ಮನಿ ಮೈಂಡೆಡ್
2008ರ ಜಾಗತಿಕ ಆರ್ಥಿಕ ಹಿಂಜರಿತದ ವೇಳೆ ಅನೇಕರು ಭಯದಿಂದ ಬ್ಯಾಂಕಿಂಗ್ ಷೇರು ಗಳನ್ನು ಮಾರಿದರೆ, ವಾರೆನ್ ಬಫೆಟ್ ಅವರು ಗೋಲ್ಡ್ಮನ್ ಸ್ಯಾಕ್ಸ್ ಗ್ರೂಪ್‌ನ ಷೇರುಗಳನ್ನು 5 ಶತಕೋಟಿ ಡಾಲರ್‌ಗೆ ಖರೀದಿಸಿದ್ದರು. 2011ರಲ್ಲಿ ಬಫೆಟ್ ಅವರ ‘ಬರ್ಕ್ ಶೈರ್ ಹಾಥ್ ವೇ ಗ್ರೂಪ್’ ಈ ಷೇರುಗಳ ಮಾರಾಟದಿಂದ 3 ಶತಕೋಟಿ ಡಾಲರ್ ಲಾಭ ಗಳಿಸಿತ್ತು.
ಕಳೆದ 12 ತಿಂಗಳುಗಳಿಂದ ಸೆನ್ಸೆಕ್ಸ್ ತನ್ನ ಹೂಡಿಕೆದಾರರಿಗೆ ಕೊಟ್ಟಿರುವ ಆದಾಯ ಶೂನ್ಯ! ಇದಕ್ಕಿಂತ ಬ್ಯಾಂಕಿನ ಉಳಿತಾಯ ಖಾತೆಯೇ ಹೆಚ್ಚು ಕೊಟ್ಟಿದೆ. ಇದು ಅನೇಕ ರಿಟೇಲ್ ಹೂಡಿಕೆ ದಾರರನ್ನು ಚಿಂತಾಕ್ರಾಂತರನ್ನಾಗಿಸಿದೆ. ಏಕೆ ಹೀಗಾಯಿತು? ಇನ್ನು ಮುಂದೆ ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆಗೆ ಭವಿಷ್ಯ ಇಲ್ಲವೇ? ರೆಡ್ ನಲ್ಲಿರುವ ಪೋರ್ಟ್ ಫೋಲಿಯೊ ಗ್ರೀನ್ ಆಗೋದು ಯಾವಾಗ? ಎಲ್ಲ ಹೂಡಿಕೆಯನ್ನು ಹಿಂತೆಗೆದುಕೊಂಡು, ಗ್ಯಾರಂಟಿಯ ಆದಾಯ ಕೊಡುವ ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್, ಸಾರ್ವಜನಿಕ ಭವಿಷ್ಯನಿಧಿ, ಅಂಚೆ ಇಲಾಖೆಯ ಉಳಿತಾಯ ಖಾತೆಯಲ್ಲಿ ಹೂಡಿಕೆ ಮಾಡೋದು ಒಳ್ಳೆಯದಲ್ಲವೇ? ಸ್ಟಾಕ್ ಮಾರ್ಕೆಟ್ ಉಸಾಬರಿ ಬೇಕಿತ್ತಾ? ಎಂದೆಲ್ಲ ರಿಟೇಲ್ ಹೂಡಿಕೆದಾರರು ಕೈ ಹಿಸುಕಿಕೊಳ್ಳುತ್ತಿದ್ದಾರೆ.
ಆದಾಯ ತೆರಿಗೆ, ಜಿಎಸ್‌ಟಿ ರಿಲೀಫ್, ಬಡ್ಡಿ ದರ ಕಡಿತ, ದೇಶೀಯ ಮಾರುಕಟ್ಟೆಗೆ ಹರಿಯುತ್ತಿರುವ ಬಂಡವಾಳದ ಹರಿವಿನ ಹೊರತಾಗಿಯೂ ಸೆನ್ಸೆಕ್ಸ್, ನಿಫ್ಟಿ ಶೂನ್ಯ ಸಂಪಾದಿಸಿರುವುದೇಕೆ? ‘ಎನ್‌ಆರ್‌ಐ ಮನಿ ಕ್ಲಿನಿಕ್’ ಯುಟ್ಯೂಬ್ ಚಾನಲ್‌ನ ಸ್ಥಾಪಕ ಮತ್ತು ಹಣಕಾಸು ತಜ್ಞರಾದ ಡಾ. ಚಂದ್ರಕಾತ ಭಟ್ ಹೀಗೆನ್ನುತ್ತಾರೆ- “ನೋಡಿ, ಸೆನ್ಸೆಕ್ಸ್ ಶುರುವಾದಾಗಿನಿಂದ ಇಲ್ಲಿಯವರೆಗೂ ಅದರ ಏರಿಳಿತವನ್ನು ನಾನು ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದೇನೆ.
ಅದು ಹತ್ತು ವರ್ಷದಲ್ಲಿ ಒಮ್ಮೆ ಮಾತ್ರ ನೊರೆಯುಕ್ಕುವಂತೆ ಏರುತ್ತದೆ. ಉಳಿದೆಲ್ಲ ವರ್ಷಗಳಲ್ಲಿ ಸಾಮಾನ್ಯ ಮಟ್ಟದಲ್ಲಿ ಇರುತ್ತದೆ. ಆದ್ದರಿಂದ ಸೆನ್ಸೆಕ್ಸ್ ಶೂನ್ಯ ಆದಾಯ ಕೊಟ್ಟಿರುವುದಕ್ಕೆ ಅಚ್ಚರಿ ಪಡಬೇಕಾದ ಅಗತ್ಯವಿಲ್ಲ. ಇದು ಹೊಸತೂ ಅಲ್ಲ. ಈ ಹಿಂದೆ ಅನೇಕ ಬಾರಿ ಆಗಿರು ವಂಥದ್ದೇ.
ವಾಸ್ತವವಾಗಿ ಈಗ ಉತ್ತಮ ಷೇರುಗಳನ್ನು ಖರೀದಿಸಲು ಸಕಾಲ. ಇದನ್ನು ಹೂಡಿಕೆದಾರರು ಸದುಪ ಯೋಗಪಡಿಸಿಕೊಳ್ಳಲು ಯತ್ನಿಸಬೇಕೇ ಹೊರತು ಕಳವಳಪಡಬೇಕಿಲ್ಲ. ತಾಳ್ಮೆಯಿಂದ ದೀರ್ಘಾ ವಧಿಗೆ ಹೂಡಿಕೆ ಮಾಡುವವರಿಗೆ ಷೇರು ಮಾರುಕಟ್ಟೆ ಲಾಭವನ್ನು ಕೊಡುತ್ತದೆ. ಹೂಡಿಕೆ ಮಾಡಿದ ಬಳಿಕ ಕನಿಷ್ಠ 10-15 ವರ್ಷ ನೀವು ಅದನ್ನು ಮರೆತುಬಿಡಬೇಕು. ಹಾಗಿದ್ದರೆ ಮಾತ್ರ ದೊಡ್ಡ ಸಂಪತ್ತು ಸೃಷ್ಟಿಸಬಹುದು".
ಇದನ್ನೂ ಓದಿ: Keshava Prasad B Column: ಮೋದಿಯುಗದಲ್ಲಿ 3ನೇ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಭಾರತ !
ಅಮೆರಿಕದ ಜತೆಗಿನ ವಾಣಿಜ್ಯ ಸಂಘರ್ಷ, ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆಗಳು ಭಾರತದ ಮೇಲೆ ಪ್ರಭಾವ ಬೀರಿವೆ ಎಂಬ ಅಭಿಪ್ರಾಯ ಇದೆ. 2025ರಲ್ಲಿ 20 ಶತಕೋಟಿ ಡಾಲರ್ ವಿದೇಶಿ ಹೂಡಿಕೆ ಹೊರ ಹೋಗಿದೆ. ಆದರೆ ದೇಶೀಯ ಹೂಡಿಕೆದಾರರು ಇದೇ ಅವಧಿಯಲ್ಲಿ 62 ಶತಕೋಟಿ ಡಾಲರ್ ಹೂಡಿಕೆ ಮಾಡಿದ್ದಾರೆ.
ಆದ್ದರಿಂದ ಮಾರುಕಟ್ಟೆಯ ಮೇಲೆ ಹೂಡಿಕೆಯ ಹರಿವು ಪ್ರಭಾವ ಬೀರುತ್ತದೆ ಎಂಬ ನಂಬಿಕೆ ಯನ್ನೇ ಈ ಬೆಳವಣಿಗೆ ಒಪ್ಪುತ್ತಿಲ್ಲ. ಆದರೆ ಒಂದಂತೂ ನಿಜ, ಮ್ಯೂಚುವಲ್ ಫಂಡ್ ಮೂಲಕ ಭಾರತೀಯ ಸ್ಟಾಕ್ ಮಾರ್ಕೆಟ್‌ಗೆ 25000 ಕೋಟಿ ರುಪಾಯಿಗೂ ಹೆಚ್ಚು ಹಣ ಹರಿದು ಬರುತ್ತಿದೆ. ಜತೆಗೆ ರಿಟೇಲ್ ಹೂಡಿಕೆದಾರರೂ ನೇರವಾಗಿ ಸಾವಿರಾರು ಕೋಟಿ ರುಪಾಯಿಗಳನ್ನು ಷೇರುಗಳಲ್ಲಿ ಇನ್ವೆಸ್ಟ್ ಮಾಡುತ್ತಿದ್ದಾರೆ.
ಇದರಿಂದಾಗಿ ಸೂಚ್ಯಂಕಗಳು ಮತ್ತಷ್ಟು ಕುಸಿಯುವುದು ತಪ್ಪಿದೆ. ಹೀಗಿದ್ದರೂ, ಸ್ಟಾಕ್ ಮಾರ್ಕೆಟ್ ನಲ್ಲಿ ಸೂಚ್ಯಂಕಗಳು ಇಳಿದರೆ, ಮ್ಯೂಚುವಲ್ ಫಂಡ್‌ಗಳಲ್ಲಿಯೂ ಆದಾಯ ಇಳಿಯುತ್ತದೆ. ಇವೆರಡಕ್ಕೂ ಸಂಬಂಧ ಇದೆ. ಆದರೆ ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡುವುದು ಹೆಚ್ಚು ರಿಸ್ಕ್ ಇರುವಂಥದ್ದು.
ಮ್ಯೂಚುವಲ್ ಫಂಡ್‌ನದರೆ, ವೃತ್ತಿಪರ ಫಂಡ್ ಮ್ಯಾನೇಜರ್‌ಗಳು ನಿಮ್ಮ ಹಣವನ್ನು ಲಾಭದಾ ಯಕ ಷೇರುಗಳಲ್ಲಿ ಇನ್ವೆಸ್ಟ್ ಮಾಡೋದ್ರಿಂದ ನಿಮಗೆ ಚಿಂತೆ ಇರುವುದಿಲ್ಲ. ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್‌ಗಿಂತ ಹೆಚ್ಚಿನ ಆದಾಯವನ್ನು ನೀವು ಇಲ್ಲಿ ಗಳಿಸಬಹುದು. ಜತೆಗೆ ಸ್ಟಾಕ್ ಮಾರ್ಕೆಟ್‌ಗೆ ಮ್ಯೂಚುವಲ್ ಫಂಡ್ ‘ಸಿಪ್’ ಮೂಲಕ ಹೆಚ್ಚಿನ ಹಣ ಹರಿದು ಬರುತ್ತಿರುವುದು ಆರೋಗ್ಯಕರ, ಅದು ಹೂಡಿಕೆದಾರರ ವಿಶ್ವಾಸದ ಪ್ರತೀಕ.
ಮುಂದೇನು? ವಿದೇಶಿ ಹೂಡಿಕೆದಾರರು ಹಿಂತಿರುಗಿದರೆ ದಲಾಲ್ ಸ್ಟ್ರೀಟ್‌ನಲ್ಲಿ ಸೆಂಟಿಮೆಂಟ್ ಮೇಲಕ್ಕೇರಲಿದೆ. ಅಮೆರಿಕದ ಜತೆಗಿನ ವಾಣಿಜ್ಯ ಸಂಘರ್ಷ ತಿಳಿಯಾಗಬೇಕು. ಜುಲೈ-ಸೆಪ್ಟೆಂಬರ್ ಸೇರಿದಂತೆ ಮುಂಬರುವ ತ್ರೈಮಾಸಿಕಗಳ ಕಾರ್ಪೊರೇಟ್ ಫಲಿತಾಂಶ ಕೂಡ ನಿರ್ಣಾಯಕವಾಗಲಿದೆ ಎನ್ನುತ್ತಾರೆ ತಜ್ಞರು. ಹಾಗಾದರೆ ಸ್ಟಾಕ್ ಮಾರ್ಕೆಟ್ ಬೀಳುತ್ತಿರುವಾಗ ಹೂಡಿಕೆದಾರರು ಏನು ಮಾಡಬೇಕು? ವಿಶ್ವವಿಖ್ಯಾತ ಹೂಡಿಕೆದಾರ ಎನಿಸಿಕೊಂಡಿರುವ ಅಮೆರಿಕದ ವಾರೆನ್ ಬಫೆಟ್ ಅವರ ಈ ಪ್ರಸಿದ್ಧ ಹೇಳಿಕೆಯನ್ನೊಮ್ಮೆ ನೋಡಿ-‘ Be fearful when others are greedy and be greedy only when others are fearful"- ಇದು ಕೇವಲ ಮಾತಲ್ಲ, ವಾರೆನ್ ಬಫೆಟ್ ಸ್ವತಃ ಪಾಲಿಸಿದ ಕಾರ್ಯತಂತ್ರವೂ ಆಗಿದೆ.
ಏನಿದರ ಅರ್ಥ? ಸ್ಟಾಕ್ ಮಾರ್ಕೆಟ್‌ನಲ್ಲಿ ಜನ ಅತ್ಯಾಸಕ್ತಿಯಿಂದ ಮತ್ತು ಮುಗಿಬಿದ್ದು ಷೇರು ಗಳನ್ನು ಖರೀದಿಸಿದಾಗ, ಸೂಚ್ಯಂಕಗಳು ಎತ್ತರಕ್ಕೇರುತ್ತವೆ. ಅಂಥ ಸಂದರ್ಭ ನೋಡಿಕೊಂಡು ನಿಮ್ಮ ಕೈಯಲ್ಲಿರುವ ಷೇರುಗಳನ್ನು ಮಾರಿ ಲಾಭ ಗಳಿಸಿ. ಸೂಚ್ಯಂಕಗಳು ಕುಸಿತಕ್ಕೀಡಾದಾಗ ಷೇರುದಾರರು ಭೀತಿಯಿಂದ ತಮ್ಮಲ್ಲಿರುವ ಷೇರುಗಳನ್ನೂ ಮಾರಿ ಬಿಡುತ್ತಾರೆ. ಅಂಥ ಸಂದರ್ಭ ನೋಡಿಕೊಂಡು, ಒಳ್ಳೆಯ ಷೇರುಗಳನ್ನು ಖರೀದಿಸಿ ಇಟ್ಟುಕೊಳ್ಳಿ. ಏಕೆಂದರೆ ಆಗ ಕಡಿಮೆ ಬೆಲೆಗೆ ಫಂಡಮೆಂಟಲ್ ಆಗಿ ಚೆನ್ನಾಗಿರುವ ಷೇರುಗಳು ಸಿಗುತ್ತವೆ.
2008ರ ಜಾಗತಿಕ ಆರ್ಥಿಕ ಹಿಂಜರಿತದ ವೇಳೆ ಅನೇಕ ಮಂದಿ ಭಯದಿಂದ ಬ್ಯಾಂಕಿಂಗ್ ಷೇರು ಗಳನ್ನು ಮಾರಾಟ ಮಾಡಿದರೆ, ವಾರೆನ್ ಬಫೆಟ್ ಅವರು ಗೋಲ್ಡ್ಮನ್ ಸ್ಯಾಕ್ಸ್ ಗ್ರೂಪ್‌ನ ಷೇರು ಗಳನ್ನು 5 ಶತಕೋಟಿ ಡಾಲರ್ ಕೊಟ್ಟು ಖರೀದಿಸಿದ್ದರು. 2011ರಲ್ಲಿ ಬಫೆಟ್ ಅವರ ‘ಬರ್ಕ್‌ಶೈರ್ ಹಾಥ್ ವೇ ಗ್ರೂಪ್’ ಈ ಷೇರುಗಳ ಮಾರಾಟದಿಂದ 3 ಶತಕೋಟಿ ಡಾಲರ್ ಲಾಭ ಗಳಿಸಿತ್ತು.
ಎರಡನೆಯದಾಗಿ, ನೀವು ಹೂಡಿಕೆ ಮಾಡುವ ಕಂಪನಿಯ ಬಿಸಿನೆಸ್ ಬಗ್ಗೆ ಅರ್ಥ ಮಾಡಿಕೊಳ್ಳಿ. ಉದಾಹರಣೆಗೆ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 30 ಪರ್ಸೆಂಟ್ ಬಿದ್ದು ಹೋಯಿತು ಎಂದು ಇಟ್ಟುಕೊಳ್ಳಿ. ಆಗ ಜನ ಕೋಕಾ ಕೋಲ ಕುಡಿಯುವುದನ್ನು ಬಿಟ್ಟು ಬಿಡುತ್ತಾರೆಯೇ? ‘ಇಲ್ಲ’ ಎಂಬುದೇ ನಿಮ್ಮ ಉತ್ತರವಾದರೆ, ಕೋಕಾ ಕೋಲ ಕಂಪನಿಯ ಷೇರಿನ ಆಂತರಿಕ ಮೌಲ್ಯಕ್ಕೆ ಧಕ್ಕೆಯಾಗಿಲ್ಲ ಎಂದರ್ಥ.
ಹಾಗೂ ನೀವು ಆತಂಕಪಡಬೇಕಿಲ್ಲ. ಈ ಉದಾಹರಣೆಯನ್ನು ಎಲ್ಲ ಕಂಪನಿಗಳ ಷೇರಿಗೂ ಅನ್ವಯ ಮಾಡಬಹುದು. ಉದಾಹರಣೆಗೆ ಸೆನ್ಸೆಕ್ಸ್-ನಿಫ್ಟಿ 30 ಪರ್ಸೆಂಟ್ ಬಿದ್ದರೆ, ಮಾರುತಿ ಸುಜುಕಿ ಕಂಪನಿ ಯ ಕಾರುಗಳನ್ನು ಕೊಳ್ಳುವುದನ್ನು ಜನ ನಿಲ್ಲಿಸಲಿದ್ದಾರೆಯೇ? ‘ಇಲ್ಲ’ ಎಂದಿದ್ದರೆ ಮಾರುತಿ ಸುಜುಕಿ ಷೇರಿನ ಆಂತರಿಕ ಮೌಲ್ಯದ ಬಗ್ಗೆ ನೀವು ಕಳವಳಪಡಬೇಕಾದ ಅವಶ್ಯಕತೆ ಇಲ್ಲ.
ಯಾವುದೇ ಬಿಸಿನೆಸ್‌ನ ಫಂಡಮೆಂಟಲ್ ಸ್ಟ್ರೆಂತ್, ಷೇರಿನ ದರದ ಏರಿಳಿತದಲ್ಲಿ ಪ್ರತಿಫಲನ ವಾಗುವುದಿಲ್ಲ ಎನ್ನುತ್ತಾರೆ ವಾರೆನ್ ಬಫೆಟ್. ಮೂರನೆಯದಾಗಿ, ಮಾರುಕಟ್ಟೆಯ ಚಲನವಲನ ಗಳಿಗೆ ಮಹತ್ವ ಕೊಡಬೇಡಿ, ಅದು ಮೂರ್ಖತನದ ಕೆಲಸ ಎನ್ನುತ್ತಾರೆ ವಾರೆನ್ ಬಫೆಟ್.
ಬದಲಿಗೆ ದೀರ್ಘಾವಧಿಗೆ ಹೂಡಿಕೆಯನ್ನು ಮುಂದುವರಿಸಿ. ಸ್ವತಃ ವಾರೆನ್ ಬಫೆಟ್ ಕೋಕಾ ಕೋಲಾ ಷೇರುಗಳನ್ನು 36 ವರ್ಷಗಳ ಕಾಲ ಇಟ್ಟುಕೊಂಡಿದ್ದರು. ಅಮೆರಿಕನ್ ಎಕ್ಸ್‌ಪ್ರೆಸ್ ಷೇರುಗಳನ್ನು 1960ರಿಂದಲೂ ಇಟ್ಟುಕೊಂಡಿದ್ದಾರೆ!
ನಾಲ್ಕನೆಯದಾಗಿ, ಸ್ಟಾಕ್ ಮಾರುಕಟ್ಟೆ ಕುಸಿತದ ಟ್ರೆಂಡ್ ನಲ್ಲಿರುವಾಗ ಷೇರುಗಳನ್ನು ಖರೀದಿಸುವ ಸಲುವಾಗಿಯೇ ಬೇಕಾದಷ್ಟು ಹಣವನ್ನು ಇಟ್ಟುಕೊಂಡಿರಬೇಕು. ವಾರೆನ್ ಬಫೆಟ್ ಸೂಚ್ಯಂಕಗಳು ಏರುತ್ತಿದ್ದಾಗ ಭಾರಿ ಹಣವನ್ನು ಜಮೆ ಮಾಡಿ ಇಟ್ಟುಕೊಳ್ಳುತ್ತಿದ್ದರು. ಕೆಲವರು ಅದಕ್ಕಾಗಿ ಟೀಕಿಸು ತ್ತಿದ್ದರು. ಆದರೆ 2010ರಲ್ಲಿ ಮಾರುಕಟ್ಟೆ ಸೂಚ್ಯಂಕ ಭಾರಿ ಪತನಕ್ಕೀಡಾದಾಗ ಬಫೆಟ್ ಅವರು ಒಳ್ಳೆಯ ಷೇರುಗಳನ್ನು ಬಾಚಿಕೊಂಡು ಖರೀದಿಸಿದರು.
ಈಗ ಮತ್ತೆ ಬಫೆಟ್ ಅವರು ಹಣವನ್ನು ಸಂಗ್ರಹಿಸುತ್ತಿದ್ದಾರೆ! ಬಹುಶಃ ಅವರೀಗ ಮಾರ್ಕೆಟ್‌ನಲ್ಲಿ ಮತ್ತೊಂದು ಭಾರಿ ಪತನವನ್ನು ನಿರೀಕ್ಷಿಸುತ್ತಿದ್ದಾರೆ. ವಾರೆನ್ ಬಫೆಟ್ ಅವರು, ಆಪಲ್ ಮತ್ತು ಬ್ಯಾಂಕ್ ಆಫ್ ಅಮೆರಿಕದಿಂದ ತಮ್ಮ ಷೇರು ಹೂಡಿಕೆಯಲ್ಲಿ ಭಾರಿ ಪ್ರಮಾಣವನ್ನು ಹಿಂತೆಗೆದು ಕೊಂಡಿದ್ದಾರೆ.
ಆಪಲ್‌ನಲ್ಲಂತೂ ಅವರ ಹೂಡಿಕೆಯು ಅರ್ಧಕ್ಕರ್ಧ ಇಳಿದಿದೆ. ಬರ್ಕ್‌ಶೈರ್‌ನ ಖಾತೆಯಲ್ಲೀಗ 334 ಶತಕೋಟಿ ಡಾಲರ್‌ಗೂ ಅಧಿಕ ಕ್ಯಾಶ್ ಇದೆ. ಇದರ ಅರ್ಥವೇನು? ಭವಿಷ್ಯದಲ್ಲಿ ಮಾರ್ಕೆಟ್ ಕ್ರ್ಯಾಶ್ ಆದಾಗ ಬಫೆಟ್ ಭಾರಿ ಹೂಡಿಕೆ ಮಾಡುವ ಸಾಧ್ಯತೆ ಇದೆ. ಹಾಗಾದರೆ ಸೆನ್ಸೆಕ್ಸ್ ಮತ್ತು ನಿಫ್ಟಿ ಚೇತರಿಕೆಗೆ ಆಗಬೇಕಾದ್ದೇನು? ಜೆಪಿ ಮೋರ್ಗಾನ್ ವರದಿಯ ಪ್ರಕಾರ, ಜನರ ಕೈಯಲ್ಲಿ ಉಳಿತಾಯ ಮತ್ತು ಖರ್ಚು ಮಾಡುವ ಸಾಮರ್ಥ್ಯ ಹೆಚ್ಚಬೇಕು. ಆಗ ವಸ್ತುಗಳು, ಸೇವೆಗಳಿಗೆ ಬೇಡಿಕೆಯೂ ವೃದ್ಧಿಸುತ್ತದೆ.
ಉತ್ಪಾದನಾ ಚಟುವಟಿಕೆ ಸುಧಾರಿಸುತ್ತದೆ. ಇಂಡಸ್ಟ್ರಿಯಲ್ಲಿ ಹೊಸ ಹೂಡಿಕೆ ಹರಿದು ಬರುತ್ತದೆ. ಷೇರು ಸೂಚ್ಯಂಕವೂ ಜಿಗಿಯಲಿದೆ. ಜಿಎಸ್‌ಟಿದರಗಳು ಇಳಿಕೆಯಾಗಿರುವುದರಿಂದ ಆಟೊ ಮೊಬೈಲ್, ದಿನಬಳಕೆಯ ವಸ್ತುಗಳು, ಸಿಮೆಂಟ್, ವಿಮೆ, ಹೆಲ್ತ್‌ಕೇರ್ ವಲಯದ ಕಂಪನಿಗಳ ವಹಿವಾಟು ಹೆಚ್ಚುವ ನಿರೀಕ್ಷೆ ಇದೆ ಎನ್ನುತ್ತಿದೆ ಜೆಪಿ ಮೋರ್ಗಾನ್ ವರದಿ.
“ಭಾರತದಲ್ಲೀಗ ಸೈಡ್‌ವೇಸ್ ಮೂವ್‌ಮೆಂಟ್ ನಡೆಯುತ್ತಿದೆ. ಇದು ದೀರ್ಘಾವಧಿಗೆ ಮುಂದು ವರಿಯುವ ಸಾಧ್ಯತೆ ಇದೆ" ಎನ್ನುತ್ತಾರೆ ಎಲಿಕ್ಸಿರ್ ಈಕ್ವಿಟೀಸ್ ಸಂಸ್ಥೆಯ ನಿರ್ದೇಶಕ ದೀಪನ್ ಮೆಹ್ತಾ. ಏನಿದು ಸೈಡ್‌ವೇಸ್ ಮೂವ್ ಮೆಂಟ್? ಅಂದರೆ ಇಲ್ಲಿ ಸೆನ್ಸೆಕ್ಸ್, ನಿಫ್ಟಿ ಜಾಸ್ತಿ ಕುಸಿಯುವು ದಿಲ್ಲ, ಏರುವುದೂ ಇಲ್ಲ.
ಯಾವುದೇ ಗಣನೀಯ ಏರಿಕೆ-ಇಳಿಕೆ ಇರುವುದಿಲ್ಲ. ಇದರಿಂದ ಹೂಡಿಕೆದಾರರಿಗೂ ತಾತ್ಕಾಲಿಕವಾಗಿ ಲಾಭವಾಗುವುದಿಲ್ಲ. ನಿಫ್ಟಿಯನ್ನು ಗಮನಿಸಿ- ಒಮ್ಮೆ 25000 ಅಂಕ ದಾಟುತ್ತದೆ, ಮತ್ತೆ ಸ್ವಲ್ಪ ಇಳಿಯುತ್ತದೆ. ಇದು ಪುನರಾವರ್ತನೆಯಾಗುತ್ತಿದೆ. ಒಬ್ಬ ವ್ಯಕ್ತಿಯನ್ನು ಲಿಕ್ವಿಡ್ ಆಕ್ಸಿಜನ್‌ನಲ್ಲಿ ಇರಿಸಿದರೆ ಆತ ಸಾಯುವುದೂ ಇಲ್ಲ, ಬದುಕುವುದೂ ಕಿರಿಕಿರಿಯಾಗುತ್ತದೆ.
ಆಕ್ಸಿಜನ್ ಸಾಯಲು ಬಿಡುವುದಿಲ್ಲ, ಲಿಕ್ವಿಡ್ ಬದುಕಲು ಬಿಡುವುದಿಲ್ಲ. ಸ್ಟಾಕ್ ಮಾರ್ಕೆಟ್‌ನಲ್ಲೂ ಈಗ ನಿರಂತರವಾಗಿ ಮ್ಯೂಚುವಲ್ ಫಂಡ್‌ಗಳ ಮೂಲಕ ಹಣದ ಹರಿವು ಇರೋದ್ರಿಂದ ಭಾರಿ ಕರೆಕ್ಷನ್‌ಗಳು ಆಗುತ್ತಿಲ್ಲ. ಆದರೆ ಫಂಡಮೆಂಟಲ್ಸ್ ಸದ್ಯಕ್ಕೆ ಭಾರಿ ಚೇತರಿಕೆಗೂ ಬಿಡುತ್ತಿಲ್ಲ. ಆದರೆ ಹೂಡಿಕೆದಾರರು ವಾರೆನ್ ಬಫೆಟ್ ಸೂತ್ರವನ್ನು ಓದಿ ಶಾಂತರಾಗುವುದು ಉತ್ತಮ. ಏಕೆಂದರೆ ಎನ್‌ಎಸ್ ಇನಲ್ಲಿ ಷೇರು ವ್ಯವಹಾರ ಮಾಡುತ್ತಿರುವ ರಿಟೇಲ್ ಹೂಡಿಕೆದಾರರ ಸಂಖ್ಯೆ 12 ಕೋಟಿಗೆ ಏರಿಕೆಯಾಗಿದೆ!
ಕೊನೆಯಂದು ಗುಡ್ ನ್ಯೂಸ್. ಗ್ಲೋಬಲ್ ಬ್ರೋಕರೇಜ್ ಮೋರ್ಗಾನ್ ಸ್ಟ್ಯಾನ್ಲಿಯ ಇತ್ತೀಚಿನ ವರದಿ ಯ ಪ್ರಕಾರ ಸೆನ್ಸೆಕ್ಸ್ 2026ರ ಜೂನ್ ವೇಳೆಗೆ 1 ಲಕ್ಷ ಮೈಲಿಗಲ್ಲನ್ನು ದಾಟುವ ನಿರೀಕ್ಷೆ ಇದೆ (ಈಗ 81000 ಇದೆ). ಏನಿಲ್ಲದಿದ್ದರೂ, 89000 ಅಂಕಗಳಿಗಾದರೂ ಮುಟ್ಟುವ ನಿರೀಕ್ಷೆ ಇದೆ.
ಭಾರತದ ಪ್ರಬಲ ಪ್ರಜಾಪ್ರಭುತ್ವ ಇಡೀ ಜಗತ್ತಿನ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಮೂಲ ಸೌಕರ್ಯಕ್ಕೆ ಕೇಂದ್ರ ಸರಕಾರ ನೀಡುತ್ತಿರುವ ಆದ್ಯತೆ, ಹೆಚ್ಚುತ್ತಿರುವ ಉದ್ಯಮಶೀಲತೆಯಿಂದಾಗಿ ಸ್ಟಾಕ್ ಮಾರ್ಕೆಟ್‌ಗೆ ಭವಿಷ್ಯ ಇದೆ ಎಂದಿದೆ ವರದಿ.