ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vijay Darda Column: ಇಮ್ರಾನ್‌ ಖಾನ್‌ ಸಾಹೇಬರ ಅದೃಷ್ಟ ಬದಲಾದೀತೆ ?

ಇಸ್ಲಾಮಾಬಾದ್‌ನಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಪಾಕಿಸ್ತಾನದ ಸುಪ್ರೀಂ ಕೋರ್ಟ್ ಇಮ್ರಾನ್ ಖಾನ್‌ರನ್ನು ಅವರು ಈಗಿರುವ ರಾವಲ್ಪಿಂಡಿಯ ಅದಿಯಾಲಾ ಜೈಲಿನಿಂದ ಇಸ್ಲಾಮಾಬಾದ್‌ನ ಶಿಫಾ ಇಂಟರ್ ನ್ಯಾಷನಲ್ ಆಸ್ಪತ್ರೆಗೆ ದಾಖಲಿಸಬೇಕೆಂದು ಸೂಚನೆ ನೀಡಿತು. ಶೆಹಬಾಜ್ ಷರೀಫ್ ಸರಕಾರ ಆ ಆದೇಶದ ವಿರುದ್ಧ ಪುನರ್ ಪರಿಶೀಲನಾ ಅರ್ಜಿ ದಾಖಲಿಸಿತು. ಅಪರಾಧ ಸಾಬೀತಾಗಿ ಜೈಲಿನಲ್ಲಿರುವ ಸಜಾ ಕೈದಿಗೆ ಸರಕಾರಿ ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ ಕೊಡಿಸಲು ಸಾಧ್ಯ ಎಂದು ಅದು ವಾದಿಸಿತು

ಸಂಗತ

‘ಕಾಲದ ಜುಟ್ಟು ಯಾರ ಕೈಲೂ ಇಲ್ಲ. ಅದು ತನ್ನದೇ ದಾರಿಯನ್ನು ಹುಡುಕಿಕೊಳ್ಳುತ್ತದೆ’ ಎಂಬ ಹಳೆಯ ಮಾತೊಂದಿದೆ. ಯಾವಾಗ ಯಾರ ಅದೃಷ್ಟ ಖುಲಾಯಿಸುತ್ತದೆ, ಯಾವಾಗ ಯಾರ ಅದೃಷ್ಟ ಕೆಡುತ್ತದೆ, ಯಾವಾಗ ಯಾರ ಬದುಕು ತಲೆಕೆಳಗಾಗುತ್ತದೆ ಎಂಬುದನ್ನು ಊಹಿಸುವುದು ಕಷ್ಟ. ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಒಂದು ಕಾಲದ ಜನಪ್ರಿಯ ಕ್ರಿಕೆಟಿಗ ಇಮ್ರಾನ್ ಖಾನ್‌ರ ಕತೆ ಮುಗಿಯಿತು, ಆತ ಜೀವನದ ಕೊನೆಯವರೆಗೂ ಜೈಲಿನಲ್ಲೇ ಕೊಳೆಯುವುದು ಅನಿವಾರ್ಯ ಎಂದು ಅವರ ಶತ್ರುಗಳು ಹೋದಲ್ಲಿ ಬಂದಲ್ಲಿ ಹೇಳುತ್ತಿದ್ದರು. ಕೆಲವರಂತೂ, ಇಮ್ರಾನ್ ಖಾನ್ ಜೈಲಿನಲ್ಲಿ ಸತ್ತೇ ಹೋಗಿದ್ದಾರೆ ಎಂದೂ ವದಂತಿ ಹರಡಿದ್ದರು. ಆದರೆ ಪಾಕಿಸ್ತಾನ ದ ರಾಜಕಾರಣದಲ್ಲಿ ಒಳಗೊಳಗೇ ನಿಧಾನವಾಗಿ ಕ್ರಾಂತಿ ನಡೆಯುತ್ತಿದೆ.

ಇಮ್ರಾನ್ ಖಾನ್‌ರ ಶತ್ರುಗಳ ಎದೆಯಲ್ಲಿ ನಡುಕ ಶುರುವಾಗಿದೆ. ಖಾನ್ ಸಾಹೇಬರ ಅದೃಷ್ಟ ಮತ್ತೊಮ್ಮೆ ಖುಲಾಯಿಸಲಿದೆ ಎಂಬ ದಟ್ಟವಾದ ಗುಸುಗುಸು ಇಸ್ಲಾಮಾಬಾದಿನ ಕಾರಿಡಾರುಗಳಲ್ಲಿ ಕೇಳಿಬರುತ್ತಿದೆ. ಕಳೆದೊಂದು ವಾರದಲ್ಲಿ ಪಾಕಿಸ್ತಾನದ ಅಧಿಕಾರದ ಡೈನಾಮಿಕ್ಸ್ ದಿಢೀರನೆ ಬದಲಾಗಿದೆ.

ಇಸ್ಲಾಮಾಬಾದ್‌ನಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಪಾಕಿಸ್ತಾನದ ಸುಪ್ರೀಂ ಕೋರ್ಟ್ ಇಮ್ರಾನ್ ಖಾನ್‌ರನ್ನು ಅವರು ಈಗಿರುವ ರಾವಲ್ಪಿಂಡಿಯ ಅದಿಯಾಲಾ ಜೈಲಿನಿಂದ ಇಸ್ಲಾಮಾಬಾದ್‌ನ ಶಿಫಾ ಇಂಟರ್ ನ್ಯಾಷನಲ್ ಆಸ್ಪತ್ರೆಗೆ ದಾಖಲಿಸಬೇಕೆಂದು ಸೂಚನೆ ನೀಡಿತು. ಶೆಹಬಾಜ್ ಷರೀಫ್ ಸರಕಾರ ಆ ಆದೇಶದ ವಿರುದ್ಧ ಪುನರ್ ಪರಿಶೀಲನಾ ಅರ್ಜಿ ದಾಖಲಿಸಿತು. ಅಪರಾಧ ಸಾಬೀತಾಗಿ ಜೈಲಿನಲ್ಲಿರುವ ಸಜಾ ಕೈದಿಗೆ ಸರಕಾರಿ ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ ಕೊಡಿಸಲು ಸಾಧ್ಯ ಎಂದು ಅದು ವಾದಿಸಿತು. ಆದರೆ ಸುಪ್ರೀಂ ಕೋರ್ಟ್ ಆ ವಾದವನ್ನು ತಳ್ಳಿಹಾಕಿ, ತಾಂತ್ರಿಕ ಕಾರಣಕ್ಕಾಗಿ ಸರಕಾರದ ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿತು. ಅದರ ಬೆನ್ನಲ್ಲೇ ಇಮ್ರಾನ್ ಖಾನ್‌ರನ್ನು ಶಿಫಾ ಇಂಟರ್‌ನ್ಯಾಷನಲ್ ಆಸ್ಪತ್ರೆಗೆ ದಾಖಲಿಸುವುದಕ್ಕೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ದಾಖಲು ಮಾಡಿಕೊಳ್ಳಲಿಲ್ಲ.

ಇದನ್ನೂ ಓದಿ: Vijay Darda Column: ಹಾವು ಕಚ್ಚಿರೋದು ಮಕ್ಕಳಿಗಲ್ಲ, ದರಿದ್ರ ವ್ಯವಸ್ಥೆಗೆ !

ಹೀಗಾಗಿ ಪುನಃ ಜೈಲಿಗೆ ಮರಳಿ ಕರೆದೊಯ್ಯಲಾಯಿತು. ವಾಸ್ತವ ಏನೆಂದರೆ, ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಹೆದರಿದ್ದಾರೆ. ಇಮ್ರಾನ್ ಮತ್ತು ಪಾಕಿಸ್ತಾನದ ಸೇನಾಪಡೆಯ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ನಡುವೆ ಏನೋ ನಡೆಯುತ್ತಿದೆ ಎಂಬ ಗುಮಾನಿ ಶಹಬಾಜ್ ಮನಸ್ಸಿನಲ್ಲಿ ಮೊಳಕೆಯೊಡೆದಿದೆ.

ಬಹುಶಃ ಅವರಿಗೆ ಇಮ್ರಾನ್ ಖಾನ್ ಪ್ರಧಾನ ಮಂತ್ರಿ‌ ಯಾಗಿದ್ದಾಗ ನವಾಜ್ ಷರೀಫ್‌ʼಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ಜೈಲುಶಿಕ್ಷೆ ವಿಧಿಸಿದ್ದು ನೆನಪಾಗಿರ ಬೇಕು. ಜೈಲಿಗೆ ಹೋದ ಬಳಿಕ ನವಾಜ್ ಷರೀಫ್‌ʼಗೆ ಅನಾರೋಗ್ಯದ ಸಮಸ್ಯೆಯ ಕಾರಣಕ್ಕೆ ಜಾಮೀನು ಸಿಕ್ಕಿತ್ತು. ಜಾಮೀನು ಪಡೆದುಕೊಂಡ ನವಾಜ್ ಲಂಡನ್‌ಗೆ ಪಲಾಯನ ಮಾಡಿದ್ದರು!

ನವಾಜ್ ಷರೀಫ್ ಕೂಡ ಅಪರಾಧ ಸಾಬೀತಾಗಿದ್ದ ಕೈದಿಯೇ ಆಗಿದ್ದರು. ಆದರೂ ವೈದ್ಯಕೀಯ ಚಿಕಿತ್ಸೆ ಪಡೆಯುವ ನೆಪದಲ್ಲಿ ಲಂಡನ್ನಿಗೆ ಪರಾರಿಯಾಗಲು ಅವರಿಗೆ ಅವಕಾಶ ಮಾಡಿಕೊಡ‌ ಲಾಗಿತ್ತು. ಅದೇ ರೀತಿಯ ಅವಕಾಶ ಈಗ ಇಮ್ರಾನ್ ಖಾನ್‌ಗೂ ದೊರೆತುಬಿಟ್ಟರೆ ಏನು ಗತಿ? ಆದರೆ ಶಹಬಾಜ್‌ಗೆ ಒಂದು ವಿಷಯದಲ್ಲಿ ಸ್ಪಷ್ಟತೆಯಿದೆ. ಇಮ್ರಾನ್ ಖಾನ್ ಚಿಕಿತ್ಸೆ ಪಡೆದುಕೊಳ್ಳುವ ನೆಪದಲ್ಲಿ ವಿದೇಶಕ್ಕೆ ಪಲಾಯನ ಮಾಡುವ ವ್ಯಕ್ತಿಯಲ್ಲ ಎಂಬುದು ಅವರಿಗೆ ತಿಳಿದಿದೆ.

ಏಕೆಂದರೆ ಇಮ್ರಾನ್ ಒಬ್ಬ ಫಾಸ್ಟ್ ಬೌಲರ್! ಹುಟ್ಟು ಹೋರಾಟಗಾರನಾಗಿದ್ದವರು. ಹೋರಾಟದ ಗುಣ ಸಹಜವಾಗಿಯೇ ಅವರಲ್ಲಿ ಹಾಸುಹೊಕ್ಕಾಗಿದೆ. ಇದು ಶಹಬಾಜ್ʼಗೆ ಗೊತ್ತಿದೆ. ಅಲ್ಲದೆ, ಜನರಲ್ ಆಸಿಮ್ ಮುನೀರ್‌ಗೆ ಈಗ ತನ್ನ ಅವಶ್ಯಕತೆಯಿಲ್ಲ ಎಂಬುದೂ ಶಹಬಾಜ್‌ಗೆ ಗೊತ್ತಾಗಿದೆ. ಅಽಕಾರದ ಆಟದಲ್ಲಿ ಶಹಬಾಜ್‌ರನ್ನು ಹಿಂದಿಕ್ಕಿ ಮುನೀರ್ ಮುಂದೆ ಹೋಗಿದ್ದಾರೆ. ಡೊನಾಲ್ಡ್ ಟ್ರಂಪ್ ಈಗ ಊಟ-ತಿಂಡಿಗೆ ಮುನೀರ್ ಒಬ್ಬರನ್ನೇ ಕರೆಯುತ್ತಾರೆ!

ಮುನೀರ್ ಈಗ ಪಾಕಿಸ್ತಾನದ ಅಧಿಕಾರವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ. ಅದಕ್ಕಾಗಿ, ಎದುರಿಗೆ ತೋರಿಸುವುದಕ್ಕೆ ಅವರಿಗೊಂದು ಹೊಸ ಮುಖ ಬೇಕಾಗಿದೆ. ಅದನ್ನು ಮುನೀರ್ ಹುಡುಕುತ್ತಿದ್ದಾರೆ ಎಂಬುದು ಶಹಬಾಜ್‌ಗೆ ಗೊತ್ತಾಗಿದೆ. ಮುನೀರ್ ಅವರ ಭಾವ ಹಾಗೂ ಪಾಕಿಸ್ತಾನದ ಗೃಹ ಸಚಿವ ಮೊಹ್ಸೀನ್ ನಖ್ವಿ ಏಕೆ ಇತ್ತೀಚೆಗೆ ಪದೇಪದೆ ತನ್ನದೇ ಸರಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ ಎಂಬುದೂ ಶಹಬಾಜ್‌ಗೆ ಗೊತ್ತಿದೆ. ನಿಜ ಹೇಳಬೇಕೆಂದರೆ ಮುನೀರ್‌ಗೆ ಈಗ ಪಾಕಿಸ್ತಾನದ ಪ್ರಧಾನಿ ಯಾರಾಗಿದ್ದರೂ ವ್ಯತ್ಯಾಸವೇನೂ ಆಗುವುದಿಲ್ಲ. ಏಕೆಂದರೆ ಈಗಾಗಲೇ ಆತ ತನ್ನನ್ನು ಆಜೀವಪರ್ಯಂತ ಫೀಲ್ಡ್ ಮಾರ್ಷಲ್ ಮಾಡಿಕೊಂಡಿದ್ದಾರೆ!

ಇನ್ನೊಂದೆಡೆ, ಇಮ್ರಾನ್ ಖಾನ್‌ಗೆ ಹೇಗಾದರೂ ಮಾಡಿ ಜೈಲಿನಿಂದ ಹೊರಗೆ ಬರಬೇಕಾಗಿದೆ. ಅದೇ ಅವರಿಗೀಗ ಮೊದಲ ಆದ್ಯತೆ. ಇಲ್ಲದಿದ್ದರೆ ಸಾಯುವವರೆಗೂ ಜೈಲಿನಲ್ಲಿ ಇರಬೇಕಾಗುತ್ತದೆ. ಸೇನೆಯ ಜೊತೆಗೆ ಕುಸ್ತಿಗೆ ಬೀಳುವುದರಲ್ಲಿ ಅರ್ಥವಿಲ್ಲ ಎಂಬುದು ಈಗ ಇಮ್ರಾನ್‌ಗೆ ಮನವರಿಕೆಯಾಗಿದೆ. ಪಾಕಿಸ್ತಾನದಲ್ಲಿ ರಾಜಕಾರಣಿ ಎಷ್ಟೇ ಪ್ರಭಾವಿಯಾಗಿದ್ದರೂ ಸರಕಾರವನ್ನು ಸೇನೆಯೇ ನಡೆಸುತ್ತದೆ. ಹೀಗಾಗಿ ಈಗ ಒಳಗೊಳಗೇ ಇಮ್ರಾನ್ ಮತ್ತು ಮುನೀರ್ ನಡುವೆ ಚೌಕಾಸಿ ಶುರುವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಯಾವುದೇ ರಾಜಕೀಯ ಒಪ್ಪಂದದ ಷರತ್ತುಗಳು ಏನಿರುತ್ತವೆ ಎಂಬು ದನ್ನು ಊಹಿಸುವುದು ಕಷ್ಟ.

ಆದರೆ, ಇಮ್ರಾನ್ ಮತ್ತು ಮುನೀರ್ ನಡುವೆ ಏರ್ಪಡಬಹುದಾದ ಒಪ್ಪಂದದ ಷರತ್ತುಗಳು ಏನಿರಬೇಕು ಎಂಬ ಬಗ್ಗೆ ಈಗಾಗಲೇ ತಳಮಟ್ಟದ ನಿಷ್ಕರ್ಷೆ ಶುರುವಾಗಿದೆ. 2029ರ ಫೆಬ್ರವರಿಯಲ್ಲಿ ಪಾಕಿಸ್ತಾನದ ಸಂಸತ್ ಚುನಾವಣೆ ನಡೆಯುತ್ತದೆ. ಅದಕ್ಕಿಂತ ಸಾಕಷ್ಟು ಮೊದಲೇ ಈ ಮಾತುಕತೆ ಪೂರ್ಣಗೊಳ್ಳಬೇಕು.

ಮುನೀರ್ ಅವರ ಮಧ್ಯಪ್ರವೇಶದಿಂದ ಇಮ್ರಾನ್ ಖಾನ್ ಖುಲಾಸೆಗೊಂಡರೆ ಪಾಕಿಸ್ತಾನದ ರಾಜಕೀಯ ಚಿತ್ರಣ ನಾಟಕೀಯ ಸ್ವರೂಪದಲ್ಲಿ ಬದಲಾವಣೆಯಾಗುತ್ತದೆ. ಕೆಲ ರಾಜಕೀಯ ಹೇಳಿಕೆಗಳನ್ನು ಗಮನಿಸಿದರೆ ಈ ಸಾಧ್ಯತೆ ಹೆಚ್ಚೇ ಇರುವಂತಿದೆ. ಇಮ್ರಾನ್ ಖಾನ್ ರ ರಾಜಕೀಯ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ (ಪಿಟಿಐ)ನ ವಕ್ತಾರ ಜುಲೀಕರ್ ಬುಖಾರಿ ಈಗಾಗಲೇ ಬಹಿರಂಗವಾಗಿ, ‘ಇಮ್ರಾನ್ ಖಾನ್ ಜೈಲಿನಿಂದ ಬಿಡುಗಡೆಯಾದರೆ ಖಂಡಿತವಾಗಿಯೂ ಸೇನೆ ಅಥವಾ ಜನರಲ್ ಆಸಿಮ್ ಮುನೀರ್ ಜೊತೆಗೆ ಸಂಘರ್ಷದ ಹಾದಿಯನ್ನು ಆಯ್ದುಕೊಳ್ಳುವುದಿಲ್ಲ. ಸಂಘರ್ಷವನ್ನು ಬಿಟ್ಟು ರಾಷ್ಟ್ರದ ಹಿತಕ್ಕಾಗಿ ಅವರು ಕೆಲಸ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ‌

‘ಈಗಿನ ಮಿಲಿಟರಿ ನಾಯಕತ್ವಕ್ಕೆ ಪಾಕಿಸ್ತಾನದ ರಾಜಕೀಯ ಒತ್ತಡಗಳನ್ನು ಕಡಿಮೆ ಮಾಡಿ, ಕೈದಿಗಳನ್ನು ಬಿಡುಗಡೆ ಮಾಡಲು ಸಂಪೂರ್ಣ ಅಽಕಾರವಿದೆ ಎಂದೂ ಬುಖಾರಿ ಹೇಳಿದ್ದಾರೆ. ಇದರರ್ಥ ಏನು? ಖಾನ್ ಸಾಹೇಬರ ಅದೃಷ್ಟ ಯಾವಾಗ ಬೇಕಾದರೂ ಖುಲಾಯಿಸಬಹುದು. ಮುನೀರ್ ಬಹಳ ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ!

ತಾರೀಖ್ ವಿಮಾನ ತಡೆದವರು ಯಾರು? ಬಾಂಗ್ಲಾದೇಶದ ಪ್ರಧಾನ ಮಂತ್ರಿ ತಾರೀಖ್ ರೆಹಮಾನ್ ಅವರ ಭಾರತ ಪ್ರವಾಸ ಬಹುತೇಕ -ನಲ್ ಆಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ವಾರ ತಾರೀಖ್ ರೆಹಮಾನ್ ದೆಹಲಿಗೆ ಬಂದಿಳಿಯುತ್ತಿದ್ದರು. ಅದರೆ, ಅಧಿಕೃತವಾಗಿ ಘೋಷಣೆ ಯಾಗುವುದಕ್ಕೂ ಮೊದಲೇ ಭೇಟಿ ಮುಂದೂಡಿಕೆಯಾಗಿದೆ.

ಮೇಲ್ನೋಟಕ್ಕೆ, ‘ಉಭಯ ದೇಶಗಳ ಪ್ರಧಾನ ಮಂತ್ರಿಗಳ ನಡುವೆ ಮಾತುಕತೆ ನಡೆಯುವುದಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಿಲ್ಲ’ ಎಂಬ ಕಾರಣವನ್ನು ಬಾಂಗ್ಲಾದೇಶ ನೀಡಿದೆ. ಆದರೆ ವಾಸ್ತವವಾಗಿ ಏನಾಗಿದೆ ಅಂದರೆ, ಶೇಖ್ ಹಸೀನಾರನ್ನು ತನಗೆ ಭಾರತ ಹಸ್ತಾಂತರಿಸಬೇಕು ಎಂದು ಬಾಂಗ್ಲಾದೇಶ ಬಯಸುತ್ತಿದೆ. ಶೇಖ್ ಹಸೀನಾಗೆ ಬಾಂಗ್ಲಾದೇಶದಲ್ಲಿ ಗಲ್ಲುಶಿಕ್ಷೆ ಘೋಷಣೆ ಯಾಗಿದೆ.

ಗಮನಾರ್ಹ ಸಂಗತಿಯೆಂದರೆ, ಸ್ವತಃ ಶೇಖ್ ಹಸೀನಾ ಕೂಡ ಬಾಂಗ್ಲಾದೇಶಕ್ಕೆ ಮರಳುವ ಬಯಕೆ ವ್ಯಕ್ತಪಡಿಸಿದ್ದಾರೆ. ಆದರೆ, ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾಗೆ ಸಂಬಂಧಿಸಿದ ಎಲ್ಲಾ ಗುರುತು ಗಳನ್ನೂ ತೃಣಮಾತ್ರದ ಕುರುಹೂ ಇಲ್ಲದಂತೆ ಅಳಿಸಿಹಾಕಬೇಕೆಂದು ಬಯಸುತ್ತಿರುವ ದೇಶಗಳಿಗೆ ಶೇಖ್ ಹಸೀನಾರ ಹೇಳಿಕೆ ಆಘಾತ ಉಂಟುಮಾಡಿದೆ. ಆ ದೇಶಗಳು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ಯಾವತ್ತೂ ಸುಧಾರಿಸಬಾರದು ಎಂದು ಬಯಸುತ್ತವೆ. ಆದರೆ, ಬಾಂಗ್ಲಾದೇಶ ಏನು ಬಯಸುತ್ತದೆ ಎಂಬುದು ನಿಜವಾದ ಪ್ರಶ್ನೆ.

ತಾರೀಖ್ ಈಗಾಗಲೇ ಚೀನಾಕ್ಕೆ ಭೇಟಿ ನೀಡಿದ್ದಾರೆ. ಆದರೆ, ಭಾರತಕ್ಕೆ ಇನ್ನೂ ಬಂದುಹೋಗಿಲ್ಲ. ಇದು ಯಾವ ಸಂದೇಶ ರವಾನಿಸುತ್ತಿದೆ? ಭಾರತಕ್ಕೆ ಬಾಂಗ್ಲಾದೇಶದ ಜೊತೆಗೆ ಸಂಬಂಧ ಬೇಕು ಎಂಬುದು ನಿಜವೇ ಆಗಿದ್ದರೂ, ಬಾಂಗ್ಲಾದೇಶಕ್ಕೆ ಭಾರತದ ಜೊತೆಗೆ ಸಂಬಂಧ ಹೊಂದಿರುವುದು ಅದಕ್ಕಿಂತಲೂ ಹೆಚ್ಚು ಬೇಕಾಗಿದೆ. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು! ಗೋರ್ ಹೊಸತು ಹೇಳಿದ್ದಾರಾ? ಅಮೆರಿಕದ ರಾಯಭಾರಿ ಸೆರ್ಗಿಯೋ ಗೋರ್ ಕಳೆದ ವಾರ ಕಾಶ್ಮೀರಕ್ಕೆ ಭೇಟಿ ನೀಡಿ ದ್ದರು. ಆ ವೇಳೆ ಕಾಶ್ಮೀರದ ಸೌಂದರ್ಯವನ್ನು ಹಾಡಿ ಹೊಗಳಿದ್ದಾರೆ. ಅದರಲ್ಲೇನೂ ವಿಶೇಷವಿಲ್ಲ.

ಏಕೆಂದರೆ ಕಾಶ್ಮೀರ ಸುಂದರವಾಗಿಯೇ ಇದೆ. ಯಾರು ನೋಡಿದರೂ ಹೊಗಳುತ್ತಾರೆ. ಆದರೆ, ಗೋರ್ ಅವರು ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗ ಎಂದು ಕರೆದಿದ್ದಾರೆ. ಇದು ಪಾಕಿಸ್ತಾನಕ್ಕೆ ಹುಚ್ಚು ಹಿಡಿಸಿದೆ. ಅಮೆರಿಕದ ರಾಯಭಾರಿ ಹೀಗೆ ಬಹಿರಂಗವಾಗಿ ಹೇಳುವುದು ಅಂದರೇನು? ಹೀಗಾಗಿ ಅದು ಪಾಕಿಸ್ತಾನದಲ್ಲಿರುವ ಅಮೆರಿಕದ ದೂತಾವಾಸದ ಅಧಿಕಾರಿಗಳನ್ನು ಕರೆಸಿಕೊಂಡು ಪ್ರತಿಭಟನೆ ವ್ಯಕ್ತಪಡಿಸಿದೆ. ಎಷ್ಟು ವಿಚಿತ್ರ ನೋಡಿ!

ಸೆರ್ಗಿಯೋ ಹೊಸತೇನನ್ನೂ ಹೇಳಿಲ್ಲ. ಯಾವುದು ನಿಜವೋ, ಯಾವುದು ಇಡೀ ಜಗತ್ತಿಗೆ ಗೊತ್ತಿದೆ ಯೋ ಅದನ್ನೇ ಹೇಳಿದ್ದಾರೆ. ಕಾಶ್ಮೀರ ಈ ಹಿಂದೆಯೂ ಭಾರತದ ಅವಿಭಾಜ್ಯ ಅಂಗವಾಗಿತ್ತು, ಈಗಲೂ ಆಗಿದೆ ಮತ್ತು ಯಾವಾಗಲೂ ಆಗಿಯೇ ಇರಲಿದೆ!

ಪಾಕಿಸ್ತಾನವನ್ನು ಆಳುತ್ತಿರುವ ಗಣ್ಯ ವ್ಯಕ್ತಿಗಳೇ, ಈ ವಿಷಯದಲ್ಲಿ ತುಂಬಾ ತಲೆಕೆಡಿಸಿಕೊಳ್ಳಬೇಡಿ. ‘ಅಂಕಲ್’ ಸಿಟ್ಟುಗೊಂಡರೆ ನೀವು ಸಮಸ್ಯೆಗೆ ಸಿಲುಕುತ್ತೀರಿ! ನಿಮ್ಮ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಹೇಗೆ ಗಗನಕ್ಕೇರಿದೆ ಎಂಬುದನ್ನು ನೋಡಿದ್ದೀರಾ? ನೀವು ಆಕ್ರಮಿಸಿಕೊಂಡಿರುವ ಕಾಶ್ಮೀರದ ಭಾಗದಲ್ಲಿ ಜನರು ದಂಗೆಯೆದ್ದಿರುವುದನ್ನು ನೋಡಿದ್ದೀರಾ? ಇನ್ನೂ ಎಷ್ಟು ದಿನ ಅವರ ಮೇಲೆ ದಬ್ಬಾಳಿಕೆ ನಡೆಸುತ್ತೀರಿ? ಮೊದಲು ನಿಮ್ಮೊಳಗಿನ ಸಮಸ್ಯೆ ಬಗೆಹರಿಸಿಕೊಳ್ಳಿ. ಯಾವುದೇ ಕಾರಣಕ್ಕೂ ನಮ್ಮ ಮುಂದೆ ತೋಳ್ಬಲ ತೋರಿಸಲು ಬರಬೇಡಿ, ಹುಷಾರ್!

ಡಾ.ವಿಜಯ್‌ ದರಡಾ

View all posts by this author