕರಣಗಳನ್ನು ತಪ್ಪಾಗಿ ಗುರ್ತಿಸಿ ಶ್ರೀಮಂತ‌ ರಿಗೆ ಬದಲಿ ಅಂಗ ಒದಗಿಸುವ ದಂಧೆ ಆರಂಭವಾಗಿದೆ ಎನ್ನುವ ದೂರು ಸುಪ್ರೀಂ ಕೋರ್ಟ್‌ಗೆ ಬಂದಿದೆ. ಈ ಹಿನ್ನೆಲೆಯಲ್ಲಿ ‘ಬ್ರೈನ್ ಡೆಡ್ ಟ್ರಾನ್ಸ್‌ಪ್ಲಾಂಟೇಷನ್ ಆಫ್ ಆರ್ಗನ್ಸ್ ಅಂಡ್ ಟಿಶ್ಯೂಸ್ ಆಕ್ಟ್’ (ಥೋಟಾ-1994) ಬಗ್ಗೆ ಹೊಸ ಚರ್ಚೆ ಆರಂಭವಾಗಿದೆ.

ಬ್ರೈನ್ ಡೆಡ್ ಅಥವಾ ಮೆದುಳು ಸಾಯುವ ಪರಿಸ್ಥಿತಿ ಒಂದು ವೈದ್ಯಕೀಯವಾಗಿ ಸಂಕೀರ್ಣ ಹಾಗೂ ಸಾಮಾಜಿಕವಾಗಿ ಸೂಕ್ಷ್ಮವಾದ ವಿಷಯ. ಜೀವಾವಶ್ಯಕ ಅಂಗಾಂಗಗಳ ಸಹಾಯವಿಲ್ಲದೆ ಮೆದುಳು ಸಂಪೂರ್ಣವಾಗಿ ಕಾರ್ಯನಿರ್ವಹಿಸದ ಸ್ಥಿತಿಯನ್ನು ‘ಬ್ರೈನ್ ಡೆಡ್’ ಎಂದು ಕರೆಯಲಾಗುತ್ತದೆ. ವೈದ್ಯಕೀಯ ದೃಷ್ಟಿಯಿಂದ ಇದು ಎಲ್ಲ ವರ್ಗದ ಜನರಲ್ಲಿ ಸಂಭವಿಸಬಹುದಾದರೂ, ಅನೇಕ ಅಂಕಿಅಂಶಗಳು ಮತ್ತು ಅನುಭವಗಳು ಬಡವರಲ್ಲಿ ಇದು ಹೆಚ್ಚು ಸಾಮಾನ್ಯವಾಗಿರುವುದನ್ನು ಸೂಚಿಸುತ್ತವೆ.

ಇದಕ್ಕೆ ವೈದ್ಯಕೀಯ ಕಾರಣ ಅಲ್ಲದೇ ಬಡತನ, ಸಾಮಾಜಿಕ-ಆರ್ಥಿಕ ಅಸಮಾನತೆ, ಆರೋಗ್ಯ ವ್ಯವಸ್ಥೆಯ ಅಸಮಾನತೆ ಮತ್ತು ಜೀವನ ಶೈಲಿಯ ಬಿಕ್ಕಟ್ಟುಗಳಲ್ಲಿದೆ. ಹೆಚ್ಚಿನ ಭಾರಿ ಬಡ ಜನರಿಗೆ ತುರ್ತು ವೈದ್ಯಕೀಯ ನೆರವು ತಕ್ಷಣ ಸಿಗುವುದಿಲ್ಲ. ರಸ್ತೆ ಅಪಘಾತ, ತೀವ್ರ ತಲೆಗಾಯ, ಅಥವಾ ಸ್ಟ್ರೋಕ್‌ಗಳಿಗೆ ತಕ್ಷಣ ಚಿಕಿತ್ಸೆ ದೊರೆಯದೇ ಹೋದರೆ ಮೆದುಳಿನ ಹಾನಿ ಶಾಶ್ವತವಾಗುತ್ತದೆ.

ನಗರಗಳಲ್ಲಿನ ದೊಡ್ಡ ಆಸ್ಪತ್ರೆಗಳಿಗೆ ತಲುಪುವ ವೇಳೆಗೆ ಸ್ಥಿತಿ ಗಂಭೀರವಾಗಿ, ಮೆದುಳು ಸಂಪೂರ್ಣ ನಿಶ್ಚೇಶ್ಟವಾಗುತ್ತದೆ. ಮಧ್ಯಮ ಮತ್ತು ಶ್ರೀಮಂತ ವರ್ಗದಲ್ಲಿ ಖಾಸಗಿ ಆಂಬ್ಯುಲೆನ್ಸ್, ವಿಮಾ ಸೌಲಭ್ಯ ಹಾಗೂ ತ್ವರಿತ ಚಿಕಿತ್ಸೆ ದೊರೆತರೂ, ಬಡವರಲ್ಲಿ ಅದು ಕಷ್ಟ. ಹೆಚ್ಚಿನ ಬಡ ಕುಟುಂಬಗಳಲ್ಲಿ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಗಳಂತಹ ಅಪಾಯಕಾರಕ ಅಂಶಗಳು ಸಮಯಕ್ಕೆ ಪತ್ತೆಯಾಗುವುದಿಲ್ಲ.

ನಿಯಮಿತ ತಪಾಸಣೆ, ಔಷಧೋಪಚಾರ, ಆಹಾರ ನಿಯಂತ್ರಣ ಇಲ್ಲದಿದ್ದಾಗ ಇಂತಹ ಕಾಯಿಲೆ ಗಳು ತೀವ್ರ ರೂಪ ಪಡೆದು ಮೆದುಳಿನ ರಕ್ತಸ್ರಾವ ಅಥವಾ ಸ್ಟ್ರೋಕ್ ಉಂಟುಮಾಡುತ್ತವೆ. ಇದರಿಂದ ಬ್ರೈನ್ ಡೆಡ್ ಸಂಭವಿಸುವ ಸಾಧ್ಯತೆ ಹೆಚ್ಚುತ್ತದೆ.

ಇದನ್ನೂ ಓದಿ: Dr D C Nanjunda Column: ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಗೆ ಪೈಪೋಟಿ ನಿಂತಿಲ್ಲ !

ಭಾರತದಲ್ಲಿ Transplantation of Human Organs and Tissues Act, 1994 (THOTA) ನಲ್ಲಿ ರೋಗಿಯ ಬ್ರೈನ್ ಡೆಡ್ ಕುರಿತು ನಿರ್ಧಾರದ ಘೋಷಣೆಯ ಮಾನದಂಡಗಳನ್ನು ನಿಗದಿಪಡಿಸ ಲಾಗಿದೆ. ಕಾಯ್ದೆಯ ಸೆಕ್ಷನ್ 2(ಜ) “ಬ್ರೈನ್ ಸ್ಟೆಮ್ ಡೆತ್" ನ/ವ್ಯಾಖ್ಯಾನವನ್ನು ನೀಡುತ್ತದೆ ಮತ್ತು ಸೆಕ್ಷನ್ 3(6) ಪ್ರಕಾರ, ಸ್ಥಳೀಯ ವೈದ್ಯ, ಖಾಸಗಿ ವೈದ್ಯ, ನ್ಯೂರಾಲಜಿಸ್ಟ್/ನ್ಯೂರೋಸರ್ಜನ್ ಸೇರಿದಂತೆ ವೈದ್ಯರ ಮಂಡಲಿಯ ಮೂಲಕ ಘೋಷಿಸಬೇಕೆಂದು ಸೂಚಿಸಿದೆ.

ಈ ಪ್ರಕ್ರಿಯೆಯನ್ನು ಎರಡು ಬಾರಿ 6 ಗಂಟೆಗಳ ಅಂತರದಲ್ಲಿ ಪರಿಶೀಲಿಸಬೇಕಾಗುತ್ತದೆ. ನಿಕಟ ಬಂಧು ಅಲ್ಲದವರಿಗೆ ಜೀವಂತ ವ್ಯಕ್ತಿ ಅಂಗಾಂಗ ದಾನ ಮಾಡಲು ಜಿಲ್ಲಾಮಟ್ಟದ ಅಧಿಕೃತ ಸಮಿತಿ ಯಿಂದ ಅನುಮತಿ ಪಡೆಯಬೇಕು. ವಾಣಿಜ್ಯ ಉದ್ದೇಶಗಳನ್ನು ತಡೆಯುವುದೇ ಈ ನಿಯಮದ ಗುರಿ.

“ಬ್ರೈನ್ ಡೆಡ್ ಟ್ರಾನ್ಸ್‌ಪ್ಲಾಂಟೇಷನ್ ಆಫ್ ಆರ್ಗನ್ಸ್ ಅಂಡ್ ಟಿಶ್ಯೂಸ್ ಆಕ್ಟ್" ಥೋಟಾ-1994 ಕಾಯ್ದೆಯ‌ ವಿಚಾರದಲ್ಲಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ಮುಂದೆ ಬಂದ ಪ್ರಕರಣವೊಂದು ದೇಶದ ಗಮನ ಸೆಳೆದಿದೆ. ದೇಶದ ಕೆಲವು ಆಸ್ಪತ್ರೆಗಳಲ್ಲಿ ಬ್ರೈನ್ ಡೆಡ್ ಪ್ರಕರಣಗಳನ್ನು ತಪ್ಪಾಗಿ ಗುರ್ತಿಸಿ ಶ್ರೀಮಂತರಿಗೆ ಬದಲಿ ಅಂಗ ಒದಗಿಸುವ ದಂಧೆ ಆರಂಭವಾಗಿದೆ ಎನ್ನುವ ದೂರು ಸುಪ್ರೀಂ ಕೋರ್ಟ್‌ಗೆ ಬಂದಿದೆ.

ಸುಪ್ರೀಂ ಮೆಟ್ಟಿಲೇರಿರುವ ಕೇರಳದ ಡಾ.ಗಣಪತಿ ಎಂಬುವರು ಸದ್ಯ ಬಳಕೆಯಲ್ಲಿರುವ ತೋಟಾ ಕಾಯ್ದೆಯ ಸೆಕ್ಷನ್ 2 (ಡಿ) ಮತ್ತು 2 (ಇ) ಭಾರತದಲ್ಲಿರುವ ಸದ್ಯ ಬ್ರೈನ್ ಡೆಡ್ ಪರಿಕಲ್ಪನೆಗೆ ವಿರುದ್ದ ಎಂದಿದ್ದಾರೆ. ಬೇರೆ ದೇಶಗಳಲ್ಲಿ ಬ್ರೈನ್‌ಸ್ಟೆಮ್‌ಡೆತ್ ನ ಅರ್ಥ ಮತ್ತು ವ್ಯಾಖ್ಯಾನ ಬೇರೆ ಎಂದು ಕೋರ್ಟ್‌ನ ಗಮನಕ್ಕೆ ತಂದಿದ್ದಾರೆ. ಯಾವ ಹಂತದಲ್ಲಿ ರೋಗಿಯನ್ನು ಬ್ರೈನ್‌ಸ್ಟೆಮ್‌ಡೆತ್ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ಘೋಷಿಸಬಹುದು ಎನ್ನುವ ಕುರಿತು ಥೋಟ ಕಾಯಿದೆಯ ಸೆಕ್ಷನ್ ೨ (ಡಿ)ಯಲ್ಲಿ ವಿವರಣೆ ಇದೆ.

ದೇಹದ ಎಲ್ಲಾ ಕಾರ್ಯಗಳನ್ನು ನಿಯಂತ್ರಿಸುವ ಮೆದುಳು ಶಾಶ್ವತವಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದೆ. ಮತ್ತೆ ಅದು ಪುನಹ ಕೆಲಸ ಮಾಡುವುದಿಲ್ಲ ಎನ್ನುವ ಹಂತ ತಲುಪಿದಾಗ ಸೆಕ್ಷನ್ ೨(ಡಿ) ಗಮನಕ್ಕೆ ಬರುತ್ತದೆ. ಸೆಕ್ಷನ್ ೨ (ಇ) ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪಲ್ಮನರಿ ಸೆನ್ಸ್ ಕುರಿತಾಗಿ ಹೇಳುತ್ತದೆ. ರೋಗಿಯು ಕೋಮಾ ಸ್ಥಿತಿಯಲ್ಲಿದ್ದು ಆತ ಜೀವಂತವಾಗಿದ್ದಾನೆ ಎಂಬುದನ್ನು ವೈಜ್ಞಾ ನಿಕವಾಗಿ ಸಾಬೀತು ಪಡಿಸಬೇಕಾದ ಕಡೆ ವೈದ್ಯರು ಗಮನ ನೀಡಬೇಕು.

ಕಾಯ್ದೆಯ ಸೆಕ್ಷನ್ 2(ಜ) ಪ್ರಕಾರ ಬ್ರೈನ್ ಡೆಡ್ ಅನ್ನು ಕಾನೂನಾತ್ಮಕವಾಗಿ ಸಾವು ಎಂದು ಭಾರತ ದಲ್ಲಿ ಪರಿಗಣಿಸಲಾಗಿದೆ. ಇದರಿಂದ ಮೆದುಳು ಕಾರ್ಯ ನಿಲ್ಲಿಸಿದ ನಂತರ, ಆದರೆ ಹೃದಯ, ಶ್ವಾಸ ಕೋಶಗಳು ಯಂತ್ರದ ಸಹಾಯದಿಂದ ಕೆಲಸ ಮಾಡುವ ಸ್ಥಿತಿಯಲ್ಲಿಯೇ, ಅಂಗಾಂಗ ದಾನಕ್ಕೆ ಅವಕಾಶ ನೀಡಲಾಗಿದೆ. ಅರ್ಜಿದಾರರ ಪ್ರಕಾರ 2012ರಲ್ಲಿ ಕೇರಳದ ಹೈಟೆಕ್ ಆಸ್ಪತ್ರೆಗಳಲ್ಲಿ 9 ಬ್ರೈನ್ ಡೆಡ್ ಕೇಸುಗಳು ವರದಿಯಾಗಿತ್ತು. 2015ರಲ್ಲಿ ಅದರ ಸಂಖ್ಯೆ 76 ಕ್ಕೆ ಏರಿತ್ತು.

ಜೊತೆಗೆ ಹೆಚ್ಚನವರು ಅನಾಥರು, ಕಡುಬಡವರು, ಮತ್ತು ಅನಕ್ಷರಸ್ಥರಾಗಿದ್ದರು. ಇದಕ್ಕೆ ಬ್ರೈನ್ ಡೆಡ್ ಎಂಬ ಪದದ ವ್ಯಾಖ್ಯಾನ ಪರಿಪೂರ್ಣವಾಗಬೇಕಾದರೆ ಸಂಸತ್ತು ಈ ಸಂಬಂಧ ಕಾಯ್ದೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.

ವರದಿಗಳ ಪ್ರಕಾರ ಬಡ ಜನರು ಸಾಮಾನ್ಯವಾಗಿ ಅಪಾಯಕಾರಿ ಉದ್ಯೋಗಗಳಲ್ಲಿ ತೊಡಗಿರುತ್ತಾರೆ. ಕಟ್ಟಡ ಕಾಮಗಾರಿಗಳು, ಗಣಿ ಪ್ರದೇಶಗಳು, ಕಾರ್ಖಾನೆಗಳು, ಸಾರಿಗೆ ಕ್ಷೇತ್ರ. ಇಲ್ಲಿ ತಲೆಗಾಯ, ವಿದ್ಯುತ್ ಶಾಕ್, ಭಾರವಾದ ವಸ್ತು ಬೀಳುವುದು ಮುಂತಾದ ಅಪಘಾತಗಳು ಹೆಚ್ಚಾಗಿ ಸಂಭವಿಸು ತ್ತವೆ.

ಸುರಕ್ಷತಾ ಮಾನದಂಡಗಳನ್ನು ಪಾಲಿಸಲು ಸಾಕಷ್ಟು ವ್ಯವಸ್ಥೆ ಇಲ್ಲದೆ ಇರುವುದರಿಂದ ಮೆದುಳಿಗೆ ಗಂಭೀರ ಗಾಯಗಳು ಆಗುತ್ತವೆ. ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ನ್ಯೂರೋಸರ್ಜರಿ, ಐಸಿಯು, ವೆಂಟಿಲೇಟರ್, ಸ್ಕ್ಯಾನ್‌ಗಳಂತಹ ಉನ್ನತ ಸೌಲಭ್ಯಗಳ ಕೊರತೆ ಇದೆ. ಈ ಕಾರಣದಿಂದ ರೋಗಿಯನ್ನು ದೊಡ್ಡ ನಗರಕ್ಕೆ ಕರೆದೊಯ್ಯುವ ಹೊತ್ತಿಗೆ ಜೀವಾಪಾಯ ಹೆಚ್ಚುತ್ತದೆ. ಮಿದುಳು ಜೀವಂತವಾಗಿಡುವ ಅವಕಾಶ ಕಡಿಮೆಯಾಗುತ್ತದೆ.

ಶ್ರೀಮಂತ ವರ್ಗದವರು ಐಸಿಯುಗಳಲ್ಲಿನ ಖರ್ಚುಗಳನ್ನು ದೀರ್ಘಕಾಲ ತಡೆದುಕೊಳ್ಳುತ್ತಾರೆ. ಆಧುನಿಕ ತಂತ್ರಜ್ಞಾನಗಳಿಂದ ಇವರ ಜೀವ ಉಳಿಸುವ ಪ್ರಯತ್ನ ಮುಂದುವರಿಯುತ್ತದೆ. ಇದರ ಫಲವಾಗಿ ‘ ಬ್ರೈನ್ ಡೆಡ್’ ಸ್ಥಿತಿ ತಕ್ಷಣ ವರದಿಯಾಗುವುದಿಲ್ಲ. ಆದರೆ ಬಡವರಲ್ಲಿ ಚಿಕಿತ್ಸೆ ಸೀಮಿತ ವಾಗಿರುವುದರಿಂದ, ಇಂತಹ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತವೆ. ಇದರಿಂದ ಬಡವರಲ್ಲಿ ಇದು ಸಾಮಾನ್ಯವೆಂದು ಕಾಣುತ್ತದೆ ಎನ್ನುವ ವಾದವು ಸಹ ಇದೆ.

ಸಾರ್ವಜನಿಕ ಆಸ್ಪತ್ರೆಗಳಲ್ಲಿ ಬ್ರೈನ್ ಡೆಡ್ ದೃಢೀಕರಣ ಹೆಚ್ಚು ಪಾರದರ್ಶಕವಾಗಿ ನಡೆಯುವು ದರಿಂದ ಅವರ ದೇಹದಿಂದ ಅಂಗಾಂಗಗಳನ್ನು ಪಡೆದುಕೊಳ್ಳಲಾಗುತ್ತದೆ. ಶ್ರೀಮಂತ ರೋಗಿಗಳಲ್ಲಿ ಕುಟುಂಬಗಳು ಹೆಚ್ಚಿನ ಒತ್ತಡ ತರುವುದರಿಂದ ಅಥವಾ ಖಾಸಗಿ ಆಸ್ಪತ್ರೆಗಳು ಸೂಕ್ಷ್ಮವಾಗಿ ವರ್ತಿಸುವುದರಿಂದ ಇದನ್ನು ಮುಚ್ಚಿಡಲಾಗುತ್ತದೆ ಎನ್ನುತ್ತಾರೆ ಕೆಲ ವೈದ್ಯರು.

ಗ್ರಾಮೀಣ ಪ್ರದೇಶಗಳು ಆರೋಗ್ಯ ಸೌಕರ್ಯದಲ್ಲಿ ಹಿಂದುಳಿದಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೇ ತುರ್ತು ನೆರವು ಸಿಗದಿದ್ದರೆ, ತುರ್ತು ಚಿಕಿತ್ಸೆಗೆ ಅವಲಂಬಿತವಾಗಿರುವ ಬಡ ಜನರು ಬ್ರೈನ್ ಡೆಡ್‌ಗೆ ಹೆಚ್ಚು ಬಲಿಯಾಗುತ್ತಾರೆ ಎನ್ನುತ್ತವೆ ಅಂಕಿ ಅಂಶಗಳು. ಒಬ್ಬ ಬಡ ಕುಟುಂಬದ ಸದಸ್ಯ ಬ್ರೈನ್ ಡೆಡ್ ಸ್ಥಿತಿಗೆ ತಲುಪಿದರೆ, ಅದು ಆ ಕುಟುಂಬಕ್ಕೆ ಕೇವಲ ವೈದ್ಯಕೀಯ ಸಮಸ್ಯೆಯಲ್ಲ, ಆರ್ಥಿಕ ಮತ್ತು ಸಾಮಾಜಿಕ ದುರಂತವೂ ಆಗುತ್ತದೆ.

ಚಿಕಿತ್ಸೆ ವೆಚ್ಚ ತಾಳಲಾರದ ಕುಟುಂಬ ಸಾಲಕ್ಕೆ ಜಾರುತ್ತದೆ. ಕೆಲವೊಮ್ಮೆ ದಾನಕ್ಕಾಗಿ ಅಂಗಾಂಗ ನೀಡುವ ಒತ್ತಡವೂ ಬಡ ಕುಟುಂಬವನ್ನು ಬಾಧಿಸುತ್ತದೆ. ಈಗಿರುವ 1994 (ಥೋಟಾ) ಕಾಯಿದೆ ಯಲ್ಲಿ ಏನು ಬದಲಾವಣೆಗಳು ಆಗಬೇಕು ಎನ್ನುವ ಕೂಗು ಎದ್ದಿದೆ. ಭಾರತದಲ್ಲಿ ಅಂಗಾಂಗ ದಾನವನ್ನು ಕಾನೂನುಬದ್ಧವಾಗಿ ನಿಯಂತ್ರಿಸಲು ರೂಪಿಸಲ್ಪಟ್ಟಿದ್ದು, ಇದರ ಮುಖ್ಯ ಗುರಿ ಅಕ್ರಮ ಅಂಗಾಂಗ ವ್ಯಾಪಾರವನ್ನು ತಡೆದು ಮೆದುಳು ಸಾಯುವಿಕೆಯನ್ನು ಕಾನೂನಾತ್ಮಕ ವಾಗಿ ಸಾವು ಎಂದು ಗುರುತಿಸಿ, ಅವಶ್ಯವಿದ್ದವರಿಗೆ ಅಂಗಾಂಗ ಜೋಡಿಸುವ ಪಾರದರ್ಶಕ ವ್ಯವಸ್ಥೆ ರೂಪಿಸುವು ದಾಗಿದೆ.

ಆದರೆ ಮೂರು ದಶಕಗಳ 1994 (ಥೋಟಾ) ಕಾಯಿದೆಯ ಅನುಭವದಿಂದಾಗಿ ಕೆಲವು ತಿದ್ದುಪಡಿಗಳ ಅಗತ್ಯ ಇಂದು ಬಹಳ ಸ್ಪಷ್ಟವಾಗಿದೆ, ಉದಾಹರಣೆಗೆ ಬ್ರೈನ್-ಡೆಡ್ ಘೋಷಣೆಯ ಪ್ರಕ್ರಿಯೆಯಲ್ಲಿ ಪ್ರಸ್ತುತ ನಾಲ್ಕು ವೈದ್ಯರಿಂದ ಎರಡು ಹಂತದ ದೃಢೀಕರಣ ಕಡ್ಡಾಯವಾಗಿದ್ದರೂ ಈ ಸಂಬಂಧ ವಿವಿಧ ರಾಜ್ಯಗಳು ವಿವಿಧ ರೀತಿಯ ಮಾನದಂಡ ರೂಪಿಸಿಕೊಂಡಿವೆ.

ಇದನ್ನು ರದ್ದುಗೊಳಿಸಿ ರಾಷ್ಟ್ರೀಯ ಮಟ್ಟದ ಏಕೀಕೃತ ಮಾನದಂಡ ರೂಪಿಸಿ ವೀಡಿಯೋ ದಾಖಲೆ ಮತ್ತು ಡಿಜಿಟಲ್ ದಾಖಲಾತಿ ಕಡ್ಡಾಯಗೊಳಿಸುವುದು ಮತ್ತು ಸಾರ್ವಜನಿಕ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡುವುದು ಅಗತ್ಯ. ಜೊತೆಗೆ ಕುಟುಂಬ ಸದಸ್ಯರಿಗೆ ಸಂಪೂರ್ಣ ಮಾಹಿತಿ ಹಂಚಿಕೆ ಕಾನೂನುಬದ್ಧವಾಗಿ ಬಲಪಡಿಸಬೇಕಿದೆ.

ಏಕೆಂದರೆ ಅನಕ್ಷರಸ್ಥರು ಇನ್ನೂ ಬ್ರೈನ್ ಡೆತ್ ಅನ್ನು ನಂಬುವುದಿಲ್ಲ. ಭಾರತದಲ್ಲಿ ಈಗಿರುವ opt-in ವ್ಯವಸ್ಥೆಗೆ ಬದಲಾಗಿ opt-out ವ್ಯವಸ್ಥೆಯನ್ನು ಪರಿಗಣಿಸುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದು, ಇದರಿಂದ ಅಂಗಾಂಗ ದಾನದ ಸಂಖ್ಯೆಯನ್ನು ಹೆಚ್ಚಿಸಬಹುದು ಎನ್ನಲಾಗಿದೆ. ರಕ್ತ ಸಂಬಂಧಿಗಳು ಅಲ್ಲದೇ ಬೇರೆಯವರಿಗೆ ಅಂಗಾಂಗ ದಾನ ಮಾಡಲು ಅನುಮತಿ ಕಡ್ಡಾಯವಾಗಿದ್ದರೂ ಕೆಲವು ಕಡೆಗಳಲ್ಲಿ ಭ್ರಷ್ಟಾಚಾರ ಮತ್ತು ದುರುಪಯೋಗ ನಡೆದು ಬರುತ್ತಿರುವುದರಿಂದ ಡಿಎನ್‌ಎ/ ಜೈವಿಕ ಹೊಂದಾಣಿಕೆ ಆಡಿಟ್ ಹಾಗೂ ತಂತ್ರಜ್ಞಾನ ಆಧಾರಿತ ಪರಿಶೀಲನೆ ಕಡ್ಡಾಯ ಮಾಡಬೇಕು ಮತ್ತು ಕಠಿಣ ಶಿಕ್ಷೆ ವಿಧಿಸಬೇಕು ಎನ್ನುವ ಕೂಗು ಎದ್ದಿದೆ.

ಎಐ ತಂತ್ರಜ್ಞಾನ ಹೊಂದಿರುವ ಪ್ರತಿಯೊಂದು ಆಸ್ಪತ್ರೆಯೂ ಬ್ರೈನ್-ಡೆತ್ ಗುರುತಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು ಮತ್ತು ಪಾಲಿಸದಿದ್ದರೆ ದಂಡ ವಿಧಿಸಬೇಕು. ಅಕ್ರಮ ಅಂಗಾಂಗ ಮಾರಾಟವನ್ನು ತಡೆಯಲು ವಿಶೇಷ ತನಿಖಾ ಘಟಕ, ವೇಗವಾದ ನ್ಯಾಯಾಲಯ ಮತ್ತು ಆಸ್ತಿ ವಶಪಡಿಸಿಕೊಳ್ಳುವಂತೆಯೂ ಕಠಿಣವಾದ ಶಿಕ್ಷೆಗಳು ಥೋಟಾ ಕಾನೂನಿನಲ್ಲಿ ಸೇರಬೇಕು. ಅಲ್ಲದೇ tissue donation regenerative medicine ಗಳಿಗೆ ಕಾನೂನುಬದ್ಧ ಮಾನ್ಯತೆ ನೀಡಬೇಕು.

ರಾಷ್ಟ್ರೀಯ ಮಟ್ಟದಲ್ಲಿ NOTTO ದಾಖಲಾತಿ ವ್ಯವಸ್ಥೆ ಇದ್ದರೂ ದತ್ತಾಂಶ ರಾಜ್ಯಮಟ್ಟದಲ್ಲಿ ಅಸಮರ್ಪಕವಾಗಿರುವುದರಿಂದ ಎಐ ಆಧಾರಿತ ರಿಜಿಸ್ಟರ್ ಪಾಲಿಸುವುದರ ಮೂಲಕ ದೇಶಾದ್ಯಂತ ಸ್ಪಷ್ಟ ನಿಯಮ ರೂಪಿಸಬೇಕು. ದಾನ ಮಾಡಿದ ಕುಟುಂಬಗಳಿಗೆ monetary benefit ಇಲ್ಲದ ಕಾರಣ ಅಂತವರಿಗೆ ಆರೋಗ್ಯ ವಿಮೆ ಅಥವಾ ಶಿಕ್ಷಣ ನೆರವುಗಳಂತಹ ಸಾಮಾಜಿಕ ಭದ್ರತಾ ಪ್ಯಾಕೇಜು ಗಳನ್ನು ಒದಗಿಸಬೇಕು ಥೋಟಾ ಕಾಯ್ದೆಯಲ್ಲಿ ಜನಜಾಗೃತಿಗೆ ಬಲವಾದ ಪ್ರಾಧಾನ್ಯ ಇಲ್ಲದ ಕಾರಣ ಶಾಲಾ ಪಠ್ಯಕ್ರಮದಲ್ಲೂ ಮತ್ತು ಸಾರ್ವಜನಿಕ ಅಭಿಯಾನಗಳಲ್ಲಿ ಅಂಗಾಂಗ ದಾನದ ಮಹತ್ವ ವನ್ನು ಕಡ್ಡಾಯವಾಗಿ ಸೇರಿಸಬೇಕು.

ಹೀಗೆ ಕಾಯ್ದೆಯು ಭಾರತದಲ್ಲಿ ಬಲವಾದ ಕಾನೂನು ಆಧಾರವನ್ನು ಕೊಟ್ಟಿದ್ದರೂ ಪಾರದರ್ಶಕತೆ, ಜನರ ವಿಶ್ವಾಸ, ತಂತ್ರಜ್ಞಾನ ಆಧಾರಿತ ನಿಯಂತ್ರಣ, ಅಂಗಾಂಗ ಕಳ್ಳ ಸಾಗಾಣಿಕೆ ತಡೆಯುವ ಜಾಗೃತಿಗಳ ಮೂಲಕ ಥೋಟಾ ಕಾಯಿದೆಯನ್ನು ಇನ್ನಷ್ಟು ಪರಿಣಾಮಕಾರಿ, ಮಾನವೀಯ ಮತ್ತು ನ್ಯಾಯಸಮ್ಮತ ವ್ಯವಸ್ಥೆಯನ್ನಾಗಿ ತಿದ್ದಿಕೊಳ್ಳುವ ಅವಶ್ಯಕತೆ ಇದೆ.