ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Srivathsa Joshi Column: ವನಭೋಜನ ಏಕೆ ವಿಶೇಷ ರುಚಿಕರ ಎಂದೆನಿಸುತ್ತದೆ ?

ಅಶ್ವತ್ಥಕಟ್ಟೆ ಇದ್ದದ್ದು ನಮ್ಮ ಅಡಿಕೆತೋಟದ ಒಂದು ಬದಿಯಲ್ಲಿ, ಮನೆಗೆ ಹತ್ತಿರದಲ್ಲೇ. ಆದ್ದರಿಂದ ಹೆಚ್ಚಿನೆಲ್ಲ ಶಾಕಪಾಕಾದಿ ಅಡುಗೆಯನ್ನು, ಚಿತ್ರಾನ್ನ, ಆಂಬೊಡೆ ಹಪ್ಪಳ-ಸಂಡಿಗೆ ಮುಂತಾದ ಭಕ್ಷ್ಯಗಳನ್ನು, ಮನೆಯಲ್ಲೇ ಮಾಡಿ ಅಲ್ಲಿಗೆ ತಗೊಂಡು ಹೋದದ್ದು. ಸಾಂಕೇತಿಕ ವಾಗಿ ಒಂದೆರಡು ಐಟಂ ಮಾತ್ರ- ಸ್ವಲ್ಪ ಪಾಯಸ ಮತ್ತು ನೈವೇದ್ಯಕ್ಕೆ ಒಂದಿಷ್ಟು ಅನ್ನ- ಅಲ್ಲಿಯೇ ಬೇಯಿಸಿದ್ದಿರಬಹುದು.

ತಿಳಿರು ತೋರಣ

ಅಶ್ವತ್ಥಕಟ್ಟೆಯ ಎದುರಿನಲ್ಲೇ ಒಂದು ಓಣಿ. ಅದನ್ನು ಸಮತಟ್ಟುಗೊಳಿಸಿ ಸ್ವಚ್ಛ ಮಾಡಿ ಒಂದೈವತ್ತು ಮಂದಿ ಕೂರಲಿಕ್ಕಾಗುವಷ್ಟು ಜಾಗದಲ್ಲಿ ಬಾಳೆಎಲೆ ಪಂಕ್ತಿಯೂಟ. ಈಗಿನಂತೆ ಟೇಬಲ್ ವ್ಯವಸ್ಥೆ ಅಲ್ಲ. ಚಾಪೆ ಹಾಸಿಯೋ ಮಣೆಗಳನ್ನಿಟ್ಟೋ ನೆಲದ ಮೇಲೆ ಚಕ್ಳಮಕ್ಳ ಹಾಕಿ ಕುಳಿತುಕೊಳ್ಳುವ ವ್ಯವಸ್ಥೆ.

ಆವತ್ತು ಅಶ್ವತ್ಥ ವೃಕ್ಷಕ್ಕೆ ವಿಶೇಷ ಪೂಜೆ, ಪ್ರದಕ್ಷಿಣೆ, ಮಹಾಮಂಗಳಾರತಿ ಇತ್ಯಾದಿ ಒಂದಿ ಷ್ಟು ಧಾರ್ಮಿಕ ವಿಧಿವಿಧಾನಗಳೂ ಇದ್ದವು. ಅವೆಲ್ಲ ಮುಗಿದ ಮೇಲೆ ಪ್ರಸಾದ ರೂಪವಾಗಿ ಮಧ್ಯಾಹ್ನದ ಭೋಜನ ಅಲ್ಲಿ ಆ ಓಣಿಯಲ್ಲಿ ಏರ್ಪಾಡಾದದ್ದು. ಪೂಜೆ ಮಾಡಿಸಲಿಕ್ಕೆ ಬಂದಿದ್ದ ಪುರೋಹಿತವರ್ಗ, ಸುವಾಸಿನಿ-ಕುಮಾರಿಕೆಯರು, ಬಂಧುಮಿತ್ರರು, ನಾವು ಮನೆಮಂದಿ ಎಲ್ಲರೂ ಸೇರಿ ಎರಡು ಅಥವಾ ಮೂರು ಪಂಕ್ತಿಗಳು ಆಗಿರಬಹುದು.

ಅಶ್ವತ್ಥಕಟ್ಟೆ ಇದ್ದದ್ದು ನಮ್ಮ ಅಡಿಕೆತೋಟದ ಒಂದು ಬದಿಯಲ್ಲಿ, ಮನೆಗೆ ಹತ್ತಿರದಲ್ಲೇ. ಆದ್ದರಿಂದ ಹೆಚ್ಚಿನೆಲ್ಲ ಶಾಕಪಾಕಾದಿ ಅಡುಗೆಯನ್ನು, ಚಿತ್ರಾನ್ನ, ಆಂಬೊಡೆ ಹಪ್ಪಳ-ಸಂಡಿಗೆ ಮುಂತಾದ ಭಕ್ಷ್ಯಗಳನ್ನು, ಮನೆಯಲ್ಲೇ ಮಾಡಿ ಅಲ್ಲಿಗೆ ತಗೊಂಡು ಹೋದದ್ದು. ಸಾಂಕೇತಿಕವಾಗಿ ಒಂದೆರಡು ಐಟಂ ಮಾತ್ರ- ಸ್ವಲ್ಪ ಪಾಯಸ ಮತ್ತು ನೈವೇದ್ಯಕ್ಕೆ ಒಂದಿಷ್ಟು ಅನ್ನ- ಅಲ್ಲಿಯೇ ಬೇಯಿಸಿದ್ದಿರಬಹುದು.

ಅಂತೂ ಎಲ್ಲ ವಿಧದಲ್ಲೂ ಪರಿಪೂರ್ಣ ಭೋಜನವೇ. ಚೂರ್ಣಿಕೆ (ಶ್ಲೋಕ) ಹೇಳುವುದೇ ಮೊದಲಾದ ಸಾಂಪ್ರದಾಯಿಕ ರಿವಾಜುಗಳನ್ನೂ ಪಾಲಿಸಿದ್ದ, ಪೊಗದಸ್ತಾದ ಔತಣ ಎನ್ನಲಿಕ್ಕಡ್ಡಿಯಿಲ್ಲ.

ಇದು, ತುಂಬ ಹಿಂದೆ, ನಾನು ಹೆಚ್ಚೆಂದರೆ ಐದೋ ಆರೋ ವರ್ಷದ ಚಿಕ್ಕ ಹುಡುಗ ನಾಗಿದ್ದಾಗ, ಊರಲ್ಲಿ ನಮ್ಮ ಮನೆಯಲ್ಲಿ (ಮನೆಯ ಸಮೀಪ ಎನ್ನೋಣ) ಒಮ್ಮೆ ಆಚರಿಸಿದ್ದ ‘ವನಭೋಜನ’ದ ಒಂದು ಅಸ್ಪಷ್ಟ ನೆನಪು. ಅದೇಕೋ ಗೊತ್ತಿಲ್ಲ, ಆಮೇಲೂ ನಾವು “ಈ ವರ್ಷವೂ ವನಭೋಜನ ಆಚರಿಸೋಣವೇ?" ಎಂದು ನಮ್ಮ ತಂದೆಯವರನ್ನು ಅತ್ಯುತ್ಸಾಹದಿಂದ ಪೀಡಿಸುತ್ತಿದ್ದೆವಾದರೂ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ.

ಇದನ್ನೂ ಓದಿ: Srivathsa Joshi Column: ಚ್ಯೂಯಿಂಗ್‌ʼಗಮ್ಮ ಗಮ್ಮಾಡಿಸ್ತಾವ ಹಲ್ಲಿಗೀ, ಮತ್ತ ಗ್ವಾಡಿಗೀ...

ಅಥವಾ, ಅದಕ್ಕಿಂತ ಹಿಂದೆ ಒಂದೆರಡು ಸಲ ಅದೇರೀತಿಯ ವೈಭವದ ವನಭೋಜನ ಆಗಿದ್ದಿರಬಹುದು, ನನ್ನ ನೆನಪಿನ ಪರಿಧಿಯ ಆಚೆಗೆ. ಹಾಗಾಗಿ ನನಗೆ ಗೊತ್ತಿಲ್ಲ ಅಷ್ಟೇ. ಈಗ ತಂದೆಯವರು ಗತಿಸಿಯೇ 25 ವರ್ಷ ಕಳೆದಿವೆ. ಅಲ್ಲದೇ ಆ ಮನೆ, ತೋಟ, ಅಶ್ವತ್ಥಕಟ್ಟೆ, ಓಣಿ... ಇಡೀ ಜಾಗವೇ ಮಾರಾಟವಾಗಿ ಅಲ್ಲಿ ಬೇರೆಯವರು ನೆಲೆಸಿದ್ದಾರೆ. ಆದರೂ ‘ವನಭೋಜನ’ ಎಂಬ ಶಬ್ದವು ಪ್ರತಿಸಲ ಮುಖಾಮುಖಿ ಆದಾಗಲೂ (ಕಣ್ಣಿಗೆ ಕಂಡಾಗ/ ಕಿವಿಗಳೊಳಗೆ ಬಿದ್ದಾಗ) ನನ್ನ ಚಿತ್ತಭಿತ್ತಿಯಲ್ಲಿ ಇದೇ ಅಸ್ಪಷ್ಟ ಚಿತ್ರಣವನ್ನು ಮೂಡಿಸು ತ್ತದೆ.

ಹಾಗೆ ನೋಡುವುದಾದರೆ ಜೀವನದಲ್ಲಿ ಇದುವರೆಗೆ ನಾನು ಬೇರೆಯೂ ಅನೇಕ ಸಂದರ್ಭ ಗಳಲ್ಲಿ ‘ವನಭೋಜನ’ ಎನ್ನಬಹುದಾದ್ದನ್ನು ಸವಿದಿದ್ದೇನೆ. ಅಂಥ ಅವಕಾಶಗಳಲ್ಲಿ ಆಸಕ್ತಿ ಯಿಂದ ಪಾಲ್ಗೊಂಡಿದ್ದೇನೆ. ಆರನೆಯ ಅಥವಾ ಏಳನೆಯ ತರಗತಿಯಲ್ಲಿದ್ದಾಗ ಒಮ್ಮೆ ಶಾಲೆಯಿಂದ, ಇನ್ನೊಮ್ಮೆ ಊರ ಕೆಲ ಹಿರಿಯರೊಡನೆ, ಕುದುರೆಮುಖ ಪರ್ವತ ಶ್ರೇಣಿ ಯಲ್ಲಿರುವ ಕುರಿಂಗಲ್ಲಿಗೆ ಟ್ರೆಕ್ಕಿಂಗ್ ಮಾಡಿದ್ದು; ಪಿಯುಸಿ ಓದಿಗೆ ಉಜಿರೆಯಲ್ಲಿ ಸಿದ್ಧವನ ಗುರುಕುಲದಲ್ಲಿದ್ದಾಗ ಅಲ್ಲಿಂದ ನಾವೊಂದಿಷ್ಟು ಹುಡುಗರು ಗಡಾಯಿಕಲ್ಲು (ಜಮಾಲಾ ಬಾದ್ ಕೋಟೆ) ಹತ್ತುವ ಚಾರಣಸಾಹಸ ಕೈಗೊಂಡಿದ್ದು, ಅಲ್ಲೊಂದು ರಾತ್ರಿ ತಂಗಿದ್ದು; ಉದ್ಯೋಗಕ್ಕಾಗಿ ಸಿಕಂದರಾಬಾದ್‌ನಲ್ಲಿದ್ದಾಗ ಸಹೋದ್ಯೋಗಿಗಳೊಟ್ಟಿಗೆ ಅಲ್ಲಿ ಹತ್ತಿರದ ಕಾಡುಪ್ರದೇಶವೊಂದಕ್ಕೆ ಒಂದು ದಿನದ ಹೊರಸಂಚಾರ ಮಾಡಿಬಂದಿದ್ದು; ಹಾಗೆಯೇ ಮುಂಬಯಿಯಲ್ಲಿ ಇದ್ದಾಗ ಅಲ್ಲಿ ಠಾಣೆಯ ಸಮೀಪ ಒಂದು ಬೆಟ್ಟ ಹತ್ತಲಿಕ್ಕೆ ಹೋಗಿದ್ದು; ಅಮೆರಿಕಕ್ಕೆ ಬಂದಮೇಲೆ ಇಲ್ಲಿ ವಾಷಿಂಗ್ಟನ್ ಡಿಸಿಗೆ ಹತ್ತಿರದ ಶೆನ್ಯಾಂಡೋ ಕಣಿವೆ ಪ್ರದೇಶದಲ್ಲಿ ಕ್ಯಾಂಪಿಂಗ್ ಮಾಡಿದ್ದು... ಹೀಗೆ ಅನೇಕ ಸಂದರ್ಭಗಳು ನೆನಪಿವೆ.

vanabhjana

ನಾನೇನೂ ಮಹಾಚಾರಣಿಗ ಅಲ್ಲವಾದರೂ ರುಚಿ ನೋಡಲಿಕ್ಕೆ ತಕ್ಕಷ್ಟು ಅಂಥ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಿದೆ. ಇಲ್ಲಿನ ಕನ್ನಡಕೂಟಗಳು ಬೇಸಗೆಯಲ್ಲಿ ಇಟ್ಟು ಕೊಳ್ಳುವ ಪಿಕ್‌ನಿಕ್‌ಗಳಲ್ಲಿ ಭಾಗವಹಿಸಿದ್ದನ್ನೂ ಸೇರಿಸಿದರೆ ಸಂಖ್ಯೆ ದೊಡ್ಡದೇ ಇದೆ. ಅಥವಾ, ಪಿಕ್‌ನಿಕ್‌ಗಳು ಹೈಕಿಂಗ್-ಟ್ರೆಕ್ಕಿಂಗ್‌ಗಳು ಕ್ಯಾಂಪ್ ಗಳು ಸಾಂಪ್ರದಾಯಿಕ (ಧಾರ್ಮಿಕ) ‘ವನಭೋಜನ’ದ ವ್ಯಾಖ್ಯೆಯಲ್ಲಿ ಬರುವುದಿಲ್ಲವಾದರೆ, ನಮ್ಮ ಕಾರ್ಕಳದ ವೇಂಕಟರಮಣ ದೇವಸ್ಥಾನದಲ್ಲಿ ಪ್ರತಿವರ್ಷ ಲಕ್ಷದೀಪೋತ್ಸವದ ವೇಳೆ ರಾಮಸಮುದ್ರ ಎಂಬ ಸುಂದರ ಸರೋವರದ ಬಳಿ ನಡೆಯುವ ವನಭೋಜನಕ್ಕೂ ನಾನು ಹೋಗಿದ್ದೇನೆ- ಪ್ರೌಢಶಾಲೆ ಶಿಕ್ಷಣದ ವರ್ಷಗಳಲ್ಲಿ. ಈ ವನಭೋಜನ ಎಂಬ ವಾರ್ಷಿಕ ಸಂಪ್ರದಾಯವು ಕರಾವಳಿಯ ಹಲವಾರು ದೇವಸ್ಥಾನಗಳಲ್ಲಿ ಇದೆಯಾದರೂ ನಮ್ಮ ಕಾರ್ಕಳದ್ದು ಹೆಚ್ಚು ಪ್ರಸಿದ್ಧ.

ಕಾರ್ಕಳಕ್ಕೆ ಪಡುತಿರುಪತಿ ಎಂಬ ಖ್ಯಾತಿ ಇರುವುದು, ಮೂಲ ತಿರುಪತಿಯಲ್ಲೂ ವನಭೋಜನ ಕ್ರಮ ಇರುವುದು ಅದಕ್ಕೆ ಕಾರಣವಿರಬಹುದು. ಅಂದಹಾಗೆ ಮೂಲ ತಿರುಪತಿಯಲ್ಲಿ ವನಭೋಜನ ಸಂಪ್ರದಾಯವನ್ನು ಸುಮಾರು ಐನೂರು ವರ್ಷಗಳ ಹಿಂದೆ, ಅನ್ನಮಾಚಾರ್ಯರ ಹಿರಿಯ ಮಗ ‘ಪೆದ್ದ ತಿರುಮಲಾಚಾರ್ಯುಲು’ ಅವರು ಆರಂಭಿಸಿ ದ್ದಂತೆ.

ಹಾಗೆಂದು ದಾಖಲೆಪತ್ರಗಳಲ್ಲಿ ಇದೆಯಂತೆ. ಕಾಲಕ್ರಮೇಣ ಅದು ನಶಿಸಿಹೋಯಿತೆಂದೂ, ತಿರುಮಲ-ತಿರುಪತಿ ದೇವಸ್ಥಾನಂ ಟ್ರಸ್ಟ್‌ನವರು 2010ರಿಂದೀಚೆಗೆ ಅದನ್ನು ಪುನರಾರಂಭಿಸಿ ದ್ದಾರೆಂದೂ ಹೇಳುತ್ತಾರೆ.

ಒಟ್ಟಾರೆಯಾಗಿ ಆಂಧ್ರಪ್ರದೇಶದವರಿಗೆ, ಅರ್ಥಾತ್ ತೆಲುಗರಿಗೆ ‘ವನಭೋಜನಮು’ ಪರಿಚಿತ ವೂ ಪ್ರೀತಿಯದೂ ಎಂದು ಗೂಗಲ್ ಕೂಡ ತಿಳಿಸುತ್ತಿದೆ. ದೇವಸ್ಥಾನಗಳ ವನಭೋಜನ ಕಾರ್ಯಕ್ರಮ ಹೆಚ್ಚಾಗಿ ಕಾರ್ತಿಕ ಮಾಸದಲ್ಲಿ ನಡೆಯುತ್ತದೆ; ಆದರೆ ಪ್ರಸ್ತುತ ಚಾಲ್ತಿಯಿರುವ ಮಾಘ ಮಾಸವೂ ವನಭೋಜನಕ್ಕೆ ಪ್ರಶಸ್ತವೆಂದು ಕೆಲವು ಶಾಸ್ತ್ರಗಳಲ್ಲಿದೆ.

“ತನ್ಮಾಸೇ ತು ವಿಶೇಷೇಣ ವನಭೋಜನಮಾಚರೇತ್| ತಿಲದಾನಂ ಮಾಘಮಾಸೇ ಪಿತೄಣಾಂ ಪಿಂಡಮಾಚರೇತ್||" ಎಂದು ಅನಿರುದ್ಧ ಸಂಹಿತಾ ಎಂಬ ಶಾಸ್ತ್ರಗ್ರಂಥದಲ್ಲಿ, ಮಾಘ ಮಾಸದಲ್ಲಿ ವನಭೋಜನ ಆಚರಣೆ ಮತ್ತು ಪಿತೃಗಳಿಗೆ ತಿಲದಾನ ಮಾಡಬೇಕೆಂದು ಶಿಫಾರಸು.

ವನಭೋಜನ ಎಂಬ ಹೆಸರಿನಿಂದಲ್ಲದಿದ್ದರೂ ಆ ಕಾನ್ಸೆಪ್ಟ್ ಕರ್ನಾಟಕದ ಇತರೆಡೆಗಳಲ್ಲೂ ವ್ಯಾಪಕವಾಗಿ ಇದೆಯೆಂದು ನನ್ನ ಅರಿವಿಗೆ ಬಂದದ್ದು, ‘ವಿಜಯವಾಣಿ’ ಪತ್ರಿಕೆಯಲ್ಲಿ ನಾನು ನಿರ್ವಹಿಸುವ ‘ಕಟ್ಟುವೆವು ನಾವು ಕನ್ನಡದ ಪದವೊಂದನು’ ಅಂಕಣದಲ್ಲಿ ಹಿಂದೊಮ್ಮೆ Picnic ಪದಕ್ಕೆ ಸಂವಾದಿ ಕನ್ನಡಪದ ಸೂಚಿಸುವಂತೆ ಓದುಗರಿಗೆ ಆಹ್ವಾನ ವಿತ್ತಾಗ.

“ಯಲ್ಲಾಪುರದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಅಮ್ಮನವರ ಜಾತ್ರೆಗೆ ಮೊದಲು, ಮಂಗಳವಾರ ಮನೆಯಲ್ಲಿ ಅಡುಗೆ ಮಾಡದೇ, ಊರಿನವರೆಲ್ಲ ಸೇರಿ ಊರ ಹೊರಗೆ ಒಂದು ಕಡೆ ಒಟ್ಟಾಗಿ ಅಡುಗೆ ಮಾಡಿ ಊಟ ಮಾಡುತ್ತಾರೆ. ಅದಕ್ಕೆ ಹೊರೂಟ (ಹೊರ ಊಟ) ಎನ್ನುತ್ತಾರೆ.

ಪಿಕ್‌ನಿಕ್‌ಗೂ ಹೊರೂಟ ಪದ ಸರಿಯಾಗಬಹುದು ಅಂತನಿಸುತ್ತದೆ" ಎಂದು ಒಬ್ಬರು ಓದುಗರು ಬರೆದಿದ್ದರೆ “ನನ್ನ ಬಾಲ್ಯದಲ್ಲಿ ಹಳ್ಳಿಯಲ್ಲಿ ಸುಗ್ಗಿ ಮುಗಿದ ಬಳಿಕ ಊರಾಚೆ ಸಾಮೂಹಿಕ ಭೋಜನಕೂಟ ಏರ್ಪಡಿಸುತ್ತಿದ್ದರು. ಬಯಲಲ್ಲೇ ಅಡುಗೆ ಮಾಡಿ ಎಲ್ಲರಿಗೂ ಬಡಿಸುತ್ತಿದ್ದರು. ಅದನ್ನು ಪರಾವು ಎನ್ನುತ್ತಿದ್ದರು.

ಊರಿನ ಹಿರಿಯರು ಇಂಥ ದಿವಸ ಪರಾವು ಏರ್ಪಡಿಸಲಾಗಿದೆ ಎಂದು ತಳವಾರರ ಮೂಲಕ ಸಾರುತ್ತಿದ್ದರು" ಎಂದು ಇನ್ನೊಬ್ಬ ಓದುಗಮಿತ್ರರು ತಿಳಿಸಿದ್ದರು.

ತಾತ್ಪರ್ಯ ಇಷ್ಟೇ: ವನಭೋಜನದ ಬಗ್ಗೆ ಓದಿ/ಕೇಳಿ ಬಹುತೇಕ ಎಲ್ಲರಿಗೂ ಗೊತ್ತಿರುತ್ತದೆ. ಪೀಠಿಕೆಯೇ ಅರ್ಧದಷ್ಟಾಯಿತು. ಆದರೆ ನಾನು ಹೇಳಹೊರಟಿದ್ದು ವನಭೋಜನದ ಬಗ್ಗೆ ಯಲ್ಲ. ವನಭೋಜನ ಅರ್ಥಾತ್ ಹೊರಾಂಗಣದಲ್ಲಿ ಪ್ರಕೃತಿಯ ಮಡಿಲಲ್ಲಿ ತಿನ್ನುವ ಯಾವುದೇ ತಿಂಡಿ-ತಿನಸು ಹೆಚ್ಚು ರುಚಿಕರ ಎನಿಸುವುದೇಕೆಂಬ ಕೌತುಕದ ಬಗ್ಗೆ. ಇದು ಖಂಡಿತ ನಿಮ್ಮ ಅನುಭವಕ್ಕೂ ಬಂದಿರುತ್ತದೆ. ಒಂದು ಪ್ಯಾಕೆಟ್ ಚಿಪ್ಸ್ ಇರಬಹುದು, ಒಂದು ಪ್ಲೇಟ್ ಭೇಲ್‌ಪುರಿ ಇರಬಹುದು, ಪಕೋಡಾ-ಬೋಂಡಾ-ಸಮೋಸಾಗಳೇ ಇರಬಹು ದು, ಮನೆಯೊಳಗೆ ಇದ್ದು ತಿನ್ನುವಾಗಿನದಕ್ಕಿಂತ ಹೆಚ್ಚು ರುಚಿ ಹೊರಾಂಗಣ ದಲ್ಲಿರುವಾಗ ತಿಂದರೆ!

ನಾನಂತೂ ಈ ವ್ಯತ್ಯಾಸವನ್ನು ಅತಿಸ್ಪಷ್ಟವಾಗಿ ಕಂಡುಕೊಂಡಿದ್ದೇನೆ. ಬಹುಶಃ ಇಲ್ಲಿ ಅಮೆರಿಕದಲ್ಲಿ, ಅದರಲ್ಲೂ ಉತ್ತರದ ರಾಜ್ಯಗಳಲ್ಲಿ ಮನೆ ಅಥವಾ ವಾಸ್ತವ್ಯದ ಗೂಡಿನ ರಚನೆ ಮತ್ತು ವ್ಯವಸ್ಥೆಯದೂ ಇದರಲ್ಲಿ ಪಾತ್ರವಿದೆ. ಚಳಿಗಾಲದಲ್ಲಿ ತೀವ್ರ ಚಳಿಯಿಂದಾ ಗಿಯೂ, ಬೇಸಗೆಯಲ್ಲಿ ಏರ್‌ಕಂಡೀಷನ್‌ನಿಂದಾಗಿಯೂ ಕಿಟಕಿ ಬಾಗಿಲುಗಳನ್ನು ತೆರೆದಿಡದೆ ವಾಸಿಸುತ್ತೇವಲ್ಲ, ಅದರಿಂದ ನಮ್ಮ ಪಂಚೇಂದ್ರಿಯಗಳ- ಅದರಲ್ಲೂ ಮುಖ್ಯವಾಗಿ ಮೂಗು ಮತ್ತು ನಾಲಗೆಯ ಚುರುಕುತನ ಮಂಕಾಗುತ್ತದೆ.

ವಿಮಾನದಲ್ಲಿ ಸರಬರಾಜು ಮಾಡುವ ಆಹಾರ ಅನೇಕರಿಗೆ ರುಚಿಸದಿರುವುದು, ಸ್ವಲ್ಪ ವಾದರೂ ರುಚಿ ಹೆಚ್ಚಲಿ ಎಂದು ಅಂಥ ಆಹಾರಕ್ಕೆ ಬೇಕೆಂದೇ ಹೆಚ್ಚು ಉಪ್ಪು ಸೇರಿಸಿರು ವುದು- ಎಂಬ ಥಿಯರಿಗೆ (ಬರೀ ಥಿಯರಿಯಲ್ಲ ಸತ್ಯ ಕೂಡ) ಸನ್ನಿಹಿತವಾದದ್ದೇ ಇದು ಕೂಡ.

ಇದರ ಬಗ್ಗೆ ಮೊನ್ನೆ ಒಂದು ಸೈನ್ಸ್ ಜರ್ನಲ್‌ನಲ್ಲಿ ಓದುತ್ತಿದ್ದೆ. ಅಲ್ಲಿನ ವಿವರಣೆಯ ಸಾರಾಂಶ ಹೀಗಿದೆ: “ಹೊರಾಂಗಣದಲ್ಲಿ ಇರುವುದರಿಂದ ನಮ್ಮ ದೇಹ ಮತ್ತು ಮನಸ್ಸಿಗೆ ಆಗುವ ಲಾಭಗಳ ಬಗ್ಗೆ ನಮಗೆಲ್ಲ ಹೆಚ್ಚು ಅರಿವು ಬಂದಿದೆ. ಇದೇ ವಿಷಯ ನಮ್ಮ ಜೀರ್ಣ ಕ್ರಿಯೆಗೂ ಅನ್ವಯಿಸುತ್ತದೆ.

ಇಂದಿನ ಜೀವನಶೈಲಿಯಲ್ಲಿ ಅನೇಕರು ಒತ್ತಡ ಮತ್ತು ಆತಂಕದಿಂದ ಬಳಲುತ್ತಾರೆ. ಇದರಿಂದ ದೇಹದೊಳಗೆ ಒಂದು ನಮೂನೆಯ ‘ಹೋರಾಟ ಮತ್ತು ಓಟ (fight or flight) ಸಕ್ರಿಯವಾಗುತ್ತದೆ. ಕೈಗಳು ಮತ್ತು ಕಾಲುಗಳಿಗೆ ಹೆಚ್ಚು ರಕ್ತಸಂಚಾರವಾಗಿ, ಜೀರ್ಣಾಂಗ ಗಳಿಗೆ ಹೋಗುವ ರಕ್ತ ಕಡಿಮೆಯಾಗುತ್ತದೆ.

ಇದರಿಂದ ಆಹಾರವನ್ನು ಸವಿಯುವ ಮತ್ತು ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಕಡಿಮೆ ಯಾಗುತ್ತದೆ. ಆದರೆ ನಾವು ಪ್ರಕೃತಿಯ ಮಡಿಲಲ್ಲಿ ಇದ್ದಾಗ ಕೋಪ, ಆತಂಕ ಮತ್ತು ಒತ್ತಡ ಕಡಿಮೆಯಾಗುತ್ತವೆ. ಸಂತೋಷದ ಭಾವನೆಗಳು ಹೆಚ್ಚಾಗುತ್ತವೆ. ಪ್ರಕೃತಿಯಲ್ಲಿ ಇರುವು ದರಿಂದ ಮನಸ್ಸಿಗೆ ಮಾತ್ರವಲ್ಲ, ದೇಹಕ್ಕೂ ಲಾಭವಾಗುತ್ತದೆ.

ರಕ್ತದ ಒತ್ತಡ, ಹೃದಯದ ಸ್ಪಂದನ, ಸ್ನಾಯುಗಳ ಒತ್ತಡ ಕಡಿಮೆಯಾಗುತ್ತದೆ. ಒತ್ತಡದ ಹಾರ್ಮೋನುಗಳು ಸ್ರವಿಸುವುದು ಕಡಿಮೆಯಾಗುತ್ತದೆ. ಇದರಿಂದ ದೇಹದೊಳಗೆ ಶಾಂತ ಪರಿಸ್ಥಿತಿ (rest and digest) ಸಕ್ರಿಯವಾಗುತ್ತದೆ. ಇದು ದೇಹದಲ್ಲಿ ಜೀರ್ಣಕ್ರಿಯೆಯನ್ನು ಸರಿಯಾಗಿ ನಡೆಸುತ್ತದೆ. ಈ ವ್ಯವಸ್ಥೆ ಕೆಲಸ ಮಾಡುವಾಗ ದೇಹವು ಶಕ್ತಿಯನ್ನು ಉಳಿಸು ತ್ತದೆ, ಹೃದಯದ ಗತಿ ನಿಧಾನಗೊಳ್ಳುತ್ತದೆ, ಜೀರ್ಣಕ್ರಿಯೆ ಉತ್ತಮವಾಗುತ್ತದೆ.

ಪ್ರಕೃತಿಯಲ್ಲಿದ್ದಾಗ ಸಸ್ಯಗಳನ್ನು ಮುಟ್ಟುವುದು, ಹೂವು-ಹಣ್ಣುಗಳ ವಾಸನೆ ಮತ್ತು ರುಚಿ ನೋಡುವುದು, ಪ್ರಾಣಿ-ಪಕ್ಷಿಗಳ ಸಹಜ ಕಲರವವನ್ನು ಕೇಳುವುದು... ಈ ಎಲ್ಲವೂ ಸೇರಿ ಒಂದು ಬಹು-ಇಂದ್ರಿಯ ಅನುಭವವನ್ನು ಕೊಡುತ್ತವೆ. ಇಂಥ ಅನುಭವಗಳು ಇಂದಿನ ಕಾಲಘಟ್ಟದ FOMO ಏನನ್ನಾದರೂ ಕಳೆದುಕೊಳ್ಳುತ್ತಿದ್ದೇವೆ, ಬೇರೆಯವರಿಗಿಂತ ಹಿಂದುಳಿ ಯುತ್ತೇವೆ ಎಂಬ ಭಯ, ಕೀಳರಿಮೆ) ಮತ್ತು ನಿರಂತರವಾಗಿ ಸ್ಮಾರ್ಟ್ಫೋನ್ ಸ್ಕ್ರೋಲ್ ಮಾಡುವ ದುರಭ್ಯಾಸಗಳಂಥ ಸಮಸ್ಯೆಗಳಿಂದ ನಮ್ಮನ್ನು ಗುಣಪಡಿಸುತ್ತವೆ.

ಇನ್ನು ಆಹಾರ ಸೇವನೆಯ ವಿಚಾರಕ್ಕೆ ಬಂದರೆ, ನಮ್ಮ ಘ್ರಾಣಶಕ್ತಿಯು ರುಚಿಯನ್ನು ಬಹಳ ವಾಗಿ ಪ್ರಭಾವಿಸುತ್ತದೆ. ಹೊರಗಡೆ, ಗಾಳಿಯ ಮುಕ್ತಸಂಚಾರ ಇರುವಲ್ಲಿ ಊಟ ಮಾಡಿದರೆ ನಮ್ಮ ಘ್ರಾಣಶಕ್ತಿ ಉತ್ತಮವಾಗುತ್ತದೆ. ಇದರಿಂದ ಆಹಾರದ ರುಚಿಯೂ ಹೆಚ್ಚು ಸ್ಪಷ್ಟವಾಗಿ ಮತ್ತು ಚೆನ್ನಾಗಿ ಅನುಭವವಾಗುತ್ತದೆ. ನಾವು ಆರಾಮದಲ್ಲಿದ್ದಾಗ ನಮ್ಮ ಆಹಾರವನ್ನು ಇನ್ನಷ್ಟು ಆಸಕ್ತಿಯಿಂದ ಮತ್ತು ಸಂತೋಷದಿಂದ ಆಸ್ವಾದಿಸುವುದೂ ಕಾರಣವಾಗುತ್ತದೆ".

ಯೋಚಿಸಿದರೆ ಇದರಲ್ಲಿ ತಥ್ಯವಿರುವುದು ಹೌದು ಅಂತನಿಸುತ್ತದೆ. ವಿಕಾಸದ ದೃಷ್ಟಿಯಿಂದ ನಾವು ಪ್ರಕೃತಿಯಲ್ಲಿ ಇದ್ದಾಗ ಶಾಂತವಾಗಿರಲು ರೂಪುಗೊಂಡವರೇ ಇರಬೇಕು. ಪ್ರಕೃತಿಯ ದೃಶ್ಯಗಳು ನಮ್ಮ ನರಮಂಡಲವನ್ನು ಶಾಂತಗೊಳಿಸುತ್ತವೆ. ನಮ್ಮ ಎಲ್ಲ ಇಂದ್ರಿಯಗಳ ದಕ್ಷತೆ ಮತ್ತು ಕ್ಷಮತೆ ಹೆಚ್ಚುತ್ತದೆ.

ಐದೂ ಇಂದ್ರಿಯಗಳನ್ನು ಏಕಕಾಲದಲ್ಲಿ ಬಳಸಲು ಪ್ರಯತ್ನಿಸಿದರೆ, ಬೇರೆ ಯಾವುದರ ಬಗ್ಗೆಯೂ ಅನಾವಶ್ಯಕವಾಗಿ ಯೋಚಿಸುವುದು ತನ್ನಿಂತಾನೆ ತಗ್ಗುತ್ತದೆ. ಅಂದರೆ ಸಂಪೂರ್ಣವಾಗಿ ಒಂದೊಂದು ಕ್ಷಣವನ್ನೂ ಆನಂದಿಸುವುದು, ಅನುಭವಿಸುವುದು ನಮಗೆ ಸಾಧ್ಯವಾಗುತ್ತದೆ. ಇದನ್ನೇ mindfulness ಎನ್ನಬಹುದು: ಐದೂ ಇಂದ್ರಿಯಗಳು ಚುರುಕಾಗಿ ದ್ದಾಗ ಆಹಾರವನ್ನು ಚೆನ್ನಾಗಿ ಗಮನಿಸಿ, ರುಚಿಯನ್ನು ಅನುಭವಿಸಿ ಊಟ ಮಾಡಬಲ್ಲೆವು.

ಹೀಗೆನ್ನುವಾಗ ನನಗೆ ಸಂಸ್ಕೃತದ ‘ದೀರ್ಘಶಷ್ಕುಲೀಭಕ್ಷಣ ನ್ಯಾಯ’ ಕೂಡ ನೆನಪಾಗುತ್ತದೆ. ಶಷ್ಕುಲೀ ಅಂದರೆ ಚಕ್ಕುಲಿ. ದೊಡ್ಡದಾದ (ಉದ್ದವಾದುದನ್ನು ಸುರುಳಿಸುತ್ತಿದ) ಚಕ್ಕುಲಿ ಯನ್ನು ತಿನ್ನುವಾಗ ಪಂಚೇಂದ್ರಿಯಗಳೂ ಸುಖವನ್ನು ಅನುಭವಿಸುತ್ತವೆ ಎಂದು ಇದರ ತಾತ್ಪರ್ಯ. ಹೇಗೆ? ಚಕ್ಕುಲಿ ದೊಡ್ಡದಾಗಿರುವುದರಿಂದ ತಿಂದು ಮುಗಿಸುವವರೆಗೆ ಕೈಯಲ್ಲಿ ಸ್ವಲ್ಪ ಹೊತ್ತು ಇರುತ್ತದಾದ್ದರಿಂದ ನಮ್ಮ ಸ್ಪರ್ಶೇಂದ್ರಿಯಕ್ಕೆ (ಚರ್ಮ) ಚಕ್ಕುಲಿಯ ಮುಳ್ಳುಗಳ ಹಿತಾನುಭವ ಆಗುತ್ತದೆ.

ಚಕ್ಕುಲಿಯ ರೂಪವನ್ನು ಚಕ್ಷುರಿಂದ್ರಿಯ (ಕಣ್ಣುಗಳ ಜೋಡಿ) ಗ್ರಹಿಸುತ್ತದೆ. ರುಚಿಯನ್ನು ಜಿಹ್ವೇಂದ್ರಿಯವು (ನಾಲಗೆ) ಅನುಭವಿಸುತ್ತದೆ. ಎಣ್ಣೆಯಲ್ಲಿ ಕರಿದದ್ದಾದ್ದರಿಂದ ಮತ್ತು ಹಿಟ್ಟು ಬೆರೆಸುವಾಗ ಸೇರಿದ ಬೆಣ್ಣೆ, ಜೀರಿಗೆ ಮುಂತಾದವುಗಳ ಪರಿಮಳವನ್ನು ಘ್ರಾಣೇಂದ್ರಿ ಯವು (ಮೂಗು) ಅರಿತುಕೊಳ್ಳುತ್ತದೆ.

ಜಗಿಯುವಾಗ ಕರುಂ ಕುರುಂ ಶಬ್ದವನ್ನು ಶ್ರೋತ್ರೇಂದ್ರಿಯ (ಕಿವಿ) ಕೇಳಿಸಿಕೊಳ್ಳುತ್ತದೆ. ಹೀಗೆ ಏಕಕಾಲದಲ್ಲಿ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳೆಂಬ ವಿಷಯಗಳ ಜ್ಞಾನವು ಪಂಚೇಂದ್ರಿ ಯಗಳ ಮೂಲಕ ಆಗುವುದರಿಂದ ಅನೇಕ ವಿಷಯಗಳ ಅನೇಕ ಜ್ಞಾನಗಳು ಏಕಕಾಲದಲ್ಲಿ ಆಗಬಹುದು ಎಂಬುದಕ್ಕೆ ಈ ನ್ಯಾಯವನ್ನು ದೃಷ್ಟಾಂತವಾಗಿ ಉಪಯೋಗಿಸುತ್ತಾರೆ.

ಇಂತಿರುವ ಚಕ್ಕುಲಿಯನ್ನು ಒಳಾಂಗಣದಲ್ಲಿ ತಿನ್ನುವುದಕ್ಕೂ ಹೊರಾಂಗಣದಲ್ಲಿ ತಿನ್ನುವು ದಕ್ಕೂ ಇರುವ ವ್ಯತ್ಯಾಸವನ್ನು ನೀವೀಗ ಸುಲಭವಾಗಿ ಅಂದಾಜಿಸಬಹುದು. ಆದ್ದರಿಂದಲೇ ನನ್ನದೊಂದು ಅಭ್ಯಾಸವಿದೆ. ಇಲ್ಲಿ ನಮ್ಮ ಮನೆಗೆ ಹತ್ತಿರವಿರುವ ಪೊಟೊಮ್ಯಾಕ್ ನದಿಯ ಗ್ರೇಟ್ ಫಾಲ್ಸ್ ಜಲಪಾತ ಪ್ರದೇಶಕ್ಕೋ ಅಥವಾ ತುಸು ದೂರದಲ್ಲಿರುವ ಶೆನ್ಯಾಂಡೋ ವ್ಯಾಲಿ ಮತ್ತು ಲುರೇ ಗುಹೆಗಳನ್ನು ತೋರಿಸಲಿಕ್ಕೋ ಯಾರನ್ನಾದರೂ (ಮನೆಗೆ ಬಂದ ತಿಥಿಗಳನ್ನು, ಮುಖ್ಯವಾಗಿ ಭಾರತದಿಂದ ಬಂದವರನ್ನು) ಕರೆದುಕೊಂಡು ಹೋಗುವಾಗ ಚಕ್ಕುಲಿ ಕೋಡುಬಳೆ ಕಾಂಗ್ರೆಸ್‌ಕಡ್ಲೆ, ಹಲಸಿನಕಾಯಿ/ಬಾಳೆಕಾಯಿ ಚಿಪ್ಸ್‌ನಂಥ ಯಾವು ದಾದ್ರೂ ಕುರುಕಲು ತಿಂಡಿಯನ್ನು ಮುದ್ದಾಂ ಆಗಿ ತಗೊಂಡುಹೋಗುವುದು, ಅಲ್ಲಿ ಪ್ರಕೃತಿಯ ಮಡಿಲಲ್ಲಿ ಖುಲ್ಲಂಖುಲ್ಲಾ ಹೊರಾಂಗಣದಲ್ಲಿ ಅದನ್ನು ಸವಿಯುವುದು. ಅದರಲ್ಲೂ ಲುರೇ ಕೇವ್ಸ್ ನೋಡಿ ಹಿಂದಿರುಗುವಾಗ ಸ್ಕೈಲೈನ್ ಡ್ರೈವ್ ಅಂತ ಇಲ್ಲಿನ ಬ್ಲೂ-ರಿಡ್ಜ್ ಪರ್ವತಶ್ರೇಣಿಯ ನೆತ್ತಿಯ ಮೇಲೊಂದು ರಮ್ಯವಾದ ಮಾರ್ಗವಿದೆ. ಆಚೀಚೆಯ ಕಣಿವೆ ಪ್ರದೇಶವನ್ನು ನೋಡಲಿಕ್ಕೆ ಅಲ್ಲಲ್ಲಿ ವ್ಯೂಪಾಯಿಂಟ್ಸ್ ಇವೆ.

ನಿರ್ದಿಷ್ಟವಾದೊಂದು ವ್ಯೂಪಾಯಿಂಟ್‌ನಲ್ಲಿ ಕಾರು ನಿಲ್ಲಿಸಿ ಕುರುಕಲು ತಿಂಡಿಯ ಭಕ್ಷಣ. ಎರಡು ವರ್ಷಗಳ ಹಿಂದೆ ನಾ.ಸೋಮೇಶ್ವರ ಮತ್ತು ಎಂ.ಎಸ್ ನರಸಿಂಹಮೂರ್ತಿಯ ವರನ್ನು, ಅದಕ್ಕಿಂತ ಹಿಂದೊಮ್ಮೆ ವಿಶ್ವೇಶ್ವರ ಭಟ್, ಮಂಡ್ಯ ರಮೇಶ್ ಮತ್ತು ಹೊರನಾಡು ರಾಮನಾರಾಯಣ ಜೋಯ್ಸರನ್ನು, ಅದಕ್ಕಿಂತ ಹಿಂದೆ ಪ್ರವೀಣ ಗೋಡ್ಖಿಂಡಿಯವರನ್ನು ಕರೆದುಕೊಂಡು ಹೋಗಿದ್ದಾಗ, ನನ್ನ ಅಣ್ಣ-ಅತ್ತಿಗೆ ಮತ್ತವರ ಮಗ-ಸೊಸೆ ಮೊಮ್ಮಕ್ಕಳನ್ನು ಕರೆದುಕೊಂಡು ಹೋಗಿದ್ದಾಗಲೂ, ಈ ಸಂಪ್ರದಾಯವನ್ನು ತಪ್ಪದೇ ಪಾಲಿಸಿದ್ದೇನೆ. ಹೊರಾಂಗಣದಲ್ಲಿ ತಿಂಡಿ-ತಿನಿಸಿನ ರುಚಿ ಹೆಚ್ಚು ಎಂಬ ಥಿಯರಿಯನ್ನು ಅವರಿಗೂ ಬೋಧಿಸಿದ್ದೇನೆ, ಅವರ ಅನುಭವಕ್ಕೂ ತಂದಿದ್ದೇನೆ.

ಇಲ್ಲಿಗೆ ಬಂದ ಹೊಸದರಲ್ಲಿ ನಾವೊಂದಿಷ್ಟು ಕನ್ನಡಿಗರು ಸೇರಿ ಶೆನ್ಯಾಂಡೋ ವ್ಯಾಲಿಯಲ್ಲಿ ಒಮ್ಮೆ ಕ್ಯಾಂಪಿಂಗ್ ಮಾಡಿದ್ದು, ನಾಗೇಶ ಶಿವಸ್ವಾಮಿ ಎಂಬ ಸನ್ಮಿತ್ರ ಅಲ್ಲಿ ‘ನ ಭೂತೋ ನ ಭವಿಷ್ಯತಿ’ ಎಂಬಂತೆ ದೊಡ್ಡದೊಂದು ಬಾಣಲೆ ತುಂಬ ಉಪ್ಪಿಟ್ಟು ತಯಾರಿಸಿದ್ದು, ನಾವು ಗಳು ಅದನ್ನು ಬುಭುಕ್ಷಿತರಾಗಿ ಮುಕ್ಕಿದ್ದು, ಅದರ ರುಚಿ ಈಗಲೂ ಬಾಯಿಯಲ್ಲಿ ನೀರೂ ರೂವುದು... ನೆನಪುಗಳ ಮೆರವಣಿಗೆ. ಅದೇ ನಾಗೇಶ-ಶಾಲಿನಿ ದಂಪತಿಯ ಮನೆ ಯಲ್ಲಿ ಎಷ್ಟೋ ಔತಣಗಳನ್ನು ಭಕ್ಷ್ಯಭೋಜ್ಯಗಳನ್ನು ಚಪ್ಪರಿಸಿದ್ದಿದೆ, ಆದರೆ ಕ್ಯಾಂಪಿಂಗ್ ಉಪ್ಪಿಟ್ಟು ಮಾತ್ರ ಅಷ್ಟೊಂದು ಪರಿಣಾಮಕಾರಿಯಾಗಿ ನೆನಪುಳಿಯಬೇಕಿದ್ದರೆ ‘ಹೊರಾಂಗಣದಲ್ಲಿ ಆಹಾರ ಹೆಚ್ಚು ರುಚಿಕರ’ ಎಂಬುದೇ ಕಾರಣ. ವನಭೋಜನ ಎಂಬ ಸತ್ಸಂಪ್ರದಾಯವನ್ನು ನಮ್ಮ ಪೂರ್ವಜರು ಆರಂಭಿಸಿದ್ದಕ್ಕೂ ಅದೇ ಮುಖ್ಯ ಕಾರಣ!

ಶ್ರೀವತ್ಸ ಜೋಶಿ

View all posts by this author