Dr Vijay Darda Column: ರಾಜತಾಂತ್ರಿಕ ಅಖಾಡದಲ್ಲಿ ಶಾಂತಿಯನ್ನು ಹುಡುಕುತ್ತಾ !
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ವಿಷಯದಲ್ಲಿ ಭಾರತದ ನಿಲುವಿನ ಬಗ್ಗೆ ತುಂಬಾ ಜನರಿಗೆ ಸ್ಪಷ್ಟತೆಯಿಲ್ಲ. ಆದರೆ, ಒಂದು ವಿಷಯದಲ್ಲಿ ನನಗೆ ಸ್ಪಷ್ಟತೆಯಿದೆ. ಅದೇನೆಂದರೆ, ಇಂತಹ ಸಂಗತಿ ಗಳಲ್ಲಿ ಭಾರತದ ನಿಲುವು ಯಾವಾಗಲೂ ಒಂದೇ ಆಗಿರುತ್ತದೆ; ಅದು ಶಾಂತಿ. ನಮ್ಮದು ಶಾಂತಿಯ ಸುಗಂಧದಿಂದ ತೋಯ್ದು ಪುನೀತವಾದ ಮಣ್ಣು. ಇದರಲ್ಲಿ ಭಗವಾನ್ ಮಹಾವೀರನ ಬೋಧನೆಗಳ ಸಾರ ಅಡಗಿದೆ.
-
ಸಂಗತ
ಡಾ.ವಿಜಯ್ ದರಡಾ
ಯುದ್ಧರಂಗದಲ್ಲಿ ಯಾವ ಸಮಸ್ಯೆಗೂ ಪರಿಹಾರ ಸಿಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಯವರು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ಗೆ ಏನಿಲ್ಲವೆಂದರೂ ನಾಲ್ಕು ಸಲ ಕಿವಿಮಾತು ಹೇಳಿದ್ದಾರೆ. ಈ ಸಲವಾದರೂ ಅವರು ಅದನ್ನು ಕಿವಿಗೆ ಹಾಕಿಕೊಳ್ಳುತ್ತಾರಾ? ಮೋದಿಯವರ ಪ್ರಯತ್ನ ರಾಜತಾಂತ್ರಿಕ ಮಾರ್ಗದಲ್ಲಿ ಶಾಂತಿಯನ್ನು ಹುಡುಕುವುದೇ ಆಗಿದೆ.
ಇತ್ತೀಚೆಗೆ ಕಿರ್ಗಿಸ್ತಾನದ ಬಿಷ್ಕೇಕ್‌ನಲ್ಲಿ ಶಾಂಘೈ ಕೋಆಪರೇಷನ್ ಆರ್ಗನೈಸೇಶನ್‌ನ (ಎಸ್‌ಸಿಒ) ಶೃಂಗಸಭೆ ನಡೆಯಿತು. ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮುಖಾಮುಖಿಯಾಗಿದ್ದರು. ಈ ವೇಳೆ ಮತ್ತೊಮ್ಮೆ ಯುದ್ಧದ ವಿಷಯ ಪ್ರಸ್ತಾಪಿಸಿದ ಮೋದಿ, ‘ಯುದ್ಧದಲ್ಲಿ ಕಳೆಯುವ ಒಂದೊಂದು ದಿನವೂ ಮಾನವ ಸಂಕುಲವನ್ನು ಹಿಂದಕ್ಕೆ ತಳ್ಳುತ್ತದೆ’ ಎಂದು ಹೇಳಿದರು.
ಈ ಹೇಳಿಕೆ ಮಾಧ್ಯಮಗಳ ಮೂಲಕ ಜಗತ್ತಿನ ಕಿವಿಗೆ ಬೀಳುತ್ತಿದ್ದಂತೆ ಎಲ್ಲಾ ಕಡೆ ಚರ್ಚೆಯಾಯಿತು. ಮೋದಿಯವರ ಮಾತು ಇನ್ನೂ ಹಲವು ಪ್ರಶ್ನೆಗಳನ್ನು ಎತ್ತಿತು: ಪುಟಿನ್ ಅವರು ಮೋದಿಯ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರಾ? ಭಾರತದ ಈ ಹೇಳಿಕೆ ಕೇವಲ ಅಮೆರಿಕ ಮತ್ತು ಯುರೋಪನ್ನು ಖುಷಿಪಡಿಸುವುದಕ್ಕಾಗಿ ನೀಡಿದ ಹೇಳಿಕೆಯೇ ಅಥವಾ ಸ್ವತಃ ಭಾರತವೇ ಮನಸಾರೆ ನೀಡಿದ್ದೆ? ರಷ್ಯಾವನ್ನು ಬೆಂಬಲಿಸುತ್ತಾ ಬಂದಿರುವ ಭಾರತ ತನ್ನ ನಿಲುವನ್ನು ಬದಲಿಸುವುದಕ್ಕೆ ಮುಂದಾಗಿದೆಯೇ? ಇಂತಹ ಇನ್ನೂ ಸಾಕಷ್ಟು ಪ್ರಶ್ನೆಗಳಿವೆ.
ಇದನ್ನೂ ಓದಿ: Vijay Darda Column: ಚೀನಾದ ʼಜಲಬಾಂಬ್ʼ ಭಾರತ ಹೇಗೆ ಎದುರಿಸುತ್ತದೆ ?
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ವಿಷಯದಲ್ಲಿ ಭಾರತದ ನಿಲುವಿನ ಬಗ್ಗೆ ತುಂಬಾ ಜನರಿಗೆ ಸ್ಪಷ್ಟತೆಯಿಲ್ಲ. ಆದರೆ, ಒಂದು ವಿಷಯದಲ್ಲಿ ನನಗೆ ಸ್ಪಷ್ಟತೆಯಿದೆ. ಅದೇನೆಂದರೆ, ಇಂತಹ ಸಂಗತಿಗಳಲ್ಲಿ ಭಾರತದ ನಿಲುವು ಯಾವಾಗಲೂ ಒಂದೇ ಆಗಿರುತ್ತದೆ; ಅದು ಶಾಂತಿ. ನಮ್ಮದು ಶಾಂತಿಯ ಸುಗಂಧದಿಂದ ತೋಯ್ದು ಪುನೀತವಾದ ಮಣ್ಣು. ಇದರಲ್ಲಿ ಭಗವಾನ್ ಮಹಾವೀರನ ಬೋಧನೆಗಳ ಸಾರ ಅಡಗಿದೆ.
ಭಗವಾನ್ ಬುದ್ಧನ ಚಿಂತನೆಗಳ ಕಂಪು ಹರಡಿದೆ. ಭಾರತವನ್ನು ಸತ್ಯಾಗ್ರಹದ ಮೂಲಕ ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸಿದ ಮಹಾತ್ಮ ಗಾಂಧೀಜಿಯವರ ಸಂದೇಶಗಳು ನಮ್ಮ ನೆಲದಲ್ಲಿ ಹಾಸುಹೊಕ್ಕಾಗಿವೆ. ಸ್ವಾತಂತ್ರ್ಯ ಗಳಿಸಲು ನಾವು ಅಹಿಂಸೆಯ ಮಾರ್ಗ ಅನುಸರಿಸಿದ್ದೆವು. ಸ್ವಾತಂತ್ರ್ಯ ಲಭಿಸಿದ ಮೇಲೂ ನಮ್ಮ ಮಾರ್ಗ ಅಹಿಂಸೆಯೇ ಆಗಿದೆ. ಸತ್ಯ ಮತ್ತು ಅಹಿಂಸೆಯನ್ನು ನಮ್ಮ ಬದುಕಿನ ಆಧಾರ ಸ್ತಂಭಗಳನ್ನಾಗಿ ಸ್ವೀಕರಿಸಿದ್ದೇವೆ.
ನಮ್ಮ ದೇಶದ ಅಸ್ಮಿತೆಯಲ್ಲೇ ಮಿಳಿತವಾಗಿರುವ ಪರಮೋಚ್ಚ ಮೌಲ್ಯಗಳಿವು. ಪಂಡಿತ್ ಜವಾಹರಲಾಲ್ ನೆಹರು ಅವರಿಂದ ಹಿಡಿದು ನರೇಂದ್ರ ಮೋದಿಯವರ ವರೆಗೆ ಈ ದೇಶದಲ್ಲಿ ಆಡಳಿತ ನಡೆಸಿದ ಪ್ರತಿಯೊಬ್ಬ ಪ್ರಧಾನ ಮಂತ್ರಿಯೂ ಜಾಗತಿಕ ಶಾಂತಿಯ ಮಂತ್ರ ಪಠಿಸುತ್ತಲೇ ಬಂದಿದ್ದಾರೆ. ವಸುಧೈವ ಕುಟುಂಬಕಂ ಎಂಬ ಭಾರತದ ಪುರಾತನ ಸಿದ್ಧಾಂತದಲ್ಲಿ ನಮಗೆ ಅಚಲ ನಂಬಿಕೆಯಿದೆ. ನಾವು ಪಂಚಶೀಲ ತತ್ವಗಳನ್ನು ಇವತ್ತಿಗೂ ನೂರಕ್ಕೆ ನೂರು ನಂಬುತ್ತೇವೆ. ಶಾಂತಿಯ ಕುರಿತಾದ ಭಾರತದ ನೀತಿಗಳು ಯಾವತ್ತೂ ಬದಲಾಗಿಲ್ಲ. ಯಾವ ದೇಶದ ಮೇಲೂ ಸ್ವಯಂಪ್ರೇರಿತವಾಗಿ ದಾಳಿ ನಡೆಸದೆ ಇರುವ ಜಗತ್ತಿನ ಏಕೈಕ ದೇಶ ನಮ್ಮದು. ನಾವು ಶಸ್ತ್ರಾಸ್ತ್ರಗಳನ್ನು ಮೇಲೆತ್ತಿದ್ದೆಲ್ಲಾ ಸ್ವಯಂ ರಕ್ಷಣೆಗಾಗಿ. ನಮ್ಮ ಮೇಲೆ ದಾಳಿ ನಡೆಸಿದವರನ್ನು ಸದೆಬಡಿಯಲು, ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಮತ್ತು ಬಾಹ್ಯ ದಾಳಿಗೆ ಭಾರತ ಜಗ್ಗುವುದಿಲ್ಲ ಎಂಬ ಸಂದೇಶವನ್ನು ಜಗತ್ತಿಗೆ ನೀಡಲು ಮಾತ್ರ ನಾವು ಯುದ್ಧದಲ್ಲಿ ಪಾಲ್ಗೊಂಡಿದ್ದೇವೆ.
ಅದರ ಹೊರತು ಭಾರತಕ್ಕೆ ಯುದ್ಧದಲ್ಲಿ ಯಾವತ್ತೂ ಆಸಕ್ತಿಯಿಲ್ಲ. ಪುಟಿನ್ ಬಳಿ ಪ್ರಧಾನಿ ನರೇಂದ್ರ ಮೋದಿ ಆಡಿದ ಮಾತು ಕೂಡ ಭಾರತದ ಶಾಂತಿ-ಪರ ನಿಲುವನ್ನು ತೋರಿಸುತ್ತದೆ. ಪುಟಿನ್ ಬಳಿ ಮೋದಿ ಇಂತಹದ್ದೊಂದು ಮನವಿ ಮಾಡಿರುವುದು ಇದೇ ಮೊದಲಲ್ಲ. ನನಗೆ ನೆನಪಿರುವ ಪ್ರಕಾರ, ಪ್ರಧಾನಿ ಮೋದಿಯವರು ಪುಟಿನ್‌ಗೆ ಉಕ್ರೇನ್ ಮೇಲಿನ ಯುದ್ಧ ನಿಲ್ಲಿಸಿ ಶಾಂತಿಯ ಮಾರ್ಗ ಆಯ್ದುಕೊಳ್ಳುವಂತೆ ನಾಲ್ಕು ಬಾರಿ ಸಲಹೆ ನೀಡಿದ್ದಾರೆ. ಉಕ್ರೇನ್ ಮತ್ತು ರಷ್ಯಾ ಮಧ್ಯೆ 2022ರ ಫೆಬ್ರವರಿಯಲ್ಲಿ ಯುದ್ಧ ಆರಂಭವಾಯಿತು.
2022ರ ಸೆಪ್ಟೆಂಬರ್ ನಲ್ಲಿ ಪ್ರಧಾನಿ ಮೋದಿಯವರು ಉಜ್ಬೆಕಿಸ್ತಾನದ ಸಮರಕಂಡ್‌ನಲ್ಲಿ ಬಹಿರಂಗ ವಾಗಿಯೇ ‘ಇದು ಯುದ್ಧ ಮಾಡುವ ಕಾಲ ಅಲ್ಲ’ ಎಂದು ಹೇಳಿದ್ದರು. ಆ ಹೇಳಿಕೆ ಜಗತ್ತಿನಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಯಿತು. ಜಿ20 ಶೃಂಗದ ಘೋಷಣೆಯಲ್ಲೂ ಮೋದಿಯವರ ಹೇಳಿಕೆಗೆ ಮೆಚ್ಚುಗೆ ಪ್ರಾಪ್ತವಾಯಿತು. ನಂತರ 2024ರ ಜುಲೈನಲ್ಲಿ ಪ್ರಧಾನಿ ಮೋದಿಯವರು ರಷ್ಯಾಕ್ಕೆ ಭೇಟಿ ನೀಡಿದ್ದರು. ಆಗ ಮಾಸ್ಕೋದಲ್ಲಿ ಪುಟಿನ್‌ರನ್ನು ಭೇಟಿಯಾದಾಗ, ‘ಯುದ್ಧ ರಂಗದಲ್ಲಿ ಯಾವ ಸಮಸ್ಯೆಗೂ ಪರಿಹಾರ ಸಿಗುವುದಿಲ್ಲ.
ಬಾಂಬ್ ಮತ್ತು ಗುಂಡಿನ ದಾಳಿಯ ನಡುವೆ ಶಾಂತಿ ಮಾತುಕತೆ ಸಾಧ್ಯವಿಲ್ಲ. ಮಾತುಕತೆ ನಡೆಯ ಬೇಕು ಅಂದರೆ ಯುದ್ಧ ನಿಲ್ಲಬೇಕು’ ಎಂದು ನೇರವಾಗಿ ಹೇಳಿದ್ದರು. ಬಳಿಕ ಅಕ್ಟೋಬರ್ 2024ರಲ್ಲಿ ಪುನಃ ರಷ್ಯಾದ ಕಜಾನ್ ನಗರಕ್ಕೆ ಭೇಟಿ ನೀಡಿದಾಗ, ‘ರಷ್ಯಾ-ಉಕ್ರೇನ್ ಯುದ್ಧಕ್ಕೆ ಆದಷ್ಟು ಬೇಗ ಪೂರ್ಣವಿರಾಮ ಹಾಕಿ ಶಾಂತಿ ಸ್ಥಾಪನೆ ಮಾಡಬೇಕು. ಯಾವುದೇ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳುವುದನ್ನು ಭಾರತ ಬೆಂಬಲಿಸುತ್ತದೆ’ ಎಂದು ಹೇಳಿದ್ದರು. ಈಗ ಕಿರ್ಗಿಸ್ತಾನದ ಬಿಷ್ಕೇಕ್‌ನಲ್ಲಿ ಮಗದೊಮ್ಮೆ ಪ್ರಧಾನಿ ಮೋದಿಯವರು ‘ನಾವೀಗ ಯುದ್ಧ ನಿಲ್ಲಿಸಿ ಶಾಂತಿಯ ಮಂತ್ರ ಜಪಿಸಬೇಕು’ ಎಂದು ಕರೆ ನೀಡಿದ್ದಾರೆ.
ಯುದ್ಧದಲ್ಲಿ ಕಳೆಯುವ ಒಂದೊಂದು ದಿನವೂ ಮನುಕುಲವನ್ನು ಹಿಂದಕ್ಕೆ ತಳ್ಳುತ್ತದೆ. ಶಾಂತಿಗಾಗಿ ಇರಿಸಿದ ಒಂದೊಂದು ಹೆಜ್ಜೆಯೂ ಮನುಕುಲವನ್ನು ಹೊಸ ಭರವಸೆ ಮತ್ತು ಉತ್ಸಾಹದತ್ತ ಕೊಂಡೊಯ್ಯುತ್ತದೆ ಎಂದು ಕೂಡ ಹೇಳಿದ್ದಾರೆ. ಇದಕ್ಕೆ ಪುಟಿನ್ ಉತ್ತರ ನೀಡಿ, ‘ನಾವು ಅದೇ ದಿಸೆಯಲ್ಲಿ ಸಾಗುತ್ತಿದ್ದೇವೆ’ ಎಂದಿದ್ದಾರೆ. ಅಂದರೆ ಪುಟಿನ್ ನಿಜವಾಗಿಯೂ ಯುದ್ಧ ನಿಲ್ಲಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆಯೇ? ಉಕ್ರೇನ್ ಮತ್ತು ರಷ್ಯಾ ನಡುವೆ ಶಾಂತಿ ಸ್ಥಾಪನೆ ಆಗುತ್ತದೆಯೇ? ಖಂಡಿತ ಅಂತಹ ಸಾಧ್ಯತೆಯೇನೂ ಕಾಣಿಸುತ್ತಿಲ್ಲ.
ಪುಟಿನ್ ಯುದ್ಧ ನಿಲ್ಲಿಸಿದರೆ ಅವರು ಸೋತರು ಎಂದಾಗುತ್ತದೆ. ಆ ಸೋಲು ಅವರ ರಾಜಕೀಯ ಬದುಕಿನ ಅತಿದೊಡ್ಡ ಸೋಲಾಗುತ್ತದೆ! ಹಾಗೆ ಸೋಲೊಪ್ಪಿಕೊಳ್ಳಲು ಅವರು ಸಿದ್ಧರಿಲ್ಲ. ಏಕೆಂದರೆ, ಉಕ್ರೇನ್‌ನ ಬಹುದೊಡ್ಡ ಭಾಗವೊಂದನ್ನು ರಷ್ಯಾಕ್ಕೆ ಸೇರಿಸಿಕೊಳ್ಳುವ ಹಂತಕ್ಕೆ ತಾನು ಬಂದಿದ್ದೇ ನೆಂಬ ವಿಶ್ವಾಸ ಅವರಿಗಿದೆ. ಹೀಗಾಗಿ ಯುದ್ಧವನ್ನು ನಿಲ್ಲಿಸುವುದೇ ಆದರೆ ತನ್ನ ಇಚ್ಛೆಯಂತೆ ಅದನ್ನು ನಿಲ್ಲಿಸಬೇಕು, ಆ ಸಮಯಕ್ಕಾಗಿ ಕಾಯಬೇಕು, ರಷ್ಯಾದ ಕೈ ಸಂಪೂರ್ಣ ಮೇಲಾದಾಗ ಯುದ್ಧ ಅಂತ್ಯಗೊಳಿಸಬೇಕು ಎಂದು ಅವರು ಯೋಚಿಸುತ್ತಿದ್ದಾರೆ.
ಪುಟಿನ್ ಯೋಚನೆ ಹೀಗಿರುವಾಗ ಪ್ರಧಾನಿ ಮೋದಿಯವರು ನೀಡುತ್ತಿರುವ ಹೇಳಿಕೆ ರಷ್ಯಾವಿರೋಧಿ ಹೇಳಿಕೆಯಾಗುತ್ತದೆ ಎಂದು ಯಾರಾದರೂ ಅಂದುಕೊಂಡಿದ್ದರೆ ಅವರು ಒಂದು ಸಂಗತಿಯನ್ನು ಅರ್ಥ ಮಾಡಿಕೊಳ್ಳಬೇಕು. ರಾಜಕೀಯ ಮತ್ತು ರಾಜತಾಂತ್ರಿಕತೆಯಲ್ಲಿ ಯಾವಾಗಲೂ ಮೇಲ್ನೋ ಟಕ್ಕೆ ಏನು ಕಾಣಿಸುತ್ತದೆಯೋ ಅದೇ ನಿಜವಾಗಿರುವುದಿಲ್ಲ. ವಾಸ್ತವವಾಗಿ ನಡೆಯುತ್ತಿರುವ ಬೆಳವಣಿಗೆಗಳು ಬೇರೆಯೇ ಇರಬಹುದು. ಆದರೂ ಮೋದಿಯವರ ಪ್ರಯತ್ನ ರಾಜತಾಂತ್ರಿಕ ಮಾರ್ಗದಲ್ಲಿ ಶಾಂತಿಯನ್ನು ಹುಡುಕುವುದೇ ಆಗಿದೆ. ಆದರೆ ಇತಿಹಾಸವನ್ನು ಗಮನಿಸಿದರೆ, ಶಾಂತಿ ಸ್ಥಾಪನೆಯು ಯಾವಾಗಲೂ ಪ್ರಬಲರಿಗೆ ತೃಪ್ತಿಯಾದಾಗಲೇ ಆಗುತ್ತದೆ. ಮತ್ತು ಈ ಪ್ರಕರಣದಲ್ಲಿ ಪ್ರಬಲರ ಹಸಿವು ಇನ್ನೂ ನೀಗಿಲ್ಲ! ಭಾರತದ ಜಿಡಿಪಿ ಅತ್ಯಧಿಕ ಬೆಳವಣಿಗೆ!
ಶಾಂಘೈ ಸಹಕಾರ ಸಂಸ್ಥೆಯ ಶೃಂಗದ ಸಮಯದಲ್ಲೇ ಬಂದ ಒಂದು ಸುದ್ದಿ ಭಾರತದ ಬಗ್ಗೆ ಜಗತ್ತು ಮಾತನಾಡಿಕೊಳ್ಳುವಂತೆ ಮಾಡಿದೆ. ಅದೇನೆಂದರೆ, ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಭರ್ಜರಿ ಶೇ.7.8ರಷ್ಟು ಏರಿಕೆಯಾಗಿದೆ. ಜಗತ್ತು ಅಚ್ಚರಿಯ ಕಣ್ಣುಗಳಿಂದ ಇದನ್ನು ಗಮನಿಸಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಈ ಮಾಹಿತಿಯನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು, ಎಲ್ಲಾ ದೇಶಗಳಿಗೂ ಪ್ರಬಲವಾದ ಸಂದೇಶ ವೊಂದನ್ನು ರವಾನಿಸಿದ್ದಾರೆ.
ಏನದು ಸಂದೇಶ? ‘ಜಾಗತಿಕ ಮಟ್ಟದಲ್ಲಿ ಏನೇ ಅಡಚಣೆಗಳು ಇದ್ದರೂ ಅವು ಭಾರತದ ಅಭಿವೃದ್ಧಿ ಯನ್ನು ತಡೆಯಲು ಸಾಧ್ಯವಿಲ್ಲ. ತೈಲ ಬೆಲೆ ಏರಿದೆ, ಪ್ರಮುಖ ಸರಕುಗಳ ಪೂರೈಕೆ ಸರಪಳಿಯಲ್ಲಿ ವ್ಯತ್ಯಾಸವಾಗಿದೆ. ಆದರೂ ಭಾರತ ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಗತಿ ಸಾಧಿಸಿದೆ. ಇದು ಹೊಸ ಯುಗದ ಭಾರತ. ಈಗಾಗಲೇ ಭಾರತದ ಯುವಕರು ಜಗತ್ತಿನಾದ್ಯಂತ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಇನ್ನು ಹಿಂತಿರುಗಿ ನೋಡುವ ಪ್ರಶ್ನೆಯೇ ಇಲ್ಲ. ಭಾರತದ ಶಕ್ತಿಯನ್ನು ಕಡೆಗಣಿ ಸುವ ಧೈರ್ಯ ಯಾರಿಗೂ ಇಲ್ಲ!’ ಎಂಬ ಈ ಮಾತುಗಳನ್ನು ಅವರು ಬಾಯಿಬಿಟ್ಟು ಹೇಳಿಲ್ಲ ವಾದರೂ ಅವರ ಮಾತಿನ ಧಾಟಿ ಎಲ್ಲರಿಗೂ ಅರ್ಥವಾಗಿದೆ. ನಿಜ, ಭಾರತವನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ಸ್ವಲ್ಪ ಸೌಂಡ್ ಕಡಿಮೆ ಮಾಡು! ಹಬ್ಬಗಳು ಬಂದಿವೆ.
ಎಲ್ಲೆಡೆ ಶಬ್ದ ಮಾಲಿನ್ಯದ ಸಮಸ್ಯೆ. ಹಬ್ಬಗಳನ್ನು ಗದ್ದಲವಿಲ್ಲದೆ ನಡೆಸುವುದು ಹೇಗೆ? ಶಬ್ದ ಮಾಲಿನ್ಯ ತಡೆಯುವುದು ಹೇಗೆ? ಈ ಪ್ರಶ್ನೆ ಮತ್ತೆ ಮೇಲೆದ್ದಿದೆ. ಮಹಾರಾಷ್ಟ್ರದ ಕೆಲ ಜಿಲ್ಲೆಗಳಲ್ಲಿ ಇದಕ್ಕೆ ಸಂಬಂಽಸಿದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ನವೆಂಬರ್ 1ರವರೆಗೆ ಕಿವಿಗಡಚಿಕ್ಕುವ ಡಿ.ಜೆ.ಗಳನ್ನು ಬಳಸುವಂತಿಲ್ಲ ಎಂದು ಆಯಾ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ನಾನಂತೂ ಇದನ್ನು ನೂರಕ್ಕೆ ನೂರು ಬೆಂಬಲಿಸುತ್ತೇನೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ಶಬ್ದಮಾಲಿನ್ಯ ನಿಯಂತ್ರಿಸಲು ಹೊಸ ನೀತಿಯೊಂದನ್ನು ಜಾರಿಗೊಳಿಸಲಿ ಎಂದು ಆಗ್ರಹಿಸುತ್ತೇನೆ. ನಿಜ, ನಾವೆಲ್ಲರೂ ಹಬ್ಬಗಳನ್ನೂ ಸಂಭ್ರಮಾಚರಣೆಯನ್ನೂ ಇಷ್ಟಪಡುತ್ತೇವೆ. ಹಬ್ಬಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಆದರೆ, ಹಬ್ಬಗಳಲ್ಲಿ ಜೋರಾಗಿ ಮೈಕ್, ಡಿಜೆಗಳನ್ನು ಹಾಕಲೇಬೇಕಾ? ನಮ್ಮಲ್ಲೇ ಎಷ್ಟೊಂದು ಮಧುರವಾದ ಸೌಮ್ಯ ಸಂಗೀತದ ಉಪಕರಣಗಳಿಲ್ಲವೇ? ಅವುಗಳನ್ನು ನುಡಿಸಿ ಸಂತೋಷಪಡಬಹುದಲ್ಲವೇ? ಅದರಿಂದ ಶಬ್ದಮಾಲಿನ್ಯ ಉಂಟಾಗುವುದಿಲ್ಲ.
ಕೇಳುವುದಕ್ಕೆ ಇಂಪಾಗಿರುತ್ತದೆ. ಯಾರಿಗೂ ತೊಂದರೆಯಾಗುವುದಿಲ್ಲ. ಡಿಜೆಗಳ ಜೋರು ಶಬ್ದ ಮಕ್ಕಳಿಗೆ, ವೃದ್ಧರಿಗೆ ಮತ್ತು ಹೃದ್ರೋಗಿಗಳಿಗೆ ಅಪಾಯಕಾರಿ ಎಂಬುದು ನಮಗೆ ಗೊತ್ತಿದೆ. ಶ್ರವಣ ದೋಷವನ್ನು ಉಂಟುಮಾಡುವುದಲ್ಲದೆ ಕೆಲವೊಮ್ಮೆ ಅವು ಜೀವವನ್ನೇ ತೆಗೆಯಬಹುದು. ಹಾಗಂತ ಹಬ್ಬಗಳ ಸಂದರ್ಭದಲ್ಲಿ ಮಾತ್ರ ಶಬ್ದಮಾಲಿನ್ಯ ಉಂಟಾಗುತ್ತದೆ ಎಂದು ನಾನು ಹೇಳುವುದಿಲ್ಲ. ರಸ್ತೆಗಳಲ್ಲಿ ಕೆಲ ವಾಹನ ಸವಾರರು ಭಯಾನಕ ಶಬ್ದ ಮಾಡುವ ಹಾರ್ನ್‌ಗಳನ್ನು ಬಳಸುತ್ತಾರೆ. ಅವೂ ಕೂಡ ಜನರ ಕಿವಿಗೆ ಹಾನಿ ಉಂಟುಮಾಡುತ್ತವೆ. ಜವಾಬ್ದಾರಿಯುತ ನಾಗರಿಕರಾಗಿ ನಾವೆಲ್ಲರೂ ಶಬ್ದಮಾಲಿನ್ಯದ ವಿರುದ್ಧ ಎದ್ದು ನಿಲ್ಲಬೇಕು. ಇದೊಂದು ಗಂಭೀರ ವಿಷಯ. ಈ ವರ್ಷದ ಹಬ್ಬಗಳನ್ನು ಶಬ್ದಗಳ ಅಬ್ಬರವಿಲ್ಲದೆ ಆಚರಿಸಲು ಎಲ್ಲರೂ ಸಂಕಲ್ಪ ಮಾಡೋಣವೇ?