ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

INDW vs AUSW: ಸತತ 2ನೇ ಸೋಲು ಕಂಡ ಭಾರತ; ಆಸೀಸ್‌ಗೆ ಹ್ಯಾಟ್ರಿಕ್‌ ಜಯ

ICC Womens World Cup 2025: 18 ರನ್‌ ಪೂರ್ತಿಗೊಳಿಸುತ್ತಿದ್ದಂತೆ ಮಂಧಾನ, ಕ್ಯಾಲೆಂಡರ್ ವರ್ಷದಲ್ಲಿ 1000 ರನ್ ದಾಟುವ ಮೂಲಕ ಏಕದಿನ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮಾತ್ರವಲ್ಲದೆ ಏಕದಿನ ಕ್ರಿಕೆಟ್‌ನಲ್ಲಿ 5000 ರನ್ ಗಳಿಸಿದ ಎರಡನೇ ಭಾರತೀಯ ಆಟಗಾರ್ತಿ ಮತ್ತು ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಎನಿಸಿಕೊಂಡರು.

ಹೀಲಿ ಬ್ಯಾಟಿಂಗ್‌ ಆರ್ಭಟ; ಬೃಹತ್‌ ಮೊತ್ತ ಪೇರಿಸಿಯೂ ಸೋತ ಭಾರತ

-

Abhilash BC Abhilash BC Oct 12, 2025 10:54 PM

ವಿಶಾಖಪಟ್ಟಣಂ: ನಾಯಕಿ ಅಲಿಸ್ಸಾ ಹೀಲಿ(142) ಬಾರಿಸಿದ ಸೊಗಸಾದ ಶತಕದ ನೆರವಿನಿಂದ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ(INDW vs AUSW) ಈ ಬಾರಿ ಮಹಿಳಾ ವಿಶ್ವಕಪ್‌ನಲ್ಲಿ(ICC Womens World Cup 2025) ಹ್ಯಾಟ್ರಿಕ್‌ ಗೆಲುವು ದಾಖಲಿಸಿತು. ಭಾನುವಾರ ನಡೆದ ಬೃಹತ್‌ ಮೊತ್ತದ ಮೇಲಾಟದಲ್ಲಿ ಭಾರತ ವಿರುದ್ಧ 3 ವಿಕೆಟ್‌ಗಳ ಗೆಲುವು ಸಾಧಿಸಿತು. ಹರ್ಮನ್‌ಪ್ರೀತ್‌ ಕೌರ್‌(Harmanpreet Kaur) ಪಡೆ ಸತತ 2ನೇ ಸೋಲುಂಡಿತು.

ಇಲ್ಲಿನ ವೈ.ಎಸ್. ರಾಜಶೇಖರ ರೆಡ್ಡಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ಸ್ಮೃತಿ ಮಂಧಾನ ಮತ್ತು ಪ್ರತಿಕಾ ರಾವಲ್‌ ಅರ್ಧಶತಕ ನೆರವಿನಿಂದ 48.5 ಓವರ್‌ಗಳಲ್ಲಿ 330 ಬಾರಿಸಿತು. ಇದು ವಿಶ್ವಕಪ್‌ನಲ್ಲಿ ಭಾರತದ ಇದುವರೆಗಿನ ಅತ್ಯಧಿಕ ಮೊತ್ತ. ಇದಕ್ಕೂ ಮುನ್ನ 2022 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 317 ರನ್‌ ಗಳಿಸಿತ್ತು. ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ 300 ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿದ್ದು ಇದೇ ಮೊದಲು.

ಸವಾಲಿನ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಯಾವುದೇ ಒತ್ತಡಕ್ಕೆ ಸಿಲುಕದೇ ಚಾಂಪಿಯನ್ನರ ಆಟವಾಡಿ ಇನ್ನೂ 6 ಎಸೆತ ಬಾಕಿ ಇರುವಂತೆಯೇ 7 ವಿಕೆಟ್‌ಗೆ 331 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು. ಮಹಿಳಾ ಏಕದಿನ ಪಂದ್ಯದಲ್ಲಿ ಇದು ಮೊದಲ ಅತ್ಯಧಿಕ ಮೊತ್ತದ ಯಶಸ್ವಿ ಚೇಸಿಂಗ್‌. ಗೆಲುವಿನಿಂದಿಗೆ ಆಸೀಸ್‌ ಅಂಕಪಟ್ಟಿಯಲ್ಲಿಯೂ ಅಗ್ರಸ್ಥಾನಕ್ಕೇರಿತು.

ಬೊಂಬಾಟ್‌ ಆಟವಾಡಿದ ಹೀಲಿ

ಭಾರತ ನೀಡಿದ ದೊಡ್ಡ ಮೊತ್ತದ ಚೇಸಿಂಗ್‌ ವೇಳೆ ಆಸೀಸ್‌ ತಂಡಕ್ಕೆ ನೆರವಾದದ್ದು ನಾಯಕಿ ಅಲಿಸ್ಸಾ ಹೀಲಿ. ಆರಂಭದಿಂದಲೇ ಆಕ್ರಮಣಾರಿಯಾಗಿ ಭಾರತೀಯ ಬೌಲರ್‌ಗಳನ್ನು ದಂಡಿಸುತ್ತಲೇ ಸಾಗಿದ ಹೀಲಿ, 107 ಎಸೆತಗಳಿಂದ 21 ಬೌಂಡರಿ ಮತ್ತು 3 ಸಿಕ್ಸರ್‌ ಸಿಡಿಸಿ 142 ರನ್‌ ಬಾರಿಸಿದರು. ತಂಡದ ಅರ್ಧದಷ್ಟು ಮೊತ್ತ ಇವರ ಬ್ಯಾಟ್‌ನಿಂದಲೇ ದಾಖಲಾಯಿತು. ಇವರಿಗೆ ಉತ್ತಮ ಸಾಥ್‌ ನೀಡಿದ ಫೋಬೆ ಲಿಚ್‌ಫೀಲ್ಡ್(40) ರನ್‌ ಬಾರಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 85 ರನ್‌ ಒಟ್ಟುಗೂಡಿಸಿತು.

ಐಸಿಸಿ ಟ್ವೀಟ್‌ ಇಲ್ಲಿದೆ



5 ವಿಕೆಟ್‌ ಕಿತ್ತಿದ್ದ ಆಲ್‌ರೌಂಡರ್‌ ಅನ್ನಾಬೆಲ್ ಸದರ್ಲ್ಯಾಂಡ್ ಬ್ಯಾಟಿಂಗ್‌ನಲ್ಲಿ ವಿಫಲತೆ ಕಂಡರು. ಖಾತೆ ತೆರೆಯದೇ ವಿಕೆಟ್‌ ಒಪ್ಪಿಸಿದರು. ಬೆಥ್‌ ಮೂನಿ(4) ಕೂಡ ಅಗ್ಗಕ್ಕೆ ಔಟಾದರು. ಇವರಿಬ್ಬರ ವಿಕೆಟ್‌ ಪತನಗೊಂಡರೂ ಆಶ್ಲೀ ಗಾರ್ಡ್ನರ್(45) ಮತ್ತು ಗಾಯದ ಮಧ್ಯೆಯೂ ಬ್ಯಾಟ್‌ ಬೀಸಿದ ಎಲ್ಲಿಸ್‌ ಪೆರ್ರಿ ಅಜೇಯ 47 ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 32 ರನ್‌ ಗಳಿಸಿದ್ದ ವೇಳೆ ಗಾಯದ ಸಮಸ್ಯೆಗೆ ಸಿಲುಕಿ ಮೈದಾನ ತೊರೆದಿದ್ದ ಪೆರ್ರಿ, ಕೊನೆಯ ಹಂತದಲ್ಲಿ ಮತ್ತೆ ಬ್ಯಾಟಿಂಗ್‌ ನಡೆಸಿದರು. ಭಾರತ ಪರ ಶ್ರೀ ಚರಣಿ(3) ವಿಕೆಟ್‌ ಕಿತ್ತರೆ, ದೀಪ್ತಿ ಶರ್ಮಾ ಮತ್ತು ಅಮನ್‌ಜೋತ್ ಕೌರ್ ತಲಾ 2 ವಿಕೆಟ್‌ ಪಡೆದರು. ಉಳಿದವರಿಂದ ಉತ್ತಮ ಸಾಥ್‌ ಸಿಗದೇ ಇದದ್ದು ತಂಡದ ಸೋಲಿಗೆ ಪ್ರಮುಖ ಕಾರಣ.

ಇದನ್ನೂ ಓದಿ Smriti Mandhana: ಅರ್ಧಶತಕ ಬಾರಿಸಿ ಹಲವು ದಾಖಲೆ ಬರೆದ ಸ್ಮೃತಿ ಮಂಧಾನ

ಮಂಧಾನ-ರಾವಲ್‌ ಅರ್ಧಶತಕ ವ್ಯರ್ಥ

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ಭಾರತ ಪರ ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧಾನ ಮತ್ತು ಪ್ರತಿಕಾ ರಾವಲ್‌ ಆಕರ್ಷಕ ಅರ್ಧ ಶತಕ ಬಾರಿಸಿದರು. ಆದರೆ ತಂಡ ಸೋಲು ಕಂಡ ಕಾರಣ ಇವರ ಬ್ಯಾಟಿಂಗ್‌ ಹೋರಾಟ ವ್ಯರ್ಥವಾಯಿತು. ಮೊದಲ ವಿಕೆಟ್‌ಗೆ ಈ ಜೋಡಿ 155 ರನ್‌ಗಳನ್ನು ಸೇರಿಸುವ ಮೂಲಕ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯಗಳಲ್ಲಿ ಅತ್ಯಧಿಕ ಆರಂಭಿಕ ಜತೆಯಾಟ ನಡೆಸಿದ ದಾಖಲೆ ಬರೆದರು. ಮಾತ್ರವಲ್ಲದೆ ವಿಶ್ವಕಪ್‌ನಲ್ಲಿ 100 ರನ್‌ಗಳ ಆರಂಭಿಕ ಜತೆಯಾಟವನ್ನು ದಾಖಲಿಸಿದ ನಾಲ್ಕನೇ ಭಾರತೀಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

18 ರನ್‌ ಪೂರ್ತಿಗೊಳಿಸುತ್ತಿದ್ದಂತೆ ಮಂಧಾನ, ಕ್ಯಾಲೆಂಡರ್ ವರ್ಷದಲ್ಲಿ 1000 ರನ್ ದಾಟುವ ಮೂಲಕ ಏಕದಿನ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮಾತ್ರವಲ್ಲದೆ ಏಕದಿನ ಕ್ರಿಕೆಟ್‌ನಲ್ಲಿ 5000 ರನ್ ಗಳಿಸಿದ ಎರಡನೇ ಭಾರತೀಯ ಆಟಗಾರ್ತಿ ಮತ್ತು ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರ್ತಿ ಎನಿಸಿಕೊಂಡರು. ಒಟ್ಟು 66 ಎಸೆತಗಳಿಂದ 9 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ 80 ರನ್‌ ಗಳಿಸಿದರು.

ಇದನ್ನೂ ಓದಿ Smriti Mandhana: ಮಹಿಳಾ ಏಕದಿನ ಕ್ಯಾಲೆಂಡರ್ ವರ್ಷದಲ್ಲಿ ಸಾವಿರ ರನ್ ಗಡಿ ದಾಟಿದ ಮಂಧಾನ

ಪ್ರತೀಕಾ ರಾವಲ್ 75 ರನ್‌ ಬಾರಿಸಿದರು. ಹರ್ಮನ್‌ಪ್ರೀತ್‌ ಕೌರ್‌(22) ಈ ಪಂದ್ಯದಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು. ಹರ್ಲಿನ್‌ ಡಿಯೋಲ್‌(38), ರಿಚಾ ಘೋಷ್‌(32) ಮತ್ತು ಜೆಮೀಮಾ ರೋಡಿಗ್ರಸ್‌(33) ರನ್‌ ಬಾರಿಸಿ ತಂಡದ ಬೃಹತ್‌ ಮೊತ್ತಕ್ಕೆ ನೆರವಾದರು. ಆಸೀಸ್‌ ಪರ ಅನ್ನಾಬೆಲ್ ಸದರ್ಲ್ಯಾಂಡ್ 5 ವಿಕೆಟ್‌ ಕಿತ್ತರು. ಉಳಿದಂತೆ ಸೋಫಿ ಮೊಲಿನೆಕ್ಸ್ 3 ವಿಕೆಟ್‌ ಪಡೆದರು.