ಅಶ್ವತ್ಥಕಟ್ಟೆ
ಬೆಳೆಯುವ ಪೈರು ಮೊಳಕೆ’ಯಲ್ಲಿಯೇ ಎನ್ನುವಂತೆ, ರಾಜಕೀಯದ ಮೊದಲ ಹೆಜ್ಜೆ ಕಾಲೇಜುಗಳಲ್ಲಿಯೇ ಎನ್ನುವ ಮಾತೊಂದಿದೆ. ಅದರಲ್ಲಿಯೂ ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯ ಜೀವನಕ್ಕೆ ಕಾಲಿಟ್ಟ ಅನೇಕ ನಾಯಕರ ಸೈದ್ಧಾಂತಿಕ ‘ಬದ್ಧತೆ’ಯಲ್ಲಿ ಸ್ಪಷ್ಟನೆ ಇರುತ್ತದೆ ಎನ್ನುವುದು ವಾಸ್ತವ. ಈ ಕಾರಣಕ್ಕೆ, ದೇಶದಲ್ಲಿ ವಿಶ್ವವಿದ್ಯಾಲಯಗಳ ಚುನಾ ವಣೆಗೆ ರಾಜಕೀಯವಾಗಿ ತನ್ನದೇ ಆದ ಮಹತ್ವ ಮತ್ತು ಪ್ರತಿಷ್ಠೆಯಿದೆ. ಈ ಕಾರಣಕ್ಕಾಗಿಯೇ 80ರ ದಶಕದ ಬಳಿಕ ಕರ್ನಾಟಕದಲ್ಲಿ ರದ್ದಾಗಿರುವ ಚುನಾವಣೆಗಳನ್ನು ಮರು ಪರಿಚಯಿಸುವ ಕಾರ್ಯಕ್ಕೆ ಸರಕಾರ ಮುಂದಾಗಿದೆ.
ವಿಶ್ವವಿದ್ಯಾಲಯಗಳಲ್ಲಿ ಚುನಾವಣೆ ನಡೆಸುವ ಸಂಬಂಧ ಮೊದಲಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಘೋಷಿಸಿದ್ದು, ಆ ಬಳಿಕ ಚುನಾವಣೆ ನಡೆಸುವುದರಿಂದ ಆಗುವ ಸಾಧಕ-ಬಾಧಕದ ಬಗ್ಗೆ ಸಮಾಲೋಚನೆ ನಡೆಸಲು ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಪ್ರಕ್ರಿಯೆ ಬಳಿಕ ಒಂದೆರಡು ಸಭೆಯನ್ನೂ ನಡೆಸಿಯಾಗಿದೆ.
ಆದರೀಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ವಿದ್ಯಾರ್ಥಿ ಚುನಾವಣೆಗಳನ್ನು ಪ್ರಸ್ತಾಪಿಸಿದ್ದಾರೆ. ಮುಖ್ಯಮಂತ್ರಿಗಳ ಪ್ರಸ್ತಾಪಕ್ಕೆ, ಆ ಕ್ಷಣದಲ್ಲಿಯೇ ವಿವಿಧ ವಿವಿಗಳ ಕುಲಪತಿಗಳಿಂದ ವಿರೋಧ ವ್ಯಕ್ತವಾಗಿದೆ.
ವಿಶ್ವವಿದ್ಯಾಲಯದ ಚುನಾವಣೆಗಳಿಗೆ ಕುಲಪತಿಗಳು ವಿರೋಧಿಸುವುದಕ್ಕೆ, ಮುಖ್ಯಮಂತ್ರಿ ಹಾಗೂ ರಾಜಕಾರಣಿಗಳು ಬೆಂಬಲಿಸುತ್ತಿರುವುದಕ್ಕೆ ಅವರದ್ದೇ ಆದ ಕಾರಣಗಳಿವೆ. ಮುಖ್ಯ ಮಂತ್ರಿಗಳು ವಿವಿ ಚುನಾವಣೆ ನಡೆಸಲು ‘ಚಿಂತನೆ’ ಎನ್ನುತ್ತಿದ್ದಂತೆ ವ್ಯಕ್ತವಾದ ಕುಲಪತಿಗಳ ವಿರೋಧಕ್ಕೆ ಹಲವು ಕಾರಣಗಳಿವೆ.
ಪ್ರಮುಖವಾಗಿ, ಜೆಎನ್‌ಯು ಸೇರಿದಂತೆ ಹಲವು ವಿಶ್ವವಿದ್ಯಾಲಯಗಳಲ್ಲಿ ಚುನಾವಣೆಯ ಬಳಿಕ ಗಲಾಟೆ, ಅಶಾಂತಿ ಸೃಷ್ಟಿಯಾಗಿರುವ ಉದಾಹರಣೆಗಳಿವೆ. ಇದರೊಂದಿಗೆ ರಾಜಕೀಯ ಪಕ್ಷಗಳನ್ನು ಪೂರ್ಣ ಪ್ರಮಾಣದಲ್ಲಿ ಹೊರಗಿಟ್ಟು ಚುನಾವಣೆ ನಡೆಸುವುದು ಕರ್ನಾಟಕ ದಲ್ಲಿ ಸದ್ಯಕ್ಕೆ ತೀರಾ ಕಷ್ಟ. ಒಂದು ವೇಳೆ ನೇರ ಅಥವಾ ಪರೋಕ್ಷವಾಗಿ ರಾಜಕೀಯ ಪಕ್ಷಗಳ ಪ್ರಭಾವದೊಂದಿಗೆ ಚುನಾವಣೆ ನಡೆದರೆ, ಶೈಕ್ಷಣಿಕ ಕಾರ್ಯಕ್ಕೆ ಸಮಸ್ಯೆಯಾಗಲಿದೆ ಎನ್ನುವ ಆತಂಕವನ್ನು ಬಹುತೇಕ ವಿಶ್ವವಿದ್ಯಾಲಯಗಳ ಕುಲಪತಿಗಳು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Ranjith H Ashwath Column: ಗೊಂದಲದ ಹೇಳಿಕೆ ನಡುವೆ ಗ್ಯಾರಂಟಿಗಳೇ ಮಾಯ !
ಕುಲಪತಿಗಳ ಈ ಆತಂಕದ ಹೊರತಾಗಿಯೂ, ಸಿಎಂ ಸಿದ್ದರಾಮಯ್ಯ ಅವರು, ‘ನಮ್ಮ ಕಾಲದಲ್ಲಿ ವಿದ್ಯಾರ್ಥಿ ಚುನಾವಣೆ ಇತ್ತು. ನಾವೂ ಅಲ್ಲಿಂದಲೇ ಬೆಳೆದು ಬಂದವರು. ಷರತ್ತು ಬದ್ಧ ಚುನಾವಣೆ ನಡೆಸಲು ಅವಕಾಶ ನೀಡಬೇಕಿದೆ. ಚುನಾವಣೆ ಇಲ್ಲದೆ ವಿದ್ಯಾರ್ಥಿ ಗಳು ನಾಯಕರಾಗಿ ಹೇಗೆ ಬೆಳೆಯುತ್ತಾರೆ?’ ಎನ್ನುವ ಪ್ರಶ್ನೆಯೊಂದಿಗೆ, ಭಾರತದಲ್ಲಿ ವಿದ್ಯಾರ್ಥಿ ನಾಯಕತ್ವವೇ ಕಾಣಿಸುತ್ತಿಲ್ಲ ಎನ್ನುವ ಮಾತನ್ನು ಆಡಿದ್ದಾರೆ.
ಇದು ಸಿದ್ದರಾಮಯ್ಯ ಮಾತ್ರವಲ್ಲದೇ, ಬಹುತೇಕ ರಾಜಕೀಯ ನಾಯಕರ ಅಭಿಪ್ರಾಯ ವಾಗಿದೆ. ಇಂದು ರಾಜಕೀಯಕ್ಕೆ ಬರಲು ಅನೇಕರು ಉತ್ಸುಕರಾಗಿದ್ದರೂ, ‘ಸಿದ್ಧಾಂತ’ದ ವಿಷಯದಲ್ಲಿ ಸ್ಪಷ್ಟತೆ ಇರುವವರು ಸಿಗುತ್ತಿಲ್ಲ. ಈ ರೀತಿಯ ಪರಿಸ್ಥಿತಿ ಮುಂದುವರಿದರೆ ಭವಿಷ್ಯದಲ್ಲಿ ಸೈದ್ಧಾಂತಿಕ ಬದ್ಧತೆ ಎನ್ನುವುದು ಕೇವಲ ‘ಕಾಗದ’ಗಳಿಗೆ ಸೀಮಿತವಾಗಲಿದೆ ಎನ್ನುವ ಆತಂಕ ಅನೇಕರಲ್ಲಿದೆ.
ಹಾಗೆ ನೋಡಿದರೆ, ಕರ್ನಾಟಕದ ಹಲವು ನಾಯಕರು ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯ ಜೀವನಕ್ಕೆ ಕಾಲಿಟ್ಟವರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿ.ಕೆ.ಹರಿ ಪ್ರಸಾದ್, ಭೋಸರಾಜು ಎನ್‌ಎಸ್‌ಯುಐನಲ್ಲಿ ಸಕ್ರಿಯವಾಗಿದ್ದರೆ, ಸಮಾಜ ವಾದದ ಮೂಲಕ ಸಿದ್ದರಾಮಯ್ಯ ಅವರು ಕಾನೂನು ವಿದ್ಯಾರ್ಥಿಯಾಗಿದ್ದಾಗಲೇ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡರು.
ಇನ್ನು ಬಿಜೆಪಿಯ ದಿ.ಅನಂತಕುಮಾರ್, ಅರವಿಂದ ಲಿಂಬಾವಳಿ, ರವಿಕುಮಾರ್ ಸೇರಿದಂತೆ ಅನೇಕರಿದ್ದಾರೆ. ರಾಜ್ಯ ರಾಜಕೀಯದ ಮೊದಲ ಸಾಲಿನಲ್ಲಿರುವ ಬಹುತೇಕ ನಾಯಕರು ವಿದ್ಯಾರ್ಥಿಗಳಾಗಿದ್ದ ಕಾಲದಲ್ಲಿ ಎನ್‌ಎಸ್‌ಯುಐ, ಎಬಿವಿಪಿ ಘಟಕಗಳ ಮೂಲಕವೇ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟವರು.
ಕರ್ನಾಟಕದಲ್ಲಿ 1980ರ ದಶಕದವರೆಗೂ ವಿವಿ ಚುನಾವಣೆಗಳು ಜೋರಾಗಿಯೇ ನಡೆಯು ತ್ತಿದ್ದವು. ಆದರೆ, ಈ ಚುನಾವಣೆಗಳಿಂದ ವಿವಿಗಳಲ್ಲಿ ಗದ್ದಲ-ಗಲಾಟೆ, ಅಶಾಂತಿ ಹೆಚ್ಚಾಗಿದ್ದ ರಿಂದ ವೀರೇಂದ್ರ ಪಾಟೀಲರ ಸಮಯದಲ್ಲಿ ವಿಶ್ವವಿದ್ಯಾಲಯಗಳ ಚುನಾವಣೆ ಯನ್ನು ಸ್ಥಗಿತಗೊಳಿಸಲಾಯಿತು.
ಕರ್ನಾಟಕದ ಕಾಲೇಜು, ವಿವಿಗಳಲ್ಲಿ ಚುನಾವಣೆಗಳಿಗೆ ಅವಕಾಶವಿಲ್ಲವಾದರೂ, ಸಂಘಟನೆಗಳು ಈಗಲೂ ಸಕ್ರಿಯವಾಗಿವೆ. ಎಬಿವಿಪಿ, ಎನ್‌ಎಸ್‌ಯುಐ ಸೇರಿದಂತೆ ವಿವಿಧ ದಲಿತ ಸಂಘಟನೆಗಳು ಈಗಲೂ ಯುವ ನಾಯಕರನ್ನು ಗುರುತಿಸುವ ಕೆಲಸವನ್ನು ಮಾಡುತ್ತಿವೆ. ಆದರೆ ವಿದ್ಯಾರ್ಥಿ ದೆಸೆಯಲ್ಲಿಯೇ ಚುನಾವಣೆಗಳನ್ನು ಎದುರಿಸಬೇಕೆಂಬ ಕಾರಣಕ್ಕೆ ಹಾಗೂ ಮುಂದಿನ ಪೀಳಿಗೆಗೆ ‘ಗಟ್ಟಿ’ ನಾಯಕತ್ವವನ್ನು ಕೊಡಬೇಕು ಎನ್ನುವ ಉದ್ದೇಶದಿಂದ ಸರಕಾರ ಇದೀಗ ವಿವಿ ಚುನಾವಣೆಗಳ ಮರುಸ್ಥಾಪನೆಗೆ ಉತ್ಸುಕವಾಗಿದೆ.
ಇದಿಷ್ಟೇ ಅಲ್ಲದೆ, ದೇಶದಲ್ಲಿ ದಿನದಿಂದ ದಿನಕ್ಕೆ ಕಳೆಗುಂದುತ್ತಿರುವ ಕಾಂಗ್ರೆಸ್‌ಗೆ, ಈಗಲೂ ಕರ್ನಾಟಕ ‘ನೆಚ್ಚಿ’ನ ರಾಜ್ಯವಾಗಿದೆ. ಹಳೇ ತಲೆಮಾರು ಈಗಲೂ ಕಾಂಗ್ರೆಸ್‌ನೊಂದಿಗೆ ನಿಲ್ಲುತ್ತಿದೆ. ಆದರೆ ಭವಿಷ್ಯದ ಪೀಳಿಗೆಯನ್ನು ತಮ್ಮತ್ತ ಸೆಳೆಯುವ ಹಾಗೂ ಯುವ ನಾಯಕತ್ವವನ್ನು ‘ಸಿದ್ಧ’ಪಡಿಸುವ ಉದ್ದೇಶದಿಂದ ಚುನಾವಣೆಗಳನ್ನು ನಡೆಸುವ ಲೆಕ್ಕಾ ಚಾರ ಕಾಂಗ್ರೆಸ್ ಇದೆ ಎಂದರೆ ತಪ್ಪಾಗುವುದಿಲ್ಲ.
80ರಲ್ಲಿ ಕರ್ನಾಟಕದ ವಿವಿಗಳಲ್ಲಿ ಚುನಾವಣೆಯನ್ನು ಸ್ಥಗಿತಗೊಳಿಸಿದರೂ, ಈಗಲೂ ದೇಶದ ವಿವಿಧ ಭಾಗಗಳಲ್ಲಿ ವಿವಿ ಚುನಾವಣೆಗಳಿಗೆ ತಮ್ಮದೇ ಆದ ‘ಮಹತ್ವ’ವಿದೆ. ಅದರಲ್ಲಿಯೂ ದೆಹಲಿ ವಿಶ್ವವಿದ್ಯಾಲಯ, ಜೆಎನ್‌ಯು ವಿವಿ ಚುನಾವಣೆಗಳು ಈಗಲೂ ದೇಶದ ಗಮನವನ್ನು ಸೆಳೆಯುತ್ತವೆ. ಈ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ, ವಿವಿ ಚುನಾವಣೆಗಳಲ್ಲಿ ರಾಜಕೀಯದ ಲೇಪ ಕಡಿಮೆಯಾಗಿದ್ದರೂ, ಎಲ್ಲ ಪಕ್ಷಗಳಿಗೂ ‘ಯುವ’ ನಾಯಕತ್ವವನ್ನು ಹುಡುಕಬೇಕೆಂದಾಗಲೆಲ್ಲ ಈ ವಿಶ್ವವಿದ್ಯಾಲಯಗಳ ಚುನಾವಣೆಯ ಫಲಿತಾಂಶದತ್ತ ಕಣ್ಣಾಡಿಸುತ್ತವೆ ಅಥವಾ ವಿದ್ಯಾರ್ಥಿಗಳೇ ಅಲ್ಲಿಂದ ಗೆದ್ದು ‘ಪದವಿ’ ಪಡೆದುಕೊಂಡು ತಮ್ಮಿಷ್ಟದ ರಾಜಕೀಯ ಪಕ್ಷಗಳತ್ತ ಬರುತ್ತಿದ್ದಾರೆ.
ಹಾಗೆ ನೋಡಿದರೆ, 90ರ ದಶಕದಲ್ಲಿ ನಡೆಯುತ್ತಿದ್ದ ವಿವಿ ಚುನಾವಣೆಗಳಿಗೆ ಹೋಲಿಸಿದಾಗ ಇಂದಿನ ಚುನಾವಣೆಗಳು ‘ಸುಧಾರಿಸಿವೆ’ ಎಂದರೆ ತಪ್ಪಾಗುವುದಿಲ್ಲ. ಚುನಾವಣೆಗಳಲ್ಲಿ ಆಗುತ್ತಿದ್ದ ರಾಜಕೀಯ ಹಸ್ತಕ್ಷೇಪ ಸೇರಿದಂತೆ ವಿವಿಧ ರೀತಿಯ ಸಮಸ್ಯೆಯನ್ನು ಗಮನಿಸಿ 2006ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಚುನಾವಣಾ ಆಯೋಗದ ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಜೆ.ಎಂ ಲಿಂಗ್ಡೋ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿತ್ತು.
ಈ ಸಮಿತಿ ನೀಡಿದ ಶಿಫಾರಸುಗಳು ಜಾರಿಗೆ ಬಂದ ಬಳಿಕ, ಚುನಾವಣಾ ಪ್ರಕ್ರಿಯೆ ಕೊಂಚ ಸುಧಾರಿಸಿದೆ. ಪ್ರಮುಖವಾಗಿ, ಲಿಂಗ್ಡೋ ಸಮಿತಿಯೂ ವಿದ್ಯಾರ್ಥಿಗಳ ಚುನಾವಣೆಯಲ್ಲಿ ಅಭ್ಯರ್ಥಿಯ ಗರಿಷ್ಠ ಖರ್ಚನ್ನು ಐದು ಸಾವಿರ ರುಪಾಯಿಗೆ ಸೀಮಿತಗೊಳಿಸಿದೆ. ಇದರಿಂದಾಗಿ, ಹಣದ ಹೊಳೆ ಹರಿಯುವುದನ್ನು ಅಥವಾ ರಾಜಕೀಯ ಪಕ್ಷಗಳು ನೇರವಾಗಿ ಆರ್ಥಿಕ ನೆರವನ್ನು ನೀಡುವುದನ್ನು ನಿಯಂತ್ರಿಸಲಾಗಿದೆ.
ಮಾತ್ರವಲ್ಲದೆ, ಚುನಾವಣೆ ಮುಗಿದ ಎರಡು ವಾರಗಳಲ್ಲಿ ಅಭ್ಯರ್ಥಿಯು ಚುನಾವಣಾ ಖರ್ಚಿನ ವಿವರವನ್ನು ಕಾಲೇಜು ಆಡಳಿತ ಮಂಡಳಿಗೆ ಸಲ್ಲಿಸುವುದು ಕಡ್ಡಾಯವಾಗಿದೆ, ಚುನಾವಣಾ ಪ್ರಚಾರದ ವೇಳೆ ಮುದ್ರಿತ ಪೋಸ್ಟರ್, ಪ್ಲಾಸ್ಟಿಕ್ ಬ್ಯಾನರ್, ಲೌಡ್ ಸ್ಪೀಕರ್‌ಗಳ ಬಳಕೆಗೆ ನಿರ್ಬಂಧ ಹೇರಲಾಗಿದೆ. ಇದರೊಂದಿಗೆ ಅಭ್ಯರ್ಥಿಗಳ ಕೈಬರಹದ ಪೋಸ್ಟರ್‌ಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಇದಿಷ್ಟೇ ಅಲ್ಲದೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗೆ ಕೆಲವೊಂದಷ್ಟು ಮಾರ್ಗ ಸೂಚಿಯನ್ನು ರೂಪಿಸುವ ಮೂಲಕ ಕಾಲೇಜು ಸಮಯದಲ್ಲಿಯೇ ಫುಲ್‌ಟೈಂ ರಾಜಕೀಯ ಮಾಡಲು ಆಗದಂತೆ ಕ್ರಮವಹಿಸಲಾಗಿದೆ. ಪ್ರಮುಖವಾಗಿ, ಅಭ್ಯರ್ಥಿ ಯಾವುದೇ ವಿಷಯ ದಲ್ಲಿ ಬ್ಯಾಕ್‌ಲಾಗ್ ಹೊಂದಿರುವಂತಿಲ್ಲ, ಶೇ.75ರಷ್ಟು ಹಾಜರಾತಿ ಕಡ್ಡಾಯ, ಕ್ರಿಮಿನಲ್ ಪ್ರಕರಣ ಅಥವಾ ಕಾಲೇಜಿನಲ್ಲಿ ಶಿಸ್ತು ಕ್ರಮ ಎದುರಿಸುತ್ತಿದ್ದರೆ ಅಂಥವರಿಗೆ ಸ್ಪರ್ಧಿಸಲು ಅವಕಾಶ ನೀಡಿಲ್ಲ.
ಇನ್ನು ವಿದ್ಯಾರ್ಥಿಗಳ ಚುನಾವಣೆಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪವಿರುತ್ತಿದ್ದುದರಿಂದ ಅದನ್ನು ತಗ್ಗಿಸಲು ರಾಜಕೀಯ ಪಕ್ಷಗಳನ್ನು ದೂರವಿರುವಂತೆ ನೋಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಚುನಾವಣೆ ವಿಷಯದಲ್ಲಿಯೇ ಇಡೀ ಸೆಮಿಸ್ಟರ್ ಕಳೆಯುವಂತಿಲ್ಲ ಎನ್ನುವ ಕಾರಣಕ್ಕೆ, ಇಡೀ ಚುನಾವಣಾ ಪ್ರಕ್ರಿಯೆ ಆರಂಭವಾದ ಆರರಿಂದ ಎಂಟು ವಾರ ದೊಳಗೆ ಮುಗಿಸಬೇಕು.
ಇದರಿಂದಾಗಿ, ವಿದ್ಯಾರ್ಥಿಗಳ ಓದಿಗೆ ಸಮಸ್ಯೆಯಾಗದಂತೆ ಕ್ರಮವಹಿಸಲಾಗಿದೆ. ಆದರೆ ಈ ಸಮಿತಿಯ ಬಹುಚರ್ಚಿತ ಹಾಗೂ ವಿವಾದಾತ್ಮಕ ಅಂಶವೆಂದರೆ, ಒಬ್ಬ ವಿದ್ಯಾರ್ಥಿ ತನ್ನ ಇಡೀ ಶೈಕ್ಷಣಿಕ ಜೀವನದಲ್ಲಿ ಒಂದೇ ಬಾರಿ ಪದಾಧಿಕಾರಿ ಹುದ್ದೆಗೆ ಸ್ಪರ್ಧಿಸಬಹುದು. ಈ ಮೂಲಕ ಅನೇಕ ಪ್ರತಿಭಾವಂತ ವಿದ್ಯಾರ್ಥಿ ನಾಯಕರನ್ನು ಎರಡನೇ ಬಾರಿ ಸ್ಪರ್ಧಿಸದಂತೆ ತಡೆಯುತ್ತಿರುವುದು ಹಲವರ ಅಕ್ಷೇಪಕ್ಕೆ ಕಾರಣವಾಗಿತ್ತು.
ಈ ರೀತಿಯ ನಿರ್ಬಂಧದಿಂದ ಪ್ರಜಾಪ್ರಭುತ್ವದ ಮೂಲ ಹಕ್ಕಿನ ಉಲ್ಲಂಘನೆಯಾಗುತ್ತದೆ ಎನ್ನುವುದು ಕೆಲ ವಿದ್ಯಾರ್ಥಿ ಸಂಘಟನೆಗಳ ಆರೋಪವಾಗಿದೆ. ಇದೇ ವಿಷಯವನ್ನು ಮುಂದಿಟ್ಟುಕೊಂಡು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ.
ಇದರೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ವಯೋಮಿತಿಯನ್ನು ಹೇರಿರುವುದು ಹಲವರ ಅಕ್ಷೇಪಕ್ಕೆ ಕಾರಣವಾಗಿದೆ. ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಟನೆಗಳ ಚುನಾವಣೆಯ ವಿಷಯದಲ್ಲಿ ರಾಜ್ಯ ಸರಕಾರ ಹಾಗೂ ವಿಶ್ವವಿದ್ಯಾಲಯಗಳ ಕುಲಪತಿಗಳ ಅಭಿಪ್ರಾಯಗಳು ಭಿನ್ನವಾಗಿದ್ದರೂ, ಅವರವರ ‘ದೃಷ್ಟಿಕೋನ’ದಲ್ಲಿ ಅವರವರ ನಿಲುವು ಗಳು ಸರಿಯಾಗಿಯೇ ಇದೆ.
ದೆಹಲಿ, ಪಂಜಾಬ್ ರಾಜ್ಯಗಳಲ್ಲಿ ವಿಶ್ವವಿದ್ಯಾಲಯಗಳ ಚುನಾವಣೆಯಲ್ಲಿ ನಡೆಯುವ ಪೈಪೋಟಿ, ಗೆದ್ದ ಬಳಿಕವಾಗುವ ಗೋಜಲುಗಳನ್ನು ನೋಡಿದಾಗ ಕುಲಪತಿಗಳ ವಿರೋಧ ಸರಿ ಎನಿಸಿದರೂ, ಭವಿಷ್ಯದ ರಾಜಕಾರಣಿಗಳನ್ನು ರೂಪಿಸಲು ಮೊದಲ ಹೆಜ್ಜೆಯಾಗುತ್ತಿದ್ದ ಈ ಚುನಾವಣೆಗಳು ನಿಂತ ಬಳಿಕ ರಾಜಕೀಯಕ್ಕೆ ಬರುತ್ತಿರುವ ಅನೇಕ ರಾಜಕಾರಣಿಗಳ ಸೈದ್ಧಾಂತಿಕ ಬದ್ಧತೆಯ ವಿಷಯ ಬಂದಾಗ ಚುನಾವಣೆಗಳು ಅಗತ್ಯವೆನಿಸುವುದು ಸಹಜ.
ಆದರೆ ಜ್ಞಾನಾರ್ಜನೆಯ ಕೇಂದ್ರಗಳಾಗಬೇಕಿದ್ದ ವಿಶ್ವವಿದ್ಯಾಲಯಗಳು ಜ್ಞಾನಾರ್ಜನೆಗಿಂತ ರಾಜಕೀಯ ಪಾಠಶಾಲೆಯಾಗದಿರಲಿ ಎನ್ನುವ ಕಾರಣಕ್ಕೆ ಸ್ಥಗಿತವಾಗಿದ್ದ ವಿವಿ ಚುನಾವಣೆ ಗಳನ್ನು ಪುನಾರಂಭಗೊಳಿಸುವ ಮೊದಲು 80ರ ದಶಕದಲ್ಲಿ ಚುನಾವಣೆ ಸ್ಥಗಿತವಾಗಲು ಇದ್ದ ಕಾರಣವೇನು ಎಂಬುದರ ಅವಲೋಕನ ಹಾಗೂ ಈಗ ಮತ್ತೆ ಚುನಾವಣೆ ನಡೆಸಿದರೆ, ಅಂಥ ಗದ್ದಲ-ಗಲಾಟೆ ನಿಯಂತ್ರಿಸುವುದು ಹೇಗೆ ಎನ್ನುವ ಸ್ಪಷ್ಟನೆಯೊಂದಿಗೆ ಆರಂಭಿಸು ವುದು ಒಳಿತು.
ಏಕೆಂದರೆ, ಜೆಎನ್ಯು, ದೆಹಲಿ ವಿಶ್ವವಿದ್ಯಾಲಯ, ಹೈದರಾಬಾದ್ ಕೇಂದ್ರೀಯ ವಿವಿಗಳು ಅಲ್ಲಿನ ಕಲಿಕಾ ಗುಣಮಟ್ಟ, ಸಂಶೋಧನೆಗಳನ್ನು ಮೀರಿ ವಿದ್ಯಾರ್ಥಿಗಳ ಚುನಾವಣೆಯ ವಿಷಯಕ್ಕೆ ಸುದ್ದಿಯಾಗುವಂತೆ ಕರ್ನಾಟಕದ ಕೆಲ ವಿಶ್ವವಿದ್ಯಾಲಯಗಳಿಗೆ ರಾಜಕೀಯ ವಾಸನೆ ಅಂಟುವ ಸಾಧ್ಯತೆಯೇ ಹೆಚ್ಚಿರುತ್ತದೆ ಎಂದರೆ ತಪ್ಪಾಗುವುದಿಲ್ಲ.