ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Keshava Prasad B Column: ವಾರಕ್ಕೆ 72 ಗಂಟೆ ಕೆಲಸ ಮಾಡಿ ಎಂದು ಅವರೆಲ್ಲ ಹೇಳುತ್ತಿರುವುದೇಕೆ ?

ಭಾರತದಲ್ಲಿ ವಾರಕ್ಕೆ 70 ಗಂಟೆಗಳ ಕಾಲ ಎಲ್ಲರಿಗೂ ಕೆಲಸ ಮಾಡಲು ಸಾಧ್ಯವೇ? ಇಲ್ಲವೇ? ಎಂಬುದು ಬೇರೆ ವಿಚಾರ. ಆದರೆ ಮೂರ್ತಿಯವರ ದೂರದೃಷ್ಟಿ, ಆಶಯ, ಕಾಳಜಿಯಲ್ಲಿ ಸ್ವಾರ್ಥವಿಲ್ಲ. ಮೂರ್ತಿಯವರಿಗಿಂತಲೂ ಕಠೋರ ಪರಿಶ್ರಮಿಗಳನ್ನು ನೋಡಬಹುದು! ಜಪಾನಿನ ನೂತನ ಪ್ರಧಾನಿ ಸನಾಯ್ ಟಕಾಯಿಚಿ, ಅಲ್ಲಿನ ಮೊದಲ ಮಹಿಳಾ ಪ್ರಧಾನಿ. ಅವರ ಕೆಲಸ ಶೈಲಿ ಬೇರೆಯವರ ನಿದ್ದೆಗೆಡಿಸಿದೆ!

ಮನಿ ಮೈಂಡೆಡ್

ಇನ್ಫೋಸಿಸ್ ಸ್ಥಾಪಕ ನಾರಾಯಣಮೂರ್ತಿ, ಜಪಾನ್ ಪ್ರಧಾನಿ ಸನಾಯ್ ಟಕಾಯಿಚಿ, ಟೆಸ್ಲಾ ಸ್ಥಾಪಕ ಎಲಾನ್ ಮಸ್ಕ್, ಅಮೇಜಾನ್ ಮಾಲೀಕ ಜೆಫ್ ಬಿಜೋಸ್, ಅಲಿಬಾಬಾದ ಒಡೆಯ ಜ್ಯಾಕ್ ಮಾ, ಪೆಪ್ಸಿಯ ಮಾಜಿ ಸಿಇಒ ಇಂದ್ರಾ ನೂಯಿ, ಬಾಲಿವುಡ್ ನಟ ಶಾರುಖ್ ಖಾನ್ ಇವರೆಲ್ಲರೂ ತಮ್ಮ ಕ್ಷೇತ್ರಗಳಲ್ಲಿ ಅದ್ಭುತ ಸಾಧಕರು. ‌ಇವರೆಲ್ಲರೂ ಯಶಸ್ಸಿಗೆ ಒಂದೇ ಮೆಟ್ಟಿಲು, ‘ಕೆಲಸ... ಕೆಲಸ... ಕೆಲಸ’ ಎನ್ನುತ್ತಾರೆ!

ಇದು ಪರ-ವಿರೋಧದ ಅಲೆಯನ್ನು ಎಬ್ಬಿಸಿದೆ. ಒಂದನ್ನು ಅರ್ಥ ಮಾಡಿಕೊಳ್ಳಬೇಕು. ಮೂರ್ತಿಯವರ ಸಲಹೆಗಳೂ ಐಚ್ಛಿಕ. ಬೆಳಗ್ಗೆ ೯ ಗಂಟೆಯಿಂದ ಸಂಜೆ ೫ಕ್ಕೆ ಮುಕ್ತಾಯ ವಾಗುವ ಕೆಲಸಕ್ಕೆ ಹೋಗಬಹುದು. ಆದರೆ ನೀವು ಒಬ್ಬ ಸಾಧಕರಾಗಬೇಕಿದ್ದರೆ, ವಾರಕ್ಕೆ 70 ಗಂಟೆಗೂ ಹೆಚ್ಚು ಕಾಲ ಶಿಸ್ತಿನಿಂದ ಕೆಲಸ ಮಾಡಬೇಕಾಗುತ್ತದೆ ಅಂತ ಅವರು ಹೇಳಿದ್ದಾರೆ.

ಮಿಸ್ಟರ್ ನಾರಾಯಣಮೂರ್ತಿ, ದ ನೇಶನ್ ವಾಂಟ್ಸ್ ಟು ನೋ... ವರ್ಕ್ ಮತ್ತು ಲೈಫ್ ನಡುವೆ ಬ್ಯಾಲೆನ್ಸ್ ಬಗ್ಗೆ ನೀವು ಈ ಹಿಂದೆ ನೀಡಿದ್ದ ಹೇಳಿಕೆಗೆ ನೀವು ಈಗಲೂ ಬದ್ಧರಾಗಿ ದ್ದೀರಾ?! ‘ಹೀಗೆ ತಮ್ಮ ಎಂದಿನ ಶೈಲಿಯಲ್ಲಿ ರಿಪಬ್ಲಿಕ್ ವರ್ಲ್ಡ್ ಚಾನೆಲ್‌ನ ಸ್ಥಾಪಕ, ಖ್ಯಾತ ಪತ್ರಕರ್ತ ಅರ್ನಾಬ್ ಗೋಸ್ವಾಮಿಯವರು ಇತ್ತೀಚೆಗೆ ಕೇಳಿದ ಪ್ರಶ್ನೆಗೆ, ಮುಗುಳ್ನಗುತ್ತಾ ಉತ್ತರಿಸಿದ ಮೂರ್ತಿಯವರು: ನೋಡಿ, ಒಬ್ಬ ಎಂಜಿನಿಯರ್ ಆಗಿ ನಾನು ಅಂಕಿಅಂಶ ಗಳನ್ನು ಮತ್ತು ವಸ್ತುನಿಷ್ಠ ವಿಷಯಗಳನ್ನು ಮಾತ್ರ ಬಳಸುತ್ತೇನೆ.

ಇದನ್ನೂ ಓದಿ: ‌Keshava Prasad B Column: ವಾರೆನ್‌ ಬಫೆಟ್‌ ಬರೆದ ಕೊನೆಯ ಪತ್ರದಲ್ಲಿ ಏನಿದೆ?

ನ‌ನಗೆ ಯಾವುದೇ ಪೂರ್ವಾಗ್ರಹಪೀಡಿತ ನಿಲುವುಗಳ ಅಗತ್ಯವೂ ಇಲ್ಲ. ನಾನು ಪ್ರಪಂಚದ ನಾನಾ ಕಡೆಗಳಲ್ಲಿ ರಾಜಕಾರಣಿಗಳು, ಕಾರ್ಪೊರೇಟ್ ವಲಯದ ಪ್ರಮುಖರನ್ನು ಮಾತ ನಾಡಿಸಿದ್ದೇನೆ.

ಫಾರ್ಚ್ಯೂನ್ ೨೦ ಕಾರ್ಪೊರೇಟ್ ಲೀಡರ್‌ಗಳು, ಅಮೆರಿಕದ ಟಾಪ್ ಯುನಿವರ್ಸಿಟಿಗಳ ಪ್ರೊಫೆಸರ್ ಗಳ ಜತೆ ಚರ್ಚಿಸಿದ್ದೇನೆ. ಭಾರತದಲ್ಲೂ ನಾನಾ ಸಾಧಕರನ್ನು ಭೇಟಿಯಾಗಿ ರುವೆ. ಆಗ ಗೊತ್ತಾಗಿರುವ ಒಂದು ವಿಷಯ ಸಾಮಾನ್ಯವಾಗಿತ್ತು.

ಯಾವುದೇ ವ್ಯಕ್ತಿ, ಸಮುದಾಯ, ರಾಷ್ಟ್ರವು ಕಠಿಣ ಪರಿಶ್ರಮ ಇಲ್ಲದೆ ಯಾವುದೇ ಏಳಿಗೆ ಹೊಂದಿಲ್ಲ. ಪರಿಶ್ರಮ ಎಂದರೆ ಕಚೇರಿಗೆ ಹೋಗಿ ಅಲ್ಲಿ ನಿದ್ದೆ ಮಾಡುವುದಲ್ಲ. ನನ್ನ ಪ್ರಕಾರ ಶ್ರಮ ಎಂದರೆ ಕಠಿಣ ಪರಿಶ್ರಮ ಮತ್ತು ಸ್ಮಾರ್ಟ್ ವರ್ಕ್. ನಾನೊಬ್ಬರು ಖಭೌತ ಶಾಸಜ್ಞರನ್ನು ಭೇಟಿಯಾಗಿದ್ದೆ. ಅವರು ನಿಸರ್ಗದ ಬಗ್ಗೆ 70ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದರು.

work life Bal

ಭಾರತದಲ್ಲಿ ಬಹುಶಃ ೪-೫ ಮಂಡಿಸಿದರೂ ಅದ್ಭುತ ಕೆಲಸ ಎಂದು ಪರಿಗಣನೆ ಯಾಗುತ್ತದೆ. ಆದ್ದರಿಂದ ಇಷ್ಟು ದೊಡ್ಡ ಸಾಧನೆ ಹೇಗೆ ಸಾಧ್ಯವಾಯಿತು? ನೀವು ಅತ್ಯಂತ ಬುದ್ಧಿವಂತರಾಗಿರುವುದು ಕಾರಣವೇ? ಎಂದು ಕೇಳಿದೆ. ಅದಕ್ಕೆ ಅವರು ಹೀಗೆಂದರು- ಜಗತ್ತಿನಲ್ಲಿ ಬುದ್ಧಿವಂತರಿಗೆ ಕೊರತೆ ಇಲ್ಲ. ನನ್ನ ಸುತ್ತುಮುತ್ತಲು ಇರುವವರೆಲ್ಲವೂ ನನ್ನಷ್ಟೇ ಬುದ್ಧಿಶಾಲಿಗಳು. ಆದರೆ ಅವರಿಗೂ ನನಗೂ ಇರುವ ವ್ಯತ್ಯಾಸ ಏನೆಂದರೆ, ಅವರಿಗಿಂತ ಹೆಚ್ಚು ಹೊತ್ತು ಕೆಲಸ ಮಾಡುತ್ತೇನೆ.

ನನ್ನ ಕುಟುಂಬ ಕೂಡ ನನಗೆ ಸಹಕರಿಸುತ್ತಿದೆ. ಆದ್ದರಿಂದ ಇದೆಲ್ಲ ನನಗೆ ಸಾಧ್ಯವಾಯಿತು ಎಂದು ವಿವರಿಸಿದರು. ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರೂ ವಾರಕ್ಕೆ 100 ಗಂಟೆಗೆ ಕಡಿಮೆ ಇಲ್ಲದಂತೆ ಕೆಲಸ ಮಾಡುತ್ತಾರೆ ಎಂಬುದು ನನ್ನ ದೃಢವಾದ ನಂಬಿಕೆ. ಅವರ ಸಂಪುಟದ ಸಹೋದ್ಯೋಗಿಗಳು, ಹಿರಿಯ ಅಧಿಕಾರಿಗಳೂ ವಾರಕ್ಕೆ 72 ಗಂಟೆಗೂ ಹೆಚ್ಚು ಕೆಲಸ ಮಾಡುತ್ತಾರೆ. ಖ್ಯಾತ ಕ್ರಿಕೆಟ್ ಪಟುಗಳೂ, ದಿನದ ಅಂತ್ಯಕ್ಕೆ ಹೇಳುವುದು ಏನೆಂದರೆ, ಪ್ರಾಕ್ಟೀಸ್....ಪ್ರಾಕ್ಟೀಸ್...ಪ್ರಾಕ್ಟೀಸ್!

ಸುಮಾರು ೨೬ ವರ್ಷಗಳ ಹಿಂದೆ ಪತ್ರಕರ್ತರೊಬ್ಬರು ನನ್ನ ಸ್ನೇಹಿತರೂ, ಕಾರ್ಪೊರೇಟ್ ಕಂಪನಿಯ ಮುಖ್ಯಸ್ಥರೊಬ್ಬರನ್ನು ಸಂದರ್ಶನ ಮಾಡುತ್ತಿದ್ದರು. ವರ್ಕ್ ಲೈಫ್ ಬ್ಯಾಲೆನ್ಸ್ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಪ್ರಶ್ನಿಸಲಾಯಿತು. ನನ್ನ ಸ್ನೇಹಿತರು ಬ್ರಿಲಿಯಂಟ್ ಉತ್ತರ ಕೊಟ್ಟರು. ಸರ್ ಮೊದಲು ನಮಗೆಲ್ಲ ಲೈಫ್ ಸಿಗಬೇಕು. ಬಳಿಕ ವರ್ಕ್-ಲೈಫ್ ಬ್ಯಾಲೆನ್ಸ್ ಬಗ್ಗೆ ಯೋಚನೆ ಮಾಡಬಹುದು. ‌

ದೇಶಕ್ಕೆ ಬೇಕಾಗಿರುವುದು ಏನೆಂದರೆ, ಭಗವಂತನ ದಯೆಯಿಂದ ಆರೋಗ್ಯವಂತರಾಗಿರುವ ಎಲ್ಲರೂ ಅತ್ಯಂತ ಶಿಸ್ತಿನಿಂದ ಕೆಲಸ ಮಾಡಬೇಕು. ಚುರುಕಾಗಿ ಕಾರ್ಯನಿರ್ವಹಿಸಬೇಕು. ಹಾಗೂ ಯಾರಿಗೆ ಕೆಲಸ ಇಲ್ಲವೋ, ಅವರಿಗೆ ಅವಕಾಶಗಳನ್ನು ಕೊಡಬೇಕು. ಆಗ ಅವರಿಗೂ ಲೈಫ್ ಸಿಗುತ್ತದೆ. ‌

ನಂತರ ಕೆಲಸ ಮತ್ತು ಜೀವನದ ಸಮತೋಲನದ ಬಗ್ಗೆ ಚಿಂತಿಸಬೇಕು. ನನ್ನ ತಾಯಿ ಕೂಡ ಬೆಳಗ್ಗೆ ೬ ಗಂಟೆಯಿಂದ ರಾತ್ರಿ ೧೧ ಗಂಟೆಯ ತನಕ ನಿರಂತರವಾಗಿ ಒಂದಿಂದು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆಗ ಸೌದೆ ಒಲೆಯಲ್ಲಿ ಅಡುಗೆ ತಯಾರಾಗುತ್ತಿತ್ತು. ಎಲ್‌ಪಿಜಿ ಸಿಲಿಂಡರ್ ಕೂಡ ಇದ್ದಿರಲಿಲ್ಲ. ಕೆಲಸ ಅಂದರೆ ಕಚೇರಿಯಲ್ಲಿ ಮಾಡುವ ಕೆಲಸ ಒಂದೇ ಅಲ್ಲ ಎಂದು ವಿವರಿಸಿದ್ದಾರೆ.

ಚೀನಾದ ಹಲವಾರು ಟೆಕ್ ಕಂಪನಿಗಳಲ್ಲಿ ಜನಪ್ರಿಯವಾಗಿರುವ ೯-೯-೬ ಕೆಲಸದ ಸಂಸ್ಕೃತಿ ಯ ಬಗ್ಗೆ ಕೂಡ ಮೂರ್ತಿ ಪ್ರಸ್ತಾಪಿಸಿದ್ದಾರೆ. ಭಾರತ ಕೂಡ ಚೀನಾದಂತೆ ಅಭಿವೃದ್ಧಿ ಹೊಂದಬೇಕಿದ್ದರೆ, ಅಲ್ಲಿರುವಂತೆ ೯-೯-೬ ಕೆಲಸದ ಸಂಸ್ಕೃತಿಯನ್ನು ಜಾರಿಗೆ ತರಬೇಕು ಎನ್ನುತ್ತಾರೆ. ಹಾಗಾದರೆ ಏನಿದು?

೯-೯-೬ ಎಂಬುದು ಒಂದು ಕೆಲಸದ ಶಿಸ್ತು. ಬೆಳಗ್ಗೆ ೯ ಗಂಟೆಯಿಂದ ರಾತ್ರಿ ೯ ಗಂಟೆಯ ತನಕ ದುಡಿಯುವುದು. ವಾರದ ೬ ದಿನಗಳಲ್ಲಿ ಇದು ಕಡ್ಡಾಯ. ಒಂದು ದಿನ ಮಾತ್ರ ರಜೆ. ಇದರಿಂದ ವಾರಕ್ಕೆ ೭೨ ದಿನಗಳ ದುಡಿಮೆಯಾಗುತ್ತದೆ. ಬಹುತೇಕ ರಾಷ್ಟ್ರಗಳಲ್ಲಿ ವಾರಕ್ಕೆ ೪೦-೪೮ ಗಂಟೆಗಳ ಕೆಲಸದ ಸಮಯ ಇರುತ್ತದೆ. ಇದಕ್ಕೆ ಹೋಲಿಸಿದರೆ ಇದು ಹೆಚ್ಚು. ಚೀನಾದಲ್ಲಿ ಅಲಿಬಾಬಾ, ಹುವಾಯ್ ಮತ್ತು ಹಲವಾರು ಸ್ಟಾರ್ಟಪ್‌ಗಳ ಶರವೇಗದ ಬೆಳವಣಿಗೆಯಲ್ಲಿ ಇಂಥ ಕೆಲಸದ ಸಂಸ್ಕೃತಿ ಪ್ರಧಾನ ಪಾತ್ರ ವಹಿಸಿತ್ತು.

ವಿಶ್ವದರ್ಜೆಯ ಉತ್ಪನ್ನಗಳನ್ನು ಕೊಡಬೇಕಿದ್ದರೆ, ವೇಗವಾಗಿ ಬೆಳೆಯಬೇಕಿದ್ದರೆ, ಜಾಗತಿಕ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರಬೇಕಿದ್ದರೆ, ಈ ರೀತಿ ಗಂಟೆಗಟ್ಟಲೆ ಕೆಲಸ ಅವಶ್ಯಕ ಎನ್ನುತ್ತಾರೆ ಸಾಧಕರು. ಹೀಗಿದ್ದರೂ, ಇದಕ್ಕೆ ಟೀಕಾಕಾರರು ಇದ್ದಾರೆ.

2010ರ ಕಾಲಘಟ್ಟದಲ್ಲಿ ಚೀನಾ ವೇಗವಾಗಿ ಅಭಿವೃದ್ಧಿ ಹೊಂದಿದರೂ, ಜನರ ಆರೋಗ್ಯದ ಮೇಲೆ ಒತ್ತಡ, ಖಿನ್ನತೆ ಉಂಟಾಗುವ ಸಾಧ್ಯತೆ ಇದೆ ಎಂಬ ವಾದ ಅಲ್ಲಿಯೂ ಉಂಟಾಗಿತ್ತು. 2021ರಲ್ಲಿ ಚೀನಾದ ಸುಪ್ರೀಂ ಕೋರ್ಟ್ ಈ ವ್ಯವಸ್ಥೆಯನ್ನು ಕಾನೂನು ಬಾಹಿರ ಎಂದು ಘೋಷಿಸಿತ್ತು. ಆದರೂ ವರದಿಗಳ ಪ್ರಕಾರ ಈಗಲೂ ಹಲವಾರು ಚೀನಿ ಕಂಪನಿಗಳಲ್ಲಿ ಈ ಪದ್ಧತಿ ಈಗಲೂ ಚಾಲ್ತಿಯಲ್ಲಿದೆ.

ಆರ್ಥಿಕ ಬೆಳವಣಿಗೆ ಮತ್ತು ಉತ್ಪಾದಕತೆಯ ವಿಚಾರದಲ್ಲಿ ಭಾರತವು ಚೀನಾಕ್ಕಿಂತ ಈಗಲೂ ಬಹಳ ಹಿಂದುಳಿದಿರುವುದು ವಾಸ್ತವ. ಚೀನಾದ ಆರ್ಥಿಕತೆಯು ಭಾರತಕ್ಕಿಂತ ಸುಮಾರು ೬ ಪಟ್ಟು ದೊಡ್ಡದು. ಆದ್ದರಿಂದ ಅದಕ್ಕೆ ಪ್ರತಿಸ್ಪರ್ಧೆ ನೀಡಬೇಕಿದ್ದರೆ ಪ್ರತಿ ಯೊಬ್ಬರಿಂದಲೂ ಅಪಾರ ಶ್ರಮದ ಅಗತ್ಯ ಇದೆ ಎಂಬ ಸದುದ್ದೇಶದಿಂದ ನಾರಾಯಣ ಮೂರ್ತಿಯವರು ವಾರಕ್ಕೆ ೭೦ ಗಂಟೆಗಳ ಕಾಲ ಕೆಲಸ ಮಾಡಿ ಎಂಬ ಸಲಹೆ ನೀಡುತ್ತಿದ್ದಾ ರೆಯೇ ಹೊರತು ಬೇರೇನೂ ಇಲ್ಲ.

ಭಾರತದಲ್ಲಿ ವಾರಕ್ಕೆ 70 ಗಂಟೆಗಳ ಕಾಲ ಎಲ್ಲರಿಗೂ ಕೆಲಸ ಮಾಡಲು ಸಾಧ್ಯವೇ? ಇಲ್ಲವೇ? ಎಂಬುದು ಬೇರೆ ವಿಚಾರ. ಆದರೆ ಮೂರ್ತಿಯವರ ದೂರದೃಷ್ಟಿ, ಆಶಯ, ಕಾಳಜಿಯಲ್ಲಿ ಸ್ವಾರ್ಥವಿಲ್ಲ. ಮೂರ್ತಿಯವರಿಗಿಂತಲೂ ಕಠೋರ ಪರಿಶ್ರಮಿಗಳನ್ನು ನೋಡಬಹುದು! ಜಪಾನಿನ ನೂತನ ಪ್ರಧಾನಿ ಸನಾಯ್ ಟಕಾಯಿಚಿ, ಅಲ್ಲಿನ ಮೊದಲ ಮಹಿಳಾ ಪ್ರಧಾನಿ. ಅವರ ಕೆಲಸ ಶೈಲಿ ಬೇರೆಯವರ ನಿದ್ದೆಗೆಡಿಸಿದೆ!

ಟೋಕಿಯೋದಲ್ಲಿ ೫ ಗಂಟೆಗೆಲ್ಲ ಸೂರ್ಯೋದಯ ಆಗುತ್ತದೆ. ಇತ್ತೀಚೆಗೆ ಜಪಾನ್ ಪ್ರಧಾನಿ ಬಜೆಟ್ ಕುರಿತ ಸಿದ್ಧತೆಗೆ ಸೂರ್ಯೋದಯಕ್ಕಿಂತಲೂ ಬಹು ಮೊದಲು, ಬೆಳಗ್ಗೆ ೩ ಗಂಟೆಗೇ ಕಚೇರಿಗೆ ಹಾಜರಾಗಿದ್ದರು. ಎಲ್ಲರೂ ನಿದ್ರಿಸುತ್ತಿದ್ದಾಗ ಅವರು ಆಫೀಸಿನಲ್ಲಿದ್ದರು. ಮನೆಯಲ್ಲಿರುವ ಫ್ಯಾಕ್ಸ್ ಮಶೀನ್ ಕೆಟ್ಟಿದ್ದರಿಂದ ಕಚೇರಿಗೆ ಹೋಗಲು ನಿರ್ಧರಿಸಿದೆ ಎಂದು ಟಕಾಯಿಚಿ ಹೇಳಿದ್ದರು. (ಜಪಾನಿನಲ್ಲಿ ಸಂವಹನದ ಭಾಗವಾಗಿ ಈಗಲೂ ಫ್ಯಾಕ್ಸ್ ಮೆಶೀನ್‌ಗಳು ಬಳಕೆಯಲ್ಲಿವೆ).

ನಾನು ಪ್ರತಿದಿನ ೨ ಗಂಟೆ ಮಾತ್ರ ನಿದ್ದೆ ಮಾಡುತ್ತೇನೆ. ೪ ಗಂಟೆ ನಿದ್ರಿಸಿದರೆ ಅದೇ ಹೆಚ್ಚು ಎನ್ನುತ್ತಾರೆ ಟಕಾಯಿಚಿ. ಈ ರೀತಿ ಬೆಳಗ್ಗೆ ಮೂರು ಗಂಟೆಗೆಲ್ಲ ಕಚೇರಿಗೆ ಕರ್ತವ್ಯಕ್ಕೆ ಬರುವುದು ಅವರಿಗೆ ಹೊಸತೇನಲ್ಲವಂತೆ. ಹೀಗಿದ್ದರೂ, ತಮ್ಮ ಕಾರ್ಯಶೈಲಿಯಿಂದ ಇತರರಿಗೆ ತೊಂದರೆ ಆಗುತ್ತಿರುವುದನ್ನೂ ಆವರು ಒಪ್ಪಿದ್ದಾರಂತೆ.

ಆದರೆ ಮನುಷ್ಯನ ಉತ್ಪಾದಕತೆಗೆ ಒಂದು ಮಿತಿ ಇದೆಯಲ್ಲವೇ? ಜೀವನಪೂರ್ತಿ ಬೆಳಗ್ಗೆ ಮೂರು ಗಂಟೆಗೆ ಏಳಲು ಎಷ್ಟು ಮಂದಿಗೆ ಸಾಧ್ಯವಿದೆ? ಎನ್ನುವ ತರ್ಕದಲ್ಲೂ ಹುರುಳಿದೆ. ಕೆಲಸ ಮತ್ತು ಜೀವನದ ಸಮತೋಲನದ ಬಗ್ಗೆ ಜೆಫ್‌ ಬಿಜೋಸ್ ಹೀಗೆನ್ನುತ್ತಾರೆ: ನೀವು ಕಚೇರಿಯಲ್ಲಿ ಸಂಪೂರ್ಣ ಚೈತನ್ಯದಿಂದ ಕೆಲಸ ಮಾಡಿದರೆ, ಮನೆಯಲ್ಲೂ ಅದೇ ರೀತಿ ಇರುತ್ತೀರಿ.

ಇದು ಸಮತೋಲನದ ಮಾತಲ್ಲ, ಇದೊಂದು ವೃತ್ತ. ಒಂದಕ್ಕೊಂದು ಸಂಬಂಧ ಇರುವಂಥದ್ದು. ಜಗತ್ತಿನ ಅತ್ಯಂತ ಶ್ರೀಮಂತ ಟೆಕ್ ಉದ್ಯಮಿ ಎಲಾನ್ ಮಸ್ಕ್ ಹೇಳೋದು ಹೀಗೆ- ನನ್ನ ಕೆಲಸದ ಒತ್ತಡ ಹೇಗಿರುತ್ತದೆ ಎಂದರೆ, ವಾರಕ್ಕೆ 70 ರಿಂದ 120 ಗಂಟೆಯ ತನಕ ಕೆಲಸ ಇರುತ್ತದೆ. ಬೇರೆ ಆಯ್ಕೆಯೇ ಇಲ್ಲ.

ಹೀಗಿದ್ದರೂ, ವರ್ಕ್-ಲೈಫ್ -ಬ್ಯಾಲೆನ್ಸ್ ಬಗ್ಗೆ ಮೈಕ್ರೊಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಅವರ ನಿಲುವಿನಲ್ಲಿ ಬದಲಾವಣೆಯಾಗಿದೆ. ಮೊದಲೆಲ್ಲ ವಾರಾಂತ್ಯದ ರಜಾ ದಿನಗಳು, ಮೋಜು-ಮಸ್ತಿಯ-ತಿರುಗಾಟದ ರಜೆಯ ದಿನಗಳನ್ನು ಅವರು ನಂಬುತ್ತಿರಲಿಲ್ಲ. ಆದರೆ ಈಗ ಅವುಗಳ ಮಹತ್ವವನ್ನೂ ಮನಗಂಡಿದ್ದಾರೆ.

ಶ್ರೇಷ್ಠ ಜೀವನ ಮತ್ತು ಮಾಡುವ ಕೆಲಸದಲ್ಲಿ ಉತ್ತಮವಾಗಿರುವುದು ಎರಡೂ ಸಮಾನ ಮಹತ್ವದ್ದು ಎಂದು ಪ್ರತಿಪಾದಿಸುತ್ತಿದ್ದಾರೆ. ನಾರಾಯಣಮೂರ್ತಿಯವರೂ, ವರ್ಕ್-ಲೈಫ್ ಬ್ಯಾಲೆನ್ಸ್‌ಗೆ ಒತ್ತು ನೀಡುವವರೇ ಆಗಿದ್ದಾರೆ. ಆದರೆ ಲೈಫ್ ಸಿಗಬೇಕಿದ್ದರೆ ಕಠಿಣ ಪರಿಶ್ರಮ ಮೊದಲು ಬರಬೇಕು ಎಂಬುದೇ ಮೂರ್ತಿಯವರ ಸಲಹೆ. ಇದನ್ನು ನೇರವಾಗಿ ಅವರು ಹೇಳಿದ್ದರಿಂದ ಅಪಥ್ಯದಂತೆ ಹಿಡಿಸದಿರಬಹುದು. ಆದರೆ ಕಷಾಯ ಕಹಿಯಾಗಿರುವು ದಲ್ಲವೇ? ಸಾರಾಂಶವೇನೆಂದರೆ, ಅಪಾರ ಯಶಸ್ಸು ಗಳಿಸಿದವರೆಲ್ಲ ಒಂದಿಂದು ಹಂತದಲ್ಲಿ ಹಗಲು-ರಾತ್ರಿಗಳ ವ್ಯತ್ಯಾಸವಿಲ್ಲದೆ ದುಡಿದವರೇ.

ಕಾಂತಾರದ ನಾಯಕ ರಿಷಬ್ ಶೆಟ್ಟಿಯವರ ಉದಾಹರಣೆಯನ್ನೇ ಗಮನಿಸಿ. ಚಿತ್ರೀಕರಣದ ಸೆಟ್ ನಲ್ಲಿಯೇ ಜೀವಿಸುತ್ತಿದ್ದರು. ಕಳರಿಪಯಟ್ಟು ಕಲಿತಿದ್ದರು. ಮೇಕಪ್ಪಿಗೇ ಆರೇಳು ಗಂಟೆಗಳ ಕಾಲ ಅಡದೆ ಕುಳಿತಿರುತ್ತಿದ್ದರು. ಇನ್ನು ಕಾರ್ಪೊರೇಟ್ ವಲಯದ, ಖಾಸಗಿ ಕಂಪನಿಗಳಲ್ಲಿ ಕೂಡ ಗಮನಿಸಿ, ಅನೇಕ ಮಂದಿ ವಾರಕ್ಕೆ ೭೦ ಗಂಟೆ ಕೆಲಸ ಮಾಡುವವರು ಸಿಗುತ್ತಾರೆ.

ಕೇಶವ ಪ್ರಸಾದ್​ ಬಿ

View all posts by this author