ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Keshava Prasad B Column: ಭಾರತದ ಜಿಡಿಪಿ 4ರಿಂದ ಕ್ಕೆ ಕುಸಿದಿದ್ದೇಕೆ, ಆತಂಕಪಡಬೇಕೆ ?

ಐಎಂಎಫ್ ವರದಿಯನ್ನು ಕೆಲವರು ತಿರುಚಿ ಮನ‌ ಬಂದಂತೆ ವ್ಯಾಖ್ಯಾನಿಸುತ್ತಾರೆ. 2026ರಲ್ಲಿ ಬಾಂಗ್ಲಾ ದೇಶದ ತಲಾ ಆದಾಯವು ಭಾರತದ ತಲಾ ಆದಾಯಕ್ಕಿಂತ ಹೆಚ್ಚಾಗುತ್ತಿದೆ ಎಂಬುದು ಅಂಥ ಕುತ್ಸಿತ ವಾದಗಳಂದು. ಹಾಗಾದರೆ ವಾಸ್ತವವೇನು? 206ರಲ್ಲಿ ಭಾರತದ ತಲಾ ಆದಾಯ ಸುಮಾರು 2812 ಡಾಲರ್(2.64 ಲಕ್ಷ ರುಪಾಯಿ) ಹಾಗೂ ಬಾಂಗ್ಲಾದೇಶದ್ದು 2911 ಎಂದು ಅಂದಾಜಿಸಲಾಗಿದೆ.

ಮನಿ ಮೈಂಡೆಡ್

ಭಾರತದ ಜಿಡಿಪಿ ಬೆಳವಣಿಗೆ 4ನೇ ಸ್ಥಾನದಲ್ಲಿತ್ತು. ಆದರೆ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್, 2026ರ ಏಪ್ರಿಲ್‌ʼನಲ್ಲಿ ಪ್ರಕಟಿಸಿದ ವರದಿಯ ಪ್ರಕಾರ 6ನೇ ಸ್ಥಾನಕ್ಕೆ ಇಳಿಕೆಯಾಗಿದೆ. ವಿಶ್ವದ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದ ಭಾರತದ ಆರ್ಥಿಕತೆಗೆ ಈ ಹಿನ್ನಡೆ ಉಂಟಾಗಿದ್ದೇಕೆ? ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ.

ಎರಡು ವಿಚಾರಗಳನ್ನು ಇಲ್ಲಿ ಗಮನಿಸಬೇಕು. ಮೊದಲನೆಯದ್ದು ಜಿಡಿಪಿ ಲೆಕ್ಕಾಚಾರದಲ್ಲಿ ಮೂಲ ವರ್ಷವನ್ನು(ಬೇಸ್ ಇಯರ್) ಬದಲಿಸಲಾಗಿದೆ. ಇದರ ಪರಿಣಾಮ ಜಿಡಿಪಿಯಲ್ಲಿ ಸ್ವಲ್ಪ ಇಳಿದಿದೆ. ಎರಡನೆಯದಾಗಿ ಕಳೆದ ಒಂದು ವರ್ಷದಲ್ಲಿ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ ಶೇ.10ರಷ್ಟು ಇಳಿಕೆಯಾಗಿದೆ.

ಈ ಎರಡು ಕಾರಣಗಳಿಂದಾಗಿ ದೇಶದ ಒಟ್ಟು ಜಿಡಿಪಿ ಮೌಲ್ಯವು 4 ಲಕ್ಷ ಕೋಟಿ ಡಾಲರ್ ಮಟ್ಟದಿಂದ ಕೆಳಕ್ಕೆ ಇಳಿದಿದೆ. ಹಾಗಾದರೆ ಆರ್ಥಿಕತೆ ಕುಸಿಯುತ್ತಿದೆ ಎಂದು ತೀರ ಚಿಂತೆಪಡಬೇಕೆ? ಖಂಡಿತ ಅಗತ್ಯವಿಲ್ಲ. ಏಕೆಂದರೆ ಭಾರತದ ಎಕಾನಮಿ 2014ರಲ್ಲಿ 10ನೇ ಸ್ಥಾನದಲ್ಲಿತ್ತು. ಈಗ 6ನೇ ಸ್ಥಾನದಲ್ಲಿದೆ. 4 ಮೆಟ್ಟಿಲು ಮುಂದೆಯೇ ಇದ್ದೇವೆ.

ಕಳೆದ 12 ವರ್ಷಗಳಲ್ಲಿ ಈ ಸಾಧನೆಯಾಗಿದೆ. ಇದಕ್ಕಿಂತ ಮುಖ್ಯವಾಗಿ 5 ಮತ್ತು 4ರ ನಡುವಣ ಅಂತರ ಅತ್ಯಲ್ಪ. ಭಾರತ ಸುಲಭವಾಗಿ ಮತ್ತೆ 4ಕ್ಕೆ ಏರಬಹುದು. ಸ್ವತಃ ಐಎಂಎಫ್ ಪ್ರಕಾರ 2031ಕ್ಕೆ ನಮ್ಮ ದೇಶವು ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ. ಈ ಹಿಂದಿನ ಲೆಕ್ಕಾಚಾರದ ಪ್ರಕಾರ 2027ಕ್ಕೇ ಆಗಬೇಕಿತ್ತು. ಅದು ಈಗ 2031ಕ್ಕೆ ಮುಂದೂಡಿಕೆಯಾಗಿದೆಯಷ್ಟೇ ಹೊರತು, ಎಕಾನಮಿಯೇ ಹಿಂದಕ್ಕೆ ಜಾರಿ ಹೋಗುತ್ತಿಲ್ಲ.

ಇದನ್ನೂ ಓದಿ:Keshava Prasad B Column: ಸಮಯ ನಿಲ್ಲದೆ ಓಡುತ್ತಿದೆ, ಆದರೆ ಹಣ ಬೆಳೆಯುತ್ತಿದೆಯೇ ?

ಐಎಂಎಫ್ ವರದಿಯನ್ನು ಕೆಲವರು ತಿರುಚಿ ಮನ‌ ಬಂದಂತೆ ವ್ಯಾಖ್ಯಾನಿಸುತ್ತಾರೆ. 2026ರಲ್ಲಿ ಬಾಂಗ್ಲಾದೇಶದ ತಲಾ ಆದಾಯವು ಭಾರತದ ತಲಾ ಆದಾಯಕ್ಕಿಂತ ಹೆಚ್ಚಾಗುತ್ತಿದೆ ಎಂಬುದು ಅಂಥ ಕುತ್ಸಿತ ವಾದಗಳಂದು. ಹಾಗಾದರೆ ವಾಸ್ತವವೇನು? 206ರಲ್ಲಿ ಭಾರತದ ತಲಾ ಆದಾಯ ಸುಮಾರು 2812 ಡಾಲರ್(2.64 ಲಕ್ಷ ರುಪಾಯಿ) ಹಾಗೂ ಬಾಂಗ್ಲಾದೇಶದ್ದು 2911 ಎಂದು ಅಂದಾಜಿಸಲಾಗಿದೆ.

ಸ್ವಲ್ಪಮಟ್ಟಿಗೆ ಆ ದೇಶದ್ದು ಹೆಚ್ಚಳವಾಗಲಿರುವುದು ನಿಜ. ಆದರೆ ಇದು ಶಾಶ್ವತವಲ್ಲ. ಭಾರತ-ಬಾಂಗ್ಲಾ ನಡುವಣ ಹೋಲಿಕೆಯೇ ಸರಿಯಲ್ಲ. 2027ರ ಬಳಿಕ ಭಾರತವು ಮತ್ತೆ ಮುನ್ನಡೆ ಸಾಧಿಸಿ 2031ರ ವೇಳೆಗೆ ಬಾಂಗ್ಲಾದೇಶಕ್ಕಿಂತ ಹೆಚ್ಚಿನ ತಲಾ ಆದಾಯ ಹೊಂದಲಿದೆ.

ಬಾಂಗ್ಲಾದೇಶವು ತನ್ನ ಸಂಪನ್ಮೂಲಗಳನ್ನು ಬಳಸಿಕೊಂಡು ತಲಾ ಆದಾಯದಲ್ಲಿ ಸುಧಾರಿಸಿ ದ್ದರೂ, ದೊಡ್ಡ ಆರ್ಥಿಕತೆಯಾದ ಭಾರತಕ್ಕೆ ಇರುವ ಸವಾಲುಗಳು ಮತ್ತು ಸಾಮರ್ಥ್ಯಗಳು ವಿಭಿನ್ನವಾಗಿವೆ. ಆದ್ದರಿಂದ ಈ ಹೋಲಿಕೆಯನ್ನು ಕೇವಲ ಒಂದು ಅಂಕಿ-ಅಂಶದ ಮೈಲಿಗಲ್ಲಾಗಿ ನೋಡಬೇಕೇ ಹೊರತು ಸಂಪೂರ್ಣ ಆರ್ಥಿಕ ಶಕ್ತಿಯ ಮಾಪಕವಾಗಿ ಅಲ್ಲ.

ಭಾರತದ ಜಿಡಿಪಿಯ ಒಟ್ಟು ಮೌಲ್ಯವು ಬಾಂಗ್ಲಾದೇಶದ್ದಕ್ಕಿಂತ ಸುಮಾರು 8 ಪಟ್ಟು ದೊಡ್ಡದು. ಕರೆನ್ಸಿಯ ಖರೀದಿ ಸಾಮರ್ಥ್ಯ (ಪಿಪಿಪಿಫ್ ಪರ್ಚೇಸಿಂಗ್ ಪವರ್ ಪ್ಯಾರಿಟಿ) ಕೂಡ ಬಾಂಗ್ಲಾದೇಶ‌ ಕ್ಕಿಂತ ಸಾಕಷ್ಟು ಮುಂದುವರಿದಿದ್ದು, ಜಗತ್ತಿನ ಮೂರನೇ ಸ್ಥಾನದಲ್ಲಿದೆ. ಭಾರತವು ಬಾಹ್ಯಾಕಾಶ, ಮಾಹಿತಿ ತಂತ್ರಜ್ಞಾನ, ಫಾರ್ಮಾ ಮತ್ತು ರಕ್ಷಣಾ ವಲಯಗಳಲ್ಲಿ ಬೃಹತ್ ಹೂಡಿಕೆ ಹೊಂದಿದೆ. ಬಾಂಗ್ಲಾದೇಶದ ಆರ್ಥಿಕತೆ ಹೆಚ್ಚಾಗಿ ಗಾರ್ಮೆಂಟ್ ಉದ್ಯಮದ ಮೇಲೆ ಅವಲಂಬಿತವಾಗಿದೆ.

Screenshot_9

ತೈವಾನ್‌ನಂತಹ ಸಣ್ಣ ದೇಶ ಕಳೆದ ವರ್ಷ ಶೇ.8.63ರಷ್ಟು ಜಿಡಿಪಿ ಬೆಳವಣಿಗೆ ದಾಖಲಿಸಿದೆ. ತೈವಾನ್‌ ನಿಂದ ನಾವು ಕಲಿಯಬಹುದಾದ್ದೇನು ಎಂದು ಕೆಲವರು ಹೇಳುತ್ತಾರೆ. ತೈವಾನ್ ನ ಆರ್ಥಿಕತೆ ಕೇವಲ ಒಂದು ಕಂಪನಿಯನ್ನು ಅಧರಿಸಿದೆ. ಟಿಎಸ್‌ಎಂಸಿ. ಇದು ವಿಶ್ವದ ಅತಿ ದೊಡ್ಡ ಸೆಮಿಕಂಡ ಕ್ಟರ್ ಚಿಪ್ ತಯಾರಿಕೆಯ ಕಂಪನಿಯಾಗಿದೆ.

ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಕೇವಲ ಒಂದೇ ಕಂಪನಿಯನ್ನು ಆಧರಿಸಿರಲು ಸಾಧ್ಯವೇ ಇಲ್ಲ. ಇಲ್ಲಿ ನಾನಾ ವಲಯಗಳಲ್ಲಿ ಬೆಳವಣಿಗೆ ಆಗಬೇಕು. ತೈವಾನ್ ತಂತ್ರಜ್ಞಾನ ಸಂಶೋಧನೆ ಆಧರಿತ ಇಂಡಸ್ಟ್ರಿಯನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ.

ಅದಕ್ಕಾಗಿ ಸಬ್ಸಿಡಿ ನೆರವನ್ನು ಧಾರಾಳವಾಗಿ ನೀಡಿತ್ತು. ಹಾಗಾದರೆ ಪಶ್ಚಿಮ ಏಷ್ಯಾದಲ್ಲಿ ಉಂಟಾ ಗಿರುವ ಯುದ್ಧದಿಂದ ಭಾರತ ಕಲಿಯಬೇಕಿರುವ ಪಾಠವೇನು? ಇತಿಹಾಸವನ್ನೊಮ್ಮೆ ನೋಡೋಣ. 90ರ ದಶಕದಲ್ಲಿ ಗಲ ಯುದ್ಧ ಮತ್ತು ಕಚ್ಚಾ ತೈಲ ಬಿಕ್ಕಟ್ಟು ಸಂಭವಿಸಿದಾಗ ಭಾರತವು ತನ್ನ ಚಿನ್ನವನ್ನು ಅಡವಿಟ್ಟು ಸಾಲ ತರಬೇಕಾದ ದುಸ್ಥಿತಿ ಬಂದಿತ್ತು. ಈಗ ನಮ್ಮಲ್ಲಿ 700 ಶತಕೋಟಿ ಡಾಲರ್ ವಿದೇಶಿ ವಿನಿಮಯ ಸಂಗ್ರಹವಿದೆ.

ಕಚ್ಚಾ ತೈಲ ದರದ ಏರಿಕೆಯನ್ನು ಸಹಿಸುವ ಶಕ್ತಿ ಗಣನೀಯವಾಗಿ ವೃದ್ಧಿಸಿದೆ. ಹೀಗಿದ್ದರೂ, ಇಂಧನ ಕ್ಕಾಗಿ ಕಚ್ಚಾ ತೈಲದ ಅವಲಂಬನೆಯೂ ಇದೆ. ಭಾರತದ ಸಮಗ್ರ ವಿದ್ಯುದೀಕರಣ ಇಲ್ಲಿ ಮುಖ್ಯ. ರೈಲ್ವೆ ಇಲಾಖೆ ಡೀಸೆಲ್‌ನಿಂದ ವಿದ್ಯುತ್‌ಗೆ ಸಂಪೂರ್ಣ ಪರಿವರ್ತನೆಯಾಗಿದೆ. ಇವತ್ತು ಅಮೆರಿಕ ಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿ ಡೀಸೆಲ್ ಚಾಲಿತ ರೈಲುಗಳನ್ನು ಭಾರತ ಓಡಿಸುತ್ತಿದೆ.

ಡೀಸೆಲ್ ಆಮದನ್ನು ಪೂರ್ಣವಾಗಿ ಸ್ಥಗಿತಗೊಳಿಸಿದರೂ ರೈಲ್ವೆಗೆ ಯಾವ ಸಮಸ್ಯೆಯೂ ಆಗದು. ಏಕೆಂದರೆ ರೈಲ್ವೆ ಸಂಪೂರ್ಣ ವಿದ್ಯುದೀಕರಣವಾಗಿದೆ. ಇದನ್ನೇ ಉಳಿದೆಲ್ಲ ವಲಯಗಳಲ್ಲಿ ಪುನರಾ ವರ್ತಿಸಲು ಸಾಧ್ಯವೇ? ಎಂದು ಆಲೋಚಿಸಿ ಕಾರ್ಯಪ್ರವೃತ್ತರಾಗಬೇಕಾಗಿದೆ.

ಪೆಟ್ರೋಲ್-ಡೀಸೆಲ್ ಕಾರನ್ನು ಎಲೆಕ್ಟ್ರಿಕ್ ಅಥವಾ ಹೈಬ್ರಿಡ್ ಮಾದರಿಗೆ ಪರಿವರ್ತಿಸುವುದು, ರೇರ್ ಅರ್ಥ್ ಮೆಟೀರಿಯಲ್‌ಗೆ ಚೀನಾದ ಅವಲಂಬನೆಯನ್ನು ದೂರವಿಡುವುದು, ಬ್ಯಾಟರಿಗಳಿಗೆ ನಮ್ಮದೇ ಸಪ್ಲೈಚೈನ್ ಮಾಡಿಕೊಳ್ಳುವುದು, ಎಲ್‌ಪಿಜಿ ಸಿಲಿಂಡರ್ ಬದಲಿಗೆ ಪೈಪ್ ಲೈನ್‌ಗಳಲ್ಲಿ ಸಾಗಿಸಬಹುದಾದ ನೈಸರ್ಗಿಕ ಅನಿಲಕ್ಕೆ ಬದಲಾಗುವುದು, ಇಂಡಕ್ಷನ್ ಸ್ಟೌವ್‌ಗಳ ವ್ಯಾಪಕ ಬಳಕೆ ಸಹಕಾರಿಯಾಗಬಲ್ಲುದು. ಪರಮಾಣು ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಭಾರತ ಮುಂದಾ ಗಿರುವುದು ಸ್ವಾಗತಾರ್ಹ. ಫಾಸ್ಟ್ ಬ್ರೀಡರ್ ರಿಯಾಕ್ಟರ್ ಮೂಲಕ ಕಮರ್ಷಿಯಲ್ ಆಗಿ ನಿರಂತರ ವಿದ್ಯುತ್ ಉತ್ಪಾದನೆಗೆ ಹಾದಿ ಸುಗಮವಾಗಿದೆ. ‌

ದೇಶದಲ್ಲಿ ಥೋರಿಯಂ ಸಮೃದ್ಧವಾಗಿದೆ. ಥೋರಿಯಂ ಆಧಾರಿತ ವಿದ್ಯುತ್ ಉತ್ಪಾದನೆ ಹೆಚ್ಚಬೇಕು. ಕಲ್ಲಿದ್ದಲು ನಿಕ್ಷೇಪಗಳಿಗೂ ನಮ್ಮಲ್ಲಿ ಕೊರತೆ ಇಲ್ಲ. ಅಂತಿಮವಾಗಿ ಸೋಲಾರ್. ದೇಶದಲ್ಲಿ ಇವತ್ತು 30 ಲಕ್ಷ ಮನೆಗಳ ಛಾವಣಿಗಳಲ್ಲಿ ಸೋಲಾರ್ ಫಲಕಗಳಿದ್ದು, ತಮಗೆ ಬೇಕದ ವಿದ್ಯುತ್‌ಅನ್ನು ಮನೆಯ ಮಾಡಿನಿಂದಲೇ ಗಳಿಸುತ್ತಿವೆ.

ಅನೇಕ ಮಂದಿ ವಿದ್ಯುತ್‌ಅನ್ನು ಉತ್ಪಾದಿಸಿ ಮಾರುತ್ತಿದ್ದಾರೆ. 30 ಲಕ್ಷ ಮನೆಗಳ ಛಾವಣಿಯಲ್ಲಿ ಸೋಲಾರ್ ಫಲಕ ಈಗ ಇರಬಹುದು, ಇದು 3 ಕೋಟಿಗೆ ಏರಿಕೆಯಾಗುವ ದಿನಗಳೂ ಬರಬಹುದು. ಆಗ ಕಚ್ಚಾ ತೈಲದ ಮೇಲಿನ ಅವಲಂಬನೆ ತಗ್ಗುತ್ತದೆ.

ಜಪಾನ್‌ನಲ್ಲಿ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿದೆ. ಅದರ ಜನಸಂಖ್ಯೆ ಕುಸಿಯುತ್ತಿರುವುದು ಇದಕ್ಕೆ ಕಾರಣ. ನಮ್ಮಲ್ಲಿ ಆ ಸಮಸ್ಯೆ ಇಲ್ಲ. ಅದೇ ರೀತಿ ಜನಸಂಖ್ಯೆ ವೇಗವಾಗಿ ಬೆಳೆಯುವುದೂ ಸಮಸ್ಯೆಗೆ ಕಾರಣವಾಗುತ್ತದೆ. ಜನರ ಸಂಖ್ಯೆ ಹೆಚ್ಚಿದಾಗ ತಲಾ ಆದಾಯ ಕಡಿಮೆಯಾಗುತ್ತದೆ. ಕ್ವಾಂಟಿಟಿ ಮತ್ತು ಕ್ವಾಲಿಟಿಯ ಸಮತೋಲನ ಮುಖ್ಯ.

ಚೀನಾದಿಂದ ಭಾರತ ಹೆಚ್ಚೆಚ್ಚು ಆಮದು ಮಾಡುವುದನ್ನು ನಿಲ್ಲಿಸಲು ಸಾಧ್ಯವೇ ಎಂಬ ಪ್ರಶ್ನೆ ಇದೆ. 2004ರಲ್ಲಿ ಭಾರತ-ಚೀನಾ ನಡುವೆ 13.6 ಶತಕೋಟಿ ಡಾಲರ್ ಮೌಲ್ಯದ ದ್ವಿಪಕ್ಷೀಯ ವ್ಯಾಪಾರ ಇತ್ತು. ಭಾರತವು ಚೀನಾಕ್ಕೆ 7.68 ಶತಕೋಟಿ ಡಾಲರ್ ಮೌಲ್ಯದ ರಫ್ತು ಮಾಡಿತ್ತು.

ಇದರೊಂದಿಗೆ 1.75 ಶತಕೋಟಿ ಡಾಲರ್ ಹೆಚ್ಚಿನ ವ್ಯಾಪಾರವನ್ನೇ ಹೊಂದಿತ್ತು. ಆದರೆ 2025ರ ವೇಳೆಗೆ ಒಟ್ಟು ವ್ಯಾಪಾರ 155 ಶತಕೋಟಿ ಡಾಲರ್‌ಗೆ ಏರಿದ್ದರೂ, ಭಾರತದ ವ್ಯಾಪಾರ ಕೊರತೆ 112 ಶತಕೋಟಿ ಡಾಲರ್‌ಗೆ ಏರಿದೆ. ದೇಶವು ಚೀನಾಕ್ಕೆ ಮಾಡಿದ ರಫ್ತು 19 ಶತಕೋಟಿ ಡಾಲರ್ ಆಗಿದ್ದರೆ, ಭಾರತವು ಚೀನಾದಿಂದ ಮಾಡುತ್ತಿದ್ದ ಆಮದು 131 ಶತಕೋಟಿ ಡಾಲರ್ ಆಗಿತ್ತು.

ಎಲೆಕ್ಟ್ರಾನಿಕ್ಸ್, ಯಂತ್ರೋಪಕರಣಗಳು, ರಾಸಾಯನಿಕ, ಪ್ಲಾಸ್ಟಿಕ್ ವಸ್ತುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಇಂದು ಸಕಾರಾತ್ಮಕ ಅಂಶಗಳನ್ನು ಗಮನಿಸಬೇಕು. ಚೀನಾದಿಂದ ಆಮದಾಗುವ ಬಲ್ಕ್ ಔಷಧಗಳನ್ನು ಭಾರತವು ಮತ್ತೆ ರಫ್ತು ಮಾಡುತ್ತದೆ. ಯಂತ್ರೋಪಕರಣಗಳು ಇಲ್ಲಿ ಉತ್ಪಾದನೆಗೆ ಬಳಕೆಯಾಗುತ್ತದೆ. ಆಪಲ್ ಐಫೋನ್ ಭಾರತದಲ್ಲಿಯೇ ಉತ್ಪಾದನೆಯಾಗುತ್ತಿದೆ.

ಸೆಮಿಕಂಡಕ್ಟರ್ ಸೆಕ್ಟರ್‌ಗೆ ಪಿಎಲ್ಐ ಸ್ಕೀಮ್ ತಯಾರಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನಾ ಹೇಗೆ ಹೂಡಿಕೆ ಮಾಡುತ್ತಿದೆ ಎಂಬುದನ್ನು ನಾವು ಕಲಿಯಬೇಕು. ಅವರು ಪ್ರಾಜೆಕ್ಟ್‌ಗಳನ್ನು ಹೇಗೆ ವೇಗವಾಗಿ ಅನುಷ್ಠಾನಗೊಳಿಸುತ್ತಾರೆ ಎಂಬುದನ್ನು ತಿಳಿಯಬೇಕು. ಟೂ ವ್ಹೀಲರ್ ವಲಯದಲ್ಲಿ ಭಾರತವು ಚೀನಾವನ್ನೂ ಹಿಂದಿಕ್ಕಿದೆ. 2024ರಲ್ಲಿ ಭಾರತವು ವಿಶ್ವದ ಅತಿ ಹೆಚ್ಚು ದ್ವಿಚಕ್ರವಾಹನ ಉತ್ಪಾದಕ ದೇಶವಾಗಿ ಹೊರಹೊಮ್ಮಿದೆ. ಇತರ ವಲಯದಲ್ಲಿ ಇದು ಪುನರಾವರ್ತನೆಯಾಗಬೇಕು.‌

ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತಕ್ಕೆ ಕಾರಣವೇನು? ಚಿಂತೆಪಡಬೇಕೇ? ಪಶ್ಚಿಮ ಏಷ್ಯಾ ಸಂಘರ್ಷವು ಡಾಲರ್ ಪ್ರಾಬಲ್ಯವನ್ನು ಹೆಚ್ಚಿಸಿದೆ ಮತ್ತು ರುಪಾಯಿ ಮೌಲ್ಯವನ್ನು ತಗ್ಗಿಸಿದೆ. ಹೊರ್ಮುಜ್ ಜಲಸಂಧಿಯ ಮೂಲಕ ಏಷ್ಯಾ-ಯುರೋಪ್‌ಗೆ ಕಚ್ಚಾ ತೈಲ ಸಾಗಣೆಗೆ ಅಡ್ಡಿ ಉಂಟಾಗಿರುವುದರಿಂದ ಭಾರತಕ್ಕೆ ಕಚ್ಚಾ ತೈಲ ಆಮದು ದುಬಾರಿಯಾಗುತ್ತಿದೆ.

ಡಾಲರ್‌ಗೆ ಬೇಡಿಕೆ ಹೆಚ್ಚಾಗಿ ರುಪಾಯಿ, ಮೌಲ್ಯ ಕುಸಿದಿದೆ. ರುಪಾಯಿ ಮೌಲ್ಯ ಕುಸಿತ ಎಂದರೆ ಎಲ್ಲವೂ ನಷ್ಟ ಎಂದಲ್ಲ; ಒಂದು ದೇಶದ ಆರ್ಥಿಕತೆಯ ಕೆಲವು ವಲಯಗಳಿಗೆ ಇದರಿಂದ ನೇರವಾದ ಮತ್ತು ಗಮನಾರ್ಹವಾದ ಪ್ರಯೋಜನಗಳಿವೆ. ಮುಖ್ಯವಾಗಿ ರಫ್ತು ಅವಲಂಬಿತ ಕ್ಷೇತ್ರಗಳಿಗೆ ಇದು ವರದಾನವಾಗುತ್ತದೆ.

ಭಾರತದಿಂದ ವಸ್ತುಗಳನ್ನು ವಿದೇಶಕ್ಕೆ ಮಾರಾಟ ಮಾಡುವವರಿಗೆ ಇದು ಲಾಭದಾಯಕ. ಉದಾ ಹರಣೆಗೆ ಒಬ್ಬ ರಫ್ತುದಾರ ಒಂದು ವಸ್ತುವನ್ನು ಒಂದು ಡಾಲರ್‌ಗೆ ಮಾರಾಟ ಮಾಡುತ್ತಾನೆ ಎಂದು ಇಟ್ಟುಕೊಳ್ಳಿ. ಹಿಂದೆ ಒಂದು ಡಾಲರ್ ಮೌಲ್ಯ 80 ರುಪಾಯಿ ಇದ್ದಾಗ ಅವನಿಗೆ 80 ರುಪಾಯಿ ಸಿಗುತ್ತಿತ್ತು. ಈಗ ರುಪಾಯಿ ಕುಸಿದು 1 ಡಾಲರ್ ಮೌಲ್ಯ 90 ರುಪಾಯಿ ಆಗಿದ್ದರೆ, ಅದೇ ವಸ್ತುವಿಗೆ ಅವನಿಗೆ 90 ರುಪಾಯಿ ಸಿಗುತ್ತದೆ.

ಅಂದರೆ, ಯಾವುದೇ ಹೆಚ್ಚಿನ ಶ್ರಮವಿಲ್ಲದೆ ಅವನ ಆದಾಯದಲ್ಲಿ 10 ರುಪಾಯಿ ಹೆಚ್ಚಳವಾಯಿತು. ಭಾರತದ ಆರ್ಥಿಕತೆಗೆ ಮತ್ತು ಉದ್ಯೋಗ ಸೃಷ್ಟಿಗೆ ಗಣನೀಯ ಕೊಡುಗೆ ಸಲ್ಲಿಸುತ್ತಿರುವ ಐಟಿ ಕಂಪನಿಗಳಾದ ಟಿಸಿಎಸ್, ಇನ್ಫೋಸಿಸ್ ಮತ್ತು ವಿಪ್ರೊ, ತಮ್ಮ ಬಹುಪಾಲು ಆದಾಯವನ್ನು ಡಾಲರ್ ರೂಪದಲ್ಲಿ ಗಳಿಸುತ್ತವೆ. ರುಪಾಯಿ ಮೌಲ್ಯ ಕುಸಿತದಿಂದ ಈ ಕಂಪನಿಗಳ ಲಾಭದ ಪ್ರಮಾಣ ಗಣನೀಯವಾಗಿ ಹೆಚ್ಚುತ್ತದೆ.

ಇದು ಷೇರು ಮಾರುಕಟ್ಟೆಯಲ್ಲಿ ಈ ಕಂಪನಿಗಳ ಮೌಲ್ಯ ಹೆಚ್ಚಲು ಕಾರಣವಾಗುತ್ತದೆ. ಆದರೆ ಕಚ್ಚಾ ತೈಲ, ಬಂಗಾರ ಮತ್ತು ಎಲೆಕ್ಟ್ರಾನಿಕ್ಸ್ ಸೇರಿದಂತೆ ವಸ್ತುಗಳ ಆಮದು ದರ ಕೂಡ ಏರಿಕೆಯಾಗುತ್ತದೆ. ಒಂದುವೇಳೆ ರುಪಾಯಿ ಕುಸಿತವನ್ನು ಕೃತಕವಾಗಿ ತಡೆದರೆ, ಬಂಡವಾಳ ಹೂಡಿಕೆಯ ಹೊರ ಹರಿವು ಹೆಚ್ಚಬಹುದು. ಡಾಲರ್ ಎದುರು ರುಪಾಯಿ ಮೌಲ್ಯ 100 ರುಪಾಯಿಗೆ ಕುಸಿತಕ್ಕೀಡಾದರೂ, ಆರ್ಥಿಕತೆ ಸ್ಪರ್ಧಾತ್ಮಕವಾಗಿದ್ದರೆ ಸಮಸ್ಯೆಯಾಗುವುದಿಲ್ಲ. ರಫ್ತು ಸಾಮರ್ಥ್ಯವನ್ನು ಗಣನೀಯ ವಾಗಿ ಹೆಚ್ಚಿಸಿ ಲಾಭ ಪಡೆಯಬಹುದು.

ಕೇಶವ ಪ್ರಸಾದ್​ ಬಿ

View all posts by this author