ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Raghava Sharma Nidle Column: ಅಡಿಕೆ ಕ್ಷೇತ್ರಕ್ಕೆ ವರದಾನವಾಗುವುದೇ ಚೀನಾ ಸಂಶೋಧನೆ?

ಇದು ಅಡಿಕೆ ಕ್ಷೇತ್ರಕ್ಕೆ ವರದಾನವಾಗಿ ಪರಿಣಮಿಸುವ ನಿರೀಕ್ಷೆ ಹೆಚ್ಚಿದೆ. ಹಾಗೆ ನೋಡಿದರೆ ಅಡಿಕೆ ವಿಷಕಾರಕ ಎಂದು ಮೊದಲು ಅಧ್ಯಯನ ವರದಿ ನೀಡಿದ್ದೇ ಚೀನಾ. 1998ರಲ್ಲಿ ಚೀನಾದ ತೈವಾನ್ ನ ಚುಂಗ್ ಶಾನ್ ಮೆಡಿಕಲ್ ಡೆಂಟಲ್ ಕಾಲೇಜಿನ ವಿಜ್ಞಾನಿ ಚಿನ್-ಕುನ್ ವಾಂಗ್ ನೇತೃತ್ವದ ತಂಡ ಅಡಿಕೆ ವಿಷಕಾರಕ ಹೇಗೆ ಎಂಬ ಬಗ್ಗೆ ಸಂಶೋಧನೆ ಮಂಡಿಸಿತ್ತು. ಇದೀಗ, ಅದೇ ಚೀನಾ 28 ವರ್ಷಗಳ ನಂತರ ಅಡಿಕೆ ಕುರಿತ ತನ್ನ ನಿಲುವಿನಲ್ಲಿ ಸಣ್ಣ ಬದಲಾವಣೆ ಮಾಡಿರುವುದು ಗಮನಾರ್ಹ.

ಜನಪಥ

2026ರ ಜನವರಿ ತಿಂಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (WHO) ದಕ್ಷಿಣ ಪೂರ್ವ ಏಷ್ಯಾ ಪ್ರಾದೇಶಿಕ ಕಚೇರಿ ಅಡಿಕೆ ಬೆಳೆಗೆ ಸಂಬಂಧಿಸಿದ ವೆಬಿನಾರ್ ಒಂದನ್ನು ಏರ್ಪಡಿಸಿತ್ತು. ಕಳೆದ ಅನೇಕ ವರ್ಷ ಗಳಿಂದ ಅಡಿಕೆ ವಿರೋಧಿ ನೀತಿ ಅಳವಡಿಸಿಕೊಂಡಿರುವ ಡಬ್ಲ್ಯುಎಚ್‌ಒ ಈ ಸಭೆಯಲ್ಲೂ ಅದೇ ವಾದದ ವಿಸ್ತರಣೆ ಮಾಡಿತ್ತು. ಅಡಿಕೆ ತಡೆಗೆ ಚಾಲ್ತಿಯಲ್ಲಿರುವ ಕಾರ್ಯಕ್ರಮಗಳ ಜತೆಗೆ ಅದಕ್ಕೆ ಸಂಬಂಧಿಸಿದ ಕ್ರಿಯಾತ್ಮಕ ಕಾರ್ಯತಂತ್ರಗಳನ್ನು ಚರ್ಚಿಸುವುದು ಸಭೆಯ ಉದ್ದೇಶವಾಗಿತ್ತು. ಅಡಿಕೆ ಕ್ಯಾನ್ಸರ್‌ಕಾರಕ ಎನ್ನುತ್ತಲೇ ಇರುವ ಡಬ್ಲ್ಯುಎಚ್‌ಒ, ಯಾವಾಗ ಬೇಕಾದರೂ ಅದನ್ನು ಬ್ಯಾನ್ ಮಾಡಬಹುದು.

ಹಾಗಾಗಿ, ಅಡಿಕೆ ಬೆಳೆಗಾರರ ಮೇಲೆ ನಿಷೇಧದ ತೂಗುಗತ್ತಿ ಸದಾ ಇದ್ದೇ ಇದೆ. ಭಾರತದಲ್ಲಿ ಕೋಟ್ಯಂತರ ಕುಟುಂಬಗಳು ಅಡಿಕೆಯನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅವಲಂಬಿಸಿ ಜೀವನ ನಡೆಸುತ್ತಿರುವುದರಿಂದ ಡಬ್ಲ್ಯುಎಚ್‌ಒ ವಾದವನ್ನು ಅಲ್ಲಗಳೆಯುವ ತರ್ಕಬದ್ಧ ಅಧ್ಯಯನ ವೊಂದನ್ನು ಮುಂದಿಡಲು ಭಾರತಕ್ಕೆ (ಕೇಂದ್ರ ಮತ್ತು ರಾಜ್ಯ ಸರಕಾರಗಳು) ಸಾಧ್ಯವಾಗದಿರುವುದು ವಿಪರ್ಯಾಸ.

ಇವೆಲ್ಲದರ ನಡುವೆ, ಅಡಿಕೆ ಬೆಳೆಗಾರರಲ್ಲಿ ಮಂದಹಾಸ ಬೀರಬಲ್ಲ ಮತ್ತು ಅಡಿಕೆ ಉದ್ಯಮ ಕ್ಷೇತ್ರಕ್ಕೆ ಆಶಾಕಿರಣವಾಗಬಲ್ಲ ಸಂಶೋಧನಾ ಅಧ್ಯಯನವೊಂದು ಚೀನಾದಿಂದ ಹೊರಬಿದ್ದಿದೆ. 2004ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ‘ಇಂಟರ್ನ್ಯಾಷನಲ್ ಏಜೆನ್ಸಿ -ರ್ ರಿಸರ್ಚ್ ಆನ್ ಕ್ಯಾನ್ಸರ್’ ವಿಭಾಗ ಅಡಿಕೆ ಕ್ಯಾನ್ಸರ್‌ಕಾರಕ ಎಂದು ಹೇಳಿದ ನಂತರ ಅಡಿಕೆ ಕ್ಷೇತ್ರಕ್ಕೆ ರಕ್ಷಣಾಕವಚ ಆಗಬಲ್ಲ ವರದಿಗಳು ಬಂದಿರಲಿಲ್ಲ.

ಇದನ್ನೂ ಓದಿ: Raghava Sharma Nidle Column: ಹಠಕ್ಕೆ ಬಿದ್ದು ಕಂಬಳ ನಡೆಸುವುದರ ಉದ್ದೇಶವೇನು ?

ಮೇಲಾಗಿ, 2020ರಲ್ಲಿ ಅಡಿಕೆಯಲ್ಲಿ ಅರೆಕೊಲಿನ್ ಅಂಶವನ್ನು ಗ್ರೂಪ್ 2ಬಿ ಪ್ರಮಾಣದ ವಿಷಕಾರಕ ಎಂದೂ ವರ್ಗೀಕರಿಸಲಾಗಿತ್ತು. ಆದರೆ, ಡಬ್ಲ್ಯುಎಚ್‌ಒ ಘೋಷಣೆಯ 16 ವರ್ಷಗಳ ಬಳಿಕ ಚೀನಾ ಕೃಷಿ ವಿಶ್ವವಿದ್ಯಾಲಯದ National Engineering Research Center for Fruit and Vegetable Processing ವಿಭಾಗದ ನಿರ್ದೇಶಕ ಕ್ಸಿಯಾವೋಸಾಂಗ್ ಹು ಮತ್ತವರ ವಿಜ್ಞಾನಿಗಳ ತಂಡ 10 ವರ್ಷಗಳ ಕಾಲ ಸುದೀರ್ಘ ಸಂಶೋಧನೆ ನಡೆಸಿ, ಅಡಿಕೆಯ ನಿರಂತರ ಜಗಿಯುವಿಕೆಯಿಂದಷ್ಟೇ ಬಾಯಿಯ ಅಂಗಾಂಶಗಳಿಗೆ ಹಾನಿಯಾಗುತ್ತದೆ ಎಂದು ಹೇಳಿದೆ. ಅಡಿಕೆಯನ್ನು ನೇರವಾಗಿ ಕ್ಯಾನ್ಸರ್‌ ಕಾರಕ ಎಂಬ ಡಬ್ಲ್ಯುಎಚ್‌ಒ ಅಭಿಪ್ರಾಯಕ್ಕೆ ಅನುಮೋದನೆ ನೀಡುವ ವಾತಾವರಣ ಸೃಷ್ಟಿಯಾಗುತ್ತಿರುವ ಮಧ್ಯೆ ಚೀನಾದ ಸಂಶೋಧನೆ ಅದಕ್ಕೆ ವ್ಯತಿರಿಕ್ತ ಎನಿಸಿರುವುದು ಭರವಸೆ ದಾಯಕ.

ಅಡಿಕೆ ಉದ್ಯಮವನ್ನು ಗಮನದಲ್ಲಿಟ್ಟುಕೊಂಡು, ಅಡಿಕೆಯಿಂದಾಗುವ ಹಾನಿ ಪ್ರಮಾಣ ತಗ್ಗಿಸುವ ಕ್ರಮಗಳು ಹಾಗೂ ಉತ್ಪಾದನಾ ಕ್ಷೇತ್ರಕ್ಕೆ ನಿರ್ದಿಷ್ಟ ಮಾನದಂಡಗಳನ್ನು ಅಳವಡಿಸುವ ಸಲಹೆ ಯನ್ನು ಚೀನಾ ಕೃಷಿ ವಿಜ್ಞಾನಿಗಳು ನೀಡಿದ್ದು, ಇದರಿಂದ ಈ ಉದ್ಯಮ ಮತ್ತಷ್ಟು ಬೆಳೆಯಲು ಸಾಧ್ಯವಿದೆ ಎಂದು ಹೇಳಿದ್ದಾರೆ.

ಇದು ಅಡಿಕೆ ಕ್ಷೇತ್ರಕ್ಕೆ ವರದಾನವಾಗಿ ಪರಿಣಮಿಸುವ ನಿರೀಕ್ಷೆ ಹೆಚ್ಚಿದೆ. ಹಾಗೆ ನೋಡಿದರೆ ಅಡಿಕೆ ವಿಷಕಾರಕ ಎಂದು ಮೊದಲು ಅಧ್ಯಯನ ವರದಿ ನೀಡಿದ್ದೇ ಚೀನಾ. 1998ರಲ್ಲಿ ಚೀನಾದ ತೈವಾನ್ ನ ಚುಂಗ್ ಶಾನ್ ಮೆಡಿಕಲ್ ಡೆಂಟಲ್ ಕಾಲೇಜಿನ ವಿಜ್ಞಾನಿ ಚಿನ್-ಕುನ್ ವಾಂಗ್ ನೇತೃತ್ವದ ತಂಡ ಅಡಿಕೆ ವಿಷಕಾರಕ ಹೇಗೆ ಎಂಬ ಬಗ್ಗೆ ಸಂಶೋಧನೆ ಮಂಡಿಸಿತ್ತು. ಇದೀಗ, ಅದೇ ಚೀನಾ 28 ವರ್ಷ ಗಳ ನಂತರ ಅಡಿಕೆ ಕುರಿತ ತನ್ನ ನಿಲುವಿನಲ್ಲಿ ಸಣ್ಣ ಬದಲಾವಣೆ ಮಾಡಿರುವುದು ಗಮನಾರ್ಹ.

61 o

‘ಅಡಿಕೆಯಲ್ಲಿ ವಿಶಿಷ್ಟ ನಾರಿನ ಅಂಶವಿದೆ. ಅಡಿಕೆಯನ್ನು ಒಣಗಿಸುವ ಪ್ರಕ್ರಿಯೆ ಈ ನಾರುಗಳನ್ನು ಗಟ್ಟಿ ಮತ್ತು ಒರಟಾಗಿಸುತ್ತದೆ. ಕೆಲವರಿಗೆ ಅಡಿಕೆ ಜಗಿಯುವ ಚಟವಿರುವುದರಿಂದ, ಆ ಪ್ರಕ್ರಿಯೆ ಆರೋಗ್ಯಕ್ಕೆ ತೊಂದರೆಯುಂಟು ಮಾಡುತ್ತದೆ. ಒಂದೇ ಏಟಿಗೆ ಹಲವು ಅಡಿಕೆ ತುಂಡುಗಳನ್ನು ಜಗಿಯುವ ಮತ್ತು ಅದನ್ನು ದಿನವಿಡೀ ತಿನ್ನುತ್ತಲೇ ಇರುವ ವ್ಯಕ್ತಿಗಳು ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಾರೆ.

ಏಕೆಂದರೆ, ನಿರಂತರ ಜಗಿಯುವಿಕೆಯಿಂದ ನಾರಿನ ಅಂಶಗಳು ಗಟ್ಟಿಯಾಗಿ, ಈ ಗಟ್ಟಿ ನಾರುಗಳು ಬಾಯಿಯ ಮೃದು ಅಂಗಾಂಶಗಳ ವಿರುದ್ಧ ಉಜ್ಜಿದಾಗ, ಅವು ಸಣ್ಣಸಣ್ಣ ಸೂಕ್ಷ್ಮ ಗಾಯಗಳ ಸಂಗ್ರಹವನ್ನು ಹೆಚ್ಚಿಸುತ್ತವೆ. ದೀರ್ಘಕಾಲದ ಜಗಿಯುವಿಕೆ ಅಂತಿಮವಾಗಿ ತೀವ್ರ ತರಹದ ಅನಾರೋಗ್ಯಕ್ಕೆ ಕಾರಣವಾಗಬಹುದು’ ಎನ್ನುವುದು ಕ್ಸಿಯಾವೋಸಾಂಗ್ ಹು ಅವರ ಹೊಸ ಅಧ್ಯಯನದ ಸಾರಾಂಶ.

‘ಕೆಲ ಅಡಿಕೆ ಉತ್ಪನ್ನಗಳನ್ನು ಹೆಚ್ಚು ಆಲ್ಕಲಾಯ್ಡ್ (ಕ್ಷಾರೀಯ) ಸಂಯುಕ್ತಗಳನ್ನು ಬಳಸಿ ಸಂಸ್ಕರಿಸಲಾಗುತ್ತದೆ. ಈ ವಸ್ತುಗಳು ಬಾಯಿಯ ಒಳಪದರವನ್ನು ಹಾನಿಗೊಳಿಸಬಹುದು. ಇದರಿಂದಾಗಿ ಅಡಿಕೆ ಜಗಿಯುವ ಜನ ಹೆಚ್ಚಿರುವ ಪ್ರದೇಶದಲ್ಲಿ ಬಾಯಿಯ ಕ್ಯಾನ್ಸರ್ ಕಾಣಿಸಿ ಕೊಳ್ಳುತ್ತಿದೆ’ ಎನ್ನುತ್ತಾರೆ ಕ್ಸಿಯಾವೋಸಾಂಗ್ ಹು.

ಅಡಿಕೆ ಜೀವಶಾಸ್ತ್ರದ ಆಳವಾದ ತಿಳುವಳಿಕೆ ಮತ್ತು ಸಂಶೋಧನೆಯು ಹಾನಿ ಪ್ರಮಾಣ ಕಡಿಮೆ ಮಾಡುವುದಲ್ಲದೆ, ಅದು ಅಡಿಕೆ ಉತ್ಪನ್ನಗಳ ಉಪಯೋಗಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಬಲ್ಲದು ಎಂದಿರುವ ವಿಜ್ಞಾನಿಗಳು, ಅಡಿಕೆ ಉತ್ಪನ್ನಗಳಲ್ಲಿ ಆಲ್ಕಲಾಯ್ಡ್ ಅಂಶಗಳನ್ನು ತಗ್ಗಿಸಲು ಹಾಗೂ ನಾರುಗಳ ಗಟ್ಟಿಗೊಳ್ಳುವಿಕೆ ತಡೆಯಲು ಕ್ರಮ ಕೈಗೊಂಡಲ್ಲಿ ಬಾಯಿಯ ಅಂಗಾಂಶಕ್ಕಾಗುವ ಅಪಾಯ ತಪ್ಪಿಸಬಹುದು ಎಂದಿ‌ದ್ದಾರೆ.

ಅತಿಯಾದರೆ ಅಮೃತವೂ ವಿಷ. ಹಾಗೆಯೇ ತಂಬಾಕು, ಸುಣ್ಣದೊಂದಿಗೆ ಸೇರಿಸಿ ಅಡಿಕೆ ಜಗಿಯು ತ್ತಲೇ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ದೇಹ ಸೇರುವ ಯಾವುದೇ ಪದಾರ್ಥವಿರಲಿ, ನಿಯಮಿತ ಬಳಕೆ ಆರೋಗ್ಯಕ್ಕೆ ಹಾನಿ ಮಾಡದು ಎನ್ನುವುದನ್ನು ಚೀನಾ ವಿಜ್ಞಾನಿಗಳು ಪರೋಕ್ಷವಾಗಿ ಹೇಳಿದಂತಿದೆ. ಹಾಗಾಗಿ ಅಡಿಕೆ ಹಾನಿಕಾರಕ ಅಲ್ಲ ಎಂದು ಸಾಬೀತುಪಡಿಸುವ ಬದಲು, ಅಪಾಯದ ಮಟ್ಟ, ಬಳಕೆಯ ವಿಧಾನ, ಪ್ರಮಾಣ ಮತ್ತು ಪರ್ಯಾಯ ವೈಜ್ಞಾನಿಕ ಸಾಕ್ಷ ಗಳ ಕುರಿತು ಸಂಶೋಧನೆ ನಡೆಸುವುದು ಹೆಚ್ಚು ಸೂಕ್ತ. ಆದರೆ, ಈ ನಿಟ್ಟಿನಲ್ಲಿ ಭಾರತದಲ್ಲಿ ಸಂಶೋಧನೆ ಗಳು ಇನ್ನೂ ನಡೆದಿಲ್ಲ. ಚೀನಾ ಕೃಷಿ ವಿವಿ ಸಂಶೋಧನೆಯನ್ನು ಕೇಂದ್ರ ಸರಕಾರ ಹಾಗೂ ನಮ್ಮ ವಿಜ್ಞಾನಿಗಳ ತಂಡ ಅಧ್ಯಯನ ಮಾಡಿ, ದೇಶದ ಅಡಿಕೆ ಬೆಳೆಗಾರರ ಹಿತ ಕಾಪಾಡುವ ಬದ್ಧತೆ ಪ್ರದರ್ಶಿಸಬೇಕಿದೆ.

ಅಡಿಕೆಯಲ್ಲಿರುವ ಅರೆಕೊಲಿನ್ ಪ್ರಮುಖ ನೈಸರ್ಗಿಕ ಆಲ್ಕಲಾಯ್ಡ ಆಗಿದೆ. ಆರೋಗ್ಯ ಸಂಶೋಧನೆ ಪ್ರಕಾರ, ಇದು ಕೇಂದ್ರ ನರಮಂಡಲದ ಮೇಲೆ ಪ್ರಭಾವ ಬೀರುತ್ತದೆ. ಈ ಆಲ್ಕಲಾಯ್ಡ್‌ನ ಮಿತ ಬಳಕೆ ಮರೆವು ಕಾಯಿಲೆಗೆ (ಅಲ್ಜೈಮರ್) ಉತ್ತಮ ಔಷಧಿ ಎನ್ನಲಾಗುತ್ತದೆ. ವಿದೇಶದಲ್ಲಿ ಅರೆಕೋಲಿನ್‌ಗೆ ಈಗ ಬೇಡಿಕೆಯಿದೆ. ಅಡಿಕೆಯಲ್ಲಿರುವ ಅರೆಕೋಲಿನ್ ಅಂಶಗಳನ್ನು ಅಲ್ಲಿಗೂ ತಲುಪಿಸಬೇಕಿದ್ದು, ಸುಲಭದಲ್ಲಿ ಅರೆಕೋಲಿನ್‌ನ್ನು ಅಡಿಕೆಯಿಂದ ಪ್ರತ್ಯೇಕ ಮಾಡುವ ವ್ಯವಸ್ಥೆ ಕಂಡುಹಿಡಿಯ ಬೇಕಿದೆ.

ಅರೆಕೋಲಿನ್ ನರಕೋಶಗಳನ್ನು ಉತ್ತೇಜಿಸುವುದರಿಂದ, ಜ್ಞಾಪಕಶಕ್ತಿ ಮತ್ತು ಅರಿವಿನ ಸಾಮರ್ಥ್ಯ ಹೆಚ್ಚಿಸುವ ಸಂಶೋಧನೆಗಳು ಈಗ ನಡೆಯುತ್ತಿವೆ. ಕರುಳಿನ ಆರೋಗ್ಯ, ಜೀರ್ಣಾಂಗ ವ್ಯವಸ್ಥೆಯ ಮೇಲೆ ಸಕಾರಾತ್ಮಕವಾಗಿ ಪ್ರಭಾವ ಬೀರಿ, ಕರುಳಿನ ಸೂಕ್ಷ ಜೀವಿಗಳನ್ನು ಅದು ನಿಯಂತ್ರಿಸುತ್ತದೆ ಎಂದು ಅಧ್ಯಯನಗಳು ತಿಳಿಸುತ್ತವೆ.

ಅಡಿಕೆ ನಿಷೇಧದ ತೂಗುಗತ್ತಿ ಮಧ್ಯೆ ಕಳೆದ ವರ್ಷ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ವಿಭಾಗ (FDA) ಅಡಿಕೆ ಹಾಳೆಗಳಿಂದ ತಯಾರು ಮಾಡುವ ಹಾಳೆತಟ್ಟೆಗಳ ಆಮದಿನ ಮೇಲೆ ನಿಷೇಧ ಹೇರಿತು. ಭಾರತದಲ್ಲಿ ಸುಮಾರು ರೂ. 250-300 ಕೋಟಿ ಔದ್ಯಮಿಕ ವಹಿವಾಟು ನಡೆಸುತ್ತಿರುವ ಹಾಳೆ ತಟ್ಟೆ ತಯಾರಿಕಾ ಕ್ಷೇತ್ರಕ್ಕೆ ಅಮೆರಿಕದ ಕ್ರಮ ಆರ್ಥಿಕ ಹೊಡೆತ ನೀಡಿತ್ತು.

ರಫ್ತುದಾರರು, ತಯಾರಕರು ಮತ್ತು ಈ ಸುಸ್ಥಿರ ಉದ್ಯಮವನ್ನು ನೆಚ್ಚಿಕೊಂಡ ಸಾವಿರಾರು ರೈತರ ಜೀವನೋಪಾಯದಲ್ಲಿ ಅದು ಅನಿಶ್ಚಿತತೆ ಉಂಟುಮಾಡಿತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬರಂಗಾಯ ಎಂಬ ಸಣ್ಣ ಗ್ರಾಮದಿಂದ ಅಮೆರಿಕಕ್ಕೆ ಅತಿಹೆಚ್ಚು ಪ್ರಮಾಣದಲ್ಲಿ ಹಾಳೆ ತಟ್ಟೆ ರಫ್ತು ಮಾಡುತ್ತಿರುವ ಅಗ್ರಿಲೀಫ್ ಎಕ್ಸ್‌ಪೋಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸ್ಥಾಪಕ ಅವಿನಾಶ್ ರಾವ್ ಅವರೊಂದಿಗೆ ಮಾತನಾಡಿದಾಗ, ಕತ್ತಲಲ್ಲಿರುವ ಅಡಿಕೆ ಉತ್ಪಾದನಾ ಕ್ಷೇತ್ರಕ್ಕೆ ಚೀನಾ ಸಂಶೋಧನೆ ಹೊಸ ಬೆಳಕು ತುಂಬಿದೆ ಎಂದು ಖುಷಿ ವ್ಯಕ್ತಪಡಿಸಿದರು.

ವಿಶೇಷ ಮತ್ತು ಸಂತಸದ ವಿಚಾರ ಎಂದರೆ, ಕೇಂದ್ರ ಸರಕಾರದ ಸಂಶೋಧನೆಗಳಿಗೆ ಕಾಯದೆ, ಅಗ್ರಿಲೀಫ್ ಸಂಸ್ಥೆಯೇ ಪ್ರತ್ಯೇಕವಾದ ವೈಜ್ಞಾನಿಕ ಸಂಶೋಧನೆಯೊಂದನ್ನು ಮಾಡಿದೆ. ಅಡಿಕೆ ಹಾಳೆಯ ಸಿದ್ಧ ಉತ್ಪನ್ನಗಳಲ್ಲಿ ನೈಸರ್ಗಿಕವಾಗಿ ಕಂಡುಬರುವ ‘ಅರೆಕೋಲಿನ್’ ಮತ್ತು ‘ಅರೆಕೈಡಿನ್’ ಪ್ರಮಾಣ ಶೋಧನೆಯ ಮಿತಿಗಿಂತ (Limit of Detection & LOD) ಅಥವಾ ಪ್ರಮಾಣೀಕರಣದ ಮಿತಿಗಿಂತ (Limit of Quantification & LOQ) ಕಡಿಮೆಯಿದೆ ಎಂದು ಅಗ್ರಿಲೀಫ್ ತನ್ನ ಅಧ್ಯಯನದ ಮೂಲಕ ಸಾಬೀತು‌ ಮಾಡಿದೆ. ಹಾಳೆತಟ್ಟೆಗಳಲ್ಲಂತೂ ಇವುಗಳ ಪ್ರಮಾಣ ಅತ್ಯಂತ ನಗಣ್ಯ (ಇಲ್ಲವೇ ಇಲ್ಲ ಎಂಬಷ್ಟು) ಎಂಬುದನ್ನು ಇದು ಸೂಚಿಸುತ್ತದೆ. ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ವಿಭಾಗಕ್ಕೆ (FDA) ತನ್ನ ವರದಿ ಸಲ್ಲಿಸುವಂತೆ ಹಾಳೆತಟ್ಟೆ ಆಮದು ಮಾಡಿಕೊಳ್ಳುವ ಅಮೆರಿಕದ ಗ್ರಾಹಕ ಸಂಸ್ಥೆಗೂ ಅಗ್ರಿಲೀಫ್ ತಿಳಿಸಿದೆ.

ಪರೀಕ್ಷೆಗೊಳಪಟ್ಟ ಎಲ್ಲಾ ಹಾಳೆತಟ್ಟೆಗಳಲ್ಲಿ ಡಿಎನ್‌ಎ ಸುರಕ್ಷಿತವಾಗಿರುವುದು, 100% ಜೀವಕೋಶ ಗಳ ಜೀವಂತಿಕೆ, ಅತ್ಯುತ್ತಮ ಜೈವಿಕ ಹೊಂದಾಣಿಕೆ (biocompatibility) ಹಾಗೂ ಜೀವಂತ ಜೀವಕೋಶಗಳ ಮೇಲೆ ಯಾವುದೇ ವಿಷಕಾರಿ ಪರಿಣಾಮ ಇಲ್ಲದಿರುವುದು, ಟ್ಯೂಮರ್ ಉಂಟು ಮಾಡದ ಗುಣ (Non&Tumorigenic) ಇರುವುದು ಈ ಅಧ್ಯಯನದಲ್ಲಿ ದೃಢಪಟ್ಟಿದೆ. ಅರೆಕೋಲಿನ್ ವರ್ಗಾವಣೆ (Migration Levels) ಮಟ್ಟ ಅಮೆರಿಕದ ಎಫ್‌ʼಡಿಎ ನಂಬಿದ್ದ ಅಧ್ಯಯನ ವರದಿ ಯಲ್ಲಿದ್ದ ಮಟ್ಟಕ್ಕಿಂತ ಸುಮಾರು 10 ಪಟ್ಟು ಕಡಿಮೆ ಇದೆ ಎಂದೂ ಅಗ್ರಿಲೀಫ್ ತೋರಿಸಿಕೊಟ್ಟಿದೆ. ಹಾಳೆತಟ್ಟೆ ಉದ್ಯಮ ಬೆಳೆದು, ಕೃಷಿಕರಿಗೆ ಹಾಗೂ ಅವಲಂಬಿತರಿಗೆ ಅನುಕೂಲವಾಗಬೇಕು ಎಂದೇ ನಾವು ರೂ. 40-45 ಲಕ್ಷ ಖರ್ಚು ಮಾಡಿ ಈ ಸಂಶೋಧನೆ ಮಾಡಿದ್ದೇವೆ ಎಂದು ಅವಿನಾಶ್ ರಾವ್ ವಿವರಿಸುತ್ತಾರೆ.

ಹಾಳೆತಟ್ಟೆಗಳಿಗೆ ಅಮೆರಿಕ ನಿಷೇಧ ಹೇರಿದ ನಂತರ ರಾಜ್ಯದ ಸಂಸದರ ನಿಯೋಗದ ಬೇಡಿಕೆಯಂತೆ, ಕೇಂದ್ರ ಸರಕಾರದ ಕೃಷಿ ಸಚಿವಾಲಯ ಮತ್ತು ಐಸಿಎಆರ್‌ನ ಸಿಪಿಸಿಆರ್‌ಐ (Central Plantation Crops Research Institute) ಅಡಿಕೆ ಮತ್ತು ಮಾನವನ ಆರೋಗ್ಯದ ಕುರಿತು ರೂ. 9.9 ಕೋಟಿ ವೆಚ್ಚದಲ್ಲಿ ಬೃಹತ್ ಸಂಶೋಧನೆ ನಡೆಸುತ್ತಿದೆ. ಕೇರಳದ ಕಾಸರಗೋಡಿನಲ್ಲಿರುವ ಸಿಪಿಸಿಆರ್‌ಐ ನೇತೃತ್ವದಲ್ಲಿ ನಡೆಯುತ್ತಿರುವ ಈ ಅಧ್ಯಯನದಲ್ಲಿ ಅಡಿಕೆ ಸೇವನೆಯಿಂದ ಬಾಯಿ ಕ್ಯಾನ್ಸರ್ ಬರುತ್ತದೆ ಎಂಬ ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳ ಬಗೆಗಿನ ವೈಜ್ಞಾನಿಕ ಆಧಾರಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

ಅಡಿಕೆ ಮತ್ತು ಅದರ ಉಪ-ಉತ್ಪನ್ನಗಳ ಪರ್ಯಾಯ/ಔಷಧಿಯ ಉಪಯೋಗಗಳನ್ನು ಕೂಡ ಅನ್ವೇಷಿಸಲಾಗುತ್ತಿದೆ. ಸುಮಾರು 16 ರಾಷ್ಟ್ರೀಯ ವೈದ್ಯಕೀಯ ಸಂಸ್ಥೆಗಳು ಅಧ್ಯಯನದಲ್ಲಿ ಭಾಗಿಯಾಗಿವೆ. ಇದು 3 ವರ್ಷಗಳ ಯೋಜನೆಯಾಗಿದ್ದು, 1 ವರ್ಷ ಪೂರೈಸಿದೆ. ಅಡಿಕೆ ಬೆಳೆ ನಂಬಿರುವ ಲಕ್ಷಾಂತರ ರೈತರ ಹಿತದೃಷ್ಟಿಯಿಂದ ಸಿಪಿಸಿಆರ್‌ಐ ಅಧ್ಯಯನ ಮಹತ್ವದ್ದೆನಿಸಿಕೊಳ್ಳ ಲಿದೆ. ಅಡಿಕೆಗೆ ಸಂಬಂಽಸಿ ಡಬ್ಲ್ಯುಎಚ್‌ಒ ವಿಜ್ಞಾನಿಗಳ ಬಾಯಿ ಮುಚ್ಚಿಸುವ ಸಂಶೋಧನಾ ಅಧ್ಯಯನ ಕೇಂದ್ರ ಸರಕಾರದ ಸಂಶೋಧನಾ ಸಂಸ್ಥೆಗಳಿಂದ ಇಷ್ಟು ವರ್ಷಗಳಾದರೂ ಆಗಲಿಲ್ಲ ವಲ್ಲ ಎನ್ನುವುದು ನಾಚಿಕೆಗೇಡಿನ ವಿಷಯ.

ಸಿಪಿಸಿಆರ್‌ಐ ಸಂಶೋಧನೆ ಎಲ್ಲಿಯವರೆಗೆ ಬಂತು ಎಂದು ಅಡಿಕೆ ಬೆಳೆಗಾರರ ಹಿತರಕ್ಷಣೆಗಾಗಿ ಕೆಲಸ ಮಾಡುತ್ತಿರುವ, ಅಖಿಲ ಭಾರತ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ, ಕೃಷಿಕ ಮಹೇಶ್ ಪುಚ್ಚಪ್ಪಾಡಿ ಅವರಲ್ಲಿ ಕೇಳಿದಾಗ, ಅಲ್ಲಿಂದ ಮಾಹಿತಿ ನಿರೀಕ್ಷೆ ಮಾಡುತ್ತಿದ್ದೇವೆ ಎಂದರು. ಆದರೆ, ಅಡಕೆ ಕ್ಷೇತ್ರದ ವಿಸ್ತರಣೆಗೆ ಅವರು ನೀಡಿದ 10 ಸಲಹೆಗಳು ಪ್ರಸ್ತುತ ಎನಿಸುತ್ತವೆ. ಅವು ಹೀಗಿವೆ :

1. ಅಡಿಕೆ ಮಾತ್ರ ಬಳಸುವವರು, ಅಡಿಕೆ + ತಂಬಾಕು ಬಳಸುವವರು ಮತ್ತು ಬಳಸದೇ ಇರುವವ ರನ್ನು ಹಲವು ವರ್ಷಗಳ ಕಾಲ ಹೋಲಿಕೆ ಮಾಡಿ ಅಧ್ಯಯನ ಮಾಡಬೇಕು.

2. ತಂಬಾಕು, ಮದ್ಯಪಾನ, ಧೂಮಪಾನ ಮುಂತಾದ ಗೊಂದಲಕಾರಿ ಅಂಶಗಳನ್ನು ಪ್ರತ್ಯೇಕವಾಗಿಯೇ ಹೇಳಬೇಕು.

3. ಶುದ್ಧ ಅಡಿಕೆ ಮತ್ತು ವಾಣಿಜ್ಯ ಮಿಶ್ರಣಗಳ ವ್ಯತ್ಯಾಸ ತಿಳಿಸಬೇಕು.

4. ಸಾದಾ ಅಡಿಕೆ, ಸುಪಾರಿ, ಪಾನ್ ಮಸಾಲಾ, ಗುಟ್ಕಾ ಇವೆಲ್ಲವನ್ನು ಒಂದೇ ಗುಂಪಿನಲ್ಲಿ ಪರಿಗಣಿಸಬಾರದು.

5. ಪ್ರತಿ ಉತ್ಪನ್ನದ ಆರೋಗ್ಯ ಪರಿಣಾಮವನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಬೇಕು.

6. ಅಡಿಕೆಯ ರಾಸಾಯನಿಕ ಮತ್ತು ಜೈವಿಕ ಸಂಶೋಧನೆ ನಡೆಸಬೇಕು.

7. ಅಡಿಕೆಯಲ್ಲಿರುವ ಅರೆಕೋಲಿನ್ ಸೇರಿದಂತೆ ವಿವಿಧ ಸಂಯುಕ್ತಗಳ ಪ್ರಮಾಣವನ್ನು ತಿಳಿದು, ಅದರ ಔಷಽಯ ಗುಣಗಳನ್ನು ಹೇಳಬೇಕು.

8. ವಿವಿಧ ಅಡಿಕೆ ತಳಿಗಳು ಹಾಗೂ ಅದರ ಸಂಸ್ಕರಣಾ ವಿಧಾನ ಮತ್ತು ಕಡಿಮೆ ಅಪಾಯದ ತಳಿಗಳನ್ನು ಅಭಿವೃದ್ಧಿಪಡಿಸಬಹುದೇ ಎಂಬುದನ್ನು ಪರಿಶೀಲಿಸಬೇಕು.

9. ಅಡಿಕೆಗೆ ಎಷ್ಟು ಪ್ರಮಾಣ, ಎಷ್ಟು ಬಾರಿ, ಎಷ್ಟು ವರ್ಷ ಔಷಧಿ ಸಿಂಪಡನೆ ಇತ್ಯಾದಿ ಬಳಸಿದರೆ ಅಪಾಯ ಹೆಚ್ಚಾಗುತ್ತದೆ ಎಂಬುದರ ಬಗ್ಗೆ ವೈಜ್ಞಾನಿಕ ಮಾಹಿತಿ ಸಂಗ್ರಹಿಸಬೇಕು.

10. ಅಡಿಕೆಯನ್ನು ಜಗಿಯುವುದರ ಬದಲಾಗಿ ಇತರ ಬಳಕೆಗಳಿಗೆ ಅಭಿವೃದ್ಧಿಪಡಿಸಬೇಕು. ಔಷಧಿಯ, ಕೈಗಾರಿಕಾ, ನೈಸರ್ಗಿಕ ಉತ್ಪನ್ನಗಳ ಕ್ಷೇತ್ರದಲ್ಲಿ ಸಂಶೋಧನೆ ಹೆಚ್ಚಿಸುವುದು.

ಅಡಿಕೆ ವಿಷಯದಲ್ಲಿ ಭಾವನಾತ್ಮಕವಾಗಿ ಯೋಚಿಸುವ ಬದಲು ವಾಸ್ತವಿಕವಾಗಿ ಚಿಂತಿಸಬೇಕು ಎನ್ನು ವುದು ಅನೇಕರ ಅನಿಸಿಕೆ. ಅಡಿಕೆಯಿಂದ ಹಾನಿ ಇಲ್ಲವೇ ಇಲ್ಲ, ಅದು ಸಂಪೂರ್ಣ ಸುರಕ್ಷಿತ ಎನ್ನುವುದಕ್ಕೆ ನಮ್ಮಲ್ಲಿ ಯಾವುದೇ ಸಂಶೋಧನಾ ವರದಿಗಳಿಲ್ಲ. ತಂಬಾಕು, ಸುಣ್ಣದ ಮಿಶ್ರಣ, ಗುಟ್ಖಾಗಳು ಅಡಿಕೆ ಬಿಕ್ಕಟ್ಟನ್ನು ದುಪ್ಪಟ್ಟಾಗಿಸಿವೆ. ಹಾಗಾಗಿ, ಅಡಿಕೆಯಿಂದ ದೇಹಕ್ಕೆ ಹಾನಿಯಾದರೆ ಅದು ಹೇಗೆ ಆಗುತ್ತದೆ? ಅದನ್ನು ತಡೆಗಟ್ಟುವ ಬಗೆ ಏನು ಎಂಬುದಕ್ಕೆ ಸ್ಪಷ್ಟ ಉತ್ತರ ಬೇಕು. ಹಾಗೆಯೇ, ಅಡಿಕೆಯ ಉಪ ಉತ್ಪನ್ನಗಳು ಹಾಗೂ ಉದ್ಯಮಗಳನ್ನು ರಕ್ಷಿಸುತ್ತೇವೆ ಎಂದು ಸರಕಾರ ಗಳು ಮತ್ತು ಅಧಿಕಾರಶಾಹಿ ಕಣ್ಣೊರೆಸುವ ನಾಟಕದ ಬದಲು, ನೈಜ ಪ್ರಾಮಾಣಿಕತೆ ಪ್ರದರ್ಶಿಸ ಬೇಕಿದೆ.

ಕೆ. ರಾಘವ ಶರ್ಮ ನಿಡ್ಲೆ

View all posts by this author