ರಾಜಬೀದಿ
ವಿನಾಯಕ ಮಠಪತಿ
ಇವರ್ಯಾರೂ ರೈತರಿಗಾಗಿ ಪಾದಯಾತ್ರೆ ಮಾಡಲಿಲ್ಲ. ಬರಗಾಲದಿಂದ ಬಸವಳಿದ ಅನ್ನದಾತ ನಿಗಾಗಿ ಕಚೇರಿ ಮುಂದೆ ಪ್ರತಿಭಟನೆ ಕೂರಲಿಲ್ಲ. ಸಾಲಮನ್ನಾ ಮಾಡಿ ರೈತನ ಬದುಕು ಹಸನಾಗಿ ಸುವವರೆಗೆ ಚುನಾವಣೆ ಸ್ಪರ್ಧೆ ಮಾಡುವುದಿಲ್ಲ ಎಂದು ಶಪಥ ಮಾಡಲಿಲ್ಲ. ರೈತ ಮಕ್ಕಳ ನೋವಿಗೆ ಸ್ಪಂದಿಸದ ಆಡಳಿತ ಪಕ್ಷದ ವಿರುದ್ಧ ತೊಡೆ ತಟ್ಟಿ ಮೇಜು ಕುಟ್ಟಿ ಗರ್ಜಿಸಲಿಲ್ಲ. ನಮ್ಮನ್ನಾಳುವ ರಾಜಕಾರಣಿಗಳ ವೀರಾವೇಶ ಕೇವಲ ಸ್ವಾರ್ಥಕ್ಕಾಗಿ. ದೂರದ ಪಾದಯಾತ್ರೆಗಳೆಲ್ಲ ರಾಜಕೀಯ ಉಳಿವಿಗಾಗಿ.
ರಾಜಕಾರಣಿಗಳು ವೈಯಕ್ತಿಕ ಸ್ವಾರ್ಥಕ್ಕಾಗಿ ಮಾಡುವ ಹೋರಾಟಗಳ ಮುಕ್ಕಾಲು ಭಾಗ ರೈತರಿಗಾಗಿ ಮಾಡಿದ್ದರೆ ಇಂದು ಅನ್ನದಾತ ಸಾವಿನ ಸುಳಿಯಲ್ಲಿ ಸಿಲುಕಿ ರಸ್ತೆ ಮೇಲೆ ಉರುಳಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಹೌದು, ಕಳೆದ ಒಂದು ದಶಕದಿಂದ ರೈತ ಸಮುದಾಯ ತನ್ನ ಹಕ್ಕನ್ನು ಪಡೆಯಲು ಜಮೀನಿನಲ್ಲಿ ಇರುವುದಕ್ಕಿಂತ ಜಾಸ್ತಿ ರಸ್ತೆ ಮೇಲೆ ಪ್ರತಿಭಟಿಸುತ್ತಿದ್ದಾನೆ.
ಆಳುವ ಸರಕಾರಗಳಿಂದ ನ್ಯಾಯ ಪಡೆಯಲು ಹೋರಾಡುತ್ತಾ ಬದುಕು ಸಾಗಿಸುತ್ತಿದ್ದಾನೆ. ರೈತನ ಹೆಸರಲ್ಲಿ ಅಧಿಕಾರ ಅನುಭವಿಸುತ್ತಾ ಬಂದ ರಾಜಕೀಯ ನಾಯಕರಿಂದ ಕಿಂಚಿತ್ತೂ ಅನ್ನದಾತನ ಸಂಕಷ್ಟ ದೂರವಾಗಿಲ್ಲ. ಸುದೀರ್ಘ ಅವಧಿಯ ನಂತರ ದೇಶ ಭೀಕರ ಬರಗಾಲದಿಂದ ಬಸವಳಿ ದಿದ್ದರೂ, ರಾಜಕಾರಣಿಗಳು ಮಾತ್ರ ಸ್ವ ಪ್ರತಿಷ್ಠೆ ಹಾಗೂ ಸ್ವಯಂ ಲಾಭಕ್ಕಾಗಿ ದಿನಬೆಳಗಾದರೆ ಒಂದಿಂದು ನಾಟಕ ಮಾಡುವುದು ಬಿಟ್ಟರೆ ಇದರಿಂದ ರೈತನಿಗಾಗುವ ಲಾಭ ಶೂನ್ಯ. ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ.
ಇದನ್ನೂ ಓದಿ: Vinayaka Mathapathy Column: ಎಲ್ಲರಿಗೂ ಒಳ್ಳೆಯವರಾಗಿ ಇಕ್ಕಟ್ಟಿಗೆ ಸಿಲುಕಿದ್ರಾ ಸಾಹುಕಾರ್ ?
ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ನೆಲಕಚ್ಚಿದ್ದು ಬಿತ್ತನೆಗೆ ಮಾಡಿದ ಖರ್ಚು ವಾಪಸ್ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಲ ಮಾಡಿ ಫಸಲಿನ ನಿರೀಕ್ಷೆಯಲ್ಲಿದ್ದ ರೈತನಿಗೆ ಬಿತ್ತಿದ ಬೆಳೆ ಕಮರಿ ಹೋಗಿದ್ದು, ಇದರಿಂದ ಬದುಕು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಇಂತಹ ಶೋಚನೀಯ ಪರಿಸ್ಥಿತಿಯಲ್ಲಿ ಸರಕಾರಗಳು ರೈತರ ಪರ ನಿಲ್ಲಬೇಕಾಗಿತ್ತು. ಆದರೆ, ಅನವಶ್ಯಕ ವಿಷಯಗಳನ್ನೇ ಹಿಡಿದುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಮೂಲಕ ಅನ್ನದಾತನನ್ನೇ ಕಡೆಗಣಿಸಿವೆ.
ರೈತರಿಗಾಗಿಯೇ ಕೆಲಸ ಮಾಡುವ ಕೃಷಿ, ತೋಟಗಾರಿಕೆ, ಸಕ್ಕರೆ, ರೇಷ್ಮೆ, ಪಶುಸಂಗೋಪನೆ ಸೇರಿದಂತೆ ಪ್ರಮುಖ ಇಲಾಖೆಗಳು ನಿಷ್ಕ್ರಿಯಗೊಂಡಂತೆ ಭಾಸವಾಗುತ್ತಿವೆ. ಬರಗಾಲದ ಕ್ಲಿಷ್ಟಕರ ಪರಿಸ್ಥಿತಿ ಯಲ್ಲಿ ಸೈನಿಕರಂತೆ ಕೆಲಸ ಮಾಡಬೇಕಾದ ಸಚಿವರು ಎಲ್ಲಿಯೂ ಕಾಣದಂತೆ ಮಾಯವಾಗಿದ್ದಾರೆ. ಸದ್ಯ ಕರ್ನಾಟಕ ರಾಜಕಾರಣ ಜನರಿಗೆ ಕಿಂಚಿತ್ತೂ ಅವಶ್ಯಕತೆ ಇಲ್ಲದ ವಿಷಯಗಳ ಹಿಂದೆ ಜೋತು ಬಿದ್ದಿದೆ.
ಯಾವುದೋ ಸ್ಟಿಂಗ್ ವಿಷಯವನ್ನು ಹಿಡಿದು ದಿನಬೆಳಗಾದರೆ ಅದೇ ಜಪದಲ್ಲಿ ಕಾಲ ಕಳೆಯುತ್ತಾ ರಾಜಕೀಯ ನಾಯಕರು ದಿನ ದೂಡುತ್ತಿದ್ದಾರೆ. ತಮ್ಮ ಚುನಾವಣಾ ಸೋಲು, ಗೆಲುವಿನ ಲೆಕ್ಕಾಚಾರದ ಮುಳುಗಿ ಎಸ್ಐಆರ್ ಜುಟ್ಟು ಹಿಡಿದು ಚುನಾವಣಾ ಆಯೋಗದ ಸ್ಮರಣೆಯ ಇವೆ. ನಾಡಿನ ಅನ್ನದಾತರು ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳ ಕಡೆ ಗಮನವನ್ನೇ ಕೊಡದೆ ತಮಗೂ ರೈತರಿಗೂ ಸಂಬಂಧವಿಲ್ಲದ ರೀತಿ ವರ್ತನೆ ತೋರುತ್ತಿರುವುದು ವಿಪರ್ಯಾಸವೇ ಸರಿ.
ಇನ್ನೂ ಆಡಳಿತಪಕ್ಷವನ್ನು ಕಟ್ಟಿಹಾಕಿ ರೈತರ ಸಮಸ್ಯೆ ಕುರಿತು ಪ್ರಶ್ನೆ ಮಾಡಬೇಕಿದ್ದ ವಿರೋಧ ಪಕ್ಷಗಳು ಯಾರz ರಾಜೀನಾಮೆಗೆ ಆಗ್ರಹಿಸಿ ಪಾದಯಾತ್ರೆ ಮಾಡುತ್ತಾ ರೈತರನ್ನು ಸಂಪೂರ್ಣ ನಿರ್ಲಕ್ಷಿಸುತ್ತಿರುವುದು ವಿರೋಧ ಪಕ್ಷಗಳ ನೈತಿಕತೆ ಪ್ರದರ್ಶವಾಗುತ್ತಿದೆ. ಗುಬ್ಬಚ್ಚಿಯಾದ ರೈತರ ಪಾಡು ದೇವರೇ ಬಲ್ಲ: ಸದ್ಯ ದೇಶ ಭೀಕರ ಬರಗಾಲಕ್ಕೆ ತುತ್ತಾಗಿದೆ.
ಒಟ್ಟು 18 ರಾಜ್ಯಗಳಲ್ಲಿ ಮಳೆ ಪ್ರಮಾಣ ಕುಂಠಿತಗೊಂಡಿದ್ದು ಬರಗಾಲ ಆವರಿಸಿದೆ. 2025ರಲ್ಲಿ ರಾಜ್ಯದಲ್ಲಿ ಸುಮಾರು 84 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಆಗಿದ್ದ ಬಿತ್ತನೆಯಿಂದ 137 ಲಕ್ಷ ಟನ್ ಆಹಾರಧಾನ್ಯ ಉತ್ಪಾದನೆ ಆಗಿತ್ತು. ಆದರೆ ಈ ಬಾರಿ ಉತ್ಪಾದನೆ ಮೌಲ್ಯ ಅರ್ಧದಷ್ಟು ಕುಸಿತ ಕಾಣುವ ಸಾಧ್ಯತೆ ಇದೆ. ಈ ಬಾರಿ ಕೇವಲ 58 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಇದರಲ್ಲಿ ರಾಜ್ಯದ 226 ತಾಲೂಕುಗಳು ಬರ ಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿವೆ.
ಭಾಗಶಃ ತಾಲೂಕುಗಳು ಶೇ. 80ರಷ್ಟು ಮಳೆ ಕೊರತೆ ಎದುರಿಸುತ್ತಿದ್ದು ಜನ ಹಾಗೂ ಜಾನುವಾರು ಗಳಿಗೆ ಕುಡಿಯುವ ನೀರಿನ ಅಭಾವವೂ ಉದುರಾಗಿದೆ. ಇಂತಹ ಸಂದರ್ಭಗಳಲ್ಲಿ ರೈತರ ಬೆಂಬಲಕ್ಕೆ ನಿಲ್ಲಬೇಕಾದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಮ್ಮದೇ ಲೋಕದಲ್ಲಿ ಮುಳುಗಿದ್ದು ಇದರಿಂದ ರೈತ ದಿಕ್ಕು ತೋಚದ ಗುಬ್ಬಚ್ಚಿಯಾಗಿದ್ದಂತು ಸುಳ್ಳಲ್ಲ. ಮಳೆ ಅಭಾವ ಒಂದುಕಡೆಯಾದರೆ ಮತ್ತೊಂದೆಡೆ ಬೀಜ ಹಾಗೂ ರಸಗೊಬ್ಬರ ಬೆಲೆ ಗಗನಕ್ಕೇರಿದೆ. ಇದರಿಂದ ಕೇವಲ ಒಂದು ಎಕರೆಗೆ 20 ಸಾವಿರ ರೂ. ಬಿತ್ತನೆಗೆ ವ್ಯಯಿಸಬೇಕಾದ ಪರಿಸ್ಥಿತಿ ರೈತರದ್ದಾಗಿದೆ. ಇಂತಹ ಸಂದರ್ಭಗಳಲ್ಲಿ ಅಳಿದುಳಿದ ಬೆಳೆ ಉಳಿಸಿಕೊಳ್ಳುವ ಹರಸಾಹಸ ಪಡುತ್ತಿದ್ದರೆ, ವಿದ್ಯುತ್ ಕಣ್ಣಾಮುಚ್ಚಾಲೆ ಮತ್ತೊಂದು ಅಘಾತ ರೈತರಿಗೆ.
ಇಷ್ಟೆ ಸರಣಿ ಸಮಸ್ಯೆಗಳಿದ್ದರೂ ಸರಕಾರ ಹಾಗೂ ಆಡಳಿತ ವರ್ಗ ತನ್ನದೇ ಲೋಕದಲ್ಲಿ ಮುಳುಗಿದ್ದು ಇಡೀ ವ್ಯವಸ್ಥೆಯನ್ನು ಆಕ್ರೋಶದ ದೃಷ್ಟಿಯಿಂದ ರೈತ ನೋಡುವಂತಾಗಿದೆ. ತನಗೆ ಸಿಗಬೇಕಾದ ನ್ಯಾಯಕ್ಕಾಗಿ ಬೀದಿಗಿಳಿದು ಎಷ್ಟೇ ಹೋರಾಟ ಮಾಡಿದರೂ ರಾಜಕಾರಣಿಗಳು ಮಾತ್ರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸದೆ ಇನ್ನಾವುದೋ ಕ್ಷುಲ್ಲಕ ವಿಷಯ ಹಿಡಿದು ದಿನಗಳೆಯು ತ್ತಿರುವುದು ವಿಪರ್ಯಾಸ.
ಈಗಾಗಲೇ ರಾಜ್ಯ ಸರಕಾರ 226 ತಾಲೂಕುಗಳನ್ನು ಬರಗಾಲ ಪಟ್ಟಿಗೆ ಸೇರ್ಪಡೆ ಮಾಡಿದೆ. ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಿದ್ದು ಈವರೆಗೂ ರಾಜ್ಯ ಸರಕಾರ ರೈತರಿಗೆ ಪರಿಹಾರ ನೀಡಿಲ್ಲ. ಎಕರೆಗೆ ಹತ್ತು ಸಾವಿರ ನೀಡುವ ನಿರ್ಧಾರ ಮಾಡಿದ್ದರೂ ಮೊದಲ ಕಂತಿನ 2500 ರೂ. ರೈತನ ಜೇಬಿಗೆ ಬಂದಿಲ್ಲ. ಸಾಲ ಮಾಡಿ ಬೆಳೆದ ಬೆಳೆ ನೆಲಕಚ್ಚಿದರೂ ಸರಕಾರ ಕೊಡುವ ಬಿಡಿಗಾಸು ಇನ್ನೂ ರೈತರಿಗೆ ಮುಟ್ಟದಿರುವುದು ಯಾರ ವೈಫಲ್ಯ? ಇಷ್ಟೆ ಸಂಕಷ್ಟಗಳು ಬಂದೊದಗಿದರೂ ಈವರೆಗೆ ಕೇಂದ್ರ ತನ್ನ ಪಾಲಿನ ಹಣವನ್ನು ರೈತರಿಗೆ ಕೊಡಲು ಮುಂದಾಗು ತ್ತಿಲ್ಲ.
ರಾಜ್ಯದಿಂದ ಅಧಿಕ ಸಂಖ್ಯೆಯಲ್ಲಿ ಸರಕಾರ ಬೆಂಬಲಿತ ಸಂಸದರನ್ನು ಆರಿಸಿ ಕಳುಹಿಸಿದರೂ ಅವರಿಂದಲೂ ರೈತರಿಗೆ ಎಳ್ಳಷ್ಟೂ ಲಾಭ ಕಾಣುತ್ತಿಲ್ಲ. ಇಂತಹ ಸರಕಾರಗಳು ರೈತನ ನೋವಿಗೆ ಹೆಗಲು ಕೊಡಲು ಹೇಗೆ ಸಾಧ್ಯ? ಪ್ರತಿಭಟಿಸಿದರೆ ಮಾತ್ರ ಸಮಸ್ಯೆ ಪರಿಹರಿಸುವ ಕಾಳಜಿ?: ಸದ್ಯ ನಮ್ಮನ್ನಾಳುವ ಸರಕಾರಗಳ ನಡೆ ಯಾವ ರೀತಿಯದು ಎಂದು ಅರ್ಥವಾಗುತ್ತಿಲ್ಲ.
ಸಮಸ್ಯೆಗಳ ಮೂಟೆ ಹೊತ್ತು ಪ್ರತಿಭಟನೆ ಹಾದಿ ತುಳಿದ ನಂತರವೇ ಸರಕಾರಗಳು ನಿದ್ರೆಯಿಂದ ಎದ್ದಂತೆ ನಟಿಸಲು ಪ್ರಾರಂಭಿಸುತ್ತಿವೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಕಬ್ಬು ಬೆಳೆಗಾರರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆಗೆ ಮುಂದಾಗಿವೆ. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ರೈತರು ಮುಗಿಬಿದ್ದು ಪರಿಹಾರಕ್ಕೆ ಆಗ್ರಹಿಸಿದವು. ಇದಾದ ನಂತರವೇ ಮೋದಿ ಸರಕಾರ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಸಮಸ್ಯೆ ಅರಿಯುವ ಉದ್ದೇಶದಿಂದ ಸಮಿತಿ ರಚನೆಗೆ ಮುಂದಾಗಿದ್ದು.
ರೈತರು ಪ್ರತಿಭಟನೆ ಮಾಡಿದ ನಂತರವೇ ಯಾಕೆ ಈ ನಿರ್ಧಾರ? ಮೊದಲೇ ಸಮಸ್ಯೆ ಕುರಿತು ಸಂಬಂಧಪಟ್ಟ ಇಲಾಖೆಗಳು ಪರಿಹಾರ ಮಾರ್ಗಗಳನ್ನು ಹುಡುಕಿದರೆ ಏನು ಸಮಸ್ಯೆ? ರೈತ ಬೀದಿಗಿಳಿದಾಗ ಮಾತ್ರ ಸಮಸ್ಯೆ ಬಗೆಹರಿಸುವ ನಾಟಕಕ್ಕೆ ಸರಕಾರಗಳು ಸಜ್ಜಾಗುತ್ತವೆ. ಮೊದಲೇ ಕೃಷಿ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಈ ಕುರಿತು ಕ್ರಮ ಯಾಕೆ ವಹಿಸುವುದಿಲ್ಲ? ಇಷ್ಟೊಂದು ನಿರ್ಲಕ್ಷ್ಯ ತೋರುವ ಇಲಾಖೆಗಳು ಇರುವುದು ಯಾವ ಕಾರಣಕ್ಕಾಗಿ? ಕೋಟ್ಯಾಂತರ ರೂ. ಜನರ ತೆರಿಗೆ ಹಣದಲ್ಲಿ ನಡೆಯುವ ಈ ಇಲಾಖೆಗಳು ರೈತರ ಸಮಸ್ಯೆಗಳ ಪರಿಹಾರಕ್ಕೆ ಕೆಲಸ ಮಾಡದೆ ಪ್ರತಿಭಟನೆ ನಡೆದಾಗ ಮಾತ್ರ ಎಚ್ಚೆತ್ತುಕೊಳ್ಳುತ್ತವೆ ಎಂದರೆ ಇಂತಹ ಇಲಾಖೆಗಳಿಂದ ಏನು ಲಾಭ ಎಂಬ ಪ್ರಶ್ನೆಯೂ ಸಾಮಾನ್ಯವಾಗಿ ಮೂಡುತ್ತವೆ. ಈ ನಿಟ್ಟಿನಲ್ಲಿ ಸರಕಾರಗಳು ತಮ್ಮ ಕಾರ್ಯವೈಖರಿಯನ್ನು ಬದಲಿಸಿಕೊಂಡರೆ ದೇಶಕ್ಕೆ ಒಳಿತು.
ಇಲ್ಲವಾದರೆ ಬರೀ ಪ್ರತಿಭಟಿಸಿಯೇ ಪರಿಹಾರ ಕೊಂಡುಕೊಳ್ಳಬೇಕೆಂದರೆ ಎಲ್ಲರಿಗೂ ಹೇಗೆ ಸಾಧ್ಯ. ರೈತರ ವಿಷಯದಲ್ಲಿ ಮಹಾರಾಷ್ಟ್ರ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ‘ಪುಣ್ಯಶ್ಲೋಕ ಅಹಿಲ್ಯಾದೇವಿ ಹೋಲ್ಕರ್ ಶೇತ್ಕರಿ ಕಜರ್-ಮುಕ್ತಿ ಯೋಜನೆ’ ಹೆಸರಿನಲ್ಲಿ 36 ಸಾವಿರ ಕೋಟಿ ಮೊತ್ತದ ಒಟ್ಟು 56 ಲಕ್ಷ ರೈತರ 2 ಲಕ್ಷ ರು. ವರೆಗಿನ ಅಸಲು ಹಾಗೂ ಬಡ್ಡಿ ಮನ್ನಾ ಮಾಡಲು ನಿರ್ಧರಿಸಿದೆ.
ತೀವ್ರ ಬರಗಾಲ ಆವರಿಸಿರುವ ಈ ಸಂದರ್ಭದಲ್ಲಿ ರೈತರ ನೆರವಿಗೆ ಬರುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರಕಾರ ಐತಿಹಾಸಿಕ ನಿರ್ಧಾರ ಪ್ರಕಟಿಸಿದ್ದು ಶ್ಲಾಘನೀಯ. ಇಂತಹುದೇ ನಿರ್ಧಾರಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬರದಿರುವುದಕ್ಕೆ ಏನು ಕಾರಣ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.
ನೆಲಕಚ್ಚಿದ ಕಬ್ಬು ಬೆಳೆ ಇಳುವರಿ- ಪ್ರತಿಭಟನೆ ಕಿಚ್ಚು: ಈ ಬಾರಿ ಸಂಭವಿಸಿರುವ ಭೀಕರ ಬರಗಾಲ ಕಬ್ಬು ಬೆಳೆಗಾರರಿಗೆ ಕಣ್ಣೀರು ತರಿಸಿದೆ. ದೇಶಾದ್ಯಂತ ಒಟ್ಟು ಶೇ. 40ರಷ್ಟು ಇಳುವರಿ ಕೊರತೆ ಕಂಡುಬರುತ್ತಿದೆ. ಇದರಿಂದ ಸಕ್ಕರೆ ಬೆಲೆ ಗಗನಕ್ಕೇರುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಳೆದ ವರ್ಷ ರಾಜ್ಯದ 81 ಸಕ್ಕರೆ ಕಾರ್ಖಾನೆಗಳು 756 ಲಕ್ಷ ಟನ್ ಕಬ್ಬು ಅರೆದಿದ್ದವು. 2024-25ರ ಅವಧಿಯಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕಬ್ಬು ಬೆಳೆ ಇಳುವರಿ ಪ್ರಮಾಣವೂ ಹೆಚ್ಚಾಗಿತ್ತು. ಆದರೆ ಈ ವರ್ಷ ಬೆಳೆಗಳು ಸಂಪೂರ್ಣ ನೆಲಕಚ್ಚಿದ್ದು ಸರಾಸರಿ 200 ಲಕ್ಷ ಟನ್ ಕಬ್ಬು ಇಳುವರಿ ಕುಂಠಿತವಾಗುವ ಸಾಧ್ಯತೆ ಇದೆ. ಇದರಿಂದ ಕೇವಲ ಸಕ್ಕರೆ ಉದ್ಯಮಕ್ಕೆ 8 ಸಾವಿರ ಕೋಟಿ ನಷ್ಟವಾಗಬಹುದು.
ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಸರಕಾರಗಳು ರೈತರ ಬೆಂಬಲಕ್ಕೆ ನಿಲ್ಲದೆ ಕಾಲಹರಣ ಮಾಡುತ್ತಿರುವುದು ರೈತರ ಆಕ್ರೋಶ ಹೆಚ್ಚಿಸಿದೆ. ಈಗಾಗಲೇ ಪ್ರತಿ ಟನ್ ಕಬ್ಬಿಗೆ 5500 ರೂ. ನೀಡಬೇಕೆಂದು ಆಗ್ರಹಿಸಿ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ದೇಶಾದ್ಯಂತ ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಲಕ್ಷಾಂತರ ರೈತರು ಕಳೆದ ಒಂದು ವಾರದಿಂದ ಮನೆ, ಮಠ ಬಿಟ್ಟು ನಡುರಸ್ತೆಯಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ.
ಒಂದು ಕಡೆ ಖಾಸಗಿ ಕಾರ್ಖಾನೆಗಳ ಇಬ್ಬಗೆ ನೀತಿ ಮತ್ತೊಂದು ಕಡೆ ಕೇಂದ್ರ ಸರಕಾರಗಳ ನಿರಾಸಕ್ತಿ ಕಬ್ಬು ಬೆಳೆಗಾರರನ್ನು ಕಂಗೆಡಿಸಿವೆ. ಇದೇ ಕಾರಣಕ್ಕಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮನೆಗೆ ಮುತ್ತಿಗೆಗೆ ರೈತರು ಮುಂದಾಗಿದ್ದಾರೆ. ಈಗಲಾದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಚ್ಚೆತ್ತುಕೊಂಡು ರೈತರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಅದು ಬಿಟ್ಟು ಸ್ಟಿಂಗ್, ಎಸ್ಐಆರ್ ಎಂದೆಲ್ಲಾ ಅನವಶ್ಯಕ ವಿಷಯಗಳನ್ನು ಮುಂದೆ ತಂದು ದಿನ ದೂಡುತ್ತಾ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಾ ಹೊರಟರೆ ರೈತರೇ ಬಾರುಕೋಲಿನ ಏಟು ನೀಡುವುದರಲ್ಲಿ ಸಂಶಯವಿಲ್ಲ.