ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr Vijay Darda Column: ಜಗತ್ತಿಗೇಕೆ ಹೀಗೆ ವಿನಾಶವನ್ನೇ ಸಂಭ್ರಮಿಸುವ ಕೆಟ್ಟ ಬುದ್ದಿ ?

ಗಾಜಾಪಟ್ಟಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ 74000ಕ್ಕೂ ಹೆಚ್ಚು ಪ್ಯಾಲೆಸ್ತೀನಿ ನಾಗರಿಕರು ಸಾವನ್ನಪ್ಪಿದ್ದಾರೆ. 1.75 ಲಕ್ಷಕ್ಕೂ ಹೆಚ್ಚು ನಾಗರಿಕರು ಯುದ್ಧ ಸಂಬಂಧ ಘಟನೆಗಳಲ್ಲಿ ಗಾಯಗೊಂಡಿ ದ್ದಾರೆ. ಇವೆಲ್ಲವೂ ಸರ್ಕಾರಗಳ ಅಧಿಕೃತ ಅಂಕಿಅಂಶಗಳು. ನಿಜವಾದ ಅಂಕಿಸಂಖ್ಯೆ ನನ್ನ ಪ್ರಕಾರ ಇನ್ನೂ ಸಾಕಷ್ಟು ಹೆಚ್ಚೇ ಇರುತ್ತದೆ. ಈಗಲೂ ಯುದ್ಧಾವಶೇಷಗಳ ಅಡಿಯಲ್ಲಿ ಸಾವಿರಾರು ಮೃತದೇಹ ಗಳು ಸಮಾಧಿಯಾಗಿವೆ. ಅವುಗಳನ್ನು ಹೊರತೆಗೆಯುವುದಕ್ಕೂ ಸಾಧ್ಯವಾಗುತ್ತಿಲ್ಲ.

ಸಂಗತ

ಜಗತ್ತಿನಾದ್ಯಂತ ಕಳೆದ ವರ್ಷ 50ಕ್ಕೂ ಹೆಚ್ಚು ಯುದ್ಧಗಳಲ್ಲಿ 2.45 ಲಕ್ಷಕ್ಕೂ ಹೆಚ್ಚು ಜನರು ಮೃತ ಪಟ್ಟಿದ್ದಾರೆ. ಇವರಲ್ಲಿ 76,000 ಜನಸಾಮಾನ್ಯರೂ ಸೇರಿದ್ದಾರೆ. ಏಕೆ ನಮಗೆ ಯುದ್ಧ ಬೇಕು? ಜಗತ್ತಿನಲ್ಲಿರುವ ಎಲ್ಲರೂ ಭಾರತೀಯರಂತೆ ವಸುಧೈವ ಕುಟುಂಬಕಂ ಎಂಬ ಸಿದ್ಧಾಂತವನ್ನು ನಂಬಿದರೆ ಎಷ್ಟು ಚೆನ್ನ ಅಲ್ಲವೇ?

ಇದು ಈ ತಿಂಗಳಿನಲ್ಲೇ ನಡೆದ ಘಟನೆ. ಇರಾನ್‌ನ ದಕ್ಷಿಣದಲ್ಲಿರುವ ಕುಹೇಸ್ತಕ್ ಎಂಬ ನಗರದಲ್ಲಿ ಮೀನುಗಾರನೊಬ್ಬನ ಮಗಳ ಮದುವೆ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ಅದೆಲ್ಲಿಂದ ಬಂತೋ ಗೊತ್ತಿಲ್ಲ, ಕ್ಷಿಪಣಿಯೊಂದು ಅವರ ಮನೆಯ ಮೇಲೆ ದಢಾರೆಂದು ಅಪ್ಪಳಿಸಿ ಇಡೀ ಮನೆ ಧಗಧಗ ಹೊತ್ತಿ ಉರಿಯಿತು. ಅಲ್ಲಿದ್ದ ನಾಲ್ಕು ಮಂದಿ ಮೃತಪಟ್ಟು, 60ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡರು.

ಇನ್ನೊಂದೆಡೆ, ಆರು ತಿಂಗಳ ಹಿಂದೆ ಇರಾನ್‌ನ ಮಿನಾಬ್ ನಗರದಲ್ಲಿರುವ ಹೆಣ್ಣುಮಕ್ಕಳ ಅಂಗನ ವಾಡಿಯ ಮೇಲೆ ಕ್ಷಿಪಣಿ ದಾಳಿ ನಡೆದು 120 ಮಕ್ಕಳು ಸಾವನ್ನಪ್ಪಿದ್ದರು. ಅತ್ತ ಉಕ್ರೇನ್‌ನಿಂದಲೂ ಇಂತಹ ಅನೇಕ ದುರಂತ ಕತೆಗಳು ಕೇಳಲು ಸಿಗುತ್ತವೆ. ನಾವು ಅಮೆರಿಕ-ಇರಾನ್ ಮತ್ತು ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಆಗಾಗ ಮಾತನಾಡುತ್ತೇವೆ. ಈ ಯುದ್ಧಗಳ ಬಗ್ಗೆ ಪತ್ರಿಕೆ, ಟಿವಿ ಸುದ್ದಿ ವಾಹಿನಿಗಳಲ್ಲಿ ಆಗಾಗ ವರದಿಯಾಗುತ್ತದೆ. ಆದರೆ ಈಗಲೂ ಜಗತ್ತಿನ ಬೇರೆ ಬೇರೆ ಕಡೆಗಳಲ್ಲಿ ಏನಿಲ್ಲವೆಂದರೂ 50 ಯುದ್ಧಗಳು ನಡೆಯುತ್ತಿವೆ ಎಂಬುದು ನಿಮಗೆ ಗೊತ್ತಾ? ಆಶ್ಚರ್ಯವಾದರೂ ಇದು ನಿಜ. ಕಳೆದ ವರ್ಷವೊಂದರಲ್ಲೇ ಈ ಯುದ್ಧಗಳಲ್ಲಿ ಒಟ್ಟಾರೆ 2.45 ಲಕ್ಷ ಜನರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: Dr Vijay Darda Column: ರಾಜತಾಂತ್ರಿಕ ಅಖಾಡದಲ್ಲಿ ಶಾಂತಿಯನ್ನು ಹುಡುಕುತ್ತಾ !

ಅವರಲ್ಲಿ 76 ಸಾವಿರ ಜನರು ಮುಗ್ಧ ನಾಗರಿಕರು. ನನ್ನ ಪ್ರಕಾರ ಯುದ್ಧದಲ್ಲಿ ಸಾವನ್ನಪ್ಪುವ ಸೈನಿಕರೂ ಮುಗ್ಧರೇ. ಏಕೆಂದರೆ ಅವರು ತಮ್ಮ ಸೇನಾಪಡೆಯ ಮುಖ್ಯಸ್ಥರು ನೀಡಿದ ಆದೇಶವನ್ನು ಪಾಲಿಸುತ್ತಿರು ತ್ತಾರೆ ಅಷ್ಟೆ. ಅವರೇನೂ ತಮ್ಮ ಖಾಸಗಿ ಹಿತಾಸಕ್ತಿಗಾಗಿ ಯುದ್ಧದಲ್ಲಿ ಭಾಗವಹಿಸಿ ರುವುದಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಉಕ್ರೇನ್‌ನಲ್ಲಿ 17000 ಮುಗ್ಧ ಜನಸಾಮಾನ್ಯರು ಯುದ್ಧ ದಲ್ಲಿ ಮೃತಪಟ್ಟಿದ್ದಾರೆ.

ಗಾಜಾಪಟ್ಟಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ 74000ಕ್ಕೂ ಹೆಚ್ಚು ಪ್ಯಾಲೆಸ್ತೀನಿ ನಾಗರಿಕರು ಸಾವನ್ನಪ್ಪಿದ್ದಾರೆ. 1.75 ಲಕ್ಷಕ್ಕೂ ಹೆಚ್ಚು ನಾಗರಿಕರು ಯುದ್ಧ ಸಂಬಂಧ ಘಟನೆಗಳಲ್ಲಿ ಗಾಯಗೊಂಡಿದ್ದಾರೆ. ಇವೆಲ್ಲವೂ ಸರ್ಕಾರಗಳ ಅಧಿಕೃತ ಅಂಕಿಅಂಶಗಳು. ನಿಜವಾದ ಅಂಕಿಸಂಖ್ಯೆ ನನ್ನ ಪ್ರಕಾರ ಇನ್ನೂ ಸಾಕಷ್ಟು ಹೆಚ್ಚೇ ಇರುತ್ತದೆ. ಈಗಲೂ ಯುದ್ಧಾವಶೇಷಗಳ ಅಡಿಯಲ್ಲಿ ಸಾವಿರಾರು ಮೃತದೇಹಗಳು ಸಮಾಧಿಯಾಗಿವೆ. ಅವುಗಳನ್ನು ಹೊರತೆಗೆಯುವುದಕ್ಕೂ ಸಾಧ್ಯ ವಾಗುತ್ತಿಲ್ಲ.

ಯಾರು ಅವುಗಳನ್ನು ಹೊರ ತೆಗೆದು ಅಂತ್ಯ ಸಂಸ್ಕಾರ ಮಾಡುತ್ತಾರೆ? ನಾವಿಲ್ಲಿ ಆಫ್ರಿಕನ್ ದೇಶಗಳ ಬಗ್ಗೆ ಚರ್ಚೆ ಕೂಡ ಮಾಡುತ್ತಿಲ್ಲ. ಆಫ್ರಿಕಾ ಖಂಡದೊಳಗಿನ ಅನೇಕ ದೇಶಗಳಲ್ಲಿ ನಿರಂತರವಾಗಿ ಆಂತರಿಕ ಯುದ್ಧಗಳು ನಡೆಯುತ್ತಿವೆ. ಹೀಗಾಗಿ ಜಾಗತಿಕ ಶಾಂತಿ ಸೂಚ್ಯಂಕವನ್ನು ನೋಡಿದರೆ ಗಾಬರಿಯಾಗುತ್ತದೆ. ಅದರ ಪ್ರಕಾರ ಇಂದು ಜಗತ್ತಿನ ಬೇರೆ ಬೇರೆ ಕಡೆ 61 ದೇಶಗಳು ಯುದ್ಧ ಅಥವಾ ಸಂಘರ್ಷದಲ್ಲಿ ತೊಡಗಿವೆ.

ಇಷ್ಟೂ ದೇಶಗಳ ಸರ್ಕಾರಗಳು ಅಧಿಕೃತವಾಗಿ ಆ ಯುದ್ಧದಲ್ಲಿ ಭಾಗಿಯಾಗಿವೆ. ಐತಿಹಾಸಿಕ ಎರಡನೇ ವಿಶ್ವ ಮಹಾಯುದ್ಧದಲ್ಲಿ 70 ದೇಶಗಳು ಭಾಗಿಯಾಗಿದ್ದವು. ಅಂದರೆ, ನಾವೀಗ ಎಂತಹ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ ಎಂಬುದು ನಿಮಗೆ ಸುಲಭವಾಗಿ ಅರ್ಥವಾಗಬಹುದು!

ಗಮನಿಸಬೇಕಾದ ಇನ್ನೊಂದು ಸಂಗತಿ ಏನು ಗೊತ್ತಾ? ಪ್ರಸ್ತುತ 103 ದೇಶಗಳು ಪರೋಕ್ಷವಾಗಿ ಯುದ್ಧದಲ್ಲಿ ಭಾಗಿಯಾಗಿವೆ. ಅವುಗಳ ಸೈನಿಕರು ರಣರಂಗದಲ್ಲಿ ನೇರವಾಗಿ ಕಾಣಿಸದೆ ಇದ್ದರೂ ಆ ದೇಶಗಳು ಇನ್ನಾವುದೋ ರೂಪದಲ್ಲಿ ಯುದ್ಧಸಂಬಂಧಿ ಚಟುವಟಿಕೆಗಳಲ್ಲಿ ತೊಡಗಿವೆ.

2008ರಲ್ಲಿ ಇಂತಹ ದೇಶಗಳ ಸಂಖ್ಯೆ 59 ಇತ್ತು. ಜಾಗತಿಕ ಶಾಂತಿ ಸೂಚ್ಯಂಕದಲ್ಲಿ 163 ದೇಶಗಳನ್ನು ಪರಿಗಣಿಸಿ ರ್ಯಾಂಕಿಂಗ್ ನೀಡಲಾಗುತ್ತದೆ. ಅದರಲ್ಲೀಗ ನಂ.1 ಸ್ಥಾನದಲ್ಲಿರುವುದು ರಷ್ಯಾ. ಅಂದರೆ ಅತ್ಯಂತ ಕಡಿಮೆ ಶಾಂತಿ ಹೊಂದಿರುವ ದೇಶ ಅದು. ಅತಿ ಕಡಿಮೆ ಶಾಂತಿ ಹೊಂದಿರುವ ಪ್ರತಿ 10 ದೇಶಗಳ ಪೈಕಿ ನಾಲ್ಕು ದೇಶಗಳು ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದಲ್ಲಿವೆ. ಸುಡಾನ್ ಮತ್ತು ಯೆಮನ್ ದೇಶಗಳು ಅತಿ ಕಡಿಮೆ ಶಾಂತಿ ಹೊಂದಿರುವ ದೇಶಗಳ ಸಾಲಿನಲ್ಲಿವೆ.

ಯುದ್ಧಗಳ ವಿಷಯದಲ್ಲಿ ಒಂದು ಪ್ರಶ್ನೆ ಸದಾ ನನ್ನ ತಲೆಯನ್ನು ಕೊರೆಯುತ್ತದೆ. ಏಕೆ ಜಗತ್ತು ಹೀಗೆ ವಿನಾಶವನ್ನೇ ಸಂಭ್ರಮಿಸುತ್ತಿದೆ? ಜನರಿಗೆ ಹಾನಿ ಉಂಟು ಮಾಡಿದರೆ ಸಿಗುವ ಸಂತೋಷವಾದರೂ ಏನು? ವಿಶ್ವಸಂಸ್ಥೆ ಏಕೆ ಸುಮ್ಮನಿದೆ? ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಏನು ಮಾಡುತ್ತಿದೆ? ನಾವಿಂದು ಬದುಕುತ್ತಿರುವ ಜಗತ್ತು ಕೇವಲ ಪ್ರಬಲರಿಗೆ ಮಾತ್ರ ಉಳಿಗಾಲವಿರುವ ಕ್ರೂರ ಜಗತ್ತಾಗಿ ಮಾರ್ಪಾಟಾಗಿದೆಯಾ? ಹಾಗಿದ್ದರೆ ಮಾನವೀಯತೆ ಎಲ್ಲಿಗೆ ಹೋಯಿತು? ಅನೇಕ ದೇಶಗಳು ಯುದ್ಧದಿಂದ ದೂರವುಳಿದಿವೆ ಎಂದು ನಮಗೆ ಅನ್ನಿಸಬಹುದು. ಅವು ಯುದ್ಧವನ್ನು ಬೆಂಬಲಿಸು ವುದಿಲ್ಲ ಎಂಬುದೂ ನಿಜವೇ ಇರಬಹುದು. ಆದರೆ ಯುದ್ಧಗಳಿಂದ ಉಂಟಾಗಿರುವ ಆರ್ಥಿಕ ವಿನಾಶದಿಂದ ಜಾಗತಿಕ ಆರ್ಥಿಕತೆ ಕುಸಿಯುತ್ತಿದೆಯಲ್ಲವೇ, ಅದರ ದುಷ್ಪರಿಣಾಮ ಎಲ್ಲಾ ದೇಶಗಳ ಮೇಲೂ ಉಂಟಾಗುತ್ತಿದೆ.

ಇದನ್ನು ಯಾರಾದರೂ ಕಡೆಗಣಿಸಲು ಸಾಧ್ಯವೇ? ದೇಶವೊಂದನ್ನು ನಾಶಪಡಿಸಬೇಕು ಅಂದರೆ ಅದಕ್ಕೆ ಯುದ್ಧವನ್ನೇ ಮಾಡಬೇಕಿಲ್ಲ. ಹಸಿವು, ನೀರಿನ ಕೊರತೆ ಮತ್ತು ಆರ್ಥಿಕ ಕುಸಿತ ಕೂಡ ಯಾವುದೇ ದೇಶವನ್ನು ಹುರಿದು ಮುಕ್ಕಬಹುದು. ಜನರನ್ನು ಸಾಯಿಸಲು ಇಂದು ಬಾಂಬ್ ಅಥವಾ ಕ್ಷಿಪಣಿ ದಾಳಿಯನ್ನೇ ನಡೆಸಬೇಕಿಲ್ಲ.

ಶಸ್ತ್ರಾಸ್ತ್ರಗಳಿಗಿಂತ ಭೀಕರವಾದ ಅನೇಕ ಸಾಮಾಜಿಕ ಮತ್ತು ಆರ್ಥಿಕ ಅಸಗಳು ಇಂದು ಬಲಾಢ್ಯ ದೇಶಗಳ ಕೈಲಿವೆ. ಹಾಗೆ ಯುದ್ಧದಲ್ಲಿ ತೊಡಗಿರುವ ದೇಶಗಳಿಗೆ ಏನು ಲಾಭವಾಗಿದೆ? ಅವು ಗಳಿಸಿರುವುದಾದರೂ ಏನನ್ನು? ಪ್ರಧಾನಿ ನರೇಂದ್ರ ಮೋದಿ ಹೇಳಿರುವುದು ಸರಿಯಾಗಿದೆ. ನಾವು ಯುದ್ಧದಲ್ಲಿ ಕಳೆಯುವ ಪ್ರತಿ ಒಂದೊಂದು ದಿನವೂ ಮಾನವೀಯತೆಯನ್ನು ಹಿಂದಕ್ಕೆ ತಳ್ಳುತ್ತಾ ಹೋಗುತ್ತದೆ. ಕಟುವಾದ ವಾಸ್ತವ ಏನೆಂದರೆ ಇಂದು ಇಡೀ ಜಗತ್ತು ಭಯದಲ್ಲಿ ಬದುಕುತ್ತಿದೆ. ಮತ್ತು ಇದಕ್ಕೆ ಕೆಲವೇ ಕೆಲವು ಜನರು ಕಾರಣ! 2025ರ ಜಾಗತಿಕ ಶಾಂತಿ ಸೂಚ್ಯಂಕದಲ್ಲಿ ಭಾರತ 115ನೇ ಸ್ಥಾನದಲ್ಲಿತ್ತು. ಆದರೆ ಈ ವರ್ಷ 12 ಸ್ಥಾನಗಳಷ್ಟು ಕುಸಿದು 127ನೇ ಸ್ಥಾನಕ್ಕೆ ಹೋಗಿದೆ.

ಭಾರತದಲ್ಲಿ ಅಶಾಂತಿ ಹೆಚ್ಚಳವಾಗಲು ಗಡಿ ಸಂಘರ್ಷ, ಮಣಿಪುರದಲ್ಲಿನ ಜನಾಂಗೀಯ ಹಿಂಸಾ ಚಾರ ಹಾಗೂ ಆಂತರಿಕ ಭದ್ರತಾ ವ್ಯವಸ್ಥೆಯಲ್ಲಿನ ಕುಸಿತ ಕಾರಣವಂತೆ. ಜಗತ್ತಿನಲ್ಲಿ ಅತ್ಯಂತ ಶಾಂತಿಯಿಂದ ಇರುವ ನಂಬರ್ 1 ದೇಶವೆಂದರೆ ಐಸ್‌ಲ್ಯಾಂಡ್. ಅದು ಸತತ 19ನೇ ವರ್ಷವೂ ನಂಬರ್ 1 ಸ್ಥಾನ ಕಾಪಾಡಿಕೊಂಡಿದೆ. ಆದರೆ ಈಗ ಆ ದೇಶಕ್ಕೂ ಕಂಟಕ ಎದುರಾಗಿದೆ. ಐಸ್‌ಲ್ಯಾಂಡ ನ್ನು ವಶಪಡಿಸಿಕೊಳ್ಳುತ್ತೇನೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಟುರು ಹಾಕುತ್ತಿದ್ದಾರೆ.

ಅವರೇನು ಮಾಡುತ್ತಾರೆ ಎಂಬುದರ ಮೇಲೆ ಐಸ್‌ಲ್ಯಾಂಡಿನ ಶಾಂತಿ-ನೆಮ್ಮದಿ ನಿಂತಿದೆ. ವಾಸ್ತವ ವಾಗಿ ಸ್ಕಾಂಡಿನೇವಿಯನ್ ದೇಶಗಳಾದ ಡೆನ್ಮಾರ್ಕ್, ಸ್ವೀಡನ್, ನಾರ್ವೆ, ಫಿನ್‌ಲೆಂಡ್ ಮತ್ತು ಐಸ್‌ಲ್ಯಾಂಡ್ ದೇಶಗಳು ಯಾವತ್ತೂ ಶಾಂತಿ ಮತ್ತು ಶ್ರೀಮಂತಿಕೆಗೆ ಹೆಸರಾದ ದೇಶಗಳು. ನ್ಯೂಜಿಲೆಂಡ್, ಸ್ವಿಜರ್‌ಲೆಂಡ್, ಸ್ಲೊವೇನಿಯಾ ಮತ್ತು ಐರ್ಲೆಂಡ್ ದೇಶಗಳು ಕೂಡ ಜಗತ್ತಿನ ಟಾಪ್ 10 ಶಾಂತಿಯುತ ದೇಶಗಳ ಸಾಲಿನಲ್ಲಿ ಬರುತ್ತವೆ.

ಶಸ್ತ್ರಾಸ್ತ್ರ ರೇಸ್‌ನಲ್ಲಿ ಯುರೋಪ್ ಮುಂದೆ! ಕಳೆದ ವರ್ಷವೊಂದರಲ್ಲೇ ಯುದ್ಧಗಳಿಂದ ಜಗತ್ತಿಗೆ ಹೆಚ್ಚು ಕಮ್ಮಿ = 22 ಟ್ರಿಲಿಯನ್ ಡಾಲರ್ ನಷ್ಟವಾಗಿದೆ. ಈ ಮೊತ್ತ ನೋಡಿದರೆ ಆಘಾತವಾಗುತ್ತದೆ ಅಲ್ಲವೇ! ಅದರ ಜೊತೆಗೇ, ಜಗತ್ತಿನ ಮಿಲಿಟರಿ ಖರ್ಚುವೆಚ್ಚ 2.9 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಅದರಿಂದಾಗಿ ಜಗತ್ತಿನಾದ್ಯಂತ ಶಸ್ತ್ರಾಸ್ತ್ರ ಗಳ ಖರೀದಿಗೆ ಪೈಪೋಟಿ ನಡೆಯುತ್ತಿದೆ.

ಅತಿಹೆಚ್ಚು ಶಸ್ತ್ರಾಸ್ತ್ರ ಗಳನ್ನು ಖರೀದಿಸಿರುವುದು ಯುರೋಪ್. ಅದಕ್ಕೆ ಕಾರಣ ರಷ್ಯಾದ ಭಯ. ಆ ಭಯದಿಂದಾಗಿಯೇ ಯುರೋಪ್ ಇಂದಿಗೂ ಉಕ್ರೇನ್‌ಗೆ ಬೆಂಬಲ ನೀಡುತ್ತಿದೆ. ನಾನು ಹಾರ್ವರ್ಡ್ ವಿಶ್ವವಿದ್ಯಾಲಯಕ್ಕಾಗಿ ‘ಧರ್ಮ, ಸಂಘರ್ಷ ಮತ್ತು ಶಾಂತಿ’ ಎಂಬ ವಿಷಯದ ಬಗ್ಗೆ ಸಂಶೋಧನಾ ತ್ಮಕ ಅಧ್ಯಯನವೊಂದನ್ನು ನಡೆಸಿದ್ದೇನೆ. ಅದರಲ್ಲಿ, ಜಾಗತಿಕ ಸಂಘರ್ಷಕ್ಕೆ ಅತ್ಯಂತ ಪ್ರಮುಖ ಕಾರಣವೆಂದರೆ ಧಾರ್ಮಿಕ ಮತಾಂಧತೆ ಎಂಬುದನ್ನು ಕಂಡುಕೊಂಡಿದ್ದೇನೆ.

ಆಫ್ರಿಕನ್ ದೇಶಗಳಲ್ಲಿ ಇದಕ್ಕೆ ನಿಮಗೆ ಜೀವಂತ ಉದಾಹರಣೆಗಳು ಸಿಗುತ್ತವೆ. ಹಾಗಂತ, ಸಂಘರ್ಷಕ್ಕೆ ಇದೊಂದೇ ಕಾರಣವಲ್ಲ. ಇನ್ನೂ ಅನೇಕ ಕಾರಣಗಳಿವೆ. ಕೆಲ ದೇಶಗಳ ನಡುವೆ ಐತಿಹಾಸಿಕ ಮತ್ತು ಪುರಾತನವಾದ ವೈಷಮ್ಯದಿಂದಾಗಿ ಈಗಲೂ ಸಂಘರ್ಷ ನಡೆಯುತ್ತಿದೆ. ಇನ್ನು ಕೆಲ ದೇಶಗಳಲ್ಲಿ ಸಂಪತ್ತು ಅಥವಾ ಸಂಪನ್ಮೂಲಗಳಿಗಾಗಿ ಸಂಘರ್ಷ ನಡೆಯುತ್ತಿದೆ.

ಉಕ್ರೇನ್ ಮೇಲೆ ರಷ್ಯಾದ ಪುಟಿನ್ ಯುದ್ಧ ನಡೆಸುತ್ತಿರುವುದಕ್ಕೆ ಕಾರಣ ಉಕ್ರೇನ್ ದೇಶ ಯುರೋಪಿ ಯನ್ ಯೂನಿಯನ್‌ಗೆ ಸೇರಬಾರದು ಮತ್ತು ಹಿಂದೊಂದು ಕಾಲದಲ್ಲಿ ಸೋವಿಯತ್ ಒಕ್ಕೂಟಕ್ಕೆ ಇದ್ದ ಮಾನ್ಯತೆಯನ್ನು ಮತ್ತೆ ಈಗ ಪಡೆಯಬೇಕು ಎಂಬುದಾಗಿದೆ. ಅಮೆರಿಕ ಬೇರೆ ಬೇರೆ ದೇಶಗಳ ಮೇಲೆ ಯುದ್ಧ ನಡೆಸುವುದಕ್ಕೆ ಕಾರಣ ಜಾಗತಿಕ ಮಟ್ಟದಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳು ವುದು ಮತ್ತು ಜಾಗತಿಕ ಸಂಪನ್ಮೂಲದ ಮೇಲೆ ನಿಯಂತ್ರಣ ಸಾಧಿಸುವುದು.

ಚೀನಾ ಎಲ್ಲೂ ನೇರವಾಗಿ ಯುದ್ಧ ನಡೆಸುತ್ತಿಲ್ಲವಾದರೂ, ಅಮೆರಿಕವನ್ನು ದುರ್ಬಲಗೊಳಿಸಲು ಹಾಗೂ ಜಗತ್ತಿನ ಹೊಸ ದೊಡ್ಡಣ್ಣನಾಗಿ ತಾನು ಮೆರೆಯಬೇಕೆಂಬ ಆಸೆಯಿಂದ ಬೇರೆ ಬೇರೆ ದೇಶಗಳಲ್ಲಿ ಸಂಘರ್ಷಗಳನ್ನು ಉತ್ತೇ ಜಿಸುತ್ತದೆ. ನಾವು ಬೇಕಾದರೆ ವಸುಧೈವ ಕುಟುಂಬಕಂ ಎಂಬ ಮಂತ್ರ ಜಪಿಸುತ್ತಾ ಇರಬಹುದು. ಆದರೆ ವಾಸ್ತವ ಬೇರೆಯೇ ಇದೆ: ದೋಸ್ತ್ ದೋಸ್ತ್ ನಾ ರಹಾ.. ಪ್ಯಾರ್ ಪ್ಯಾರ್ ನಾ ರಹಾ! (ಸ್ನೇಹಿತ ಸ್ನೇಹಿತನಾಗಿ, ಪ್ರೀತಿ ಪ್ರೀತಿಯಾಗಿ ಉಳಿದಿಲ್ಲ).

ವೆಲ್ಡನ್ ಬಿಟ್ಟು! ನಿನ್ನ ಸಾಧನೆ ಅದ್ಭುತ ಬಿಟ್ಟು ತಬಾಹಿ ಹೆಸರನ್ನು ನೀವೂ ಇತ್ತೀಚೆಗೆ ಕೇಳಿರುತ್ತೀರಿ. ಮಧ್ಯಪ್ರದೇಶದ ರಾಜಘಡ ಜಿಲ್ಲೆಯ ಬಯಾಓರಾ ತಾಲೂಕಿನ ಮೂಲಕ ಹರಿಯುವ ಅಜ್ನಾರ್ ಎಂಬ ಕಲುಷಿತ ನದಿಯ ಒಂದು ಭಾಗವನ್ನು ಏಕಾಂಗಿಯಾಗಿ ಸ್ವಚ್ಛಗೊಳಿಸುವ ಮೂಲಕ ನದಿ ಸ್ವಚ್ಛತೆಯ ಆಂದೋಲನವನ್ನು ಹುಟ್ಟು ಹಾಕಿದ 20ರ ತರುಣ ಈತ. ಇವನ ಹೆಸರಿನ ಜೊತೆಗೆ ತಬಾಹಿ ಎಂಬ ಸರ್‌ನೇಮ್ ಇರುವುದು ವಿರೋಧಾಭಾಸದಂತಿದೆ. ತಬಾಹಿ ಅಂದರೆ ಧ್ವಂಸ ಅಥವಾ ವಿನಾಶ. ಆದರೆ ಈ ಮನುಷ್ಯ ನದಿಯನ್ನು ವಿನಾಶದಿಂದ ರಕ್ಷಿಸುವ ಅದ್ಭುತವಾದ ಕೆಲಸ ಮಾಡುತ್ತಿದ್ದಾನೆ.

ಸಾಯುತ್ತಿರುವ ನದಿಗಳನ್ನು ಉಳಿಸುವ ವಿಷಯದಲ್ಲಿ ಸರ್ಕಾರಗಳೇ ಸೋಲುತ್ತಿರುವಾಗ ಬಿಟ್ಟು ತಬಾಹಿಯ ಯಶಸ್ಸು ನಮ್ಮ ದೇಶಕ್ಕೆ ಅತ್ಯುತ್ತಮವಾದ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದೆ. ಈ ಹುಡುಗನನ್ನು ನೋಡಿದಾಗ ನನಗೆ ದಶರಥ ಮಾಂಝಿಯ ನೆನಪಾಯಿತು. ಆತ ಏಕಾಂಗಿಯಾಗಿ ಬೆಟ್ಟ ಕೊರೆದು ರಸ್ತೆ ನಿರ್ಮಿಸಿದ ಸಾಹಸಿ.

ಡಾ.ವಿಜಯ್‌ ದರಡಾ

View all posts by this author