ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vijay Darda Column: ಹಾವು ಕಚ್ಚಿರೋದು ಮಕ್ಕಳಿಗಲ್ಲ, ದರಿದ್ರ ವ್ಯವಸ್ಥೆಗೆ !

ಜಪ್ತಲಾಯ್ ಆಶ್ರಮ ವಸತಿ ಶಾಲೆಯಲ್ಲಿ ಮೂವರು ಹೆಣ್ಣುಮಕ್ಕಳು ಹಾವಿನ ಕಡಿತದಿಂದ ಸಾವನ್ನಪ್ಪಿದ ಘಟನೆ ನಡೆದ ನಂತರ ಇಡೀ ರಾಜ್ಯದಲ್ಲಿರುವ ಎಲ್ಲಾ ಆಶ್ರಮ ಶಾಲೆಗಳ ಬಗ್ಗೆ ತನಿಖೆಗೆ ಆದೇಶಿಸ ಲಾಗಿತ್ತು. ಆ ತನಿಖೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ 584 ಮಕ್ಕಳು ವಸತಿ ಶಾಲೆಗಳಲ್ಲಿ ಮೃತಪಟ್ಟಿ ದ್ದಾರೆ ಎಂಬ ಸಂಗತಿ ಬೆಳಕಿಗೆ ಬಂತು. ಈ ಪೈಕಿ 384 ಮಕ್ಕಳು ಸರ್ಕಾರದಿಂದಲೇ ನೇರವಾಗಿ ನಡೆಯುವ ಆಶ್ರಮ ಶಾಲೆಗಳಲ್ಲಿ ಮೃತಪಟ್ಟಿದ್ದರೆ, 200 ಮಕ್ಕಳು ಅನುದಾನಿತ ಶಾಲೆಗಳಲ್ಲಿ ಮೃತಪಟ್ಟಿದ್ದರು.

ಹಾವು ಕಚ್ಚಿರೋದು ಮಕ್ಕಳಿಗಲ್ಲ, ದರಿದ್ರ ವ್ಯವಸ್ಥೆಗೆ !

-

ಸಂಗತ

ಗುಡ್ಡಗಾಡು ಹಾಗೂ ಬುಡಕಟ್ಟು ಜನರ ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ದೇಶದಲ್ಲಿ ಪ್ರತಿ ವರ್ಷ ಸಾವಿರಾರು ಕೋಟಿ ರುಪಾಯಿ ಖರ್ಚು ಮಾಡಲಾಗುತ್ತದೆ. ಆದರೂ ದುರದೃಷ್ಟ ವೆಂಬುದು ಅವರ ಮನೆಗಳಲ್ಲಿ ಹೊದ್ದು ಮಲಗಿರುತ್ತದೆ! ಏಕೆ ಹೀಗೆ? ಆಶ್ರಮ ಶಾಲೆಯಲ್ಲಿ ಮಕ್ಕಳು ನೆಲದ ಮೇಲೆ ಮಲಗುವ ಅನಿವಾರ್ಯತೆಯನ್ನು ಊಹಿಸಿಕೊಳ್ಳಿ!

ಇತ್ತೀಚೆಗೆ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಧನೋರಾ ತಾಲೂಕಿನ ಜಪ್ತಲಾಯ್ ಎಂಬಲ್ಲಿ ರುವ ವಸತಿ ಆಶ್ರಮ ಶಾಲೆಯಲ್ಲಿ ಹಾವು ಕಡಿದು ಮೂರು ಪುಟ್ಟ ಹೆಣ್ಣುಮಕ್ಕಳು ಸಾವನ್ನಪ್ಪಿದ ಸುದ್ದಿ ಕೇಳಿ ಮನಸ್ಸು ಮೂಕವಾಗಿತ್ತು. ಇಡೀ ರಾಜ್ಯ ಈ ಸಾವಿನ ಬಗ್ಗೆ ಮುಮ್ಮಲ ಮರುಗಿತು. ಈ ಘಟನೆಯ ಬೆನ್ನಲ್ಲೇ ಹೊರಬಿದ್ದ ಇನ್ನೊಂದು ಭೀಕರ ಸಂಗತಿ ನನ್ನನ್ನು ನಿಜಕ್ಕೂ ಅಲುಗಾಡಿಸಿ ಬಿಟ್ಟಿತು. ಮಹಾರಾಷ್ಟ್ರ ಸರ್ಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರ ರಾಜ್ಯದ ಆಶ್ರಮ ಶಾಲೆಗಳಲ್ಲಿ ಓದುತ್ತಿದ್ದ 584 ಮಕ್ಕಳು ಕಳೆದ ಎರಡು ವರ್ಷದಲ್ಲಿ ಸಾವನ್ನಪ್ಪಿದ್ದಾರೆ!

ಹೇಳಿ ಕೇಳಿ ಮಹಾರಾಷ್ಟ್ರ ಮುಂದುವರಿದ ಮತ್ತು ಶ್ರೀಮಂತ ರಾಜ್ಯ. ಇಂತಹ ರಾಜ್ಯದ ವಸತಿ ಶಾಲೆಗಳಲ್ಲಿ ಇಷ್ಟೊಂದು ಮಕ್ಕಳು ಸಾವನ್ನಪ್ಪಲು ಹೇಗೆ ಸಾಧ್ಯ? ಅಂಕಿಅಂಶಗಳನ್ನು ನಂಬಲು ಸಾಧ್ಯವಿಲ್ಲ ಅಲ್ಲವೇ? ಆದರೆ ನಂಬಲೇಬೇಕು. ಏಕೆಂದರೆ ಇವು ಸ್ವತಃ ಸರ್ಕಾರದ ಬುಡಕಟ್ಟು ಅಭಿವೃದ್ಧಿ ಇಲಾಖೆಯೇ ನೀಡಿರುವ ಅಂಕಿಅಂಶಗಳು. ವಿದೇಶಿಗರು ಯಾರಾದರೂ ನಮ್ಮ ದೇಶವನ್ನು ಹಾವಾಡಿಗರ ದೇಶ ಎಂದು ಕರೆದರೆ ನನ್ನ ರಕ್ತ ಕುದಿಯುತ್ತದೆ. ಆದರೆ ಹಾವು ಕಡಿತದಿಂದ ಪುಟ್ಟಪುಟ್ಟ ಮಕ್ಕಳು ಮೃತಪಟ್ಟ ದುರದೃಷ್ಟಕರ ಸುದ್ದಿ ಕೇಳಿದರೆ ನನ್ನ ರಕ್ತ ಕುದಿಯುವುದು ಮಾತ್ರವಲ್ಲ, ಹೃದಯ ಬೋರಲು ಬಿದ್ದು ರೋದಿಸುತ್ತದೆ.

ಜಪ್ತಲಾಯ್ ಆಶ್ರಮ ವಸತಿ ಶಾಲೆಯಲ್ಲಿ ಮೂವರು ಹೆಣ್ಣುಮಕ್ಕಳು ಹಾವಿನ ಕಡಿತದಿಂದ ಸಾವನ್ನಪ್ಪಿದ ಘಟನೆ ನಡೆದ ನಂತರ ಇಡೀ ರಾಜ್ಯದಲ್ಲಿರುವ ಎಲ್ಲಾ ಆಶ್ರಮ ಶಾಲೆಗಳ ಬಗ್ಗೆ ತನಿಖೆಗೆ ಆದೇಶಿಸಲಾಗಿತ್ತು. ಆ ತನಿಖೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ 584 ಮಕ್ಕಳು ವಸತಿ ಶಾಲೆಗಳಲ್ಲಿ ಮೃತಪಟ್ಟಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂತು. ಈ ಪೈಕಿ 384 ಮಕ್ಕಳು ಸರ್ಕಾರದಿಂದಲೇ ನೇರವಾಗಿ ನಡೆಯುವ ಆಶ್ರಮ ಶಾಲೆಗಳಲ್ಲಿ ಮೃತಪಟ್ಟಿದ್ದರೆ, 200 ಮಕ್ಕಳು ಅನುದಾನಿತ ಶಾಲೆಗಳಲ್ಲಿ ಮೃತಪಟ್ಟಿದ್ದರು. ಈ ನತದೃಷ್ಟ ಮಕ್ಕಳ ಪೈಕಿ 273 ಮಂದಿ ಸೂಕ್ತ ಚಿಕಿತ್ಸೆ ಲಭಿಸದೆ ಅಥವಾ ತೀವ್ರತರ ಅನಾರೋಗ್ಯದಿಂದ ಪ್ರಾಣ ಬಿಟ್ಟಿದ್ದರು. ಅದಕ್ಕಿಂತ ಘೋರ ಸಂಗತಿ ಏನೆಂದರೆ, ಇವರಲ್ಲಿ 55 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು!

ಇದನ್ನೂ ಓದಿ: Vijay Darda Column: ಜೆನ್ ಝೀಯಿಂದ ಗಡಿ ಜಗಳದವರೆಗೆ: ಮಾತುಕತೆಯೇ ಪರಿಹಾರ!

ಇನ್ನು, ಹಾವು ಕಡಿತದ ವಿಷಯ ಕೂಡ ಅಷ್ಟೇ ಆಘಾತಕಾರಿಯಾಗಿದೆ. ಕಳೆದ ಎರಡು ವರ್ಷದಲ್ಲಿ 28 ಮಕ್ಕಳು ವಿಷಕಾರಿ ಹಾವುಗಳ ಕಡಿತಕ್ಕೆ ಬಲಿಯಾಗಿದ್ದಾರೆ. ಅವರಲ್ಲಿ 22 ಮಕ್ಕಳು ಸರ್ಕಾರಿ ಆಶ್ರಮ ಶಾಲೆಗಳಲ್ಲಿ ಮತ್ತು ಆರು ಮಕ್ಕಳು ಅನುದಾನಿತ ಆಶ್ರಮ ಶಾಲೆಯಲ್ಲಿ ಮೃತಪಟ್ಟಿದ್ದಾರೆ. ಅಂದರೆ, ಈ ಅಪರಾಧದಲ್ಲಿ ಸರ್ಕಾರ ಅಥವಾ ಖಾಸಗಿ ಎಂಬ ಭೇದವೇನೂ ಇಲ್ಲ.

ಎಲ್ಲರೂ ಸಮಾನ ಭಾಗಿದಾರರು. ಆದರೆ ಸಂತ್ರಸ್ತರು ಯಾರು? ಎಲ್ಲರೂ ಬಡ ಮತ್ತು ಪಾಪದ ಬುಡಕಟ್ಟು ಮಕ್ಕಳು. ಅವರು ಉಜ್ವಲ ಭವಿಷ್ಯದ ಕನಸು ಹೊತ್ತು ಆಶ್ರಮ ಶಾಲೆಗಳಿಗೆ ಬಂದಿದ್ದರು. ತಮ್ಮ ಮಕ್ಕಳು ತಮ್ಮಂತೆ ಕಾಡಿನಲ್ಲಿ ವಾಸಿಸುವುದು ಬೇಡವೆಂದು ಅವರ ಅಪ್ಪ ಅಮ್ಮಂದಿರೂ ಖುಷಿಯಿಂದ ಹಾಸ್ಟೆಲ್‌ಗೆ ಕಳುಹಿಸಿಕೊಟ್ಟಿದ್ದರು. ಆದರೆ ಆ ಕನಸುಗಳೆಲ್ಲವೂ ಈಗ ನುಚ್ಚು ನೂರಾಗಿವೆ!

ನನ್ನ ಪ್ರಕಾರ ಈ ಮಕ್ಕಳಿಗೆ ಕಚ್ಚಿರುವುದು ವಿಷಕಾರಿ ಹಾವುಗಳಲ್ಲ, ಬದಲಿಗೆ ಅವು ನಮ್ಮ ವ್ಯವಸ್ಥೆಗೇ ಕಚ್ಚಿಕೊಂಡಿರುವ ಕಾರ್ಕೋಟಕ ವಿಷದ ಘಟಸರ್ಪಗಳು! ಗಡ್ಚಿರೋಲಿಯ ಆಶ್ರಮ ಶಾಲೆಯ ಹಾಸ್ಟೆಲ್‌ಗೆ ಹಾವು ನುಗ್ಗಿದಾಗ 70ಕ್ಕೂ ಹೆಚ್ಚು ಹೆಣ್ಣುಮಕ್ಕಳು ನೆಲದ ಮೇಲೆ ಹಾಸಿಗೆ ಹಾಸಿಕೊಂಡು ಮಲಗಿದ್ದರು. ಆಶ್ರಮ ಶಾಲೆಯಲ್ಲಿ ಮಕ್ಕಳು ನೆಲದ ಮೇಲೆ ಮಲಗುವ ಅನಿವಾರ್ಯತೆಯನ್ನು ಊಹಿಸಿಕೊಳ್ಳಿ! ಈ ಹಾಸ್ಟೆಲ್‌ಗಳಿಗೆ ಸರ್ಕಾರ ಪ್ರತಿವರ್ಷ ಅನುದಾನ ನೀಡುತ್ತದೆ. ಹಾವು ಕಡಿತದ ಘಟನೆ ನಡೆದಿರುವುದು ಅನುದಾನಿತ ಶಾಲೆಯಲ್ಲಿ. ಈ ಶಾಲೆಯ ಮಾಲಿಕ ಮಾಜಿ ಸಚಿವ ಮತ್ತು ಮಾಜಿ ಸಂಸದ!

ಈ ಶಾಲೆಯನ್ನು ಮಾಜಿ ಸಂಸದ ಮತ್ತು ಸಚಿವ ಮಾರುತರಾವ್ ಕೋವಾಸೆಯವರ ಕುಪರಲಿಂಗೋ ಶಿಕ್ಷಣ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸಂಶೋಧನಾ ಸಂಸ್ಥೆ ಎಂಬ ಹೆಸರಿನ ಚಾರಿಟೇಬಲ್ ಟ್ರಸ್ಟ್ ನಡೆಸುತ್ತದೆ. ಎಂಥಾ ದೊಡ್ಡ ಹೆಸರಲ್ಲವೇ? ಸಣ್ಣದೊಂದು ಬುಡಕಟ್ಟು ಆಶ್ರಮ ಶಾಲೆಯ ಹೆಸರು ಎಷ್ಟೊಂದು ಭವ್ಯವಾಗಿದೆ ಅಂದರೆ ಹೊರಗಿನವರು ಯಾರಾದರೂ ಕೇಳಿಸಿಕೊಂಡರೆ ಇಡೀ ಜಗತ್ತಿನ ಮಕ್ಕಳೆಲ್ಲ ಇಲ್ಲೇ ಕಲಿಯು ತ್ತಿದ್ದಾರೆ ಅಂದುಕೊಳ್ಳಬೇಕು!

ಇನ್ನೊಂದು ಸಂಗತಿ ಗಮನಿಸಿ: ಸರ್ಕಾರದಲ್ಲಿ ಬುಡಕಟ್ಟು ಶಾಲೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಬೇರೆ ಸಮುದಾಯದವರು ಇದ್ದರೂ, ಈ ಶಾಲೆಗಳನ್ನು ನಡೆಸುವ ಜವಾಬ್ದಾರಿಯನ್ನು ಮಾತ್ರ ಬುಡಕಟ್ಟು ಮುಖಂಡರಿಗೇ ನೀಡಲಾಗಿರುತ್ತದೆ. ಬುಡಕಟ್ಟು ಜನರ ನೋವು ಮತ್ತು ಸಂಕಷ್ಟಗಳು ಇವರಿಗೆ ಚೆನ್ನಾಗಿ ಅರ್ಥವಾಗುತ್ತವೆ ಎಂಬುದು ಇದರ ಹಿಂದಿನ ಉದ್ದೇಶ. ಆದರೆ ಇಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿದೆ. ನಮ್ಮ ಅಧಿಕಾರಿಗಳು ಮತ್ತು ರಾಜಕಾರಣಿಗಳ ನಡುವಿನ ದುಷ್ಟಕೂಟದ ಪರಿಣಾಮವಿದು! ಈ ಅಧಿಕಾರಿಗಳು ಮತ್ತು ರಾಜಕಾರಣಿಗಳು ತಮ್ಮ ಸ್ವಂತ ಮಕ್ಕಳ ಭವಿಷ್ಯದ ಸೌಧವನ್ನು ಕಟ್ಟುವಲ್ಲಿ ಬ್ಯುಸಿಯಾಗಿದ್ದಾರೆ.

ತಮ್ಮ ಮಕ್ಕಳು ಅಂಬಾನಿ ಅಥವಾ ಅದಾನಿ ಆಗಬೇಕು ಎಂದು ಕನಸು ಕಾಣುತ್ತಿದ್ದಾರೆ. ಆದರೆ, ಗುಡ್ಡಗಾಡು ಜನರ ಮಕ್ಕಳಿಗೂ ದೊಡ್ಡ ದೊಡ್ಡ ಕನಸುಗಳನ್ನು ಕಾಣಲು ಹಕ್ಕಿದೆ ಎಂಬುದನ್ನು ಇವರು ಮರೆತು ಬಿಟ್ಟಿದ್ದಾರೆ. ಆದ್ದರಿಂದಲೇ ಬುಡಕಟ್ಟು ಮಕ್ಕಳ ಉದ್ಧಾರಕ್ಕಾಗಿ ಸರ್ಕಾರ ನೀಡುವ ಹಣವನ್ನು ನುಂಗಿ ನೀರು ಕುಡಿದು ಇವರು ತಮ್ಮ ತಮ್ಮ ಮಕ್ಕಳನ್ನು ಚೆನ್ನಾಗಿ ಉದ್ಧಾರ ಮಾಡಿಕೊಳ್ಳುತ್ತಿದ್ದಾರೆ! ಇವರಿಗೆ ನಾಚಿಕೆ ಮಾನ ಮರ್ಯಾದೆ ಏನೂ ಇಲ್ಲ. ಇವರು ನೂರಕ್ಕೆ ನೂರು ವಂಚಕರು! ಇವರು ಹಂಡ್ರೆಡ್ ಪರ್ಸೆಂಟ್ ದಗಾಕೋರರು. ಆದ್ದರಿಂದಲೇ ಸರ್ಕಾರ ಬೇರೆ ಬೇರೆ ಯೋಜನೆಗಳ ಹೆಸರಿನಲ್ಲಿ ಗುಡ್ಡಗಾಡು ಜನರ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರು.ಗಳನ್ನು ಖರ್ಚು ಮಾಡುತ್ತಿದ್ದರೂ ಮಹಾರಾಷ್ಟ್ರದ ಬುಡಕಟ್ಟು ಪ್ರದೇಶಗಳು ಇವತ್ತಿಗೂ ಹಿಂದುಳಿದಿವೆ.

ಗಡ್ಚಿರೋಲಿ, ನಂದುರ್ಬಾರ್, ಮೇಲಘಾಟ್, ಪಾಲ್ಘರ್, ರಾಯಗಢ ಈ ಎಲ್ಲಾ ಬುಡಕಟ್ಟು ಪ್ರದೇಶಗಳೂ ಬಡತನದಲ್ಲಿ ನರಳುತ್ತಿವೆ. ಇಲ್ಲಿಗೆ ಬರುವ ಅನುದಾನವನ್ನು ಸ್ಥಾಪಿತ ಹಿತಾಸಕ್ತಿಯ ಪ್ರಭಾವಿಗಳು ಕಬಳಿಸುತ್ತಿದ್ದಾರೆ. ಅಽಕಾರಿಗಳು ವಿಷಕಾರಿ ಹಾವುಗಳಂತೆ ಸರ್ಕಾರಿ ವ್ಯವಸ್ಥೆಯೊಳಗೆ ಸೇರಿಕೊಂಡು ಎಲ್ಲರನ್ನೂ ಕಚ್ಚುತ್ತಿವೆ. ಅವು ಮಕ್ಕಳ ಆಹಾರವನ್ನು ಕೂಡ ಬಿಡದೆ ತಿಂದು ಹಾಕುತ್ತಿವೆ!

ದಾಲ್ ಹೆಸರಿನಲ್ಲಿ ಈ ಶಾಲೆಗಳಲ್ಲಿ ಮಕ್ಕಳ ತಟ್ಟೆಗೆ ನೀರು ಸುರಿಯಲಾಗುತ್ತದೆ. ಹಾಗಿದ್ದರೆ ಸರ್ಕಾರಿ ವ್ಯವಸ್ಥೆಯಲ್ಲಿ ಹೆದರಿಕೆ ಎಂಬ ಪದಕ್ಕೆ ಬೆಲೆಯೇ ಇಲ್ಲವೇ? ಉತ್ತರದಾಯಿತ್ವ ಅಥವಾ ಪ್ರಾಮಾಣಿಕತೆ ಎಂಬುದು ಎಲ್ಲಿಗೆ ಹೋಯಿತು? ಗಡ್ಚಿರೋಲಿ ಘಟನೆಯ ಬಳಿಕ ಪೊಲೀಸರು ಟ್ರಸ್ಟ್‌ನ ಚೇರ್ಮನ್ ಮಾರುತರಾವ್ ಕೋವಾಸೆ, ಅವರ ಕಾರ್ಯ ದರ್ಶಿ, ಶಾಲೆಯ ಪ್ರಿನ್ಸಿಪಾಲ್ ಮತ್ತು ಇಬ್ಬರು ವಾರ್ಡನ್‌ಗಳ ವಿರುದ್ಧ ಉದ್ದೇಶಪೂರ್ವಕವಲ್ಲದ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಅವರನ್ನು ಅಮಾನತು ಮಾಡಲಾ ಗಿದೆ. ಆದರೆ ಈ ಹಿಂದಿನ ಉದಾಹರಣೆಗಳನ್ನು ಗಮನಿಸಿದರೆ, ಇಂತಹ ಅಮಾನತು ಆದೇಶಗಳು ಬಹಳ ಬೇಗನೆ ತೆರವಾಗುತ್ತವೆ.

ಮಾಜಿ ಮಂತ್ರಿ ಹಾಗೂ ಸಂಸದರ ಟ್ರಸ್ಟ್‌ನಲ್ಲೇ ಇಂತಹ ದುಸ್ಥಿತಿ ಇದೆಯೆಂದಾದರೆ ಇನ್ನುಳಿದ ಕಡೆ ಸಾಮಾನ್ಯ ಜನರ ನೇತೃತ್ವದಲ್ಲಿ ನಡೆಯುತ್ತಿರುವ ಆಶ್ರಮ ಶಾಲೆಗಳ ಕತೆ ಏನಾಗಿರಬಹುದು? ಬುಡಕಟ್ಟು ಅಭಿವೃದ್ಧಿ ಮಂಡಳಿ ಅಥವಾ ಇಲಾಖೆಗಳಲ್ಲಿರುವ ಅಧಿಕಾರಿಗಳೇ ಈ ಅನ್ಯಾಯದ ಸಾವಿಗೆ ನೇರ ಹೊಣೆಗಾರರು! ನಾನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ರಿಗೆ ಮನವಿ ಮಾಡುತ್ತೇನೆ. ಮುಖ್ಯಮಂತ್ರಿಗಳೇ, ನಿಷ್ಪಕ್ಷಪಾತವಾದ ತನಿಖೆ ನಡೆಸಿ ಕಠಿಣ ಕ್ರಮ ತೆಗೆದುಕೊಳ್ಳಿ. ಇಂತಹ ಅವಘಡಕ್ಕೆ ಕಾರಣರಾದವರು ಎಷ್ಟು ಪ್ರಭಾವಿ ವ್ಯಕ್ತಿಯಾಗಿದ್ದರೂ ಬಿಡಬೇಡಿ. ನಾವು ಸಾಮಾನ್ಯವಾಗಿ ಕ್ರಮ ಕೈಗೊಳ್ಳುವುದೆಲ್ಲ ದುರಂತಗಳು ಘಟಿಸಿದ ನಂತರವೇ. ಆದರೆ ನಿಮಗೆ ಈಗಾಗಲೇ ಮಹಾರಾಷ್ಟ್ರದ ಗ್ರಾಮೀಣ ಭಾಗದಲ್ಲಿರುವ ಆಶ್ರಮ ಶಾಲೆಗಳು ಮತ್ತು ಆಸ್ಪತ್ರೆಗಳು ಹೇಗೆ ಕೆಲಸ ಮಾಡುತ್ತಿವೆ ಎಂಬುದು ಗೊತ್ತಾಗಿದೆ. ತಕ್ಷಣ ಅವುಗಳ ಕಾರ್ಯನಿರ್ವಹಣೆ ಬಗ್ಗೆ ಆಡಿಟ್ ನಡೆಸಿ. ಅರ್ಹರಿಗೆ ಸೌಲಭ್ಯಗಳು ಸಿಗುತ್ತಿಲ್ಲ ಅಂದರೆ ಅದು ಗಂಭೀರವಾದ ಲೋಪ. ಯಾರದ್ದಾದರೂ ಹಕ್ಕಿಗೆ ಚ್ಯುತಿ ಬರುತ್ತಿದೆ ಅಂತಾದರೆ ಅದು ಅಪರಾಧ. ಬುಡಕಟ್ಟು ಜನರಿಗೆ ತಲುಪಬೇಕಾದ ಸೌಕರ್ಯಗಳನ್ನು ದೋಚುತ್ತಿರುವವರು ನಿಜಕ್ಕೂ ಪಾಪಿಗಳು. ಅಂತಹ ದುಡ್ಡಿನ ಪಿಪಾಸುಗಳನ್ನು ಬೇರೆ ಏನೆಂದು ತಾನೇ ಕರೆಯಲಿ. ಸಮಾಜದಲ್ಲಿರುವ ದುರ್ಬಲರ ರಕ್ತ ಹೀರಿ ಹಣ ಸಂಪಾದನೆ ಮಾಡುವವರು ಪಾಪಿಗಳಲ್ಲದೆ ಇನ್ನೇನೂ ಅಲ್ಲ.

ಗೌರವಾನ್ವಿತ ಮುಖ್ಯಮಂತ್ರಿಗಳೇ, ಏನಾದರೂ ಸರಿಯೆ ಇದು ನಿಲ್ಲಬೇಕು. ಇಡೀ ವ್ಯವಸ್ಥೆಯ ಶುದ್ಧೀಕರಣ ವಾಗಬೇಕು. ನಿಮ್ಮ ಸರ್ಕಾರಿ ವ್ಯವಸ್ಥೆಯೊಳಗೆ ಕೆಲಸ ಮಾಡುತ್ತಿರುವ ಇಂತಹ ಜನರೇ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ ಸಾಕಾರಗೊಳ್ಳಲು ಅಡ್ಡಿಯಾಗಿದ್ದಾರೆ. ಅಭಿವೃದ್ಧಿ ಹೊಂದಿದ ದೇಶ ನಮ್ಮದಾಗಬೇಕು ಅಂದರೆ ಇಂತಹವರು ಇರಬಾರದು. ದಾರಿಗೆ ಅಡ್ಡಲಾಗಿ ನಿಂತಿರುವ ಅವರನ್ನು ಮುಲಾಜಿಲ್ಲದೆ ದೂರಕ್ಕೆ ತಳ್ಳಿಬಿಡಿ!

ಏಕೆ ಅಷ್ಟೊಂದು ಗದ್ದಲ?

ಕಳೆದ ವಾರ ಸಂಸತ್ತಿನಲ್ಲಿ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ ಬಗ್ಗೆ ಸಂಸತ್ತಿನಲ್ಲಿ ಭಾರೀ ಕೋಲಾಹಲ ಏರ್ಪಟ್ಟಿತು. ಕೊನೆಗೆ ಸರ್ಕಾರವು ಮಸೂದೆಯನ್ನು ಜಂಟಿ ಸದನ ಸಮಿತಿಗೆ (ಜೆಪಿಸಿ) ಒಪ್ಪಿಸಿತು. ಇಷ್ಟಕ್ಕೂ ಈ ವಿಷಯದಲ್ಲಿ ಅಷ್ಟೊಂದು ಗದ್ದಲ ನಡೆಸುವ ಅಗತ್ಯವಿತ್ತೆ? ಅಂಕಿಅಂಶಗಳ ಪ್ರಕಾರ ಭಾರತದ ಸ್ವಯಂಸೇವಾ ಸಂಸ್ಥೆಗಳು (ಎನ್‌ಜಿಒ) ಪ್ರತಿ ವರ್ಷ ಸರಾಸರಿ 18580 ಕೋಟಿ ರು. ವಿದೇಶಿ ದೇಣಿಗೆಯನ್ನು ಸ್ವೀಕರಿಸುತ್ತವೆ. ಅವುಗಳ ಪೈಕಿ ಅಮೆರಿಕವೇ ನಮ್ಮ ದೇಶಕ್ಕೆ ಅತಿದೊಡ್ಡ ದಾನಿ. ನಂತರದ ಸ್ಥಾನದಲ್ಲಿ ಬ್ರಿಟನ್ ಮತ್ತು ಇನ್ನಿತರ ಯುರೋಪಿಯನ್ ದೇಶಗಳಿವೆ. ಈ ವಿದೇಶಿ ದೇಣಿಗೆಯ ಕುರಿತು ಭಾರತ ಸರ್ಕಾರಕ್ಕೆ ಅದರದೇ ಆದ ಕಳವಳ ಹಾಗೂ ಆತಂಕವಿದೆ. ಕೆಲ ಎನ್‌ಜಿಒಗಳು ಈ ದೇಣಿಗೆ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದೂ, ಈ ವಿಷಯದಲ್ಲಿ ಪಾರದರ್ಶಕತೆ ತರುವ ಅಗತ್ಯವಿದೆಯೆಂದೂ ಸರ್ಕಾರ ಭಾವಿಸಿದೆ. ಆದರೆ ಎನ್‌ಜಿಒಗಳು ಸರ್ಕಾರ ಅನಗತ್ಯವಾಗಿ ತಮ್ಮನ್ನು ನಿಯಂತ್ರಿಸಲು ಹೊರಟಿದೆ ಎಂದು ಭಾವಿಸಿವೆ. ಅಮೆರಿಕದ ಸಂಸದ ರಿಲೇ ಮೂರ್ ಎಂಬುವವರ ಪ್ರಕಾರ ಈ ಮಸೂದೆಗೆ ಅಂಗೀಕಾರ ದೊರೆತರೆ ಭಾರತದಲ್ಲಿರುವ ಕ್ರಿಶ್ಚಿಯನ್ ಸಂಘ ಸಂಸ್ಥೆಗಳಿಗೆ ತುಂಬಾ ತೊಂದರೆಯಾಗಲಿದೆಯಂತೆ. ಯಾರ ಆತಂಕ ನಿಜ ಮತ್ತು ಯಾರ ವಾದದಲ್ಲಿ ಹುರುಳಿದೆ ಎಂಬುದನ್ನು ಈಗ ಜೆಪಿಸಿ ನಿರ್ಧರಿಸಲಿದೆ. ಕಾದು ನೋಡೋಣ!