ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ganesh Bhat Column: ಭಾರತವು ರಕ್ಷಣಾ ಕ್ಷೇತ್ರದಲ್ಲಿ ಏಕೆ ಸ್ವಾವಲಂಬಿಯಾಗಬೇಕು ?

ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್‌ರವರು ಮಾತನಾಡುತ್ತಾ, ‘ಯುದ್ಧದ ಪರಿಣಾಮವು ಎಲ್ಲೆಡೆ ಕಾಣಿಸಿಕೊಳ್ಳುತ್ತಿದೆ. ರಕ್ಷಣಾ ಕ್ಷೇತ್ರದಲ್ಲಿನ ಸ್ವಾವಲಂಬನೆಯೇ ಅಡಚಣೆಯನ್ನು ತಪ್ಪಿಸಿಕೊಳ್ಳುವುದಕ್ಕಿರುವ ಏಕೈಕ ಮಾರ್ಗ’ ಎಂದಿದ್ದಾರೆ. 2014ರವರೆಗೂ ಭಾರತವು ಸುಮಾರು ಶೇ.70ರಷ್ಟು ರಕ್ಷಣಾ ಉಪಕರಣಗಳನ್ನು ವಿದೇಶ ಗಳಿಂದಲೇ ತರಿಸಿಕೊಳ್ಳುತ್ತಿತ್ತು.

ಯುದ್ದಕಾಂಡ

ಗಣೇಶ್‌ ಭಟ್‌, ವಾರಣಾಸಿ

ವಿಶ್ವದ ಯಾವುದೇ ವಾಯುರಕ್ಷಣಾ ವ್ಯವಸ್ಥೆಗಳಿಂದಲೂ ತಡೆಯಲಾಗದ ಏಕೈಕ ಕ್ಷಿಪಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ನಮ್ಮ ‘ಬ್ರಹ್ಮೋಸ್’. ಭಾರತ ಹಾಗೂ ರಷ್ಯಾ ಜಂಟಿಯಾಗಿ ನಿರ್ಮಿಸಿದ ಈ ಕ್ಷಿಪಣಿ, ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯ ವೇಳೆ ಪಾಕಿಸ್ತಾನದ ಹಲವು ವಾಯುಸೇನಾ ನೆಲೆಗಳನ್ನು ಪುಡಿಗಟ್ಟಿ, ಶಸ್ತ್ರಾಸ್ತ್ರ ಸಂಗ್ರಹಾಗಾರಕ್ಕೂ ಭಾರಿ ಹಾನಿಯನ್ನುಂಟುಮಾಡಿತು.

ಎರಡನೇ ಮಹಾಯುದ್ಧವು ಮುಗಿದಾಗ, ‘ಹೆಚ್ಚು ಪ್ರಬುದ್ಧಗೊಂಡ ತಲೆಮಾರುಗಳು ಯುದ್ಧದಲ್ಲಿ ತೊಡಗಲಾರವು’ ಎಂದು ಭಾವಿಸಲಾಗಿತ್ತು. ಆದರೆ ನಂತರವೂ ಯುದ್ಧಸರಣಿ ಮುಂದುವರಿದಿದ್ದನ್ನು ನೋಡಿದಾಗ, ‘ಇತಿಹಾಸದಲ್ಲಿ ಶಾಂತಿ ಎನ್ನುವುದು ಯುದ್ಧಗಳ ನಡುವಿನ ಅಂತರದಲ್ಲಿ ಚಿಮ್ಮುವ ಸೆಲೆ ಎನ್ನುವ ಮಟ್ಟಿಗೆ ಸೀಮಿತವಾಗಿದೆಯೇ?’ ಎಂಬ ಪ್ರಶ್ನೆ ಮೂಡುತ್ತದೆ. ಹೀಗಾಗಿ ಶಾಂತಿಯ ಅವಧಿಯು ಕೇವಲ ಮರುಸಜ್ಜುಗೊಳಿಸುವಿಕೆ ಮತ್ತು ಮುಂದಿನ ಯುದ್ಧಕ್ಕಾಗಿನ ‘ತಯಾರಿ ಅವಧಿ’ಯಂತೆ ಭಾಸವಾಗುತ್ತದೆ!

‘ನಿಮಗೆ ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ’ ಎನ್ನುವ ರೋಮನ್ ಗಾದೆಯು ಜಗತ್ತು ಯುದ್ಧವನ್ನು ಎಷ್ಟು ಅನಿವಾರ್ಯವೆಂದು ಭಾವಿಸಿದೆ ಎಂಬುದನ್ನು ಸೂಚಿಸುತ್ತದೆ. ಹೀಗಾಗಿ, ‘ಬಂದೂಕಿನ ನಳಿಗೆಯ ತುದಿಯಲ್ಲಿ ಗುಬ್ಬಚ್ಚಿಯು ಗೂಡು ಕಟ್ಟಿಕೊಳ್ಳಲಿ’ ಎಂಬ ಕವಿಯ ಆಶಯವು ಇಂದಿನ ದಿನಗಳಲ್ಲಿ ಕೇವಲ ಸಿನಿಕತನದಂತೆ ಭಾಸವಾಗುತ್ತದೆ.

ಪಾಕಿಸ್ತಾನ, ಚೀನಾಗಳಂಥ ನೆರೆಹೊರೆಯನ್ನು ಹೊಂದಿರುವ ಭಾರತಕ್ಕೆ, ತನ್ನ ಗಡಿಗಳ ರಕ್ಷಣೆಗೆ ಯುದ್ಧಸನ್ನದ್ಧವಾಗಿ ನಿಲ್ಲದೆ ಬೇರೆ ದಾರಿಯಿಲ್ಲ. ರಕ್ಷಣೆಯ ವಿಷಯದಲ್ಲಿ ಪರರನ್ನು ನೆಚ್ಚಿದರೆ ಏನಾಗುತ್ತದೆ ಎಂಬುದಕ್ಕೆ ಪಾಕಿಸ್ತಾನ, ವೆನಿಜುವೆಲಾ, ಇರಾನ್‌ನಂಥ ದೇಶಗಳು ಅಳವಡಿಸಿಕೊಂಡ, ‘ಎಚ್‌ಕ್ಯು-9ಬಿ’ ಎಂಬ ಚೀನಾ ನಿರ್ಮಿತ ವಾಯುರಕ್ಷಣಾ ವ್ಯವಸ್ಥೆಯ ವೈಫಲ್ಯವೇ ಉದಾಹರಣೆಯಾಗಿದೆ.

ದೇಶದೆಡೆಗೆ ಧಾವಿಸುವ ಕ್ಷಿಪಣಿ, ಡ್ರೋನ್ ಹಾಗೂ ಯುದ್ಧವಿಮಾನಗಳನ್ನು ರಾಡಾರ್‌ಗಳ ಮೂಲಕ ಪತ್ತೆ ಹಚ್ಚಿ, ಮಾರ್ಗಮಧ್ಯೆಯೇ ಅವನ್ನು ನಾಶಪಡಿಸುವಂಥದ್ದು ವಾಯುರಕ್ಷಣಾ ವ್ಯವಸ್ಥೆ. ಕಳೆದ ವರ್ಷದ ಮೇ ತಿಂಗಳಲ್ಲಿ ಪಾಕಿಸ್ತಾನದ ವಿರುದ್ಧ ಭಾರತವು ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆ ನಡೆಸಿದಾಗ ತನ್ನ ‘ಸಪ್ರೆಶನ್ ಆಫ್ ಎನಿಮಿ ಏರ್ ಡಿಫೆನ್ಸ್’ (ಎಸ್‌ಇಎಡಿ) ತಂತ್ರಗಾರಿಕೆಯ ಮೂಲಕ ಚೀನಾನಿರ್ಮಿತ ವಾಯುರಕ್ಷಣಾ ವ್ಯವಸ್ಥೆಯನ್ನು ಭಾರತವು ನಿಸ್ತೇಜಗೊಳಿಸಿತು.

ಇದನ್ನೂ ಓದಿ: Ganesh Bhat Column: ಸತ್ಯದ ತೊಗಲನ್ನು ಹೊದ್ದುಬರುತ್ತಿರುವ ಸುಳ್ಳುಗಳು

ಹೀಗಾಗಿ, ಭಾರತದ ಬ್ರಹ್ಮೋಸ್ ಕ್ಷಿಪಣಿ, ಡ್ರೋನ್ ಮತ್ತು ಯುದ್ಧ ವಿಮಾನಗಳ ದಾಳಿಗೆ ಪ್ರತ್ಯುತ್ತರಿಸುವಲ್ಲಿ ಪಾಕಿಸ್ತಾನ ವಿಫಲವಾಯಿತು. ‘ಎಚ್‌ಕ್ಯು-9ಬಿ’ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಇರಾನ್ ಕೂಡ, ಇಸ್ರೇಲ್-ಅಮೆರಿಕ ದೇಶಗಳ ಜಂಟಿದಾಳಿಯನ್ನು ತಡೆಯುವಲ್ಲಿ ವಿಫಲವಾಗಿದೆ.

ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್‌ರವರು ಮಾತನಾಡುತ್ತಾ, ‘ಯುದ್ಧದ ಪರಿಣಾಮವು ಎಲ್ಲೆಡೆ ಕಾಣಿಸಿಕೊಳ್ಳುತ್ತಿದೆ. ರಕ್ಷಣಾ ಕ್ಷೇತ್ರ ದಲ್ಲಿನ ಸ್ವಾವಲಂಬನೆಯೇ ಅಡಚಣೆಯನ್ನು ತಪ್ಪಿಸಿಕೊಳ್ಳುವುದಕ್ಕಿರುವ ಏಕೈಕ ಮಾರ್ಗ’ ಎಂದಿದ್ದಾರೆ.

2014ರವರೆಗೂ ಭಾರತವು ಸುಮಾರು ಶೇ.70ರಷ್ಟು ರಕ್ಷಣಾ ಉಪಕರಣಗಳನ್ನು ವಿದೇಶ ಗಳಿಂದಲೇ ತರಿಸಿಕೊಳ್ಳುತ್ತಿತ್ತು. ಆದರೆ, ‘ಮೇಕ್ ಇನ್ ಇಂಡಿಯಾ’, ‘ಆತ್ಮನಿರ್ಭರ ಭಾರತ’, ‘ಸ್ಟಾರ್ಟ್‌ಅಪ್ ಇಂಡಿಯಾ’ ಮುಂತಾದ ಸಕಾರಾತ್ಮಕ ಉಪಕ್ರಮಗಳ ಪರಿಣಾಮವಾಗಿ ಇದೀಗ ರಕ್ಷಣಾ ಉಪಕರಣಗಳಿಗಾಗಿನ ವಿದೇಶಿ ಅವಲಂಬನೆ ಶೇ.30ರ ಮಟ್ಟಕ್ಕೆ ಇಳಿದಿದೆ.

ದೇಶದ ಶಸ್ತ್ರಾಸ್ತ್ರಗಳ ಪೈಕಿ ಗಣನೀಯ ಭಾಗವು ‘ಮೇಕ್ ಇನ್ ಇಂಡಿಯಾ’ ಯೋಜನೆ ಯಡಿ ಭಾರತದಲ್ಲೇ ರೂಪುಗೊಂಡಿದ್ದು, 16000 ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ ಗಳು ಹಾಗೂ 1000 ನವೋದ್ಯಮಗಳು ಈ ನಿಟ್ಟಿನಲ್ಲಿ ಕೈಜೋಡಿಸಿವೆ. ಕಳೆದ ವರ್ಷ 1.5 ಲಕ್ಷ ಕೋಟಿ ರು. ಮೌಲ್ಯದ ರಕ್ಷಣೋಪಕರಣಗಳನ್ನು ಭಾರತದಲ್ಲೇ ಉತ್ಪಾದಿಸಲಾಗಿದೆ, 24000 ಕೋಟಿ ರುಪಾಯಿ ಮೌಲ್ಯದ ಉಪಕರಣಗಳನ್ನು ರಫ್ತು ಮಾಡಲಾಗಿದೆ.

brahmos

2030ರ ವರ್ಷದೊಳಗೆ ವಾರ್ಷಿಕ 3 ಲಕ್ಷ ಕೋಟಿ ರು. ಮೌಲ್ಯದ ರಕ್ಷಣೋಪಕರಣಗಳನ್ನು ಉತ್ಪಾದಿಸುವ ಗುರಿಯನ್ನು ಸರಕಾರ ಇಟ್ಟುಕೊಂಡಿದೆ. ವಿಶ್ವದ ಯಾವುದೇ ವಾಯುರಕ್ಷಣಾ ವ್ಯವಸ್ಥೆಗಳಿಂದಲೂ ತಡೆಯಲಾಗದ ಏಕೈಕ ಕ್ಷಿಪಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ನಮ್ಮ ‘ಬ್ರಹ್ಮೋಸ್’.

ಭಾರತ ಹಾಗೂ ರಷ್ಯಾ ಜಂಟಿಯಾಗಿ ನಿರ್ಮಿಸಿದ ಈ ಕ್ಷಿಪಣಿ, ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯ ವೇಳೆ ಪಾಕಿಸ್ತಾನದ ಹಲವು ವಾಯುಸೇನಾ ನೆಲೆಗಳನ್ನು ಪುಡಿಗಟ್ಟಿ, ಶಸ್ತ್ರಾಸ್ತ್ರ ಸಂಗ್ರಹಾಗಾರಕ್ಕೂ ಭಾರಿ ಹಾನಿಯನ್ನುಂಟುಮಾಡಿತು. ಈ ಕಾರ್ಯಾಚರಣೆಯ ವೇಳೆ ನಮ್ಮ ವಾಯುರಕ್ಷಣಾ ವ್ಯವಸ್ಥೆ ಎಷ್ಟು ಕರಾರುವಾಕ್ಕಾಗಿತ್ತೆಂದರೆ, ಪಾಕಿಸ್ತಾನವು ಭಾರತದ ಮೇಲೆ ಪ್ರಯೋಗಿಸಿದ್ದ ‘ಫತಾಹ್-2’ರಂಥ ಕ್ಷಿಪಣಿಗಳನ್ನು ಹಾಗೂ 600ಕ್ಕೂ ಹೆಚ್ಚು ಡ್ರೋನ್‌ಗಳನ್ನು ಮಾರ್ಗಮಧ್ಯದಲ್ಲೇ ತಡೆಹಿಡಿದು ನಾಶಮಾಡಲಾಯಿತು.

ಪಾಕಿಸ್ತಾನದ ಕ್ಷಿಪಣಿ ಅಥವಾ ಡ್ರೋನ್‌ಗಳು ತಮ್ಮ ಗುರಿಯನ್ನು ತಲುಪಿದ್ದು ವಿರಳ ವೆನ್ನಬೇಕು: ಏಕೆಂದರೆ, ‘ಎಸ್-400’ ಎಂದೇ ಕರೆಯಲ್ಪಡುವ ರಷ್ಯಾ ನಿರ್ಮಿತ ವಾಯು ರಕ್ಷಣಾ ವ್ಯವಸ್ಥೆಯ ಜತೆಗೆ ಸ್ವದೇಶಿ ನಿರ್ಮಿತ ‘ಆಕಾಶ್’ ವಾಯುರಕ್ಷಣಾ ವ್ಯವಸ್ಥೆಯೂ ಸೇರಿಕೊಂಡು ಅವನ್ನು ಹೊಡೆದುರುಳಿಸಿದವು.

ಇದೀಗ ರಷ್ಯಾದ ‘ಎಸ್-500’ಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸ ಬಲ್ಲ ‘ಪ್ರಾಜೆಕ್ಟ್ ಕುಶ’ ಎಂಬ ವಾಯುರಕ್ಷಣಾ ವ್ಯವಸ್ಥೆಯು ‘ಡಿಆರ್‌ಡಿಒ’ ವತಿಯಿಂದಲೇ ದೇಶೀಯವಾಗಿಯೇ ನಿರ್ಮಾಣವಾಗುತ್ತಿದ್ದು, 2030ರ ಒಳಗಾಗಿ ಅದು ದೇಶಾದ್ಯಂತ ಅಳವಡಿಸಲ್ಪಡಲಿದೆ.

2001ರಲ್ಲಿ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ʼಡಿಎ ಸರಕಾರದ ಅವಧಿಯಲ್ಲಿ, ಸ್ವದೇಶಿ ನಿರ್ಮಿತ ‘ತೇಜಸ್’ ಲಘು ಯುದ್ಧವಿಮಾನವು ಮೊದಲ ಹಾರಾಟವನ್ನು ನಡೆಸಿ ದ್ದರೂ, 2004ರಲ್ಲಿ ಅಧಿಕಾರಕ್ಕೆ ಬಂದ ಯುಪಿಎ ಸರಕಾರವು ಅದನ್ನು ವಾಯುಪಡೆಗೆ ಸೇರಿಸಲು ಯಾವುದೇ ಆಸಕ್ತಿಯನ್ನು ತೋರಲಿಲ್ಲ.

ಆದರೆ, 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರವು ಈ ನಿಟ್ಟಿನಲ್ಲಿ ಹೆಜ್ಜೆ ಯಿಟ್ಟಿತು. ‘ತೇಜಸ್’ ಅನ್ನು ಭಾರತವು ತಯಾರಿಸುತ್ತಿದ್ದರೂ ಅದರ ಎಂಜಿನ್‌ಗಾಗಿ ಅಮೆರಿಕವನ್ನು ನೆಚ್ಚಬೇಕಾದ ಪರಿಸ್ಥಿತಿ ಎದುರಾಯಿತು. ಏಕೆಂದರೆ, ಈ ವಿಮಾನಕ್ಕೆಂದು ದೇಶೀಯವಾಗಿ ತಯಾರಿಸಲಾಗಿದ್ದ ‘ಕಾವೇರಿ’ ಎಂಜಿನ್, ಅವಶ್ಯಕತೆಗೆ ತಕ್ಕಂಥ ಶಕ್ತಿಯನ್ನು ಕೊಡಲು ವಿಫಲವಾಯಿತು.

ಅಂದರೆ, 83ರಿಂದ 85 ಕಿಲೋ ನ್ಯೂಟನ್‌ನಷ್ಟು ಥ್ರಸ್ಟ್ (ಒತ್ತಡ) ಕೊಡುವ ಎಂಜಿನ್ ಬೇಕಾಗಿತ್ತು, ಆದರೆ 42ರಷ್ಟು ಥ್ರಸ್ಟ್ ಅನ್ನು ಮಾತ್ರವೇ ಕೊಡಲು ಕಾವೇರಿ ಎಂಜಿನ್‌ಗೆ ಸಾಧ್ಯ ವಾಗಿತ್ತು. ಹೀಗಾಗಿ ಅಮೆರಿಕದ ಜನರಲ್ ಇಲೆಕ್ಟ್ರಿಕ್ ಸಂಸ್ಥೆ ರೂಪಿಸಿದ ‘ಎಫ್-404’ ಎಂಜಿನ್ ಅನ್ನು ತೇಜಸ್‌ಗೆ‌ ಬಳಸಲಾಯಿತು.

ಇದೀಗ ‘ಡಿಆರ್‌ಡಿಒ’ ಸಂಸ್ಥೆಯ ಅಂಗವಾದ ‘ಜಿಟಿಆರ್‌ಇ’ನ ಸತತ ಪ್ರಯತ್ನದ ಫಲವಾಗಿ 81-83 ಕಿಲೋನ್ಯೂಟನ್‌ನಷ್ಟು ಒತ್ತಡವನ್ನು ಸಾಧಿಸುವಲ್ಲಿ ಕಾವೇರಿ ಎಂಜಿನ್ ಯಶಸ್ವಿ ಯಾಗಿದೆ ಮತ್ತು ಯುದ್ಧವಿಮಾನಗಳ ಎಂಜಿನ್ ತಯಾರಿಕೆಯಲ್ಲಿ ಸ್ವಾವಲಂಬಿ ಯಾಗುವೆಡೆಗೆ ಇದು ಮಹತ್ವದ ಹೆಜ್ಜೆಯಾಗಿದೆ.

‘ಅಡ್ವಾನ್ಸ್‌ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್’‌ (ಆಮ್ಕಾ) ಹೆಸರಿನ, 120ರಿಂದ 140 ಕಿಲೋನ್ಯೂಟನ್ ಒತ್ತಡವಿರುವ ಯುದ್ಧವಿಮಾನವನ್ನು ಭಾರತವು ನಿರ್ಮಿಸುತ್ತಿದ್ದು, ಇದರ ಎಂಜಿನ್ ಅನ್ನು ಫ್ರಾನ್ಸಿನ ‘ಸಾಫ್ರಾನ್’ ಹಾಗೂ ಭಾರತದ ‘ಡಿಆರ್‌ಡಿಒ’ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಲಿವೆ.

ಒಪ್ಪಂದದ ಅನುಸಾರ ‘ಸಾಫ್ರಾನ್’ ಸಂಸ್ಥೆಯು ಸಂಪೂರ್ಣ ತಂತ್ರಜ್ಞಾನವನ್ನು ಭಾರತಕ್ಕೆ ಹಸ್ತಾಂತರಿಸಲಿದೆ. ‘ಆಮ್ಕಾ’ ಯುದ್ಧವಿಮಾನದ ಐದು ಮಾದರಿಗಳನ್ನು 2027ರ ಒಳಗೆ ನಿರ್ಮಿಸಲಾಗುವುದು ಮತ್ತು 2028ರಲ್ಲಿ ಅವುಗಳ ಪರೀಕ್ಷೆ ನಡೆಸಲಾಗುವುದು, 2035ರಲ್ಲಿ ‘ಆಮ್ಕಾ ಎಂ.ಕೆ.-2’ ಯುದ್ಧ ವಿಮಾನದ ವಿವಿಧ ಸರಣಿಗಳನ್ನು ಸೇನೆಗೆ ಸೇರ್ಪಡೆಗೊಳಿಸ ಲಾಗುವುದು. ಈ ಮಹತ್ತರ ಉಪಕ್ರಮದಿಂದಾಗಿ ಯುದ್ಧ ವಿಮಾನಗಳಿಗಾಗಿ ವಿದೇಶಗಳನ್ನು ನೆಚ್ಚುವುದು ತಗ್ಗಲಿದೆ, ದೇಶವು ಸ್ವಾವಲಂಬಿಯಾಗಲಿದೆ.

ಭಾರತವು ತನ್ನಉಪಯೋಗಕ್ಕಾಗಿ ರಷ್ಯಾದ ಹಳೆಯ ಯುದ್ಧವಾಹಕ ನೌಕೆಗಳನ್ನು ಖರೀದಿಸುತ್ತಿತ್ತು, ಅದೇ ರೀತಿಯಲ್ಲಿ ಯುದ್ಧ ನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳ ಖರೀದಿಯೂ ನಡೆಯುತ್ತಿತ್ತು. 262 ಮೀಟರ್ ಉದ್ದದ, ಅಣುಶಕ್ತಿಯಿಂದ ಚಲಿಸುವ ‘ಐಎನ್‌ಎಸ್ ವಿಕ್ರಾಂತ್’ ಎಂಬ ವಿಮಾನವಾಹಕ ನೌಕೆಯನ್ನು 2022ರಲ್ಲಿ ನೌಕಾಪಡೆಗೆ ಹಸ್ತಾಂತರಿಸಲಾಯಿತು ಹಾಗೂ ಇದೀಗ ಇಂಥ 2ನೇ ನೌಕೆಯ ನಿರ್ಮಾಣಕ್ಕೆ ಅನುಮೋದಿಸ ಲಾಗಿದೆ.

ಸ್ವದೇಶಿ ನಿರ್ಮಿತ 3 ಯುದ್ಧನೌಕೆಗಳನ್ನು ಕಳೆದ ವರ್ಷ ಭಾರತೀಯ ನೌಕಾಪಡೆಗೆ ಹಸ್ತಾಂ ತರಿಸಲಾಗಿದ್ದು, ‘ಐಎನ್‌ಎಸ್ ಅರಿಹಂತ್’, ‘ಐಎನ್‌ಎಸ್ ಅರಿಘಾತ್’ ಹೆಸರಿನ ಪರಮಾಣು ಇಂಧನ ಚಾಲಿತ ಜಲಾಂತರ್ಗಾಮಿಗಳು ಈಗಾಗಲೇ ನಮ್ಮ ನೌಕಾಪಡೆಯನ್ನು ಸೇರಿವೆ ಹಾಗೂ ‘ಐಎನ್‌ಎಸ್ ಅರಿಂಧಮ್’ ನಿರ್ಮಾಣವಾಗುತ್ತಿದೆ. ಮಿಕ್ಕಂತೆ, 74ರಷ್ಟು ಯುದ್ಧ ನೌಕೆಗಳು ಮತ್ತು ಜಲಾಂತರ್ಗಾಮಿಗಳ ನಿರ್ಮಾಣಕ್ಕೆ ಸರಕಾರ ಅನುಮತಿಸಿದೆ. 2035ರ ವೇಳೆಗೆ ಭಾರತವು 200ರಷ್ಟು ಸಮರನೌಕೆ ಮತ್ತು ಜಲಾಂತರ್ಗಾಮಿಗಳನ್ನು ಹೊಂದಲಿದೆ.

ಕ್ಷಿಪಣಿ ಮತ್ತು ಡ್ರೋನ್ ತಂತ್ರಜ್ಞಾನದಲ್ಲಿ ಭಾರತವು ಪ್ರಾವೀಣ್ಯವನ್ನು ಗಳಿಸಿಕೊಂಡಿದೆ. ‘ಅಗ್ನಿ’ ಸರಣಿಯ ಖಂಡಾಂತರ ಕ್ಷಿಪಣಿಗಳಿಗೆ 8000 ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯ ವಿದೆ. ‘ಕೆ’ ಸರಣಿಯ ಕ್ಷಿಪಣಿಗಳಿಗೆ 5000 ಕಿ.ಮೀ. ದೂರದ ಗುರಿಯನ್ನು ಹೊಡೆಯುವ ಸಾಮರ್ಥ್ಯವಿದ್ದರೆ, ಜಗತ್ತಿನ ಅತಿವೇಗದ ಸೂಪರ್ ಸಾನಿಕ್ ಕ್ಷಿಪಣಿ ಎಂಬ ಹೆಗ್ಗಳಿಕೆಗೆ ‘ಬ್ರಹ್ಮೋಸ್’ ಪಾತ್ರವಾಗಿದೆ.

‘ಪೃಥ್ವಿ’, ‘ಶೌರ್ಯ’, ‘ಅಸ್ತ್ರ’, ‘ಆಕಾಶ್’, ‘ನಿರ್ಭಯ್’ ಮುಂತಾದ ವೈವಿಧ್ಯಮಯ ಸಾಮರ್ಥ್ಯ ದ ಕ್ಷಿಪಣಿಗಳು ಭಾರತದ ಬತ್ತಳಿಕೆಯಲ್ಲಿವೆ. ನಿಖರ ಗುರಿ ಸಾಧಿಸಬಲ್ಲ ‘ಘಾತಕ್’, ಇತರ ಡ್ರೋನ್‌ಗಳನ್ನು ಹೊಡೆದುರುಳಿಸಬಲ್ಲ ‘ನಾಗಾಸ-1’, ಒಂದು ಸಾವಿರ ಕಿ.ಮೀ. ಕ್ರಮಿಸಿ ಶತ್ರುಗಳ ನೆಲೆಯನ್ನು ನಾಶ ಮಾಡಬಲ್ಲ ‘ಶೇಷನಾಗ್’ ಮುಂತಾದವು ನಮ್ಮ ಸೇನೆಯಲ್ಲಿ ರುವ ಡ್ರೋನ್ ಗಳು.

ಒಟ್ಟಾರೆ ಹೇಳುವುದಾದರೆ, ಪೂರ್ಣಪ್ರಮಾಣದ ಯುದ್ಧವಾದರೆ ಕೇವಲ 10 ದಿನಗಳಿಗೆ ಸಾಕಾಗುವಷ್ಟು ಶಸ್ತ್ರಾಸ್ತ್ರ ಸಂಗ್ರಹ ದೇಶದಲ್ಲಿದೆ ಎನ್ನುವ ಪರಿಸ್ಥಿತಿ 2013ರಲ್ಲಿತ್ತು. ಆದರೆ ಈಗ 40 ದಿನಗಳ ಪೂರ್ಣ ಪ್ರಮಾಣದ ಯುದ್ಧವನ್ನು ಎದುರಿಸುವಷ್ಟು ಶಸ್ತ್ರಾಸ್ತ್ರ ಸಂಗ್ರಹ ದೇಶದಲ್ಲಿದೆ.

ದೇಶದ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳಲು ಮತ್ತು ಪ್ರಜೆಗಳನ್ನು ರಕ್ಷಿಸಲು ಪ್ರಬಲ ಮಿಲಿಟರಿ ವ್ಯವಸ್ಥೆ ಬೇಕೇ ಬೇಕು. ಇದು ವ್ಯಾಪಾರ ಮಾರ್ಗಗಳನ್ನು ರಕ್ಷಿಸುತ್ತದೆ, ದೇಶದ ಸಂಪನ್ಮೂಲಗಳನ್ನು ಕಾಯುತ್ತದೆ ಹಾಗೂ ಆರ್ಥಿಕ ಬೆಳವಣಿಗೆಗೆ ಅಗತ್ಯವಾದ ಸ್ಥಿರತೆ ಯನ್ನು ಒದಗಿಸುತ್ತದೆ. ಭೂರಾಜಕೀಯವೇ ಪಾರಮ್ಯವನ್ನು ದಕ್ಕಿಸಿಕೊಂಡಿರುವ ಈ ಕಾಲ ಘಟ್ಟದಲ್ಲಿ ರಾಜತಾಂತ್ರಿಕತೆ ಮತ್ತು ವ್ಯಾಪಾರ ನೀತಿಯನ್ನು ಸಮರ್ಥಿಸಿಕೊಳ್ಳಲು, ಗಟ್ಟಿಯಾಗಿ ಕಾಯ್ದುಕೊಳ್ಳಲು ದೇಶವೊಂದರ ಮಿಲಿಟರಿ ಶಕ್ತಿಯು ನಿರ್ಣಾಯಕ ಅಂಶ ವಾಗಿರುತ್ತದೆ.

ಹೀಗಾಗಿ ಪ್ರಬಲ ಮಿಲಿಟರಿ ಶಕ್ತಿಯಾಗಿ ಗುರುತಿಸಿಕೊಳ್ಳುವುದು ಭಾರತಕ್ಕೆ ಅನಿವಾರ್ಯ ವಾ ಗಿದೆ. ರಕ್ಷಣಾತ್ಮಕವಾಗಿ ಸ್ವಾವಲಂಬಿಯಾದರೆ ಮಾತ್ರವೇ ಇದು ಸಾಧ್ಯ. ಈ ನಿಟ್ಟಿನಲ್ಲಿ ಭಾರತವು ಸರಿಯಾದ ದಿಕ್ಕಿನಲ್ಲೇ ಸಾಗುತ್ತಿದೆ ಎಂದು ಘಂಟಾಘೋಷವಾಗಿ ಹೇಳಬಹುದು.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)