Dr Sathish K Patil Column: ಬಿಹಾರದಲ್ಲಿ ಮತ್ತೆ ನಿತೀಶ್ ಕುಮಾರ್ ಅಧಿಪತ್ಯವೇ ?
ನಿತೀಶ್ ಕುಮಾರ್ ಇಲ್ಲದೆಯೇ ಬಿಹಾರದಲ್ಲಿ ಯಾವ ಮೈತ್ರಿಕೂಟವೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎನ್ನುವ ವಾತಾವರಣವಿದೆ. ಎರಡನೆಯ ಅಂಶವೆಂದರೆ, ನಿತೀಶರು ಮಾಡಿರುವ ಅಭಿವೃದ್ಧಿ ಕಾರ್ಯ ಗಳು. ನಿರುದ್ಯೋಗಿ ಯುವಜನರಿಗೆ ಮಾಸಿಕ 1000 ರು. ನಿರುದ್ಯೋಗ ಭತ್ಯೆ ಮತ್ತು ಅವರಿಗೆ ಉದ್ಯೋಗಾವ ಕಾಶ ಕಲ್ಪಿಸಲೆಂದು ‘ಬಿಹಾರ ಯೂತ್ ಕಮಿಷನ್’ ಸ್ಥಾಪಿಸುವ ನಿರ್ಧಾರ, ಬಡವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆಂದು 4 ಲಕ್ಷ ರು.ವರೆಗೆ ಸಹಾಯಧನ ಇವೇ ಮುಂತಾದ ಉಪಕ್ರಮಗಳ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಯುವ ಮತದಾರರನ್ನು ಸೆಳೆಯುವ ತಂತ್ರ ನಿತೀಶರದ್ದು.


ಕದನ ಕುತೂಹಲ
ಡಾ.ಸತೀಶ್ ಕೆ.ಪಾಟೀಲ
ಲಾಲು ಪ್ರಸಾದ್ ಯಾದವ್ ಮತ್ತು ರಾಬ್ಡಿ ದೇವಿಯವರ ಕಾಲದಲ್ಲಿ ಬಿಹಾರಕ್ಕೆ ‘ಜಂಗಲ್ ರಾಜ್ಯ’ ಮತ್ತು ‘ಹಿಂದುಳಿದ ರಾಜ್ಯ’ ಎಂಬ ಹಣೆಪಟ್ಟಿ ಅಂಟಿಕೊಂಡಿತ್ತು. ಆದರೆ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿ ಆದ ತರುವಾಯ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆ ಯಾಗಿದೆ ಎನ್ನುವ ಅಭಿಪ್ರಾಯವಿದೆ. ಹೀಗೆ ಅನೇಕ ಅಂಶಗಳು ಈ ಸಲದ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟಕ್ಕೆ ವರದಾನವಾಗಬಹುದು.
ಈ ಸಲದ ಬಿಹಾರ ವಿಧಾನಸಭಾ ಚುನಾವಣೆಗೆ ಅಖಾಡ ಸಿದ್ಧವಾಗುತ್ತಿದ್ದು, ಅದು ದೇಶಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಬಿಹಾರ ರಾಜ್ಯದ ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದರೆ, ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಮೈತ್ರಿಕೂಟವೇ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಸಾಧ್ಯತೆ ಗೋಚರಿಸುತ್ತದೆ.
2015ರಲ್ಲಿ, ಲಾಲು ಪ್ರಸಾದ್ ಯಾದವ್ ಜತೆಗೆ ನಿತೀಶ್ ಕುಮಾರ್ ಕೈಜೋಡಿಸಿ ರಚಿಸಿಕೊಂಡಿದ್ದ ಮೈತ್ರಿಕೂಟವು ಜಾತ್ಯತೀತ ಮತಗಳ ಕ್ರೋಡೀಕರಣದ ಪರಿಣಾಮವಾಗಿ ಅಧಿಕಾರಕ್ಕೆ ಬಂದಿತ್ತು. ನಿತೀಶ್ ಕುಮಾರರು ನಂತರ ಈ ಮೈತ್ರಿಕೂಟವನ್ನು ತೊರೆದು, ಪುನಃ ಬಿಜೆಪಿ ಜತೆ ಕೈಜೋಡಿಸಿ ಅಧಿಕಾರಕ್ಕೆ ಬಂದರು.

ಇಲ್ಲಿಯವರೆಗೂ ನಿತೀಶ್ ನೇತೃತ್ವದ ಎನ್‌ಡಿಎ ಒಕ್ಕೂಟವೇ ಬಿಹಾರದಲ್ಲಿ ಅಧಿಕಾರದಲ್ಲಿದೆ ಎನ್ನಿ. ಈ ಸಲದ ಚುನಾವಣೆಯಲ್ಲೂ ಇದೇ ಒಕ್ಕೂಟವು ಅಧಿಕಾರಕ್ಕೆ ಬರಲು ಇರುವ ಅನುಕೂಲಕರ ಅಂಶಗಳತ್ತ ಗಮನಹರಿಸೋಣ. ಮೊದಲನೆಯದು, ಸಿಎಂ ನಿತೀಶ್ ಕುಮಾರರ ಜನಪ್ರಿಯತೆ. ಬಿಹಾರ ರಾಜ್ಯದ ಉದ್ದಗಲಕ್ಕೂ ನಿತೀಶ್ ಕುಮಾರ್ ಕಡೆಗೆ ಇರುವ ಒಲವು ಎನ್‌ಡಿಎ ಒಕ್ಕೂಟಕ್ಕೆ ಬೂಸ್ಟರ್ ಆಗಬಲ್ಲದು.
ನಿತೀಶ್ ಕುಮಾರ್ ಇಲ್ಲದೆಯೇ ಬಿಹಾರದಲ್ಲಿ ಯಾವ ಮೈತ್ರಿಕೂಟವೂ ಅಧಿಕಾರಕ್ಕೆ ಬರಲು ಸಾಧ್ಯ ವಿಲ್ಲ ಎನ್ನುವ ವಾತಾವರಣವಿದೆ. ಎರಡನೆಯ ಅಂಶವೆಂದರೆ, ನಿತೀಶರು ಮಾಡಿರುವ ಅಭಿವೃದ್ಧಿ ಕಾರ್ಯಗಳು. ನಿರುದ್ಯೋಗಿ ಯುವಜನರಿಗೆ ಮಾಸಿಕ 1000 ರು. ನಿರುದ್ಯೋಗ ಭತ್ಯೆ ಮತ್ತು ಅವರಿಗೆ ಉದ್ಯೋಗಾವಕಾಶ ಕಲ್ಪಿಸಲೆಂದು ‘ಬಿಹಾರ ಯೂತ್ ಕಮಿಷನ್’ ಸ್ಥಾಪಿಸುವ ನಿರ್ಧಾರ, ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆಂದು 4 ಲಕ್ಷ ರು.ವರೆಗೆ ಸಹಾಯಧನ ಇವೇ ಮುಂತಾದ ಉಪಕ್ರಮ ಗಳ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಯುವ ಮತದಾರರನ್ನು ಸೆಳೆಯುವ ತಂತ್ರ ನಿತೀಶರದ್ದು.
ಇನ್ನು, ಈ ಹಿಂದೆ ಜಾರಿಮಾಡಲಾಗಿದ್ದ ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ ಗಳಲ್ಲೂ ಹೆಚ್ಚಳ ಮಾಡಿರುವ ನಿತೀಶರು, ಮಹಿಳಾ ಮತದಾರರನ್ನು ಸೆಳೆಯಲೆಂದು ಬಿಹಾರದ ಸರಕಾರಿ ಉದ್ಯೋಗಗಳಲ್ಲಿ ಶೇ.35ರಷ್ಟು ಮೀಸಲಾತಿ ಕಲ್ಪಿಸಲು ನಿರ್ಧರಿಸಿದ್ದಾರೆ. ಪ್ರತಿ ಕುಟುಂಬಕ್ಕೆ 125 ಯುನಿಟ್‌ನಷ್ಟು ಉಚಿತ ವಿದ್ಯುತ್ ನೀಡುವ ಘೋಷಣೆಯು ಬಿಹಾರದ 1 ಕೋಟಿ 67 ಲಕ್ಷ ಕುಟುಂಬಗಳಿಗೆ ವರದಾನವಾಗಲಿದೆ ಮತ್ತು ಈ ಉಪಕ್ರಮಗಳೆಲ್ಲವೂ ನಿತೀಶರ ಇಮೇಜನ್ನು ವರ್ಧಿಸಿವೆ.
ಇದನ್ನೂ ಓದಿ: Roopa Gururaj Column: ನಾಗರ ಪಂಚಮಿ ಹಬ್ಬದ ಐತಿಹ್ಯ
ಇಷ್ಟು ಮಾತ್ರವಲ್ಲದೆ, ಇತ್ತೀಚಿನ ದಿನಗಳಲ್ಲಿ ಬಿಹಾರದಲ್ಲಿನ ಮೂಲಭೂತ ಸೌಕರ್ಯಗಳಲ್ಲಿ ಸಾಕಷ್ಟು ಸುಧಾರಣೆ ಆಗಿದೆ. ರಸ್ತೆ ನಿರ್ಮಾಣ, ಆಸ್ಪತ್ರೆ, ವಿದ್ಯುತ್ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಹಿಂದೆ, ಲಾಲು ಪ್ರಸಾದ್ ಯಾದವ್ ಮತ್ತು ರಾಬ್ಡಿ ದೇವಿಯವರ ಕಾಲ ದಲ್ಲಿ ಬಿಹಾರಕ್ಕೆ ‘ಜಂಗಲ್ ರಾಜ್ಯ’ ಮತ್ತು ‘ಹಿಂದುಳಿದ ರಾಜ್ಯ’ ಎಂಬ ಹಣೆಪಟ್ಟಿ ಅಂಟಿಕೊಂಡಿತ್ತು.
ಆದರೆ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿ ಆದ ತರುವಾಯ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎನ್ನುವ ಅಭಿಪ್ರಾಯವಿದೆ. ಈ ಎಲ್ಲ ಅಂಶಗಳು ಈ ಸಲದ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟಕ್ಕೆ ವರದಾನವಾಗಬಹುದು. ಇನ್ನು, ‘ಕೇಂದ್ರದಲ್ಲೂ ಎನ್‌ಡಿಎ ಸರಕಾರವಿದ್ದು ರಾಜ್ಯದಲ್ಲೂ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದರೆ, ಹೆಚ್ಚಿನ ಅನುದಾನ ಒದಗಿಸಿ ಬಿಹಾರ ರಾಜ್ಯವನ್ನು ನವಬಿಹಾರ ಮಾಡಲಾಗುವುದು’ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿಯವರು ನೀಡುತ್ತಿರುವ ಭರವಸೆಗಳು ಈ ನಿಟ್ಟಿನಲ್ಲಿ ಪೂರಕವಾಗಿವೆ.
ಕೇಂದ್ರ ಸರಕಾರದ ಕಳೆದ ಎರಡು ಬಜೆಟ್‌ಗಳಲ್ಲಿ ಬಿಹಾರಕ್ಕೆ ವಿಶೇಷ ಅನುದಾನ ನೀಡಿ, ಒಟ್ಟು 9 ಲಕ್ಷ ಕೋಟಿ ರು. ಹಣವನ್ನು ಒದಗಿಸಿದ್ದರ ಜತೆಗೆ, ಬಿಹಾರದಲ್ಲಿ 60 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಇಷ್ಟು ಮಾತ್ರವಲ್ಲದೆ, ಪ್ರಧಾನಿ ಮೋದಿಯವರು ಇತ್ತೀಚೆಗೆ, ಬಿಹಾರದ ಮೋತಿಹಾರಿ ಯನ್ನು ಮುಂಬೈ ಮಾದರಿಯಲ್ಲೂ, ಗಯಾ ಪಟ್ಟಣವನ್ನು ಗುರುಗ್ರಾಮದಂತೆಯೂ, ಪಟನಾವನ್ನು ಪುಣೆಯ ಮಾದರಿಯಲ್ಲೂ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದ್ದು, ಅವರ ಅಬ್ಬರದ ಪ್ರಚಾರ ಮತ್ತು ಜನಪ್ರಿಯತೆಯು ಕೂಡ ಈ ಸಲ ಬಿಹಾರದಲ್ಲಿ ಎನ್‌ಡಿಎ ಒಕ್ಕೂಟಕ್ಕೆ ವರವಾಗುವ ಸಾಧ್ಯತೆಯಿದೆ.
ಇನ್ನು ಬಿಹಾರ ರಾಜ್ಯವು ಹೇಳಿಕೇಳಿ ಜಾತಿ ರಾಜಕಾರಣಕ್ಕೆ ಹೆಸರುವಾಸಿಯಾಗಿದ್ದು, ಸದ್ಯದ ಜಾತಿ ಸಮೀಕರಣವನ್ನು ನೋಡಿದಾಗ ಮೇಲ್ವರ್ಗದ, ಹಿಂದುಳಿದ ವರ್ಗದ ಮತ್ತು ದಲಿತರ ಮತಗಳು ಎನ್‌ಡಿಎ ಮೈತ್ರಿಕೂಟದ ಪರವಾಗಿ ವಾಲಬಹುದು. ಮತ್ತೊಂದೆಡೆ, ಯಾದವ ಮತ್ತು ಮುಸ್ಲಿಂ ಸಮುದಾಯದ ಮತಗಳು ವಿರೋಧಿ ಪಾಳಯದ ಆರ್‌ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳ ಮೈತ್ರಿಕೂಟಕ್ಕೆ ಒಲಿಯಬಹುದು.
ಯಾದವ ಮತ್ತು ಮುಸ್ಲಿಂ ಸಮುದಾಯಗಳ ಜತೆಗೆ ದಲಿತರ ಮತಗಳನ್ನು ಸೆಳೆಯುವಲ್ಲಿ ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಕೂಟ ಸಫಲವಾದರೆ, ಆಗ ನಿತೀಶ್ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ನಷ್ಟ ವಾಗಬಹುದು ಎಂಬ ಲೆಕ್ಕಾಚಾರವಿದೆ. ಬಿಹಾರದ ಮಗಧ ಪ್ರಾಂತ್ಯದ ಮಹಾದಲಿತರಲ್ಲಿ ನೋನಿಯಾ, ಚಮ್ಮಾರ ಸಮುದಾಯದವರು ನಿತೀಶರಿಗೆ ಬೆಂಬಲ ವ್ಯಕ್ತಪಡಿಸುತ್ತಾರೆ.
ಮಿಕ್ಕಂತೆ, ದಲಿತ ಪಕ್ಷಗಳಾದ ಚಿರಾಗ್ ಪಾಸ್ವಾನರ ಲೋಕಜನಶಕ್ತಿ ಮತ್ತು ಜಿತನ್ ರಾಂ ಮಾಂಜಿ ಯವರ ಹಿಂದೂಸ್ತಾನಿ ಆವಾಮ್ ಮೋರ್ಚಾ ಇವು ಎನ್‌ಡಿಎ ಜತೆಗೆ ಕೈಜೋಡಿಸಿದರೆ ಅದು ನಿತೀಶರಿಗೆ ಪ್ರಯೋಜನಕಾರಿಯಾಗಿ ಪರಿಣಮಿಸಬಲ್ಲದು. ‘ಜಬ್ ತಕ್ ರಹೇಗಾ ಸಮೋಸೆ ಮೇ ಆಲೂ, ತಬ್ ತಕ್ ರಹೇಗಾ ಬಿಹಾರ್ ಮೇ ಲಾಲೂ’ ಎಂಬುದು ಒಂದು ಕಾಲಕ್ಕೆ ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್ ಅವರ ಜನಪ್ರಿಯ ಘೋಷಣೆಯಾಗಿತ್ತು.
ಆದರೆ ಅದಕ್ಕೀಗ ಅಲ್ಲಿ ಅಷ್ಟೊಂದು ಬೆಂಬಲ ಸಿಗುತ್ತಿಲ್ಲ. ಹೀಗೆ ಲಾಲು ನಾಯಕತ್ವ ಇಲ್ಲದೆ ಆರ್‌ಜೆಡಿ ಪಕ್ಷವು ಸ್ವಲ್ಪ ಸೊರಗಿದೆ. ಇನ್ನು, ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಕೈಗೊಳ್ಳಲಾದ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯಿಂದಾಗಿ ಪ್ರಧಾನಿ ಮೋದಿ ಯವರ ವರ್ಚಸ್ಸು ವೃದ್ಧಿಸಿದ್ದು, ಇದು ಕೂಡ ಈ ಸಲದ ಚುನಾವಣೆಯಲ್ಲಿ ಎನ್‌ಡಿಎ ಪಾಳಯಕ್ಕೆ ಪ್ಲಸ್ ಪಾಯಿಂಟ್ ಆಗಬಹುದು.
ಮತ್ತೊಂದೆಡೆ, 60 ವರ್ಷ ವಯಸ್ಸಾದವರಿಗೆ ಮಾಸಿಕ 3000 ರುಪಾಯಿ, 15 ವರ್ಷದೊಳಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣದ ಭರವಸೆ ನೀಡುತ್ತಿರುವ ಪ್ರಶಾಂತ್ ಕಿಶೋರ್ ಅವರ ಹೊಸ ಪಕ್ಷವಾದ ‘ಜನಸ್ವರಾಜ್’ ಎಷ್ಟು ಮತಗಳನ್ನು ಪಡೆಯಲಿದೆ, ಅದರಿಂದಾಗಿ ಯಾವ ಮೈತ್ರಿಕೂಟಕ್ಕೆ ಹಾನಿಯಾಗಲಿದೆ ಎಂಬುದನ್ನು ಫಲಿತಾಂಶವಷ್ಟೇ ನಿರ್ಣಯಿಸಬಲ್ಲದು.
ಇನ್ನು ಬಿಹಾರದ ಪ್ರತಿಪಕ್ಷಗಳಾದ ಕಾಂಗ್ರೆಸ್, ಆರ್‌ಜೆಡಿ ಮತ್ತು ಎಡಪಕ್ಷಗಳ ಮಹಾಮೈತ್ರಿಕೂಟಕ್ಕೆ ಈ ಚುನಾವಣೆಯಲ್ಲಿ ವರವಾಗುವ ಅಂಶಗಳ ಕಡೆ ಗಮನಹರಿಸೋಣ. ಇವುಗಳ ಪೈಕಿ ಮೊದಲನೆ ಯದು ಆಡಳಿತವಿರೋಧಿ ಅಲೆ. ಬಹುಕಾಲದಿಂದ ಅಧಿಕಾರದಲ್ಲಿರುವ ನಿತೀಶರನ್ನು ಬದಲಾಯಿ ಸುವ ಇಚ್ಛೆಯನ್ನು ಒಂದು ಮತದಾರ ವರ್ಗವು ಹೊಂದಿದ್ದು, ಇದರ ಪ್ರಮಾಣದಲ್ಲಿ ಹೆಚ್ಚಳ ವಾದರೆ ಅದು ಈ ಮಹಾಮೈತ್ರಿಕೂಟಕ್ಕೆ ಪ್ರಯೋಜನಕಾರಿಯಾಗಬಲ್ಲದು.
ರಾಜ್ಯದಲ್ಲಿ ನಿರ್ಮಾಣ ಹಂತದಲ್ಲಿರುವ ಹಾಗೂ ಇತ್ತೀಚೆಗೆ ನಿರ್ಮಾಣಗೊಂಡ ಸೇತುವೆಗಳು ನೆಲಸಮವಾಗುತ್ತಿರುವುದರ ಹಿನ್ನೆಲೆಯಲ್ಲಿ ‘ಇದು ಕಳಪೆ ಕಾಮಗಾರಿಯ ಮತ್ತು ವ್ಯಾಪಕ ಭ್ರಷ್ಟಾಚಾರದ ಫಲಶ್ರುತಿ’ ಎಂದು ಆರ್‌ಜೆಡಿ ಆರೋಪಿಸುತ್ತಿದೆ. ‘ನಿತೀಶ್ ಕುಮಾರರಿಗೆ ವಯಸ್ಸಾ ಗಿದ್ದು ಅವರಲ್ಲಿನ ಕಾರ್ಯಚೈತನ್ಯ ಕಡಿಮೆಯಾಗಿದೆ. ಈಗ ಅವರು ಆಡಳಿತ ನಿರ್ವಹಣೆ ಮಾಡುವಷ್ಟು ಗಟ್ಟಿಯಾಗಿಲ್ಲ’ ಎಂದು ಆರ್‌ಜೆಡಿ ಪಕ್ಷದ ನಾಯಕ ತೇಜಸ್ವಿ ಯಾದವ್ ಟೀಕಿಸಿದ್ದಾರೆ.
ಈ ಅಂಶಗಳು ತಮ್ಮ ಮೈತ್ರಿಕೂಟಕ್ಕೆ ಲಾಭ ತರುತ್ತವೆ ಎಂಬುದು ಆರ್‌ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಕೆನೆಗಟ್ಟಿರುವ ಆಶಾವಾದ. ಜತೆಗೆ, ರಾಜ್ಯದ ಯುವಜನರ ಆಕರ್ಷಣೆಯಾಗಿರುವ ಆರ್‌ಜೆಡಿ ಪಕ್ಷದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ಅವರ ಪ್ರಭಾವವು ಸಾಕಷ್ಟು ನೆರವಾಗಲಿದೆ ಎಂಬ ಇನ್ನೊಂದು ಲೆಕ್ಕಾಚಾರವನ್ನು ಪ್ರತಿಪಕ್ಷಗಳು ಹಾಕಿಕೊಂಡಿವೆ.
ಬಿಹಾರದ ಪ್ರಬಲ ಯಾದವ ಮತ್ತು ಮುಸ್ಲಿಂ ಸಮುದಾಯವು ಪ್ರಸ್ತುತ ಆರ್ ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳ ಪರವಾಗಿದ್ದು, ಇದರ ಜತೆಗೆ ದಲಿತರು ಹಾಗೂ ಹಿಂದುಳಿದ ವರ್ಗದವರ ಮತಗಳನ್ನು ಸೆಳೆದರೆ ಅಧಿಕಾರಕ್ಕೆ ಬರಬಹುದು ಎನ್ನುವ ಆಶಾವಾದವನ್ನು ಈ ಮಹಾಮೈತ್ರಿಕೂಟವು ಹೊಂದಿದೆ. ಒಟ್ಟಾರೆ ಪರಿಸ್ಥಿತಿಯನ್ನು ಅವಲೋಕಿಸಿದಾಗ, ಜೆಡಿಯು ಮತ್ತು ಬಿಜೆಪಿ ಯನ್ನೊಳ ಗೊಂಡ, ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಬಿಹಾರದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಹೆಚ್ಚಾಗಿವೆ.
ಒಟ್ಟು 243 ಸ್ಥಾನಗಳ ಬಿಹಾರ ವಿಧಾನಸಭೆಯಲ್ಲಿ 122 ಮ್ಯಾಜಿಕ್ ಸಂಖ್ಯೆಯನ್ನು ಯಾವ ಮೈತ್ರಿಕೂಟ ಪಡೆಯುತ್ತದೆ, ಬಿಹಾರಿಗಳು ಯಾರಿಗೆ ಜೈಕಾರ ಹಾಕಲಿದ್ದಾರೆ ಎನ್ನುವ ಕುತೂಹಲವು ತಣಿಯಲು ಫಲಿತಾಂಶದವರೆಗೆ ಕಾಯಲೇಬೇಕು.
(ಲೇಖಕರು ಪ್ರಾಧ್ಯಾಪಕರು ಹಾಗೂ ರಾಜಕೀಯ ವಿಶ್ಲೇಷಕರು)