ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Dr Vijay Darda Column: ತೈವಾನ್‌ ಮೇಲೆ ಯುದ್ದ ಸಾರಲಿದೆಯೇ ಚೀನಾ ?

ರಷ್ಯಾ-ಉಕ್ರೇನ್ ನಡುವಿನ ಯುದ್ಧ ಅಂತ್ಯಗೊಳಿಸಲು ಅಮೆರಿಕ ಮಧ್ಯಸ್ಥಿಕೆ ವಹಿಸಿ ಮಾತುಕತೆ ನಡೆಸಿತು. ಆ ವೇಳೆ, ರಷ್ಯಾ ಈಗಾಗಲೇ ವಶಪಡಿಸಿಕೊಂಡಿರುವ ಜಾಗ ರಷ್ಯಾದ ಬಳಿಯಲ್ಲೇ ಉಳಿಯು ವಂತೆ ನೋಡಿಕೊಳ್ಳುವ ಬಗ್ಗೆ ಪ್ರಸ್ತಾಪವಾಗಿದೆ. ಅಂದರೆ ರಷ್ಯಾದವರು ಕಬಳಿಸಿದ ಉಕ್ರೇನ್‌ನ ಜಾಗ ರಷ್ಯಾಕ್ಕೇ! ಇನ್ನೊಂದೆಡೆ, ಅಮೆರಿಕನ್ ಸೈನಿಕರು ದಾಳಿ ನಡೆಸಿ ವೆನೆಜುವೆಲಾದ ಅಧ್ಯಕ್ಷರನ್ನೇ ಹೊತ್ತು ಕೊಂಡು ಹೋಗಿ ಜೈಲಿನಲ್ಲಿ ಕೂಡಿ ಹಾಕಿದ್ದಾರೆ.

ಸಂಗತ

ಜಗತ್ತಿನಲ್ಲಿ ಇತ್ತೀಚೆಗೆ ಬಿರುಸಿನ ಬೆಳವಣಿಗೆಗಳು ನಡೆಯುತ್ತಿವೆ. ಭೂರಾಜಕೀಯ ಚಿತ್ರಣಗಳು ಏಕಾ ಏಕಿ ಬದಲಾಗುತ್ತಿವೆ. ಅದರಿಂದಾಗಿ ಜಗತ್ತಿನಲ್ಲಿ ಈವರೆಗೆ ಇದ್ದ ಅಕಾರದ ಸಮತೋಲನ ಹೊಸ ರೂಪ ಪಡೆಯುತ್ತಿದೆ. ಇದನ್ನೆಲ್ಲ ನೋಡಿದಾಗ ಹೊಸ ಪ್ರಶ್ನೆಯೊಂದು ಅನೇಕರ ಮನದಲ್ಲಿ ಹುಟ್ಟಿ ಕೊಂಡಿದೆ: ಸದ್ಯದಲ್ಲೇ ತೈವಾನ್ ದೇಶವನ್ನು ಚೀನಾ ತನ್ನ ವಶಕ್ಕೆ ಪಡೆದುಕೊಳ್ಳಲಿದೆಯೇ? ಅದನ್ನು ಜಗತ್ತು ಅಸಹಾಯಕವಾಗಿ ನೋಡುತ್ತಾ ಕುಳಿತುಕೊಳ್ಳಲಿದೆಯೇ? ಅಥವಾ ತೈವಾನ್ ದೇಶವನ್ನು ಉಳಿಸಲು ಅಮೆರಿಕ ಧಾವಿಸುತ್ತದೆಯೇ? ಹಾಗೇನಾದರೂ ಅಮೆರಿಕ ರಂಗಪ್ರವೇಶ ಮಾಡಿದರೆ ಚೀನಾದ ನಡೆ ಏನಿರಬಹುದು? ಇವೆಲ್ಲಕ್ಕಿಂತ ದೊಡ್ಡ ಪ್ರಶ್ನೆಯೆಂದರೆ, ಈ ಬೆಳವಣಿಗೆಗಳಿಂದಾಗಿ ಭಾರತದ ಮೇಲೇನು ಪರಿಣಾಮ ಉಂಟಾಗಲಿದೆ? ಏಕೆ ಈ ಪ್ರಶ್ನೆ ಈಗ ಇದ್ದಕ್ಕಿದ್ದಂತೆ ಎದ್ದು ಕುಳಿತಿದೆ ಅಂದರೆ, ರಷ್ಯಾದವರು ಉಕ್ರೇನ್ ಮೇಲೆ ದಾಳಿ ನಡೆಸಿ ಆ ದೇಶದ 7000 ಚದರ ಕಿಲೋಮೀಟರ್ ವಿಸ್ತೀರ್ಣದ ಜಾಗವನ್ನು ತಮ್ಮ ದೇಶಕ್ಕೆ ಸೇರಿಸಿಕೊಂಡಿದ್ದಾರೆ.

ರಷ್ಯಾ-ಉಕ್ರೇನ್ ನಡುವಿನ ಯುದ್ಧ ಅಂತ್ಯಗೊಳಿಸಲು ಅಮೆರಿಕ ಮಧ್ಯಸ್ಥಿಕೆ ವಹಿಸಿ ಮಾತುಕತೆ ನಡೆಸಿತು. ಆ ವೇಳೆ, ರಷ್ಯಾ ಈಗಾಗಲೇ ವಶಪಡಿಸಿಕೊಂಡಿರುವ ಜಾಗ ರಷ್ಯಾದ ಬಳಿಯಲ್ಲೇ ಉಳಿಯುವಂತೆ ನೋಡಿಕೊಳ್ಳುವ ಬಗ್ಗೆ ಪ್ರಸ್ತಾಪವಾಗಿದೆ. ಅಂದರೆ ರಷ್ಯಾದವರು ಕಬಳಿಸಿದ ಉಕ್ರೇನ್‌ನ ಜಾಗ ರಷ್ಯಾಕ್ಕೇ! ಇನ್ನೊಂದೆಡೆ, ಅಮೆರಿಕನ್ ಸೈನಿಕರು ದಾಳಿ ನಡೆಸಿ ವೆನೆಜುವೆಲಾದ ಅಧ್ಯಕ್ಷರನ್ನೇ ಹೊತ್ತುಕೊಂಡು ಹೋಗಿ ಜೈಲಿನಲ್ಲಿ ಕೂಡಿ ಹಾಕಿದ್ದಾರೆ.

ಅದರೊಂದಿಗೆ ವೆನೆಜುವೆಲಾದ ಆಡಳಿತ ವ್ಯವಸ್ಥೆ ನಿರಾಯಾಸವಾಗಿ ಅಮೆರಿಕದ ಕೈಗೆ ಬಂದಿದೆ. ಜಗತ್ತಿನ ಎರಡು ಪ್ರಬಲ ದೇಶಗಳು ಹೀಗೆ ಇನ್ನೊಂದು ದೇಶದ ಮೇಲೆ ದಾಳಿ ನಡೆಸಿ, ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಬಂದ ವಿರೋಧವನ್ನು ಜೀರ್ಣಿಸಿಕೊಂಡಿದ್ದನ್ನು ನೋಡಿದ ಮೇಲೆ ಚೀನಾ ಸುಮ್ಮನೆ ಕುಳಿತುಕೊಳ್ಳುತ್ತದೆಯೇ? ಜಗತ್ತಿನ ಇನ್ನೊಂದು ಪ್ರಬಲ ದೇಶವಾದ ತಾನು ಕೂಡ ತೈವಾನ್ ಮೇಲೆ ದಾಳಿ ನಡೆಸಿ ಆ ದೇಶವನ್ನು ವಶಕ್ಕೆ ಪಡೆದುಕೊಳ್ಳಲು ಇದು ಸುವರ್ಣಾವಕಾಶ ವೆಂದೇ ಚೀನಾ ಯೋಚಿಸುತ್ತದೆ.

ಇನ್ನೊಂದು ದೇಶವನ್ನು ವಶಪಡಿಸಿಕೊಳ್ಳುವ ಖಯಾಲಿ ಚೀನಾಕ್ಕೆ ಮೊದಲಿನಿಂದಲೂ ಇದೆ. 1950-51ರಲ್ಲೇ ಅದು ಟಿಬೆಟ್ ದೇಶವನ್ನು ವಶಕ್ಕೆ ತೆಗೆದುಕೊಂಡಿದೆ. ಅದನ್ನು ನೋಡಿ ಜಗತ್ತು ಬಾಯ್ಮಾತಿ ನಲ್ಲಿ ಒಂದಷ್ಟು ಖಂಡನೆ ವ್ಯಕ್ತಪಡಿಸಿತೇ ಹೊರತು ಇನ್ನೇನೂ ಮಾಡಲಿಲ್ಲ. ತೈವಾನ್ ವಿಷಯಕ್ಕೆ ಬಂದರೆ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಆ ದೇಶವನ್ನು ವಶಪಡಿಸಿಕೊಳ್ಳುವ ಬಗ್ಗೆ ನಿರಂತರವಾಗಿ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ.

ಇದನ್ನೂ ಓದಿ: Dr Vijay Darda Column: ಇರಾನ್‌ʼನಲ್ಲಿ ಬಂಡಾಯದ ಬೆಂಕಿ ಹೊತ್ತಿಕೊಂಡಿರುವುದೇಕೆ ?

ದೇಶದ ಸೇನೆಗೂ ಕೂಡ ಅವರು ಸನ್ನದ್ಧವಾಗಿರುವಂತೆ ಸೂಚನೆ ನೀಡಿದ್ದಾರೆ. ಪ್ರತಿ ವರ್ಷ ತೈವಾನ್ ದೇಶವನ್ನು ಹೆದರಿಸುವುದಕ್ಕೆಂದೇ ಚೀನಾ ಒಂದು ಸೇನಾ ಕವಾಯತು ನಡೆಸುತ್ತದೆ. ಇನ್ನೇನು ತೈವಾನ್ ಮೇಲೆ ಚೀನಾ ಯುದ್ಧಕ್ಕೆ ಹೊರಟೇ ಬಿಟ್ಟಿತು ಎಂದು ಜಗತ್ತು ಭಾವಿಸುವಂತೆ ಮಾಡಿ, ಕೊನೆಗೆ ಸುಮ್ಮನಾಗುತ್ತದೆ.

ತೈವಾನ್‌ನ ವಾಯುಸೀಮೆಯೊಳಗೆ ಚೀನಾದ ವಿಮಾನಗಳು ಹಾರಾಡುವುದು ಮತ್ತು ತೈವಾನ್‌ನ ಸಮುದ್ರದೊಳಗೆ ಚೀನಾದ ಹಡಗುಗಳು ಅತಿಕ್ರಮ ಪ್ರವೇಶ ಮಾಡುವುದು ಹೊಸತೇನಲ್ಲ. ಅಪ್ಪಿ ತಪ್ಪಿ ತೈವಾನ್ ಸೇನೆಯೇನಾದರೂ ಚೀನಾದ ಒಂದೇ ಒಂದು ವಿಮಾನ ಅಥವಾ ಹಡಗಿನ ಮೇಲೆ ದಾಳಿ ನಡೆಸಿದರೂ ಚೀನಾ ತಕ್ಷಣ ದೊಡ್ಡ ಪ್ರಮಾಣದಲ್ಲಿ ದಾಳಿ ಆರಂಭಿಸಲು ಸಿದ್ಧವಾಗಿ ಕುಳಿತಿದೆ.

ತೈವಾನ್ ದಾಳಿ ನಡೆಸಿದ್ದಕ್ಕೇ ತಾನು ಪ್ರತಿದಾಳಿ ನಡೆಸುತ್ತಿರುವುದಾಗಿ ನೆಪ ಹೇಳುವುದಕ್ಕೆ ಅದು ಸಿದ್ಧತೆ ಮಾಡಿಕೊಂಡಿದೆ. ಇದನ್ನು ಅರಿತಿರುವ ತೈವಾನ್, ಬಹಳ ತಾಳ್ಮೆಯಿಂದ ತೆಪ್ಪಗಿದೆ. ಈವರೆಗೆ ಯಥಾಸ್ಥಿತಿಯೇ ಇದೆ. ನಿಮ್ಮಲ್ಲಿ ಬಹಳ ಜನರಿಗೆ ಏಕೆ ಚೀನಾ ಅಷ್ಟೊಂದು ಹಟಕ್ಕೆ ಬಿದ್ದು ತೈವಾನ್ ದೇಶವನ್ನು ವಶಪಡಿಸಿಕೊಳ್ಳಲು ಹೊಂಚು ಹಾಕುತ್ತಿದೆ ಎಂಬ ಪ್ರಶ್ನೆ ಇರಬಹುದು.

ಇದಕ್ಕೆ ಉತ್ತರ ಕಂಡುಕೊಳ್ಳಲು ನಾವು ಇತಿಹಾಸಕ್ಕೆ ಹೋಗಬೇಕು. 1931ರಲ್ಲಿ ಜಪಾನ್ ಸೇನೆ ಚೀನಾ ವನ್ನು ವಶಪಡಿಸಿಕೊಳ್ಳಲು ಆರಂಭಿಸಿತ್ತು. 1945ರ ವೇಳೆಗೆ ಅದು ಚೀನಾದ ದೊಡ್ಡ ಭಾಗವನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ಜಪಾನ್‌ನ ಹಿರೋಶಿಮಾ ಮತ್ತು ನಾಗಾಸಾಕಿ ನಗರಗಳ ಮೇಲೆ ಅಮೆರಿಕ ಅಣುಬಾಂಬ್ ಹಾಕಿದಾಗ ಎರಡನೇ ವಿಶ್ವ ಮಹಾಯುದ್ಧ ಕೊನೆ‌ ಗೊಂಡಿತು.

ಆಗ ಜಪಾನ್‌ನ ಹಿಡಿತದಿಂದ ಚೀನಾ ಸ್ವತಂತ್ರವಾಗಿ, ರಿಪಬ್ಲಿಕ್ ಆಫ್ ಚೀನಾ (ಚೀನಾ ಗಣರಾಜ್ಯ) ಎಂದು ನಾಮಕರಣ ಮಾಡಿಕೊಂಡಿತು. ಆದರೆ ಬಹಳ ಬೇಗನೆ ಅಲ್ಲಿ ಎರಡು ರಾಜಕೀಯ ಪಕ್ಷಗಳ ನಡುವೆ ಅಧಿಕಾರದ ಸಂಘರ್ಷ ಆರಂಭವಾಯಿತು. ಅವುಗಳ ಪೈಕಿ ಅತ್ಯಂತ ಹಳೆಯ ಪಕ್ಷವೆಂದರೆ ಕೌಮಿನ್ ತಾಂಗ್ ಅಲಿಯಾಸ್ ಚೈನೀಸ್ ನ್ಯಾಷನಲಿಸ್ಟ್ ಪಾರ್ಟಿ. ಅದರ ಮುಖ್ಯಸ್ಥ ಚಿಯಾಂಗ್ ಕಾಯ್-ಶೇಕ್ ಆಗಿದ್ದರು.

ಇನ್ನೊಂದು ಪಕ್ಷವೆಂದರೆ ಮಾವೋ ತ್ಸೆ ತುಂಗ್ ನೇತೃತ್ವದ ಚೈನೀಸ್ ಕಮ್ಯುನಿಸ್ಟ್ ಪಾರ್ಟಿ. ಇವರಿಬ್ಬರ ನಡುವೆ ತೀವ್ರ ಸಂಘರ್ಷ ಏರ್ಪಟ್ಟಿತು. ರಾಜಕೀಯ ಸಮರದಲ್ಲಿ ಮಾವೋ ಗೆದ್ದರು. ಚಿಯಾಂಗ್ ಕಾಯ್ ಶೇಕ್ ಓಡಿಹೋಗಿ ಚೀನಾದ ಕರಾವಳಿ ಪ್ರದೇಶದಲ್ಲಿ ಆಶ್ರಯ ಪಡೆದುಕೊಂಡು, ಆ ಪ್ರದೇಶವನ್ನೇ ಸ್ವತಂತ್ರ ದೇಶ ಎಂದು ಘೋಷಿಸಿಕೊಂಡರು. ಅದಕ್ಕೂ ರಿಪಬ್ಲಿಕ್ ಆಫ್ ಚೀನಾ ಎಂದೇ ಹೆಸರಿಟ್ಟಿದ್ದರು. ಅದು ಕ್ರಮೇಣ ತೈವಾನ್ ಆಗಿ ಗುರುತಿಸಿಕೊಂಡಿತು. ‌

ಚಿಯಾಂಗ್ ಕಾಯ್ ಶೇಕ್ ತನ್ನ ದೇಶಕ್ಕೆ ರಿಪಬ್ಲಿಕ್ ಆಫ್ ಚೀನಾ ಎಂದು ಹೆಸರಿಟ್ಟಿದ್ದರಿಂದ ಮಾವೋ ತ್ಸೆ ತುಂಗ್ ತನ್ನ ಅಧೀನದಲ್ಲಿರುವ ಮುಖ್ಯ ಪ್ರದೇಶದ ಚೀನಾಕ್ಕೆ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಎಂದು ಹೆಸರು ಬದಲಾವಣೆ ಮಾಡಿಕೊಂಡರು. ತೈವಾನ್ ಪ್ರದೇಶವನ್ನು ಕೂಡ ಚೀನಾಕ್ಕೆ ಸೇರಿಸಬೇಕು ಎಂದು ಮಾವೋ ಎಷ್ಟೇ ಪ್ರಯತ್ನಪಟ್ಟರೂ ಅದು ಸಾಧ್ಯವಾಗಲಿಲ್ಲ. ‌

ಎಲ್ಲಾ ದಿಕ್ಕಿನಲ್ಲೂ ಸಮುದ್ರದಿಂದ ಸುತ್ತುವರೆದ ದ್ವೀಪವನ್ನು ವಶಪಡಿಸಿಕೊಳ್ಳುವ ಸಲಕರಣೆ ಅಥವಾ ಮೂಲಸೌಕರ್ಯಗಳು ಆ ದಿನಗಳಲ್ಲಿ ಇರಲಿಲ್ಲ. ಆಗಾಗ ಒಂದಷ್ಟು ದಾಳಿಗಳನ್ನು ಮಾವೋ ನಡೆಸಿದರೂ ಅವು ಯಶಸ್ಸು ನೀಡಿರಲಿಲ್ಲ. ಈ ಎಲ್ಲ ಬೆಳವಣಿಗೆಗಳಿಗೂ ಹೊಸ ತಿರುವು ದೊರೆತಿದ್ದು 1979ರಲ್ಲಿ. ಆ ವರ್ಷ ಚೀನಾ ಮತ್ತು ಅಮೆರಿಕ ದೇಶಗಳು ಒಂದು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದವು.

ಅಮೆರಿಕಕ್ಕೆ ತನ್ನ ಉತ್ಪನ್ನಗಳನ್ನು ಮಾರಲು ದೊಡ್ಡ ಮಾರುಕಟ್ಟೆ ಬೇಕಿತ್ತು. ಚೀನಾದಲ್ಲಿ ಅತಿ ಹೆಚ್ಚು ಜನಸಂಖ್ಯೆಯಿತ್ತು. ಅಮೆರಿಕದ ವಸ್ತುಗಳನ್ನು ಚೀನಾದಲ್ಲಿ ಮಾರಲು ಅನುಮತಿ ನೀಡುವು ದಕ್ಕೆ ಪ್ರತಿಯಾಗಿ ಚೀನಾದ ಅಂದಿನ ನಾಯಕ ಡೆಂಗ್ ಕ್ಸಿಯಾಪಿಂಗ್ ಅವರು ‘ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವನ್ನೇ ನಿಜವಾದ ಚೀನಾ ಎಂದು ಗುರುತಿಸಬೇಕೆಂಬ ಬೇಡಿಕೆಯಿಟ್ಟರು. ‌

ಅದಕ್ಕೆ ಆಗಿನ ಅಮೆರಿಕದ ಅಧ್ಯಕ್ಷ ಜಿಮ್ಮಿ ಕಾರ್ಟರ್ ಒಪ್ಪಿಕೊಂಡು, ರಿಪಬ್ಲಿಕ್ ಆಫ್‌ ಚೀನಾ ದಲ್ಲಿರುವ, ಅಂದರೆ ತೈವಾನ್‌ನಲ್ಲಿರುವ ಅಮೆರಿಕದ ದೂತಾವಾಸವನ್ನೇ ಮುಚ್ಚಿಬಿಟ್ಟರು. ತಕ್ಷಣ ತೈವಾನ್ʼಗೆ ಬೆದರಿಕೆ ಹಾಕಲು ಆರಂಭಿಸಿದ ಡೆಂಗ್ ಕ್ಸಿಯಾಪಿಂಗ್, ಯಾವುದೇ ತಕರಾರು ಮಾಡದೆ ಚೀನಾದಲ್ಲಿ ಸೇರಿಕೊಳ್ಳಿ ಎಂದು ಒತ್ತಡ ಹೇರತೊಡಗಿದರು. ಆದರೆ ತೈವಾನ್ ಮೇಲೆ ದಾಳಿ ನಡೆಸುವುದಕ್ಕೆ ಹೋಗಲಿಲ್ಲ.

ನಂತರವೂ ಎರಡು ದೇಶಗಳ ನಡುವೆ ಬೇರೆ ಬೇರೆ ಹಂತದಲ್ಲಿ ಮಾತುಕತೆ ಮುಂದುವರಿಯುತ್ತಲೇ ಇತ್ತು. ಆದರೆ ಪರಿಸ್ಥಿತಿ ತಿಳಿಯಾಗುವುದರ ಬದಲು ಮತ್ತಷ್ಟು ಹದಗೆಡುತ್ತಲೇ ಹೋಯಿತು. ಇಂದು ತೈವಾನ್‌ನ ಅಷ್ಟೂ ಜನರು ಚೀನಾದ ವಿರುದ್ಧ ಕೆಂಡ ಕಾರುತ್ತಾರೆ. ಚೀನಾ ಏನಾದರೂ ದಾಳಿ ನಡೆಸಿದರೆ ತೈವಾನ್‌ನಿಂದ ಬಹಳ ಕಠಿಣವಾದ ಪ್ರತಿಕ್ರಿಯೆಯೇ ಬರುತ್ತದೆ.

ಹೀಗಾಗಿ ದೊಡ್ಡ ರಕ್ತಪಾತವಾಗುವುದು ನಿಶ್ಚಿತ. ವಾಸ್ತವವಾಗಿ, ಚೀನಾದಲ್ಲಿ ಕ್ಸಿ ಜಿನ್‌ಪಿಂಗ್ ಅಧಿಕಾರಕ್ಕೆ ಬಂದ ಮೇಲೆ ತಾನು ತೈವಾನ್ ಭೂಭಾಗ ಚೀನಾದಲ್ಲಿ ವಿಲೀನಗೊಳ್ಳುವುದಕ್ಕಿಂತ ಕಡಿಮೆಯ ಯಾವುದೇ ಪ್ರಸ್ತಾಪವನ್ನು ಒಪ್ಪುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಾ ಬಂದಿದ್ದಾರೆ. ಅಂದರೆ ಅವರ ಉದ್ದೇಶ ಸ್ಪಷ್ಟವಾಗಿದೆ.

ತೈವಾನ್ ವಶಪಡಿಸಿಕೊಳ್ಳುವುದು ಜಿನ್‌ಪಿಂಗ್ ಅವರಿಗೀಗ ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟಿದೆ. ಅದರಲ್ಲಿ ಅವರು ಯಶಸ್ವಿಯಾದರೆ ಚೀನಾದ ಇತಿಹಾಸದಲ್ಲಿ ಆಗಿ ಹೋದ ಎಲ್ಲಾ ನಾಯಕರಿಗಿಂತ ಪ್ರಬಲ ನಾಯಕನೆಂಬ ಶಾಶ್ವತವಾದ ಹೆಗ್ಗಳಿಕೆಯನ್ನು ಗಳಿಸುತ್ತಾರೆ.

ಹಾಗೆ ನೋಡಿದರೆ ಚೀನಾ ಮತ್ತು ತೈವಾನ್ ನಡುವೆ ಮಿಲಿಟರಿ ಶಕ್ತಿಯಲ್ಲಿ ಬಹಳ ದೊಡ್ಡ ಅಂತರ ಇರುವುದು ನಿಜವೇ. ಆದರೆ, ಚೀನಾ ತನ್ನ ಮೇಲೆ ಯುದ್ಧ ಮಾಡಿದರೆ ಅಮೆರಿಕ ತನ್ನ ಬೆಂಬಲಕ್ಕೆ ಬರುತ್ತದೆ ಎಂಬ ಬಲವಾದ ನಂಬಿಕೆ ತೈವಾನ್‌ಗಿದೆ. ಇತ್ತೀಚೆಗೆ ಅಮೆರಿಕದ ಚಿಂತಕರ ಚಾವಡಿ ಯೊಂದು ನಡೆಸಿದ ಸಮೀಕ್ಷೆಯಲ್ಲಿ ಚೀನಾ ಏನಾದರೂ ತೈವಾನ್ ಮೇಲೆ ದಾಳಿ ನಡೆಸಿದರೆ ಜಯ ಸುಲಭವಿಲ್ಲ ಎಂಬ ಫಲಿತಾಂಶ ಬಂದಿದೆ.

ಯುದ್ಧದಲ್ಲಿ 100000 ಚೀನಿ ಸೈನಿಕರು ಸಾಯಬಹುದು. ತೈವಾನ್‌ನಲ್ಲಿ 50000 ಯೋಧರು ಮತ್ತು 50000 ನಾಗರಿಕರು ಸಾಯಬಹುದು. ಜೊತೆಗೆ 5000 ಅಮೆರಿಕನ್ ಸೈನಿಕರೂ ಸಾಯಬಹುದು ಎಂದು ಅಂದಾಜಿಸಲಾಗಿದೆ. ಸಮೀಕ್ಷೆಯ ವರದಿ ಪ್ರಕಾರ, ಯುದ್ಧದ ಕೊನೆಯಲ್ಲಿ ಚೀನಾ ಬಲವಂತ ವಾಗಿ ಹಿಂದೆ ಸರಿಯಬೇಕಾಗಿ ಬರಬಹುದು. ಈ ಸಮೀಕ್ಷೆಯಲ್ಲಿ ಅಮೆರಿಕದ ಸೈನಿಕರ ಸಾವಿನ ಬಗ್ಗೆ ಪ್ರಸ್ತಾಪ ಮಾಡಿರುವುದರ ಅರ್ಥವೇನು? ಅದು ಸ್ಪಷ್ಟವಾಗಿದೆ.

ತೈವಾನ್ ಮೇಲೆ ಚೀನಾ ಯುದ್ಧ ಸಾರಿದರೆ ತೈವಾನ್‌ಗೆ ಅಮೆರಿಕ ಬೆಂಬಲ ನೀಡುತ್ತದೆ ಎಂಬುದೇ ಇದರರ್ಥ. ಚೀನಾಕ್ಕೂ ಇದು ತಿಳಿದಿದೆ. ಆ ಕಾರಣದಿಂದಲೇ ಅದು ಈವರೆಗೆ ತೈವಾನ್ ಮೇಲೆ ದಾಳಿ ನಡೆಸಲು ಹೋಗಿಲ್ಲ. ಕಾಲಕಾಲಕ್ಕೆ ತೈವಾನ್‌ಗೆ ಅದು ದಾಳಿಯ ಬೆದರಿಕೆ ಒಡ್ಡುತ್ತಲೇ ಇದ್ದರೂ ನಿಜವಾದ ದಾಳಿಯನ್ನು ಮಾತ್ರ ನಡೆಸುತ್ತಿಲ್ಲ. ತೈವಾನ್ ಮೇಲೆ ಚೀನಾ ಯುದ್ಧ ನಡೆಸಿದರೆ ಅದರಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ.

ಭಾರತಕ್ಕೂ ಅದರಿಂದ ದುಷ್ಪರಿಣಾಮಗಳೇ ಉಂಟಾಗುತ್ತವೆ. ಜಗತ್ತಿನ ಎಲ್ಲಾ ದೇಶಗಳೂ ಒಂದು ಅಂತಿಮ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಯುದ್ಧ ಯಾವ ಸಮಸ್ಯೆಗೂ ಪರಿಹಾರವಲ್ಲ. ಅದು ಇತಿಹಾಸದಿಂದ ಸಾಬೀತಾಗಿರುವ ಸತ್ಯ. ಆದರೆ, ಆತುರದ ನಾಯಕರಿಗೆ ಇದರನ್ನು ಅರ್ಥ ಮಾಡಿಸುವವರು ಯಾರು?

ಡಾ.ವಿಜಯ್‌ ದರಡಾ

View all posts by this author