ಮೂರ್ತಿಪೂಜೆ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಇತ್ತೀಚೆಗೆ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರನ್ನು ಪರೋಕ್ಷವಾಗಿ ಸಂಪರ್ಕಿಸಿದ್ದಾರೆ. ಅರ್ಥಾತ್, ಈಶ್ವರಪ್ಪ ಅವರ ಅತ್ಯಾಪ್ತರ ಜತೆ ಮಾತುಕತೆ ನಡೆಸಿzರೆ. ಈ ಮಾತುಕತೆಯ ಸಂದರ್ಭದಲ್ಲಿ ಈಶ್ವರಪ್ಪ ಅವರ ಅತ್ಯಾಪ್ತರ ಬಳಿ ವಿಜಯೇಂದ್ರ ಒಬ್ಬ ನಿಜವಾದ ನಾಯಕನಂತೆ ಮಾತನಾಡಿದ್ದಾರೆ. ಹಾಗೆ ನೋಡಿದರೆ ಅಧ್ಯಕ್ಷರಾದ ನಂತರ ವಿಜಯೇಂದ್ರ ಅವರು ಒಂದು ಬಗೆಯ ಠಾಕು-ಠೀಕಿನಿಂದಲೇ ನಡೆದುಕೊಳ್ಳುತ್ತಿದ್ದರು.
ಬಿಜೆಪಿ ಮೂಲಗಳ ಪ್ರಕಾರ, ಅವತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರ ಸಿಗ್ನಲ್ ಅನ್ನು ವಿಜಯೇಂದ್ರ ತಪ್ಪಾಗಿ ಗ್ರಹಿಸಿದ್ದೇ ಮುಖ್ಯ ಕಾರಣ. ‘ಅಧ್ಯಕ್ಷ್ ಜೀ. ಕರ್ನಾಟಕದಲ್ಲಿ ಪಕ್ಷವನ್ನು ಬಲಾಢ್ಯವಾಗಿ ಸಂಘಟಿಸಿ. ಪಕ್ಷದಲ್ಲಿ ಯುವಕರಿಗೆ ಆದ್ಯತೆ ನೀಡಿ ಯುದ್ಧಕ್ಕೆ ತಯಾರಾಗಿ’ ಎಂಬುದು ಜಗತ್ ಪ್ರಕಾಶ್ ನಡ್ಡಾ ಅವರು ನೀಡಿದ ಸಿಗ್ನಲ್ಲು. ಆದರೆ ಇದನ್ನು ಮೇಲು ಮಟ್ಟದಲ್ಲಿ ಗ್ರಹಿಸಿದ ವಿಜಯೇಂದ್ರ ಅವರು ತಮ್ಮ ಸುತ್ತ ಯುವ ನಾಯಕರ ದಂಡನ್ನು ಕಟ್ಟಿಕೊಂಡರು. ಮತ್ತು ಅದೇ ಕಾಲಕ್ಕೆ ದಶಕಗಳ ಕಾಲ ಪಕ್ಷಕ್ಕಾಗಿ ದುಡಿದ ಹಿರಿಯರನ್ನು ‘ಯೇ, ನೀವೀಗ ಸೀನಿಯರ್ ಸಿಟಿಜನ್ನು’ ಎಂಬಂತೆ ನೋಡತೊಡಗಿದರು. ಅದರಲ್ಲೂ ಕೆಲ ಹಿರಿಯ ನಾಯಕರು, ‘ನಾವು ನಿಮ್ಮ ತಂದೆ ಯಡಿಯೂರಪ್ಪ ಅವರ ಜತೆ ಸೇರಿ ಪಕ್ಷ ಕಟ್ಟಲು ಶ್ರಮಿಸಿದ್ದೇವೆ.
ಹೀಗಾಗಿ ಈ ಕೆಲಸ ಮಾಡಲು ಈಗಲೂ ತಯಾರಿದ್ದೇವೆ’ ಅಂತ ಹೇಳಿದರೂ, ‘ಯೇ, ನಿಮಗೀಗ ವಯಸ್ಸಾಯಿತು. ಹೀಗಾಗಿ ನಿಮಗೆ ಪಕ್ಷದಲ್ಲಿ ಯಾವುದೇ ಪೋಸ್ಟು ಕೊಡಲು ಸಾಧ್ಯವಿಲ್ಲ. ವರಿಷ್ಟರು ಕೂಡಾ ಪಕ್ಷದಲ್ಲಿ ಯುವಕರಿಗೇ ಆದ್ಯತೆ ಎಂದಿದ್ದಾರೆ. ಹೀಗಾಗಿ ನೀವು ಹಿಂದಿದ್ದು ಮಾರ್ಗದರ್ಶನ ನೀಡಿದರೆ ಸಾಕು’ ಅಂತ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ.
ಇದನ್ನೂ ಓದಿ: R T Vittalmurthy Column: ಬಿಜೆಪಿಯ ಹಿಂದುತ್ವ V/S ಡಿಕೆಶಿಯ ಬಂಧುತ್ವ
ಪರಿಣಾಮ? ರಾಜ್ಯ ಬಿಜೆಪಿಯಲ್ಲಿ ವಿಜಯೇಂದ್ರ ಅವರ ವಿರುದ್ಧ ಹೋರಾಡುತ್ತಿದ್ದವರಿಗೆ ಒಂದು ಶಸ್ತ್ರ ಸಿಕ್ಕಂತಾಗಿದೆ. ಮತ್ತು ‘ವಿಜಯೇಂದ್ರ ಹಿರಿಯರಿಗೆ ಗೌರವ ಕೊಡುತ್ತಿಲ್ಲ’ ಅಂತ ದಿಲ್ಲಿ ಲೆವೆಲ್ಲಿಗೆ ಹೋಗಿ ದೂರಲು ಸಾಧ್ಯವಾಗಿದೆ. ಮುಂದೆ ಇದೇ ವಿಷಯ ವಿಜಯೇಂದ್ರ ಅವರ ವಿರುದ್ಧ ಹೋರಾಡುವವರಿಗೆ ಪರ್ಮನೆಂಟು ಶಕ್ತಿ ನೀಡಿದ್ದಲ್ಲದೆ ಹಿರಿಯ ನಾಯಕರಾದ ಕೆ.ಎಸ್.ಈಶ್ವರಪ್ಪ, ಬಸವನಗೌಡ ಪಾಟೀಲ್ ಯತ್ನಾಳ್ ಅವರಂತಹವರು ಪಕ್ಷದಿಂದ ಹೊರಬೀಳುವ ಮೂಲಕ ಇವತ್ತಿಗೂ ಭಿನ್ನರ ಬತ್ತಳಿಕೆಯಲ್ಲಿ ಬ್ರಹ್ಮಾಸ್ತ್ರವಾಗಿಯೇ ಉಳಿದುಕೊಂಡಿದೆ.
ಆದರೆ ಇಂತಹ ಟೈಮಿನ ಬಳ್ಳಾರಿ ಚಲೋ ಪಾದಯಾತ್ರೆ ಮಾಡಿ ತಮ್ಮ ಇಮೇಜು ಬದಲಿಸಿಕೊಳ್ಳುವ ಕೆಲಸ ಆರಂಭಿಸಿರುವ ವಿಜಯೇಂದ್ರ ಮೆಲ್ಲಗೆ ಪಕ್ಷದಲ್ಲಿರುವ ಹಿರಿಯರ ಕಡೆ ನೋಡತೊಡಗಿದ್ದಾರೆ. ಪಕ್ಷಕ್ಕಾಗಿ ದುಡಿದ ಹಿರಿಯರ ಸೈನ್ಯದ ವಿಶ್ವಾಸ ಗಳಿಸದೆ ಹೋದರೆ ಭಿನ್ನರ ಪಡೆಯ ಬತ್ತಳಿಕೆಯಲ್ಲಿ ರುವ ಬ್ರಹ್ಮಾಸ್ತ್ರ ಶಕ್ತಿ ಕಳೆದುಕೊಳ್ಳುವುದಿಲ್ಲ ಎಂಬ ಸತ್ಯ ಅರಿವಾಗಿದೆ.
ಈ ಹಿನ್ನೆಲೆಯಲ್ಲಿಯೇ ಕಳೆದ ಎರಡು ವರ್ಷಗಳಿಂದ ಪಕ್ಷದ ಹೊರಗಿರುವ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರ ಮನ ಒಲಿಕೆಗೆ ಮುಂದಾಗಿರುವ ವಿಜಯೇಂದ್ರ ಅವರು ಈಶ್ವರಪ್ಪ ಅವರ ಅತ್ಯಾಪ್ತರೊಬ್ಬರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ನೇರವಾಗಿಯೇ ವಿಷಯ ವನ್ನು ಪ್ರಸ್ತಾಪಿಸಿದ ವಿಜಯೇಂದ್ರ ಅವರು, ‘ಬ್ರದರ್, ಹಿರಿಯ ನಾಯಕರಾದ ಕೆ.ಎಸ್.ಈಶ್ವರಪ್ಪ ಅವರು ಪಕ್ಷಕ್ಕೆ ಮರಳಿ ಬರಬೇಕು ಎಂಬುದು ನಮ್ಮ ಅಪೇಕ್ಷೆ. ಎಷ್ಟೇ ಆದರೂ ಅವರು ನಮ್ಮ ಹಿರಿಯರು.
ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಲು ನಮ್ಮ ತಂದೆ ಯಡಿಯೂರಪ್ಪನವರ ಜತೆ ಶ್ರಮಿಸಿದವರು. ಅಂತವರು ಯಾವುದೋ ವಿಷ ಘಳಿಗೆಯಲ್ಲಿ ಪಕ್ಷದಿಂದ ಹೊರಗೆ ಹೋಗುವ ಸನ್ನಿವೇಶ ಬಂತು. ಆದರೆ ಇವತ್ತು ಎಲ್ಲವನ್ನೂ ಮರೆತು ಅವರು ಪಕ್ಷಕ್ಕೆ ಬರಲಿ. ಕರ್ನಾಟಕದಲ್ಲಿ ಪಕ್ಷ ಮರಳಿ ಅಧಿಕಾರಕ್ಕೆ ಬರಲು ನೆರವು ನೀಡಲಿ’ ಎಂದಿದ್ದಾರೆ.
ಹೀಗೆ ವಿಜಯೇಂದ್ರ ಅವರು ಮುಂದಿಟ್ಟ ಈ ಪ್ರಸ್ತಾಪವನ್ನು ಕೇಳಿದ ಈಶ್ವರಪ್ಪ ಅವರ ಅತ್ಯಾಪ್ತರು, ‘ಈಶ್ವರಪ್ಪ ಅವರು ಪಕ್ಷದಿಂದ ಹೊರಗಿರಬಹುದು. ಆದರೆ ಯಾವತ್ತೂ ಅವರ ಮನಸ್ಸು ಬಿಜೆಪಿ ಯಿಂದ ಹೊರಗಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉದ್ದೇಶಪೂರ್ವಕವಾಗಿ ಅವರಿಗೆ ಪಕ್ಷದ ಟಿಕೆಟ್ ತಪ್ಪಿಸಲಾಯಿತು.
ಹೋಗಲಿ, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಪುತ್ರ ಕಾಂತೇಶ್ ಅವರಿಗೆ ಟಿಕೆಟ್ ಕೊಡಿ ಅಂತ ಈಶ್ವರಪ್ಪ ಅವರು ಪರಿಪರಿಯಾಗಿ ಕೇಳಿದರು. ಆದರೆ ಅವರ ಆ ಕೋರಿಕೆಯನ್ನೂ ತಿರಸ್ಕರಿಸ ಲಾಯಿತು. ಹೀಗೆ ದಶಕಗಳ ಕಾಲ ಪಕ್ಷಕ್ಕಾಗಿ ದುಡಿದ ತಮ್ಮನ್ನು ಕನಿಷ್ಟ ಸೌಜನ್ಯದಿಂದ ನಡೆಸಿಕೊಳ್ಳದೆ ಇದ್ದುದು ಈಶ್ವರಪ್ಪ ಅವರ ಬೇಸರಕ್ಕೆ ಕಾರಣವಾಗಿದೆ’ ಅಂತ ವಿವರಿಸಿದ್ದಾರೆ. ಯಾವಾಗ ಅವರು ಈ ಮಾತು ಹೇಳಿದರೋ? ಆಗ ವಿಜಯೇಂದ್ರ ಅವರು, ‘ಬ್ರದರ್, ಇನ್ನು ಮುಂದೆ ಅಂತಹ ತಪ್ಪುಗಳಾಗುವುದಿಲ್ಲ.
ಈಶ್ವರಪ್ಪ ಅವರಿಗೆ ಪಕ್ಷದಲ್ಲಿ ಯಾವ ಗೌರವ ಸಲ್ಲಬೇಕೋ ಸಲ್ಲುತ್ತದೆ. ಹೀಗಾಗಿ ಎಲ್ಲವನ್ನೂ ಮರೆತು ಅವರು ಬಿಜೆಪಿಗೆ ವಾಪಸ್ಸಾಗಲಿ’ ಅಂತ ಹೇಳಿದ್ದಾರೆ. ಅರ್ಥಾತ್, ಈಶ್ವರಪ್ಪ ಅವರ ಬಿಜೆಪಿ ಮರು ಸೇರ್ಪಡೆಗೆ ವಿಜಯೇಂದ್ರ ವಿದ್ಯುಕ್ತವಾಗಿ ಆಫರು ನೀಡಿದ್ದಾರೆ. ಆ ಮೂಲಕ ಕಳೆದ ಎರಡು ವರ್ಷಕ್ಕೂ ಹೆಚ್ಚು ಕಾಲದಿಂದ ತಮ್ಮ ಮೇಲಿದ್ದ ಅಪವಾದವನ್ನು ತೊಡೆದುಕೊಳ್ಳುವ ಕೆಲಸ ಆರಂಭಿಸಿದ್ದಾರೆ.
ಅಂದ ಹಾಗೆ ವಿಜಯೇಂದ್ರ ಅವರ ಈ ಮನವಿಗೆ ಒಪ್ಪಿ ಈಶ್ವರಪ್ಪ ಅವರು ಪಕ್ಷಕ್ಕೆ ಮರಳಿ ಬಂದರೆ ನೋ ಡೌಟ್, ರಾಜ್ಯ ಬಿಜೆಪಿಯ ಶಕ್ತಿ ನಿರ್ವಿವಾದವಾಗಿ ಹೆಚ್ಚುತ್ತದೆ. ಕಾರಣ? ಸಿದ್ದರಾಮಯ್ಯ ಅವರು ಸಿಎಂ ಹುದ್ದೆಯಿಂದ ಕೆಳಗಿಳಿದ ನಂತರ ಕುದಿಯುತ್ತಿರುವ, ಪರ್ಯಾಯ ಶಕ್ತಿಯ ಕಡೆ ನೋಡುತ್ತಿರುವ ಕುರುಬ ಮತ ಬ್ಯಾಂಕಿಗೆ ಭರವಸೆಯ ನೆಲೆ ಸಿಕ್ಕಂತಾಗುತ್ತದೆ. ಮತ್ತು ಓಂ ಈಶ್ವರಾಯ ನಮಃ ಅಂತ ಬಿಜೆಪಿಯ ಕಡೆ ಹೊರಳುವುದು ಸುಲಭವಾಗುತ್ತದೆ.
ಸುರ್ಜೇವಾಲಾಗೆ ತಿಳಿದ ರಹಸ್ಯ
ಈ ಮಧ್ಯೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇ ವಾಲಾ ಅವರು ಪಕ್ಷದ ಬಹುತೇಕ ಶಾಸಕರ ಜತೆ ಸೀರಿಯಸ್ ಮೀಟಿಂಗುಗಳನ್ನು ಮಾಡಿದ್ದಾರೆ. ನವೆಂಬರ್- ಡಿಸೆಂಬರ್ ಹೊತ್ತಿಗೆ ನಡೆಸಲು ಉದ್ದೇಶಿಸಲಾಗಿರುವ ಸ್ಥಳೀಯ ಸಂಸ್ಥೆ ಚುನಾವಣೆಗಳೇ ಇಂತಹ ಮೀಟಿಂಗುಗಳ ಮೂಲ. ಅಂದ ಹಾಗೆ ಸ್ಥಳೀಯ ಸಂಸ್ಥೆ ಚುನಾವಣೆಗಳ ವಿಷಯದಲ್ಲಿ ಸುರ್ಜೇವಾಲ ತುಂಬ ಸೀರಿಯಸ್ ಅಗಲು ಒಂದು ಕಾರಣವಿದೆ. ಅದೆಂದರೆ ಕಾಂಗ್ರೆಸ್ ಹೈಕಮಾಂಡ್‌ಗೆ ತಲುಪಿರುವ ಸರ್ವೇ ರಿಪೋರ್ಟು.
ಈ ರಿಪೋರ್ಟಿನ ಪ್ರಕಾರ: ‘ರಾಜ್ಯದ ಕಾಂಗ್ರೆಸ್ ಶಾಸಕರ ಪೈಕಿ ನೂರಾ ಒಂದು ಮಂದಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ.’ ಯಾವಾಗ ಇಂತಹ ರಿಪೋರ್ಟು ಕೈ ಸೇರಿತೋ? ಇದಾದ ನಂತರ ಕಳೆದ ವಾರ ಬೆಂಗಳೂರಿಗೆ ಬಂದಿದ್ದ ಸುರ್ಜೇವಾಲ ರಾಜ್ಯ ಕಾಂಗ್ರೆಸ್ ನ ಹಲವು ಶಾಸಕರ ಜತೆ ಒನ್ ಟು ಒನ್ ಮೀಟಿಂಗುಗಳನ್ನು ನಡೆಸಿ, ‘ಮುಂದಿನ ಚುನಾವಣೆಯಲ್ಲಿ ಗೆದ್ದು ನಾವು ಮರಳಿ ಅಧಿಕಾರ ಹಿಡಿಯದಿದ್ದರೆ ಕಷ್ಟ.
ಹೀಗಾಗಿ ಅದಕ್ಕೂ ಮುನ್ನ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲ್ಲಬೇಕು. ಇಲ್ಲದಿದ್ದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೋರಾಡಲು ನಿಮಗೆ ನಿಷ್ಠಾವಂತ ಬ್ರಿಗೇಡಿಯರುಗಳು ಸಿಗುವುದಿಲ್ಲ’ ಎಂದು ನೇರವಾಗಿ ಹೇಳಿದ್ದಾರೆ. ಅವರು ಹೇಳಿದ ಮಾತಿಗೆ ಶಾಸಕರು ಸ್ಪಂದಿಸಿದರೂ ಬಹುತೇಕರು ಮತ್ತೊಂದು ಸಮಸ್ಯೆಯ ಬಗ್ಗೆ ಸುರ್ಜೇವಾಲ ಅವರ ಗಮನ ಸೆಳೆದಿದ್ದಾರೆ.
‘ಸಾರ್, ಈ ವರ್ಷ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲ್ಲಲು ನಾವು ಶಕ್ತಿ ಮೀರಿ ಶ್ರಮಿಸುತ್ತೇವೆ. ಆದರೆ ನಿಜವಾದ ಸಮಸ್ಯೆ ಈ ಬೇಸಿಗೆಯ ಹೊತ್ತಿಗೆ ಉಲ್ಬಣಿಸುತ್ತದೆ. ಯಾಕೆಂದರೆ 1984ರ ನಂತರ ಕರ್ನಾಟಕ ಭೀಕರ ಬರಗಾಲ ಎದುರಿಸಲಿದ್ದು ಕುಡಿಯುವ ನೀರು, ಮೇವಿನ ಪೂರೈಕೆಯಲ್ಲಾಗುವ ಕೊರತೆ ಜನರ ಆಕ್ರೋಶಕ್ಕೆ ಕಾರಣವಾಗಲಿದೆ.
ವಿಪರ್ಯಾಸವೆಂದರೆ ಭೀಕರ ಬರಗಾಲದ ಮುನ್ಸೂಚನೆ ಇದ್ದರೂ ಸರ್ಕಾರದ ಪ್ರಮುಖ ಮಂತ್ರಿಗಳು, ಉನ್ನತಾಧಿಕಾರಿಗಳು ಜಿಲ್ಲೆಗಳ ಕಡೆ ನೋಡುತ್ತಿಲ್ಲ. ಇದರ ಕೆಲವರು ಅನಗತ್ಯವಾದ ಈವೆಂಟುಗಳನ್ನು ನಡೆಸುವ ಕೆಲಸಕ್ಕಿಳಿದಿದ್ದಾರೆ. ಇವತ್ತು ಈವೆಂಟುಗಳನ್ನು ಮಾಡಿ ಕರ್ನಾಟಕದ ಇತಿಹಾಸದ ಬಗ್ಗೆ ಹೊಗಳುತ್ತಾ ಕೂರುವುದು ಆದ್ಯತೆಯ ವಿಷಯವಲ್ಲ.
ಬದಲಿಗೆ ಜನರ ಸಂಕಷ್ಟಗಳ ಕಡೆ ಗಮನ ಹರಿಸಲು ಸರ್ಕಾರದ ಒಂದೊಂದು ಪೈಸೆಯೂ ಬಳಕೆ ಯಾಗಬೇಕು. ಅದನ್ನು ಮಾಡದಿದ್ದರೆ ಕಷ್ಟ’ ಅಂತ ನೇರವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಬರಗಾಲದ ಸಂದರ್ಭದಲ್ಲಿ ಎಸ್.ಎಂ.ಕೃಷ್ಣ ಒಳ್ಳೆಯ ಕೆಲಸ ಮಾಡಿದ್ದರೂ 2004ರಲ್ಲಿ ಜನ ಕಾಂಗ್ರೆಸ್ ಪಕ್ಷಕ್ಕೆ ಯಕ್ಕಾ-ಮಕ್ಕಾ ಬಾರಿಸಿದರು. ಇನ್ನು ಈಗಿನ ಬಹುತೇಕ ಮಂತ್ರಿಗಳ ಈವೆಂಟ್ ಮ್ಯಾನೇಜ್‌ಮೆಂಟ್ ಕಸರತ್ತನ್ನು ಅವರು ಸಹಿಸುತ್ತಾರೆಯೇ? ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಬೇಕು ಎಂದರೆ ಮೊದಲು ನಮ್ಮವರಿಗೆ ಮಿತವ್ಯಯದ ಮತ್ತು ಬರಗಾಲದ ಸಂದರ್ಭವನ್ನು ಎದುರಿಸುವ ಅನಿವಾರ್ಯತೆ ಯ ಬಗ್ಗೆ ಹೇಳಿ’ ಎಂದಿದ್ದಾರೆ.
ಹೀಗೆ ಶಾಸಕರು ತಮಗೇ ಉಲ್ಟಾ ಗೂಸಾ ಕೊಟ್ಟ ರೀತಿ ಸುರ್ಜೇವಾಲಾ ಅವರು ಕಂಗಾಲಾಗುವಂತೆ ಮಾಡಿದೆ ಎಂಬುದು ಲೇಟೆಸ್ಟು ಸುದ್ದಿ.
ಡಿಕೆಶಿ ಬಿಸಿ, ಎನ್‌ಡಿಎ ಕಸಿ
ಇನ್ನು ಮಿತ್ರಕೂಟದ ಪಾಲುದಾರರಾಗಿದ್ದರೂ, ಇಂಡಿಪೆಂಡೆಂಟ್ ಅನ್ನುವಂತೆ ನಡೆದುಕೊಳ್ಳುತ್ತಿದ್ದ ಬಿಜೆಪಿ-ಜೆಡಿಎಸ್ ನಾಯಕರು ಈಗ ಎನ್‌ಡಿಎ ಛತ್ರಿಯಡಿ ಒಟ್ಟಿಗೆ ಹೋಗಲು ನಿರ್ಧರಿಸಿದ್ದಾರೆ.
ಹೀಗೆ ಬಿಜೆಪಿ-ಜೆಡಿಎಸ್ ನಾಯಕರು ತಟ್ಟಂತ ಕೈಗೆ ಎನ್‌ಡಿಎ ಅಂಬ್ರೆಲ್ಲಾ ಹಿಡಿದುಕೊಳ್ಳಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಮೂಲ. ಯಾಕೆಂದರೆ ಕಳೆದ ಕೆಲ ದಿನಗಳಿಂದ ಅವರು ಬಿಜೆಪಿ ಮತ್ತು ಜೆಡಿಎಸ್ ಪಾಳಯದಲ್ಲಿರುವ ಪವರ್ ಫುಲ್ ಲೋಕಲ್ ಲೀಡರುಗಳ ಮೇಲೆ ಕಣ್ಣಿಟ್ಟಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಲೋಕಲ್ ಲೀಡರುಗಳಿಗೆ ಪಕ್ಷದ ಟಿಕೆಟ್ ಕೊಟ್ಟರೆ, ತಮಗಿರುವ ಸ್ವಂತ ಶಕ್ತಿಯ ಜತೆ, ಕಾಂಗ್ರೆಸ್‌ನ ಶಕ್ತಿಯನ್ನು ಸೇರಿಸಿಕೊಂಡು ಗೆದ್ದು ಬಿಡಬಲ್ಲರು ಎಂಬುದು ಇದಕ್ಕೆ ಮುಖ್ಯ ಕಾರಣ.
ಯಾವಾಗ ಈ ಬೆಳವಣಿಗೆ ಆರಂಭವಾಯಿತೋ? ಅಗ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಷಿ, ಹೆಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಮತ್ತು ರಾಜ್ಯದ ನಾಯಕರಾದ ಬಿ.ವೈ.ವಿಜಯೇಂದ್ರ ಮತ್ತು ಆರ್. ಅಶೋಕ್ ಪರಸ್ಪರ ಮಾತನಾಡಿಕೊಂಡಿದ್ದಾರೆ. ಈಗಿರುವ ಮಾಹಿತಿಯ ಪ್ರಕಾರ, ಕಾಂಗ್ರೆಸ್ ಹೈಕಮಾಂಡ್ ರಾಜ್ಯದಲ್ಲಿ ಮೂರು ಸರ್ವೆಗಳನ್ನು ಮಾಡಿಸಿದೆ. ಈ ಎಲ್ಲ ಸರ್ವೆಗಳು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಕಷ್ಟ ಎಂದಿವೆ.
ಹೀಗಾಗಿ ಡಿಕೆಶಿ ಮುಂದೆ ನುಗ್ಗಿ ನಮ್ಮ ಪಕ್ಷಗಳಲ್ಲಿರುವ ಗೆಲ್ಲುವ ಕ್ಯಾಂಡಿಡೇಟುಗಳನ್ನು ಸೆಳೆಯಲು ಹೊರಟಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರ ಮಧ್ಯೆ ಗೊಂದಲ ಇರಬಾರದು ಎಂದರೆ ಎನ್ ಡಿಎ ಛತ್ರಿಯಡಿ ಒಂದಾಗಬೇಕು ಎಂಬುದು ಈ ನಾಯಕರ ಲೆಕ್ಕಾಚಾರ. ಯಾವಾಗ ಇಂತಹ ಲೆಕ್ಕಾಚಾರ ಶುರುವಾಯಿತೊ? ಇದಾದ ನಂತರ ಉಭಯ ಪಕ್ಷಗಳ ನಾಯಕರು ಶನಿವಾರ ಸಭೆ ಸೇರಿ ಎನ್‌ಡಿಎ ಛತ್ರಿ ಎತ್ತಿ ಹಿಡಿದಿದ್ದಾರೆ.
ಕುಮಾರಣ್ಣ ಏಕೆ ಸಿಟ್ಟಿಗೆದ್ದರು?
ಕಳೆದ ಶನಿವಾರ ಬಿಡದಿಯ ತೋಟದ ಮನೆಯಲ್ಲಿದ್ದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಬೇರೆ ಪಕ್ಷದ ನಾಯಕರೊಬ್ಬರು ಭೇಟಿ ಮಾಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ, ‘ನಿಮ್ಮ ಜತೆ ಮಹತ್ವದ ವಿಷಯದ ಬಗ್ಗೆ ಮಾತನಾಡಬೇಕು. ಇದು ತುಂಬ ಸೀಕ್ರೇಟ್’ ಎಂದಿದ್ದಾರೆ. ಸರಿ, ಆ ನಾಯಕರಾಡಿದ ಮಾತನ್ನು ಕೇಳಿದ ಕುಮಾರಸ್ವಾಮಿ ಅಲ್ಲಿದ್ದವರನ್ನು ಹೊರಗೆ ಕಳಿಸಿ ‘ವಿಷಯ ಏನು?’ ಅಂತ ಕೇಳಿದ್ದಾರೆ. ಅದಕ್ಕೆ ಆ ನಾಯಕರು ತಮ್ಮ ಬಳಿ ಇರುವ ಒಂದು ಕವರ್ ತೆಗೆದು, ‘ಇದರಲ್ಲಿ ಕರ್ನಾಟಕದ ಇಂತಹ ನಾಯಕರೊಬ್ಬರ ಸೆಕ್ಸ್ ಸಿಡಿ ಇದೆ.
ಇದು ಎಕ್ಸ್ʼಪ್ಲೋಡ್ ಆದರೆ ರಾಜ್ಯ ರಾಜಕೀಯದ ಚಿತ್ರವೇ ಬದಲಾಗುತ್ತದೆ ಕುಮಾರಣ್ಣ’ ಎಂದಿದ್ದಾರೆ. ಅದರೆ ಅವರಾಡಿದ ಮಾತು ಕೇಳಿ ಮುಖ ಗಂಟು ಹಾಕಿಕೊಂಡ ಕುಮಾರಸ್ವಾಮಿ ಅವರು, ‘ಬ್ರದರ್, ರಾಜ್ಯದ ಬೊಕ್ಕಸವನ್ನು ಲೂಟಿ ಮಾಡುವವರ ಬಗ್ಗೆ ದಾಖಲೆಗಳಿದ್ದರೆ ತಂದು ಕೊಡಿ. ಮುಲಾಜಿಲ್ಲದೆ ಬಹಿರಂಗ ಪಡಿಸೋಣ. ಆದರೆ ಯಾರದೋ ಚಾರಿತ್ರ್ಯ ಹರಣ ಮಾಡುವ ದಾಖಲೆಗಳನ್ನು ತಂದುಕೊಡಬೇಡಿ. ಅದರಿಂದ ಒಬ್ಬ ವ್ಯಕ್ತಿಯ ಬದುಕು ನಾಶವಾಗುವುದಿಲ್ಲ. ಹಲವು ಕುಟುಂಬಗಳ ಬದುಕು ನಾಶವಾಗುತ್ತದೆ. ಅದರ ನೋವನ್ನು ನಾವು ಅನುಭವಿಸಿದ್ದೇವೆ’ ಎಂದಿದ್ದಾರೆ. ಅಷ್ಟೇ ಅಲ್ಲ, ಹೊರಗಿದ್ದ ತಮ್ಮ ಆಪ್ತರನ್ನು ಕರೆದು, ‘ಅಣ್ಣಾವ್ರನ್ನು ಗೇಟಿನ ತನಕ ಬಿಟ್ಟು ಬನ್ನಿ’ ಅಂತ ಮೇಲೆದ್ದು ನಡೆದಿದ್ದಾರೆ