ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Raghava Sharma Nidle Column: ಬಂಗಾಳದ ಸಾಮಾನ್ಯರಲ್ಲೇಕೆ ಈ ಅವ್ಯಕ್ತ ಭಯ ?

2019ರ ಲೋಕಸಭೆ ಚುನಾವಣೆ ಮತ್ತು 2021ರ ವಿಧಾನಸಭೆ ವೇಳೆ ಪಶ್ಚಿಮ ಬಂಗಾಳ ಪ್ರವಾಸ ಮಾಡಿದ್ದ ನನಗೂ, 2026ರ ಹಾಲಿ ವಿಧಾನಸಭೆ ಚುನಾವಣೆ ಪ್ರವಾಸದಲ್ಲಿ ಕಾಣುತ್ತಿರುವ ಮತದಾರರ ಮೌನ ವಿಭಿನ್ನ ಅನುಭವ ನೀಡುತ್ತಿದೆ. ನಿಜವಾಗಿಯೂ ಇವರ ಮನಸ್ಸಿನೊಳಗೇನಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜನರು ತಮ್ಮ ರಾಜಕೀಯ ನಿಲುವು-ಒಲವುಗಳನ್ನು ಪ್ರಕಟ ಪಡಿಸಲು ಹಿಂಜರಿಯುತ್ತಿರುವ ದೃಶ್ಯ ಕಾಣುತ್ತಿದೆ.

ಜನಪಥ

ರಾಜಕೀಯ ಪ್ರಭಾವವಿಲ್ಲದ ಸಾಮಾನ್ಯ ಮತದಾರರಿಗೆ ತಮ್ಮ ಅನಿಸಿಕೆ, ಒಲವು-ನಿಲುವು, ಕಷ್ಟ-ನಷ್ಟಗಳನ್ನು ಹಂಚಿಕೊಳ್ಳಬೇಕೆಂದು ಅನಿಸಿದರೂ, ಅವ್ಯಕ್ತ ಭಯ ಅವರನ್ನು ಬಿಡುತ್ತಿಲ್ಲ. ಇಂಥಾ ಪಾರ್ಟಿಯನ್ನು ಬೆಂಬಲಿಸುತ್ತೇನೆ ಎನ್ನುವುದು ವಿರೋಧಿ ಪಕ್ಷಗಳಿಗೆ ಗೊತ್ತಾದರೆ ಸಮಸ್ಯೆ ಆದೀತು ಎಂಬ ಚಿಂತೆ ಅವರನ್ನು ಕಾಡುತ್ತದೆ.

ಏಪ್ರಿಲ್ 23ರಂದು ಪಶ್ಚಿಮ ಬಂಗಾಳ ಮೊದಲ ಹಂತದ ಮತದಾನಕ್ಕೆ ಸಾಕ್ಷಿಯಾಗುತ್ತಿದೆ. 2011ರಲ್ಲಿ ಎಡಪಕ್ಷಗಳ 34 ವರ್ಷದ ಆಡಳಿತವನ್ನು ಕೊನೆಗೊಳಿಸಿ, ಬಂಗಾಳದಲ್ಲಿ ಪೊರಿಬೊರ್ತನ್‌ಗೆ ಕಾರಣ ರಾಗಿದ್ದ ಟಿಎಂಸಿ ನಾಯಕಿ, ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ನಾಲ್ಕನೇ ಬಾರಿಗೆ ನಮಗೆ ಅವಕಾಶ ನೀಡಿ ಎಂದು ಮತ ಯಾಚಿಸುತ್ತಿದ್ದಾರೆ.

ಸುದೀರ್ಘ 15 ವರ್ಷಗಳ ಆಡಳಿತದ ನಂತರ ಬಂಗಾಳವು ರಾಜಕೀಯ ಪರಿವರ್ತನೆಗೆ ತೆರೆದು ಕೊಂಡು ಬಿಜೆಪಿಗೆ ಅವಕಾಶ ನೀಡುವುದೋ ಅಥವಾ ಯಥಾಸ್ಥಿತಿ ಮುಂದುವರಿಸುವುದೋ ಎಂಬ ಬಗ್ಗೆ ರಾಜಕೀಯ ಪಂಡಿತರಿಗೆ ಇನ್ನೂ ಖಚಿತತೆ ಸಿಕ್ಕಿದಂತೆ ಕಾಣುತ್ತಿಲ್ಲ.

2019ರ ಲೋಕಸಭೆ ಚುನಾವಣೆ ಮತ್ತು 2021ರ ವಿಧಾನಸಭೆ ವೇಳೆ ಪಶ್ಚಿಮ ಬಂಗಾಳ ಪ್ರವಾಸ ಮಾಡಿದ್ದ ನನಗೂ, 2026ರ ಹಾಲಿ ವಿಧಾನಸಭೆ ಚುನಾವಣೆ ಪ್ರವಾಸದಲ್ಲಿ ಕಾಣುತ್ತಿರುವ ಮತದಾರ ರ ಮೌನ ವಿಭಿನ್ನ ಅನುಭವ ನೀಡುತ್ತಿದೆ. ನಿಜವಾಗಿಯೂ ಇವರ ಮನಸ್ಸಿನೊಳಗೇನಿದೆ ಎನ್ನುವು ದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜನರು ತಮ್ಮ ರಾಜಕೀಯ ನಿಲುವು-ಒಲವು ಗಳನ್ನು ಪ್ರಕಟಪಡಿಸಲು ಹಿಂಜರಿಯುತ್ತಿರುವ ದೃಶ್ಯ ಕಾಣುತ್ತಿದೆ.

ದೀದಿ ಸರಕಾರ ಚೆನ್ನಾಗಿದೆಯೇ ಅಥವಾ ಈ ಸಲ ಸರಕಾರ ಬದಲಾಗುವುದೇ, ಶಾಸಕರು, ಮಂತ್ರಿಗಳು ಕೆಲಸ ಮಾಡಿದ್ದಾರಾ, ನಿಮಗೆ ಯಾರ ಸರಕಾರ ಬೇಕು ಎಂದೆಲ್ಲಾ ಕೇಳಿದರೆ ಅನೇಕರು ಸ್ಪಷ್ಟ ಉತ್ತರ ನೀಡುವುದಿಲ್ಲ. ರಾಜಕೀಯದಲ್ಲಿ ಆಸಕ್ತಿ ಇಲ್ಲ, ನಮಗೆ ಗೊತ್ತಿಲ್ಲ, ಬಿಜೆಪಿ-ಟಿಎಂಸಿ ಎರಡೂ ಚೆನ್ನಾಗಿದೆ, ನಮ್ಮಲ್ಲಿ ಯಾಕೆ ಕೇಳುತ್ತೀರಿ, ಈ ಫಾಲ್ತು ರಾಜಕೀಯದಲ್ಲಿ ನಾವು ಸಿಕ್ಕಿ ಹಾಕಿಕೊಳ್ಳಲು ಬಯಸುವುದಿಲ್ಲ, ಒಳ್ಳೆ ಕೆಲಸ ಮಾಡುವವರು ಗೆಲ್ಲುತ್ತಾರೆ ಎಂಬೆಲ್ಲಾ ತಲೆಕೆರೆದುಕೊಳ್ಳುವಂತಹ ಉತ್ತರ ನೀಡುತ್ತಾರೆ.

ಟಿಎಂಸಿ ಬೆಂಬಲಿಸುವ ಗ್ರಾಮೀಣ ಮಹಿಳೆಯರು ಲಕ್ಷ್ಮೀ ಭಂಡಾರ್ ಯೋಜನೆಯ ರು.1500 ಹಣ ಖಾತೆಗೆ ಬರುತ್ತಿದೆ ಎಂದು ಖುಷಿಯಲ್ಲಿ ಹೇಳಿದರೆ, ಪರಿವರ್ತನೆ ಬಯಸುವ ಹೆಣ್ಣುಮಕ್ಕಳು, ಮಧ್ಯ ವಯಸ್ಸಿನ ಮಹಿಳೆಯರು, ವೃದ್ಧೆಯರು ತಮ್ಮ ಮನದಾಳ ಮಾಧ್ಯಮದ ಮುಂದಿಡಲು ಹೆದರುತ್ತಾರೆ.

ಇದನ್ನೂ ಓದಿ: Raghava Sharma Nidle Column: ನ್ಯಾ.ವರ್ಮಾ ರಾಜೀನಾಮೆ: ಆರೋಪಗಳೂ ಸಮಾಧಿ ಸೇರುವವೇ ?

ದೂರದ ಕರ್ನಾಟಕದಿಂದ ಬಂದಿದ್ದಾರೆ ಎಂದು ಕೆಲವರು ಚೆನ್ನಾಗಿ ಮಾತನಾಡಿದರೂ, ಚುನಾವಣೆ ಬಗ್ಗೆ ಏನು ಹೇಳುತ್ತೀರಿ ಎಂದ ಕೂಡಲೇ ಸುಮ್ಮನಾಗುತ್ತಾರೆ. ಧೈರ್ಯದಿಂದ ಅಭಿಪ್ರಾಯ ನೀಡುವ ಕೆಲ ಮಹಿಳೆಯರು ಹಾಗೂ ಯುವತಿಯರ ಬಳಿ, ನಿಮ್ಮ ಫೋಟೊ ತೆಗೆಯಬಹುದೇ ಎಂದು ಕೇಳಿದರೆ, ಅದೊಂದು ಬೇಡವೇ ಬೇಡ ಎಂದು ಕೈ ಮುಗಿಯುತ್ತಾರೆ.

ಕರ್ನಾಟಕದ ಪತ್ರಿಕೆಯಲ್ಲಷ್ಟೇ ಪ್ರಕಟವಾಗುತ್ತದೆ, ಭಯ ಏಕೆ ಎಂದು ಕೇಳಿದರೆ, ಈಗ ಸೋಷಿಯಲ್ ಮೀಡಿಯಾದಲ್ಲಿ ಎಲ್ಲವೂ ಬಂದು ಬಿಡುತ್ತದೆ. ನಾವು ನೀಡಿದ ಅನಿಸಿಕೆ ಫೋಟೊ ಜತೆಗೆ ಪ್ರಕಟ ವಾದರೆ ಖಂಡಿತ ಇಲ್ಲಿ ಸ್ಥಳೀಯರಿಗೆ ಗೊತ್ತಾಗುತ್ತದೆ. ಅವರು ನಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಯಾಕೆ ಬೇಕು ಸರ್ ಈ ಗಲಾಟೆ, ಗದ್ದಲ ಎಂದು ತಮ್ಮ ಅಸಹಾಯಕತನ ತೋಡಿಕೊಳ್ಳುತ್ತಾರೆ.

ಮತ್ತೆ ಕೆಲವರಿದ್ದಾರೆ - ಕೇಳಿದ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡುವ ಬದಲು ಮತ್ತಿನ್ನೇನೋ ತಿರುವು ಮುರುವು ಮಾಡಿ ಹೇಳುತ್ತಾರೆ. ಆಯ್ತು ವಿಷಯಕ್ಕೆ ಬನ್ನಿ ಎಂದು ಕೊನೆಗೆ, ಈ ಬಾರಿ ದೀದಿಯೋ ದಾದನೋ ಅದನ್ನು ಹೇಳಿ ಎಂದರೆ, ಅದು ಮೇ 4ಕ್ಕೆ ಗೊತ್ತಾಗುತ್ತದೆ ಎಂದು ಸುಮ್ಮನಾಗುತ್ತಾರೆ.

ಮತದಾರರ ಈ ಹಿಂಜರಿಕೆ, ಅವ್ಯಕ್ತ ಭಯ, ನಿಮ್ಮ ಸಹವಾಸವೇ ಬೇಡ, ನಮ್ಮನ್ನು ಬಿಟ್ಟು ಬಿಡಿ ಎಂಬ ವರ್ತನೆಗಳು ಅವರ ಮನಸ್ಸಿನ ಆಳದಲ್ಲಿ ಹುದುಗಿರುವ ಆತಂಕ ಅಥವಾ ಭೀತಿಯನ್ನೇ ಬಿಂಬಿಸುವ ಸಂಶಯ ಮೂಡಿಸುತ್ತದೆ. ಭವಿಷ್ಯದ ಅನಿಶ್ಚಿತತೆಯೂ ಅವರನ್ನು ಕಾಡುತ್ತಿದೆಯೇನೋ ಎಂಬ ಪ್ರಶ್ನೆ ಕಾಡುತ್ತದೆ.

2021ರ ವಿಧಾನಸಭೆ ಚುನಾವಣೆ ಪೂರ್ವ ಹಾಗೂ ಚುನಾವಣೋತ್ತರ ದಿನಗಳಲ್ಲಿ ಬಂಗಾಳ ಹತ್ತಾರು ರಾಜಕೀಯ ಸಂಘರ್ಷ, ಹಿಂಸಾಚಾರ, ಹಲ್ಲೆ, ಕೊಲೆ ಪ್ರಕರಣಗಳಿಗೆ ಸಾಕ್ಷಿಯಾಗಿತ್ತು. ಟಿಎಂಸಿ ವಿರೋಧಿ ಸುವ ಪಕ್ಷಗಳ ಕಾರ್ಯಕರ್ತರ ಹತ್ಯೆಗಳಾದವು. ಹಿಂದೆ ಎಡಪಕ್ಷಗಳು ಅಧಿಕಾರದಲ್ಲಿದ್ದಾಗ ಚಾಲ್ತಿ ಯಲ್ಲಿದ್ದ ಹಿಂಸಾಚಾರ-ಬಡಿದಾಟಗಳನ್ನು ಟಿಎಂಸಿ ಕೂಡ ಮುಂದುವರಿಸಿತು ಮತ್ತು ಬಂಗಾಳದ ರಾಜಕೀಯ ಭೂದೃಶ್ಯದಲ್ಲಿ ಬಿಜೆಪಿ ಕಾಣಿಸಿಕೊಳ್ಳಲು ಶುರುವಾದಲ್ಲಿಂದ ಬಿಜೆಪಿ ಕಾರ್ಯಕರ್ತರು, ಅವರ ಕುಟುಂಬಗಳು ಕೊಲೆ, ಅತ್ಯಾಚಾರ, ಹಗಳಿಗೆ ತುತ್ತಾಗುತ್ತಿವೆ.

ಇಂಥಾ ಘಟನಾವಳಿಗಳು ಸಂಚಲನ ಸೃಷ್ಟಿಸಿ, ಭಯದ ವಾತಾವರಣ ಹೆಚ್ಚಿಸುವುದರಿಂದ ಪಟ್ಟಣ, ಗ್ರಾಮೀಣ ಭಾಗದ ತಟಸ್ಥ ಮತದಾರರು ರಾಜಕೀಯದ ಬಗ್ಗೆ ಮಾತನಾಡಲು ಹಿಂದೇಟು ಹಾಕು ತ್ತಾರೆ. 2021ರಲ್ಲಿ ಟಿಎಂಸಿ ಚುನಾವಣೆ ಗೆಲ್ಲುತ್ತಿದ್ದಂತೆಯೇ ಬಿಜೆಪಿ ಬೆಂಬಲಿಸಿದ್ದ ಕಾರ್ಯಕರ್ತರು, ನೂರಾರು ಹೆಣ್ಣುಮಕ್ಕಳು ಪಕ್ಕದ ಅಸ್ಸಾಂಗೆ ವಲಸೆ ಹೋದರು. ಟಿಎಂಸಿ ಗೂಂಡಾಗಳು ನಮ್ಮನ್ನು ಕೊಂದು ಬಿಡುತ್ತಾರೆ ಎಂದೇ ಅವರೆಲ್ಲ ಊರು ಬಿಟ್ಟರು.

ಅಸ್ಸಾಂ ಬಿಜೆಪಿ ಘಟಕದಿಂದ ನಿರಾಶ್ರಿತ ಶಿಬಿರ ನಿರ್ಮಾಣ ಮಾಡಿ, ಅವರನ್ನು ನೋಡಿ ಕೊಳ್ಳಲಾ ಯಿತು. ಈಗಲೂ ಕೂಡ ಬಿಜೆಪಿ ಬೆಂಬಲಿಸುವ ಅನೇಕರಿಗೆ ಈ ಸಲವೂ ಟಿಎಂಸಿ ಚುನಾವಣೆ ಗೆದ್ದರೆ ನಾವು ರಾಜ್ಯ ಬಿಡಬೇಕಾದೀತು. ಇಲ್ಲಿರುವುದು ಸುರಕ್ಷಿತವಲ್ಲ ಎಂಬ ಆತಂಕವಿದೆ.

ಆದರೆ, 2021ಕ್ಕೆ ಹೋಲಿಸಿದರೆ 2026ರ ವೇಳೆಗೆ ಇಲ್ಲಿ ಬಿಜೆಪಿ ತನ್ನ ರಾಜಕೀಯ ನೆಲೆ ಬಿಗಿಗೊಳಿಸಿ ರುವುದರಿಂದ 5 ವರ್ಷಗಳ ಹಿಂದೆ ಇದ್ದಷ್ಟು ಭಯ ಈಗ ಇಲ್ಲ ಎಂದು ವಿವಿಧ ಜಿಲ್ಲೆಗಳಲ್ಲಿ ಸಿಕ್ಕ ಬಿಜೆಪಿ ಮುಖಂಡರು ಹೇಳುತ್ತಾರೆ. ಈ ನಡುವೆ ಟಿಎಂಸಿ, ಕಾಂಗ್ರೆಸ್, ಸಿಪಿಐ ಬೆಂಬಲಿಸುವ ಇಲ್ಲಿನ ಬಹುಪಾಲು ಮುಸ್ಲಿಂ ಮತದಾರರಿಗೆ ಬಿಜೆಪಿ ಅಧಿಕಾರಕ್ಕೆ ಬರಬಹುದೇ ಎಂಬ ಒಳ ಆತಂಕವಿದೆ.

ನಮ್ಮನ್ನು ಬಾಂಗ್ಲಾದೇಶಿಯರು, ಪಾಕಿಸ್ತಾನಿಗಳು ಎಂದು ಬಿಂಬಿಸುವ ಹಿಂದುತ್ವವಾದಿ ಬಿಜೆಪಿ ಯವರು ಮುಂದೆ ನಿಶ್ಚಿಂತೆಯಿಂದಿರಲು ಬಿಡುತ್ತಾರಾ ಎನ್ನುವುದು ಕೆಲವರ ಪ್ರಶ್ನೆ. ಹಿಂಸಾಚಾರ ಎನ್ನುವುದು ಇಲ್ಲಿನ ರಾಜಕೀಯದೊಂದಿಗೆ ಆಳವಾಗಿ ಜೋಡಿಸಿಕೊಂಡುಬಿಟ್ಟಿದೆ ಎನ್ನುವುದಕ್ಕೆ ಇತಿಹಾಸವೇ ಉದಾಹರಣೆ.

ಕ್ರಾಂತಿಕಾರಿ ಚಿಂತಕರು, ಹೋರಾಟಗಾರರು ಹುಟ್ಟಿದ ಈ ನೆಲದಲ್ಲಿ ಉತ್ತಮ ಉದ್ದೇಶಕ್ಕಾಗಿ ಹಿಂಸಾ ಚಾರ ನಡೆದರೆ ತಪ್ಪಲ್ಲ ಎಂದೂ ವಾದಿಸುವವರಿದ್ದಾರೆ. 2006-07ರಲ್ಲಿ ನಡೆದ ನಂದಿಗ್ರಾಮ, ಸಿಂಗೂರು ಜಮೀನು ಹೋರಾಟಗಳ ನಂತರ ಟಿಎಂಸಿ-ಎಡಪಕ್ಷಗಳ ನಡುವೆ ಕಿತ್ತಾಟಗಳು ತಾರಕ ಕ್ಕೇರಿದವು.

2011ರ ಚುನಾವಣೆ ಸಂದರ್ಭದಲ್ಲಿ ಸುಮಾರು 25 ಮಂದಿ ಹಿಂಸಾಚಾರದಲ್ಲಿ ಸತ್ತರು. ಲೈಂಗಿಕ ದೌರ್ಜನ್ಯ ಮತ್ತು ಹತ್ತಾರು ಕೊಲೆ, ಅತ್ಯಾಚಾರ ಬೆದರಿಕೆ ಪ್ರಕರಣಗಳು ದಾಖಲಾದವು. ಸಿಪಿಎಂ ನಾಯಕರು ಬಿಡುಗಡೆ ಮಾಡಿದ ಕಿರುಪುಸ್ತಕದ ಪ್ರಕಾರ, 2011ರ ಮೇ ಇಂದ 2016ರ ಜುಲೈ ನಡುವೆ 183 ಎಡಪಕ್ಷಗಳ ಕಾರ್ಯಕರ್ತರು ಹತ್ಯೆಗೀಡಾಗಿದ್ದರು.

2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲೂ ಬಂಗಾಳದಲ್ಲಿ ಅತಿ ಹೆಚ್ಚು ಹಿಂಸಾಚಾರ ಪ್ರಕರಣಗಳು ದಾಖಲಾದವು. 14ಕ್ಕಿಂತಲೂ ಹೆಚ್ಚು ಮಂದಿ ಸಾವಿಗೀಡಾಗಿ, ರಾಜಕೀಯ ಪಕ್ಷಗಳ 1300ರಷ್ಟು ಕಾರ್ಯಕರ್ತರು ಗಾಯಗೊಂಡರು. 2013 ಮತ್ತು 2016ರ ಪಂಚಾಯತ್ ಚುನಾವಣೆ ಗಳೂ ಹಿಂಸಾಚಾರಗಳಿಂದ ಹೊರತಾಗಿರಲಿಲ್ಲ.

2018ರ ಪಂಚಾಯತ್ ಚುನಾವಣೆಯಲ್ಲಿ ಭಯ-ಭೀತಿಯ ವಾತಾವರಣ ಎಷ್ಟಿತ್ತೆಂದರೆ ಶೇ.34ರಷ್ಟು ಸ್ಥಾನಗಳಿಗೆ ಸ್ಪರ್ಧಿಸಲು ಅಭ್ಯರ್ಥಿಗಳು ಹೆದರಿದ್ದರಿಂದ ಅಷ್ಟೂ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಅವುಗಳಲ್ಲಿ ಹೆಚ್ಚಿನವುಗಳನ್ನು ಟಿಎಂಸಿ ಗೆದ್ದಿತ್ತು. ಚುನಾವಣೆ ಪೂರ್ವ ಮತ್ತು ಚುನಾವಣೋತ್ತರದ ಹಿಂಸಾಚಾರದಲ್ಲಿ ಸುಮಾರು 75 ಸಾವುಗಳು ವರದಿಯಾದವು. ಅವರಲ್ಲಿ 13 ಮಂದಿ ಮತದಾನದಿಂದ ದಿನದಂದೇ ಕೊಲ್ಲಲ್ಪಟ್ಟರು.

ವಿವಿಧ ಜಿಲ್ಲೆಗಳಲ್ಲಿ ಕಚ್ಚಾ ಬಾಂಬ್ ದಾಳಿ ಮತ್ತು ಬೂತ್ ರಿಗ್ಗಿಂಗೂಗಳು 2018ರ ಪಂಚಾಯತ್ ಚುನಾವಣೆ ಸಾಕ್ಷಿಯಾಗಿತ್ತು. ಇದೇ ರೀತಿ 2019ರ ಲೋಕಸಭೆ ಚುನಾವಣೆ, 2021ರ ವಿಧಾನಸಭೆ ಚುನಾವಣೆ ಮತ್ತು 2023ರ ಪಂಚಾಯತ್ ಚುನಾವಣೆಗಳ ಸಂದರ್ಭದಲ್ಲೂ ಅಪಾರ ಸಾವು-ನೋವು ಉಂಟಾಯಿತು.

2021 ಮತ್ತು 2024ರ ಲೋಕಸಭೆ ಚುನಾವಣೆಗಳಲ್ಲಿ ಕೇಂದ್ರೀಯ ಮೀಸಲು ಪಡೆಗಳನ್ನು ದೊಡ್ಡ ಸಂಖ್ಯೆಯಲ್ಲಿ ನಿಯೋಜಿಸಿದರೂ, ಹಿಂಸಾಚಾರ ನಡೆಯುತ್ತಲೇ ಇದ್ದವು. ಟಿಎಂಸಿಯ ಕೆಲ ಕಾರ್ಯ ಕರ್ತರಂತೂ ಮೀಸಲು ಪಡೆ ಯೋಧರ ಮೇಲೆ ದಾಳಿ ಮಾಡಲು ಮುಂದಾಗ ಘಟನೆಗಳು ವರದಿ ಯಾದವು.

2026ರ ಮತದಾನದ ಸಂದರ್ಭದಲ್ಲಿ ಹಿಂಸೆ, ಹಲ್ಲೆ, ದಬ್ಬಾಳಿಕೆ ನಡೆಯದೆ, ಜನರು ಶಾಂತಿಯಿಂದ ಯಾವುದೇ ಭಯವಿಲ್ಲದೆ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಕೇಂದ್ರ ಸರಕಾರ 2 ಲಕ್ಷಕ್ಕಿಂತಲೂ ಹೆಚ್ಚು ಯೋಧರನ್ನು ಬಂಗಾಳದಲ್ಲಿ ನಿಯೋಜಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ, 23 ಮತ್ತು 29ರ ಮತದಾನದಂದು ಈ ಯೋಧರೇ ವೋಟಿಂಗ್ ಬೂತ್‌ಗಳ ಬಾಸ್‌ಗಳಾಗಲಿದ್ದಾರೆ!

ಕೇಂದ್ರೀಯ ಪಡೆಯ ಸುಮಾರು 1.92 ಲಕ್ಷ ಸೇನಾ ಟ್ರೂಪ್ ಗಳನ್ನು ಬೂತ್‌ಗಳಿಗೆ ನಿಯೋಜಿಸಿರುವ ಕೇಂದ್ರ ಚುನಾವಣಾ ಆಯೋಗ, ಬೂತ್‌ಗಳ ಪಾವಿತ್ರ್ಯತೆ ಕಾಪಾಡಲೆಂದೇ ಈ ಕ್ರಮ ಕೈಗೊಂಡಿದೆ. ಮತದಾನಕ್ಕೆಂದು ಬರುವ ಮತದಾರನ ಮೇಲೆ ಬಾಹ್ಯ ಶಕ್ತಿಗಳ ಪ್ರಭಾವ ಬೀರದಂತೆ ಯೋಧರು ನೋಡಿಕೊಳ್ಳಲಿದ್ದಾರೆ.

ಬಿಜೆಪಿಗೆ ವೋಟು ಹಾಕುವ ವ್ಯಕ್ತಿ ಯಾರೆಂದು ಟಿಎಂಸಿ ಮುಖಂಡರು, ಕಾರ್ಯಕರ್ತರಿಗೆ ಮೊದಲೇ ತಿಳಿದಿರುತ್ತಿತ್ತು. ಹೀಗಾಗಿ, ಎಷ್ಟೋ ಮಂದಿಗೆ ಮತದಾನ ಮಾಡಲೇ ಅವರು ಅವಕಾಶ ನೀಡುತ್ತಿರ ಲಿಲ್ಲ ಮತ್ತು ಬೂತ್‌ಗೆ ಕಾಲಿಡದಂತೆ ನೋಡಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಹೀಗೆ ಆಗದು. ಜನ ಭಯ ಬಿಟ್ಟು ಮತದಾನ ಮಾಡಬಹುದು ಎನ್ನುವುದು ಕೊಲ್ಕತ್ತದಲ್ಲಿ ಸಿಕ್ಕ ಖಾಸಗಿ ಕಂಪನಿ ಉದ್ಯೋಗಿ ಮನೋಜ್ ಘೋಷ್ ಅನಿಸಿಕೆ.

ದೇಶದ ಇತರೆ ರಾಜ್ಯಗಳಲ್ಲಿ ಜನರು ಚುನಾವಣೆ ಸಂದರ್ಭಗಳಲ್ಲಿ ಮನಸ್ಸು ಬಿಚ್ಚಿ ಮಾತನಾಡುವು ದನ್ನು ನೋಡುತ್ತೇವೆ. ಬಿಹಾರ, ಉತ್ತರ ಪ್ರದೇಶದಲ್ಲಂತೂ ನಾವು ಮಾತು ಆರಂಭಿಸುವ ಮುನ್ನವೇ ಜನರೇ ರಾಜಕೀಯ ಚಿತ್ರಣವನ್ನು ನಿಮ್ಮ ಮುಂದಿಟ್ಟಿರುತ್ತಾರೆ. ಆದರೆ, ಬಂಗಾಳ ಹಾಗಿಲ್ಲ.

ರಾಜಕೀಯ ಪ್ರಭಾವವಿಲ್ಲದ ಸಾಮಾನ್ಯ ಮತದಾರರಿಗೆ ತಮ್ಮ ಅನಿಸಿಕೆ, ಒಲವು-ನಿಲುವು, ಕಷ್ಟ-ನಷ್ಟಗಳನ್ನು ಹಂಚಿಕೊಳ್ಳಬೇಕೆಂದು ಅನಿಸಿದರೂ, ಅವ್ಯಕ್ತ ಭಯ ಅವರನ್ನು ಬಿಡುತ್ತಿಲ್ಲ. ಇಂಥಾ ಪಾರ್ಟಿಯನ್ನು ಬೆಂಬಲಿಸುತ್ತೇನೆ ಎನ್ನುವುದು ವಿರೋಿ ಪಕ್ಷಗಳಿಗೆ ಗೊತ್ತಾದರೆ ಸಮಸ್ಯೆ ಆದೀತು ಎಂಬ ಚಿಂತೆ ಅವರನ್ನು ಕಾಡುತ್ತದೆ. ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರು ಮತ್ತು ಅವರನ್ನು ಬೆಂಬಲಿಸುವ ಮತದಾರರಲ್ಲಿ ಮಾತನಾಡಲು ಯಾವುದೇ ಹಿಂಜರಿಕೆ ಕಾಣುವುದಿಲ್ಲ.

ಆದರೆ, ಬಿಜೆಪಿ ಕಾರ್ಯಕರ್ತರು ಮಾತನಾಡಿದರೂ, ಮತ ಹಾಕಲು ಮನಸ್ಸು ಮಾಡಿರುವ ಮತದಾರರದ್ದು ಮಾತ್ರ ಮೌನವೇ ಉತ್ತರ. ಟಿಎಂಸಿ ಅಧಿಕಾರದಲ್ಲಿದ್ದು, ಪೊಲೀಸರು ಕೂಡ ಅವರೊಂದಿಗಿದ್ದಾರೆ ಎಂಬ ಭಯವೂ ಕೂಡ ಈ ಮೌನಕ್ಕೆ ಕಾರಣ. ಇಂಥಾ ಸೈಲೆಂಟ್ ವೋಟರ್‌ ಗಳು ಹೆಚ್ಚಿರುವುದರಿಂದಲೇ ಕಳೆದ ಸಲದ 77 ಸೀಟುಗಳಿಗಿಂತ ಹೆಚ್ಚನ್ನು ಬಿಜೆಪಿ ಗೆಲ್ಲಬಹುದು ಎಂದು ಬಹುತೇಕ ಮಂದಿ ಹೇಳುತ್ತಾರೆ.

ಆದರೆ, 15 ವರ್ಷಗಳ ಆಡಳಿತದ ನಂತರ ವಿರೋಧಿ ಅಲೆ ಸೃಷ್ಟಿಯಾಗಿರುವ ಮಧ್ಯೆಯೂ ಮಮತಾ ಬ್ಯಾನರ್ಜಿ ತಕ್ಕಮಟ್ಟಿಗೆ ಜನಪ್ರಿಯತೆ ಉಳಿಸಿಕೊಂಡಿರುವುದರಿಂದ ಗೆಲುವಿನ ದಡ ಸೇರುವವರು ಯಾರು ಎಂಬ ಖಚಿತತೆ ಸಿಗುತ್ತಿಲ್ಲ. ಅದೇ ಕಾರಣಕ್ಕೇ, ಗ್ರಾಮೀಣ ಭಾಗದ ಬಹುಪಾಲು ಮಂದಿ ಬಳಿ ಮಾತಾಡಿದಾಗ, ಕೋಯಿ ಕ್ಲಿಯರ್ ನಹೀ ಹೇ ದಾದಾ. 50:50 ಚಲ್ ರಹಾ ಹೇ ಎಂಬ ಉತ್ತರವೇ ಸಿಗುತ್ತದೆ.

ಕೆ. ರಾಘವ ಶರ್ಮ ನಿಡ್ಲೆ

View all posts by this author