ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Thimmanna Bhagwat Column: ಕೇಂದ್ರ ರೂಪಿಸಿದ ಮಾದರಿ ಕಾಯ್ದೆ ಕರ್ನಾಟಕಕ್ಕೆ ಏಕೆ ಬೇಡ ?

ಬಾಡಿಗೆ ಮುಂಗಡತಿ, ಡಿಜಿಟಲ್ ನೋಂದಣಿ ವ್ಯವಸ್ಥೆ, ಪೋಲೀಸ್ ಪರಿಶೀಲನೆ, 3 ಹಂತದ ವ್ಯಾಜ್ಯ ಪರಿಹಾರ ವ್ಯವಸ್ಥೆಯಂಥ ಪ್ರಮುಖ ಅಂಶಗಳನ್ನೇ ಕೈಬಿಟ್ಟಿರುವದರಿಂದ ಕೇಂದ್ರ ಸರಕಾರ ದೇಶಾದ್ಯಂತ ತರಲು ಉದ್ದೇಶಿಸಿದ್ದ ಬಾಡಿಗೆ ವ್ಯವಸ್ಥೆಯ ಸುಧಾರಣೆ ಮತ್ತು ಅಧಿಕೃತ ಗೊಳಿಸುವಿಕೆಯ ಪ್ರಕ್ರಿಯೆ ಕರ್ನಾಟಕದಲ್ಲಿಅಳವಡಿಸಲಾಗಿಲ್ಲ.

ಕಾನೂನ್‌ ಸೆನ್ಸ್‌

ತಿಮ್ಮಣ್ಣ ಭಾಗ್ವತ್

ಮೂರ್ಖರು ಮನೆ ಕಟ್ಟುತ್ತಾರೆ-ಜಾಣರು ಅದರಲ್ಲಿ ವಾಸಿಸುತ್ತಾರೆ ಎಂಬ ನಾಣ್ಣುಡಿ ಯೊಂದಿದೆ. ಮನೆ ಕಟ್ಟುವ ವೆಚ್ಚವನ್ನುಗಣನೆಗೆ ತೆಗೆದುಕೊಂಡರೆ ಬಾಡಿಗೆ ಮನೆಯಲ್ಲಿ ಉಳಿಯುವದೇ ಲಾಭ ಎಂದು ಹಣ ಹೂಡಿಕೆ ತಜ್ಞರು ಗಣಿತ ಮಾಡಿ ತೋರಿಸುತ್ತಾರೆ. ಆದರೆ ಎಲ್ಲರೂ ಇದೇ ಲೆಕ್ಕಾಚಾರ ಮಾಡಿದರೆ ಬಾಡಿಗೆಗೆ ಮನೆ ನೀಡುವವರು ಯಾರು ಎಂಬುದು ಯಕ್ಷಪ್ರಶ್ನೆ!

ಮನೆ ಕಟ್ಟಿಸಿ ಅದರಲ್ಲೇ ವಾಸಿಸುವವರಿಗೆ ಸಾಲ ಮಾಡಿದ ಸಂಕಟವಿದ್ದರೂ ತನ್ನ ಸ್ವಂತ ಮನೆಯಲ್ಲೇ ವಾಸಿಸುವ ಸಂತೋಷವಿರುತ್ತದೆ. ಆದರೆ, ನೌಕರಿಯ ವರ್ಗಾವಣೆ ಇಂದಲೋ ಅಥವಾ ಇನ್ಯಾವದೋ ಕಾರಣಕ್ಕೆ ಕಟ್ಟಿಸಿದ ಮನೆಯಲ್ಲಿ ವಾಸಿಸಲಾಗದೆ ಅದನ್ನು ಬಾಡಿಗೆ ಗೆ ನೀಡುವಾಗ ಕಾನೂನಿನ ಗೊಂದಲಗಳೇನು ಎಂಬ ಪ್ರಶ್ನೆ ಮೂಡುತ್ತದೆ.

ಇತರ ವ್ಯಾವಹಾರಿಕ ವಿಷಯಗಳಂತೆ ಮನೆ ಬಾಡಿಗೆ ನೀಡುವುದು ಕೂಡಾ ಇಬ್ಬರು ವ್ಯಕ್ತಿ ಗಳ ನಡುವೆ ನಡೆಯುವ ವ್ಯಾವಹಾರಿಕ ಒಪ್ಪಂದ. ಅಂಥ ಒಪ್ಪಂದಗಳ ಷರತ್ತುಗಳು ಸಹಜ ವಾಗಿ ಮಾರುಕಟ್ಟೆ ಆಧಾರಿತವಾಗಿ ಅಂದರೆ ಬೇಡಿಕೆ ಮತ್ತು ಪೂರೈಕೆಗಳ ಆಧಾರ ದಲ್ಲಿ ನಿರ್ಣಯವಾಗಬೇಕು. ಆದರೆ, ಹಾಗೆ ನಿರ್ಣಯವಾಗಲು ಬಿಟ್ಟರೆ ಬಡ ಹಾಗು ಮಧ್ಯಮ ವರ್ಗದ ಬಾಡಿಗೆದಾರರ ಶೋಷಣೆಯಾಗುತ್ತದೆ ಮತ್ತು ವಲಸೆ ಕಾರ್ಮಿಕರು, ನೌಕರಿಗಾಗಿ ಬೇರೆ ನಗರಗಳಲ್ಲಿ ವಾಸಿಸಬೇಕಾದ ಅನಿವಾರ್ಯತೆ ಇದ್ದವರು, ಹಾಗೂ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ತುಂಬಾ ತೊಂದರೆಯಾಗುತ್ತದೆ.

ಈ ಹಿನ್ನೆಲೆಯಲ್ಲಿ 1961ರ ಕರ್ನಾಟಕ (ಮೈಸೂರು) ಬಾಡಿಗೆ ನಿಯಂತ್ರಣ ಕಾಯ್ದೆ ಹಾಗೂ ನಂತರ ಕರ್ನಾಟಕ ಬಾಡಿಗೆ ಕಾಯ್ದೆ 1999 ಜಾರಿ ಮಾಡಲಾಯಿತು. ಬಾಡಿಗೆದಾರರ ರಕ್ಷಣೆ ಕಾಯ್ದೆಗಳಿಂದ ಅತೀ ನಿಯಂತ್ರಣವಾದರೆ ಮನೆ ಮತ್ತು ಕಟ್ಟಡಗಳ ನಿರ್ಮಾಣ ಮತ್ತು ನಗರೀಕರಣದ ಮೇಲೆ ವ್ಯತಿರಿಕ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: Thimmanna Bhagwath Column: ಕೃತಕ ಬುದ್ಧಿಮತ್ತೆ: ಸಾಕ್ಷ್ಯಾಧಾರ, ಅಪರಾಧ ಮತ್ತು ವ್ಯಾಜ್ಯಗಳ ನಿರ್ವಹಣೆಯ ಸವಾಲುಗಳು

ಜೊತೆಗೆ ದೀರ್ಘಕಾಲದ ಕೋರ್ಟ್ ಪ್ರಕರಣಗಳು, ಮನೆ ಖಾಲಿ ಮಾಡಲು ಬಾಡಿಗೆದಾರರ ಪ್ರತಿರೋಧ, ಬಾಡಿಗೆ ಹೆಚ್ಚಳಕ್ಕೆ ನಿರಾಕರಣೆ ಮುಂತಾದವುಗಳಿಂದ ಬಾಡಿಗೆಗೆ ಮನೆ ನೀಡಲು ಜನ ಹಿಂಜರಿಯುತ್ತಾರೆ ಎಂಬ ಅಭಿಪ್ರಾಯ ಮೂಡಿಬಂತು.

2023ರಲ್ಲಿ ಕೇಂದ್ರ ಸರಕಾರ ಜಾರಿಗೆ ತಂದ ಜನವಿಶ್ವಾಸ್ ಕಾಯ್ದೆಯ ಆಶಯದಂತೆ ಉಲ್ಲಂಘನೆಯ ಚಿಕ್ಕ ಪುಟ್ಟ ಪ್ರಕರಣಗಳನ್ನು ಕ್ರಿಮಿನಲ್ ಪ್ರಕರಣಗಳ ವ್ಯಾಪ್ತಿಯಿಂದ ಹೊರತರುವ ಹಾಗೂ ದಂಡದ ಮೊತ್ತ ತರ್ಕಬದ್ಧಗೊಳಿಸುವ ಬಾಡಿಗೆ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ಅಗತ್ಯವೆನಿಸಿತು.

ಎಲ್ಲಾ ರಾಜ್ಯಗಳಲ್ಲಿ ಬಹುತೇಕ ಏಕರೂಪದ ಸರಳೀಕೃತ ಬಾಡಿಗೆ ಕಾಯ್ದೆ ತರುವ ಮೂಲಕ ಬಾಡಿಗೆದಾರರ ಮತ್ತು ಮಾಲಕರ ಸಂಬಂಧವನ್ನು ಕಾಯ್ದೆಬದ್ಧಗೊಳಿಸಿ ಬಾಡಿಗೆ ವ್ಯಾಜ್ಯ ಗಳನ್ನು ಕಡಿಮೆಗೊಳಿಸುವ ಹಾಗೂ ಆ ಮೂಲಕ ಕಟ್ಟಡ ನಿರ್ಮಾಣ ಹಾಗೂ ನಗರೀಕರಣ ಪ್ರೋತ್ಸಾಹಿಸುವ ಸದುದ್ದೇಶದಿಂದ ಕೇಂದ್ರ ಸರಕಾರ, 2025ರಲ್ಲಿ ಮಾದರಿ ಬಾಡಿಗೆ ಕಾಯ್ದೆ (ಮಾಡಲ್ ಟೆನ್ನೆಂಸಿ ಕಾಯ್ದೆ 2025) ರೂಪಿಸಿ ಎಲ್ಲಾ ರಾಜ್ಯಗಳಿಗೆ ಕಳಿಸಿತು. ಮನೆ ಮಾಲಿಕರ ಹಾಗೂ ಬಾಡಿಗೆದಾರರಿಬ್ಬರ ನಡುವೆ ಸಮತೋಲನ ಸಾಧಿಸುವುದು ಉದ್ದೇಶ.

ಸ್ತಿರಾಸ್ಥಿ ಮತ್ತು ಮನೆ ಬಾಡಿಗೆ ಚಾರ ಸಂಧಾನದ ಪ್ರಕಾರ ರಾಜ್ಯ ಸರಕಾರಗಳಿಗೆ ಸಂಬಂಧಿ ಸಿದ್ದು. ಈ ಮಾದರಿ ಕಾಯ್ದೆಯ ಮುಖ್ಯ ಅಂಶಗಳೆಂದರೆ:

  1. ಎಲ್ಲಾ ಬಾಡಿಗೆ ಒಪ್ಪಂದಗಳನ್ನು ಕಡ್ಡಾಯವಾಗಿ ಪಾಲನೆ: ಆ ಕುರಿತಾಗಿ ರಚಿಸಲಾಗುವ ಡಿಜಿಟಲ್ ನೋಂದಣಿ ವ್ಯವಸ್ಥೆಯಡಿ ಅಧಿಕೃತ ಅಧಿಕಾರಿಗಳಿಗೆ ವರದಿ ಮಾಡಬೇಕು. ಮೌಖಿಕ ಒಪ್ಪಂದಗಳಿಗೆ ಅವಕಾಶಲ್ಲ.

2.ಬಾಡಿಗೆದಾರರಿಂದ ಪಡೆಯ ಬಹುದಾದ ಬಾಡಿಗೆ ಮುಂಗಡವು ವಾಸದ ಮನೆಗಳಿಗೆ 2 ತಿಂಗಳ ಹಾಗೂ ವಾಣಿಜ್ಯ ಬಳಕೆ ಕಟ್ಟಡಗಳಿಗೆ 6 ತಿಂಗಳ ಬಾಡಿಗೆ ಮೊತ್ತ ಮೀರಬಾರದು.

3.ಬಾಡಿಗೆ ಮೊತ್ತದ ಹೆಚ್ಚಳವನ್ನು ಪ್ರತಿ 12 ತಿಂಗಳಿಗೊಮ್ಮೆ ಮಾತ್ರ ಮಾಡಬಹುದು.

4. ಬಾಡಿಗೆದಾರರ ಪೊಲೀಸ್‌ಚಾರಣೆ/ಪರಿಶೀಲನೆ ಕಡ್ಡಾಯ.

5. ಬಾಡಿಗೆದಾರರನ್ನು ಸೂಕ್ತ ಕಾರಣಗಳಿಗೆ ಎರಡು ತಿಂಗಳಿಗಿಂತ ಹೆಚ್ಚಿನ ಬಾಡಿಗೆ ನೀಡಲು ತಪ್ಪಿದರೆ ಅಥವಾ ಕಟ್ಟಡವನ್ನು ನಿಗದಿತ ಉದ್ದೇಶದ ಬದಲು ದುರುಪಯೋಗ ಮಾಡಿ ಕೊಂಡರೆ, ಬಾಡಿಗೆ ಟ್ರಿಬ್ಯುನಲ್ʼಗಳ ಆದೇಶ ಪಡೆದು ಒಕ್ಕಲೆಬ್ಬಿಸಬಹುದು.

ಹೀಗೆ ಅನೇಕ ಸುಧಾರಣಾ ಕ್ರಮಗಳನ್ನು ಕಾಯ್ದೆಯಲ್ಲಿ ಸೂಚಿಸಲಾಗಿದೆ. ಕರ್ನಾಟಕದಲ್ಲಿ ಎರಡೂ ಸದನಗಳ ಒಪ್ಪಿಗೆ ಪಡೆದ ಕರ್ನಾಟಕ ಬಾಡಿಗೆ(ತಿದ್ದುಪಡಿ) ವಿಧೇಯಕ 2025 ರಾಜ್ಯಪಾಲರ ಅಂಕಿತಕ್ಕಾಗಿ ಕಳುಸಲಾಗಿದೆ. ಬಾಡಿಗೆ ಕಾಯ್ದೆಯ ಕಲಮುಗಳ ಉಲ್ಲಂಘನೆ ಯನ್ನು ಕ್ರಿಮಿನಲ್ ಪ್ರಕರಣದ ವ್ಯಾಪ್ತಿಯಿಂದ ಹೊರಗಿಡುವದು, ಬಾಡಿಗೆ ನಿಯಂತ್ರಕರಿಗೆ ಹೆಚ್ಚಿನ ಅಧಿಕಾರ ನೀಡುವಂಥ ಕೆಲವು ಕ್ರಮಗಳನ್ನು ಸೂಚಿಸಲಾಗಿದೆಯಾದರೂ, ಕಾಯ್ದೆಯ ಬಹುತೇಕ ಅಂಶಗಳನ್ನು ಕೈಬಿಡಲಾಗಿದೆ ಅಥವಾ ಬದಲಿಸಲಾಗಿದೆ.

house

ಬಾಡಿಗೆ ಮುಂಗಡತಿ, ಡಿಜಿಟಲ್ ನೋಂದಣಿ ವ್ಯವಸ್ಥೆ, ಪೋಲೀಸ್ ಪರಿಶೀಲನೆ, 3 ಹಂತದ ವ್ಯಾಜ್ಯ ಪರಿಹಾರ ವ್ಯವಸ್ಥೆಯಂಥ ಪ್ರಮುಖ ಅಂಶಗಳನ್ನೇ ಕೈಬಿಟ್ಟಿರುವದರಿಂದ ಕೇಂದ್ರ ಸರಕಾರ ದೇಶಾದ್ಯಂತ ತರಲು ಉದ್ದೇಶಿಸಿದ್ದ ಬಾಡಿಗೆ ವ್ಯವಸ್ಥೆಯ ಸುಧಾರಣೆ ಮತ್ತು ಅಧಿಕೃತಗೊಳಿಸುವಿಕೆಯ ಪ್ರಕ್ರಿಯೆ ಕರ್ನಾಟಕದಲ್ಲಿಅಳವಡಿಸಲಾಗಿಲ್ಲ.

ಇನ್ನೊಂದು ಪ್ರಮುಖ ಅಂಶವೆಂದರೆ 1999ರ ಕರ್ನಾಟಕ ಬಾಡಿಗೆ ಕಾಯ್ದೆಯ 2ನೇ ಕಲಮು ನ 3ನೇ ಉಪಕಲಮುನ ಪ್ರಕಾರ ಈ ಕಾಯ್ದೆ ಯಾವ ಕಲಮುಗಳೂ ರೂ.3500/- (ದೊಡ್ಡ ನಗರಗಳಲ್ಲಿ) ಮತ್ತು ರೂ.2000/- (ಇತರ ಪ್ರದೇಶಗಳಲ್ಲಿ) ಕ್ಕಿಂತ ಹೆಚ್ಚು ಮಾದರಿ ಬಾಡಿಗೆ ಇರುವ ಕಟ್ಟಡಗಳಿಗೆ ಹಾಗೂ ನಿರ್ಮಾಣವಾಗಿ 15 ವರ್ಷ ಆಗಿರದ ಕಟ್ಟಡಗಳಿಗೆ ಅನ್ವಯವಾಗುವುದಿಲ್ಲ.

ಕರ್ನಾಟಕ ಸರಕಾರ ಮಂಡಿಸಿದ 2025ರ ತಿದ್ದುಪಡಿ ಮಸೂದೆಯಲ್ಲಿ ಈ ಮಿತಿಯನ್ನು ಹೆಚ್ಚಿಸಲಾಗಿಲ್ಲ. 2000 ರೂ.ಗಳ ತಿಂಗಳ ಬಾಡಿಗೆಗೆ ಯಾವ ಮೂಲೆಯ ಹಳ್ಳಿಯಲ್ಲೂ ಮನೆ ಸಿಗುವದಿಲ್ಲ. ಆದ್ದರಿಂದ ಕರ್ನಾಟಕ ಬಾಡಿಗೆ ಕಾಯ್ದೆ 1999 ಅಥವಾ 2025ರ ತಿದ್ದುಪಡಿ ಮಸೂದೆಗಳು ವಾಸ್ತವದಲ್ಲಿ ನಿಷ್ಪ್ರಯೋಜಕ ಕಾಗದದ ತುಂಡುಗಳಷ್ಟೆ.

ಕರ್ನಾಟಕ ಬಾಡಿಗೆ ಕಾಯ್ದೆ ಅನ್ವಯವಾಗದ ಬಾಡಿಗೆ ಅಥವಾ ಲೀಸ್ ಕರಾರುಗಳಿಗೆ ಸ್ಥಿರಾಸ್ಥಿ ವರ್ಗಾವಣೆ ಕಾಯ್ದೆ 1881(ಟ್ರಾನ್ಸಫರ್ ಆಫಗ ಪ್ರಾಪರ್ಟಿ), ನೋಂದಣಿ ಕಾಯ್ದೆ 1908 ಮತ್ತು ಸ್ಟಾಂಪ್ ಕಾಯ್ದೆ 1957ರ ಕಲಮುಗಳು ಅನ್ವಯವಾಗುತ್ತವೆ.

ಸ್ಥಿರಾಸ್ಥಿ ವರ್ಗಾವಣೆ ಕಾಯ್ದೆಯ 105 ರಿಂದ 108ನೇ ಕಲಮುಗಳು ಬಾಡಿಗೆ ಕರಾರಿಗೆ ಸಂಬಂಧಿಸಿದ್ದಾಗಿದೆ. ಬಾಡಿಗೆದಾರರ ಹಕ್ಕುಗಳು, ಅವರನ್ನು ಒಕ್ಕಲೆಬ್ಬಿಸಲು ಇರುವ ನಿಯಮಗಳು, ಮನೆಯ ನಿರ್ವಹಣೆ ಮತು ರಿಪೇರಿ, ಬಾಡಿಗೆ ಕರಾರಿನ ಷರತ್ತುಗಳು, ಬಾಡಿಗೆ ಪಡೆಯುವ ಉದ್ದೇಶ, ವಾರಸುದಾರರ ಹಕ್ಕುಗಳು ಮುಂತಾದ ವಿಷಯಗಳ ಕುರಿತು ನಿಯಮಗಳು ಸ್ತಿರಾಸ್ಥಿ ವರ್ಗಾವಣೆ ಕಾಯ್ದೆ ಯಲ್ಲಿ ಇವೆ.

ಬಾಡಿಗೆದಾರರು ಬಾಡಿಗೆ ಪಡೆದ ಆಸ್ತಿಯನ್ನು ಯಾವ ಉದ್ದೇಶಕ್ಕೆಂದು ಅದನ್ನು ನೀಡಲಾಗಿ ದೆಯೋ ಅದಕ್ಕೆ ಮಾತ್ರ ಬಳಸಬೇಕು. ಉದಾಹರಣೆಗೆ ವಾಸ್ತವ್ಯಕ್ಕೆಂದು ಪಡೆದ ಮನೆಯನ್ನು ಅಂಗಡಿ ಅಥವಾ ಪಿ.ಜಿ. ನಡೆಸಲು ಬಳಸುವ ಹಾಗಿಲ್ಲ. ಮಾಲಿಕರ ಅನುಮತಿ ಇಲ್ಲದೆ ಮನೆಗೆ ಯಾವದೇ ಬದಲಾವಣೆ ಮಾಡುವ ಹಾಗಿಲ್ಲ.

ಬಾಡಿಗೆಯ ಕರಾರಿನ ಅವಧಿಯ ಮೊದಲೇ ಬಾಡಿಗೆದಾರ ಮೃತನಾದರೆ ಆತನ ವಾರಿಸು ದಾರರು ಬಾಡಿಗೆ ಕಟ್ಟಡದಲ್ಲಿ ಮುಂದುವರೆಯುವ ಹಕ್ಕನ್ನು ಪಡೆಯುತ್ತಾರೆ. ಬಾಡಿಗೆದಾರ ರನ್ನು ಬೇಕಾಬಿಟ್ಟಿ ಹೊರ ಹಾಕುವಂತ್ತಿಲ್ಲ. ಅದಕ್ಕೆ ಸೂಕ್ತ ಕ್ರಮದ (ಡ್ಯೂ ಪ್ರೋಸೆಸ್ ಆಫ್ ಲಾ) ಮೂಲಕ ಮಾತ್ರ ಖಾಲಿ ಮಾಡಿಸಬಹುದು ಎಂದು ಅನೇಕ ಪ್ರಕರಣಗಳಲ್ಲಿ ಕೋರ್ಟು ಗಳು ತೀರ್ಪಿತ್ತಿವೆ. ‌ಕೋರ್ಟ್‌ ಅದೇಶಲ್ಲದೆ ನೀರು, ಕರೆಂಟ್, ದಾರಿಯಂಥ ಮೂಲಭೂತ ಅವಶ್ಯಗಳನ್ನು ಬಂದ್ ಮಾಡುವಂತ್ತಿಲ್ಲ.

ತಿಂಗಳ ಅಥವಾ ವರ್ಷದ ಬಾಡಿಗೆ ಬದಲು ಏಕ ಗಂಟಿಗೆ ಮೊತ್ತವನ್ನು(ಪ್ರೀಮಿಯಂ) ಪಡೆದು ನಿರ್ದಿಷ್ಟ ಅವಧಿಗೆ ಲೀಸ್ ಕೊಡುವ ಒಪ್ಪಂದಗಳೂ ಕಾಯ್ದೆ ಬದ್ಧ. ಅಂಥ ಲೀಸ್ʼಗಳನ್ನು ಸಲಾಮಿ ಒಪ್ಪಂದ ಎನ್ನಲಾಗುತ್ತದೆ.

ಬಾಡಿಗೆ ವಿಷಯದ ವ್ಯಾಜ್ಯಗಳು ದೊಡ್ಡ ನಗರಗಳಲ್ಲಿ ಹೆಚ್ಚಾಗುತ್ತಿವೆ. ಮನೆ ಮಾಲಿಕರು ಬಾಡಿಗೆದಾರರಿಂದ ಶೋಷಣೆಗೆ ಒಳಗಾಗುವ ಅನೇಕ ಪ್ರಕರಣಗಳಿವೆ. ಮನೆ ಬಾಡಿಗೆ ಪಾವತಿವಸಲು ಕೇಳಿದ ಮನೆಮಾಲಕರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಿದ ಪ್ರಕರಣವೊಂದು ವರದಿಯಾಗಿದೆ. (ಜಗದೀಶ ಭತೀಜಾ ವರ್ಸಸ್ ರೇಖಾ ಎಸ್. - ಕರ್ನಾಟಕ ಹೈಕೋರ್ಟ್).

ಬಾಡಿಗೆ ಅವಧಿ ಮುಗಿದರೂ ಮನೆ ಖಾಲಿ ಮಾಡದೆ ಸತಾಯಿಸುವ ಅನೇಕ ಪ್ರಕರಣಗಳಿವೆ. ಕ್ರಿಮಿನಲ್ ಹಿನ್ನೆಲೆಯುಳ್ಳವರು, ಭಯೋತ್ಪಾದಕರು, ಮೋಸ/ವಂಚನೆ ಮಾಡಿ ಪರಾರಿ ಯಾಗುವವರು ಮುಂತಾದವರಿಗೆ ಬಾಡಿಗೆ ನೀಡಿದರೆ ಮಾಲಿಕರು ತೊಂದರೆಗೆ ಸಿಲುಕಿ ಕೊಳ್ಳುವ ಸಾಧ್ಯತೆ ಇರುತ್ತದೆ.

ಈ ಕಾರಣದಿಂದ ಮನೆ ಬಾಡಿಗೆ ನೀಡುವಾಗ ಬಾಡಿಗೆದಾರರ ಪೂರ್ವಾಪರವನ್ನು ಸೂಕ್ತ ವಾಗಿ ಚಾರಿಸಬೇಕು. ಕೆ.ವೈ.ಸಿ. ಪರಿಶೀಲನೆ ಅತ್ಯಗತ್ಯ.ತೀರಾ ಅಪರಿಚಿತರಾದರೆ ಪೋಲೀಸ್ ಪರಿಶೀಲನೆ ಕೂಡಾ ಮಾಡಬೇಕು. ಒಳ್ಳೆಯ ನ್ಯಾಯವಾದಿಗಳ ಮಾರ್ಗದರ್ಶನ ಪಡೆದು ಬಾಡಿಗೆ ಕರಾರು ಮಾಡಿಕೊಳ್ಳಬೇಕು.

ಕಾಲಕಾಲಕ್ಕೆ ಮನೆಯ ಪರಿಶೀಲನೆ ಮಾಡಿ ಮನೆಯನ್ನು ಸರಿಯಾಗಿ ಇಟ್ಟುಕೊಂಡಿರುವು ದನ್ನು ಖಾತರಿ ಪಡಿಸಿಕೊಳ್ಳಬೇಕು. ಬಾಡಿಗೆ ಕರಾರು ಇಲ್ಲದೆ ಅಥವಾ ಬಾಡಿಗೆ ಪಾವತಿ ಯಾಗದೆ ದೀರ್ಘಾವಧಿಗೆ (12 ವರ್ಷಕ್ಕಿಂತ ಜಾಸ್ತಿ) ಮನೆ ಬಾಡಿಗೆದಾರರ ವಶದಲ್ಲಿದ್ದರೆ ‘ಪ್ರತಿಕೂಲ ಸ್ವಾಧೀನ’ (ಅಡವರ್ಸ್ ಪೊಸೆಷನ್) ನಿಯಮದಡಿ ಬಾಡಿಗೆದಾರರು ಮನೆಯ ಮಾಲಕತ್ವ ಸಾಧಿಸುವ ಸಾಧ್ಯತೆ ಇರುತ್ತದೆ.

2024ರ ‘ಜ್ಯೋತಿ ಶರ್ಮ ವರ್ಸಸ್ ವಿಷ್ಣು ಗೋಯಲ್’ ಪ್ರಕರಣದಲ್ಲಿ ‘ಪ್ರತಿಕೂಲ ಸ್ವಾಽನ’ ನಿಯಮ ಮನೆ ಬಾಡಿಗೆಗೆ ಪಡೆದ ಭಾಡಿಗೆದಾರರಿಗೆ ಅನ್ವಯವಾಗುವದಿಲ್ಲ. ಅವರು ಎಷ್ಟು ಕಾಲ ಬಾಡಿಗೆಗೆ ಇದ್ದರು ಎಂಬುದು ಗಣನೆಗೆ ಬರುವದಿಲ್ಲ ಎಂದು ಸುಪ್ರೀಂಕೋರ್ಟು ಮಹತ್ವದ ತೀರ್ಪು ನೀಡಿದೆ. ಆದರೆ ಈ ಪ್ರಕರಣದಲ್ಲಿ ಕೂಡಾ ಬಾಡಿಗೆಗೆ ಇದ್ದುದಕ್ಕೆ ಪುರಾವೆ ಇದ್ದದ್ದು ಸಹಕಾರಿಯಾಯಿತು. ಆದ್ದರಿಂದ ನೋಂದಾಯಿತ ಬಾಡಿಗೆ ಕರಾರು ಮಾಡಿ ಕೊಂಡೇ ಮನೆ ಬಾಡಿಗೆ ನೀಡುವುದು ಒಳ್ಳೆಯದು.

11 ತಿಂಗಳ ಕರಾರಿಗೆ ನೋಂದಣಿ ಕಡ್ಡಾಯವಲ್ಲದಿದ್ದರೂ ಪ್ರತಿ ಸಲ ಹೊಸ ಕರಾರು ಮಾಡಿ ಕೊಳ್ಳದಿದ್ದರೆ ಅಪಾಯ. ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳು, ಸಣ್ಣ ಮತ್ತು ಗುಡಿ ಕೈಗಾರಿಕೆಗಳಿಗೆ ಲೀಸ್ ಆಧಾರದಲ್ಲಿ ಕಟ್ಟಡ ನೀಡಲು ಸರಕಾರ ಕೈಗೊಂಡಿರುವ ಕ್ರಮಗಳು ಇನ್ನಷ್ಟು ಬಲಗೊಳ್ಳಬೇಕು.

ಹಳ್ಳಿಗಳಲ್ಲಿ ಮೂಲ ಸೌಕರ್ಯದ ಅಭಿವೃದ್ದಿ ಕುರಿತು ಗಮನ ಹರಿಸಬೇಕಾದ ತುರ್ತಿದೆ. ಹಳ್ಳಿಗಳಲ್ಲಿ ಬ್ಯಾಂಕ್, ಪೋಸ್ಟ್‌ ಆಫೀಸ್‌ನಂಥ ಕಚೇರಿಗಳಿಗೆ ಕೂಡಾ ಸೂಕ್ತ ಬಾಡಿಗೆ ಕಟ್ಟಡ ಸಿಗುವದಿಲ್ಲ. ಇನ್ನು ಸಣ್ಣಉದ್ದೆಮೆದಾರರಿಗೆ ಕಟ್ಟಡ ಸಿಗುವದು ದೂರದ ಮಾತು. ಸ್ವಂತ ಉದ್ಯೋಗ ಮಾಡುವವರು ಅನಿವಾರ್ಯವಾಗಿ ಪೇಟೆಗೆ ವಲಸೆ ಹೋಗಬೇಕಾದ ಪರಿಸ್ಥಿತಿ ಇದೆ.

ಹೀಗಾಗಿ ಹಳ್ಳಿಗಳಲ್ಲಿ ಕಟ್ಟಡಗಳನ್ನು ನಿರ್ಮಿಸಿ ಬಾಡಿಗೆ ನೀಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕೇವಲ ನಗರಗಳು ಬೆಳೆಯುತ್ತವೆ ವಿನ: ಹಳ್ಳಿಗಳ ಅಭಿವೃದ್ಧಿಯ ಕನಸು ಕೇವಲ ಕಾಗದದಲ್ಲೇ ಉಳಿಯುತ್ತದೆ.