ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Dr Vijay Darda Column: ಇರಾನ್‌ʼನಲ್ಲಿ ಬಂಡಾಯದ ಬೆಂಕಿ ಹೊತ್ತಿಕೊಂಡಿರುವುದೇಕೆ ?

ಜನರ ಆಕ್ರೋಶ ಎಷ್ಟು ತೀಕ್ಷ್ಣವಾಗಿದೆ ಎಂಬುದನ್ನು ಇವು ತೋರಿಸುತ್ತವೆ. ಈಗಾಗಲೇ ಸಾವಿ ರಾರು ಜನರನ್ನು ಬಂಧಿಸಲಾಗಿದೆ. ಪೊಲೀಸರ ಗೋಲಿಬಾರ್‌ಗೆ ಅನೇಕ ಪ್ರತಿಭಟನಾಕಾರರು ಪ್ರಾಣ ತೆತ್ತಿದ್ದಾರೆ. ಮಶಾದ್ ನಗರದಲ್ಲಿ ಆರಂಭವಾದ ಪ್ರತಿಭಟನೆ ಇದೀಗ ಇಡೀ ಇರಾನ್ ದೇಶವನ್ನೇ ವ್ಯಾಪಿಸಿಕೊಂಡಿದೆ.

ಇರಾನ್‌ʼನಲ್ಲಿ ಬಂಡಾಯದ ಬೆಂಕಿ ಹೊತ್ತಿಕೊಂಡಿರುವುದೇಕೆ ?

-

ಸಂಗತ

ಖಮೇನಿಯನ್ನು ಅಧಿಕಾರದಿಂದ ಕೆಳಗಿಳಿಸುವ ಯೋಜನೆ ಯಶಸ್ವಿಯಾಗುವುದೇ? ಶಾ ಮತ್ತೆ ಅಧಿಕಾರ ಗಳಿಸುವರೇ? ಇರಾನ್‌ನಲ್ಲಿ ನಡೆಯುತ್ತಿರುವ ದಂಗೆಯಲ್ಲಿ ಅಮೆರಿಕದ ಪಾಲೆಷ್ಟು? ವೆನಿಜುವೆಲಾವನ್ನು ಮುಗಿಸಿದ ಟ್ರಂಪ್ ಇರಾನನ್ನೂ ಮುಗಿಸುತ್ತಾರೆಯೇ? ಇವು ಜಗತ್ತಿನ ಮುಂದಿರುವ ಪ್ರಶ್ನೆಗಳು.

ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಅರ್ಥಾತ್ ಇರಾನ್ ಗಣರಾಜ್ಯದಲ್ಲಿ ಇನ್ನೂ ಹೆಚ್ಚಿನ ಸ್ವಾತಂತ್ರ್ಯಕ್ಕಾಗಿ ಹಂಬಲಿಸುವ ಜನಸಮೂಹದಲ್ಲಿ ಅನೇಕ ವರ್ಷಗಳಿಂದ ಅತೃಪ್ತಿ ಹೊಗೆ ಯಾಡುತ್ತಲೇ ಇತ್ತು. ಆದರೆ ಆ ಹೊಗೆ ಇದ್ದಕ್ಕಿದ್ದಂತೆ ಬೆಂಕಿಯಾಗಿ ಇಡೀ ದೇಶದಲ್ಲಿ ಹರಡಿ ಕೊಂಡಿರುವುದು ಹೇಗೆಂಬುದೇ ಈಗಿನ ಪ್ರಶ್ನೆ. ‌

ಈ ಬೆಂಕಿಯ ಹಿಂದಿರುವ ಕಾರಣವೇನು? ಯಾಕಾಗಿ ಜನರು ಇರಾನಿನ ಆಡಳಿತ ವ್ಯವಸ್ಥೆಯ ವಿರುದ್ಧ ಏಕಾಏಕಿ ತಿರುಗಿ ನಿಂತಿದ್ದಾರೆ? ಅದಕ್ಕೆ ಹಣದುಬ್ಬರ ಮತ್ತು ನಿರುದ್ಯೋಗ ಮಾತ್ರ ವೇ ಕಾರಣವೇ? ಅಥವಾ ಅದಕ್ಕಿಂತ ದೊಡ್ಡ ಉದ್ದೇಶವೇನಾದರೂ ಇದೆಯೇ? ಖಮೇನಿ ಸರಕಾರವನ್ನೇ ಉರುಳಿಸುವ ಹುನ್ನಾರವೇನಾದರೂ ಈ ದಂಗೆಯ ಹಿಂದೆ ಇದೆಯೇ? ಮಿಲಿಟರಿಯ ಬೂಟುಗಳ ಕೆಳಗೆ ಮಾನವ ಹಕ್ಕುಗಳನ್ನೂ, ಮಹಿಳೆಯರ ಸ್ವಾತಂತ್ರ್ಯವನ್ನೂ ಹೊಸಕಿ ಹಾಕಿದ ಕುಖ್ಯಾತಿ ಖಮೇನಿ ಸರಕಾರಕ್ಕಿದೆ.

ಹೀಗಾಗಿ ಜನರ ದಂಗೆಗೆ ಇದೇ ಪ್ರಮುಖ ಕಾರಣವಾಗಿರಲೂಬಹುದು. ಇರಾನ್‌ನಲ್ಲಿ ನಡೆಯುತ್ತಿರುವ ದಂಗೆ ಅಥವಾ ಪ್ರತಿಭಟನೆಗಳ ಸ್ವರೂಪವನ್ನೊಮ್ಮೆ ಗಮನಿಸಿ ನೋಡಿ. ಕಂಡಕಂಡಲ್ಲಿ ದಾಂಧಲೆ, ಪೊಲೀಸ್ ಠಾಣೆಗಳ ಮೇಲೆ ಜನರಿಂದ ದಿಢೀರ್ ದಾಳಿ, ಮಿಲಿಟರಿ ನೆಲೆಗಳಿಗೇ ಮುತ್ತಿಗೆ ಹಾಕಿ ಅವುಗಳನ್ನು ವಶಪಡಿಸಿಕೊಳ್ಳಲು ಹೋರಾಟಗಾರರ ಯತ್ನ - ಹೀಗೆ ತೀವ್ರ ಸ್ವರೂಪದ ಚಟುವಟಿಕೆಗಳೇ ಅಲ್ಲಿ ನಡೆಯುತ್ತಿವೆ.

ಜನರ ಆಕ್ರೋಶ ಎಷ್ಟು ತೀಕ್ಷ್ಣವಾಗಿದೆ ಎಂಬುದನ್ನು ಇವು ತೋರಿಸುತ್ತವೆ. ಈಗಾಗಲೇ ಸಾವಿರಾರು ಜನರನ್ನು ಬಂಧಿಸಲಾಗಿದೆ. ಪೊಲೀಸರ ಗೋಲಿಬಾರ್‌ಗೆ ಅನೇಕ ಪ್ರತಿಭಟನಾ ಕಾರರು ಪ್ರಾಣ ತೆತ್ತಿದ್ದಾರೆ. ಮಶಾದ್ ನಗರದಲ್ಲಿ ಆರಂಭವಾದ ಪ್ರತಿಭಟನೆ ಇದೀಗ ಇಡೀ ಇರಾನ್ ದೇಶವನ್ನೇ ವ್ಯಾಪಿಸಿಕೊಂಡಿದೆ. 2009ರ ಅಧ್ಯಕ್ಷೀಯ ಚುನಾವಣೆಯ ಬಳಿಕ ಇದೇ ಮೊದಲ ಬಾರಿ ಸರಕಾರದ ಬುಡಕ್ಕೇ ನೇರವಾಗಿ ಸಂಚಕಾರ ತಂದೊಡ್ಡಿರುವ ಸಾರ್ವಜನಿಕ ಹೋರಾಟವಿದು.

ಇದನ್ನೂ ಓದಿ: Dr Vijay Darda Column: ಹೊಳೆಯುವ ಬೆಳ್ಳಿ ಕೊಳ್ಳುವ ಖುಷಿ ಇನ್ನೆಲ್ಲಿ !

ಇರಾನ್‌ನ ಹೋರಾಟಗಾರರು ಕೂಗುತ್ತಿರುವ ಘೋಷಣೆಗಳನ್ನೊಮ್ಮೆ ಕೇಳಿಸಿಕೊಳ್ಳಿ. ಅವರು ಕೇವಲ ಸರಕಾರವನ್ನು ವಿಸರ್ಜಿಸುವಂತೆ ಕೇಳುತ್ತಿಲ್ಲ, ಅದರ ಜೊತೆಗೆ ಸರಕಾರದ ವಿದೇ ಶಾಂಗ ನೀತಿಯನ್ನೂ ವಿರೋಧಿಸುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಇರಾನ್‌ನ ಪರಮೋಚ್ಚ ನಾಯಕ ಅಯೋತೊಲ್ಲಾ ಅಲಿ ಖಮೇನಿಗೆ ಮರಣ ದಂಡನೆ ವಿಧಿಸಬೇಕು ಎಂದು ಬಹಿರಂಗವಾಗಿ ಆಗ್ರಹಿಸುತ್ತಿದ್ದಾರೆ.

ಒಂದು ಸಂಗತಿ ನೆನಪಿಡಿ: ಇದೇ ಖಮೇನಿ ಬಾಯಿ ಬಿಟ್ಟರೆ ಅಮೆರಿಕದ ವಿರುದ್ಧ ಬೆಂಕಿ ಉಗುಳುತ್ತಾರೆ. ಈ ಹಿನ್ನೆಲೆಯಲ್ಲಿ ನೋಡಿದಾಗ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಕೂಡ ಸಾಕಷ್ಟು ಮಹತ್ವ ಪಡೆಯುತ್ತದೆ. ಟ್ರಂಪ್ ಏನು ಹೇಳುತ್ತಾರೆ? ‘ಇರಾನ್ ಎಲ್ಲಾ ರೀತಿಯಲ್ಲೂ ಪತನಗೊಳ್ಳುತ್ತಿದೆ.

ಒಬಾಮಾ ಸರಕಾರ ಇರಾನ್ ಜೊತೆಗೆ ಮಾಡಿಕೊಂಡಿದ್ದ ಎಡವಟ್ಟು ಒಪ್ಪಂದದ ಹೊರತಾಗಿಯೂ ಇರಾನ್‌ನ ಆಡಳಿತ ವ್ಯವಸ್ಥೆ ಕುಸಿಯುತ್ತಿದೆ. ಇರಾನಿ ಪ್ರಜೆಗಳು ಬಹಳ ಒಳ್ಳೆಯವರು. ಅವರನ್ನು ಅನೇಕ ವರ್ಷಗಳಿಂದ ದಮನ ಮಾಡಲಾಗುತ್ತಿದೆ. ಅವರು ಈಗ ಆಹಾರಕ್ಕಾಗಿ ಹಾತೊರೆಯುತ್ತಿದ್ದಾರೆ. ಅವರಿಗೀಗ ಸ್ವಾತಂತ್ರ್ಯ ಬೇಕಿದೆ. ಮಾನವ ಹಕ್ಕುಗಳ ಜೊತೆಗೆ ಇರಾನ್‌ನ ಸಂಪತ್ತನ್ನು ಕೂಡ ಲೂಟಿ ಮಾಡಲಾಗುತ್ತಿದೆ. ಬದಲಾವಣೆಯ ಕಾಲ ಬಂದಿದೆ!

ಇದು ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ. ಅಂದರೆ ಇರಾನ್‌ನಲ್ಲಿ ನಡೆಯುತ್ತಿರುವ ದಂಗೆಗೆ ಅಂತಾರಾಷ್ಟ್ರೀಯವಾಗಿ ಎಷ್ಟು ಮಹತ್ವವಿದೆ ಎಂಬುದು ನಮಗೆ ಅರ್ಥವಾಗುತ್ತದೆ. ಇಂತಹುದೇ ಧಾಟಿಯಲ್ಲಿ ಇರಾನ್‌ನ ಮಾಜಿ ಆಡಳಿತಗಾರ ಶಾ ಮೊಹಮ್ಮದ್ ರೇಜಾ ಪಹ್ಲಾವಿಯ ಮಗ ರೇಜಾ ಪಹ್ಲಾವಿ ಕೂಡ ಮಾತನಾಡುತ್ತಿದ್ದಾರೆ.

Iran Comfict

‘ಇರಾನ್‌ನಲ್ಲಿ ಹಾಲಿ ಆಡಳಿತ ನಡೆಸುತ್ತಿರುವ ಇಸ್ಲಾಮಿಕ್ ಗಣರಾಜ್ಯದ ವ್ಯವಸ್ಥೆ ಕುಸಿಯು ತ್ತಿದೆ. ಒರಿಜಿನಲ್ ಇರಾನ್ ದೇಶವನ್ನು ಮತ್ತೊಮ್ಮೆ ಕಟ್ಟಿಕೊಳ್ಳುವ ಕಾಲ ಬಂದಿದೆ ಎಂದು ಅವರು ಹೇಳಿದ್ದಾರೆ. ಜನರು ಬೀದಿಗಿಳಿದು ಪ್ರತಿಭ ಟಿಸುವಂತೆ ಮತ್ತು ರಾಷ್ಟ್ರೀಯ ಕ್ರಾಂತಿ ಯಲ್ಲಿ ಪಾಲ್ಗೊಳ್ಳುವಂತೆ ಅವರು ಪದೇಪದೇ ಬಹಿರಂಗ ಕರೆಗಳನ್ನು ನೀಡುತ್ತಿದ್ದಾರೆ.

ಮಜಾ ಏನು ಅಂದರೆ, ಈ ಪಹ್ಲಾವಿ ವಾಸಿಸುತ್ತಿರುವುದು ಅಮೆರಿಕದಲ್ಲಿ. ಅದನ್ನು ಗಮನ ದಲ್ಲಿರಿಸಿಕೊಂಡು ಹಾಗೂ ಈತನ ತಂದೆ ಶಾ ಮೊಹಮ್ಮದ್ ರೇಜಾ ಪಹ್ಲಾವಿ ಈ ಹಿಂದೆ ಹೇಗೆ ಅಧಿಕಾರಕ್ಕೆ ಬಂದಿದ್ದರು ಎಂಬುದನ್ನು ನೆನಪಿಸಿಕೊಂಡು ಪಹ್ಲಾವಿಯ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳಬೇಕು.

1951ರಲ್ಲಿ ನ್ಯಾಷನಲ್ ಫ್ರಂಟ್ ಪಕ್ಷದ ಅಭ್ಯರ್ಥಿ ಹಾಗೂ ವಕೀಲ ಮೊಹಮ್ಮದ್ ಮೊಸಾ ದೇಗ್ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿ ಇರಾನ್‌ನ ಪ್ರಧಾನ ಮಂತ್ರಿಯಾಗಿದ್ದರು. ಅವರೊಬ್ಬ ಅದ್ಭುತ ನಾಯಕ. ತುಂಬಾ ಧೈರ್ಯಶಾಲಿ. ಆ ಸಮಯದಲ್ಲಿ ಇರಾನ್‌ನ ತೈಲೋದ್ದಿಮೆಯನ್ನು ಬ್ರಿಟಿಷ್ ಕಂಪನಿಗಳು ನಿಯಂತ್ರಿಸುತ್ತಿದ್ದವು.

ಸಹಜವಾಗಿಯೇ ಅವು ಇರಾನ್‌ನ ತೈಲವನ್ನು ಬಾವಿಗಳಿಂದ ತೆಗೆದು ವಿದೇಶಗಳಿಗೆ ರಫ್ತು ಮಾಡಿ ಹೆಚ್ಚಿನ ಲಾಭ ಬಾಚಿಕೊಳ್ಳುತ್ತಿದ್ದವು. ಅದನ್ನು ತಪ್ಪಿಸಿ ತಮ್ಮ ದೇಶದ ಸಂಪತ್ತು ತಮಗೇ ಸಿಗಬೇಕೆಂಬ ಉದ್ದೇಶದಿಂದ ಮೊಸಾದೇಗ್ ಅವರು ಇರಾನ್‌ನ ತೈಲ ಬಾವಿ ಗಳನ್ನೆಲ್ಲ ರಾಷ್ಟ್ರೀಕರಣಗೊಳಿಸುವ ಗಟ್ಟಿ ನಿರ್ಧಾರ ತೆಗೆದುಕೊಂಡರು.

ಆಗ ಪಾಶ್ಚಾತ್ಯ ಶಕ್ತಿಗಳು ಇರಾನ್ ವಿರುದ್ಧ ಸಿಟ್ಟಿಗೇಳುವುದು ಸಹಜವೇ ಆಗಿತ್ತು. ಅದರಂತೆ ಅವು ಮೊಸಾದೇಗ್ ವಿರುದ್ಧ ಸಂಚು ರೂಪಿಸಿದವು. ಬ್ರಿಟನ್ನಿನ ಗುಪ್ತಚರ ಸಂಸ್ಥೆ ಎಂಐ೬ ಹಾಗೂ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಜಂಟಿಯಾಗಿ ರಣತಂತ್ರಗಳನ್ನು ಹೆಣೆದು 1953ರಲ್ಲಿ ಇರಾನ್‌ನಲ್ಲಿ ಸರಕಾರದ ವಿರುದ್ಧ ಜನರು ದಂಗೆಯೇಳುವಂತೆ ಮಾಡಿದವು.

ಆ ದಂಗೆಯಲ್ಲಿ ಮೊಸಾದೇಗ್ ಸರಕಾರ ಪತನಗೊಂಡಿತು. ಪಾಶ್ಚಾತ್ಯ ಶಕ್ತಿಗಳು ಶಾ ಮೊಹ ಮ್ಮದ್ ರೇಜಾ ಪಹ್ಲಾವಿಯನ್ನು ಇರಾನ್‌ನ ಮುಖ್ಯಸ್ಥನನ್ನಾಗಿ ನೇಮಕ ಮಾಡಿದವು. ಇದೇ ಪಹ್ಲಾವಿಯ ಕುಟುಂಬ ಅದಕ್ಕೂ ಹಿಂದೆ ಇರಾನ್ ದೇಶವನ್ನು ಆಳಿತ್ತು. ಶಾ ಮೊಹಮ್ಮದ್ ರೇಜಾ ಪಹ್ಲಾವಿ ಇರಾನ್‌ನ ತೈಲೋದ್ದಿಮೆಯಲ್ಲಿ ದೊಡ್ಡ ಪ್ರಮಾಣದ ಷೇರನ್ನು ಅಮೆರಿಕದ ಕಂಪನಿಗಳಿಗೆ ನೀಡಿದರು.

ಇದೆಲ್ಲ ಕೇವಲ ವದಂತಿ ಅಥವಾ ಊಹಾಪೋಹದ ಕತೆಯಲ್ಲ. 2013ರಲ್ಲಿ ಸ್ವತಃ ಅಮೆರಿಕ ದ ಸಿಐಎ ಸಂಸ್ಥೆಯೇ 1953ರ ಇರಾನ್ ದಂಗೆಯಲ್ಲಿ ತನ್ನ ಪಾತ್ರವನ್ನು ಖಚಿತಪಡಿಸಿತ್ತು.

ಇನ್ನೊಂದು ಸಂಗತಿಯನ್ನು ಇಲ್ಲಿ ಉಲ್ಲೇಖಿಸಲೇಬೇಕು. ಶಾ ಮೊಹಮ್ಮದ್ ರೇಜಾ ಪಹ್ಲಾವಿಯ ಕಾಲದಲ್ಲಿ ಇರಾನ್ ಸಾಕಷ್ಟು ಅಭಿವೃದ್ಧಿ ಹೊಂದಿತ್ತು. ಅವರು ದೇಶವನ್ನು ಆಧುನೀಕರಣದ ಮಾರ್ಗದಲ್ಲಿ ಕೊಂಡೊಯ್ದರು. ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿದರು. ಆ ಸಮಯದಲ್ಲಿ ಇರಾನ್‌ನ ಸಮಾಜವು ಹೆಚ್ಚು ಕಮ್ಮಿ ಐರೋಪ್ಯ ದೇಶಗಳ ಆಧುನಿಕ ಸಮಾಜವನ್ನೇ ಹೋಲುತ್ತಿತ್ತು.

ಮುಕ್ತ ಸ್ವಾತಂತ್ರ್ಯದಿಂದಾಗಿ ಇರಾನಿನ ಜನರೂ ಸಂತೋಷದಲ್ಲಿದ್ದರು. ಆದರೆ, ಅಮೆರಿಕ ಮತ್ತು ಸೋವಿಯತ್ ಒಕ್ಕೂಟದಂತಹ ದೇಶಗಳಿಗೆ ಪಹ್ಲಾವಿ ಸರಕಾರ ಹೆಚ್ಚು ಹತ್ತಿರ ವಾಗುತ್ತಿದೆ ಎಂಬ ಅಂಶ ಇರಾನ್‌ನ ಕಟ್ಟರ್‌ವಾದಿಗಳಿಗೆ ಹಿಡಿಸಲಿಲ್ಲ.

ಹೀಗಾಗಿ 1979ರಲ್ಲಿ ಇರಾನ್‌ನಲ್ಲಿ ಇಸ್ಲಾಮಿಕ್ ಕ್ರಾಂತಿ ನಡೆಯಿತು. ಆ ಕ್ರಾಂತಿಯಲ್ಲಿ ಪಹ್ಲಾವಿಯ ಆಡಳಿತ ಕೊನೆಯಾಯಿತು. ವಿದ್ಯಾರ್ಥಿಗಳ ಗುಂಪೊಂದು 1979ರ ನವೆಂಬರ್ 4ರಂದು ಅಮೆರಿಕದ ದೂತಾವಾಸದ ಮೇಲೆ ದಾಳಿ ನಡೆಸಿ, ಅದನ್ನು ವಶಪಡಿಸಿಕೊಂಡಿತು. ವಿದ್ಯಾರ್ಥಿ ಹೋರಾಟಗಾರರು 444 ದಿನಗಳ ಕಾಲ 52 ಅಮೆರಿಕನ್ನರನ್ನು ಅಲ್ಲಿ ಒತ್ತೆ ಇರಿಸಿಕೊಂಡಿದ್ದರು.

ಇದು ಅಮೆರಿಕದಂತಹ ಸೂಪರ್ ಪವರ್ ದೇಶಕ್ಕೆ ತೀರಾ ಮುಜುಗರ ಉಂಟು ಮಾಡಿತು. ಯಾವುದೋ ದೇಶದ ವಿದ್ಯಾರ್ಥಿಗಳ ಗುಂಪಿನೆದುರು ಅಮೆರಿಕದಂತಹ ಬಲಿಷ್ಠ ದೇಶ ಅಸಹಾಯಕನಾಗುವುದು ಅಂದರೇನು? ಅದೇ ವೇಳೆ, ಇರಾನ್‌ನಲ್ಲಿ ಅಧಿಕಾರಕ್ಕೆ ಬಂದ ಅಯೋತೊಲ್ಲಾ ಖೊಮೇನಿ ಕೂಡ ಅಮೆರಿಕದ ವಿರುದ್ಧ ರಣಕಹಳೆಯನ್ನೇ ಮೊಳಗಿಸಿ ದರು.

ಅಂದಿನಿಂದ ಅಮೆರಿಕ ಮತ್ತು ಇರಾನ್ ನಡುವೆ ಮೊಳಕೆಯೊಡೆದ ದ್ವೇಷ ಇಂದಿಗೂ ಚಾಲ್ತಿ ಯಲ್ಲಿದೆ. ಈಗಿನ ಪರಮೋಚ್ಚ ನಾಯಕ ಅಯೋತೊಲ್ಲಾ ಖಮೇನಿ ಕೂಡ ಹಿಂದಿನ ಅಯೋತೊಲ್ಲಾ ಖೊಮೇನಿಯ ಹಾದಿಯಲ್ಲೇ ಸಾಗುತ್ತಿದ್ದಾರೆ.

ಇರಾನ್ ಈಗಾಗಲೇ ಅಣುಬಾಂಬ್ ಅಭಿವೃದ್ಧಿಪಡಿಸುವ ಹಂತದಲ್ಲಿದೆ. ಅದು ಪಾಶ್ಚಾತ್ಯ ದೇಶಗಳ ಕಣ್ಣನ್ನು ಕೆಂಪಗಾಗಿಸಿದೆ. ಹೀಗಾಗಿ ಇರಾನ್ ಅಣುಬಾಂಬ್ ಅಭಿವೃದ್ಧಿ ಪಡಿಸು ವುದನ್ನು ತಡೆಯಲು ಪಾಶ್ಚಾತ್ಯ ದೇಶಗಳು ಶತಾಯಗತಾಯ ಪ್ರಯತ್ನ ಮಾಡುತ್ತವೆ. ಈಗಾಗಲೇ ಇರಾನ್‌ನ ಅನೇಕ ಪರಮಾಣು ವಿಜ್ಞಾನಿಗಳನ್ನು ಇಸ್ರೇಲ್ ಹತ್ಯೆಗೈದಿದೆ.

ಕಳೆದ ವರ್ಷವಷ್ಟೇ ಇರಾನ್‌ನ ಮೂರು ಪರಮಾಣು ಪರೀಕ್ಷಾ ಕೇಂದ್ರಗಳ ಮೇಲೆ ದಾಳಿ ನಡೆಸಲು ಅಮೆರಿಕ ಯತ್ನಿಸಿತ್ತು. ಅಷ್ಟಾದರೂ ಇರಾನ್ ತನ್ನ ಹಟ ಬಿಟ್ಟಿಲ್ಲ. ಪರಮಾಣು ಬಾಂಬ್ ಪರೀಕ್ಷೆ ಮಾಡಿಯೇ ಸಿದ್ಧ ಎಂದು ಖಮೇನಿ ಪಣ ತೊಟ್ಟಿದ್ದಾರೆ. ಹೀಗಾಗಿ ಜಗತ್ತಿನ ಶಕ್ತಿಶಾಲಿ ದೇಶಗಳೆಲ್ಲ ಸೇರಿ ಖಮೇನಿಯ ಆಡಳಿತವನ್ನೇ ಕೊನೆಗೊಳಿಸುವ ಮೂಲಕ ಇರಾನ್‌ನ ಹಾರಾಟವನ್ನು ಶಾಶ್ವತವಾಗಿ ನಿಲ್ಲಿಸುವ ಹುನ್ನಾರ ನಡೆಸುತ್ತಿವೆ.

ಒಂದು ದೇಶದೊಳಗೆ ಇರುವ ಆಂತರಿಕ ಭಿನ್ನಾಭಿಪ್ರಾಯಗಳನ್ನು ಬಳಸಿಕೊಂಡು ಆ ದೇಶದಲ್ಲಿ ಅಶಾಂತಿ ಸೃಷ್ಟಿಸುವುದು ಸಾಕಷ್ಟು ಹಳೆಯ ವಿದೇಶಾಂಗ ರಣನೀತಿಗಳಲ್ಲಿ ಒಂದು. ಅನೇಕ ದೇಶಗಳು ತಮ್ಮ ಶತ್ರು ರಾಷ್ಟ್ರದಲ್ಲಿ ಇಂತಹ ಕೆಲಸ ಮಾಡುತ್ತಲೇ ಬಂದಿವೆ.

ಇರಾನ್‌ನಲ್ಲಿ ಈಗ ನಡೆಯುತ್ತಿರುವ ದಂಗೆಯಲ್ಲೂ ಇಂತಹ ಸಂಗತಿಗಳು ಕೆಲಸ ಮಾಡುತ್ತಿರಬಹುದು. ಅಮೆರಿಕ, ಬ್ರಿಟನ್, ಇಸ್ರೇಲ್, ರಷ್ಯಾ ಸೇರಿದಂತೆ ಅನೇಕ ದೇಶಗಳಿಗೆ ಇರಾನ್‌ನ ವಿಷಯದಲ್ಲಿ ತಮ್ಮದೇ ಆದ ಅಜೆಂಡಾಗಳಿವೆ ಎಂಬುದರಲ್ಲಿ ಯಾರಿಗೂ ಅನುಮಾನ ಬೇಕಿಲ್ಲ.

ಸದ್ಯಕ್ಕೆ ಇಡೀ ಜಗತ್ತು ಖಮೇನಿಯ ಆಟದ ಮೇಲೆ ಗಮನ ನೆಟ್ಟಿದೆ. ಅವರು ಫ್ರಂಟ್ ಫೂಟ್‌ನಲ್ಲಿ ಆಕ್ರಮಣಕಾರಿ ಆಟ ಆಡುತ್ತಾರೋ ಅಥವಾ ರಕ್ಷಣಾತ್ಮಕ ಆಟಕ್ಕೆ ಶರಣಾಗು ತ್ತಾರೋ ಎಂಬ ಕುತೂಹಲ ಎಲ್ಲರಿಗೂ ಇದೆ. ಅವರ ಆಟದ ಬಳಿಕ ಸ್ಟಂಪ್‌ಗಳು ನೆಟ್ಟಗಿರು ತ್ತವೆಯೋ ಅಥವಾ ಅಡ್ಡಡ್ಡ ಬಿದ್ದಿರುತ್ತವೆಯೋ ಎಂಬುದಷ್ಟೇ ಈಗಿರುವ ಪ್ರಶ್ನೆ!

ಮುಗಿಸುವ ಮುನ್ನ

ಮಧ್ಯಪ್ರದೇಶದ ಇಂದೋರ್‌ನಲ್ಲಿ ಇತ್ತೀಚೆಗೆ ಡಜನ್ ಗಟ್ಟಲೆ ಜನರು ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದ್ದಾರೆ. ಅವರ ಸಾವು ನನ್ನನ್ನು ತುಂಬಾ ಕಲಕಿದೆ. ಇದೇ ಇಂದೋರ್ ನಗರ ನಮ್ಮ ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಕಿರೀಟವನ್ನು ಹೊತ್ತಿದೆ. ಎಂತಹ ವಿಪರ‍್ಯಾಸ ನೋಡಿ. ನನಗೆ ಇನ್ನೂ ನೋವುಂಟು ಮಾಡುವ ಸಂಗತಿ ಏನೆಂದರೆ, ಕಲುಷಿತ ನೀರು ಕೊಳಾಯಿಗಳ ಮೂಲಕ ಜನರ ಮನೆಗೆ ಪೂರೈಕೆಯಾಗುತ್ತದೆ ಅಂದರೆ ಅಲ್ಲಿನ ಆಡಳಿತ ವ್ಯವಸ್ಥೆ ಎಂತಹ ನಿರ್ಲಕ್ಷ್ಯದಿಂದ ಕೆಲಸ ಮಾಡುತ್ತಿರಬಹುದು.

ಘಟನೆಯ ಬಳಿಕ ನಾಚಿಕೆಗೆಟ್ಟ ರಾಜಕಾರಣಿಗಳು ಬಳಸಿದ ಭಾಷೆಯನ್ನು ಕೇಳಿದರಂತೂ ಅಸಹ್ಯವೆನ್ನಿಸುತ್ತದೆ. ಮನುಷ್ಯರ ಜೀವಕ್ಕೆ ಬೆಲೆಯೇ ಇಲ್ಲವೇ? ನಾವಿನ್ನೂ ಯಾವ ಕಾಲದಲ್ಲಿದ್ದೇವೆ?